ಇನ್ನೊಂದು ಕಣ್ಣು

ಇನ್ನೊಂದು ಕಣ್ಣು

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ ಸದ್ದು ಜೊತೆ ಸೇರಿದ್ದೇ, ವಾತಾವರಣ ಹಬ್ಬದ ಕಳೆ ಪಡೆದಿತ್ತು.

ಆನ್ನಾ ನಿಟ್ಟುಸಿರಿಡುತ್ತ, ಕಿಟಕಿಯಿಂದ ತುಸು ಆಚೆ ಸರಿದಳು. ನಿತ್ಯ ಬೆಳಿಗ್ಗೆ ತನ್ನ ಗಂಡ ಏಳುವಾಗ ಹಾಸಿಗೆಯನ್ನು ಮಡಚುತ್ತಿದ್ದು, ಆ ದಿವಸ ಮರೆತಿರುವುದನ್ನು ಗಮನಿಸಿದಳು. ಪ್ರತಿ ಬಾರಿ ಆತ ಹಾಗೇ ಮಾಡುವುದಿತ್ತು. ಇದರಿಂದಾಗಿ ಆಳುಗಳಿಗೆ ಆತ ಕೋಣೆಯಲ್ಲಿ ಮಲಗಿರಲಿಲ್ಲ ಎಂದು ಹೇಳುವುದು ಮಾತ್ರ ಕಷ್ಟವಿರಲಿಲ್ಲ. ಅವಳು ತನ್ನ ಮೊಣಕೈಗಳನ್ನು ಇನ್ನೂ ಸುಕ್ಕಾಗದ ಆ ಹಾಸಿಗೆಯ ಮೇಲೆ ಊರಿ, ಅಲ್ಲಿಯೇ ತುಸುಬಾಗಿ ಮೈಚೆಲ್ಲಿದಳು. ತನ್ನ ತಲೆಯನ್ನು ದಿಂಬಿನ ಮೇಲಿಟ್ಟು, ಹಾಸಿದ ಚಾದರ ಮತ್ತವನ ಪಾಯಿಜಾಮದ ತಾಜಾ ಪರಿಮಳವನ್ನು ಆಘ್ರಾಣಿಸಲೆಂದು ರೆಪ್ಪೆಗಳನ್ನು ಅರ್ಧಕ್ಕೆ ಮುಚ್ಚಿಕೊಂಡಳು. ಸ್ವಾಲ್ಲೋಹಕ್ಕಿಗಳ ಹಿಂಡೊಂದು ಚೀರುತ್ತ ಕಿಟಕಿಯ ಪಕ್ಕದಲ್ಲೆ ಹಾರಿಹೋಯಿತು.

“ಇಲ್ಲಿ ಮಲಗಲು ಪುಣ್ಯಮಾಡಿರಬೇಕಪ್ಪ…” ಎಂದೇನೋ ಗೊಣಗುತ್ತ ನಂತರ ಕೆಲ ಹೊತ್ತಿನಲ್ಲೇ ಮಂಕಾಗಿಬಿಟ್ಟಳು; ಬಹಳ ಆಯಾಸಪಡುತ್ತ ನಂತರ ಅಲ್ಲಿಂದೆದ್ದಳು.

ಅವಳ ಗಂಡ, ಆ ಸಂಜೆಯೇ ಹೊರ ಹೋಗುವವನಿದ್ದ. ಆನ್ನಾ, ಗಂಡನ ಪ್ರಯಾಣದ ತಯಾರಿ ನಡೆಸಲೆಂದೇ ಅವನ ಕೋಣೆಗೆ ಬಂದಿದ್ದಳು.

ಈಗವಳು ಕಪಾಟನ್ನು ತೆರೆದದ್ದೇ, ಡ್ರಾಯರಿನೊಳಗಿಂದ ಏನೋ ಕೀಚುಸದ್ದು ಕೇಳಿದಂತೆನಿಸಿ ಥಟ್ಟನೆ ಬೆದರಿ ಹಿಂದೆ ಸರಿದಳು. ಕೋಣೆಯ ಮೂಲೆಯಲ್ಲಿದ್ದ ಬಾಗುಹಿಡಿಕೆಯ ವಾಕಿಂಗ್ ಸ್ಟಿಕ್ಕನ್ನು ಕೈಗೆತ್ತಿ ಕೊಂಡಳು. ಈಗ ತನ್ನ ಬಟ್ಟೆಯನ್ನು ಕಾಲುಗಳ ಕಡೆ ಒತ್ತಿ ಕೊಳ್ಳುತ್ತ, ತುಸುದೂರ ನಿಂತೇ ಕೋಲಿನ ತುದಿಯಿಂದ ಡ್ರಾಯರನ್ನು ತೆರೆಯಲು ಪ್ರಯತ್ನಿಸಿದಳು. ಆದರೆ, ಅವಳು ಎಳೆದ ರಭಸಕ್ಕೆ ಡ್ರಾಯರು ತೆರೆದುಕೊಳ್ಳುವ ಬದಲು ಕೋಲಿನೊಳಗಿಂದ ಮಿನಗುವ ಕತ್ತಿಯೊಂದು ಹೊರಬಂತು. ಇದನ್ನೂ ನಿರೀಕ್ಷಿಸಿರದ ಆನ್ನಾ, ತೀರಾ ಹಿಮ್ಮೆಟ್ಟಿದವಳಂತೆ ಗಾಬರಿಗೊಂಡು ಕತ್ತಿಯ ಹಿಡಿಕೆಯನ್ನು ಕೆಳಬೀಳಿಸಿದಳು.

ಈಗ, ಮತ್ತೆ ಎರಡನೇ ಬಾರಿ ಕೀಚು ಸದ್ದು ಕೇಳಿಸಿತು. ಅವಳು ಹಠಾತ್ತನೆ ಕೆಟಕಿಯೆಡೆ ತಿರುಗಿದಳು. ಹಿಂದೆ, ಉಂಟಾದ ಸದ್ದು-ರಭಸದಿಂದ ಹಾರಿಹೋದ ಸ್ಟಾಲ್ಲೋಹಕ್ಕಿ ಗಳಿಂದಾಗಿರಬಹುದೇ ಎಂದು ಅನಿಸಿ ಗೊಂದಲಕ್ಕೊಳಗಾದಳು.

ಕಾಲಿನಿಂದ ಆಯುಧವನ್ನು ದೂರ ಒಗೆದು ಕಪಾಟಿನ ಎರಡೂ ಬಾಗಿಲುಗಳ ನಡುವಿದ್ದ ಡ್ರಾಯರನ್ನು ಎಳೆದಳು. ಅದು ಅವಳ ಗಂಡನ ಹಳೇ ಸೂಟುಗಳಿಂದ ತುಂಬಿಕೊಂಡಿತ್ತು. ಇದ್ದಕ್ಕಿದ್ದಂತೆ ಕುತೂಹಲವುಂಟಾಗಿ ಆ ರಾಶಿಯಲ್ಲಿ ಹುಡುಕತೊಡಗಿದಳು. ಹಾಗೇ, ಮಾಸಿ ಸವೆದುಹೋಗಿದ್ದ ಜ್ಯಾಕೆಟ್ಟನ್ನು ಮರಳಿ ಇಡುತ್ತಿದ್ದಾಗ ಅದರ ಅಂಚಿನಡಿಯಲ್ಲಿ ಕಿಸೆಯ ಹರಿದ ಕೆಳಭಾಗದಿಂದ ಜಾರಿಬಿದ್ದ ಕಾಗದದಂತಹದೇನೋ ಸಿಕ್ಕಿತು. ಅದೆಷ್ಟು. ವರುಷಗಳ ಹಿಂದಿನದೋ ಏನೋ…. ಹೀಗೇ ಮರೆತೇಬಿಟ್ಟ ಆ ಕಾಗದ ಏನಿರಬಹುದೆಂದು ಅವಳಿಗೆ ತಿಳಿದುಕೊಳ್ಳಬೇಕೆನಿಸಿತು. ಆಗಲೇ, ಅಕಸ್ಮಾತ್ತಾಗಿ ಅನ್ನಾಗೆ ತನ್ನ ಗಂಡನ ಮೊದಲ ಹೆಂಡತಿಯ ಭಾವಚಿತ್ರ ಸಿಕ್ಕಿದ್ದು –

ನೋಡಿದವಳೇ ಬೆಚ್ಚಿಬಿದ್ದಳು; ನಂತರದ ಕ್ಷಣ ಮಂಕಾಗಿಬಿಟ್ಟಳು. ಕಣ್ಣುಗಳು ಮಂಜಾಗಿ, ಎದೆಬಡಿತ ನಿಂತೇಹೋದಂತೆ ಭಾಸವಾಯಿತು. ಕಂಪಿಸುತ್ತಿದ್ದ ತಲೆಮೇಲೆ ಕೈಹೊತ್ತು ಕೊಂಡು ಕಿಟಕಿಯತ್ತ ಧಾವಿಸಿದಳು. ಭಾವಚಿತ್ರದ ಆ ಅಪರಿಚಿತ ಬಿಂಬ ಅವಳಲ್ಲಿ ಅಚ್ಚರಿ, ಒಂದು ಬಗೆಯ ಭೀತಿಯನ್ನು ಹುಟ್ಟಿಸಿದವು.

ಚಿತ್ರದಲ್ಲಿದ್ದವಳ ಹಳೆ ಶೈಲಿಯ ಉಡುಪು, ದಟ್ಟಕೇಶರಾಶಿಯಿಂದ ಮೊದಲು ಅವಳು ಸೌಂದರ್ಯವನ್ನು ಗಮನಿಸಿದಳು. ಎಷ್ಟೋ ವರ್ಷಗಳ ಹಿಂದಿನ ಆ ವೇಷಭೂಷಣಗಳು ಹಾಸ್ಯಾಸ್ಪದವಾಗಿ ಕಾಣುತ್ತಿದ್ದವು. ಅವುಗಳಿಂದ ಬಿಡಿಸಿಕೊಂಡು ಉಳಿದ ವಿವರಗಳ ಮೇಲಷ್ಟೇ ಮನಸ್ಸನ್ನು, ಅದರಲ್ಲೂ ವಿಶೇಷವಾಗಿ ಕಣ್ಣುಗಳ ಮೇಲೆ ನೆಟ್ಚಾಗ ಅವಳಿಗೆ ವಿಚಿತ್ರ ಯಾತನೆಯಾಯಿತು. ರಕ್ತ ಕುದಿಯತೊಡಗಿ, ದ್ವೇಷದ ಕಿಡಿಯೊಂದು ಎದೆಯಿಂದ ಚೆಮ್ಮಿದಂತೆ ಅನಿಸಿತು. ಆ ದ್ವೇಷಕ್ಕೆ ಅಸೂಯೆಯೇ ಮೂಲ ಎಂದೆನಿಸಿತು. ತಾನು ಮದುವೆಯಾದ ಹನ್ನೊಂದು ವರ್ಷಗಳ ನಂತರ ವಿಕ್ಟೋರ್ ಬ್ರಿವಿಯೋನ ಪ್ರೇಮಪಾಶದಲ್ಲಿ ಸಿಲುಕಿದ್ದಾಗ, ಅವನ ಮೊದಲ ಸಂಸಾರ ಒಂದೇ ಏಟಿಗೆ ತನ್ನಿಂದಾಗಿ ನಚ್ಚುನೂರಾದಾಗ ಅವನ ಮೊದಲ ಹೆಂಡತಿಯ ಕುರಿತು ಇಂಥಹದೇ ದ್ವೇಷ-ತಾತ್ಸಾರ ಉಂಟಾಗಿತ್ತು.

ತಾನೀಗ ಅತಿಶಯವಾಗಿ ಪ್ರೀತಿಸುವ ತನ್ನ ಗಂಡನ ಈ ಮೊದಲ ಹೆಂಡತಿ ಅವನಿಗೆ ಹೇಗೆ ಮೋಸಮಾಡಿದಳು ಎಂದು ಮಾತ್ರ ಆನ್ನಾಗೆ ಅರ್ಥವಾಗಲಿಲ್ಲ. ಇದೇ ಕಾರಣಕ್ಕೆ ಅವಳು ಅವನ ಮೊದಲ ಹೆಂಡತಿಯನ್ನು ದ್ವೇಷಿಸುತ್ತಿದ್ದಳು. ಅವಳು ಆತ್ಮ ಹತ್ಯೆಯಿಂದಲೇ ಸತ್ತಿದ್ದು ಎಂಬುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಇತ್ತ ಆನ್ನಾಳ ಕುಟುಂಬದವರು ಅವಳ ಕ್ರೂರ ಸಾವಿಗೆ ಬ್ರಿವಿಯೋನೇ ಕಾರಣ ಎಂದು ಗಟ್ಟಿ ನಂಬಿದ್ದರು. ಇದೇ ಕಾರಣಕ್ಕಾಗಿ ಅವನನ್ನು ಆನ್ನಾ ಮದುವೆಯಾಗುವುದಕ್ಕೆ ಅವರ ಆಕ್ಷೇಪವಿತ್ತು.

ಈಗ, ಅವಳು ಭಾವಚಿತ್ರದ ಹಿಂಬದಿ ಒಕ್ಕಣಿಕೆಯೊಂದನ್ನು ನೋಡಿದಳು-ಸಾಕ್ಷಿಯೆಂಬಂತೆ: “ನನ್ನ ವಿಟ್ಟೋರ್‍ಗೆ, ಅವನ ಆಲ್ಮಿರಾಳಿಂದ – ನವೆಂಬರ್ ೧೧, ೧೮೭೩. ”

ನಿಜದಲ್ಲಿ, ಸತ್ತ ಹೆಂಗಸಿನ ಕುರಿತು ಅನ್ನಾಗೆ ಅಸ್ಪಷ್ಟ ಮಾಹಿತಿಯಿತ್ತು ಅಷ್ಟೆ. ಅವಳಿಗೆ ಚೆನ್ನಾಗಿ ಗೊತ್ತಿದ್ದವ ವಿಟ್ಟೋರ್ ಒಬ್ಬನೇ. ಗಂಡನ ದ್ರೋಹವೇ ಅವಳಿಗೆ ಆತ್ಮ ಹತ್ಯೆಗೆ ಒತ್ತಾಯಿಸಿರಬೇಕು.

ಈಗ ಆನ್ನಾ ಆ ವಾಕ್ಯವನ್ನು ನೆನಪಿಸಿಕೊಂಡಳು. ಅದರಲ್ಲಿದ್ದ ‘ನನ್ನ! ಮತ್ತು ‘ಅವನ’ ಎಂಬ ಪದಗಳು ಅವಳನ್ನು ಸಿಟ್ಟಿಗೆಬ್ಬಿಸಿದವು. ಆ ಹೆಂಗಸು ಬೇಕೆಂದೇ ತನ್ನ ಹಾಗೂ ವಿಟೋರ್‌ನ ನಡುವಿನ ಸಂಬಂಧದ ಆಪ್ತತೆಯನ್ನು ಪ್ರದರ್ಶಿಸುತ್ತಿರುವಂತೆ, ಬೇಕೆಂದೇ ಅಸೂಯೆ ಹುಟ್ಟಿಸಲು ಪ್ರಯತ್ನಿಸುತ್ತಿರುವಂತೆ ಅವಳಿಗನ್ನಿಸಿತು.

