ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರಾಜರಿಗೆ ಹೆಚ್ಚು ಅಧಿಕಾರವಿಲ್ಲದೆ ದೇವರಾಜಯ್ಯನ ವಶದಲ್ಲಿಯೇ ಕೋಶಾಗಾರವೂ ಸೇನಾಬಲವೂ ಇದ್ದುದರಿಂದ ಆ ಕರಾಚೂರಿ ನಂಜರಾಜಯ್ಯನಿಗೇ ಅಧಿಕಾರವಾಯಿತು. ಈತನಿಗೆ ಕರಾಚೂರಿ ಎಂಬುದು ಅಡ್ಡ ಹೆಸರು. ಸಹನವಿರಲಿಲ್ಲ ಈತನಿಗೆ; ಎದುರಾಡಿದರೆ ಕೋಪ, ಕೋಪಬಂದೊಡನೆ ಕಠಾರಿಯ ಮೇಲೆಯೇ ಕೈ, ಸಹಜವಾಗಿ ಒರಟ, ಮೂರ್ಖ; ಇದರ ಮೇಲೆ ತಾನು ಬಹಳ ಚತುರನೆಂದು ತಿಳಿದಿದ್ದನು. ಇದರಿಂದ ಈತನು ನಡೆಸಿದ ಕೆಲಸಗಳು ಒಂದಾದರೂ ಸಮರ್ಪಕವಾಗಿ ಕೊನೆಗಾಣಲಿಲ್ಲ. ಆತನ ಶೌರ್ಯವೂ ಧೈರ್ಯವೂ ಕ್ರೌರ್ಯದಿಂದಲೂ ಹಟಮಾರಿತನದಿಂದಲೂ ಹದಗೆಟ್ಟು ಅನರ್ಥಗಳಿಗೆ ಕಾರಣಭೂತಗಳಾಗಿದ್ದವು.
ಚಿಕ್ಕ ಕೃಷ್ಣರಾಜ ಒಡೆಯರು ದೊರೆಗಳಾಗಿದ್ದುದು ಇಬ್ಬರು ಸೋದರರ ಅಧಿಕಾರಕ್ಕೇನೂ ಅಡ್ಡಿಯಾಗಿರಲಿಲ್ಲ; ಏಕಂದರೆ ರಾಜರು ಚಿಕ್ಕ ವಯಸ್ಸಿನವರಾಗಿದ್ದರು. ಸರ್ವಾಧಿಕಾರಿ ಎಂಬ ಪದವಿಯಲ್ಲಿದ್ದಾಗ್ಗೂ ನಂಜರಾಜಯ್ಯನೇ ಸೇನೆಯ ನಾಯಕತ್ವವನ್ನು ವಹಿಸಿ, ಕೊಯಮತ್ತೂರು ಪ್ರಾಂತ್ಯದಲ್ಲಿಯೂ ದೇವನಹಳ್ಳಿಯ ಬಳಿಯಲ್ಲಿಯೂ ಹಲಕೆಲವು ಜಯಗಳನ್ನು ಪಡೆದನು. ತರುವಾಯ ತಿರುಚನಾಪಳ್ಳಿಯ ಪ್ರಾಂತ್ಯದಲ್ಲಿ ಇತರರ ಯುದ್ಧಗಳಲ್ಲಿ ಪ್ರವೇಶಿಸಿ, ಅಲ್ಲಿಯೇ ಸಂಧಾನಪರನಾಗಿದ್ದು ಶ್ರೀರಂಗಪಟ್ಟಣದಲ್ಲಿ ಶತ್ರುಗಳು ತೋರಿಕೊಂಡು ವಿಪತ್ತು ಒದಗಿದ ಕಾಲದಲ್ಲಿ ಹಿಂತಿರುಗಿ ಬಂದನು. ಈ ವೇಳೆಗೆ ಚಿಕ್ಕ ದೊರೆಗಳಿಗೆ ೨೭ ವರ್ಷ ವಯಸ್ಸಾಗಿತ್ತು. ನಂಜರಾಜಯ್ಯನ ಪುತ್ರಿ ದೇವಾಜಮ್ಮಣ್ಣಿಯವರನ್ನೇ ಅವರಿಗೆ ಕೊಟ್ಟು ಮದುವೆಮಾಡಿಸಿ ದೇವರಾಜಯ್ಯ ನಂಜರಾಜಯ್ಯಂದಿರು ತಮ್ಮ ಸ್ಥಾನಗಳನ್ನು ಭದ್ರಗೊಳಿಸಿಕೊಂಡು ಅಳಿಯಂದಿರ ಮರ್ಯಾದೆಗೆ ಮಾತ್ರ ತಕ್ಕಷ್ಟು ಸೈನ್ಯವನ್ನು ಕೊಟ್ಟಿದ್ದರು. ವಯಸ್ಸು ತುಂಬಿದ ಮೇಲೆ ಈ ಇಮ್ಮಡಿ ಕೃಷ್ಣರಾಜಒಡೆಯರಿಗೆ ಮನೋನಿಶ್ಚಯವು ಬಲವಾಯಿತು. “ಈ ದೇವರಾಜಯ್ಯ ನಂಜರಾಜಯ್ಯಂದಿರು ನನ್ನ ಅಣ್ಣಂದಿರಾದ ಚಾಮರಾಜ ಒಡೆಯರವರಿಗೂ ಮಾತುಶ್ರೀಯವರಿಗೂ ಮನಸ್ತಾಪ ತಂದಿಟ್ಟರು; ಕಠೋರವಾದ ಸ್ವಾಮಿದ್ರೋಹವನ್ನು ಮಾಡಿ ನೀಚರಂತೆ ಪ್ರವರ್ತಿಸುತ್ತಿದ್ದಾರೆ. ಇವರ ನಡತೆಯನ್ನು ನಾವು ಸಮಗ್ರವಾಗಿ ತಿಳಿದು ವಿಚಾರಣೆಮಾಡಬೇಕು” ಎಂದು ತಮ್ಮ ಅಪ್ತೇಷ್ಟರಲ್ಲಿ ಹೇಳಿ “ಸ್ವಜನಕ್ಕೆ ಅಧಿಕಾರಕೊಟ್ಟಿದ್ದರಿಂದ ಈ ತೊಂದರೆ ಸಂಭವಿಸಿದೆ. ಇವರ ಅಧಿಕಾರವನ್ನು ಕೊನೆಗಾಣಿಸಬೇಕು” ಎಂದುಕೊಳ್ಳುತ್ತಿದ್ದರು. ಅರಮನೆಯಲ್ಲಿಯೇ ಬೆಳೆದವರಾದುದರಿಂದ ಇವರಿಗೆ ಶೌರ್ಯವೂ ಅನುಭವವೂ ಸಾಕಾದಷ್ಟಿರಲಿಲ್ಲ; ಪ್ರಬಲರಾಗಿದ್ದ ಕಳಲೆ ಮನೆತನದವರ ಸೊಕ್ಕನ್ನು ಮುರಿಯಲು ತಕ್ಕ ಸಂಧಾನಸಮರ್ಥರು ಯಾರೂ ಇವರ ಆಪ್ತಮಂಡಲಿಯಲ್ಲಿರಲಿಲ್ಲ. ದೊರೆಗಳು ಇವರೊಡನೆ ಯೋಚನೆಮಾಡಿದಾಗ ಕೆಲವರು “ಸಮಯ ನೋಡಿ ಇಬ್ಬರು ಸೋದರರನ್ನೂ ಉಪಾಯದಿಂದ ಹಿಡತರಿಸಿ; ನಿರ್ಬಂಧದಲ್ಲಿಡುವುದೇ ಪರಮೋಪಾಯ” ವೆಂದು ಸಲಹೆಕೊಟ್ಟರು. ಈ ಗುಪ್ತಾಲೋಚನೆಗಳ ಸುದ್ದಿಯು ದೇವರಾಜಯ್ಯನಿಗೆ ಗೂಢಚಾರರ ಮೂಲಕ ತಿಳಿಯಿತು. ಆಗ ಈತನು ರಾಜರಿಗೆ ಇಂತಹ ಪ್ರಯತ್ನಗಳನ್ನು