ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..

ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..

ನಾನು ಚಿಕ್ಕಂದಿನಲ್ಲೇ ಗಾಂಧಿ ಆತ್ಮಕತೆಯ ಕೆಲವು ಭಾಗಗಳನ್ನು ಓದಿದ್ದೆ. ನನ್ನನ್ನು ಆವರಿಸಿಕೊಂಡದ್ದು ಅವರ ಸತ್ಯನಿಷ್ಠೆ. ತಪ್ಪಾಗಿದ್ದರೆ ಒಪ್ಪಿಕೊಳ್ಳುವ; ತಿದ್ದಿಕೊಳ್ಳುವ ಗುಣ. ಬೆಳೆಯುತ್ತ ಬಂದಂತೆ ನಾನು ಮಾರ್ಕ್ಸ್‌ವಾದವನ್ನು ಓದಿದೆ; ಅಂಬೇಡ್ಕರ್‌ ಅರಿವು ಪಡೆದೆ. ಈ ಮೂರೂ ಮಾದರಿಗಳ ನಡುವಿನ ತಾತ್ವಿಕ ವೈರುಧ್ಯಗಳನ್ನು ಅರ್ಥಮಾಡಿಕೊಂಡೆ. ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ – ಮೂವರ ಮಹತ್ವವನ್ನು ಮನಸ್ಸಿಗೆ ತಂದುಕೊಂಡೆ. ಯಾಕೆಂದರೆ ಈ ಮೂರೂ ಮಾದರಿಗಳೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜಾಗೃತವಾಗಿದ್ದ ಹೋರಾಟದ ವಿವೇಕಗಳಾಗಿದ್ದವು. ಆದ್ಯತೆಗಳು ಮಾತ್ರ ಬೇರೆಯಾಗಿದ್ದವು. ಬೇರೆಲ್ಲ ಸಾಮಾಜಿಕ ಸಂಗತಿಗಳೊಂದಿಗೆ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಹೋರಾಟವನ್ನು ಆದ್ಯತೆ ಮಾಡಿಕೊಂಡ ಗಾಂಧಿ, ಬ್ರಿಟಿಷ್ ವಸಾಹತು ವಿರೋಧವನ್ನೂ ಒಳಗೊಂಡು ನಮ್ಮ ದೇಶದ ಜಾತಿ-ವರ್ಣಗಳ ಸಾಮಾಜಿಕ ಸರ್ವಾಧಿಕಾರದ ವಿರುದ್ಧದ ಹೋರಾಟವನ್ನು ಆದ್ಯತೆ ಮಾಡಿಕೊಂಡ ಅಂಬೇಡ್ಕರ್, ಸಾಮಾಜಿಕ ಸಂಗತಿಗಳಿಗಿಂತ ಹೆಚ್ಚಾಗಿ ಬಂಡವಾಳಶಾಹಿಯ ಆರ್ಥಿಕ ಸರ್ವಾಧಿಕಾರ ವಿರೋಧಿ ಹೋರಾಟವನ್ನು ಆದ್ಯತೆ ಮಾಡಿಕೊಂಡ ಸಮತಾವಾದಿಗಳು, ಈ ಮೂರು ಮಾದರಿಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದವು. ಈಗ ಬ್ರಿಟಿಷ್ ವಸಾಹತುಶಾಹಿಯ ರಾಜಕೀಯ ಸರ್ವಾಧಿಕಾರ ಹೋಗಿದೆ. ದೇಶದೊಳಗಿನ ಸಾಮಾಜಿಕ ಹಾಗೂ ಆರ್ಥಿಕ ಸರ್ವಾಧಿಕಾರಗಳು ಇನ್ನೂ ಉಳಿದಿವೆ. ಈ ಸಾಮಾಜಿಕ-ಆರ್ಥಿಕ ಸರ್ವಾಧಿಕಾರಗಳನ್ನು ವಿರೋಧಿಸಿ ಹಿಮ್ಮೆಟ್ಟಿಸುವ ಸಮಾನತೆಯ ಹೋರಾಟ ಮಾತ್ರವೇ ‘ಎರಡನೇ ಸ್ವಾತಂತ್ರ್ಯ ಹೋರಾಟ’ ಎನ್ನಿಸಿಕೊಳ್ಳಬಲ್ಲದು. ಉಳಿದವೇನಿದ್ದರೂ ಬಿಡಿ ಬಿಡಿ ವಿಷಯಾಧಾರಿತ ಹೋರಾಟಗಳು; ಸ್ವಾತಂತ್ರ್ಯ ಹೋರಾಟಗಳಲ್ಲ.

