Home / ಕಥೆ / ಅನುವಾದ / ಚಂದ್ರಕಲೆ

ಚಂದ್ರಕಲೆ

ಮೂಲ: ವಿ ಎಸ್ ಖಾಂಡೇಕರ

ತೆಂಗಿನ ಗರಿಗಳ ಗುಡಿಸಲಿನ ಮುಂದೆ ಕುಳಿತು ಅಂತೂನನು ದಾರಿ ಕಾಯುತ್ತಿದ್ದ. ಅಂದವಾದ ಚಂದ್ರಕಲೆಯನ್ನು ತನ್ನ ಆಟಿಗೆಯನ್ನಾಗಿ ಮಾಡಿಕೊಳ್ಳಲು ಹವಣಿಸುವ ಬಾಲಕನ ಚೀರಾಟದಂತೆ ದೂರಿನಿಂದ ಸಮುದ್ರದ ತೆರೆಗಳ ಸಪ್ಪಳವು ಕೇಳಬರುತ್ತಿತ್ತು. ಆದರೆ ಅಂತೂನನಿಗೆ ಯಾತರದೂ ಅರಿವು ಇರಲಿಲ್ಲ. ತೆಂಗಿನ ಗಿಡಗಳ ಬುಡದಲ್ಲಿ ನೆರಳು ಬೆಳದಿಂಗಳುಗಳು ಕಣ್ಣು ಮುಚ್ಚಣಿಕೆಯ ಚಿನ್ನಾಟವಾಡುವಂತಿತ್ತು. ಆದರೆ ಅಂತೂನನು ಅವುಗಳ ಅಸ್ತಿತ್ವವನ್ನೇ ಮರೆತು ಹೋಗಿದ್ದ. ಆತನ ದೃಷ್ಟಿಯು ಗುಡಿಸಲಿಗೆ ಬರುವ ದಾರಿಯಲ್ಲಿ ನೆಟ್ಟಿತ್ತು. ಯಾವಾಗ್ಗೆ ಒಮ್ಮೆ ತನ್ನ ತಂದೆ ಅಂಗಡಿಯನ್ನು ಇಕ್ಕಿಕೊಂಡು ಮನೆಗೆ ಬರುವನೋ, ಅಲ್ಲಿಂದ-

ಸಮೀಪದಲ್ಲಿಯೇ ಗಿಡಗಳ ಗುಂಪಿನಲ್ಲಿ ‘ಸಳಸಳ’ ಸಪ್ಪಳವಾಯಿತು. ಆದರೆ ದಾರಿಯ ಮೇಲೆ ಯಾರೂ ಬರುತ್ತಿರಲಿಲ್ಲ. ತನ್ನ ತಂದೆ ಅಂಗಡಿಯನ್ನು ಇಷ್ಟು ತಡವಾಗಿ ಯಾಕೆ ಮುಚ್ಚುತ್ತಿರಬಹುದೆಂಬ ವಿಚಾರವು ಅವನಿಗೆ ತಿಳಿಯದೇ ಹೋಯಿತು.

ಅವನು ಮುಖವನ್ನು ಮೇಲಕ್ಕೆ ಚಂದ್ರನ ಕಡೆಗೆ ನೋಡಿದ. ಇಂದಿನವರೆಗೂ ತನಗೆ ಚಂದ್ರನು- ಮೇಘಗಳಾಚೆಯಲ್ಲಿ ಅಡಗಿಕೊಳ್ಳುವ ಚಂದ್ರ, ತಾರೆಗಳೇ ಸಿಂಪುಗಳಾಗಿರುವ ಆಕಾಶ ಸಮುದ್ರದ ಉಸುಕಿನಲ್ಲಿ ನಲಿದಾಡುವ ಚಂದ್ರ, ಸಾವಿರಾರು ರೀತಿಯಿಂದ ಅಲ್ಹಾದವನ್ನುಂಟು ಮಾಡುವ ಚಂದ್ರ, ತನ್ನ ಆಟಕ್ಕೆ ಸಂಗಡಿಗನಾಗಿದ್ದ. ಆದರೆ ಇಂದು ಅವನಿಗೆ ಯಾಕೋ ಬೇರೆಯಾಗಿದ್ದಂತೆ ಅನಿಸಹತ್ತಿತ್ತು “ಚಂದ್ರನ ಮೇಲೆ ಪರ್ವತಗಳಿವೆ. ಇಂಗ್ರೇಜೀ ಶಾಲೆಗೆ ಹೋದನಂತರ ಅವುಗಳನ್ನು ನೀವು ದೊಡ್ಡ ದುರ್‍ಬಿನಿನಲ್ಲಿ ಕಾಣುವಿರಿ” ಎಂದು ಅವರ ಶಾಲೆಯ ಮುಖ್ಯಾಧ್ಯಾಪಕರು ಹೇಳಿದ್ದು ಅವನಿಗೆ ನೆನಪಾಯಿತು. ಇಂಗ್ರೇಜಿ ಶಾಲೆ-ದೊಡ್ಡ ದೊಡ್ಡ ದುರ್‍ಬೀನಿಗಳು-ಪರೀಕ್ಷೆಗಳು ಇನ್ನೆಷ್ಟೋ ಸಂಗತಿಗಳಿಂದ ಆತನ
ಮನಸ್ಸು ಮುಂದಿನ ಸುಖಸ್ವಪ್ನಗಳಿಂದ ಅರಳಿಹೋಯಿತು.