ದಿಕ್ಕುದೆಸೆಯಿಲ್ಲದೆ ಹೊತ್ತಿಕೊಂಡ ಈ ದ್ವೇಷದ ಕಿಡಿಗಿಂತ ಹೆಚ್ಚಾಗಿ ಆನ್ನಾಳ ಮನಸ್ಸೀಗ ಭಾವಚಿತ್ರದ ಆ ಮುಖದ ವಿವರಗಳನ್ನು ಸ್ತ್ರೀ ಸಹಜ ಕುತೂಹಲದಿಂದ ಪರೀಕ್ಷಿಸತೊಡಗಿತು. ಅದೇಕೋ, ಥಟ್ಟನೆ, ಆ ಮುಖ ತನಗಿಂತ ಸಂಪೂರ್ಣ ಭಿನ್ನವಾದ್ದು ಎಂಬ ಸಂಗತಿ ಗಮನಕ್ಕೆ ಬಂತು. ಅದೇ ಹೊತ್ತಿಗೆ, ಅವಳ ಅಂತರಂಗದಲ್ಲಿ ಒಂದು ಪ್ರಶ್ನೆಯೆದ್ದಿತು: ಆ ಹೆಂಗಸಿನ ಸೌಂದರ್ಯ ಕಂಡು ಅವಳನ್ನು ಪ್ರೇಮಿಸಲು ಶುರುಮಾಡಿದ ತನ್ನ ಗಂಡ, ನಂತರ ಅದ್ಹೇಗೆ ತೀರಾ ಭಿನ್ನಳಾದ ತನ್ನ ಪ್ರೇಮಪಾಶದಲ್ಲಿ ಬಿದ್ದ?

ಭಾವಚಿತ್ರದಲ್ಲಿ ಮುಖ ತುಸು ಕಪ್ಪಾಗಿ ಕಾಣುತ್ತಿದ್ದರೂ, ಆನ್ನಾಗೆ ಅದು ಸುಂದರವಾಗಿ ತನಗಿಂತಲೂ ತುಸು ಹೆಚ್ಚೇ ಸುಂದರವಾಗಿ ಕಂಡಿತು. ಅದರಲ್ಲಿ, ಅವಳ ತುಟಿಗಳು ಅವನ ತುಟಿಗಳೊಂದಿಗೆ ಬೆಸೆದುಕೊಂಡಿದ್ದವು. ಆದರೆ ಮುಖದ ಮೂಲೆಯಲ್ಲಿ ಮೂಡಿದ್ದ ದುಃಖದ ನೆರಿಗೆ ಯಾಕಿರಬಹುದು? ಆ ಕಣ್ಣುಗಳು ಯಾಕೆ ಖಿನ್ನವಾಗಿವೆ? ಅರೇ…. ಇಡೀ ಮುಖವೇ ಒಳಗಿನ ನೋವನ್ನು ವ್ಯಕ್ತ ಪಡಿಸುತ್ತಿದೆಯಲ್ಲ…. ಚಿತ್ರದಲ್ಲಿ ಪ್ರೀತಿ, ವಿನಯ ವ್ಯಕ್ತವಾಗಿರುವುದನ್ನು ಕಂಡು ಕರಗಿಹೋದ ಆನ್ನಾ ಚಡಪಡಿಸಿದಳು. ಸ್ವಲ್ಪ ಹೊತ್ತಿನ ನಂತರ: ತಾನೀಗ ತಲೆ ಬಾಚಿಕೊಂಡು ಕನ್ನಡಿಯೆದುರು ಬೆಳಗ್ಗೆ ಗಂಡನನ್ನು ನೆನೆಯುವಾಗ ತನ್ನ ಕಣ್ಣುಗಳಲ್ಲಿ ಒಂದು ಭಾವನೆ ಮೂಡಿತ್ತಲ್ಲ. ಅದೇ ಈಗ ಆ ಹೆಂಗಸಿನ ಕಣ್ಣುಗಳಲ್ಲೂ ಪ್ರಕಟವಾಗುತ್ತಿದೆ ಎಂದರಿವಾಗತೊಡಗಿತು. ತಕ್ಷಣ ಜಿಗುಪ್ಸೆ, ಒಂದು ಬಗೆಯ ಅನಾದರ ಹುಟ್ಟಿಕೊಂಡಿತು.

ಜೇಬಿನೊಳಗೆ ಭಾವಚಿತ್ರವನ್ನು ತುರುಕುವಷ್ಟು ಸಮಯವಿರಲಿಲ್ಲ. ಅಷ್ಟರಲ್ಲಿ ಗಂಡ ಭುಸುಗುಡುತ್ತ ಬಂದೇಬಿಟ್ಟ: “ಇಲ್ಲೇನು ಮಾಡ್ತಾ ಇದ್ದೀ? ನೀಟಾಗಿಡಲೆಂದು ಪ್ರತಿಸಲ ಕೋಣೆಯೊಳಗೆ ಬಂದಾಗಲೂ ಬೇರೆ ತರಾನೇ ಇಟ್ಟುಬಿಡುತ್ತೀ….” ಎಂದ.

ನಂತರ, ಅಲ್ಲೇ ಒರೆಯಿಂದ ಹೊರಬಂದು ನೆಲದಮೇಲೆ ಬಿದ್ದುಕೊಂಡಿದ್ದ ಕತ್ತಿಯನ್ನು ಕಂಡು: “ಅಲೆಮಾರಿನ ಬಟ್ಟೆಗಳ ಜತೆ ಕತ್ತಿವರಸೆ ಮಾಡ್ತಿದೀಯಾ?” ಎಂದ.

ಹಾಗೆ ಹೇಳಿದ್ದೇ, ಯಾರೋ ಗಂಟಲಭಾಗದಲ್ಲಿ ಕಚಗುಳಿ ಮಾಡಿದಂತೆನಿಸಿ ನಕ್ಕುಬಿಟ್ಟ ಮತ್ತು ಹಾಗೆ ನಗುತ್ತಲೇ ತಾನು ಯಾಕೆ ಈ ರೀತಿ ನಗುತ್ತಿದ್ದೇನೆ ಎಂದು ಪ್ರಶ್ನಿಸುವವನಂತೆ ಹೆಂಡತಿಯತ್ತ ನೋಡಿದ. ಅವನ ಕಣ್ಣಿನ ತೀಕ್ಷ್ಣನೋಟದಲ್ಲೂ, ಅವನ ರೆಪ್ಪೆ ಭಯಂಕರವಾಗಿ ಬಡಿದುಕೊಳ್ಳುತ್ತಿದ್ದವು.