ಮಾಡಬಾರದೆಂದೂ ಆಪ್ತರಂತಿದ್ದ ದುರ್ವತ್ರಿಗಳನ್ನು ಕೆಲಸದಿಂದ ತಪ್ಪಿಸಬೇಕೆಂದೂ ಹೇಳಿಸಿದನು. ಇದನ್ನು ಕೇಳಿದ ದೊರೆಗಳು ಕೋಪಗೊಂಡು ತಿರಸ್ಕಾರವನ್ನು ತೋರುವಂತೆ ಮಾತನಾಡಿದರು. ರಾಜರಿಗೆ ಸ್ವಂತ ಮೈಗಾವಲಿನ ದಳದವರ ಸ್ವಾಧೀನರಾಗಿದ್ದರು; ಆಪ್ತವರ್ಗದವರಲ್ಲಿ ಕೆಲವರು ಮತ್ತೆ ಕೆಲವರಭಟರನ್ನು ಕೂಡಿಸಿ ಕೊಟ್ಟರು. ಇಷ್ಟರಿಂದಲೇ ರಾಜರು ತಾವು ಶಕ್ತಿವಂತರೆಂದು ತಿಳಿದಿದ್ದರು.
ದೊರೆಗಳ ಹಿರಿಯ ಪತ್ನಿ ದೇವಾಜಮ್ಮಣ್ಣಿಯವರು ದೇವರಾಜಯ್ಯನ ಮನೆಯಲ್ಲಿಯೇ ಬೆಳೆದಿದ್ದವರು. ಈ ಸಮಯರಲ್ಲಿ ಗರ್ಭಿಣಿಯಾಗಿದ್ದುದರಿಂದ ಆಕೆಯು ದೇವರಾಜಯ್ಯನ ಮನೆಯಲ್ಲಿಯೇ ಇದ್ದರು. ರಾಜರ ಪ್ರವರ್ತನೆಯನ್ನು ಕಂಡು, ದೇವರಾಜಯ್ಯನು ಹಿಂದೆ ಚಾಮರಾಜ ಒಡೆಯರ ವಿಷಯದಲ್ಲಿ ಪಶ್ಚಾತ್ತಾಪಡುತ್ತಿದ್ದನಾದುದರಿಂದ ನಿದಾನಿಸಿ, ಪುನಃ ಒಳ್ಳೆಯ ಮಾತುಗಳನ್ನ ಹೇಳಿಸಿಯೇ ರಾಜರ ವಿರೋಧ ಪ್ರಯತ್ನವನ್ನು ನಿಲ್ಲಿಸಲು ಯತ್ನಿಸಿದನು. ಆದರೆ ದೇವರಾಜನು ಮೃದುವಾಗಿ ಹೇಳಿಸಿದಂತೆ ರಾಜರು ತಾವು ಬಲಿಷ್ಠರೆಂದಂದುಕೊಂಡು ನಿಷ್ಟುರವಾಗಿ ಮಾತನಾಡುತ್ತಿದ್ದರು. ಈ ನಿಷ್ಟುರವಾದ ಮಾತುಗಳನ್ನು ದೇವರಾಜಯ್ಯನು ಸಹಿಸಿಕೊಂಡಂತೆ ಕಲಾಚೂರಿ ನಂಜರಾಜಯ್ಯನು ಸಹಿಸಲಿಲ್ಲ; ಶೀಘ್ರವಾಗಿ ರಾಜರನ್ನು ಕೊನೆಗಾಣಿಸಬೇಕೆಂದು ಯೋಚಿಸುತ್ತ ಒಂದು ಉಪಾಯವನ್ನು ಯೋಚಿಸಿದರು. ಏನಂದರೆ ಮುಂದೆ ಪಟ್ಟವು ತನ್ನ ಮಗುವಿಗೇ ಆಗುವುದೆಂದು ಭರವಸೆಕೊಟ್ಟು ದೇವಾಜಮ್ಮಣ್ಣಿಯನ್ನು ಒಪ್ಪಿಸಿ ಆಕೆಯ ಕೈಯಿಂದ ದೊರೆಗಳಿಗೆ ವಿಷವನ್ನಿಡಿಸಬೇಕೆಂಬುದು. ಇದರಿಂದ ಸದ್ದಿಲ್ಲದೆ, ಹೆಚ್ಚು ತೊಂದರೆಯಿಲ್ಲದೆ ಕಾರ್ಯವು ಕೈಗೂಡುವುದೆಂದು ಕರಾಚೂರಿಯಾತನ ಯೋಚನೆ. ಇದನ್ನು ತಂದೆಯವರ ಇಷ್ಟವೆಂದು ದೇವಾಜಮ್ಮಣ್ಣಿಗೆ ತಿಳಿಸಿದ ಕೂಡಲೆ ಆಕೆಯು ಕೋಪಗೊಂಡಳು; ಪತಿವ್ರತೆಯಾಗಿದ್ದ ಆಕೆಗೆ ಈ ಮಾತುಗಳು ಕಿವಿಗೆ ಶೂಲಗಳಂತಿದ್ದವು. ಆಕೆಯು ಕೋಪ ಗೊಂಡದ್ದೇ ಅಲ್ಲದೆ ತನ್ನ ಪತಿಗೆ ಏನೋ ಅನಿಷ್ಟಸಂಭವಿಸಲಿರವುದೆಂದು ತಿಳಿದು ತನ್ನನ್ನು ಗಂಡನ ಮನೆಗೆ ಸೇರಿಸುವವರೆಗೂ ಉಪವಾಸವಿರುವದಾಗಿ ನಿಶ್ಚಯಿಸಿ ಹಟಮಾಡಿದಳು. ಕರಾಚೂರಿಯಾತನ ಈ ಆಲೋಚನೆಯು ಕೆಟ್ಟಿತು. ದೇವರಾಜಯ್ಯನಿಗೆ ಪ್ರಾಯಶಃ ಇದು ತಿಳಿಯಲೇ ಇಲ್ಲ; ಏಕೆಂದರೆ ಅಣ್ಣನ ನಿದಾನವು ನಂಜರಾಜಯ್ಯನ ಮನಸ್ಸಿನಲ್ಲಿ ಅಸಮಾಧಾನವನ್ನು ಹುಟ್ಟಿಸಿತ್ತು. ಅಣ್ಣನಿಗೆ ತಿಳಿಸದೆಯೇ ಗೋಪ್ಯವಾಗಿ ಈ ಕೆಲಸವನ್ನು ತೀರಿಸಿ ಬಿಡಬಹುದೆಂದು ನಂಜರಾಜಯ್ಯನು ಈ ಬಗೆಯ ಯೋಚನೆಯನ್ನು ಮಾಡಿದ್ದು; ಯೋಚನೆಯು ವಿಫಲವಾಗಿ ದೇವಾಜಮ್ಮಣ್ಣಿಯು ಹಟಹಿಡಿದ ಕೂಡಲೆ ನಂಜರಾಜಯ್ಯನು ಮನಸ್ಸಿನಲ್ಲಿ “ಇನ್ನು ವಿಳಂಬಮಾಡಬಾರದು. ಧೂರ್ತತನದಿಂದಲಾದರೂ ರಾಜರ ಅಧಿಕಾರವನ್ನು ಕೊನೆಗಾಣಿಸತಕ್ಕದ್ದೇ ಸರಿ” ಎಂದುಕೊಂಡು ತನ್ನ ಸೈನ್ಯವನ್ನು ಸಿದ್ಧಗೊಳಿಸಿಕೊಂಡು ಆತುರಪಟ್ಟನು. ದೇವರಾಜಯ್ಯನು “ಪೂರ್ವದಲ್ಲಿ ಚಾಮರಾಜ ಒಡೆಯರನ್ನು ಬಂಧಿಸಿ ಕಾಬ್ಬಾಳ ದುರ್ಗಕ್ಕೆ ಕಳುಹಿಸಿದಾಗಿನಿಂದ ನಮಗೆ ಅಪಖ್ಯಾತಿಯಿದೆ. ಅದನ್ನು ಹೆಚ್ಚಿಸುವ ಕೆಲಸವನ್ನು ಈಗ ನಾವು ಮಾಡಬಾರದು” ಎಂದು ಹೇಳಿದ್ದು