ಆ ಮೂಲಕವೇ, ಅಂಗಣದಲ್ಲಿ ಹೆಜ್ಜೆಯ ಸಪ್ಪಳ ಕೇಳಬರುವರೆಗೂ ತಂದೆಯು ಬಂದದ್ದು ಅಂತೂನನಿಗೆ ತಿಳಿಯದೆ ಹೋಯಿತು. ಅವನ ತಂದೆಯು ಬಂದು, ಅವನನ್ನು ನೋಡಿ ನಸುನಕ್ಕು ಗುಡಿಸಲಿನ ಒಳಕ್ಕೆ ಹೋಗಿದ್ದ. ಒಳಗಿನಿಂದ ಅವನ ತಾಯಿಯ ಧ್ವನಿಯು ಕೇಳಬರುತ್ತಿತ್ತು.

“ಎಷ್ಟು ತಡವಾಯಿತು ಇಂದು, ಬರಲಿಕ್ಕೆ?”

“ಈ ವ್ಯಾಪಾರವೆಂದರೆ ಸಂಜೆಯ ಮುಂದೆಯೇ ಚನ್ನಾಗಿ ನಡಿಯುವಂಥಾದ್ದು”

“ಅಂತೂನನಂತೂ ಹಟವನ್ನೇ ಹಿಡಿದಿರುವನಲ್ಲಽ”

“ನಮ್ಮ ಹುಡುಗನ ಇಚ್ಛೆ ನಾನೇ ಪೂರೈಸಬೇಕಲ್ಲವೇನು?”

“ಅದೆಲ್ಲ ಸರಿ. ಆದರೆ ರೊಕ್ಕವೇನು ಈ ತೆಂಗಿನ ಗಿಡಗಳಿಗೆ ಹತ್ತಿ ಕೊಂಡಿವೆ ಏನು?”

ತನ್ನ ತಂದೆಯ ಗಟ್ಟಿಯಾದ ನಗುವು ಅಂತೂನನಿಗೆ ಹೊರಗೆಯೇ ಕೇಳಿಸಿತು.

“ನಗಲಿಕ್ಕೇನಾಯಿತು?”

“ರೊಕ್ಕ ಏನೂ ತೆಂಗಿನ ಗಿಡಗಳಿಗೆ ಹತ್ತಿಲ್ಲವೆಂದಿಯಲ್ಲ, ನೀನು ಈಗಲೆ?”

“ಹೌದು ಸುಳ್ಳೇನು ನನ್ನ ಮಾತು?”

“ರೊಕ್ಕ ಹತ್ತಿಕೊಂಡಿರುವದು ತೆಂಗಿನ ಗಿಡಕ್ಕೇನೆ!”

ತಂದೆಯ ಕೈಯಲ್ಲಿಯ ರೊಕ್ಕದ ‘ಝಣಝಣ’ ಸಪ್ಪಳವು ಅಂತೂ ನನ ಕಿವಿಯಮೇಲೆ ಬಿದ್ದೊಡನೆಯೇ ಆತನ ಹೃದಯವು ಆನಂದದಿಂದ ಕುಣಿಯಹತ್ತಿತು. ಒಳಗಡೆಗೆ ತನ್ನ ತಾಯಿಯು ಕೇಳುತ್ತಿದ್ದಳು.

