
(ಮೊದಲು ಮಾತು)
ಮೈಸೂರು ವಿಶ್ವವಿದ್ಯಾಲಯದವರು ಪ್ರಕಟಿಸಿದ ನಾಗವರ್ಮನ ‘ಕಾದಂಬರೀ ಸಂಗ್ರಹ’ವನ್ನು ಓದುತ್ತಿದ್ದಾಗ ನನ್ನಲ್ಲಿ ಈ ದೃಶ್ಯದ ಮೂಲ ಕಲ್ಪನೆಯು ಹೊಳೆಯಿತು. ಅದಕ್ಕೂ ಮೊದಲು ಅತಿಭೌತಿಕ ಪ್ರೇಮ ವಾದಿಗಳು ವರ್ಣಿಸುವ `ಅಸುವಿನೊಲುಮೆ’ಯನ್ನು ಕುರಿತು ಧೇನಿಸುತ್ತ ಬಂದಿದ್ದೆ. ಪ್ರೀತಿಯು ಕೇವಲ ಮಾನಸಿಕವಾಗಿರಲಾರದು; ದೈಹಿಕವೂ ಆಗಿರಲಾರದು. ಇವೆರಡರ ಸಮಾಗಮವೇ ನಿಜವಾದ ಪ್ರೀತಿಯೆಂದು ನನಗೆನಿಸಿತ್ತು. `ಕಾದಂಬರೀ ಸಂಗ್ರಹ’ವನ್ನು ಓದುತ್ತಿರುವಾಗ ನನಗೊಂದು ಮಾರ್ಪಾಟು ತೋಚಿತು. ಜಾಬಾಲಿ ಋಷಿಗಳ ಮಾತನ್ನು ಕೇಳಿ ಸ್ವರೂಪ ಜ್ಞಾನವನ್ನು ಹೊಂದಿದ ವೈಶಂಪಾಯನ ಶುಕವು ಲಕ್ಷ್ಮೀದೇವಿಯ ಕೈಯಲ್ಲಿ ಸಿಕ್ಕು ಶೂದ್ರಕನೆಡೆಗೆ ತೆರಳುವದಕ್ಕಿಂತ ಮಹಾಶ್ವೇತೆಯ ಕಡೆಗೆ ಹಾರಿ ಬರಬಾರದೇಕೆ? ಹೀಗಾಗಲು ಅದೊಂದು ‘ಅಸುವಿನೊಲುಮೆು’ಯ ದೃಷ್ಟಾಂತವಾಗುವದು. ಇತ್ತ ಮೂಲದಲ್ಲಿಯೇ ಕಾದಂಬರಿಯು ಚಂದ್ರಾ ಪೀಡನ ಮೃತ ದೇಹವನ್ನು ಪರಾಂಬರಿಸುತ್ತ ಕುಳಿತಿದ್ದಾಳೆ. ದೇಹವು ದಿನದಿನಕ್ಕೆ ಕಾಂತಿಯುತವಾಗುತ್ತಲಿದೆ. ಆದರೆ ಅವಳು ನಲ್ಲನ ಆತ್ಮವನ್ನು ಕಳೆದುಕೊಂಡವಳು! ಇವರೀರ್ವರ ಜೀವನದಲ್ಲಿ ಕಂಡ ಕೊರತೆಯನ್ನೂ ಅದು ಸುಖದಲ್ಲಿ ಕೊನೆಗಾಣುವ ಬಗೆಯನ್ನೂ ಚಿತ್ರಿಸಿದರೆ ನಾನು ಕಂಡು ಕೊಂಡ ಪ್ರೀತಿಯ ಆದರ್ಶವು ಚೆನ್ನಾಗಿ ಬಿಂಬಿತವಾಗುವದೆಂದು ತಿಳಿದು ಈ ದೃಶ್ಯವನ್ನು ಬರೆದೆನು. ಕಥೆಯಲ್ಲಿ ನಾನು ಮಾಡಿದ ಮುಖ್ಯವಾದ ಮಾರ್ಪಾಟು, ಮಹಾಶ್ವೇತೆಗೆ ಸಂಬಂಧಿಸಿದ್ದೊಂದೇ. ಉಳಿದ ಸಣ್ಣ ಪುಟ್ಟ ಬದಲಾವಣೆಗಳು ಅದರ ಮೂಲಕ ಬರುವವು.
ಕೆಲವು ಮಟ್ಟಿಗೆ ಬದಲಿಸಿದ ಕಥೆಯು ಇಲ್ಲಿದೆ. ಆದರೆ ಈ ದೃಶ್ಯದ ಮುಖ್ಯ ವಸ್ತುವು ಆ ಕಥೆಯಲ್ಲ, ನಾನೇ ಕಲ್ಪಿಸಿದ ಸನ್ನಿವೇಶಗಳು, ಅವುಗಳನ್ನು ಪುಷ್ಟಗೊಳಿಸಲು ಮಾತ್ರ ಕಥೆಯು ಹಿನ್ನೆಳಲಾಗಿದೆ. ಮೊದಲನೆಯ ಪ್ರವೇಶದಲ್ಲಿ ಮೂಲದಲ್ಲಿಯಂತೆ ಕಾದಲರ ಸಮಾಗವುವಾಗುವದು, ಹೆಚ್ಚು ಕಡಮೆ ಆದೇ ಕಾರಣಗಳ ಸಲುವಾಗಿ. ಆದರೆ ಅದಕ್ಕೆ ಮೊದಲು ಜರಗುವ ವೃತ್ತಾಂತವೆ ನಾನೇ ಕಲ್ಪಿಸಿದ್ದು. ಎರಡನೆಯ ಪ್ರವೇಶದಲ್ಲಿ, ಕಥೆಯೂ ಸಹ ಬಹುಮಟ್ಟಿಗೆ ನನ್ನದು. ಮೂರನೆಯ ಪ್ರವೇಶದಲ್ಲಿ, ಗಂಧರ್ವ ಲೋಕದಲ್ಲಿ ವಿವಾಹವಾಗುವದೆಂಬ ಸೂಚನೆಯು ಮೂಲದೊಳಗಿನದು. ಉಳಿದುದೆಲ್ಲ ನಾನು ಕಲ್ಪಿಸಿದ್ದು. ಮೂಲದೊಡನೆ ಸ್ಪರ್ಧೆಯನ್ನು ಹೂಡಿದೆನೆಂದು ಮಾತ್ರ ಈ ಹೇಳಿಕೆಯ ಮೇಲಿಂದ ಯಾರೂ ತಿಳಿಯಬಾರದು. ನಾನು ಬರೆದ ರೀತಿಯನ್ನು ವಿವರಿಸಿದೆನು. ಇಷ್ಟೆ. ಮೂಲ ಕಥೆಯ ಸಾರಾಂಶವನ್ನು ಇಲ್ಲಿ ಕೊಟ್ಟಿದೆ. ಅದರೊಡನೆ ದೃಶ್ಯವನ್ನು ಹೋಲಿಸಿ ನೋಡಿದರೆ ಸಾಮ್ಯ-ವ್ಯತ್ಯಾಸಗಳು ಗೊತ್ತಾಗುವವು.
ಮೊದಲನೆಯ ಪ್ರವೇಶದೊಂದಿಗೆ ದೃಶ್ಯವನ್ನೂ ಮುಗಿಸುವ ವಿಚಾರವಿದ್ದಿತು. ಆದರೆ `ನಾನು ಅರಸ; ನೀನು ಅರಸಿ’ ಎಂಬ ನನ್ನ ಒಂದು ಇಂಗ್ಲಿಷ ಕವಿತೆಯ ಅನುವಾದವು ನನಗೆ ಎರಡನೆಯ ಪ್ರವೇಶದ ಕಲ್ಪನೆಯನ್ನು ಕೊಟ್ಟಿತು. ಮುಂದೆ ಕವಿತೆಯನ್ನೂ ಆ ಪ್ರವೇಶದಲ್ಲಿ ಸೇರಿಸಿದೆ. ನಾನು ಸ್ವತಂತ್ರವಾಗಿ ಬರೆದಿದ್ದ ‘ಕಿನ್ನರಿಯರ ಹಾಡು’ ಮೂರನೆಯ ಪ್ರವೇಶವನ್ನು ಬರೆಯಲು ಅವಕಾಶವನ್ನು ಕಲ್ಪಿಸಿಕೊಟ್ಟಿತು. ಕಾರಣ ಆ ಹಾಡನ್ನೂ ಅದರಲ್ಲಿ ಸೇರಿಸಿದೆ.
ದೃಶ್ಯಕಾವ್ಯದ ಅಂಗವು ಈ ರೂಪಕದಲ್ಲಿ ಹೆಚ್ಚಾಗಿದ್ದುದರಿಂದ ಇದನ್ನು ಒಂದು ಕವನಾತ್ಮಕ ದೃಶವೆಂದು ಕರೆದಿದ್ದೇನೆ. Masque (ನಾಟಿಕೆಯ) ದ ರೀತಿಯಾಗಿ ಇದು ಅಭಿನಯಿಸಲು ಯೋಗ್ಯವಾಗಿದೆಯೆಂದು ಕೆಲವರು ನನಗೆ ಹೇಳಿದ್ದಾರೆ. ಅದು ಪ್ರಯೋಗಾಂತ್ಯದಲ್ಲಿ ನೋಡಬೇಕಾದ ಮಾತು.
ಇಲ್ಲಿಯ ನೇಪಥ್ಯ ವಿಧಾನ ಸೂತ್ರಗಳನ್ನು ನಾಗವರ್ಮನಿಂದ ಆಯ್ದು ಕೊಂಡಿದೆ. ನಮ್ಮ ಪ್ರಾಚೀನ ಕವಿಗಳು ನೋಟಗಳನ್ನು ಚಿತ್ರಿಸುವದರಲ್ಲಿ ಪ್ರವೀಣರು; ವಾಸ್ತುಶಿಲ್ಪವನ್ನೇ ಕಾವ್ಯದಲ್ಲಿ ತಂದಿರುವವರು. ಬಾಣ ಕಾದಂಬರಿಯನ್ನು ಅನುವಾದಿಸುವಲ್ಲಿ ಸಹ ನಾಗವರ್ಮನ ಶೈಲಿಯು ಚಿತ್ತಾಕರ್ಷಕವಾಗಿದೆ. ನನಗೆ ಬೇಕಾದ ಸನ್ನಿವೇಶಗಳನ್ನು ನಾನು ಕಲ್ಪಿಸಿ ಕೊಂಡ ಮೇಲೆ ಅವುಗಳಿಗೆ ಸರಿಹೋಗುವ ವರ್ಣನೆಯನ್ನೂ ಭಾಷೆಯನ್ನೂ ಆದಷ್ಟು ಮಟ್ಟಿಗೆ ನಾಗವರ್ಮನ ಶಬ್ದಗಳಲ್ಲಯೇ ಎತ್ತಿಕೊಂಡಿದ್ದೇನೆ. ಅವು ಒಂದೆಡೆಗೆ ದೊರೆಯುವದಿಲ್ಲ; ‘ಕಾದಂಬರಿ ಸಂಗ್ರಹ’ದಲ್ಲೆಲ್ಲ ಹರಡಿ ಕೊಂಡಿವೆ. ನಾನು ಕಲ್ಪಿಸಿದ ಸನ್ನಿವೇಶಗಳೇ ಇವುಗಳನ್ನು ಪವಣಿಸುವ ಸೂತ್ರಗಳಾಗಿವೆ. ಮೂರನೆಯ ಪ್ರವೇಶದ ನೇಪಥ್ಯ ಸೂತ್ರಗಳಿಗಾಗಿ ಮಾತ್ರ ಅಷ್ಟೊಂದು ಸಾಮಗ್ರಿಯು ನಾಗವರ್ಮನಲ್ಲಿ ಸಿಕ್ಕಲಿಲ್ಲ. ಅಲ್ಲದೆ ಈ ಅವತರಣಕ್ರಮವನ್ನು ಕೇವಲ ನೇಪಥ್ಯ ಸೂತ್ರಗಳಲ್ಲಿ ಮಾತ್ರ ಯೋಜಿಸಿದೆ. ಅದಕ್ಕೂ ನಾನುಬರೆದ ಪ್ರವೇಶಗಳಿಗೂ ಯಾವ ಸಂಬಂಧವೂ ಇಲ್ಲ.
