ಯಾವುದಾದರೂ ಒಂದು ಸಂಗತಿ ನಮಗೆ ಇಷ್ಟವಾಗದಿದ್ದರೆ ಅದನ್ನು ದೂರುತ್ತಾ ಇರುವ ಬದಲು ಅದಕ್ಕೆ ಪರಿಹಾರ ಅಥವಾ ಪರ್‍ಯಾಯ ಹುಡುಕಿದರೆ ಜೀವನ ಸುಲಭವಾಗುತ್ತದೆ. ಇಲ್ಲವಾದರೆ ಯಾವ ಸಮಸ್ಯೆಗಳೂ ಬಗೆಹರಿಯುವುದೇ ಇಲ್ಲ. ನಮ್ಮನ್ನು ಕಾಡುತ್ತಲೇ ಇರುತ್ತವೆ.

ಕೆಲವರಿದ್ದಾರೆ; ಯಾವಾಗಲೂ ಬೇರೆಯವರ ನ್ಯೂನತೆಗಳನ್ನೇ ಎತ್ತಿ ಹಿಡಿದು ದೂರುತ್ತಿರುವವರು. ಬೇರೆಯವರಲ್ಲಿರುವ ಒಳ್ಳೆಯತನ ಅವರಿಗೆ ಕಾಣುವುದೇ ಇಲ್ಲ. ಬೇರೆಯವರಲ್ಲಿ ಒಳ್ಳೆಯದನ್ನು ಗುರುತಿಸಬೇಕಲ್ಲದೆ ಕೆಟ್ಟದನ್ನೇ ಎತ್ತಿ ಆಡಬಾರದು. ಅದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಒಳ್ಳೆಯವರಲ್ಲೂ ಕೆಟ್ಟತನ ಇರುವ ಹಾಗೇ ಕೆಟ್ಟವರಲ್ಲೂ ಒಳ್ಳೆಯತನವಿರುತ್ತದೆ. ಯಾರೂ ನೂರಕ್ಕೆ ನೂರು ಒಳ್ಳೆಯವರೂ ಆಗಿರುವುದಿಲ್ಲ ಕೆಟ್ಟವರೂ ಆಗಿರುವುದಿಲ್ಲ.

ಸರಿಯಾಗಿ ಯೋಚಿಸಿದರೆ ನಮ್ಮ ಪರಿಸರ, ನಮ್ಮ ರಾಜಕೀಯ ಇಷ್ಟು ಕೆಡಲು ನಾವೇ ಕಾರಣರಲ್ಲದೆ ಬೇರಾರೂ ಅಲ್ಲವೆಂದು ನಮಗೇ ಮನದಟ್ಟಾಗುತ್ತದೆ. ರಸ್ತೆಯಲ್ಲಿ ಕಸ ಚೆಲ್ಲಿದ್ದರೆ, ರಸ್ತೆ ಅಗೆದು ಹಳ್ಳ ಮಾಡಿದ್ದರೆ, ನೀರು ಹರಿದು ಹೋಗಬೇಕಾದ ಚರಂಡಿ ಕಸದಿಂದ ಮುಚ್ಚಿದ್ದರೆ, ದಾರಿ ದೀಪಗಳು ಹಗಲಲ್ಲೂ ಉರಿಯುತ್ತಿದ್ದರೆ, ರಸ್ತೆಯ ನಲ್ಲಿಗಳಲ್ಲಿ ನೀರು ಸೋರಿ ಹೋಗುತ್ತಿದ್ದರೆ, ನಮ್ಮ ರಸ್ತೆಯ ವಿದ್ಯುತ್ ದೀಪ ಕೈ ಕೊಟ್ಟಿದ್ದರೆ, ನಮ್ಮ ಮುಂದೆ ಹೋಗುತ್ತಿರುವ ವಾಹನ ಹೊಗೆ ಉಗುಳುತ್ತಿದ್ದರೆ, ಹೀಗೆ ಏನೇನೋ ಆಗುತ್ತಿರುವಾಗ ನಾವು ನಗರ ಪಾಲಿಕೆಯನ್ನೋ, ವಿದ್ಯುತ್ ನಿಗಮವನ್ನೋ, ನೀರು ಸರಬರಾಜು ಮಂಡಲಿಯನ್ನೋ ಅಥವಾ ರಾಜಕಾರಣಿಗಳನ್ನೋ, ಸರಕಾರವನ್ನೋ ದೂರುತ್ತಲೇ ಇರುತ್ತೇವೆಯಲ್ಲದೆ ಈ ಸಮಸ್ಯೆಗಳನ್ನು ಪರಿಹರಿಸುವ ಸಂಸ್ಥೆಗಳನ್ನು ಸಂಪರ್‍ಕಿಸುವ ಅಥವಾ ಅದಕ್ಕೆ ಕಾರಣರಾದವರೊಡನೆ ಮಾತಾಡಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವನ್ನಂತೂ ಮಾಡುವುದೇ ಇಲ್ಲ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡದೆ ಬರೇ ದೂರುವುದರಲ್ಲೇ ನಮ್ಮ ಹೊತ್ತು ವ್ಯಯವಾಗುತ್ತಿದೆ.