ಹಾಗಾದರೆ, ಗಾಂಧೀಜಿಯ ಆದ್ಯತೆಯ ಬ್ರಿಟಿಷ್ ವಿರೋಧಿ ಹೋರಾಟ ಯಶಸ್ವಿಯಾಗಿರುವುದರಿಂದ ಗಾಂಧಿ ಅಪ್ರಸ್ತುತರಾಗುತ್ತಾರೆಯೇ? ಖಂಡಿತಾ ಇಲ್ಲ. ಅವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಶಾಪ ಎಂದವರು. ಅವರದೇ ಮಾದರಿಯಲ್ಲಿ ಸಾಮಾಜಿಕ ಸುಧಾರಣೆಗೆ ಬದ್ಧರಾಗಿದ್ದವರು. ಹಿಂದೂ ಧರ್ಮದೊಳಗಿನಿಂದಲೇ ಚಿಂತಿಸುವ ಮಿತಿಯ ಮಧ್ಯೆಯೂ ಧಾರ್ಮಿಕ ಮೂಲಭೂತವಾದಕ್ಕೆ ವಿರುದ್ಧವಾಗಿದ್ದವರು. ಹೀಗಾಗಿ ಗುಜರಾತ್‌ನ ‘ಮೋದಿ ಮಾದರಿ’ಯಲ್ಲಿ ‘ಗಾಂಧಿ ಮಾದರಿ’ ಏನಾಗಿರಬಹುದು ಎಂಬ ಕುತೂಹಲ ನನಗಿತ್ತು. ಜೊತೆಗೆ ಗಾಂಧೀಜಿಯ ಸತ್ಯಾಗ್ರಹದ ಆರಂಭಿಕ ನೆಲೆಯಾದ ಸಬರಮತಿ ಆಶ್ರಮವನ್ನು ನೋಡುವ ಆಸೆಯಿತ್ತು. ಇದೇ ರೀತಿ ಹಂಬಲಿಸಿ ನಾನು ನೋಡಿದ್ದು ಬುದ್ಧಗಯಾ. ಅಲ್ಲಿಂದ ತಂದ ಬೋಧಿವೃಕ್ಷದ ಎಲೆಗಳು ಈಗಲೂ ನನ್ನ ಬಳಿಯಿವೆ. ಬುದ್ಧ ಮತ್ತು ಗಾಂಧಿ ಒಂದೇ ಮಾದರಿಯಲ್ಲವಾದರೂ ಇಬ್ಬರಲ್ಲೂ ಸಂತ ಗುಣವಿದ್ದುದು ಸಮಾನ ಅಂಶವಾಗಿತ್ತು. ಆದರೆ ಸಂತಗುಣದ ಮಾದರಿ ಒಂದೇ ವಿನ್ಯಾಸದ್ದಲ್ಲ. ಗಾಂಧಿಯೊಳಗೆ ಉದಾತ್ತ ಹಿಂದೂ ಸಂತನಿದ್ದರೆ, ಬುದ್ಧನಲ್ಲಿ ಸನಾತನತೆಯನ್ನು ಮೀರಿದ ಹೊಸ ಬೆಳಕಿನ ಸಂತನಿದ್ದ. ಇಷ್ಟಾಗಿಯೂ ಬುದ್ಧಗಯಾ ನೋಡಿದ ನನಗೆ ಗಾಂಧಿ ಆಶ್ರಮ ನೋಡದೆ ಇದ್ದುದು ಅಪೂರ್ಣ ಅನ್ನಿಸುತ್ತಲೇ ಇತ್ತು. ಅದನ್ನು ನೋಡಲೆಂದೇ ಪತ್ನಿ ರಾಜಲಕ್ಷ್ಮಿಯೊಂದಿಗೆ ಅಹಮದಾಬಾದ್‌ಗೆ ಹೋದೆ.

ಗಾಂಧೀಜಿಯ ಸಬರಮತಿ ಆಶ್ರಮದ ಪ್ರವೇಶದ್ವಾರ ವಿಶಿಷ್ಟವಾಗಿಯೇನೂ ಇರಲಿಲ್ಲ. ಮೋದಿಯವರ ‘ಅಭಿವೃದ್ಧಿ’ ನೋಟ ಈ ಕಡೆ ಬಿದ್ದಂತೆ ಕಾಣಲಿಲ್ಲ. (ಅಷ್ಟರಮಟ್ಟಿಗೆ ಗಾಂಧಿ ಸುರಕ್ಷಿತ?). ಒಳಗೆ ಹೋದರೆ ಹಳೆಯ ಆಶ್ರಮ ಕುಟೀರದ ಜೊತೆಗೆ ಹೊಸದಾಗಿ ಕಟ್ಟಿದ ಮ್ಯೂಜಿಯಂ ಇದೆ. ಇದು ತುಂಬಾ ಹಿಂದೆಯೇ ಸ್ಥಾಪಿತವಾದದ್ದು. ಮ್ಯೂಜಿಯಂ ನೋಡುವ ಮೊದಲು ಗಾಂಧಿ ವಾಸವಿದ್ದ ಹೆಂಚಿನ ಕುಟೀರ ನೋಡುವ ಹಂಬಲ. ಅಲ್ಲಿ ಹರಿಯುತ್ತಿದ್ದ ಸಬರಮತಿ ನದಿಯ ದಂಡೆಯ ಮೇಲೆ ಈ ಕುಟೀರವಿದೆ. ಥಟ್ಟನೆ ಕಣ್ಣಿಗೆ ಬಿದ್ದದ್ದು ಹಜಾರದಲ್ಲಿದ್ದ ಚರಕ. ಅದು ಗಾಂಧಿ ಚರಕ; ಅದು ಗಾಂಧಿ ಕೂರುತ್ತಿದ್ದ ಸ್ಥಳ. ಒಳಗು ಅರಳಿದ ಅನುಭವ. ಗಾಂಧಿ ಹೆಚ್ಚು ಇರುತ್ತಿದ್ದ, ಓದು ಬರಹಕ್ಕೆ ತೊಡಗುತ್ತಿದ್ದ ಕೊಠಡಿಯನ್ನೂ ಕಂಡೆ. ಅದಕ್ಕೆ ಬೀಗ ಜಡಿಯಲಾಗಿತ್ತು. ಗಾಂಧಿ ಅರಿವಿನ ಮನೆಗೆ ಬೀಗ! ಎಂಥ ಸಂಕೇತ ಅನ್ನಿಸಿತು.