ಮೂಲ ಕಥೆಯ ಸಾರಾಂಶವನ್ನು ಇಲ್ಲಿ ಕೊಟ್ಟಿದ್ದೇನೆ. “ಇಲ್ಲಿಯ ಕಥಾನಾಯಿಕೆಯರಿಬ್ಬರೂ ದೇವವರ್ಗದವರು. ಮಹಾಶ್ವೇತೆಯು ಹಂಸ ನೆಂಬ ಗಂಧರ್ವನ ಹಾಗು ಗೌರಿಯೆಂಬ ಅಪ್ಸರಿಯ ಮಗಳು; ಕಾದ೦ಬರಿಯು ಚಿತ್ರರಥನೆಂಬ ಗಂಧರ್ವ ರಾಜನ ಕುವರಿ. ಪುಂಡರೀಕ-ಚಂದ್ರಾಪೀಡರು ಇವರ ಪತಿಗಳು. ಇವರು ಮಾನವರಾದರೂ ದೇವಾಂಶವಿದ್ದವರು. ಚಂದ್ರನು ಪುಂಡರೀಕನಿಂದ ಶಾಪ ಹೊಂದಿ ಚಂದ್ರಾಪೀಡನಾಗಿ ಹುಟ್ಟುವನು. ಕಾದಂಬರಿ-ಚಂದ್ರಾಪೀಡರ ನಡುವೆ ಪರಸ್ಪರ ಪ್ರೀತಿಯು ಬೆಳೆಯುವದು. ಆದರೆ ತನ್ನ ಗೆಳೆಯನು ದುಃಖಕ್ಕೀಡಾದುದನ್ನು ತಿಳಿದ ಕೂಡಲೆ ಕಾದಂಬರಿಯನ್ನು ಲಗ್ನವಾಗುವದಕ್ಕಿಂತ ಮುಂಚೆ ಚಂದ್ರಾ ಪೀಡನು ದೇಹತ್ಯಾಗ ಮಾಡುವನು; ಶೂದ್ರಕ ರಾಜನಾಗಿ ಹುಟ್ಟುವನು ಶಾಪವಿಮೋಚನೆಯಾದ ಬಳಿಕ ತನ್ನ ಚಂದ್ರಾಪೀಡ ದೇಹವನ್ನು ಪಡೆದು ಕಾದಂಬರಿಯನ್ನು ಮದುವೆಯಾಗುವನು. ಇತ್ತ ವಿರಹತಾಪದಿಂದ ಚಂದ್ರನ ಕಾಟಕ್ಕೆ ಈಡಾಗಿ ಮರಣ ಹೊಂದಿದ ಪುಂಡರೀಕನು ಚಂದ್ರನು ಚಂದ್ರಾಪೀಡನಾಗಿ ಹುಟ್ಟಿದಾಗ ಅವನ ನೇಹಿಗನೂ ಮಂತ್ರಿಕುವರನೂ ಆದ ವೈಶಂಪಾಯನನಾಗಿ ಹುಟ್ಟುವನು. ಮಹಾಶ್ವೇತೆಯನ್ನು ನೋಡಿದಾಗ ಪೂರ್ವ ಜನ್ಮ ಸಂಸ್ಕಾರ ಬಲದಿಂದ ಅವಳ ವಿಷಯವಾಗಿ ವೈಶಂಪಾಯನನಲ್ಲಿ ಮೋಹವು ಉಂಟಾಗುವದು. ಇವನು ಪರಪುರುಷನೆಂದು ತಿಳಿದ ಮಹಾಶ್ವೇತೆಯು “ಶುಕವಾಗಿ ಹುಟ್ಟೆಂ”ದು ವೈಶಂಪಾಯನನನ್ನು ಶಪಿಸುವಳು. ವೈಶಂಪಾಯನನು ಗಿಳಿಯಾಗಿ ಹುಟ್ಟಿ ಶಾಪವಿಮೋಚನೆಯಾದ ಮೇಲೆ ಮರಳಿ ಪ್ರಂಡರೀಕನಾಗಿ ಮಹಾಶಾ್ವೆತೆಯನ್ನು ವರಿಸುವನು.
ವಿನಾಯಕ
ಪುಣೆ
೧೦-೧೧-೧೯೩೪
ಮಹಾಶ್ವೇತೆ
ದೃಶ್ಯ ೧
[ದೃಶ್ಯ: ಕೈಲಾಸಶಿಖರದ ಬಳಿಯಲ್ಲಿರುವ ಅಚ್ಛೋದ ಸರೋವರದ ಸುತ್ತಲಿನ ಪ್ರದೇಶ. ಅಲ್ಲಿ ಲಲಿತ ಲತಾಗೃಹಗಳ ನಡುವೆ ಒಂದು ಸಿದ್ಧಾಯತನವಿರುವದು. ಅದರಿಂದ ಕಿಂಚಿತ್ ದೂರದಲ್ಲಿ ಕಾಲದ ಮಬ್ಬಿನಂತೆ ಹಬ್ಬದ ತಮಾಲವಸಗಳ ಮಧ್ಯದಲ್ಲಿ, ಭೃಂಗಾಳಿಯ ಗಾನದಿಂದ ನಿತ್ಯವಾಗಿ ಮಧುರವಾಗುತಿರುವ ಪುಷ್ಪಲತಾಗೃಹಗಳಿಂದ ಶೋಭೆವೆತ್ತು, ಚಂದ್ರಿಕಾಜಾಲದಂತೆ ಸುರಿದು ಬರುವ ನಿರ್ಝುರಾಸ್ಫಾಲನಸೀಕರದಿಂದ ಅಲಂಕೃತವಾದ ಒಂದು ಗುಹೆಯು ಕಾಣುತ್ತಿದೆ. ಆ ಬೃಹದ್ಗುಹಾಂಗಣದಲ್ಲಿ ಎರಡು ಸುರೆಭೂಜವಲ್ಯ ವಸನಗಳು, ಒಂದು ದಂಡ, ಒಂದು ಜೋಗವಟ್ಟಿಗೆ, ಒಂದು ಕಮಂಡಲು, ಒಂದು ಭಸ್ಮಶಯ್ಯೆ, ಶಶಿಮಂಡಲಾಕೃತಿಯನ್ನು ತಳೆದ ಒಂದು ಶಂಖದ ಪಾತ್ರೆ,-ಇಷ್ಟು ವಸ್ತುಗಳು ಕಂಡುಬರುವವು. ಭಿಕ್ಷಾಪಾತ್ರೆಯ ತುಂಬ ಅಮೃತರಸಸ್ವಾದುಗಳಾದ ಫಲಗಳಿರುವವು.
ಗುಹಾಂಗಣದಲ್ಲಿಯೇ ತುಸು ಮೇಲಕ್ಕೆ ತೂಗು ಹಾಕಿದ ಕನತ್ಕನಕ ಪಂಜರದಲ್ಲಿ ಒಂದು ಗಿಳಿಯಿದೆ. ಗಿಳಿಗಾಗಿ ಕೇವಲ ಶಯ್ಯಾಗಾರನೆಂದೇ ಈ ಪಂಜರದ ರಚನೆಯಾಗಿವೆಯೆಂದು ಹೇಳಬಹುದು. ಏಕೆಂದರೆ ಅದಕ್ಕೆ ದ್ವಾರವಲ್ಲ… ಒಂದು ಮಗ್ಗಲು ಯಾವಾಗಲೂ ತೆರೆದೇ ಇದೆ. ಈ ತೆರೆದ ಭಾಗಕ್ಕೆ ಹೊಂದಿ ಒಂದು ನೀಳವಾದ ಅಗಲವಾದ ಚಿನ್ನದ ಹಲಿಗೆಯಿದೆ. ಈ ಗಿಳಿಯ ಹೆಸರು ವೈಶಂಪಾಯನ. ಆದಕ್ಕೆ ಅತಿಸ್ಪಷ್ಟವರ್ಣ ಸಂಸ್ಕಾರವಿರುವ ವಾಣಿಯಿದೆ, ‘ಸಕಲಾಂಗವೇದವಿದಂ’
ಮುಂತಾಗಿ ಆದರ ವರ್ಣನೆಯೇ ಇದೆ.
ಆ ಪಂಜರದ ಹತ್ತಿರ ಒಂದು ಶಿಲಾಪಟ್ಟದ ಮೇಲೆ ದಿವ್ಯ ತಪಸ್ವಿನಿಯಾದ ಮಹಾಶ್ವೇತೆಯು ಕುಳಿತಿದ್ದಾಳೆ. ಕೈಯಲ್ಲಿ ಒಮ್ಮೆ ಪುಂಡರೀಕನು ಧರಿಸುತ್ತಿದ್ದ ಅಕ್ಷಾವಳಿಯುಂಟು. ಒಮ್ಮೆ ಬನದ ಕಡೆಗೆ, ಒಮ್ಮೆ ಗಿಳಿಯ ಕಡೆಗೆ ನೋಡುತ್ತ ಮಹಾಶ್ವೇತೆಯು ಆಲೋಚನಾಪರಳಾಗಿ ಕುಳಿತಿದ್ದಾಳೆ. ಮತ್ತೊಮ್ಮೆ ಚಂದ್ರಾಪೀಡನ ಜಡದೇಹವನ್ನು ರಕ್ಷಿಸುತ್ತ ಕಾದಂಬರಿಯು ಕುಳಿತ ದಿಕ್ಕಿನೆಡೆಗೆ
ದಿಟ್ಟಿಯನ್ನು ಚೆಲ್ಲುವಳು.
ವಸಂತಕಾಲವಾಗಿದ್ದುದರಿಂದ ವಿರಹಿಣಿಯರ ನೋವು ಹೆಚ್ಚುತ್ತಲಿದೆ. ಬನದಲ್ಲಿಯ ಅಶೋಕ ವೃಕ್ಷಗಳು ಕೆಂದಳಿರನ್ನು ತಳೆದಿವೆ. ಲತಾವಳಿಗೆ ಲಾಸ್ಯಾರಂಭವನ್ನು ತಂದುಕೊಡುತ್ತ, ಅಚ್ಛೋದ ಸರೋವರದ ನವೋತ್ಪಲಪ್ರಸರದಲ್ಲಿ ದಿವ್ಯಾಮೋದವನ್ನು ಹೊಂದುತ್ತ ತಣ್ಣೆಲರು ಊದುತ್ತಿದೆ. ಮಧುಪ್ರಾತಾಳಿಯೂ ಮದೋತ್ಕಕೋಕಿಲ ಕದಂಬಕವೂ ವಿಜೃಂಭಿಸುತ್ತಿರಲು ಇಳೆಯನ್ನು
ನೋಡಲು ರಸಾತಳದಿಂದ ತಲೆಯೆತ್ತಿದ ನಾಗರಾಜನ ಹೆಡೆಯಲ್ಲಿ ಹೊಳೆವ ಅರುಣಕಿರಣಮಣಿ ಮಂಡಲದಂತೆ ಇಂದುಮಂಡಲವು ಉದಯಿಸುವದು. ಕ್ಷಣಮಾತ್ರದಲ್ಲಿ ಆಗಸವನ್ನು ಸುಧೆಯಿಂದ ಲೇಪಿಸುವಂತೆ ಉರ್ವೀಚಕ್ರವನ್ನು ಪಯಃಪ್ರಸರಾಪೂರದಲ್ಲಿ ತೇಲಿಸುವಂತೆ, ದಸೆಗಳನೆಲ್ಲ ಚಂದನಾ ಸಾರದಿಂದ ಮುಸುಕುವಂತೆ ಬೆಳ್ವೆಳಗು ರೋದೋಂತದಲ್ಲೆಲ್ಲ ಹಬ್ಬುವದು.
