ಸಾಧನೆ ಮತ್ತು ಮನ್ನಣೆ

ಸಾಧನೆ ಮತ್ತು ಮನ್ನಣೆ

ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕವಾಗಿ ಬಯಸುವುದೇನು? ಸುಖ, ಶಾಂತಿ, ಶ್ರೀಮಂತಿಕೆ, ಆರೋಗ್ಯ? ಊಹೂಂ, ಇವೆಲ್ಲಾ ಸಿಕ್ಕಿಯೂ ಮನ್ನಣೆಯೊಂದು ಸಿಗದಿದ್ದರೆ ವ್ಯರ್ಥವೇ ಸರಿ. ರಾಜಕೀಯವಾಗಿ ಪ್ರಜಾಪ್ರಭುತ್ವ ಎಲ್ಲೆಡೆ ಬಂದು ಸಮಾನತೆ ನೆಲಸಿದ ಮೇಲೂ ವ್ಯಕ್ತಿಯಮಟ್ಟಿಗೆ ಈ ಮನ್ನಣೆಯೆನ್ನುವುದು ಬದುಕುವುದಕ್ಕೆ ಮುಖ್ಯ ಪ್ರೇರಣೆಯೂ ಕಾರಣವೂ ಆಗುತ್ತದೆ. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಪ್ರಕಟವಾದ ಅಮೇರಿಕನ್ ಲೇಖಕ ಫ್ರಾನ್ಸಿಸ್ ಫುಕುಯಾಮಾನ ‘ಚರಿತ್ರೆಯ ಅಂತ್ಯ ಮತ್ತು ಕೊನೇ ಮನುಷ್ಯ’ (The end of History and the Last Man) ಎಂಬ ಪುಸ್ತಕದ ಪ್ರತಿಪಾದನೆ ಇದು. ಮನ್ನಣೆಯೆಂದರೆ ವೈಯಕ್ತಿಕ ಸಾಧನೆಯನ್ನು ಇತರರು ಗುರುತಿಸುವುದು ಎಂದರ್ಥ. ಗುರುತಿಸಲ್ಪಡಬೇಕೆನ್ನುವ ಈ ಹಂಬಲ ಪ್ರಜಾಪ್ರಭುತ್ವದಲ್ಲೇ ಯಾಕೆ ಜಾಸ್ತಿಯಾಗುತ್ತದೆಂದರೆ ಈ ರಾಜಕೀಯ ಅವಸ್ಥೆಯಲ್ಲಿ ಎಲ್ಲರೂ ಸಮನಾಗಿರುತ್ತಾರೆ. ಮನುಷ್ಯನಿಗೆ ವೈಯಕ್ತಿಕವಾಗಿ ತಾನು ಎಲ್ಲರಲ್ಲೊಬ್ಬ ಎಂದೆನಿಸುವುದು ಬೇಡವಾಗಿರುತ್ತದೆ. ಆದ್ದರಿಂದ ತನ್ನ ವಿಶಿಷ್ಟತೆಯನ್ನು ಮುಂದೊತ್ತುವುದಕ್ಕೆ ಪ್ರತಿಯೊಬ್ಬನೂ ಬಯಸುತ್ತಾನೆ ಹಾಗೂ ಈ ವಿಶಿಷ್ಟತೆಯನ್ನು ಇತರರು ಗುರುತಿಸಬೇಕು ಎನ್ನುವ ಆಂತರ್ಯ ಇಟ್ಟುಕೊಂಡಿರುತ್ತಾನೆ. ಪ್ರಜಾಪ್ರಭುತ್ವದಲ್ಲಿ ಇತರ ಸಮಾನತೆಯೊಂದಿಗೆ ಇನ್ನೊಂದು ಸಮಾನತೆಯಿದ್ದರೆ ಅದು ಈ ಗುರುತಿನ ಹಂಬಲವೊಂದೇ. ಇದೊಂದು ವಿಪರ್ಯಾಸದಂತೆ ತೋರಿದರೂ ಪ್ರತಿಯೊಬ್ಬ ಮನುಷ್ಯನ ಅನುಭವ ವಲಯಕ್ಕೆ ಸೇರಿದ್ದರಿಂದ ಇದು ಸತ್ಯವೂ ಆಗಿದೆ. ಒಬ್ಬ ಬಡಗಿಯಾಗಲಿ, ಕಮ್ಮಾರನಾಗಲಿ, ಸಿಂಪಿಗನಾಗಲಿ ತಾನು ತಯಾರಿಸಿದ ಸಾಧನಗಳು ಚೆನ್ನಾಗಿರಬೇಕು, ಹಾಗೂ ತನ್ನ ಕಸುಬನ್ನು ಜನ ಮೆಚ್ಚಬೇಕು ಎಂದು ಸಾಧಾರಣವಾಗಿ ಬಯಸುತ್ತಾನೆ. ‘ನಿರುಪಯೋಗಿ’ಯೆನಿಸುವ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಂತೂ ಈ ಆಕಾಂಕ್ಷೆ ಇನ್ನಷ್ಟು. ಒಬ್ಬ ಸಂಗೀತಗಾರ ಸಂಗೀತ ಕ್ಷೇತ್ರದಲ್ಲಿ ತನ್ನ ಹೆಸರು ಚಿರಸ್ಥಾಯಿಯಾಗಬೇಕು ಎಂದು ಬಯಸುತ್ತಾನೆ; ಅದೇ ರೀತಿ ಓಬ್ಬ ಕವಿ ಸಾಹಿತ್ಯ ಕ್ಷೇತ್ರದಲ್ಲಿ ತಾನು ಅಮರನಾಗಬೇಕು ಎಂದು ಆಶಿಸುತ್ತಾನೆ. ಇಂಥದೊಂದು ಆಕಾಂಕ್ಷೆಯಿಲ್ಲದಿದ್ದರೆ ಈ ಕಲಾವಿದರಿಗೆ ತಂತಮ್ಮ ಹಾದಿಗಳಲ್ಲಿ ಮುಂದುವರಿಯುವುದಕ್ಕೆ ಯಾವ ಕಾರಣವೂ ಇರುವುದಿಲ್ಲ. ಆದರೆ ಇದು ಮಾತ್ರವೂ ಸಾಲದು; ಆಗಾಗ್ಗೆ ಅವರು ಜನರಿಂದ, ತಂತಮ್ಮ ಕ್ಷೇತ್ರದಲ್ಲಿನ ವಿದ್ವಾಂಸರಿಂದ, ಪರಿಣತರಿಂದ, ಸಹಪ್ರವರ್ತಕರಿಂದ ತಮ್ಮ ಸಾಧನೆಯ ಬಗ್ಗೆ ಮೆಚ್ಚುಗೆಯನ್ನೂ ನಿರೀಕ್ಷಿಸುತ್ತಾರೆ. ಈ ಮೆಚ್ಚುಗೆ ಯಾರಿಂದಲೂ ಬರದಿದ್ದರೆ ಅವರು ಖಿನ್ನರಾಗಲೂ ಸಾಧ್ಯ. ಈ ಖಿನ್ನತೆ ಅವರ ಕೃತಿಗಳನ್ನು ನೇರವಾಗಿ ಬಾಧಿಸದೆ ಇರಬಹುದಾದರೂ, ಅವುಗಳ ಮೇಲೆ ಅಪ್ರತ್ಯಕ್ಷವಾದ ಪರಿಣಾಮಗಳನ್ನು ಬೀರಬಹುದು. ಹಾಗೂ ಕೃತಿಗಳಮಟ್ಟಿಗೆ ಹೇಳುವುದಾದರೆ ಇವೆಲ್ಲ ಋಣಾತ್ಮಕವಾಗಿ ಇರಬೇಕೆಂದೇನೂ ಇಲ್ಲ. ಪ್ರಸಿದ್ಧ ಡಚ್ ವರ್ಣಚಿತ್ರಕಾರ ವಾನ್ ಗಾಫ್ ತನ್ನ ಜೀವಿತ ಕಾಲದಲ್ಲಿ ಮಾರಲು ಸಾಧ್ಯವಾದ್ದು ಒಂದೇ ಒಂದು ಚಿತ್ರವನ್ನು! ಅವನ ಮರಣಾನಂತರ ಈ ಚಿತ್ರಗಳಿಗೆ ಭಾರೀ ಬೇಡಿಕೆ ಬಂತು. ವಾನ್ ಗಾಫ್‌ನ ಮಾನಸಿಕ ಕ್ಷೋಭೆಗೆ ಅವನಿಗೆ ಜೀವಿತ ಕಾಲದಲ್ಲಿ ಪ್ರಸಿದ್ದಿ ಬರದೆ ಇದ್ದುದು ಒಂದೇ ಕಾರಣವಾಗಿರದಿದ್ದರೂ, ಅದೂ ಒಂದು ಮುಖ್ಯ ಕಾರಣವಾಗಿರುವುದು ಸಾಧ್ಯ. ಜೀವಿತ ಕಾಲದಲ್ಲಿ ಮನ್ನಣೆ ವಂಚಿತನಾದ ಇನ್ನೊಬ್ಬನೆಂದರೆ ಪ್ರಸಿದ್ಧ ಜರ್ಮನ್ ತತ್ವಜ್ಞಾನಿ ಫ್ರೆಡರಿಕ್ ನೀತ್ಸೆ. ತರುಣ ಪ್ರಾಯದಲ್ಲೇ ಈತ ಪ್ರೊಫೆಸರನಾಗಿ ನೇಮಕಗೊಂಡರೂ ಇವನ ವಿಶಿಷ್ಪ ಕೃತಿಗಳನ್ನು ಸಮಕಾಲೀನ ವಿದ್ವಾಂಸರು ಗುರುತಿಸಲೇ ಇಲ್ಲ. ಆದ್ದರಿಂದ ನೀತ್ಸೆ ತನ್ನನ್ನು ತಾನು ‘ಮರಣೋತ್ತರ ಲೇಖಕ’ ಎಂದು ಕರೆದುಕೊಳ್ಳುತ್ತಿದ್ದ. ನೀತ್ಸೆ ಕೂಡಾ ತನ್ನ ಜೀವಿತದ ಕೊನೆಯ ಘಟ್ಟದಲ್ಲಿ ಮಾನಸಿಕ ರೋಗಕ್ಕೆ ತುತ್ತಾಗಿ ಮತ್ತೇನೂ ಬರೆಯಲಿಲ್ಲವೆನ್ನುವುದು ಗಮನಾರ್ಹ. ನಮ್ಮ ಕನ್ನಡದ್ದೇ ಉದಾಹರಣೆ ಕೊಡುವುದಾದರೆ, ನಾಟಕದ ಸಂಸ (ಎ. ಎನ್. ಸಾಮಿ ವೆಂಕಟಾದ್ರಿ ಅಯ್ಯರ್) ತಮ್ಮ ನಲುವತ್ತೊಂದನೇ ವಯಸ್ಸಿಗೇ ಚಿತ್ತಕ್ಷೋಭೆಯಿಂದ ಆತ್ಮಹತ್ಯೆ ಮಾಡಿಕೊಂಡುದನ್ನು ಕಾಣಬಹುದು. ಇದೇ ಸಂಸ ತಮ್ಮದೊಂದು ಪುಸ್ತಕದ ವಿಜ್ಞಾಪನೆಯಲ್ಲಿ ‘ನಾನು ಅನೇಕ ಕರ್ಣಾಟಕ ಸದ್ಗ್ರಂಥಗಳನ್ನು ರಚಿಸಿ ಲಿಖಿಸಿ, ಪ್ರಖ್ಯಾತರಾದ ಗ್ರಂಥಕರ್ತರಂತೆ, ಚಿರಸ್ಮಕರಣೀಯನಾಗಬೇಕೆಂಬುದೇ ನನ್ನ ಆಶೆ!” ಎಂದು ಉಲ್ಲೇಖಿಸಿದ್ದಾರೆ. ರತ್ನಾಕರವರ್ಣಿಯಂತೆ ‘ನಿರಾಕಾಂಕ್ಷಿ’ಗಳಾಗಿರುವ ಲೇಖಕರು ಕಡಿಮೆ.