ಅಲ್ಲಿಂದ ಮ್ಯೂಜಿಯಂಗೆ ಬಂದೆವು. ಅಲ್ಲಿ ಗಾಂಧಿ ಬದುಕನ್ನು ತೆರೆದಿಡುವ ಅಸಂಖ್ಯಾತ ಛಾಯಾಚಿತ್ರಗಳಿವೆ; ಗಾಂಧಿ ಸಾಮಗ್ರಿಗಳಿವೆ. ಛಾಯಾಚಿತ್ರಗಳನ್ನು ನೋಡುತ್ತಾ ಹೋದಂತೆ ಇದೇ ಆಶ್ರಮದಿಂದ ಆರಂಭಗೊಂಡ ಉಪ್ಪಿನ ಸತ್ಯಾಗ್ರಹದ ಚಿತ್ರಗಳು ಗಮನ ಸೆಳೆದವು. ತಕ್ಷಣ ನನಗೆ ಚರಕ ನೆನಪಿಗೆ ಬಂತು. ಗಾಂಧೀಜಿಯವರ ರಾಷ್ಟ್ರೀಯತೆಗೂ ಅದೇ ಕಾಲದ ಬೇರೆ ಕೆಲವರ (ಉದಾ: ತಿಲಕ್ ಅವರ ರಾಷ್ಟ್ರೀಯ ಹೋರಾಟ) ರಾಷ್ಟ್ರೀಯತೆಗೂ ವ್ಯತ್ಯಾಸ ಕಂಡದ್ದು ಇಲ್ಲಿಯೇ. ಗಾಂಧೀಜಿ ಹಿಂದೂ ಧರ್ಮವನ್ನು ನಂಬಿದವರಾದರೂ ಅವರ ರಾಷ್ಟ್ರೀಯತೆಯಲ್ಲಿ ಒಂದೂ ಧಾರ್ಮಿಕ ಸಂಕೇತವಿರಲಿಲ್ಲ. ಅವರ ಮುಖ್ಯ ಸಂಕೇತಗಳು ಚರಕ, ಉಪ್ಪು ಮತ್ತು ಖಾದಿ. ಈ ಸಂಕೇತಗಳು ಯಾವ ಜಾತಿಗೂ ಸೇರಿಲ್ಲ; ಯಾವ ಧರ್ಮಕ್ಕೂ ಸಂಬಂಧಿಸಿಲ್ಲ. ಮೂರೂ ಜಾತ್ಯತೀತ ಹಾಗೂ ಧರ್ಮದೂರ ಸಂಕೇತಗಳು, ಖಾಸಗಿಯಾಗಿ ನಿರ್ದಿಷ್ಟ ಧರ್ಮವನ್ನು ನಂಬಿದ್ದರೂ ಸಾರ್ವಜನಿಕ ಬದುಕಿನಲ್ಲಿರಬೇಕಾದ ಜಾತ್ಯತೀತ ಮಾದರಿಗೆ ಗಾಂಧೀಜಿಯವರ ಸಾಂಕೇತಿಕತೆ ಉತ್ತಮ ಉದಾಹರಣೆ. ಗಾಂಧೀಜಿಯವರ ಈ ಜಾತ್ಯತೀತ ನಂಬಿಕೆ-ನಿಲುವುಗಳೇ ಜವಾಹರಲಾಲ್ ನೆಹರೂ ಪರವಾದ ಒಲವಾಗಿ ಪರಿಣಮಿಸಿದ್ದು, ಹಾಗೆ ನೋಡಿದರೆ ಆರ್ಥಿಕ ನೀತಿಯ ವಿಷಯದಲ್ಲಿ ಗಾಂಧಿ ಮತ್ತು ನೆಹರೂ ನಡುವೆ ಅಭಿಪ್ರಾಯ ಭೇದವಿತ್ತು. ಗಾಂಧೀಜಿ ಯಂತ್ರ ನಾಗರೀಕತೆಯ ವೈಪರೀತ್ಯಗಳಿಗೆ ವಿರೋಧವಾಗಿದ್ದರು. ಹಾಗೆಂದು ಕೆಲವರು ಅಂದು ಕೊಂಡಂತೆ ಇಡೀ ಕೈಗಾರಿಕೀಕರಣವನ್ನು ಅವರು ಪೂರ್ಣವಾಗಿ ವಿರೋಧಿಸಲಿಲ್ಲ. ‘ಮನುಷ್ಯ ಮತ್ತು ಯಂತ್ರಗಳು ಒಟ್ಟಿಗೇ ಹೋಗಬೇಕು’ ಎಂದು ಅವರೇ ಬರೆದಿದ್ದಾರೆ. ಯಂತ್ರಗಳೇ ಮನುಷ್ಯನನ್ನು ಆಳಬಾರದು ಎಂಬುದು ಗಾಂಧೀಜಿ ವಾದ.