ಆಗ ಗುಹೆಯ ಒಳಭಾಗದಲ್ಲಿ ತರಳಿಕೆಯು ಮಲಗಿರುವದು ಕಂಡುಬರುವದು.
ಗುಹೆಯ ಎದುರಿನಲ್ಲಿರುವ ಶಾಲ್ಮಲ ವೃಕ್ಷದಮೇಲೆ ಒಂದು ಗಿಳಿವಿಂಡು ಕುಳಿತಿರುವದು. ಹತ್ತಿರದ ಮರಗಳ ಮೇಲಿಂದ ಕೆಲವು ಕೋಕಿಲಗಳು ಕುಕಿಲುತ್ತಿರುವವು.)
ಒಂದು ಕೋಕಿಲ:
ಮೇಲೆ ಬಂದ ಚಂದ್ರಮಾ!
ಬಾರೆ! ಬಾ! ಮನೋರಮಾ!
ಮರದ ತುದಿಗೆ ಕೂಡುವಾ!
ಒಂದು ಹಾಡ ಹಾಡುವಾ।
ಬಾರೆ! ಬಾ! ಮರೋರಮಾ!
ಮೇಲೆ ಬಂದ ಚಂದ್ರಮಾ!
(ಹಾರಿಹೋಗುವದು),
ಗಿಳಿವಿಂಡು:
ಮರದಲ್ಲಿ ಮಲಗುವದು, ಮುಗಿಲಲ್ಲಿ ತಿರುಗುವದು,
ಅಲೆಯುವದು ನಮ್ಮ ಹಿಂಡು!
ಹೆಣ್ಣಿಹೆವು; ಗಂಡಿಹೆವು; ಗಿಳಿ-ಮಾನವರ ನಡುವೆ
ಮತ್ತೇಕೆ ಹೆಣ್ಣು-ಗಂಡು?
ನಾವು ಗಳಹುವೆವೆಂದು ಗಳಪುವನು ಮಾನವನು;
ನುಡಿಯಲಾವಿನಿದನಿಯಲಿ
ತಳಿರುಡೆಯ, ಹೂಮುಡಿಯ ತಳೆಯುತ್ತ ಮಾಮರವು
ನಿವಿರುವದು ನನೆಕೊನೆಯಲಿ.
ಓದಿ ಪಂಡಿತವಕ್ಕಿಯಾಗದಿರೆಲೇ; ಹಕ್ಕಿ!
ಜಾತಿಗಿಹ ಪ್ರೀತಿಯಿರಲಿ!
ಮನುಕುಲದ ದನಿಗೇಳಿ ಶುಕಸಂಕುಲದ ಬರವ
ಮರೆವುದರ ಭೀತಿಯಿರಲಿ!
ಮನವಿದ್ದೋ ಇಲ್ಲದೆಯೊ ಸೇರಿರುವೆ ಗುಹೆಯನ್ನು;
ನಿಂತು ಯೋಗಿನಿಯ ಬಳಿಗೆ!
ರೆಕ್ಕೆಗಳು ಜೋಲ್ದಿಹವು, ಪುಚ್ಚಗಳು ಕಂದಿಹವು;
ನಿಂತಿರುವದಲ್ಲೊ ಬೆಳಿಗೆ!
ಹಸಿರ್ಮುರಿವ ಮೆಯ್ಯೆಲ್ಲ ಹಸೆಗೆಟ್ಟು ಹೋಗಿಹುದು;
ದೆಸೆಗೆಟ್ಟು ಹೋಗಬೇಡ!
ಹಿಂಡಿನಲಿ ಭೂರಮೆಯು, ಇಹಳಾ ಮನೋರಮೆಯು!
ಇವರ ಗೀಳ್‌ಮಾಡಬೇಡ!
ಬೆಳಗು ಬಹ ಜಾವದಲಿ, ಒಂದು ಸದ್ಭಾವದಲಿ,
ಗಿಳಿಯೆ೦ಬ ಹೇವದಿಂದ
ತಳಿರ್ಗೆಂಪು ಕಾವಣದಿ ನಿನಗಾಗಿ ಕಾದಿಹೆವು;
ಬಾ! ಬಾರೊ! ಜೀವದಿಂದ!
(ಹಾರಿ ಹೋಗುವುದು)
ವೈಶಂಪಾಯನ:
(ಪಂಜರದಲ್ಲಿ ರೆಕ್ಕೆಗಳನ್ನು ಬಡೆದು ವ್ಯಾಕುಲಗೊಳ್ಳುತ್ತ)
ಮಹಾಶ್ವೇತೆ!
ಕೊಲ್ಲೆನ್ನ ಕಮಲನಯನೆಯೆ! ಇಲ್ಲದಾಗಿಸು!
ಜಾತಿಸ್ಮರವಿದು ವಿರಕ್ತಿಗೆ ಹೇತುವೆಂಬುಸಿರು
ಬಯಲಾಗುತಿದೆ. ಸ್ಮರನ ತಾಪಕೆದೆಯುರಿಯುತಿದೆ.
ಮುನಿಯುಸಿರಿನಿಂದ ತಿಳಿವಂಕುರಿಸುವದಕಿಂತ
ಮೊದಲೆನ್ನ ಜನಕನನು ಮುರಿದೊಗೆದ ಮುದಿವೇಡ
ನೆನ್ನೇತಕುಳಿಸಿದನೊ! ಇನಿತರೊಳು ಕಾದಲ್ಮೆ
ಪರಿಪೂರ್ಣವಿರುತಿತ್ತು. ಪುಂಡರೀಕನೆ ಆಗಿ
ನಿನ್ನ ಮರೆ ಹೊಗುತಿದ್ದೆ, ಕೊಂದು ಸಲಹುವದೀಗ!
ಮಹಾಶ್ವೇತೆ:
(ದುಃಖದಿಂದ)
ತಾಳ್ಮೆಯಿರಲೆನ್ನೊಡೆಯ!
ಎರಡು ಕೊಲೆಗಳ ಪಾಪವೆನ್ನುಡಿಯಲಿರುತಿರಲು
ಅದ ಹೆಚ್ಚಿಸುವದಿದೆಯೆ! ನಿಮ್ಮನಗಲಿಸಿ ಕೊಂದೆ.
ಎನ್ನಪ್ಪುವಾಸೆಯಿರೆ ಸಾಗಿಬರುತಿಹ ನಿಮಗೆ
ಶಪಿಸಿ ಸಾಯಿಸಿ ಬಿಟ್ಟು ಗಿಳಿಯ ರೂಪವನಿತ್ತೆ.
ಇನ್ನೇನನೆಸಗುವದು ತನ್ನ ನಲುಮೆಯ ಮಿಡಿಯ
ತಾನೆ ತಿರಿದಿಹ ಪಾಪಿ? ತಾಯಿ ಲಕ್ಷ್ಮೀದೇವಿ
ಮರುಹುಟ್ಟಿ ತಳೆದು ಶೂದ್ರಕನಾಗಿ ಬಾಳುತಿಹ
ಚಂದ್ರನನು ಕಂಡು ಸತ್ಯವನರುಹಿ ತನ್ನ ನಿಜ
ಮಂಡಲವನುಗುವಂತೆ ಅನಿತರೊಳು ಗೆಯ್ದೆಮ್ಮ
ಕೋಟಲೆಯ ನೀಗಿಸುವಳೆಂದಾ ಕಪಿಂಜಲರು
ಅಭಿವಚನವಿತ್ತಿಹರು. ಮತ್ತೆ ನಿಮ್ಮಯ ತಂದೆ
ಎಸಗುತಾಯುಷ್ಕಾಮಹೋಮವನು ಕಾಮಿತಾ-
ರ್ಥವನು ಪೂರೈಸಲೆಂದನುಗೊಳುತಿಹರು ನಿತ್ಯ.
ಇಂದು ಮಂಡಲದೊಳಿಂದಿಗು ಕಾಂತಿಗೊಳುತಿರುವ
ದೇಹವನು ತಳೆದು ನೀವ್ ಬರುವದನು ಕಣ್ಣಾರೆ
ಕಾಣ್ವ ಪರ್ವದ ಗಳಿಗೆ ಬರಬಹುದು, ನಲ್ಲ!
ವೈಶಂಪಾಯನ:
ಉದಿಸುವ ಸುಧಾಸೂತಿಬಿಂಬದೆಡೆಯಿಂದಾಗ
ಬಂದ ಧ್ವನಿಯನು ನಂಬಬೇಕೆಂದು ನುಡಿಯುತಿಹೆ.
ಇತ್ತ ಜಾಬಾಲಿಗಳು ಕಾಮಿತ್ವದಿಂದಾನು
ದೇವತ್ವಗೆಟ್ಟಿರುವೆನೆಂದು ತಿಳಿಹೇಳಿದರು.
ಬೇಟದೆಸಕವನವರು ಗುರುತಿಸಿಲ್ಲವು, ಬಾಲೆ!
ಶ್ವೇತಕೇತುಕುಮಾರನಾಗುತ ಮಹಾಶ್ವೇತೆ!
ನಾ ನಿನ್ನ ಪ್ರೀತಿಸಿದೆ; ಫಲ ಒಂದುದಿಲ್ಲದಕೆ.
ಪ್ರೇಮದೇಳ್ಗೆಗೆ ನನ್ನ ತಪವು ಸಾಲದೆ ಹೋಯ್ತು.
ಅಧಕಂತೆ ಗಿಳಿಯಾಗಿ ಕೊಳೆಯುವೆನು, ಅಕಟಕಟ!
ರತಿಕಾರರೊಲುಮೆಗಳು ತೊರೆದು ನಿಂತಿಹವೆಮ್ಮ.
ನೋಡಿಹೆನು ನೂರು ಸಲ, ನಲ್ಲೆ! ನಿನ್ನಯ ಪ್ರೀತಿ
ಮೇರೆವರಿದಿರೆ, ನನ್ನ ನಪ್ಪಿ ಮುದ್ದಿಡಲೆಂದು
ಪಂಜರದ ಬಳಿ ಸಾರಿ, ಶುಕದೇಹವನು ಕಂಡು
ಪ್ರಜ್ಞೆ ಬರೆ, ಕಂಗೆಟ್ಟು ಕರಕಮಲದಿಂದೆತ್ತಿ
ಉದ್ಬಾಷ್ಪ ದೃಷ್ಟಿಯಿಂದೆನ್ನ ಮೊಗವನ್ನು ನೋಡಿ
ಕಿರುಳನೆನ್ನಯ ಮೆಯ್ಯ ತಳಿರ್ವಿಡಿಸುವಂತಪ್ಪಿ
ತಲೆಯ ಮೇಲೆನ್ನ ಕಾಲ್ಗಳನಿಟ್ಟು ರೋದಿಸಿದೆ;
ತೊಡೆಯಮೇಲೆನ್ನ ಕೂರಿಸಿಕೊಳುತ ನೊಂದಿರುವೆ.