ವಿಟ್ಟೋರ್ ಬ್ರಿವಿಯೋ ಹೆಂಡತಿಯನ್ನು ಚಿಕ್ಕಮಗುವಿನಂತೆ ಕಾಣುತ್ತಿದ್ದ. ಅವಳು ಯಾವತ್ತೂ ತನ್ನೊಂದಿಗೆ ಮಗುವಿನಂತೆ ಪ್ರೀತಿಯನ್ನು ಸುರಿಸುತ್ತಲೇ ಇರಬೇಕೆಂದು ಅವನಿಗನಿಸುತ್ತಿತ್ತು. ಆದರೆ ಇದೇ ಅವನಿಗೆ ಪದೇಪದೇ ಸಿಟ್ಟಿಗೆಬ್ಬಿಸುತ್ತಿತ್ತು ಕೂಡ. ಕೆಲಸಂದರ್ಭಗಳಲ್ಲಿ ಮಾತ್ರ ಇಂಥದ್ದಕ್ಕೆಲ್ಲ ಗಮನಕೊಟ್ಟರೆ ಸಾಕೆಂದು ನಿರ್ಧರಿಸಿಕೊಂಡರೂ ಆಗಾಗ ವ್ಯಂಗ್ಯ ಮಿಶ್ರಿತ ಸಹನೆ ಪ್ರದರ್ಶಿಸುವುದಿತು. ಅದೊಂಥರಾ, “ಆಯ್ತು ಮಾರಾಯ್ತಿ…. ನೀನು ಹೇಳಿದಂತೆ ಆಗಲಿ…. ನಿನ್ನ ಮಟ್ಟಿಗೆ ಸ್ವಲ್ಪಹೊತ್ತು ನಾನೂ ಚಿಕ್ಕ ಮಗುವಾಗಿ ಬಿಡುತ್ತೇನೆ… ಈಗ ಸುಮ್ಮನೆ ಕಾಲಹರಣ ಮಾಡುವುದು ಬೇಡ.” ಎಂದಾತ ಹೇಳುವಂತಿರುತ್ತಿತ್ತು.

ಈಗ ಭಾವಚಿತ್ರವಿದ್ದ ಆ ಹಳೇ ಜ್ಯಾಕೇಟನ್ನು ಆನ್ನಾ ಕೆಳಬೀಳಿಸಿದ್ದಳು. ಅವನು ಕತ್ತಿಯ ತುದಿಯಿಂದ ಅದನ್ನೆತ್ತಿ ಕಿಟಕಿಯಿಂದಲೇ ಕೆಲಸದಾಳನ್ನು ಕರೆದ. ಆಳು ಕುದುರೆಗಾಡಿಯನ್ನು ನಡೆಸುವವನೂ ಆಗಿದ್ದು, ಕರೆದಾಗ ಕುದುರೆಯನ್ನು ಗಾಡಿಯತ್ತ ಕರೆದೊಯ್ಯುತ್ತಿದ್ದ. ಈಗ ಆತ ತನ್ನ ತೋಟದ ಕಿಟಕಿಯೆದುರು ಹರಕು ಅಂಗಿಯಲ್ಲಿ ಪ್ರತ್ಯಕ್ಷನಾಗಿದ್ದೇ, ಬ್ರಿವಿಯೋ, “ತಗೋ….. ಇದು ನಿಂಗೆ” ಎಂದು ಜ್ಯಾಕೇಟನ್ನು ಅವನ ಮುಖಕ್ಕೆಸೆದುಬಿಟ್ಟ.

“ಈಗ ನಿನ್ನ ಕೆಲಸ ಹಗುರಾಗುತ್ತೆ ನೋಡು” ಎಂದು ಹೆಂಡತಿಯತ್ತ ನೋಡಿ, ಮತ್ತದೇ ರೀತಿ ಕಣ್ಣು ಮಿಟುಕಿಸುತ್ತ ಗಹಗಹಿಸಿ ನಕ್ಕ.
* * *

ಹಿಂದಿನಿಂದಲೂ ಕೆಲದಿನಗಳ ಮಟ್ಟಿಗೆ, ಅವಳ ಗಂಡ ಪ್ರಯಾಣಕ್ಕೆಂದು ರಾತ್ರಿಯ ವೇಳೆ ಹೊರಡುವುದಿತು. ಆ ದಿವಸ ಭಾವಚಿತ್ರ ಸಿಕ್ಕಿದ್ದರಿಂದ ಆನ್ನಾ ಹೆದರಿ ನಡುಗಿಬಿಟ್ಟಿದ್ದಳು. ಮಾತ್ರವಲ್ಲ, ತಾನು ಒಂಟಿಯಾದಂತೆನಿಸಿ ಗಂಡನಿಗೆ ‘ಗುಡ್ಬೈ’ ಹೇಳುವಾಗ ಅತ್ತು ಬಿಟ್ಟಿದ್ದಳು ಕೂಡ.

ಪ್ರಯಾಣದ ಒತ್ತಡ, ವ್ಯವಹಾರದ ಗಡಿಬಿಡಿಯ ಮಧ್ಯೆ ವಿಟ್ಟೋರ್ ಬ್ರಿವಿಯೋ ಹೆಂಡತಿ ಅತ್ತಿದ್ದನ್ನು ನೋಡಿ ತುಸು ಒರಟಾಗಿಯೇ ಪ್ರತಿಕ್ರಿಯಿಸಿದ.

“ಯಾಕೆ? ಏನಾಯ್ತೀಗ ? ಸಾಕು…. ಸುಮ್ನಿರು” ಎನ್ನುತ್ತ ಗುಡ್ಬೈ ಕೂಡಾ ಹೇಳದೆ, ತರಾತುರಿಯಲ್ಲೇ ಮನೆಯಿಂದ ಹೊರಟೇಬಿಟ್ಟ. ಆತ ಬಾಗಿಲನ್ನು ಧಡಾಲ್ಲನೆ ಮುಚ್ಚಿದ ರಭಸಕ್ಕೆ ಆನ್ನಾ ಬೆಚ್ಚಿಬಿದ್ದಳು. ಕೈಯಲ್ಲಿ ದೀಪ ಹಿಡಿದು ಕೋಣೆಯೊಳಗೇ ಉಳಿದವಳಿಗೆ ತನ್ನ ಕಣ್ಣೀರು ಹೆಪ್ಪುಗಟ್ಟಿದಂತೆ ಭಾಸವಾಯಿತು. ನಂತರ ಎಚ್ಚರಗೊಂಡವಳಂತೆ ಅವಸರದ ತನ್ನ ಕೋಣೆಗೆ ಓಡಿದಳು.

ಕೋಣೆಯೊಳಗೆ ರಾತ್ರಿ, ದೀಪ ಉರಿಯುತ್ತಿತ್ತು. ತನಗಾಗಿ ಕಾಯುತ್ತಿದ್ದ ಹೆಣ್ಣಾಳಿಗೆ, ’ಹೋಗಿ ಮಲಕ್ಕೋ…. ಎಲ್ಲ ನಾನೇ ನೋಡಿಕೊಳ್ಳುತ್ತೇನೆ ಗುಡ್ನೈಟ್’ ಎಂದಳು.