“ಆದರೆ, ಇಂಗ್ರೇಜಿ ಶಾಲೆಯಲ್ಲಿ ಫೀ ಬಹಳ ಅಲ್ಲವೇನು? ಇದಲ್ಲದೆ ಪುಸ್ತಕಬೇಕು-”

“ಇರಲೊಲ್ಲದೇಕೆ, ಫೀ ಬಹಳ. ಅವೆಲ್ಲವುಗಳಿಗಿಂತಲೂ ದೊಡ್ಡ ಗಿರಾಕಿಯನ್ನೇ ಹಿಡಿದು ಬಿಟ್ಟಿರುವೆ.”

“ಎಲ್ಲಿಯದು ಅದು?”

“ಎಲ್ಲಿಯದಾದರೂ ಇರಲೊಲ್ಲದೇಕೆ? ತನ್ನ ಜೊತೆಯಲ್ಲಿ ನಾಲ್ಕು ಜನ ಇಲ್ಲದೆ ಎಂದೂ ಬರುವದಿಲ್ಲ ಸವಾರಿ, ಅಂಗಡಿಗೆ ಪ್ರತಿದಿವಸ ಹತ್ತು ಹನ್ನೆರಡು ಆಣೆಯಾದರೂ ಸಹಜ-”

“ಪ್ರತಿದಿವಸ ಹನ್ನೆರಡಾಣೆ” ತನ್ನ ತಾಯಿಯ ಸ್ವರದಲ್ಲಿಯ ಆನಂದವು ಅಂತೂನನ ರೋಮರೋಮಗಳಲ್ಲಿಯೂ ನರ್‍ತಿಸಹತ್ತಿತ್ತು. ಆನಂದದಲ್ಲಿ ಅವನು ಮೇಲಕ್ಕೆ ನೋಡಿದ. ಚಂದ್ರಬಿಂಬವು ಅಸ್ತವಾಗಹತ್ತಿತು. ಕತ್ತಲೆಯಲ್ಲಿ ಸಮುದ್ರದ ಸಪ್ಪಳವು ಹಿಂಸ್ರಪಶುವಿನ ಗುರುಗುರಿಕೆಯಂತೆ ನಡುನಡುವೆ ಕೇಳಬರುತ್ತಿತ್ತು. ಆದರೆ “ನಾಳೆ ಇಂಗ್ರೇಜಿ ಶಾಲೆಗೆ ಹೋಗುವೆ” ಎಂಬ ವಿಚಾರದಿಂದ ಆತನಮನದಲ್ಲಿ ಹುಣ್ಣಿಮೆಯ ಬೆಳದಿಂಗಳು ಅರಳಿತು. ಸಮುದ್ರದ ಸಪ್ಪಳವು ಚಿಕ್ಕ ಮಕ್ಕಳ ಆಟದ ವೇಳೆಯಲ್ಲಿಯ ಆನಂದದ ಚೀತ್ಕಾರದಂತೆ ಅವನಿಗೆ ಭಾಸವಾಯಿತು.

ಒಂದು ಬೆಳ್ಳಿಯ ಉಡದಾರ ಮತ್ತು ಒಂದು ಕೆಂಪು ಅರಿವೆಯ ಲಂಗೋಟಿ ಇವೇ ಅಂತೂನನ ತಂದೆಯ ವೈಭವ, ಆ ಮೂಲಕ ಶಾಲೆಯಲ್ಲಿ ಸೇರುವಾಗ ಅಂತೂನನಿಗೆ ಮುಖವನ್ನು ಕೆಳಗೆ ಮಾಡಿಕೊಂಡೇ ಹೋಗಬೇಕಾಯಿತು. ಮುಖ್ಯಾಧ್ಯಾಪಕರ ಕೋಣೆ, ಅದರಲ್ಲಿಯೂ, ಸೂಟುಬೂಟುಗಳನ್ನು ಧರಿಸಿ ಕಣ್ಣುಗಳಿಗೆ ಕನ್ನಡಕಗಳನ್ನೇರಿಸಿಕೊಂಡ ಮೂರ್ತಿಯನ್ನು ಕಂಡ ಮೇಲಂತೂ, ಅಂತೂನನಿಗೆ ಅಲ್ಲಿಂದ ಒಮ್ಮೆಲೆ ಓಡಿಹೋಗಬೇಕೆಂದೆನಿಸಿತು. ಆದರೆ ಅದು ಶಕ್ಯವಿರಲಿಲ್ಲ.