ಈಗ ನನ್ನಕ್ಷಮಾಲೆಯ, ದಂಡಪಾತ್ರೆಗಳ
ಕೊಳುತ ಯೋಗಿನಿಯಾದ ಕಮಲಲೋಚನೆ! ನಿನ್ನ
ಗಿಳಿಯಂತೆ ನಿರುಪಾಯನಾಗಿ ಕಾಣುವದೆನಗೆ
ಶುದ್ಧ ರವರವ ನರಕ! ಬಾಳು ಮಸಣದ ಬೀಳು!
ಮಹಾಶ್ವೇತೆ:
(ಕಣ್ಣೀರು ಸುರಿಸುತ್ತ)
ತಾಳುವದು ನನ್ನೊಡೆಯ!
ನಿಮ್ಮಕ್ಷಮಾಲೆಯನ್ನು ಪಡೆದು ಧರಿಸಿರುವಂತೆ
ನೀವಿತ್ತ ಪುಷ್ಪಮಂಜರಿಯನೊಳಕೊಂಡಿಹೆನು.
ಅಶರೀರರಿರಲು ಬಯಸುವ ಜಗದ ಕಾದಲರು
ಆತ್ಮಗಳ ಕೂಟವೊಂದಿರಲೆಂದು ದೇವನೆಡೆ
ಮೊರೆಯಿಟ್ಟುದರಿತಿಹೆನು. ಸಾಧಿಸಿಹೆನಾವದನು.
ದೇಹಗಳ ಪರಮೈಕ್ಯವೆಮಗೆ ಸಂಧಿಸದಿರಲು
ವಿವಿಧ ಜೀವಾಲಾಪನೆಯಲಿ ಕಾಲವ ಕಳೆದು
ಪ್ರೇಮದಮೃತವನಷ್ಟೆ ಮನಗಾಣಲೆಳಸುವೆವು.
ವೈಶಂಪಾಪಾಯನ:
(ಆಕ್ರೋಶದಿಂದ)
ಅಯ್ಯೊ! ಇದು ಬರಿ ಹುಚ್ಚು! ಸಿಗ್ಗಿಲ್ಲದರ ನೆವವು!
ಕಾಮದಿಂದೆನ್ನ ದೇವಾಂಶವಳಿದಿಹುದೆಂಬ
ನುಡಿಗೇಳಿ ಗಿಳಿಯಾದುದೊಂದು ಚೆನ್ನಾಯ್ತೆಂದು
ಹಾರಿ ನಿನ್ನೆಡೆ ಬಂದು ಮೋಹವಿನಿಸಿಲ್ಲದಲೆ
ಅಸುವಿನೊಲುಮೆಯನೆಸಗಿ ಎನಿತೊ ದಿನ ಬದುಕಿದೆನು.
ನಿನ್ನೊಡನೆ ಸಂಕಥಾ ವೇದಗಳನೋದಿದೆನು.
ಆಗ ಎದೆಯೊಲವಣಕಿಸುತ್ತ ನುಡಿದಿತು ನನಗೆ:
“ಎಲ್ಲಿ ನಿನ್ನಯ ಪ್ರೇಮ?” ಲತೆಗಳನು ತೀಡುತಿಹ
ಸುಯ್ಯೆಲರು ಕೇಳಿತ್ತು: “ಏಕೆ ವೇದದ ಮಂಕು?”
ಪಸಲುಗವಿದಿಹ ಬನದೊಳಿರುವ ಶುಕಸಂಕುಲವು
ಉಸುರಿತ್ತು: “ಇಲ್ಲಿ ಬಾ! ಗಿಣಿರಾಮ! ನಾವಿಹೆವು!”
ವೇದಶಾಸ್ತ್ರವನೆಲ್ಲ ಮರೆಯಲೆಳನಸಿದೆನಂದು.
ಮಾತೆಸಗಿ ಮಾತೆಸಗಿ ಬೇಸರಿಟ್ಟಿತು ಮನವು.
“ಮಾತಿನಲಿ ಮೋದವಿದೆಯೆಂದು ತಿಳಿದ ಪ್ರವೀಣ!
ಮಾತೆಸಗು. ನಾವಿಂತು ಇಂಚರವನೆಸಗುವೆವು”
ಎಂದು ಪಿಕ ಹಾಡಿದವು. ಮಿಗಿಲಾಯ್ತುು ರಣರಣಕ.
ತವಸಿಯಾಗುತ ನಿನ್ನೊಳೊಸೆದು ಪ್ರಾಣವ ತೊರೆದು
ನವೆದು ನಿಂತಿಹ ನಾನು ಮಾತಿನಲಿ ಪ್ರೇಮವನು
ಕಾಂಬುದೆ, ಮಹಾಶ್ವೇತೆ? ಕೃತಕ ಪ್ರೀತಿಯು ಸಾಕು,
ಕೊಲ್ಲೆನ್ನ! ಕಮಲನಯನೆಯೆ! ಇಲ್ಲದಾಗಿಸು!
ಮಹಾಶ್ವೇತೆ:
(ದುಃಖವು ಮಿತಿಮೀರಿ ಎದ್ದು ಗಿಳಿಯ ಪಂಜರದ ಬಳಿಗೆ ಹೋಗಿ)
ಅಹುದಹುದು, ನನ್ನೊಡೆಯ! ನನ್ನ ಬಳಲಿಕೆ ಇದುವೆ.
ಅಚ್ಚರಸೆಯಾದ ಗೌರಿಯ ತನುಜೆ, ನಾನಿಂತು
ನಿಮಗೊಲಿದ ಪರಿಯೇನು? ನಿಮ್ಮಂಥ ಮಾನವರ
ದಿವ್ಯಸ್ವರ್ಶದಿ ಸ್ವರ್ಗತೂಗಿ ತೊನೆದಾಡುವದು.
“ಕಾದಂಬರಿಯು ನಿತ್ಯ ಕಾಂತಿಯುತವಾಗುತಿಹ
ಕಾದಲನ ದೇಹವನು ಎದುರಿರಿಸಿ ಪೂಜಿಸುತ
ಆತ್ಮವೈತರಲೆಂದು ಹಾರೈಸಿ ನೊಂದಿಹಳು;
ನನ್ನ ಬಾಳುವೆ ಚೆನ್ನು; ನನ್ನಿಕಾರನ ಜೀವ
ಶುಕವಾಗಿ ಮಾತನಾಡುವದೀಗ” ಎಂದಿದ್ದೆ.
ಸಂತಸವು ಹುಸಿಯಾಯ್ತು. ಬರಲಿರುವ ನಲ್ದೊರೆಯ
ಮುಂಗುರುಳುಗಳ ತೀಡಿ ಕರಕಮಲಗಳ ತಟ್ಟಿ
ಬಾಳ್ವ ಕಾದಂಬರಿಯೆ ಧನ್ಯಳಲ್ಲವೆ, ನಲ್ಲ!
ನೀವಿಂತು ಗಿಳಿಯಾದಿರೆನ್ನ ಕರ್ಮದ ಬಲದಿ.
ಈಗ ನನಗಿಹುದೊಂದೆ:- ಪಾಪಕರ್ಮವು ಗೆಯ್ದ
ಘೋರಾಪರಾಧವನು ನೋಡಿ ಕಳೆಯದ ಬಾಳು!
(ಅಳುವಳು)
ವೈಶಂಪಾಯನ:
ಅಳದಿರು, ಮಹಾಶ್ವೇತೆ! ರೋಹಿಣೀವಲ್ಲಭನ
ಶಪಿಸಿರುವ ದಿನವೆನಗೆ ಮನವರಿಕೆಯಾಗಿಹುದು!
ಕಣ್ಣೀರು ಸುರಿಸದಿರು, ಕುಪಿತನಾಗದಿರೆಂದು.
ಇದನರಿತ ಬಾಳುವೆಯು ಶಿಲೆಯಾಗುತಿದೆ, ಶಿಲೆಯು!
ನಾನೀಗ ಶುಕವಲ್ಲ, ಹರಿತ ಶಿಲೆಯೊಂದು ಮುರಿ.
ಮಹಾಶ್ರೇತೆ:
(ಅಳುತ್ತ)
ಹಾಗಲ್ಲ, ಮನದರಸ! ‘ಅರಗಿಳಿಯೆ! ಬಾರೆಂದು
ನೀವೆನ್ನ ಜೆಲುವಿಕೆಯ, ನಿಡಿದೋಳ್ಗಳಲಿ ತೂಗಿ
ಕುಣಿಸುತಿರಬೇಕಿತ್ತು! ನೀವೆ ಗಿಳಿಯಾದಿರಿ!
ಅಂಗಲಾವಣ್ಯದಲಿ ಮನ್ಮಥನ ದೊರೆವೆತ್ತ
ನಿಮ್ಮ ಮುಂಗೈ ಮೈಲೆ ರತಿಯಂಥ ಸಾರಿಕೆಯು,-
ನಾ ನಲಿಯಬೇಕಿತ್ತು. ಹಾ! ದುರ್ವಿಪಾಕವೆ!
ಇ೦ತೀಗ ಪಂಜರದೊಳಿಟ್ಟು ನಿಮ್ಮನು ಸಲುಹಿ
ಬಾಳುವಂತದ ಸಮಯ ಬಂದೀತೇ, ವಿಧಿಯೆ!
ವೈಶಂಪಾಯನ:
ಪಂಜರದಲಿಹೆನೆಂದು ನೋಯದರು, ಮನದನ್ನೆ!
ಅದು ನನ್ನ ಬೇಡಿಕೆಯು. ಪಂಜರದ ಬಳಿಸಾರಿ
ನೀನಿಂತು ನಿಂತಿರಲು ನೀನೊಂದು ಶುಕವೆಂದು
ಒಂದು ಕ್ಷಣವಾದರೂ ಬಗೆಯುವೆನು. ನಿನ್ನುಳಿದ
ದೇಹಸೌಷ್ಠವಗಳನು ಕಾಣದಲೆ ಮೊಗವೊಂದೆ
ತೋರುತಿರೆ:- ನಿನ್ನ ಮೂಗಿನ ತೆನೆಯ, ತುಟಿಗೆಂಪ,
ಮೊಗದಾವರೆಯ ಕಂಪ, ಕಣ್ಣ ನೇರಿಲ್ವಣ್ಣ-
ನನುಭವಿಸಿ ಶುಕಕುಲದ ಪ್ರೇಮರಾಜ್ಯವಿದೆಂದು
ಕನವರಿಸಿ ನಿಲ್ಲುವೆನು. ನಿನ್ನ ಮುಖಚಂದ್ರಮನೆ
ನೀನೆಂದು ತಿಳಿಯುವೆನು. ಆದರೆ, ಮುಹಾಶ್ವೇತೆ!