ದೀಪವಾರಿಸಿ, ವಾಡಿಕೆಯಂತೆ ಬೀರುವಿನಲ್ಲಿ ಇಡುವುದರ ಬದಲು ಅಲ್ಲೇ ಮೇಜಿನ ಮೇಲಿರಿಸಿದಳು – ರಾತ್ರಿ ಮತ್ತೆ ಎಲ್ಲಿಯಾದರೂ ಅದರ ಅಗತ್ಯಬಿದ್ದರೆ ಎಂಬಂತೆ. ಎದುರಿನ ನೆಲವನ್ನೇ ತದೇಕಚಿತ್ತಳಾಗಿ ನೋಡುತ್ತ ಗಡಿಬಿಡಿಯಲ್ಲಿ ಬಟ್ಟೆ ಬಿಚ್ಚತೊಡಗಿದಳು. ತನ್ನ ಪಾದದ ಸುತ್ತ ಕಳಚೆದ ಬಟ್ಟೆಗಳು ಬಿದ್ದಾಗ, ಯಾಕೋ ಭಾವಚಿತ್ರದ ಆ ಹೆಂಗಸು ದುಃಖ ಒಸರುವ ಕಣ್ಣುಗಳಿಂದ ತನ್ನನ್ನೇ ನೋಡಿ ಮರುಕಪಡುತ್ತಿರುವಂತೆ ಅನಿಸಿತು. ಏನೋ ನಿರ್ಧರಿಸಿ ಕೊಂಡವಳಂತೆ ಬಿದ್ದ ಬಟ್ಟೆಯನ್ನೆತ್ತಿ ಕೊಳ್ಳಲೆಂದು ಬಗ್ಗಿದಳು. ಈಗ ಭಾವಚಿತ್ರವಿದ್ದ ಜ್ಯಾಕೆಟಿನ ಜೇಬು ಆ ಹೆಂಗಸಿನ ಬಿಂಬ ಮನಸ್ಸಲ್ಲಿ ಮೂಡದಂತೆ ತಡೆಯುತ್ತಿದೆ ಎಂದನಿಸಿ ಬಟ್ಟೆಯನ್ನು ಮಡಚದೆ, ಹಾಗೇ ಮಂಚದ ತುದಿಯಲ್ಲಿದ್ದ ಆರಾಮಕುರ್ಚಿಯ ಮೇಲಿಟ್ಟಳು.

ಹಾಸಿಗೆಯಲ್ಲಿ ಒರಗಿದ ನಂತರ, ಕಣ್ಣುಮುಚ್ಚಿಕೊಂಡು ಒತ್ತಾಯಪೂರ್ವಕವಾಗಿ ರೈಲ್ವೆ ನಿಲ್ದಾಣ ಸೇರುವ ರಸ್ತೆಯಲ್ಲಿ ಹೋಗುತ್ತಿರುವ ತನ್ನ ಗಂಡನನ್ನು ಮನಸ್ಸಲ್ಲೇ ಹಿಂಬಾಲಿಸಿದಳು. ದಿನವಿಡೀ ಗಂಡನನ್ನು ಸೂಕ್ಷ್ಮವಾಗಿ ಗಮನಿಸುವುದರಲ್ಲೇ ಕಳೆದಿದ್ದರಿಂದ ಸೇಡಿನ ಭಾವನೆಯನ್ನು ಮನಸ್ಸಿನಲ್ಲಿ ಒತ್ತಾಯಪೂರ್ವಕ ತಂದುಕೊಂಡಳು. ಇಂಥ ಒಂದು ಭಾವನೆ ತನ್ನಲ್ಲಿ ಎಲ್ಲಿಂದ ಬಂದಿರಬಹುದೆಂದೂ ಅವಳಿಗೆ ತಿಳಿದಿತ್ತು. ಅಲ್ಲದೆ, ಅದರಿಂದ ಅವಳಿಗೆ ಮುಕ್ತಿಯೂ ಪಡೆಯಬೇಕಿತ್ತು.

ಈ ಒಂದು ಇಚ್ಛೆಯನ್ನು ಪೂರೈಸುವ ತನ್ನ ಪ್ರಯತ್ನವೇ ಅವಳಲ್ಲಿ ಸಣ್ಣಗೆ ಮಾನಸಿಕ ಕ್ಷೋಭೆಯನ್ನುಂಟುಮಾಡಿತು. ಅವಳು ಈ ಚಿತ್ರವನ್ನೂ ಮನಸ್ಸಲ್ಲೇ ಕಲ್ಪಿಸಿಕೊಂಡಳು: “ರಾತ್ರಿಯ ಹೊತ್ತು ಮುಚ್ಚಿಕೊಂಡ ಅಂಗಡಿಗಳು. ನರಹುಳವಿಲ್ಲದೆ ಬಿಕೋ ಎನ್ನುವ ಉದ್ದರಸ್ತೆಯಲ್ಲಿ ಬೀದಿದೀಪಗಳು ಕಾಲ್ದಾರಿಯ ಮೇಲೆ ಬೆಳಕುಚೆಲ್ಲುತ್ತ, ಪ್ರತಿದೀಪದ ಬುಡದಲ್ಲಿ ಮಾತ್ರ ನೆರಳಿನ ಪುಟ್ಟ ವೃತ್ತ ರಚಿಸುತ್ತ ವಿಟ್ಟೋರ್ ತನ್ನ ಗಾಡಿಯನ್ನು ಓಡಿಸುತ್ತಿದ್ದಾನೆ. ಅವಳು ಸ್ಟೇಷನ್ನಿನ ತನಕ ಅವನನ್ನೇ ಹಿಂಬಾಲಿಸುತ್ತ ಹೋಗಿ, ಗಾಜಿನ ಶೆಡ್ಡಿನ ಕೆಳಗಡೆ ಮಂಕಾಗಿ ನಿಂತಿರುವ ಟ್ರೈನನ್ನು ನೋಡುತ್ತಾಳೆ. ಅಲ್ಲಿ ಮಬ್ಬುಮಬ್ಬು ಬೆಳಕಿನಲ್ಲಿ ರಾಶಿಗಟ್ಟಲೆ ಜನ ಸುತ್ತಾಡುತ್ತಿದ್ದಾರೆ. ಇನ್ನೇನು ಟ್ರೈನು ಹೊರಟು ಕತ್ತಲಲ್ಲಿ ಕರಗಿಹೋಗಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಮೌನ ತುಂಬಿಕೊಂಡ ಆ ಕೋಣೆಯಲ್ಲಿ ಅವಳು ಕಣ್ತೆರೆದಾಗ ಒಳಗಡೆ ಎಂಥದೋ ವಿಲಕ್ಷಣ ಖಾಲಿತನದ ಭಾವ, ಏನನ್ನೋ ಕಳಕೊಂಡ ಭಾವ ಅವಳನ್ನು ಆವರಿಸಿ ಬಿಡುತ್ತದೆ. ಬಹುಶಃ ಮೂರು ವರುಷಗಳ ಹಿಂದೆ, ತನ್ನ ಹಿರಿಯರ ಮನೆಯನ್ನು ತಾನು ಬಿಟ್ಟು ಬಂದಾಗಿನಿಂದಲೇ ಈ ಖಾಲಿತನ ತನ್ನೊಳಗಡೆ ಇದ್ದಿರಬೇಕು ಎಂದೆನಿಸಿತು. ಇದುವರೆಗೂ ಈ ಖಾಲಿತನವನ್ನು ಪ್ರೀತಿ ತುಂಬಿಕೊಂಡಿದ್ದರಿಂದ ಅದರ ಅರಿವಾಗಿರಲಿಲ್ಲ. ಈಗ ದಿನವಿಡೀ ಪ್ರೀತಿಯನ್ನು ಒತ್ತಟ್ಟಿಗಿರಿಸಿ ಬರೇ ತನ್ನನ್ನೇ ಗಮನಿಸತೊಡಗಿದ್ದರಿಂದ ಈ ಖಾಲಿತನ ಅರಿವಾಗ ತೊಡಗಿತ್ತು.

“ಗುಡ್ಬೈ ಕೂಡಾ ಹೇಳದೆ ಹೋದ” ಎಂಬ ಯೋಚನೆ ಬಂದದ್ದೇ ಮತ್ತೆ ಅಳ ತೊಡಗಿದಳು – ತನ್ನ ಅಳುವಿಗೆ ಸ್ಪಷ್ಟವಾದ ಕಾರಣವೇ ಇದು ಎಂಬಂತೆ.