ಈಚೆಗೆ ಕನ್ನಡದ ದಿನಪತ್ರಿಕೆಯೊಂದು ಕಾವ್ಯಕುತೂಹಲ ಎಂಬ ಶೀರ್ಷಿಕೆಯಲ್ಲಿ ಹೊಸತಲೆಮಾರಿನ ಕವಿಗಳ ಬಗ್ಗೆ ಬರೆಯುತ್ತಾ ಯಾಕೆ ಯಾರೂ ಇಪತ್ತನೆ ಶತಮಾನದ ಎಂಬತ್ತರ ದಶಕದ ನಂತರದ ಕವಿಗಳ ಕುರಿತು ಮಾತಾಡುತ್ತ ಇಲ್ಲ ಎಂಬ ಪ್ರಶ್ನೆಯೊಂದನ್ನು ಎತ್ತಿಹಾಕಿತು. ಇದಕ್ಕೆ ಉತ್ತರರೂಪವಾಗಿ ಗುಪ್ತನಾಮದಲ್ಲಿ ಮತ್ತು ನಿಜನಾಮದಲ್ಲಿ ಕೆಲವು ಒಳ್ಳೇ ಲೇಖನಗಳು ಪ್ರಕಟವಾದುವು. ಪತ್ರಿಕೆ ಎತ್ತಿದ ಪ್ರಶ್ನೆ ವಾಸ್ತವ ಸ್ಥಿತಿಗೆ ಹಿಡಿದ ಕನ್ನಡಿಯಂತಿದ್ದುದು ನಿಜ. ಇಲ್ಲಿ ಮುಖ್ಯವಾದ ವಿಷಯವೆಂದು ನನಗೆ ಕಾಣಿಸಿದ್ದು ಈ ಕವಿಗಳು ನೀಡುತ್ತಿರುವ ಕೊಡುಗೆಯನ್ನು ಅಥವಾ ಅವರು ಹಿಡಿದಿರುವ ಹೊಸ ದಿಕ್ಕನ್ನು ಗುರುತಿಸಬೇಕಾದವರು ಗುರುತಿಸಿಲ್ಲ ಎಂಬ ಸಾರ್ವತ್ರಿಕವಾದ ಒಂದು ಅಭಿಪ್ರಾಯ. ನಮ್ಮಲ್ಲೀಗ ವಿಮರ್ಶಕರೇ ಕಡಿಮೆಯಾಗುತ್ತಿರುವ ಕಾಲ. ಇದ್ದ ಕೆಲವರು ಪ್ರಸಿದ್ಧ ಕವಿಗಳನ್ನೇ ಯಾವ ಕಾರಣಕ್ಕೋ ಇನ್ನೂ ಇನ್ನೂ ಚರ್ಚಿಸುತ್ತಿರುವಂತೆ ತೋರುತ್ತದೆ. ಹೊಸದಾಗಿ ಏನಾಗುತ್ತಿದೆ ಎಂಬ ಕುತೂಹಲ ಅವರಲ್ಲಿ ಕಾಣಿಸುತ್ತಿಲ್ಲ. ಆದರೂ ತಮಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲವೆಂಬ ಅಭಿಪ್ರಾಯ ಹೊಸಬರಲ್ಲಿ ಮಾತ್ರವಲ್ಲ, ಹಳಬರಲ್ಲೂ ಇರುವುದು ಗಮನಾರ್ಹ! ವಾಸ್ತವದಲ್ಲಿ ಇದು ಯಾರಲ್ಲೂ ಎಂದಿಗೂ ಮಾಯವಾಗುವ ಸಂಗತಿಯೂ ಅಲ್ಲ. ಯಾಕೆಂದರೆ ಇದು ಮೂಲತಃ ಅನಾಮಿಕತ್ವದ ಕುರಿತಾದ ಭಯ ಮತ್ತು ಅಮರತ್ವದ ಕುರಿತಾದ ಸುಪ್ತ ಆಗ್ರಹ.

ಈ ಸಂದರ್ಭದಲ್ಲಿ ನನಗೆ ಗ್ರೀಕ್ ಕವಿ ಕಾನ್‌ಸ್ಟಾಂಟಿನ್ ಕವಾಫಿಯ (೧೮೬೩- ೧೯೩೩) ಕವಿತೆಯೊಂದು ನೆನಪಿಗೆ ಬರುತ್ತದೆ. ಕವಿತೆಯ ಹೆಸರು ‘ಮೊದಲ ಪಡಿ’.

ಮೊದಲ ಪಡಿ

ಥಿಯೋಕ್ರಿಟಸ್‌ಗೆ ಒಂದು ದಿನ ದೂರು ನೀಡುತ್ತಿದ್ದ
ಯುವ ಕವಿ ಯೂಮೆನೀಸ್:
‘ಎರಡು ವರ್ಷಗಳಾದುವು ಬರೆಯುವುದು ನಾನು.