ಕನಸು ಕ್ಷಣಭಂಗುರವು. ನಾನು ಮಾನಿಸನಾಗಿ
ಇನ್ನೆಂದು ಜನಿಸುವೆನೊ! ಇಲ್ಲದಿರೆ ಶುಕವಾಗಿ
ನೀನೆನ್ನನಸುಸರಿಸು. ಬನಬನಗಳಲಿ ತಿರುಗಿ
ಮನದಣಿಯೆ ಪ್ರೀತಿಸುವ. ಆಗಸಕೆ ಗುರಿಯಿಟ್ಟು
ಸೃಷ್ಟಿಯಿಲ್ಲದ ದೆಸೆಗೆ ಸೃಷ್ಟಿಯನು ವಿರಚಿಸುವ!
ಮಹಾಶ್ವೇತೆ:
(ದುಃಖಿತಳಾಗಿ)
ಬೇಡ ಬೇಡೆನ್ನ ದೊರೆ! ಮನದ ಜ್ವಾಲಾಮುಖಿಯ-
ನಿಂತು ಕೆರಳಲು ಬೇಡ. ಸಂಕಟಕೆ ಕಾರಣವು!
ಉಸುರುತಿಹುದೊಳದನಿಯದೊಂದು: ತುಸು ತಡೆಯೆಂದು!
(ವೈಶಂಪಾಯನನ ಮೇಲೆ ಕಯ್ಯಾಡಿಸುವಳು)
ವೈಶಂಪಾಯನ:
ತಡೆಯೆನು, ಮಹಾಶ್ವೇತೆ! ನೋಡಿತ್ತ! ಚಂದ್ರಮನ
ಹಾವಳಿಯು ಭಳಿರೆಂದು ಕರೆಯುತಿದೆ, ಸುರಿಯುತಿದೆ.
ಬಂದೆನಿಗೊ! ಎಲೆ ಚಂದ್ರಹತಕ! ನಿನ್ನೆಡೆ ಬಂದೆ!
ನನ್ನ ದೇಹವನಿಂತು ಸೆರೆಯಿರಿಸಿ ತೊಳಲ್ಪಡಿಸಿ
ಕಾಡುತಿಹೆ. ಸುಲಿಗೆಗೊಳುತಾ ನಿನ್ನ ಮಂಡಲವ
ನನ್ನ ದೇಹವ ಕೊಂಡು ಪೂತಾತ್ಮನಾಗುವೆನು!
[ಪಂಜರದಿಂದ ಹೊರಗೆ ಬಂದ ಗಿಳಿಯು ಆಕಾಶದಲ್ಲಿ ಹಾರಿ ಮುಗಿಲ ಮಧ್ಯದಲ್ಲಿ ತೇಲಿ ಬಂದಿರುವ ಚಂದ್ರಮಂಡಲದೆಡೆಗೆ ಹೋಗಲೆಸಗುವದು. ಆಗ ಮಹಾಶ್ವೇತೆಯು ಉನ್ಮಾದದಿಂದ ಗುಹಾಂಗಣವನ್ನು ಬಿಟ್ಟು ಓಡಿ ಬಂದು ಮೋರೆಯನ್ನು ಮೇಲೆತ್ತಿ ಗಿಳಿಯ ಕಡೆಗೆ ಎರಡು ಕೈಗಳನ್ನು ನೀಡಿ ಆಕ್ರೋಶಿಸುವಳು.]
ಮಹಾಶ್ವೇತೆ:
ತೆರಳದಿರು! ನನ್ನ ಪ್ರಾಣದ ಗಿಳಿಯೆ! ತೆರಳದಿರು!
ನೀನಿಲ್ಲದಿರೆ ಭೂಮಿ ಮಸಣವಟ್ಟೆಯು, ಮತ್ತೆ
ದಶದಿಶೆಗಳತಿ ಶೂನ್ಯ! ವಾಯುಪಥದಲಿ ಹಾರಿ
ಮೃತನಾಗಿ ಬೀಳದಿರು. ಎಲೆ ನೃಶಂಸನೆ! ಚಂದ್ರ!
ಪತಿದೇಹವನು ತುಡುಗಿನಿಂದೊಯ್ದ ಕುಟಿಲನಿಹೆ!
ಪತಿಪ್ರಾಣವನು ಮಾತ್ರ ಬಯಸದಿರು. ಬಲು ಜೋಕೆ!
[ಮೇಲಿನಿಂದ ಸಾವಕಾಶವಾಗಿ ಗಿಳಿಯ ದೇಹವು ಮಾತ್ರ ಬಂದು ಮಹಾಶ್ವೇತೆಯ ಕೈಗಳಲ್ಲಿ ಬೀಳುವದು]
ಇದು ಏನು? ರೆಕ್ಕೆಗಳು! ಪುಚ್ಚಗಳು! ಯಾರ ಗಿಳಿ?
ಇದು ಎಲ್ಲಿ ಪಯಣವನು ಬೆಳೆಸಿತ್ತು? ಹಾ! ತಿಳಿದೆ!
ನಲ್ಲ ಗಿಳಿಯಿಹನೆಂಬ ಕನಿಕರದ ಮನವಂದು
ಬೇಳ್ದಿತ್ತು. ಇಂದಿಗೋ! ಗಾಳಿಯಲಿ ಕೊಳಲೂದಿ
ರೂಪವಿಲ್ಲದೆ ಮನೋವಲ್ಲಭನ ಪ್ರಾಣಗಳು `
ರುದ್ರನಾಟ್ಯವನೆಸಗಿ ಕರೆಯುತಿವೆ. ಏನೆನಲಿ?
ಬಳಿ ಮುಗಿಲನಪ್ಪಲೆ? ಬಯಲೆ ಶರಣೆನ್ನಲೆ?
ವಾರಿಧಿಯ ಬೀಳಲೆ? ಪೂರ್ತಿಗೊಳದಾಸೆಯೆ!
ಎಲ್ಲಿಹುದು ನಿನ್ನಮೃತಕಲಶವಿಹ ಮೂರ್ತಿ!
[ಮೂರ್ಚ್ಛೆಹೋಗುವಳು. ತರಳಿಕೆಯು ಚೇತರಿಸಿಕೊಂಡು ಮಹಾಶ್ವೇತೆಯು ನಿಶ್ಚೇಷ್ಟಿತಳಾಗಿ ಬಿದ್ದ ತಾಣದೆಡೆಗೆ ಬರುವಳು.]
ತರಳಿಕೆ:
(ಸ್ವಗತ)
ಇದನೇನು ತಂದೆ, ವಿಧಿ! ದೇವಿಯೊರಗಿಹಳಲ್ಲ!
ಅಚ್ಚ ಬೆಳುದಿಂಗಳಲಿ ವಿರಹವೆಚ್ಚತ್ತಿಹುದು.
ಇನ್ನೆನ್ನಿತು ಸಹಿಸಬೇಕೆಂದಿಹುದೊ ದೈವಲಿಪಿ!
ಗಿಳಿಯಾಣ್ಮನಿಲ್ಲೇಕೆ? ಅಹಹ! ಮೃತನಾಗಿಹನು.
ಅದಕಂತೆ ದೇವಿಗೀ ಪರಿತಾಪ ಬಂದಿಹುದು.
[ಹತ್ತಿರವಿದ್ದ ಒಂದು ಕೊಳದಿಂದ ನಳಿನೀಪತ್ರ ಪುಟದಲ್ಲಿ ನೀರನ್ನು ತಂದು ಮಹಾಶ್ವೇತೆಯ ನಾಸಿಕದ ಮೇಲೆ, ಮೋರೆಯ ಮೇಲೆ, ಮೆಲ್ಲನೆ ನೀರೆರೆಯುವಳು.]
ಕೈಯಲುಗಿಸಿದಳಲ್ಲ! ನಭಕೆ ನೆಗೆದವಳುಸಿರು
ಮನೆ ಸೇರುತಿದೆ ಮತ್ತೆ. ಚೇತರಿಸಿಕೊಳು, ತಾಯೆ!
[ಉಪಚರಿಸುವಳು. ಆಗ ಆಚ್ಛೋದ ಸರೋವರದ ಕಡೆಯಿಂದ ಮೆಲ್ಲನೆ ಕಾದಂಬರಿಯ ಸ್ವರವು ಕೇಳಿ ಬರುವದು.]
ಕಾದಂಬರಿಯ ಹಾಡು
ನಿನ್ನ ಮೋರೆಯಲಿಹುದು ಗೆಳೆತನದ ಕಳೆಯು.
ನಿನ್ನ ಕಂಗಳಲಿಹುದು ನಲುಮೆಗಳ ಹೊಳೆಯು.
ಹೊಳೆಹೊಳೆವ ಕಾಂತಿಯನು ತಳೆದ ಸುಕುಮಾರ!
ನಿನಗಾಗಿ ಕಾಯುತಿದೆ ರತುಸಗಳ ಹಾರ!
ಇಲ್ಲಿ ತಾನೊರಗಿಹುದು ಸುಕುಮಾರ ದೇಹ.
ಎಲ್ಲಿ ಮನೆಮಾಡಿಕೊಂಡಿರುತಿಹುದು ನೇಹ?
ದೇವನಿಲ್ಲದ ಗುಡಿಗೆ ಮರಗುವದು ಮನವು.
ಕಾವನಿಲ್ಲದೆ ತೀವಿ ಬಹುದು ಕ್ರಂದನವು.
ಪಲ್ಲವದ ಸೌಸವವು ನಿನ್ನ ತಳಿರಡಿಗೆ;
ಅದರ ನರುಗಂಪೆ ಸೋಂಕಿಹುದೆನ್ನ ಮುಡಿಗೆ.
ತಂಗದಿರ ಬಾರದಿಹನೇ ತಂಗುವನೆಗೆ?
ವ್ಯಂಗವಾಗಿಹುದೇನೊ ಆತ್ಮವದು ಕೊನೆಗೆ?
ಒರ್ವರಿಗೆ ಸ್ಫೂರ್ತಿಯಧಿವಾಸನವನಿತ್ತು
ಒರ್ವರಿಗೆ ಮೂರುತಿಯುಪಾಸನೆಯನಿತ್ತು
ನೋಡುತಿಹ ಮಾದೇವ! ಎಂದು ಬಹುದೊಸಗೆ?
ಎ೦ದೊದಗುವದು ಸ್ಫೂರ್ತಿ-ಮೂರ್ತಿಗಳ ಬೆಸುಗೆ?
ತರಳಿಕೆ:
(ಸ್ವಗತಪರವಾಗಿ)
ದೇವಿ ಮೆಯ್ಗರೆದಳೆನೆ ಅತ್ತ ಕಾದಂಬರಿಯು
ಶೋಕಗೀತೆಯನುಸುರುತಿಹಳಿಂತು, ದೈವವೆ!
ಪ್ರಣಯಿನಿಯರೊಲವ ಗುರುತಿಸದನಿತು ಕ್ರೂರನಿಹೆ!
(ಮಹಾಶ್ವೇತೆಗೆ)
ಜೇತರಿಸಿಕೋ, ದೇವಿ! ಎದ್ದೇಳು. ಈ ದುಃಖ
ಕಡೆಯಿಲ್ಲದಂತಿಹುದು. ನಿನ್ನ ಮನ ಸ್ತಿಮಿತವಿರೆ
ನಮಗೆಲ್ಲಿ ಸೈರಣೆಯು.
[ಗಿಳಿಯ ದೇಹವನ್ನು ಹಾರಿದ ತಾಣದಲ್ಲಿ ಇರಿಸುವಳು]
ಮಹಾಶ್ವೇತೆ:
(ಕಣ್ಣೆರೆದು ಎದ್ದು ಕುಳಿತು)
ಯಾರವರು! ತರಳಿಕೆ! ಈಗ ನಾವಿಹುದೆಲ್ಲಿ?