ಹಾಸಿಗೆಯಲ್ಲೀಗ ಎದ್ದು ಕೂತಳು. ಆದರೆ ಕೂರುವಾಗ, ಬಟ್ಟೆಯ ಮೇಲಿದ್ದ ಕರಪತ್ರ ಎತ್ತಿಕೊಳ್ಳಲೆಂದು ಚಾಚಿದ್ದ ಕೈಯನ್ನು ಹಠಾತ್ತನೆ ಹಿಂದಕ್ಕೆಳೆದುಕೊಂಡಳು.

ಈ ಬಾರಿ ಭಾವಚಿತ್ರವನ್ನು ಪುನಃ ಪರೀಕ್ಷಿಸಲೇಬೇಕೆಂಬ ತನ್ನ ತುಡಿತವನ್ನು ತಡೆಯಲು ಅವಳಿಗೆ ಕರವಸ್ತ್ರದಿಂದಲೂ ಸಾಧ್ಯವಾಗಲಿಲ್ಲ. ದೀಪ ಹಚ್ಚಿ ಮತ್ತೆ ಭಾವಚಿತ್ರವನ್ನು ಕೈಗೆತ್ತಿಕೊಂಡಳು.

ಆ ಹೆಂಗಸನ್ನು ತಾನು ಬೇರೆಯೇ ರೀತಿ ಚಿತ್ರಿಸಿಕೊಂಡಿದ್ದಳು ಎಂದನಿಸಿತು. ಈಗ ನಿಜವಾದ ಮುಖ ನೋಡಿದ್ದೇ ತನ್ನ ಹಿಂದಿನ ಕಲ್ಪನೆಯ ಕುರಿತು ಪಶ್ಚಾತ್ತಾಪ ಉಂಟಾಯಿತು. ಯಾಕೆಂದರೆ ಯಾವತ್ತೂ ನಗುನಗುತ್ತ, ಮಿನುಗುವ ಕಣ್ಣುಗಳ ಧಡೂತಿ ಹೆಂಗಸೊಬ್ಬಳನ್ನು ಆಕೆ _ ಚಿತ್ರಿಸಿಕೊಂಡಿದ್ದಳು…. ಆದರೆ ಇಲ್ಲಿ ಆ ಎಳೆಹೆಂಗಸಿನ ರೂಪ ಖಿನ್ನತೆಯನ್ನೂ ಬಿಂಬಿಸುವಂತಿತ್ತು. ಕಣ್ಣುಗಳು ಮೌನವನ್ನೇ ಪ್ರತಿಫಲಿಸುತ್ತಿದ್ದವು. ಚಿತ್ರದಲ್ಲಿದ್ದ ಹೆಂಗಸು ಯಾವತ್ತೂ ನಗಲೇ ಇಲ್ಲ ಎಂಬಂತೆ ಅವಳಿಗೆ ಕಂಡುಬಂದರೆ ಅತ್ತ ಅವಳು ಮನಸ್ಸಲ್ಲೇ ಕಲ್ಪಿಸಿಕೊಂಡ ಹೆಂಗಸು ಮಾತ್ರ ಸದಾ ಉಲ್ಲಾಸದಿಂದ ಮುಗುಳ್ನಗುತ್ತಿದ್ದಳು.

ಇಷ್ಟೊಂದು ಖಿನ್ನತೆ ಯಾಕಿದ್ದಿರಬಹುದು?

ಇದ್ದಕ್ಕಿದ್ದಂತೆ, ಮನಸ್ಸಲ್ಲಿ ದ್ವೇಷದ ಕಿಡಿಯೊಂದು ಹೊತ್ತಿ ಕೊಂಡಂತೆನಿಸಿ ಹಠಾತ್ತನೆ ಆ ಚಿತ್ರದ ಮೇಲಿಂದ ತನ್ನ ದೃಷ್ಟಿಯನ್ನು ಹಿಂದೆಗೆದುಕೊಂಡಳು. ಯಾಕೋ ಅವಳಿಗೆ, ತನ್ನ ಪ್ರೀತಿ, ಮನಶ್ಶಾಂತಿಯಷ್ಟೇ ಅಲ್ಲ, ತನ್ನ ಆತ್ಮಗೌರವಕ್ಕೂ ಘಾಸಿಯಾದಂತೆ ಅನಿಸಿತು.

ಆ ಹೆಂಗಸಿಗೂ ಪ್ರಿಯಕರನಿದ್ದಿರಬೇಕು! ಬಹುಶಃ ಅವನಿಂದಲೇ, ಅಂಥ ವ್ಯಭಿಚಾರದ ಪ್ರೇಮದಿಂದಲೇ ಅವಳು ಖಿನ್ನಳಾಗಿರಬೇಕು – ವಿನಃ ತನ್ನ ಗಂಡನಿಂದಲ್ಲ ಎಂದನಿಸಿತು.

ಅಲ್ಲೇ ಮೇಜಿನ ಮೇಲೆ ಆ ಭಾವಚಿತ್ರೆವನ್ನೆಸೆದು ತನಗೂ ಆ ಹೆಂಗಸಿಗೂ ಯಾವ ಹೋಲಿಕೆಯೂ ಇಲ್ಲದ್ದನ್ನು ನೆನೆದು ಮತ್ತೆ ಅವಳ ಕುರಿತು ಯೋಚಿಸದೆ ಈ ಬಾರಿಯಾದರೂ ನಿದ್ದೆಬರಬಹುದೆಂಬ ನಿರೀಕ್ಷೆಯಲ್ಲಿ ದೀಪವಾರಿಸಿದಳು. ಆದರೆ ಕಣ್ಣುಗಳನ್ನು ಮುಚ್ಚಿ ಕೊಂಡ ತಕ್ಷಣ ಮತ್ತೆ ಆ ಸತ್ತ ಹೆಂಗಸಿನ ಕಣ್ಣುಗಳೇ ಕಾಣಿಸಿಕೊಳ್ಳುತ್ತಿದ್ದವು; ಅದೆಷ್ಟೇ ಪ್ರಯತ್ನಿಸಿದರೂ ಆ ದೃಶ್ಶವನ್ನು ಚೆದುರಿಸಲಾಗಲಿಲ್ಲ.

“ಅಲ್ಲ… ನನ್ನ ಗಂಡನಿಂದಲ್ಲ ….!” ಎಂದೇನೋ ರೋಷದಿಂದ ಪಿಸುಗುಡುತ್ತ ಆ ಹೆಂಗಸನ್ನು ಅವಮಾನಿಸುವುದರಿಂದಲಾದರೂ ಅವಳಿಂದ ತಪ್ಪಿಸಿಕೊಳ್ಳಬಹುದೆಂದುಕೊಂಡಿದ್ದಳು.