ಮುಗಿಸಿದುದು ಒಂದೇ ಒಂದು ನಿಸರ್ಗ ಕವಿತೆ.
ಅದೊಂದೇ ನನ್ನ ಪೂರ್ತಿಗೊಂಡ ರಚನೆ.
ಆಹಾ, ಎತ್ತರ ಕಾಣಿಸುತ್ತಿದೆ ನನಗೆ,
ತುಂಬಾ ಎತ್ತರ ಕವಿತೆಯ ಸೋಪಾನ;
ಹಾಗೂ ಖೇದವೆಂದರೆ ನಾನೀಗ ಇಲ್ಲಿರುವ ಮೊದಲ ಪಡಿಯಿಂದ
ಎಂದಿಗೂ ಮೇಲೇರಲಾರೆ.’
ಆಮೇಲೆ ಥಿಯೋಕ್ರಿಟಸ್ ಅಂದ: ‘ನಿನ್ನೀ ಮಾತುಗಳು
ಯೋಗ್ಯ ಮಾತುಗಳಲ್ಲ ಹಾಗೂ ದೈವನಿಂದನೆಯವು.
ಎಲ್ಲದರ ಮೊದಲ ಪಡಿಯಲ್ಲೆ ನೀನೀಗ ಇದ್ದರೂ
ನೀನು ಖುಶಿಯಾಗಿರಬೇಕು ಮತ್ತು ಹೆಮ್ಮೆಪಡಬೇಕು ಅದಕ್ಕೆ.
ನೀನಿರುವ ಈ ಇಲ್ಲಿ ಸಣ್ಣ ದಾರಿಯೇನಲ್ಲ;

ನೀನು ಮಾಡಿರುವ ಅದಷ್ಟೂ ಬಹು ದೊಡ್ಡ ಕೀರ್ತಿಯೇ.
ಮತ್ತು ಈ ಮೊದಲ ಹಾಗೂ ಅತಿ ಕೆಳಗಿನ ಪಡಿಯೂ
ಸಾಮಾನ್ಯ ಜಗದಿಂದ ಅದೆಷ್ಟೋ ಮೇಲೆ.
ಈ ಪಡಿಮೇಲೆ ಕಾಲಿಡಬೇಕಾದರೆ ನೀನು
ಕಲ್ಪನಾನಗರಿಯ ನಾಗರಿಕನಾಗಿರಬೇಕು ಅದಕ್ಕೆ ಅರ್ಹತೆಯಿರಬೇಕು.
ಮತ್ತು ಆ ನಗರದಲ್ಲಿ ನಾಗರಿಕ ಹಕ್ಕು ದೊರಕುವುದು
ದುರ್ಲಭ ಹಾಗೂ ಅಪರೂಪ.
ಆ ಸದನದಲ್ಲಿ ನೀನು ಕಾಣುವ ವಿಧಾಯಕರು
ದುಸ್ಸಾಹಸಿಯೊಬ್ಬನ ಗೇಲಿಗೆ ಒಳಗಾಗುವವರಲ್ಲ.
ನೀನು ಬಂದಿರುವ ದಾರಿ ಸಣ್ಣದಲ್ಲ;
ನೀನೀಗ ಮಾಡಿದ ಈ ಇಷ್ಟೂ ಬಹು ದೊಡ್ಡ ಕೀರ್ತಿಯೇ.’