ತರಳಿಕೆ:
ತಿಂಗಳಿನ ಬೆಳಕಿನಲಿ ಅತಿ ಶಾಂತವಾಗಿರುವ
ಬನದಲಿಹ ಸಿದ್ರಾ ಸಿದ್ಧಾಯತನದ ಬಳಿ, ದೇವಿ!
ಮಹಾಶ್ವೇತೆ:
(ಏಳಲು ಪ್ರಯತ್ನಿಸುತ್ತ)
ಅಹುದು ನಡೆ, ತರಳಿಕೆ! ಅಯ್ಯೊ! ಮತ್ತಿಲ್ಲೇನು!
ನಭವು ರಣಗುಟ್ಟುತಿದೆ. ಬನಹಾಳು ಸುರಿಯುತಿದೆ.
ತಿಂಗಳನ ಬೆಳಕಲ್ಲ, ಎದೆಯನುರಿಸುವ ಬಿಸಿಲು
ದೆಸಗಳನು ವ್ಯಾಪಿಸಿದೆ. ಹಾ! ನನ್ನ ಅರಗಿಳಿಯೆ!
ನಿನ್ನನಗಲದೆ ಇರುವ ಬಾಳುವೆಯು ಕನಸಾಯ್ತೆ?
[ಕುಳಿತಲ್ಲಿ ಹಾಗೆಯೇ ಕಣ್ಣೀರು ಸುರಿಸುವಳು.]
ತರಳಿಕೆ:
(ಸ್ವಗತ)
ಇನ್ಸೇನನೆಸಗುವೆನು? ದೇವಿಯರ ಸಂತಾಪ-
ವೆಂದಿಲ್ಲದಂತಿಂದು ಮೇರೆಯನು ಮೀರಿಹುದು.
(ಗಟ್ಟಿಯಾಗಿ)
ಪದಕೆ ಬಿನ್ನವಿಸುವೆನು; ತಾಳುವದು, ದೇವಿ!
(ದುಃಖಿಸುವಳು)
[ಆಚ್ಛೋದ ಸರೋವರದ ಕಡೆಯಿಂದ ಹರ್ಷಭರಿತೆಯಾದ ಮಹಲೇಖೆಯು ಓಡುತ್ತ ಬರುವಳು.]
ಮದಲೇಖೆ:
ದೇವಿ! ಮಹಾಶ್ವೇತೆ!
ಮಹಾಶ್ವೇತೆ:
ಯಾರವರು? ಹೆಸರು ದೆಸೆಯಿಲ್ಲದೆನ್ನನು ಕಂಡು
ಹೆಸರೆತ್ತಿ ಕೂಗುವರು!
ಮದಲೇಖೆ:
ನಾನಕ್ಕ, ಮದಲೇಖೆ! ಇಂದೆಲ್ಲ ಮುಗಿದಿಹವು
ದುರದೃಷ್ಟದಾಟಗಳು. ಸೋಜಿಗದ ಸಂಗತಿಯ-
ನರುಹಲಿಲ್ಲಿಗೆ ಬಂದೆ! ಒಂದು ಯಾಮವು ಕಳೆದು
ಚಂದ್ರನುದಿಸಿರೆ, ದೇವಿ ಕಾದಂಬರಿಯ ಶೋಕ
ಮಿತಿ ಮೀರಿ, ದೇಹವನು ತ್ಯಜಿಸುವದೆ ಲೇಸೆಂದು,
ಇಲ್ಲದಿರೆ ಮನದಾಣ್ಮನುಳಿಸಲೇಳುವನೆಂದು
ನೋಂತು ಬಿಗಿದಪ್ಪಿದಳು ನಲ್ಲನನು. ಮುನಿವರನ
ಹೋಮ ಮುಗಿದಿರಬೇಕು; ಅಲ್ಲದೆಯೆ ಶೂದ್ರಕನ
ವಿಸ್ಮೃತಿಯ ಕಳೆದಿರಲು ಸಾಕು ಲಕ್ಷ್ಮೀದೇವಿ:
ಏನಿಹುದೊ ಕಾಣೆ, ಕಂಬನಿ ಸುರಿಸುತಿರಲಾವು
ನಿದ್ರೆ ತಿಳಿದಂತೆದ್ದ ದೇವ ಚಂದ್ರಾಪೀಡ;
ಲತೆಯಂತೆ ಸುತ್ತಿದಳು ಕಾದಂಬರೀ ದೇವಿ!
ಇಂತಿರುವ ಸುಖಕೆ ಬರುವಾನಂದ ಮಿಗಿಲೆನಲು
ಇಂದುಮಂಡಲದಿಂದ ದೇವಯಾನದಲಿಳಿದು
ಅಮೃತದೇಹನು ಬಂದ, ದೊರೆ ಪುಂಡರೀಕ!
ಕಂಬನಿಯ ಮಿಡಿ, ತಾಯೆ; ಚಿಂತೆ ಮಾಣ್ದಿಹುದಿನ್ನು.
ಇಲ್ಲಿಗೈತರುತಿಹನು ದೊರೆ ವಾಯುಪೇಗದಲಿ.
(ನಿಡಿದೋಳ್ಗಳನ್ನು ಮುಂದುವರಿಸಿದ ಪುಂಡರೀಕನು ಲಗುಬಗೆಯಿಂದ ಬರುವನು.)
ಪುಂಡರೀಕ:
ತೋಳ್ಗಳನು ತಕ್ಕೈಸಿ ಭೂಮಿವ್ಯೋಮವ ತಿರುಗಿ
ಮನದ ಕಿಚ್ಚನು ನಂದಿಸಲು ಮುಂದುಗಾಣದೆಯೆ
ಮರುಹುಟ್ಟುಗಳ ಕಳೆದು ನಿನ್ನೆ ಹೆಗೆ ಬಂದಿಹೆನು.
ಅಂದಿನಾ ಕೋಪವನು ನಟಿಸದಿರು, ನಲ್ಲೆ!
(ಆಲಂಗಿಸಿ ಮುತ್ತಿಡುವನು.)
ಮಹಾಶ್ವೇತೆ:
(ಪುಂಡರೀಕನ ಮುಂಗುರುಳನ್ನು ತೀಡುತ್ತ)
ಮಂದಗಮನದ ಚಂದಕೊಂದು ಸಲ ಮಾರಿದೆನು
ನಲುಮೆಯನು, ಮತ್ತೊಂದು ಸಲ ಮುಳಿಸು ಬೀರಿದೆನು.
ಅಳಿಯದಿರಲೆಂದಿಗೂ, ನಲ್ಲ! ನಿನ್ನಯ ರೂಪು!
ಪುಂಡರೀಕ:
ಅಮೃತಮಯ ಫಲಗಳನು ತಂದು ತಿನಿಸಿದ ಬಾಲೆ!
ಅಧರಾಮೃತವ ಪಾನ ಮಾಡಿ ಬಾಳುವೆನೀಗ,
ಅಮೃತಕಿರಣನ ಕಾಂತಿಯನು ದೇಹವಾಗಿಸುತ!
ಶೂನ್ಯವಾಗಿಹ ಭೂಮಿ ಲಲಿತವಾಯಿತು ಮತ್ತೆ!
ನಮ್ಮೀರ್ವರನುರಾಗವನು ಚಿತ್ರಿಸುವ ತೆರದಿ
ರೋದೋಂತವನು ಮುಸುಕಿ ನಸುಕು ಬರುತಿದೆ, ನೋಡು!
(ಹಿಂದೊಮ್ಮೆ ಪುಂಡರೀಕನು ವೈಶಂಪಾಯನನಾಗಿ ಬಾಳಿದ್ದಾಗ ಅವನಿಗಿದ್ದ ತಾಯಿತಂದೆಗಳು- ಶುಕನಾಸ ಮನೋರಮೆಯರು– ಬರುವರು. ತುಸು ಲಜ್ಜೆಯಿಂದ ಮಹಾಶ್ವೇತೆಯು ಬದಿಗೆ ಸರಿದು ನಿಂತು ನಮಸ್ಕರಿಸುವಳು.)
ಶುಕನಾಸ ಮತ್ತು ಮನೋರಮೆ:
ಚಿರಕಾಲವಾಗಿರಲಿ ಸುಖವಿದು, ಸುಮಂಗಲೆಯೆ!
ನಿನ್ನ ಪ್ರೀತಿಯ ಪುಣ್ಯದಿಂದೆಮ್ಮ ಸಂತಾನ.
ದಭ್ಯುದಯವಾಗಿಹುದು, ಬಯಕೆ ಪೂರೈಸಿಹುದು!
ಶುಕನಾಸ:
ನಿಮ್ಮೆಲ್ಲರನು ಕಾಣಲತಿ ತವಕಪಡುತಿರುವ
ದೊರೆಗಳನು ಮನ್ನಿಸುವ. ತ್ವರೆಮಾಡು, ಕಂದ!
ಪುಂಡರೀಕ:
ಅಹುದಹುದು, ನನಗಾಗಿ ಚಿಂತಿಸಿದ ದೊರೆಗಳನು
ಕಂಡು ಕಳೆಯಲು ಬೇಕು ಅವರ ಪರಿತಾಪವನು.
(ಎಲ್ಲರೂ ಹೋಗುವರು.)
—-
ದೃಶ್ಯ ೨
[ಗಂಧರ್ವ ಲೋಕದಲ್ಲಿ ಹೇಮಕೂಟದ ಮೇಲೆ ಶೋಭಿಸುವ ಚಿತ್ರರಥ ರಾಜಧಾನಿಯ ಸುತ್ತಲಿನ ಪ್ರದೇಶ. ಅಲ್ಲಿರುವ ಲೀಲಾಸರದಲ್ಲಿ ನೀರ್ವಿಜ್ಜಣಿಗೆಯ ತೆರದಿಂದ ತೆರೆಗಳು ಬೀಸುವವು; ಹಂಸದ್ವಯಗಳು ನಯನಮನೋಹರವಾಗಿ ಕಾಣುವವು; ನೀರ್ವಕ್ಕಿಗಳು ಉಲಿಯುವವು; ನೀಲ ನೀರೇಜಿನಿಗಳಲ್ಲಿಯ ಬಂಧುರಗಂಧವನ್ನು ಒಳಕೊಂಡು ಸುಯ್ಯೆಲರು ಬೀಸುತ್ತಿರುವದು. ಆ ಕಮಳಾ ಕರದ ಮಗ್ಗುಲಿಗಿರುವ ತಮಾಳವೃಕ್ಷಗಳಾಚೆಗೆ ಬಾಲಕದಳೀವನದ ಮಧ್ಯದಲ್ಲಿ ಒಂದು ಮುತ್ತಿನ ಪಡುಶಿಲೆಯ ಮೇಲೆ ಕಿನ್ನರದಂಪತಿಗಳು ಕುಳಿತಿರುವರು. ಬೆದರಿದಂತೆ ಅರಳೆಗಂಗಳಿಂದ ಕಿನ್ನರಿಯು ಸುತ್ತುವರಿದು ನೋಡುತ್ತಿರುವಳು. ಅದೇ ಚುಮು ಚುಮು ಮುಂದುವರಿಯುತ್ತಿರುವ ನಸುಕು ಕದಳೀವನದೆಲ್ಲೆಲ್ಲ ಪಸಲೆಗವಿಯುತ್ತಿರುವಂತೆ ತೋರುವದು.]
ಕಿನ್ನರಿ:
ಹೇ, ಎನ್ನ ಮನದರಸ, ಮತ್ತೆ ಬಂದಿತು ಬೆಳಗು.