ಹೀಗೆ ಯೋಚನೆ ಬಂದದ್ದೇ, ಅವಳ ಪ್ರಿಯಕರನ ಪ್ರತಿಯೊಂದು ವಿವರವನ್ನು ನೆನಪಿಸಿಕೊಳ್ಳಲು ಹೆಣಗಾಡಿದಳು. ಆದರೆ ಆನ್ನಾಗೆ ಅವಳ ಪ್ರಿಯಕರನ ಹೆಸರಷ್ಟೇ ಗೊತ್ತಿದ್ದಿತು. ಆರ್ಟರೋ ವಲ್ಲಿ. ಓರ್ವ ಕೊಲೆಗಡುಕನಾದ ವಿಟ್ಟೋರ್ ಜತೆ ತಾನು ಜಗಳಕ್ಕೆ ನಿಲ್ಲಲಾರೆ ಎಂದು ವಲ್ಲಿ ಹೇಳಿದ್ದು, ವಿಟ್ಟೋರ್ ಇದರಿಂದ ಸಿಟ್ಟಿಗೆದ್ದು ಎಲ್ಲ ಆರೋಪ ವಲ್ಲಿಯ ಮೇಲೆಯೇ ಹಾಕಬೇಕೆಂದುಕೊಳ್ಳುತ್ತಿರುವಾಗಲೇ ವಲ್ಲಿ ತನ್ನ ನಿಷ್ಠೆ ತೋರಿಸಿಕೊಳ್ಳಲೆಂದೇ ಕಲ ವರ್ಷಗಳಲ್ಲಿ ಮದುವೆಯಾಗಿದ್ದು…. ಎಲ್ಲವೂ ಆನ್ನಾಳಿಗೆ ಗೊತ್ತಿದೆ. ಈ ಘಟನೆಯ ನಂತರ ವಿಟ್ಟೋರ್, ವಲ್ಲಿಯನ್ನು – ಚರ್ಚಿನಲ್ಲಾದರೂ ಸೈ – ಕೊಂದೇ ಹಾಕುತ್ತೇನೆ ಎಂದು ಧಮಕಿಯನ್ನು ಹಾಕಿದ್ದ ಕೂಡ. ವಿಟ್ಟೋರ್ ಎರಡನೇ ವಿವಾಹವಾಗಿ ಊರು ಬಿಟ್ಟ ನಂತರವೇ ವಲ್ಲಿ ತನ್ನ ಹೆಂಡತಿಯ ಜತೆ ವಾಪಾಸಾಗಿದ್ದು.

ಮತ್ತೆ ಮತ್ತೆ ಆನ್ನಾ ಮನಸ್ಸಲ್ಲಿ ಆ ಹೆಂಗಸಿನ ಬಿಂಬವೇ ಮರುಕಳಿಸುತ್ತಿತ್ತು. ಆ ಹೆಂಗಸಿನ ಕಣ್ಣುಗಳು, “ಸತ್ತಿದ್ದು ನಾನೊಬ್ಬಳೇ ತಾನೆ! ನೀವೆಲ್ಲ ಇನ್ನೂ ಬದುಕಿದ್ದೀರಲ್ಲ!” ಎಂದು ಸಂಕಟದಿಂದ ಹೇಳುತ್ತಿರುವಂತೆ ಅನಿಸುತ್ತಿತ್ತು.

ಮನೆಯಲ್ಲೀಗ ತಾನೊಬ್ಬಳೇ ಇರುವುದು ಅರಿವಿಗೆ ಬಂದಿದ್ದೇ ಹೆದರಿಬಿಟ್ಟಳು. ಹೌದು. ‘ಅವಳು’ ಇನ್ನೂ ಬದುಕಿದ್ದಾಳೆ. ಮದುವೆಯಾದಾಗಿನಿಂದ ನಂತರದ ಮೂರುವರ್ಷಗಳ ತನಕ ಆನ್ನಾ ತನ್ನ ಹಿರಿಯರನ್ನಾಗಲೀ ಅಥವಾ ತನ್ನ ತಂಗಿಯನ್ನಾಗಲೀ ಒಮ್ಮೆಯೂ ನೋಡಿರಲಿಲ್ಲ, ಒಂದು ಕಾಲದಲ್ಲಿ ಆನ್ನಾ ಮುದ್ದಿನ ಮಗಳು, ತಂಗಿ, ಎಲ್ಲವೂ ಆಗಿದ್ದರೂ ತನ್ನ ಗಂಡನ ಮೇಲಿನ ಪ್ರೀತಿಯಿಂದಾಗಿ ಮನೆಯವರನ್ನು ವಿರೋಧಿಸುವ ಮಟ್ಟಕ್ಕೆ ಬೆಳೆದಿದ್ದಳು. ಅದೂ ಕೇವಲ ಗಂಡನಿಗೋಸ್ಕರ. ಯಾಕೆಂದರೆ ಆಗ ಅವನ ಮನೆಯವರು ಅವನನ್ನು ಮನೆಯಿಂದಲೇ ಹೊರದಬ್ಬಿದ್ದರು. ಅವಳಿಗೆ ಹುಷಾರಿಲ್ಲದಾಗ ಅವಳ ಮದುವೆಯ ಆಸೆಯನ್ನು ನೆರವೇರಿಸಿ ಎಂದು ವೈದ್ಯರು ಅವಳಪ್ಪನಿಗೆ ಒತ್ತಾಯಿಸದೇ ಹೋಗಿದ್ದರೆ ಬಹುಶಃ ಸತ್ತೇ ಹೋಗುತ್ತಿದ್ದಳೇನೋ! ಕೊನೆಗೂ ಅವಳ ಅಪ್ಪ ಶರಣಾದ. ಆದರೆ ಮದುವೆಗೆ ಮಾತ್ರ ಸುತರಾಂ ಒಪ್ಪಲಿಲ್ಲ. ಹದಿನೆಂಟು ವರ್ಷ ದೊಡ್ಡವನಾಗಿದ್ದ ಬ್ರಿವಿಯೋನ ವಯಸ್ಸಿನ ಅಂತರವಷ್ಟೇ ಅಲ್ಲ, ಅವನ ವ್ಯಾವಹಾರಿಕ ಸ್ತರವೂ ಅವಳಪ್ಪನಿಗೆ ಕುಟುಕುತ್ತಿತ್ತು. ಅವನ ವ್ಯವಹಾರ ಹಠಾತ್ತನೆ ನೆಗೆಯುವುದು, ಕುಸಿದುಬೀಳುವುದು ಆಗುತ್ತಿತ್ತಲ್ಲದೆ, ಬ್ರಿವಿಯೋಗೆ ತನ್ನ ಮೇಲೆಯೇ ಇದ್ದ ಹುಂಬ ವಿಶ್ವಾಸ ಮುತ್ತು ಆತ ‘ನಸೀಬು’ ಇತ್ಯಾದಿ ನಂಬುತ್ತಿದ್ದುದೂ ಅವಳ ಅಪ್ಪನಿಗಿಷ್ಟವಿರಲಿಲ್ಲ.

ಮೂರು ವರ್ಷದ ದಾಂಪತ್ಯದಲ್ಲಿ ಆನ್ನಾ ಐಷಾರಾಮದ ಜೀವನವನ್ನೆ ನಡೆಸುತ್ತಿದ್ದಳು. ಆಗ ಅಪ್ಪ, ತನ್ನ ಗಂಡನ ಸಂಪಾದನೆಯ ಮೂಲದ ಕುರಿತು ವ್ಯಕ್ತಪಡಿಸಿದ್ದ ಸಂಶಯ ಸರಿಯಲ್ಲವೆನಿಸಿದ್ದವು. ಅಲ್ಲದೆ, ಗಂಡನಿಗಿದ್ದಷ್ಟೇ ಆತ್ಮವಿಶ್ವಾಸ ಅವಳಿಗೂ ಇತ್ತು. ಇನ್ನು ವಯಸ್ಸಿನ ಅಂತರದ ಕುರಿತು ಅವಳಿಗಾಗಲೀ, ಸಮಾಜಕ್ಕಾಗಲೀ ಯಾವ ಸಮಸ್ಯೆಯೂ ಇರಲಿಲ್ಲ. ಯಾಕೆಂದರೆ ಬ್ರಿವಿಯೋ ವಯಸ್ಸಾಗುತ್ತ ಹೋದಂತೆ ತನ್ನ ಗಟ್ಟಿಮುಟ್ಟಾದ ದೇಹದಲ್ಲಿ ಮತ್ತಷ್ಟು ಚುರುಕಿನಿಂದ, ಲವಲವಿಕೆಯಿಂದಿರುವವನಂತೆ ಕಾಣುತ್ತಿದ್ದ.