ನಿಜ; ಗಾಂಧೀಜಿ ತಮ್ಮ ಎಷ್ಟೋ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುತ್ತಾ ಬೆಳೆದರು. ಗಾಂಧೀಜಿ ಚಿಂತನೆಯ ಚಲನಶೀಲತೆಯನ್ನು ಗ್ರಹಿಸದೆ ಹೋದರೆ ಅವರು ಸರಿಯಾಗಿ ಅರ್ಥವಾಗುವುದಿಲ್ಲ. ಗಾಂಧಿ ಮ್ಯೂಜಿಯಂನಲ್ಲಿ ಗಾಂಧೀಜಿ ಬಾಲ್ಯದಿಂದ ಮುಪ್ಪಿನವರೆಗಿನ ಹತ್ತಾರು ಹಂತಗಳನ್ನು ಹೇಳುವ ಛಾಯಾಚಿತ್ರಗಳ ಗುಚ್ಛವೊಂದಿದೆ. ಅದಕ್ಕೆ ‘Change of thinking: Change of Life’ ಎಂಬ ಶೀರ್ಷಿಕೆ ಕೊಡಲಾಗಿದೆ. ಬಾಲ್ಯ, ಯೌವನ, ವಕೀಲಗಿರಿ, ಹೋರಾಟ ಎಲ್ಲವನ್ನೂ ಒಟ್ಟಿಗೆ ಹೇಳುವ ಈ ಛಾಯಾಚಿತ್ರ ಫಲಕದಲ್ಲಿ ಒಂದೊಂದು ಚಿತ್ರದಲ್ಲೂ ಒಂದೊಂದು ರೀತಿಯ ಉಡುಪು ಇದೆ. ಗುಜರಾತಿ ಪೇಟದಿಂದ ಖಾದಿ ಟೋಪಿಗೆ, ಫುಲ್ ಸೂಟಿನಿಂದ ಅರಬೆತ್ತಲೆ ಉಡುಪಿಗೆ ಆದ ಸ್ಥಿತ್ಯಂತರವನ್ನು ಈ ಚಿತ್ರಗಳಲ್ಲಿ ಕಾಣಬಹುದಾಗಿದೆ. ನನ್ನ ದೃಷ್ಟಿಯಲ್ಲಿ ಇದು ಕೇವಲ ಉಡುಪುಗಳ ಬದಲಾವಣೆಯಲ್ಲ; ಚಿಂತನೆಗಳ ಬದಲಾವಣೆ, ಚಾರಿತ್ರಿಕ ಸ್ಥಿತ್ಯಂತರ. ತಕ್ಷಣ ನನ್ನ ನೆನಪಿಗೆ ಬಂದದ್ದು ಡಾ. ಅಂಬೇಡ್ಕರ್. ಗಾಂಧಿ ಮತ್ತು ಅಂಬೇಡ್ಕರ್‌ ಅವರ ಉಡುಪಿನಲ್ಲಾದ ಬದಲಾವಣೆಯ ಬಗ್ಗೆ ನಾನು ಅರ್ಥಮಾಡಿಕೊಂಡಿದ್ದ ಕ್ರಮವು ಮತ್ತೆ ಕಣ್ಣಿಗೆ ಕಟ್ಟಿತು. ಯಾಕೆಂದರೆ ಇದೇ ಮ್ಯೂಜಿಯಂನಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಭೇಟಿಯ ಒಂದು ಚಿತ್ರವೂ ಇತ್ತು. ಅಂಬೇಡ್ಕರ್ ಅವರದು ಫುಲ್‌ಸೂಟ್ ಗಾಂಧೀಜಿಯವರದು ಅರೆಬೆತ್ತಲೆ ಉಡುಪು, ‘ಅರೆಬೆತ್ತಲೆ’ ಜಗತ್ತಿನಿಂದ ಬಂದ ಅಂಬೇಡ್ಕರ್‌ ಫುಲ್‌ಸೂಟ್ ಹಾಕಿದ್ದು, ‘ಫುಲ್‌ಸೂಟ್’ ವಲಯದಿಂದ ಬಂದ ಗಾಂಧೀಜಿ ಅರೆಬೆತ್ತಲೆ ಉಡುಪಿಗೆ ಬದಲಾದದ್ದು ಎರಡು ಚಾರಿತ್ರಿಕ ಸಂಕೇತಗಳು ಮತ್ತು ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ದೇಶದ ಮಟ್ಟಿಗೆ ಈ ಎರಡೂ ನೆಲೆಗಳು ಸಕಾರಾತ್ಮಕ ವಿಕಾಸ ವಿನ್ಯಾಸಗಳು.