ಬನದಡಿಗೆ ಕೂಡಿದರು, ಹೇಮಕೂಟದ ಮರೆಯ
ಸೇರಿದರು, ಬಂದಿಂತು ಕೆಣಕುವಳು ಅಚ್ಚರಸೆ!
ಶುಭ ವಸಂತದಲೆಮ್ಮ ನಲುಮೆ ನಲಿಯುವದೆನಲು
ತಿಂಗಳಿನ ಕಿರಿ ಬಾಳು ಸೋಲಿಸಿಹುದಾಸೆಗಳ.
ಕಣ್ದೆರೆದು ನಿಲ್ಲುವನಿತರೊಳು ಬರುವದು ನಸುಕು,
ನಮ್ಮ ಲೋಕದೊಳಿಂತು ಸಮನಿಸಿಹುದಿದೆ ಮೊದಲು.
ಇದರ ಕಾರಣವೇನು? ತಿಳಿದು ಬಲ್ಲೆಯ ನೀನು?
ಕಿನ್ನರ:
ತಿಳಿಯದಿದು, ಮನದನ್ನೆ! ನಿನ್ನೊಲಚ್ಚರಿಗೊಳುವೆ
ಅಣಕಿಸುವ ನಗೆ ನಗುತ ಬರುವ ಉಷೆಯನು ನೋಡಿ.
[ಹಾಡುವನು.]
ನಾನು ಅರಸ; ನೀನು ಆರಸಿ. ಎಸೆವ ಕೊಳದ ಬಳಿಯಲಿ,
ಬಂದ ಬನಗಳಡಿಯಲಿ,
ಇನಿಗಳಿಗೆಯ ಕಳೆಯಲೆಂದು ನಿಂತೆವತಿ ವಿಲಾಸದಿ
ವಿುಗುವ ಚಂದ್ರಹಾಸದಿ.
ಕೂಡಿ ನಲಿಯುತಿರಲು ನಲುಮೆಯೊಂದು ಅಂದಚೆಂದದಿ,
ಒಂದೆ ಆನಂದದಿ,
ಮಾಮರವದು ರೆಂಬೆಗಳಲಿ ಪಲ್ಲವಗಳ ತೆರೆಯನು,-
ಕರುಣಿಸಿತ್ತು ಮರೆಯನು.
ಹಳೆಯ ಮಸುಕು ಜಗವನೆಲ್ಲ ಮರೆತು ಕೂಡಿ ನಿಂದೆವು,
ಅದಕೆ ಇಲ್ಲಿ ಬಂದೆವು:
ಒಡನೆ ಬಂತು ಬೆಳ್ಳಿ ಬೆಳಗು ಮಚ್ಚರ ನಗೆ ಸೂಸುತ,
ಅಚ್ಚರೆ! ಕೈ ಬೀಸುತ!
ಯುಗಯುಗಗಳ ಪಥವ ತುಳಿದ ಅಡಿಯಿಡುತಲಿ ಬಂದಿತು,
ನಮ್ಮಿರವನು ಕಂಡಿತು.
ನಲ್ಲೆ! ತಿಳಿದಿಯೇನು ಅವಳ ಶಲ್ಯದಂಥ ನೋಟವ?
ಕಣ್ಣ ಕುಣಿತದಾಟವ!
ಇತ್ತು ಮೇಲಕಿಟ್ಟ ದೀಪ: ನಾವೆ ಮುಗಿಲೊಳಿರಿಸಿದ
ಚಂದ್ರ ಬೆಳಕು ಸುರಿಸಿದ!
ಕಳೆವ ಹಳೆಯ ಮಸುಕು ಜಗವ ಕೂಡಿ ತೆರಳ್ವೆವೆಂದೆವು;
ಸೆರೆಗಳಲ್ಲವೆಂದೆವು!
ನಾಣಿಲ್ಲದ ಜಾಣ್ಮೆಯಿಂದ ಮರದ ಬುಡದಿ ಕೂಡುತ
ಒಲಿಯುತಿರಲಿ ಹಾಡುತ್ತ,-
ಅಯ್ಯೋ! ಒಡನೆ ಬೆಳಗು ಬಂದು ಸೋದನೆಯನು ಮಾಡಿತು:
ತನ್ನ ಬೆಳಕು ಹರಹಿತು!
ಹಳೆಯ ಮಸುಕು ಜಗವು ಕಿತ್ತು ಎಣ್ದೆಸೆಯಲಿ ಬೆಳಕು ಬಿತ್ತು,
ಬಂತು ಕುತ್ತು ಸುತ್ತು ಮುತ್ತು!
ನಮ್ಮನುಳಿದು ನಮ್ಮದೇನು, ಏನು ಉಳಿಯಲಿಲ್ಲವು!
ಮಾನವುಳಿಯಲಿಲ್ಲವು!
ಕಿನ್ನರಿ:
(ವ್ಯಾಕುಲತೆಯಿಂದ)
ರಾಜಕುವರಿಯದೊರ್ವ ಭೂರಮಣನಲಿ ಒಸೆದು
ಅವನು ಮೆಯ್ಗರೆದಿರಲು ಶೋಕಿಸುವಳೆಂಬುದನು
ನಾ ಕೇಳಿ ತಿಳಿದಿದ್ದೆ. ಇದುವೆ ಕಾರಣವೇನು?
ಅವಳ ಸುಖದುರ್ಮಿಗಳನೊಣಗಿಸಿದ ಬೆಳ್ವೆಳಗು
ಪ್ರಜೆಗಳಲಿ ಹಾವಳಿಯನೆಬ್ಬಿಸಿಹುದೆ?
[ಕದಳೀವನದ ಬಳಿಗೆ ಸುಳಿಯುವ ಹಾದಿಯಲ್ಲಿ ಮಾಲತೀಕುಸುಮಗಳನ್ನು ನಳಿನೀಪತ್ರ-ಪುಟದಲ್ಲಿ ಇರಿಸಿಕೊಂಡು ಕೇಯೂರಕನು ಬರುತ್ತಿರುವನು.]
ಕೇಯೂರಕ:
ಗಂಧರ್ವಲೋಕದಲಿ ನಲಿವ ದಂಪತಿಗಳಿರ!
ಹೇಮಕೂಟದಿ ನಿಂತ ಕಿನ್ನರರೆ! ಕೇಳುವದು.
ಇಂದು ಗಂಧರ್ವಚಕ್ರೇಶ್ವರನ ನಗರಿಯಲಿ
ಹಿರಿಯ ಬಿದ್ದಣವಿಹುದು. ಕಾದಂಬರೀದೇವಿ
ನೃಪರೂಪ ಚಂದ್ರಮನ ವರಿಸುವಳು ಹುಣ್ಣಿಮೆಯ
ಮಂಗಲೋದಯವಾಗೆ. ಮತ್ತಾ ಮಹಾಶ್ವೇತೆ
ದೇವಾಂಶಸಂಭೂತನಿಹ ಪುಂಡರೀಕನಲಿ
ತನ್ನ ಬಾಳ್ವೆಯ ಈಸುಮಮಂಜರಿಯ ಸಲಿಸುವಳು.
ಮೃತರಾದ ಮದುವಣಿಗರಿಂದುಸಿರ ಪಡೆದಿಹರು.
ಕನ್ನಿಕೆಯರಾರ್ಷ ತಪಕತಿ ಮೆಚ್ಚಿ ಸುರರೆಲ್ಲ
ಕರುಣಿಸಿಹರೀ ಕೂಟವನು. ನೀವು ಮರೆಯದಿರಿ
ಬಾಂದಳದಿ ಸಂಜೆವೆಳಗದು ಚಂದಿರನ ಬರವ
ಸೂಚಿಸಲು ರಾಜರರಮನೆಯೆದುರು ನೆರೆಯುವದ!
[ಹೋಗುವನು.]
ಕಿನ್ನರ:
[ಆನಂದದಿಂದ]
ನುಡಿಯನಾಲಿಸು, ನಲ್ಲೆ! ಹೊಳೆದಿಹುದು ಮನಕೀಗ!
ನೀ ಕೇಳ್ದ ಭೂರಮಣನೇ ನಿಶಾಪತಿಯಂತೆ!
ಕಾದಂಬರೀದೇವಿಯವನ ವರಿಸುವಳಂತೆ!
ಎನಿತೊ ಮಾರ್ಪಾಟುಗಳ ತಳೆದ ಚಂದ್ರನಿಗಹುದು
ಈ ಸಲವೆ ಪೌರ್ಣಿಮೆಯು. ನಮ್ಮ ಕಾಣಿಕೆಯಿತ್ತು
ಪಡಿಯುವೆವು ಬಾ, ಚೆನ್ನೆ! ಬೆಳದಿಂಗಳ ವರವ!
(ಹೋಗುವರು)
….
ದೃಶ್ಯ ೩
(ಕಾಂಚನಮಯ ತೋರಣಗಳಿಂದ ಅಲಂಕೃತವಾದ ಚಿತ್ರರಥರಾಜನ ಅರಮನೆಯಲ್ಲಿಯ ವಿವಾಹ ಮಂಟಪ. ಮಧ್ಯದಲ್ಲಿ ಪತಿಪತ್ನಿಯರಾದ ಕಾದಂಬರೀ- ಚಂದ್ರಾಪೀಡರೂ ಪುಂಡರೀಕ-ಮಹಾಶ್ವೇತೆಯರೂ ಎದ್ದು ನಿಂತಿದ್ದಾರೆ. ಅವರನ್ನು ಸಾಲು-ಸಾಲಾಗಿ ಸುತ್ತುಗಟ್ಟಿ ಕೋಲು ಹಾಕುತ್ತ ಕಿನ್ನರಿಯರು ನರ್ತಿಸುತ್ತಿದ್ದಾರೆ. ತುಸು ದೂರಕ್ಕೆ ಹೇಮಪದಾಂಕಿತಾಸನಗಳಲ್ಲಿ
ಚಿತ್ರರಥರಾಜ ಮದಿರಾದೇವಿ, ಹಂಸರಾಜ ಗೌರೀದೇವಿ, ತಾರಾಪೀಡ ವಿಲಾಸವತೀದೇವಿ, ಶುಕನಾಸ ಮನೋರಮಾದೇವಿ, ಶ್ವೇತಕೇತುಮುನಿ, ಲಕ್ಷ್ಮೀದೇವಿ ಮೊದಲಾದ ಗಂಧರ್ವಲೋಕ ಮಾನವಿ ಲೋಕಗಳ ದಂಪತಿಗಳು ವಿರಾಜಮಾನರಾಗಿದ್ದಾರೆ. ವೀಣಾನಾದ, ಗೀತಸ್ವನ, ವೇಣುರವ, ಮಾಗಧಿಯರ ಜಯಶಬ್ದ ಮುಂತಾದವುಗಳಿಂದ ಮಂಟಪವು ತುಂಬಿ ಹೋಗಿದೆ. ಮಂಟಪದ ಕೆಳಭಾಗದಲ್ಲಿ ಸಾವಿರಾರು ಜನ ತಾರಾಪೀಡನ, ಗಂಧರ್ವರಾಜರ ಹಾಗು ಶ್ವೇತಕೇತು ಮುನಿಯ ಪರಿವಾರದವರು ನೆರೆದಿದ್ದಾರೆ. ವಿಧವಿಧದ ಬೆಳಕಿನಿಂದ ಮಂಟಪವೆಲ್ಲ ಭೂಷಿತವಾಗಿದೆ. ಚಂದ್ರೋದಯವಾಗಿ ಮೆಲ್ಲನೆ ಹಬ್ಬುತಿರುವ ಬೆಳುದಿ೦ಗಳು ಪೂರ್ವಾಭಿಮುಖವಾಗಿರುವ ದ್ವಾರದಿಂದ ಪ್ರವೇಶಿಸಿ ನವೀನ ದಂಪತಿಗಳ ಕಾಂತಿಯನ್ನು ಹೆಚ್ಚಿಸುತ್ತದೆ
ತುಸು ಹೊತ್ತಿನ ಮೇಲೆ ಕಿನ್ನರಿಯರ ನಾಟ್ಯಕ್ಕೆ ಪ್ರಾರಂಭವಾಗುವದು.)