ಮೊಟ್ಟಮೊದಲಬಾರಿ, ಆನ್ನಾಗೆ ಆ ಭಾವಚಿತ್ರದಲ್ಲಿದ್ದ ಸತ್ತ ಹೆಂಗಸಿನ ಕಣ್ಣುಗಳ ಮೂಲಕ (ತನಗರಿವಿಲ್ಲದೆ) ತನ್ನದೇ ಬದುಕನ್ನು ವಿಶ್ಲೇಷಿಸಿಕೊಂಡಾಗ ಗಂಡನ ಬಗ್ಗೆ ಅಸಮಾಧಾನ ಹುಟ್ಟಿಕೊಂಡಿತು. ಇದಕ್ಕೂ ಮುಂಚೆ ಈ ರೀತಿ ಆಗಿಲ್ಲ ಎಂದಲ್ಲ. ತನ್ನನ್ನು ಪ್ರತಿಬಾರಿ ಗಂಡ ತಾತ್ಸಾರದಿಂದ ಉಪೇಕ್ಷಿಸಿದಾಗೆಲ್ಲ ಅವಳಿಗೆ ನೋವಾಗಿದ್ದಿದೆ. ಆದರೆ ಈವತ್ತಿನಂತಲ್ಲ. ಈಗ ಮೊದಲಬಾರಿ ತನ್ನ ಕುಟುಂಬದಿಂದ ಬೇರ್ಪಟ್ಟಂತೆ ಅನಿಸಿತು; ಭಯ ಹುಟ್ಟಿಸುವ ಒಂಟಿತನದಲ್ಲಿ ಸಿಕ್ಕಿ ಹಾಕಿಕೊಂಡಂತೆನಿಸಿತು; ಬ್ರಿವಿಯೋ ತನ್ನನ್ನು ನಡುನೀರಿನಲ್ಲಿ ಕೈಬಿಟ್ಟಂತೆ ಅನಿಸಿತು. ಮತ್ತು ತನಗೂ ಆ ಸತ್ತ ಹೆಂಗಸಿನ ಬದುಕಿಗೂ ಅದೆಂಥದೋ ಸಾಮ್ಯತೆ ಕಂಡು ಬಂದು ತಾನೀಗ ಯಾರೊಂದಿಗೂ ಒಡನಾಡಲು ಯೋಗ್ಯಳಲ್ಲ ಎಂದನಿಸಿಬಿಟ್ಟಿತು. ತಾನು ಬ್ರಿವಿಯೋನನ್ನು ಅತಿಶಯವಾಗಿ ಪ್ರೀತಿಸಿದ್ದು ಮತ್ತು ಅದಕ್ಕೆ ಪ್ರತಿಯಾಗಿ ತನಗೇನೂ ಸಿಗದೆ ಹೆಂಡತಿ ತ್ಯಾಗಜೀವಿಯಂತೆ ಸದಾ ಪ್ರೀತಿಸುತ್ತಲೇ ಇರಬೇಕು ಎಂದು ಗಂಡ ಬ್ರಿವಿಯೋ ಭಾವಿಸಿದ್ದು – ಈ ಎರಡೂ ಸಂಗತಿಗಳು ಅವಳಲ್ಲಿ ರೇಜಿಗೆ ಹುಟ್ಟಿಸಿದವು. ಕರ್ತವ್ಯವೇನೋ ಸರಿ. ಆದರೆ ಆಗೆಲ್ಲ ಅವನ ಮೇಲಿನ ಪ್ರೀತಿಯಿಂದ ಹಾಗೆ ಭಾವಿಸಿದ್ದಳಷ್ಟೆ. ಈಗ ಆ ಪ್ರೀತಿಯನ್ನು ಕರಾರಿನಂತೆ ವಾಪಸು ಮಾಡುವ ಸರದಿ ಬ್ರಿವಿಯೋನದ್ದು ಎಂದನಿಸಿತು.

ಆ ಸತ್ತ ಹೆಂಗಸು ನಿಟ್ಟುಸಿರಿಡುತ್ತ, “ಇದೆಲ್ಲ ಯಾವತ್ತೂ ಹೀಗೇನೆ!” ಎಂದು ತನ್ನನ್ನೇ ಉದ್ದೇಶಿಸಿ ಹೇಳಿದಂತೆನಿಸಿತು ಆನ್ನಾಗೆ.

ಮತ್ತೆ ದೀಪ ಹಚ್ಚಿದಳು. ಇನ್ನೊಮ್ಮೆ ಚಿತ್ರದಲ್ಲಿನ ಕಣ್ಣುಗಳು ಅವಳನ್ನು ಕಲಕಿದವು. ಹಾಗಾದರೆ ಈ ಗಂಡನ ದೆಸೆಯಿಂದ ತಾನೂ ನೋವುಂಡೆನೆ? ಇದು ನಿಜವೆ? ಬ್ರಿವಿಯೋ ತನ್ನನ್ನು ಪ್ರೀತಿಸುತ್ತಿಲ್ಲ ಎಂದರಿವಾದಾಗ ಆ ಹೆಂಗಸೂ ಕೂಡಾ ನನ್ನ ಹಾಗೇ ಖಾಲಿತನವನ್ನು ಅನುಭವಿಸಿದಳೆ?

“ಹೌದಾದರೆ ಹೇಳು?” ಎಂದು ಆನ್ನಾ ಚಿತ್ರವನ್ನುದ್ದೇಶಿಸಿ ಕೇಳುತ್ತ, ಕೇಳುತ್ತ ಅಲ್ಲೇ ಗಂಟಲುಬ್ಬಿ ಬಂದು ಅತ್ತು ಬಿಟ್ಟಳು.

ಆ ಭಾವಚಿತ್ರದ ಕಣ್ಣುಗಳು ತನ್ನನ್ನೇ ಪ್ರೀತಿ, ಕರುಣೆಯಿಂದ ನೋಡುತ್ತಿರುವಂತೆ ಅನಿಸಿತು. ತನ್ನನ್ನು ಗಂಡ ನಿರ್ಲಕ್ಷಿಸಿದ್ದನ್ನು ಕಂಡು ಅನುಕಂಪಪಡುತ್ತಿರುವಂತೆ ಅನಿಸಿತು. ಕೊನೆಗೂ ತನ್ನಲ್ಲಿರುವ ಈ ಅತಿಶಯವಾದ ಪ್ರೀತಿಯ ಖಜಾನೆಯ ಬೀಗದಕೈ ಗಂಡನ ಬಳಿಯೇ ಇದೆ ಮತ್ತು ಅವನದನ್ನು ಬಳಸದ ಬಲುದೊಡ್ಡ ಜಿಪುಣನಾಗಿಬಿಟ್ಟಿದ್ದಾನೆ ಎಂದೂ ಅನಿಸಿತು.

*****

ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
With Other Eyes

Previous post ವಕ್ರದೃಷ್ಟಿ
Next post ಬಿ. ಪಿ.

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…