ಕರಾಚೂರಿಗೆ ಸರಿಬೀಳಲಿಲ್ಲ. ತೀವ್ರವಾಗಿಯೇ ರಾಜನಿಗೆ ತಕ್ಕ ಶಾಸ್ತಿಯನ್ನು ಮಾಡಬೇಕೆಂದು ಅಣ್ಣನ ಹಿತವಾದವನ್ನು ಕೇಳದೆ ಸೈನ್ಯವನ್ನು ತೆಗೆದುಕೊಂಡು ಕೋಟೆಯ ಬಳಿಗೆ ಬಂದು ಹೆಬ್ಬಾಗಿಲ ಎದುರಿನಲ್ಲಿ ನಾಲ್ಕು ಫಿರಂಗಿಗಳನ್ನು ನಿಲ್ಲಿಸಿದನು. ಅರಮನೆಯವರು ತಕ್ಕ ಸನ್ನಾಹಮಾಡಿಕೊಂಡು ಎದುರಿಸಲು ಸಿದ್ಧರಾದರು. ಆಗ ನಂಜರಾಜಯ್ಯನು ಅರಮನೆಯ ಮೇಲೆಯೇ ಗುಂಡು ಹಾರಿಸಿ, ಕೋಟೆಯ ಬಾಗಿಲನ್ನು ಮುದ್ದು ಸುಟ್ಟು ಹಾರಿಸಿ ಒಳಕ್ಕೆ ನುಗ್ಗಿದನು. ಅರಮನೆಯಲ್ಲಿದ್ದ ರಾಜನ ಅನುಚರರು ಅಂತಃಪುರದ ಕಡೆಗೊಡಿದರು. ಆಗ ನಂಜರಾಜಯ್ಯನು ಆರಮನೆಯೊಳಗೆ ಬಂದು ರಾಜರನ್ನು ಕರೆಸಿ ಬಲವಂತದಿಂದ ಪೀಠದಲ್ಲಿ ಕುಳ್ಳಿರಿಸಿ ಧೂರ್ತವಿನಯದಿಂದ ನಮಸ್ಕರಿಸಿ ಅರಮನೆಯನ್ನು ಹುಡುಕಿ ಸಿಕ್ಕ ಗಂಡಸರೆಲ್ಲರನ್ನೂ ಹಿಡಿದು ಬನ್ನಿ” ಎಂದು ತನ್ನ ಸೈನಿಕರನ್ನು ಕಳುಹಿಸಿದರು. ಅವರು ಹಾಗೆಯೇ ಹುಡುಕಿ ಅನೇಕರನ್ನು ಎಳೆದುತಂದರು. ಅವರಲ್ಲಿ ಕೆಲವರಿಗೆ ರಾಜರೆದುರಿನಲ್ಲಿ ಸಂಕೋಲೆಗಳನ್ನು ಹಾಕಿಸಿದಮೇಲೆ ಉಳಿದವರ ಕಿವಿಮೂಗುಗಳನ್ನು ಕತ್ತರಿಸುವಂತೆ ಆಜ್ಞೆ ಮಾಡಿದನು. ಅವನ ಭಟರು ಹಾಗೆಯೇ ಕುಯ್ಯುತ್ತಿರಲು ರಾಜರು ಇದೆಲ್ಲವನ್ನೂ ನೋಡಿ ಸಹಿಸಿಕೊಂಡಿರಬೇಕಾಗಿತ್ತು. ತರುವಾಯ ನಂಜರಾಜಯ್ಯನು ಅಣಕಿಸುವ ಸ್ವರದಿಂದ “ಮಹಾಸ್ವಾಮಿಯವರೇ! ಇನ್ನು ಮುಂದೆ ನಿಮ್ಮ ಆಪ್ತರಾಗಿ ಊಳಿಗಮಾವತಕ್ಕವರು ಇವರು” ಎಂದು ತನ್ನ ಕಡೆಯವರನ್ನು ತೋರಿಸಿ ಪುನಃ ನಮಸ್ಕಾರಮಾಡಿ ಒರಟುತನದಿಂದ ಹೊರಟು ಹೋದನು.