ಶಾಲೆಯ ಸಿಪಾಯಿಯು ಅಂತೂನನ್ನು ಅವನ ವರ್‍ಗಕ್ಕೆ ಕರೆದು ಕೊಂಡು ಬಂದಾಗ ಭಯಭೀತನಾಗಿಯೇ ಅವನು ಒಳಕ್ಕೆ ಹೋದ. ಕೂಡಲೆ ಅರವತ್ತು ಎಪ್ಪತ್ತು ಚಿಕ್ಕ ಚಿಕ್ಕ ಹೊಳೆಯುವ ಕಣ್ಣುಗಳ ಕಟಾಕ್ಷವನ್ನು ಆತನಿಗೆ ಒಮ್ಮೆಲೆ ಎದುರಿಸಬೇಕಾಯಿತು. ವ್ಯಾಕುಲದೃಷ್ಟಿಯಿಂದ ಅಂತೂನನು ಮಾಸ್ತರರ ಖುರ್‍ಚಿಯ ಕಡೆಗೆ ನೋಡಿದ. ಕಲ್ಲು ಮೂರ್ತಿಯಂತೆ ಸ್ವಸ್ಥವಾಗಿ ಅಧ್ಯಾಪಕನು ಖುರ್‍ಚಿಯಲ್ಲಿ ಕುಳಿತುಕೊಂಡಿದ್ದ, ಭಯಚಕಿತ ದೃಷ್ಟಿಯಿಂದ ಇಡೀ ವರ್ಗವನ್ನು ನಿರೀಕ್ಷಿಸುತ್ತಿರುವಾಗ ಅಂತೂನನ ಕಾಲುಗಳು ಥರಥರ ನಡುಗುತ್ತಿದ್ದವು. ಇಷ್ಟರಲ್ಲಿಯೂ ದೂರಿ ನಿಂದ, ಒಳ್ಳೆ ಚನ್ನಾಗಿ ಅರಿವೆಗಳನ್ನು ಧರಿಸಿದ, ಜರದ ಟೊಪ್ಪಿಗೆಯ, ಹುಡುಗನೊಬ್ಬನು, ತನ್ನ ಸಲುವಾಗಿ ಸ್ಥಳಮಾಡಿ ಸನ್ನೆ ಮಾಡಿ ಕರೆಯುತ್ತಿರುವದನ್ನು ನೋಡಿದಕೂಡಲೇ, ಅಂತೂನನಿಗೆ ಸಮುದ್ರದಲ್ಲಿ ಮುಳುಗುತ್ತಿರುವ ಮನುಷ್ಯನಿಗೆ ನಾವನ್ನು ಕಂಡಂತೆ ಅನಿಸಿತು. ಇಡೀ ದಿವಸ ಅಂತೊನನು ಆ ಹುಡುಗನ ಮುಖವನ್ನು ಕೃತಜ್ಞತೆಯಿಂದ ತುಂಬಿದ ಕಣ್ಣುಗಳಿಂದ ನೋಡುತ್ತಲೇ ಇದ್ದ.
* * *

ಅಂದಿನಿಂದಲೇ ವಸಂತ ಅಂತೂನರ ಗೆಳೆತನವು ಅತಿಶಯವಾಗಿ ಕೂಡಿಹೋಯಿತು. ಅಂತೂನನ ಕೊರಳಲ್ಲಿಯ ‘ಕ್ರಾಸು’ ಎಷ್ಟು ಚಂದವಾಗಿ ಕಾಣುವದೆಂಬದನ್ನು ವಸಂತನು ತನ್ನ ತಾಯಿಯು ಮುಂದೆ ವರ್‍ಣಿಸುವಂತೆ, ಅಂತೂನನಾದರೂ ತನ್ನ ತಾಯಿಯ ಮುಂದೆ ವಸಂತನ ಕೈ ಮೇಲೆ ಹಂಚಿಯ ಬೊಟ್ಟಿನಿಂದ ಬರೆದ ರಾಮನಾಮಾಕ್ಷರಗಳನ್ನು ವರ್‍ಣಿಸುತ್ತಿದ್ದ. ಇಬ್ಬರೂ ವರ್ಗದಲ್ಲಿ ಒಬ್ಬರೊಬ್ಬರ ಹತ್ತಿರವೇ ಕುಳಿತು ಕೊಳ್ಳುತ್ತಿದ್ದರು. ನಡುವಿನ ಬಿಡುವಿನಲ್ಲಿ ಕೂಡಿಯೇ ಆಡುವರು. ಇಷ್ಟೇ ಅಲ್ಲದೆ ‘ಹು-ತೂ-ತು’ ಆಡುವಾಗ್ಗೆ ಇಬ್ಬರೂ ಯಾವಾಗಲೂ ಒಂದೇ ಕಡೆಯಿಂದಲೇ ಆಡುವರು. ಮಾಸ್ತರರ ಇಚ್ಛೆಯ ಮೂಲಕ ಒಬ್ಬರೊಬ್ಬರಿಂದ ಬಿಡುಗಡೆಯಾಗಿ ಎದುರಾಳಿಗಳಾಗಿ ಆಡಬೇಕಾದಾಗ ಅಂತೂನನ್ನು ಹೊಡೆಯುವದು ವಸಂತನಿಗೆ ಕಷ್ಟವಾಗುವಷ್ಟೇ ಅಂತೂನನಿಗೂ ಆಗುತ್ತಿತ್ತು. ಅಂತೂನನಂತೂ ಅಂಥ ಪ್ರಸಂಗದಲ್ಲಿ ವಸಂತನ ಮೈಯನ್ನು ಕೂಡ ಮುಟ್ಟುತ್ತಿರಲಿಲ್ಲ.