(ಪಡಿ=ಮೆಟ್ಟಲು, ಹಂತ)

ಥಿಯೋಕ್ರಿಟಸ್ ಒಬ್ಬ ಕ್ರಿಸಪೂರ್ವದ ಗ್ರೀಕ್ ಕವಿ, ಸ್ವಲ್ಪ ಕಾಲ ಕವಾಫಿಯಂತೆ ಈಜಿಪ್ಟಿನ ಅಲೆಕ್ಝಾಂಡ್ರಿಯಾದಲ್ಲೂ ಇದ್ದವ. ತರುಣ ಕವಿ ಯೂಮೆನೀಸ್ ಒಂದು ಕಾಲ್ಪನಿಕ ಹೆಸರಾಗಿರಬಹುದು. ಈ ತರುಣ ಕವಿಗೆ ಬೇಗ ಬೇಗನೆ ಕವಿತೆಯ ಸೋಪಾನ ಏರಬೇಕೆಂಬ ಆಸೆ; ಆದರೆ ಆತ ಇನ್ನೂ ಮೊದಲ ಮೆಟ್ಟಲಮೇಲೆಯೇ ಇದ್ದಾನೆ. ಕವಿತೆಯ ರಾಜ್ಯವನ್ನು ಸೇರುವುದು ಹೇಗೆ ಹೀಗಾದರೆ ಎನ್ನುವುದು ಅವನ ಅಹವಾಲು. ಅದಕ್ಕೆ ಥಿಯೋಕ್ರಿಟಸ್‌ನ ಉತ್ತರದಲ್ಲಿ ಸಮಾಧಾನವೂ ಇದೆ, ಛೇಡಿಕೆಯೂ ಇದೆ: ಈ ಮೊದಲ ಪಡಿಯೇ ಒಂದು ದೊಡ್ಡ ಸಾಧನೆ ಎನ್ನುವುದು ಸಮಾಧಾನ; ಕವಿತೆಯ ಸಾಮ್ರಾಜ್ಯ ಸೇರುವುದಕ್ಕೆ ತಕ್ಕುದಾದ ಅರ್ಹತೆ ಗಳಿಸಿರಬೇಕು, ಕೇವಲ ದುಸ್ಸಾಹಸದಿಂದ ಸಾಧಿಸುವುದಲ್ಲ ಅದು ಎನ್ನುವುದು ಛೇಡಿಕೆ.

ಕವಾಫಿಯ ಈ ಕವಿತೆಯಲ್ಲಿ ನಮ್ಮೆಲ್ಲಾ ಹಿರಿ ಕಿರಿಯ ಕವಿಗಳಿಗೂ ಉತ್ತರವಿದೆ. ಆದರೂ ಇಂಥದೊಂದು ಆತ್ಮಸಮಾಧಾನವನ್ನು ಇತರರಿಗೆ ಉಪದೇಶಿಸಬಹುದೇ ವಿನಾ ಸ್ವತಃ ಅಭ್ಯಾಸಕ್ಕೆ ತರುವುದು ಕಷ್ಟದ ಕೆಲಸ. ಯಾಕೆಂದರೆ ಯಾವ ‘ಯಶಸ್ಸೂ’ ಕೇವಲ ನಾವು ಬರೆದ ಕವಿತೆಗಳ ಅಂತರ್ ಸತ್ವದ ಮೇಲೆಯೇ ಎಲ್ಲಾ ಕಾಲದಲ್ಲೂ ನಿಂತಿದೆಯೆಂದು ಹೇಳುವಂತಿಲ್ಲ. ಭಾಷಾವಿಜ್ಞಾನದಲ್ಲಿ ಭಾಷೆ ಮತ್ತು ಉಪಭಾಷೆಗಳ ವ್ಯತ್ಯಾಸವನ್ನು ಒಂದು ತಮಾಷೆಯ ರೀತಿಯಿಂದ ವಿವರಿಸುವುದಿದೆ: ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿರುವ ಉಪಭಾಷೆ ಭಾಷೆ, ಇವಿಲ್ಲದದು ಉಪಭಾಷೆ ಎಂಬುದಾಗಿ! ಅರ್ಥಾತ್ ಭಾಷೆ ಮತ್ತು ಉಪಭಾಷೆಗಳ ಅಂತರವಿರುವುದು ರಾಜಕೀಯ ಶಕ್ತಿಯಲ್ಲಿ ಹೊರತು ಅವುಗಳ ಆಂತರಿಕ ಶಕ್ತಿಯಲ್ಲಲ್ಲ ಎಂದು. ಇದೇ ಮಾತು ಕವಿಗಳ ಖ್ಯಾತಿಯ ಕುರಿತೂ ಬಹುಮಟ್ಟಿಗೆ ನಿಜ. ‘ಖ್ಯಾತಿಯೆನ್ನುವುದು ಮಹಾತ್ಮರಾದವರ ಕೊನೇ ದೌರ್ಬಲ್ಕ’ ಎಂದ ಇಂಗ್ಲಿಷ್ ಕವಿ ಜಾನ್ ಮಿಲ್ಟನ್. ಈ ಕೊರತೆಯನ್ನು ಮೀರಿದ ಯಾವ ಕವಿಯೂ ಇದುವರೆಗೆ ಬಹುಶಃ ಹುಟ್ಟಿಲ್ಲ. ಇಂಥ ದೊಡ್ಡ ಕವಿ ನಿಜಕ್ಕೂ ಪ್ರಖ್ಯಾತನಾಗಬೇಕಾದರೆ ಆತನ ಬಳಿ ಈ ಹಿಂದೆ ಹೇಳಿದ ಮೂರೂ ತರದ ಸೇನೆಗಳು ಬೇಕಾಗುತ್ತವೆ. ಹಲವೊಮ್ಮೆ ಈ ಪಡೆಗಳು ಕವಿಯ ಪ್ರಯತ್ನವಿಲ್ಲದೇ ಯಾವ ಯಾವುದೋ ಕಾರಣಗಳಿಂದಾಗಿ ತಾವೇ ತಯಾರಾಗಿ ಆತನ ಸೇವೆಗೆ ನಿಲ್ಲುತ್ತವೆ ಕೂಡಾ! ಹೀಗಿರುತ್ತ, ನೀನು ಸ್ವಾರ್ಥ ಬಿಟ್ಟು ನಿಸ್ವಾರ್ಥಿಯಾಗಬೇಕು ಎಂದು ಯಾರು ಯಾರಿಗಾದರೂ ಉಪದೇಶಿಸುವುದು ಹೇಗೆ? ಅಥವಾ ‘ಶುದ್ಧ ಕವಿತೆ’ ಎನ್ನುವುದೊಂದಿದೆ, ಅದನ್ನು ನೆಚ್ಚಿಕೊಂಡರೆ ಸಾಕು, ಮನ್ನಣೆ ತಾನಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಎನ್ನುವುದು ಹೇಗೆ?

‘ಶುದ್ಧ ಕವಿತೆ’ ಎನ್ನುವುದೊಂದು ಇಲ್ಲದಿದ್ದರೂ ಕವಿತೆಗೆ ಸತ್ವವಿಲ್ಲದೆ ಇದ್ದರೆ ಅದನ್ನು ಹೆಚ್ಚು ಕಾಲ ಎತ್ತಿನಿಲ್ಲಿಸುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಸತ್ವವುಳ್ಳ ಕವಿತೆಗಳನ್ನು ನಿರ್ಮಿಸುತ್ತ ಹೋಗುವುದು ಪ್ರತಿಯೊಬ್ಬ ಕವಿಯ ಆದಿಮ ಕರ್ತವ್ಯ. ಉಳಿದುದೆಲ್ಲ ಆತನ ಮನಸ್ಸಾಕ್ಷಿಗೆ ಬಿಟ್ಟ ವಿಷಯ. ಅಮೇರಿಕದ ಹಿರಿಯ ಕವಿ ವಾಲ್ಟ್ ವ್ಹಿಟ್‌ಮನ್ ಆರಂಭದ ಕಾಲದಲ್ಲಿ ತನ್ನ ಕವನ ಸಂಕಲನಗಳಿಗೆ ತಾನೇ ಗುಪ್ತನಾಮಗಳಿಂದ ಪುಸ್ತಕ ವಿಮರ್ಶೆ ಬರೆಯುತ್ತಿದ್ದ! ಆದರೆ ಇಂದು ಅವನ ಕವಿತೆಗಳ ಹಿರಿಮೆಗೆ ಈ ವಿಮರ್ಶೆಗಳೇ ಕಾರಣ ಎಂದು ಹೇಳುವುದು ಮೂರ್ಖತನವಾಗುತ್ತದೆ. ನಾವು ವ್ಹಿಟ್‌ಮನ್‌ನ ಕಾವ್ಯಸತ್ವವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕೇ ವಿನಾ ಅವನು ಬರೆದ ಸ್ವಯಂ ವಿಮರ್ಶೆಯನ್ನಲ್ಲ. ಕಾವ್ಯಕ್ಕೆ ಅಂತಃಸತ್ವವಿದ್ದರೆ ಲೋಕ ಬೇರೆಲ್ಲಾ ಚೇಷ್ಟೆಗಳನ್ನೂ ಮನ್ನಿಸುತ್ತದೆ. ಅದೇ ಇಲ್ಲದಿದ್ದರೆ ಚೇಷ್ಟೆಗಳಷ್ಪೇ ಎದ್ದು ತೋರುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನಿಗೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೮

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…