ನಂಜರಾಜಯ್ಯನ ಪ್ರವರ್ತನೆಯನ್ನು ಕೇಳಿ ದೇವರಾಜಯ್ಯನು ಮನಸ್ಸಿನಲ್ಲಿ ಮರುಗಿ! ನಾನೆಷ್ಟು ತಡೆದರೂ ಈ ಮೂರ್ಖನ ಮಾಡಬಾರದ ಕೆಲಸಗಳನ್ನೇ ಮಾಡುತ್ತಿದ್ದಾನೆ. ಇವರ ಸಂಗಡ ಇದ್ದು ಅಪಖ್ಯಾತಿಯನ್ನು ಕಟ್ಟಿಕೊಳ್ಳುವುದಕ್ಕಿಂತ ದೂರವಾಗಿರುವುದೇ ಲೇಸು” ಎಂದು ನಿರ್ಧರಮಾಡಿಕೊಂಡನು. ತನ್ನ ಸಂಸಾರವನ್ನೂ ಆಪ್ತರನ್ನೂ ಕರೆದುಕೊಂಡು, ೧೦೦೦ ರಾವು ತರೂ ೨೦೦೦ ಕಾಲಾಳುಗಳೂ ಇದ್ದ ಪರಿವಾರವನ್ನು ಕರೆಸಿಕೊಂಡು ಶ್ರೀರಂಗಪಟ್ಟಣವನ್ನು ಬಿಟ್ಟು ಹೊರಟು, ಗಜ್ಜಲಹಟ್ಟಿಯ ಮಾರ್ಗವಾಗಿ ಪ್ರಯಾಣಮಾಡಿ, ಸತ್ಯಮಂಗಲವನ್ನು ಸೇರಿ, ಅಲ್ಲಿಯೇ ನೆಲೆಸಿ ರಾಜಧಾನಿಗೆ ದೂರವಾಗಿರಬೇಕೆಂಬ ತನ್ನ ಇಷ್ಟವನ್ನು ಪೂರಯಿಸಿ ಕೊಂಡನು.
ಇತ್ತ ರಾಜಧಾನಿಯಲ್ಲಿ ನಂಜರಾಜಯ್ಯನು ತಾನೇ ತಾನಾದನು. ಆದರೆ ಸ್ವಲ್ಪ ಕಾಲದಲ್ಲಿ ಮರಾಟೆಯವರು ಮುತ್ತಿಕೊಂಡು ಬಂದರು. ಅವರನ್ನು ಪ್ರತಿಭಟಿಸಲಾರದೆ ನಂಜರಾಜಯ್ಯನು ಹಣತರಲು ಪ್ರಯತ್ನಿಸುತ್ತಿದ್ದ ವೇಳೆಯಲ್ಲಿ ಹೈದರಲ್ಲಿಯು ದಕ್ಷಿಣ ಪ್ರಾಂತ್ಯದಿಂದ ಬಂದು ರಾಜಧಾನಿಯಲ್ಲಿ ಸಿದ್ಧನಾದನು. ನಂಜರಾಜಯ್ಯನು ಇನ್ನು ಮುಂದೆ ಹೈದರನಿಗೆ ಸೋಲುವ ಪ್ರಸಂಗ ಬಂತು.
*****


