ವರ್‍ಗದಲ್ಲಿಯೂ ಕೂಡ ಮಾಸ್ತರರಿಂದ ಹೊಗಳಿಸಿಕೊಳ್ಳುವಷ್ಟು ಅವರ ಗೆಳೆತನವು ಆರು ತಿಂಗಳ ಅವಧಿಯಲ್ಲಿಯೇ ಬೆಳೆಯಿತು. ಒಮ್ಮೆ ಮಾಸ್ತರರು ಹೇಳುತ್ತಿದ್ದರು. “ಮೊದಲಿನ ಕಾಲದಲ್ಲಿ ಪತ್ರಗಳನ್ನು ಬರೆ ಯುವಾಗ ‘ಶುಕ್ಲೇಂದುವಿನಂತೆ ನಮ್ಮಲ್ಲಿ ಪ್ರೇಮ ವೃದ್ಧಿಯಾಗಬೇಕು’ ಎಂದು ಬರೆಯುತ್ತಿದ್ದರು”

“ಶುಕ್ಲೇಂದುವಿನಂತೆ ಅಂದರೆ ಹ್ಯಾಗರೀ ಮಾಸ್ತರ” ಒಬ್ಬ ಹುಡುಗ ಶಂಕೆಯನ್ನೆತ್ತಿದ.

“ಅಂತೂ ವಸಂತರಂತೆ!” ಮಾಸ್ತರರು ಒಮ್ಮೆಲೆ ಹೇಳಿಬಿಟ್ಟರು. ಇಡೀ ವರ್ಗದ ಮೇಲೆ ನಗುವಿನ ಲಹರಿಹಾಯ್ದು ಹೋಯಿತು. ಮಧ್ಯಾನ್ಹದ ಬಿಸಿಲು ಹೊರಗೆ ರಣ ರಣ ಉರಿಯುತ್ತಿದ್ದರೂ ತಾನು ಬೆಳದಿಂಗಳಿನಲ್ಲಿ ರಮಿಸುತ್ತಿರುವಂತೆ ಅಂತೂನನಿಗೆ ಭಾಸವಾಯಿತು. ಆ ತಾಸು ಮುಗಿದ ಕೂಡಲೆ ಅವನು ವಸಂತನಿಗೆ ಅಂದ-

“ನಿನ್ನನ್ನು ಕರೆಯಲಿಕ್ಕೆ ನನಗೆ ಇಂದು ಹೊಸದೊಂದು ಹೆಸರು ಸಿಕ್ಕಿದೆ!”

“ಯಾವದು ಅದು?”

“ಶುಕ್ಲೇಂದು!”