ಅಂಬೇಡ್ಕರ್‌ ಅವರಲ್ಲಿ ಬೆಳೆದ ಸ್ವಾಭಿಮಾನಿ ಪ್ರಜ್ಞೆ, ಗಾಂಧೀಜಿಯವರನ್ನು ಕಾಡಿಸಿದ ಪಾಪಪ್ರಜ್ಞೆ – ಇಬ್ಬರ ಉಡುಪನ್ನು ಬದಲಾಯಿಸಿವೆ, ಇದು ಕೇವಲ ಬಟ್ಟೆಗಳ ಬದಲಾವಣೆಯಲ್ಲ ಅವರವರ ಬೆಳಕಿನ ಬದಲಾವಣೆ: ನಮ್ಮ ಸಾಮಾಜಿಕ ಸಂದರ್ಭದ ರೂಪಕ.

‘Change of thinking: Change of Life’ ಛಾಯಾಚಿತ್ರ ಮಾಲೆಯನ್ನು ನೋಡುತ್ತಾ ಹೋದಂತೆ ಗಾಂಧಿ ಚಿಂತನೆಯಲ್ಲಾದ ಬದಲಾವಣೆಗಳು ನೆನಪಿಗೆ ಬಂದವು. ಗಾಂಧೀಜಿಯವರು ಅಂಬೇಡ್ಕರ್ ಭೇಟಿಗೆ ಮುಂಚೆ ನಂಬಿದ್ದ ಪ್ರಮುಖ ಸಾಮಾಜಿಕ ವಿಚಾರಗಳು ಆನಂತರ ನಿಧಾನವಾಗಿ ಬದಲಾಗುತ್ತಾ ಬಂದಿವೆ. ಸುಮಾರು ೧೯೩೫ಕ್ಕೆ ಹಿಂದಿನ ಸಾಮಾಜಿಕ ಚಿಂತನೆಗಳನ್ನು ಮಾತ್ರ ಆಧರಿಸಿದರೆ ಅವರನ್ನು ಟೀಕೆ ಮಾಡುವ ಅವಕಾಶ ಸಾಕಷ್ಟಿದೆ. ಆದರೆ ಇದೇ ಗಾಂಧೀಜಿ ಆನಂತರದ ದಿನಗಳಲ್ಲಿ ಬದಲಾದದ್ದನ್ನು ಗಮನಿಸದೆ ಹೋದರೆ ಅವರನ್ನು ಪೂರ್ಣ ಅರ್ಥಮಾಡಿಕೊಂಡಂತೆ ಆಗುವುದಿಲ್ಲ. ಈ ಅಭಿಪ್ರಾಯಕ್ಕೆ ಆಧಾರವಾಗಿ ಕೆಲವು ವಿಷಯಗಳನ್ನು ಉದಾಹರಿಸಬಹುದು.

೧೯೨೦ರಲ್ಲಿ ಗಾಂಧೀಜಿ ಜಾತಿ ಪದ್ಧತಿಯು ಹೋಗುವುದಿಲ್ಲವೆಂದೂ ಅದಕ್ಕೆ ಅದರದೇ ಆದ ತಾತ್ವಿಕತೆಯಿದೆಯೆಂದೂ ನಂಬಿದ್ದಲ್ಲದೆ ಜಾತಿವಿನಾಶ ಹೋರಾಟಕ್ಕೆ ವಿರುದ್ಧವಾಗಿದ್ದರು. ಆದರೆ ಇದೇ ಗಾಂಧೀಜಿ ನಲವತ್ತರ ದಶಕದಲ್ಲಿ ‘ಜಾತಿರಹಿತ, ವರ್ಗರಹಿತ ಇಂಡಿಯಾವನ್ನು ಸ್ಥಾಪಿಸಲು ನಾನು ಬದ್ಧನಾಗಿದ್ದೇನೆ’ ಎಂದು ಪ್ರತಿಪಾದಿಸಿದರು. ಹಿಂದೆ ಅವರೂ ಹಿಂದೂ ಸಮಾಜದ ಭದ್ರತೆಗೆ ಜಾತಿ ಪದ್ಧತಿ ಸಹಕಾರಿ ಎಂದು ಭಾವಿಸಿದ್ದು ಆನಂತರ ನಿಧಾನವಾಗಿ ಅವರ ಅಭಿಪ್ರಾಯ ಬದಲಾಯಿತು. ‘ನನ್ನ ಕನಸಿನ ಸ್ವರಾಜ್ಯದಲ್ಲಿ ಆಸ್ತಿ ಸ್ವಂತದ್ದಾಗಬಾರದು. ಅದು ಸಮಾಜ ಸೇವೆಗಾಗಿ ಎಂದು ತಿಳಿಯಬೇಕು. ಅದು ಸಾಧ್ಯವಾದರೆ ಆಗ ಯಾರೂ ಶ್ರೀಮಂತರಿರುವುದಿಲ್ಲ; ಯಾರೂ ಬಡವರಿರುವುದಿಲ್ಲ. ನನ್ನ ಕನಸಿನ ಸ್ವರಾಜ್ಯದಲ್ಲಿ ಸಮಸ್ತ ಧರ್ಮಗಳೂ ಸಮಾನ; ಅಲ್ಲಿ ಧರ್ಮ, ಜಾತಿ ಮತ್ತು ಆರ್ಥಿಕ ಅಸಮಾನತೆಗಳು ಅಂತ್ಯವಾಗುತ್ತವೆ’ ಎಂದು ಪ್ರತಿಪಾದಿಸಿದ ಗಾಂಧೀಜಿ ಬೇರೆಯಾಗಿಯೇ ಕಾಣಿಸಿಕೊಂಡರು. ಅವರ ಟ್ರಸ್ಟಿಶಿಪ್ ಕಲ್ಪನೆ ಕುರಿತು ಭಿನ್ನಾಭಿಪ್ರಾಯ ಸಾಧ್ಯವಾದರೂ ಗಾಂಧೀಜಿಯವರ ಆದರ್ಶ ಸಮಾನತೆಯ ಸಮಾಜವಾಗಿತ್ತು ಎಂಬಂಶವನ್ನು ಅಲ್ಲಗಳೆಯಲಾಗದು.

