ಮೂಡಿ ಬಂದ ಹೊಸ ವರುಷ
ಹೊಸ ಹರುಷ ನೀಡಲಿ
ಹಳೆಯದರಲಿ ಒಳಿತನುಳಿಸಿ
ಹೊಸ ಗೀತೆ ಹಾಡಲಿ||
ಒಣಗಿ ನಿಂತ ವನರಾಶಿಗೆ
ಹಸಿರೋಕುಳಿ ಚೆಲ್ಲಲಿ
ಬರಡಾಗಿಹ ಈ ಬುವಿಗೆ
ಹನಿಯೆರಡ ಎರೆಯಲಿ
ಎಲ್ಲರೆದೆಯ ಹೂದೋಟದಿ
ನವ ಕುಸುಮಗಳರಳಿಸಿ
ಭ್ರಾತೃತ್ವದ ಸಿರಿಗಂಪನು
ದಿಕ್‌ದಿಕ್ಕಿಗು ಪಸರಿಸಿ
ಗಿಳಿ ಕೋಗಿಲೆ ರಾಗಗಳಲಿ
ಹೊಸ ಭಾವ ಮೂಡಲಿ
ಎದೆ ತುಂಬಿದ ಹಾಡುಗಳಲಿ
ಸಮಾನತೆಯು ಕೇಳಲಿ
ಹೊತ್ತಿ ಉರಿವ ಹೃದಯಗಳಲಿ
ವಿಷ ಜ್ವಾಲೆ ಆರಲಿ
ವಿಶ್ವ ಮಾನವತೆಯ ಗೀತೆ
ಎಲ್ಲಲ್ಲೂ ಧ್ವನಿಸಲಿ
ಕತ್ತಿ ಹಿಡಿದು ಹೊರಟ ಕೈಯಿ
ವಿಶ್ವ ಧ್ವಜವ ಹಿಡಿಯಲಿ
ಅಲ್ಲಿ ಇಲ್ಲಿ ಮೊಳಗೊ ಗೀತೆ
ವಿಶ್ವ ದನಿಗೆ ಕೂಡಲಿ
ಯುಗ ಯುಗಗಳಿಂದ ಬಂದ
ಮನು ಕುಲವು ಒಂದೆಂದು
ಹೊಸ ವರುಷ ಮೂಡಿ ಬಂದು
ಹಾಡುತಿರಲಿ ಎಚಿದೆಂದು
*****



