ಆದರೆ ಶುಕ್ಲೇಂದುವಿಗೆ ಪೂರ್‍ಣೇಂದುವಿನ ಅನುಭವವು ಸಿಗುವದು ಒಂದು ದಿವಸದ ಪೂರ್ತಿಯೇ ಎಂಬುದನ್ನು ಅಂತೂನನು ಮರೆತು ಬಿಟ್ಟ. ಒಂದು ದಿವಸ ವಸಂತನು ವರ್ಗದಲ್ಲಿ ಬಂದವನೇ ಸರಳವಾಗಿ ಎರಡನೇ ಕಡೆಗೆ ಹೋಗಿ ಕುಳಿತುಕೊಂಡು ಬಿಟ್ಟ. ಪುಸ್ತಕದ ನೆವ ಮುಂದುಮಾಡಿ ಅಂತೂನನು ಅವನ ಕಡೆಗೆ ಹೋದರೂ ವಸಂತನು ಮೋರೆ ತಿರಿವಿದ. ನಡುವಿನ ಬಿಡುವು ಆಗುವವರೆಗೆ ಎರಡು ತಾಸುಗಳು ಅಂತೂನನಿಗೆ ಎರಡು ಯುಗಗಳಂತೆ ಅನಿಸಿದವು. ಬಿಡುವಾದ ಕೂಡಲೇ ವಸಂತನು ತನ್ನನ್ನು ತಪ್ಪಿಸಿ ಹೊರಗೆ ಹೋಗಬಹುದೆಂಬ ವಿಚಾರದೊಂದಿಗೆ ಅವನ ಕಣ್ಣುಗಳಲ್ಲಿ ನೀರು ತುಂಬಿದವು. ಕೂಡಲೇ ಅಂತೂನನು ವಸಂತನ ಹತ್ತಿರಕ್ಕೆ ಹೋಗಿ ಅವನ ಕೈ ಗಟ್ಟಿಯಾಗಿ ಹಿಡಿದುಕೊಂಡ. ಲೋಹಚುಂಬಕದಿಂದ ಎಳೆಯಲ್ಪಟ್ಟ, ಕಬ್ಬಿಣದಲ್ಲಿ ಕೂಡ ಹೋಗುವ ಶಕ್ತಿ ಯೆಲ್ಲಿಂದ ಬರಬೇಕು? ವಸಂತನಾದರೂ ತನ್ನ ಕೈಯನ್ನು ಅಲ್ಲಿಯೇ ಬಿಟ್ಟು ಸುಮ್ಮನೆ ನಿಂತುಕೊಂಡ.

ಇಬ್ಬರೂ ಮಾತಾಡದೆ ಹೊರಗೆ ಬಂದರು. ವ್ಯಾಯಾಮಶಾಲೆಯ ಹಿಂದೆ ಹೋಗ ಹೋಗುತ್ತಲೇ, ನಡುನಡುವೆ ಬಿಕ್ಕುತ್ತ ಕಂಪಿಸುವ ದನಿಯಲ್ಲಿ “ವಸಂತ! “ಎಂದು ಕರೆದ. ಭೂಕಂಪವಾದ ನಂತರ ಕಲ್ಲುಪ್ರದೇಶದಲ್ಲಿಯಾದರೂ ನೀರು ನಿಲ್ಲುವದು. ಅಂತೂನನ ಸ್ವರದಲ್ಲಿಯ ನಡುಕಿನಿಂದ ವಸಂತನ ಮನಕರಗಿತು.

“ವಸಂತ- ವಸಂತ, ನಾನೇನು ತಪ್ಪು ಮಾಡಿದೆ ಹೇಳು.” ವಸಂತನು ಗೊಂದಲದಲ್ಲಿ ಬಿದ್ದ, ಇಂದು ನೀನು ನನ್ನನ್ನು ಬಿಟ್ಟು ದೂರ ಯಾಕೆ ಕುಳಿತುಕೊಂಡೆ?”

“ನನ್ನ ತಾಯಿ ಹೇಳಿದಳು.”-
“ಏನೆಂದು?”
“ನಿನ್ನೊಡನೆ ಮಾತು ಕೂಡ ಆಡಬೇಡವೆಂದು”
“ಅದೇಕೆ? ನಾನು ಕ್ರಿಸ್ತೀಯನೆಂದೇನು, ಅವಳು ಹಾಗೆ ಹೇಳಿದ್ದು?”
“ಉಹುಂ. ನನ್ನ ತಂದೆ ಪ್ರತಿನಿತ್ಯವೂ ನನ್ನ ತಾಯಿಯನ್ನು ಹೊಡೆ ಯುವ-”

ಅಂತೂನನ ಮುಖದ ಮೇಲಿನ ಆಶ್ಚರ್ಯದ ಅರ್ಥವು ವಸಂತನಿಗೆ ತಿಳಿಯಿತು. “ನಿನ್ನ ತಂದೆ ನಿನ್ನ ತಾಯಿಯನ್ನು ಹೊಡೆಯುವದಾದರೆ, ಶಿಕ್ಷೆ ಯಾಗುವದು ನನಗೆ! ಇದೊಳ್ಳೆಯ ನ್ಯಾಯ!” ಎಂದು ಅವನ ಮುಖ ಮುದ್ರೆಯು ಹೇಳುವಂತಿತ್ತು.

“ನನ್ನ ತಂದೆ ಹೀಗೆಂದಿಗೂ ಮೊದಲು ಅವಳನ್ನು ಹೊಡೆಯುತ್ತಿರಲಿಲ್ಲ” ಅಂತೂನನು ಸುಮ್ಮನೆ ಕೇಳುತ್ತಲಿದ್ದ.

“ಈಗ ಆರು ತಿಂಗಳಾದವು. ಅವರು ಹೊರಗೆ ಹೋಗಿ ಬಂದು-”

“ಹೊರಗೆ ಅಂದರೆ ಎಲ್ಲಿಗೆ ಹೋಗುವರು?”
“ನಿನ್ನ ತಂದೆಯ ಅಂಗಡಿಗೆ!”
ಅಂತೂನನು ಕೆಳಗೆ ನೋಡುತ್ತ ವಿಚಾರಮಾಡತೊಡಗಿದ

“ಮನೆಗೆ ಬಂದ ಕೂಡಲೆ ಬಡಬಡಿಸಹತ್ತುವರು. ನನ್ನ ತಾಯಿಯನ್ನು ಮನಬಂದಂತೆ ಹೊಡೆಯುವರು. ನಿನ್ನಿನ ದಿವಸ ನನ್ನ ತಾಯಿ ಎಷ್ಟೋ ವೇಳೆ ಅಳುತ್ತ ಕುಳಿತುಬಿಟ್ಟಿದ್ದಳು. ನನ್ನ ತಂದೆಯವರು ನಿಮ್ಮ ಅಂಗಡಿಗೆ ಹೋಗುವರೆಂದು ಅವಳೇ ಹೇಳಿದಳು ನನಗೆ-”

“ಅವರು ಅಲ್ಲಿಗೆ ಹೋಗದಂತೆ ಮಾಡಿದರೆ?”

ಆಶ್ಚರ್ಯಬಡುವದು ಈಗ ವಸಂತನ ಮೇಲೆ ಬಂದಿತು. ಈ ಹತ್ತು ವರ್ಷದ ಪೋರನು, ತನ್ನ ತಂದೆಯ ಸೆರೆಯ ಚಟವನ್ನು ಕಳೆಯುವನೇ? ತನ್ನ ತಾಯಿಯ ಪ್ರಯತ್ನಗಳೆಲ್ಲವೂ ನಿಷ್ಪಲವಾಗಿದ್ದಾಗ ಈ ಅಂತೂನ-

“ಅಲ್ಲಿಂದಾದರೂ ನನ್ನ ಹತ್ತಿರ ಬಂದು ಕೂಡುವಿಯಲ್ಲವೆ?”
“ಓ, ಹೋ!”

ಆ ಮೇಲಿನ ತಾಸು ಭೂಗೋಲದ ಪಾಠದ್ದಿತ್ತು. ಪೃಥ್ವಿಯ ಮೇಲೆ ಗ್ರಹಣಗಳು ಹೇಗೆ ಆಗುತ್ತವೆಂಬುದನ್ನು ಶಿಕ್ಷಕರು ಹೇಳುತ್ತಿರುವಾಗ ಅಂತೂನನಿಗೆ ಅನಿಸಿತು. ತನ್ನ ಮತ್ತು ವಸಂತನ ಗೆಳೆತನಕ್ಕಾದರೂ ಗ್ರಹಣ ಹಿಡಿದಿದೆ. ಆದರೆ ಅವನು ಒಮ್ಮೆಲೆ ಸಮಾಧಾನ ಹೇಳಿಕೊಳ್ಳುತ್ತಿದ್ದ. “ಚಂದ್ರನ ಗ್ರಹಣವೇನು, ಕಡೆತನಕ ನಿಲ್ಲುವದೇ? ಕೂಡಲೆ ಬಿಟ್ಟು ಹೋಗುವದು!”

ಆ ದಿವಸ ರಾತ್ರಿ ಊಟವಾದನಂತರ ಅಂತೂನನು ತನ್ನ ತಂದೆಗೆ ಕೇಳಿದ-

“ಜನರು, ಸೆರೆ ಯಾಕೆ ಕುಡಿಯುವರು, ಅಪ್ಪ?”