ಮೊದಲು ಅಂತರಜಾತೀಯ ವಿವಾಹಗಳನ್ನು ಒಪ್ಪದೆ ಇದ್ದ ಗಾಂಧೀಜಿ ನಲವತ್ತರ ದಶಕದ ವೇಳೆಗೆ ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡರು. ‘ಸವರ್ಣಿಯ ಹಿಂದೂ ಮತ್ತು ಹರಿಜನರ ನಡುವೆ ನಡೆಯುವ ಮದುವೆಗಳಲ್ಲಿ ಮಾತ್ರ ನಾನು ಭಾಗವಹಿಸುತ್ತೇನೆ’ ಎಂದು ಘೋಷಿಸಿದರು. ‘ನೀವು ಹರಿಜನ ಹೆಣ್ಣುಮಗಳನ್ನು ಮದುವೆಯಾಗದಿದ್ದರೆ ನನ್ನ ಆಶೀರ್ವಾದ ಕೇಳಬೇಡಿ’ ಎಂದು ಖಂಡತುಂಡವಾಗಿ ಹೇಳಿದರು. ಇದೇ ಗಾಂಧೀಜಿ ೧೯೧೯ ರಲ್ಲಿ ಅಂತರಜಾತೀಯ ವಿವಾಹ ವಿರೋಧಿಸಿ ಬರೆದಿದ್ದರು; ಅಂತರ್ ಭೋಜನವನ್ನೂ ಒಪ್ಪಿರಲಿಲ್ಲ. ಆದರೆ ಅದೇ ಬರಹದಲ್ಲಿ ‘ಕಾಲ ಬದಲಾದಂತೆ ಅಂತರಜಾತಿ ವಿವಾಹ ಮತ್ತು ಅಂತರ್ ಭೋಜನಗಳಲ್ಲಿ ಬದಲಾವಣೆ ಹಾಗೂ ಮರು ಹೊಂದಾಣಿಕೆ ಅಗತ್ಯವಾಗುತ್ತದೆ’ ಎಂದೂ ಹೇಳಿದ್ದರು. ಮುಂದೆ ಅವರೇ ಈ ಬದಲಾವಣೆಯನ್ನು ಪ್ರತಿಪಾದಿಸಿದರು; ತಮ್ಮ ಅಭಿಪ್ರಾಯ ವೈರುಧ್ಯಗಳನ್ನು ಮೀರುತ್ತ ಬಂದರು.

ಗಾಂಧೀಜಿಯವರು ನಿಧಾನವಾಗಿ ಅಂಬೇಡ್ಕರ್ ಪ್ರಭಾವಕ್ಕೂ ಒಳಗಾಗಿದ್ದರು. ಒಂದು ಉದಾಹರಣೆ ಹೇಳುವುದಾದರೆ – ಸಾಮಾಜಿಕ ಹೋರಾಟಗಾರರಾದ ಗೋರಾ ಅವರ ಅಳಿಯನಿಗೆ ಅವರು ಹೀಗೆ ಬರೆಯುತ್ತಾರೆ: ‘ನೀನು ಅಂಬೇಡ್ಕರ್ ಅವರಂತೆ ಆಗಬೇಕು. ಅಸ್ಪೃಶ್ಯತೆ ಹಾಗೂ ಜಾತಿ ವಿನಾಶಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆ ತೆತ್ತರೂ ಸರಿಯೆ, ಅಸ್ಪೃಶ್ಯತೆ ಅಳಿಯಬೇಕು. (೧೯೪೬)’.