ಕಿನ್ನರಿಯರ ಹಾಡು
ಒಂದನೆಯ ಸಾಲು:–ನಾವು ಕಿನ್ನರಿಯರು!
ಎರಡನೆಯ ಸಾಲು:–ಅನುಪಮ ಸುಂದರಿಯರು!
ಒಂದನೆಯ ಸಾಲು:–ಆದರೇನು? ನಮ್ಮ ಚೆಲುವು
ನಮಗಾಗಿಯೆ ಕಾಯ್ವುದು.
ಎರಡನೆಯ ಸಾಲು:–ಒಂದು ಎರಡು ಸಲವೆ ನರನ
ಮಾನಸದಲಿ ಮೀಯ್ವುದು,
ಒಂದನೆಯ ಸಾಲು:–ಕೆಳೆಂದಳಿರಿನ ಸೀರೆಯುಟ್ಟು
ಎರಡನೆಯ ಸಾಲು:–ದಾಂಗುಡಿಗಳ ನಿರಿಯ ಬಿಟ್ಟು
ಒಂದನೆಯ ಸಾಲು:–ಪಾರಿಜಾತ ಸ್ಮಿತದ ಮುಖ,-
ಎರಡನೆಯ ಸಾಲು:–ನೋಡಿ ನಕ್ಕ ನಳಿನಸಖ!
ಒಂದನೆಯ ಸಾಲು:–ಮೃದು ಮೃಣಾಳದೆರಡು ತೋಳು,
ಎರಡನೆಯ ಸಾಲು:–ಬೆಳುದಿಂಗಳ ಸಿರಿಯ ಬಾಳು!
ಒಂದನೆಯ ಸಾಲು:–ಜುಳು ಜುಳು–ಮಂಜುಳವು ಗತಿ!
ಎರಡನೆಯ ಸಾಲು:–ಸುಯ್ಯೆಲರಿನ ತುಂಬ ರತಿ!
ಒಂದನೆಯ ಸಾಲು:–ಕೇಶವ್ಯೋಮದಲ್ಲಿ ಚಿಕ್ಕೆ
ಎರಡನೆಯ ಸಾಲು:–ಒಂದು, ಎರಡು, ಮೂರು ಸಿಕ್ಕೆ,
ಒಂದನೆಯ ಸಾಲು:–ಮೀನಕೇತುವಿನ ವಿಜಯ
ಎರಡನೆಯ ಸಾಲು:–ಕಣ್ಣೊಳು ಸೆರೆಯಿರುವ ನಯ!
ಎಲ್ಲರೂ ಕೂಡಿ:
ನವಿಲ್ಗರಿ ತಲೆದುಡಿಗೆ ಧರಿಸಿ
ಜಗವನಲೆಯುತಿರುವೆವು!
ಲಾಸ್ಯಕಾಗಿ ಧ್ರುವಲೋಕದ-
ಲೊಮ್ಮೆ ಕಲೆಯುತಿರುವೆವು!
ಒಂದನೆಯ ಸಾಲು:–ನಾವು ಸುರರ ಚೇತಸಗಳು;
ಎರಡನೆಯ ಸಾಲು:–ಋಷಿಯು ಕಂಡ ನವರಸಗಳು!
ಒಂದನೆಯ ಸಾಲು:–ಸಾಲುಗೊಂಡು ಮುಗಿಲಿನಿಂದ
ಎರಡನೆಯ ಸಾಲು:–ಬಹುದು ನಮ್ಮ ಲಲಿತವೃಂದ
ಒಂದನೆಯ ಸಾಲು:–ಗೂಡು ಸೇರಲೆಂದು ಬರುವ
ಎರಡನೆಯ ಸಾಲು:–ಗಿಳಿಗಳೊಡನೆ ಸೇರಿ ತರುವ,
ಒಂದನೆಯ ಸಾಲು:–ದಿನದ ಕಥೆಯನೆಲ್ಲ ಮರೆದು
ಎರಡನೆಯ ಸಾಲು:–ಒರಗಿದವನ ಮನದಿ ನೆರೆದು
ಒಂದನೆಯ ಸಾಲು:–ಭೃಂಗಾಲಕವಾಗಿ ಎಸಗಿ
ಎರಡನೆಯ ಸಾಲು:–ಭಸ್ಮಲಸಿತವಾಗಿ ಮಸಗಿ,
ಒಂದನೆಯ ಸಾಲು:–ಸುರರೋಕದ ‘ದಿವ್ಯ ಪ್ರಭೆ,-
ಎರಡನೆಯ ಸಾಲು:–ನೆರೆ ತೋರಿಸುತದರ ಶೋಭೆ!
ಎಲ್ಲರೂ ಕೂಡಿ:
ಮೈತ್ರಿಮನದ ಚೈತ್ರವನದಿ
ಮಿನುಗಿ ಚಲಿಸುತಿರುವೆವು!
ನಕ್ಕು ನಲಿದು ಬಗೆಯಣುಗರ
ಸೊಗದಿ ನೆಲೆಸುತಿರುವೆವು!
ಎಲ್ಲರೂ ಕೂಡಿ:
ದೇವಕನ್ಯೆಯರಿಗೆ ನಮ್ಮ
ಲಾಸ್ಯ ಮನಕೆ ಬರದು. ತಮ್ಮ
ಮೌನದಿಂದ ಮನವ ಸೆಳೆದು
ನರನ ನಾಕಲೋಕಕೆಳೆದು
ರಮಿಸುತಿಹರು. ನಮ್ಮ ಲೀಲೆ
ನಡೆದು ಭೂಮಿಪಟದ ಮೇಲೆ,
ನರನ ಬಾಳಿನಲ್ಲಿ ಬಳುಕಿ
ಅವನ ಜೀವದಲ್ಲಿ ತುಳುಕಿ,
ಸಿಕ್ಕೆವೆಂದು ತೋರಿಸಿ
ಮತ್ತೆ ಇಲ್ಲದಾಗಿಸಿ
ನಿತ್ಯ ಮಾಯವಾಗುತಿಹೆವು.
ಮತ್ತೆ ಬಂದು ಕಾಣುತಿಹೆವು!
ಸ್ವರ್ಗದಾಸೆಯನ್ನು ಹಚ್ಚಿ
ಮರ್ತ್ಯರೊಡನೆ ನಲಿವೆವು.
ಅಮೃತದೀಕ್ಷೆಯನ್ನು ಕೊಡದೆ
ಅವರನೊಲಿಸಿ ಒಲಿವೆವು!
(ನಾಟ್ಯವು ನಿಲ್ಲುವದು. ಕಾದಂಬರೀ-ಮಹಾಶ್ವೇತೆಯರು ಆ ಮೇಲೆ ಒಂದು ಹಾಡು ಹಾಡುವರು)
ಕಾದಂಬರಿ ಮಹಾಶ್ವೇತೆಯರ ಹಾಡು:
ಮಹಾಶ್ವೇತೆ:
ಭೂಮಿದೇವಿಗೆ ಮುಕುಟವಿಡುವಂಥ ಮಾಣಿಕಗಳು,-
ಕಾರಣಿಕಪುರುಷರಿಂತೊಗೆತರಲು, ಇಂದ್ರಪುರಿಯು
ಕಾದಂಬರಿ:
ದ್ವಾರಗಳ ತೆರೆಯುವದು, ಹೂಗಳನು ಮಳೆಗರೆವುದು!
ಅವರ ಸ್ಪರ್ಶವೆ ಭಾಗ್ಯ, ಅವರ ದರ್ಶನವೆ ಸಿರಿಯು.
ಮಹಾಶ್ವೇತೆ:
ಅವರ ದೇಹವು ತಳೆದ ಚಂದ್ರಿಕೆಯ ಒಳ್ಪುಗಳನು
ಸಕಲಪರಿಪೂರ್ಣರಿಹ ದೇವತೆಗಳಾಸಿಸುವರು.
ಕಾದಂಬರಿ:
ಅವರ ಮನ-ಬುದ್ದಿಗಿಹ ಮಲ್ಲಿಗೆಯ ಮೆಲ್ಪುಗಳನು
ಅಷ್ಟದಿಕ್ಪಾಲಕರು ಮನದಣಿಯೆ ಮೂಸಿಸುವರು.
ಮಹಾಶ್ವೇತೆ:
ಕಿನ್ನರಿಯರೀ ಪುರುಷರೂಳಿಗದ ಬಾಳಿನವರು,
ಗಂಧರ್ವರವರ ಪದಪದ್ಮದಲಿ ಜೀವಿಸುವರು.
ಕಾದಂಬರಿ:
ತಾರೆಗಳ ಮೇಳದವರೆ ನಲಿವರ ವಚನಗಳಲಿ
ಮುಕ್ತಿಯೆಂದಾಪ್ಸರಿಯರನುದಿನವು ಭಾವಿಸುವರು!
[ಆಮೇಲೆ ಚಂದ್ರಾಪೀಡ. ಪುಂಡರೀಕರು ಹಾಡುವರು.]
ಚಂದ್ರಾಪೀಡ-ಪುಂಡರೀಕರ ಹಾಡು
ಪುಂಡರೀಕ:
ಮೂರು ಲೋಕಗಳಲಿ ಒಂದೆ
ನೂರು ಜನ್ಮಗಳಲಿ ಒಂದೆ
ಒಂದೆ, ಒಂದೆ! ಎಂದಿನಂತೆ ನಲುಮೆ ಒಂದಿದೆ!
ಚಂದ್ರಾಪೀಡ:
ದೇಹಪ್ರಾಣಗಳಲಿ ಒಂದೆ
ಸೃಷ್ಟಿ ದೃಷ್ಟಿಗಳಲಿ ಒಂದೆ
ಸತ್ಯದಂತರಾಳವನ್ನೆ ಪ್ರೀತಿ ಹೊಂದಿದೆ!
ಪುಂಡರೀಕ:
ಮುಗಿಲಿನಿಂದ ಭೂವಿಗಿಳಿದು
ಭೂಮಿಯಿಂದ ನಭಕೆ ಬೆಳೆದು
ವಿಶ್ವಪುರುಷನಾಗಿ ನಲುಮೆ ನಗುತ ನಿಂತಿದೆ.
ಚಂದ್ರಾಪೀಡ:
ನಲುಮೆಯೊಡನೆ ಸಾಮರಸ್ಯ-
ವಿಹುದೆ ಜಗದ ಘನ ರಹಸ್ಯ
ಬಾಳ್ಮೆಯೆ೦ಬ ಕಥೆಯ ಮೂಲ ಸಾರವಿಂತಿದೆ!
[ತೆರೆಯು ಬೀಳುವದು]
*****
ಅಕ್ಟ್ರೋಬರ್ ೧೯೩೩