ನಮ್ಮ ಸುತ್ತಲಿನ ವ್ಯವಸ್ಥೆಯ ಬಗ್ಗೆ ದೂರುತ್ತಲೇ ಇರುವುದಕ್ಕಿಂತ ಆ ಅವ್ಯವಸ್ಥೆಗಳಿಗೆ ಕಾರಣಗಳೇನು ಪರಿಹಾರಗಳೇನು ಎನ್ನುವುದನ್ನು ಹುಡುಕುವುದು ಸೂಕ್ತವಲ್ಲವೇ? ಪರಿಸರ ಮಾಲಿನ್ಯದ ಬಗ್ಗೆಯೇ ಆಗಲೀ, ಭ್ರಷ್ಟಾಚಾರದ ಬಗ್ಗೆಯೇ ಆಗಲಿ ನಾವು ಯಾರು ಯಾರನ್ನೋ ದೂರುತ್ತಲೇ ಕಾಲ ಕಳೆಯುವುದಕ್ಕಿಂತ ಆ ಪರಿಸ್ಥಿತಿಗಳಿಗೆ ನಾವೆಷ್ಟು ಕಾರಣರು ಎನ್ನುವುದನ್ನು ಯೋಚಿಸುವುದು ಉತ್ತಮವಲ್ಲವೇ? ಸರಕಾರ ನೀರು ಬಿಡುವುದಿಲ್ಲ ಎನ್ನುವ ತಕರಾರು ತೆಗೆಯುತ್ತೇವೆಯಲ್ಲದೆ ನೀರನ್ನು ಪರಿಮಿತವಾಗಿ ಉಪಯೋಗಿಸುವ ಕಡೆಗೆ ನಮ್ಮ ಗಮನ ಹರಿಯುವುದಿಲ್ಲ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದನ್ನು, ಅನಾವಶ್ಯಕವಾಗಿ ನೀರು ಹಾಳುಮಾಡುವುದನ್ನು ನೋಡಿಯೂ ಸುಮ್ಮನಿರುತ್ತೇವೆ. ರಸ್ತೆ ಬದಿಯಲ್ಲಿ ಕಸ ಬಿಸಾಡುವುದು ಸರಿಯಲ್ಲವೆಂದು ಗೊತ್ತಿದ್ದರೂ ಕಸ ಬಿಸಾಡುವುದನ್ನು ನಿಲ್ಲಿಸುವುದಿಲ್ಲ. ಎಲ್ಲದಕ್ಕೂ ಸರಕಾರವನ್ನೇ ದೂರುತ್ತೇವೆಯಲ್ಲದೆ ಓಟು ಹಾಕುವಾಗ ಸರಿಯಾದ ಅಭ್ಯರ್‍ಥಿ ಆಯ್ಕೆಯಾಗಿ ಬರಬೇಕೆನ್ನುವುದನ್ನು ನಾವು ಯೋಚಿಸುವುದೇ ಇಲ್ಲ. ಓಟು ಹಾಕಲು ಹೋಗುವುದೇ ಕಷ್ಟ ನಮಗೆ, ನಮ್ಮ ಉದಾಸೀನಕ್ಕೆ ಸರಕಾರವನ್ನಾಗಲೀ ಬೇರೆ ಯಾವುದೇ ಸಂಘ, ಸಂಸ್ಥೆಯನ್ನಾಗಲೀ ದೂರಿದರೆ ಪ್ರಯೋಜನವೇನು? ನಾವು ಮಾಡಿದ ತಪ್ಪುಗಳಿಗೆ ನಾವೇ ಬಲಿಯಾಗಬೇಕಲ್ಲದೆ ಬೇರಾರು ಬಲಿಯಾಗಬೇಕು?