ಹೀಗೆ ಗಾಂಧಿ ಸಕಾರಾತ್ಮಕವಾಗಿ ಬದಲಾಗುತ್ತಾ ಹೋದರು. ತಮ್ಮ ಕೆಲವು ತಪ್ಪು ತಿಳಿವಳಿಕೆಗಳನ್ನು ತಿದ್ದಿಕೊಂಡರು. ಆದರೆ ಒಮ್ಮೆ ಒಪ್ಪಿಕೊಂಡ ವಿಷಯದ ಪರಿಪಾಲನೆಯಲ್ಲಿ ಸದಾ ಕಠೋರತೆ ತೋರುತ್ತಾ ಬಂದರು. ಈ ಎಲ್ಲ ಬದಲಾವಣೆ, ಬೆಳವಣಿಗೆ ಮತ್ತು ಕಠೋರತೆಗಳ ಮೂಕ ಸಾಕ್ಷಿಯೆಂಬಂತೆ ಕಸ್ತೂರಿಬಾ ಅವರ ಶಿಲ್ಪವೊಂದು ಮ್ಯೂಜಿಯಂನಲ್ಲಿತ್ತು. ಸೂಕ್ಷ್ಮ ಕೆತ್ತನೆಯ ಪ್ರತಿಮೆ. ಹೌದು, ಕಸ್ತೂರಿಬಾ ಅವರು ಗಾಂಧೀಜಿಯ ಕಠೋರ ನಿಷ್ಠೆಯ ಬಾಳಿನುದ್ದಕ್ಕೂ ಸೂಕ್ಷ್ಮ ಕೆತ್ತನೆಯ ಪ್ರತಿಮಾರೂಪವಾದರು! ಹೆಜ್ಜೆಯಲ್ಲಿ ಹೆಜ್ಜೆಯಿಟ್ಟ ಕಸ್ತೂರಿಬಾ ‘ಗಾಂಧಿ ಬದುಕಾದರು!’ ನಾನೂ ನನ್ನ ಪತ್ನಿ ಕಸ್ತೂರಿಬಾ ಅವರಿಗೆ ಕೈಮುಗಿದೆವು.

ಮುಂದೆ ನಮ್ಮನ್ನು ಮೂಕವಾಗಿಸಿದ್ದು ಕಸ್ತೂರಿಬಾ ಮತ್ತು ಗಾಂಧಿ ಅಂತ್ಯಕ್ರಿಯೆಯ ಚಿತ್ರಗಳು. ಕಸ್ತೂರಿಬಾ ಸತ್ತರೂ ಗಾಂಧಿಯಲ್ಲಿ ಬದುಕಿದ್ದರು. ಗಾಂಧಿ ಸತ್ತರೂ ಉರಿವ ಬೆಂಕಿಯಲ್ಲಿ ಬದುಕಿದ್ದರು.

ಗಾಂಧಿಯ ‘ಸಾವು’ ಕಂಡ ಮೇಲೆ ಮೋದಿಯ ‘ಜೀವ’ ಕಾಣಬೇಕೆನ್ನಿಸಿ ಮಾರನೇ ದಿನ ಅಹಮದಾಬಾದ್ ಸುತ್ತಾಡಿದೆವು. ನಿಜ; ಜಾಗತೀಕರಣದ ಅಭಿವೃದ್ಧಿ ರೂಪಗಳು ಢಾಳಾಗಿ ಕಾಣುತ್ತಿವೆ. ಬಹುರಾಷ್ಟ್ರೀಯ ಬೃಹತ್‌ ಬಂಡವಾಳಗಾರರಿಗೆ ಗುಜರಾತ್ ದಿಡ್ಡಿ ಬಾಗಿಲು ತೆಗೆದಿದೆ. ನಗರದ ರಸ್ತೆಗಳು ಸಹಜವಾಗಿ ಸುಂದರಗೊಂಡಿವೆ. ಖಾಸಗಿ ವಲಯದ ವಿಜೃಂಭಣೆ ಯಲ್ಲಿ ಸಾಕಷ್ಟು ಪ್ರಚಾರವೂ ಸಿಕ್ಕಿದೆ. ಆದರೆ ಈ ಬೃಹತ್ ಅಭಿವೃದ್ಧಿಯ ಅಡಿಯಲ್ಲಿ ಸುಮಾರು ಎಂಟು ಸಾವಿರ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆಯೆಂದು ಮಲ್ಲಿಕಾ ಸಾರಾಬಾಯ್ ಹೇಳಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರವೇ ೯ ಬೃಹತ್ ಉದ್ಯಮಿಗಳಿಗೆ ೧೨,೨೭೩ ಕೋಟಿ ರೂಪಾಯಿಗಳಷ್ಟು ವಿನಾಯಿತಿ ನೀಡಲಾಗಿದೆ. ಸಾಮಾಜಿಕ ಕ್ಷೇತ್ರ ಕೆಲಸಗಳಲ್ಲಿ ಗುಜರಾತ್ ೧೭ನೇ ಸ್ಥಾನದಲ್ಲಿದೆ. ಅಂದರೆ ಸಾಮಾನ್ಯ ಜನವರ್ಗಗಳ ಅಭಿವೃದ್ಧಿ ಎತ್ತ ಸಾಗಿದೆಯೆಂಬ ಪ್ರಶ್ನೆ ಮುಖ್ಯವಾಗುತ್ತದೆ. ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಭರತ್‌ಸಿಂಗ್ ಜಾಲಾ ಎಂಬುವವರು ಪಡೆದ ಅಧಿಕೃತ ವಿವರಗಳ ಪ್ರಕಾರ ನಾಲ್ಕು ವರ್ಷಗಳಲ್ಲಿ ೪೮೯ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೬,೦೫೫ ಜನ ರೈತರು ಆಕಸ್ಮಿಕ ಮರಣಕ್ಕೆ ಅಥವಾ ಅಪಘಾತಕ್ಕೆ ತುತ್ತಾಗಿ ಸತ್ತಿದ್ದಾರೆ. ಮೋದಿಯವರು ಘೋಷಿಸಿದ ೧೩,೦೦೦ ಕೋಟಿ ರೂಪಾಯಿ ಗಳ ‘ಗರೀಬ್’ ಸಮೃದ್ಧಿ ಯೋಜನೆ’ ಸರಿಯಾಗಿ ಅನುಷ್ಠಾನಗೊಂಡಿಲ್ಲ. ದಲಿತರ ಮೇಲಿನ ದೌರ್ಜನ್ಯಗಳ ಶೇಕಡಾವಾರು ಪ್ರಮಾಣವು ೨೦೦೧ರಲ್ಲಿ ೩.೭ ಇದ್ದದ್ದು ಈಗ ಶೇ. ೫.೫ ರಷ್ಟಾಗಿದೆ. ಅನೇಕ ಹಿಂದುಳಿದ-ದಲಿತ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳಿಲ್ಲ. ಇವು ಸಾಂಕೇತಿಕವಾಗಿ ಕೊಟ್ಟಿರುವ ಮಾಹಿತಿಗಳು. ಇದರಾಚೆಗಿನ ಭಾವವಲಯವನ್ನೂ ಗಮನಿಸಬೇಕು.