“ಇಂಗ್ರೇಜಿ ಶಾಲೆಯಲ್ಲಿ ನಿಮಗೆ ಇದನ್ನೇ ಕಲಿಸುವರೇನು?”
“ಆದರೆ-”
“ಆದರೆ ಏನು?”
“ಆ ವಸಂತನ ತಂದೆ ನಮ್ಮ ಅಂಗಡಿಗೆ ಬರುವನಲ್ಲವೇ?”
“ಹೌದು”
“ಅವನಿಗೆ ನಮ್ಮ ಅಂಗಡಿಯಲ್ಲಿ ಬರಗೊಡದಿದ್ದರೆ?”
“ಎರಡನೇ ಅಂಗಡಿಯ ಕಡೆಗೆ ಹೋಗುವ, ಅವ!” ಅಂತೂನನಿಗೆ ವಿಚಾರಹರಿಯದಾಯಿತು.
“ಮತ್ತು ನೀನು ಶಾಲೆಯನ್ನಾದರೂ ಬಿಡಬೇಕಾಗುವದು?”
“ಅದೇಕೆ?”
“ಇಂಥ ದೊಡ್ಡ ಗಿರಾಕಿ ನಮ್ಮ ಕೈಬಿಟ್ಟು ಹೋದರೆ ನಿನಗೆ ಶಾಲೆ ಕಲಿಯಲಿಕ್ಕೆ ರೊಕ್ಕವೆಲ್ಲಿಂದ ಬರಬೇಕು?”

ವಸಂತನ ತಂದೆಯು ತಮ್ಮ ಅಂಗಡಿಯಲ್ಲಿ ಸೆರೆ ಕುಡಿಯಲಿಕ್ಕೆ ಬಂದರೆ ಮಾತ್ರ ತನಗೆ ಶಾಲೆ ಕಲಿಯಲಿಕ್ಕೆ ಸಿಗುವದು! ಅಂತೂನನಿಗೆ ಈ ವಿಚಿತ್ರ ಸಂಬಂಧದ ಅರ್ಥವೇ ತಿಳಿಯಲಿಲ್ಲ. ವಿಚಾರ ಮಾಡಿ ಮಾಡಿ ಆತನ ತಲೆ ನೋಯತೊಡಗಿತು. ನಾಳೆ ಯಾವ ಮೋರೆಯಿಂದ ವಸಂತನಿಗೆ ಭೆಟ್ಟಿಯಾಗುವದು, ಎಂಬ ಪ್ರಶ್ನೆ ಆತನ ಮುಂದೆ ನಿಂತಿತು. ನಿದ್ರೆ ಬರದೆ ಇದ್ದುದರಿಂದ ಹಾಸಿಗೆಯ ಮೇಲೆ ತಳಮಳಿಸುತ್ತ ಮಗ್ಗುಲಿನಿಂದ ಮಗ್ಗುಲಿಗೆ ಹೊರಳಾಡಹತ್ತಿದ. ಏನೂ ತೋಚದೆ ಕಡೆಗೆ ಅವನು ಎದ್ದು ಗುಡಿಸಲಿನ ಹೊರಕ್ಕೆ ಬಂದ.

ಮಧ್ಯರಾತ್ರಿಯ ಸಮಯವು ಮೀರಿಹೋಗಿತ್ತು. ಶುಭ್ರವಾದ ಬೆಳ ದಿಂಗಳಿನಲ್ಲಿ ಇಡೀ ಜಗವೆಲ್ಲವೂ ಮುಣುಗಿ ಏಳುತ್ತಿತ್ತು. ಆದರೆ ತನ್ನ ಮನಸ್ಸಿನಲ್ಲಿ ಕತ್ತಲೆಯೇ ಗಾಢತರವಾಗಹತ್ತಿದೆ ಎಂದೆನಿಸಿತು ಅಂತೂನನಿಗೆ. ಅವನು ಕಣ್ಣು ಮುಚ್ಚಿಕೊಂಡು ಸುಮ್ಮನೆ ನಿಂತುಕೊಂಡುಬಿಟ್ಟ. ಸಮುದ್ರದ ಭಯಂಕರ ಸಪ್ಪಳವನ್ನು ಕೇಳಿ ಆತನ ಮೈ ಮೇಲೆ ನವಿರೆದ್ದವು. ಸಾವಿರಾರು ಸೆರೆಕುಡುಕರು, ಬಾಯಿಗೆ ಬಂದಂತೆ ಬಡಬಡಿಸುತ್ತ, ಎದೆ ಎದೆ ಬಡೆದುಕೊಳ್ಳುತ್ತ ತನ್ನೆಡೆಗೆ ಬರುತ್ತಿರುವರೇನೋ ಎಂದೆನಿಸಿ, ಧಡಧಡ ಅನ್ನುವ ಎದೆಯ ಮೇಲೆ ತನ್ನ ಕೈ ಇರಿಸಿಕೊಂಡು ಅಂತೂನನು ಗುಡಿಸಲನ್ನು ವಿಷಣ್ಣ ಮನಸ್ಕನಾಗಿ ಸೇರಿದ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್