
ಬೇಟಕಾರ ಬಂದ ಮಾದ,
ಹಹ್ಹ! ಏನು ಬೇಟವೋ!
ಬೇಡಿ ಸತ್ತು ಸುಣ್ಣವಾದ,
ಹಹ್ಹ! ಏನು ಬೇಟವೊ!
ಮಾದಿ ಕತ್ತನೊಲೆದುದೇನು!
ಅತ್ತ, ಇತ್ತ, ಸಿಡಿದುದೇನು!
ಮಾದ, ಪಾಪ, ಮಿಡಿದುದೇನು!
ಹಹ್ಹ! ಏನು ಬೇಟವೊ!
ಕಯ್ಯ ಮುಗಿದ, ಕಾಲ ಹಿಡಿದ,
ಹಹ್ಹ! ಏನು ಬೇಟವೋ!
ರೊಯ್ಯನೆದೆಯೆ, ಹಲ್ಲ ಕಡಿದ,
ಹಹ್ಹ! ಏನು ಬೇಟವೋ!
ಬೆಚ್ಚಗುಸಿರ ಬಿಟ್ಟ , ಮಾದ,
ಅತ್ತ, ಕಂಗೆಡುತ್ತ ಸೀದ,
ಹೊಳೆಯ ಬೀಳಲೆಂದು ಹೋದ!
ಹಹ್ಹ! ಏನು ಬೇಟವೊ!
ಆವ ಗಳಿಗೆಗಾವ ಮನಸು!
ಹಹ್ಹ! ಏನು ಬೇಟವೋ!
ಒಲ್ಲದಾಕೆಗೊಲುಮೆ ಕನಸು
ಹಹ್ಹ! ಏನು ಬೇಟವೋ!
ಹುಚ್ಚ ನಾನು! ಸಾಯಲೇಕೆ?
ಜಂಬಗಾತಿ ಜರೆಯಲೇಕೆ?
ಜರ್ಬು ನನಗೆ! ಹೆಣ್ಣಿಗೇಕೆ?
ಹಹ್ಹ! ಏನು ಬೇಟವೋ!
ವೈದ್ಯರಿದನು ತಿಳಿದು ಹೇಳಿ,
ಹಹ್ಹ! ಏನು ಬೇಟವೋ!
ಎದ್ದನವನು-ಬಿದ್ದಳಿವಳು.
ಹಹ್ಹ! ಏನು ಬೇಟವೋ!
ಏನೊ ಎದೆಯೊಳಿರಿಯುತಿಹುದು,
ಸುಯ್ದು, ಸುಯ್ದು ತಣ್ಣಗಹುದು,
ಕಣ್ಣೊ, ಒಂದ ನುಡಿಯುತಿಹುದು!
ಹಹ್ಹ! ಏನು ಬೇಟವೋ!
ಚಿನ್ನದಂತ ಹುಡುಗ ಮಾದ,
ಹಹ್ಹ! ಏನು ಬೇಟವೋ!
ಸಾಯಲಾದ ಹುಡುಗಿ ಮಾದಿ,
ಹಹ್ಹ! ಏನು ಬೇಟವೋ!
ಕೊಲ್ಲಲಾರನವಳ ಮಾದ,
ಮುನಿಸು ಕರಗಿ ಮರುಗಿಹೋದ,
ಈಗ ಹಿಡಿಯದವರ ಮೋದ!
ಹಹ್ಹ! ಏನು ಬೇಟವೋ!
*****
BURNS : Duncan Gray