ಮೋದಿಯವರ ಠೇಂಕಾರದ ಕಾರ್ಯವೈಖರಿ ಮತ್ತು ಗುಜರಾತಿನ ಸ್ವಾಭಿಮಾನವನ್ನು ಬಡಿದೇಳಿಸುವ ಭಾವೋದ್ರೇಕದ ಭಾಷಾ ಮಾದರಿಗೆ ಮಾರುಹೋದ ಜನರು ಸಾಕಷ್ಟು ಇದ್ದಾರೆ. ಇವರಲ್ಲಿ ಅನೇಕರು ಬಿಜೆಪಿಯವರಲ್ಲ. ಮೂಲ ಸಂಘ ಪರಿವಾರದವರಲ್ಲ. ಅಸಹನೆ ಮತ್ತು ಅಭಿಮಾನದ ಅತಿಗಳಿಗೆ ತಲುಪುತ್ತಿರುವ ಇಂಥವರ ಮನಸ್ಥಿತಿಗೆ ಸಾಮಾಜಿಕ-ರಾಜಕೀಯ ಕಾರಣಗಳಿವೆ. ಕೋಮು ರಾಜಕೀಯ ಸಹಜವಾಗಿಯೇ ಜನರನ್ನು ಒಡೆಯುತ್ತದೆ; ಅನ್ಯರ ಬಗ್ಗೆ ಅಸಹನೆ, ಆತ್ಮರತಿಯ ಅಭಿಮಾನಗಳನ್ನು ಹುಟ್ಟಿಸುತ್ತದೆ. ಈ ಜಗಳಗಳಲ್ಲೇ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳಬೇಕೆಂದು ಭಾವಿಸುವ ಜೀವಪರ ಹಿಂದೂ-ಮುಸ್ಲಿಮರೂ ಇದ್ದಾರೆ. ಆದರೆ ಜೀವ ಬಲಿಗೆ ಆಳುವವರೇ ಕುಮ್ಮಕ್ಕು ಕೊಟ್ಟ ಆರೋಪ ಎದುರಿಸುತ್ತಿದ್ದಾರೆ; ಬಲಿಯಾದವರು ಮತ್ತೆ ಬರುವುದಿಲ್ಲ: ನ್ಯಾಯಾಂಗದ ತೀರ್ಪುಗಳೂ ಬೇಗ ಬರುವುದಿಲ್ಲ. ಒಟ್ಟಾರೆ ಹೇಳುವುದಾದರೆ ಒಡೆದ ಮನಸ್ಸುಗಳನ್ನು ಒಂದುಗೂಡಿಸುವುದು ಸಾಧ್ಯವಾಗಿಲ್ಲ.

ಗಾಂಧಿ ಯಾವತ್ತೂ ಒಂದುಗೂಡಿಸುವ ಕಳಕಳಿ ಇದ್ದವರು. ಭಾವೋದ್ರೇಕವಿಲ್ಲದ ಭಾಷೆಯಲ್ಲಿ ಬದುಕಿದವರು. ಠೇಂಕಾರವಿಲ್ಲದ ಆಕಾರವಾದವರು. ಮೋದಿ ಗುಜರಾತ್‌ನಲ್ಲಿ ಈ ಗಾಂಧಿ ಎಲ್ಲಿದ್ದಾರೆ?

ಅವರು ಇರುವುದು ಸಬರಮತಿ ಮ್ಯೂಜಿಯಂನಲ್ಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೬
Next post ಚೆಲುವು

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…