ಬೇರೆಯವರನ್ನು ದೂರುವ, ಚಿಕ್ಕ ಚಿಕ್ಕ ಸಂಗತಿಗೆಲ್ಲಾ ತಕರಾರು ಎಬ್ಬಿಸುವುದು ನಮಗೆ ಅಭ್ಯಾಸವೇ ಆಗಿ ಹೋಗಿದೆ. ಸರಕಾರಿ ಆಫೀಸುಗಳಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ದೂರುತ್ತೇವೆಯಲ್ಲದೆ ಆ ಲಂಚ ಕೊಡುವುದು ಯಾರು? ತಮ್ಮ ತಮ್ಮ ಕೆಲಸ ಹೇಗಾದರೂ ಆದರೆ ಸಾಕು ಎಂದು ನಾವೇ ಅಲ್ಲವೇ ಮೇಜಿನ ಅಡಿಯಿಂದ ಲಂಚ ಕೊಡುವ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದು? ಪ್ರೊಸೀಜರ್ ಪ್ರಕಾರ ಆಗಲಿ ಎಂದು ಬಿಟ್ಟರೆ ಸ್ವಲ್ಪ ತಡವಾಗಿಯಾದರೂ ಕೆಲಸಗಳು ಆಗಿಯೇ ಆಗುತ್ತವೆ. ಆಗದಿದ್ದರೆ ಮತ್ತೆ ಅದಕ್ಕೆ ಕಾರಣ ಹುಡುಕಿ ಅನಾವರಣಗೊಳಿಸಿದರೆ ತೆಗೆದುಕೊಳ್ಳುವವರಿಗೂ ಹೆದರಿಕೆ ಇರುತ್ತದೆ.

ದೇವರ ಸೃಷ್ಟಿಯೇ ಹಾಗೆ; ಬೆಂಕಿಯನ್ನಿಟ್ಟಲ್ಲೇ ನೀರನ್ನೂ ಇಟ್ಟಿದ್ದಾನೆ. ಕತ್ತಲೆಯನ್ನು ಇಟ್ಟಲ್ಲೇ ಬೆಳಕನ್ನೂ ಇಟ್ಟಿದ್ದಾನೆ. ಸಮುದ್ರದ ಆಳದಲ್ಲಿ ಕ್ರೂರ ಜಂತುಗಳೂ ಇವೆ. ಮುತ್ತು, ರತ್ನ, ಹವಳಗಳೂ ಇವೆ. ಮನುಷ್ಯರಲ್ಲೂ ಹಾಗೇ ಒಳ್ಳೆತನ ಕೆಟ್ಟತನ ಎರಡೂ ಗುಣಗಳು ಹಾಸುಹೊಕ್ಕಾಗಿರುತ್ತವೆ. ಬೆಂಕಿ, ಕ್ರೂರ ಜಂತುಗಳ ನೀರು ಎರಡೂ ನಮಗೆ ಬೇಕು. ನಡುವೆ ಇರುವ ಮುತ್ತು ರತ್ನಗಳೂ ನಮಗೆ ಬೇಕು. ಬೆಂಕಿ ಸುಡುವುದೆಂದು, ನೀರು ನಮ್ಮನ್ನು ಮುಳುಗಿಸುವುದೆಂದು ಅದರ ಹತ್ತಿರ ಹೋಗುವುದನ್ನು ನಿಲ್ಲಿಸುವುದಿಲ್ಲ. ಹಾಗೇ ಸಮಸ್ಯೆಗಳಿಂದ ದೂರ ಓಡುವುದರಿಂದ ಏನೂ ಸಾಧಿಸಿದ ಹಾಗಾಗುವುದಿಲ್ಲ. ಸಮಸ್ಯೆಗಳನ್ನು ಎದುರಿಸಿ ಅದಕ್ಕೆ ಸೂಕ್ತ ಪರಿಹಾರ ಹುಡುಕಬೇಕಲ್ಲದೆ ಸಮಸ್ಯೆಗಳಿಗೆ ಕಾರಣರಾದವರನ್ನು ದೂರುತ್ತ ತಕರಾರು ಎಬ್ಬಿಸಿದರೆ ಏನೂ ಪ್ರಯೋಜನವಿಲ್ಲ.

ನೆನಪಿರಲಿ ಅನಾವಶ್ಯಕ ತಕರಾರು ತೆಗೆಯುವುದಕ್ಕಿಂತ, ಬೇರೆಯವರನ್ನು ದೂರಿಕೊಂಡು ಇರುವುದಕ್ಕಿಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವುದು ಉತ್ತಮ.
*****