Home / ಕಥೆ / ಸಣ್ಣ ಕಥೆ / ರಾಜಾ-ರಾಣಿ!

ರಾಜಾ-ರಾಣಿ!

ಪ್ರಮಿಲಾ;
ನಿನಗೇನೆಂದು ಓಲೆ ಬರೆಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರೆಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚಸನನ್ನಿತ್ತಿದೆನೋ ಆ ಹಸ್ತವನ್ನೇ ಕುಕ್ಕಿ ಅದರ ನೆತ್ತರನನ್ನು ಹೀರಿ ಅದರಿಂದ ಈ ಓಲೆ ಬರೆಯುವದೇ ಉಚಿತವು. ನೀನು ಮರಾಠಾ ಜಾತಿಯವಳು; ನಾನ ಬ್ರಾಹ್ಮಣ ನಿನ್ನೊಡನೆ ಮದುವೆಯಾಗಲು ಯಾರಪ್ಪನ ಭೀತಿಯೂ ಇಲ್ಲವೆಂದು ಗುಡುಗಿನಂತೆ ನುಡಿದ ವಚನದಲ್ಲಿ ಹುರುಳಿಲ್ಲ. ಗಂಡಸರಂತೆ ಮಾತಾಡುವದರಲ್ಲಿ ನನಗಿಂತ ಉತ್ತರಕುಮಾರನು ಸಾವಿರಪಾಲಿಗೆ ಮೇಲು. ನಾನು  ತಾರುಣ್ಯದ ಆವೇಶದಲ್ಲಿ ನಿನಗೆ ವಚನವನ್ನಿತ್ತು ನಿನ್ನೊಡನೆ ಸರಸಸಲ್ಲಾಪ  ನಡೆಸಿದೆ. ಆದರೆ ನಮ್ಮ ಸಮಾಜವು……? ನಮ್ಮ ಸಮಾಜವು ಸರಸ  ಸಲ್ಲಾಪಕ್ಕೆ ಬೇಡೆನ್ನುತ್ತದೆಂದು ಮಾತ್ರ ಭಾವಿಸಿಬೇಡ. ಹಾಗಿದ್ದರೆ ಇಷ್ಟೊಂದು ವೇಶ್ಯಾ ಬಾಜಾರವು ಬೆಳೆಯುತ್ತಿರಲಿಲ್ಲ. ಆ ಅಂಧರಿಗೆ ವೇಶ್ಯಾ ಬಾಜಾರವು ಕಣ್ಣಿಗೆಕಾಣುವುದಿಲ್ಲವಂತೆ! ನಮ್ಮಂಥ ಸುಧಾರಕರು ವಿಧವೆಯನ್ನು ಅಥವಾ ಅನ್ಯಜಾತಿಯವಳನ್ನು ಧೈರ್‍ಯವಾಗಿ ವಿವಾಹವಾದರೆ ಮಾತ್ರ ಕಣ್ಣು ಹುಬ್ಬಗಳು ಮೇಲೆಹೋಗಿ ಮೂಗು ಮುರಿಯತೊಡಗುತ್ತವೆ.  “ಶಾಂತಂ ಪಾಪ.” ಶಬ್ದದಿಂದ ಕಿವಿಯು ಗಡಚಿಕ್ಕುತ್ತವೆ. ಕಲಿಯುಗವು ಬುಡಮೇಲಾಗಿ ಮಳೆಬೆಳೆಗಳು ನಾಶವಾಗತೊಡಗುತ್ತವೆ, ಒಟ್ಟೇನು ಹೇಳುವದು?- ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯಲಿ ಅಂದರೆ ನಮಗೇನೂ ಕಾಣುವದಿಲ್ಲವೆಂದು ನಮ್ಮ ಸಮಾಜದ ಗರ್‍ಜನೆ. ನಿನ್ನಿನ ದಿವಸ ನಮ್ಮ ಸೋದರ ಮಾವನಾಡಿದ ಮಾತು ಕೇಳಿದರೆ ಮೈ “ಜುಂ” ಎನ್ನುತ್ತದೆ. ನಿನ್ನನ್ನು ಬೇಕಾದರೆ ಇಟ್ಟು ಕೊಳ್ಳಲಡ್ಡಿಯಿಲ್ಲವಂತೆ ಮದುವೆ ಮಾತ್ರ ಆಗಕೂಡದೆಂದು ಅವರು ಹೇಳಿದರು. ಈ ಮಾತು ನಿನಗೆ ತಿಳಿಸದೆ ಇದು ಕೊನೆಗೆ ವಂಚನೆಮಾಡುವದು ನೀಚತನದ್ದಾಗುವದು. ಆದುದರಿಂದ ಈಗಲೇ ತಿಳಿಸಿಬಿಡುತ್ತಿದ್ದೇನೆ. ನಾನು ಸಮಾಜ ರಾಕ್ಷಸನಿಗೆ ಬೆದರದೆಹೋದರೆ ಗತ್ಯಂತರವಿಲ್ಲ. ನನ್ನ ಆಸ್ತಿಯು ನನಗೆ ಮರಳಿ ದೊರೆಯಬೇಕಾದರೆ ನಾನು ನಿಷ್ಠುರನಾಗಿರಲೇಕಾಗಿದೆ. ಹೆಚ್ಚು ಬರೆಯಲು ಕೈ ಬಾರದು. ಆಗಿಹೋದ ತಪ್ಪಿಗಾಗಿ ಕ್ಷಮೆಯಿರಲಿ.
ಇತಿ-ರಾಜಾ
ಓಲೆಯನ್ನು ಪೂರೈಸಿ ರಾಜಣ್ಣ ತಮ್ಮ ಜವಾನನ ಕೈಯಿಂದ ಪ್ರಮಿಲೆಗೆ ತಲುಪುವಂತೆ ಏರ್‍ಪಾಟುಮಾಡಿದ.
  * * *
ರಾಜಣ್ಣ ನಮ್ಮೂರ ದೇಸಾಯರ ಮನೆತನಕ್ಕೆ ದತ್ತಕ್ಕೆ ಹೋಗಿದ್ದ.  ದತ್ತಕ ತಂದೆತಾಯಿಗಳೆಲ್ಲರೂ ತೀರಿಕೊಂಡದ್ದರಿಂದ ಆ ಆಸ್ತಿಗೆ ಅವರ ಸಂಬಂಧಿಕನೇ ಯಾವನೋ ಒಬ್ಬನು ತನ್ನದೇ ಒಡೆತನವೆಂದು ಜಗಳಹೊಡಿದ.  ಹೀಗಾಗಲು ರಾಜಣ್ಣ ತಮ್ಮ ಸೋದರಮಾವನ ಕೈಯಲ್ಲಿ ಎಲ್ಲ ಅಧಿಕಾರ  ಕೊಟ್ಟು ಮೇಲಿನ ಕೋರ್‍ಟಿನವರೆಗೆ ನ್ಯಾಯ ಒಯ್ದು ಬಡಿದಾಡಿದ ರಾಜಣ್ಣನಂತೆಯೇ ಎಲ್ಲಾ ನಿಕಾಲೆ ಆಗಿದ್ದಿತು. ಆಸ್ತಿಮಾತ್ರ ಇನ್ನೂ ಅವನಕೈಯಲ್ಲಿ  ಬಂದಿರಲಿಲ್ಲ. ರಾಜಣ್ಣನ ಸೋದರಮಾವ ನರಸಿಂಗರಾಯನೊಳ್ಳೇ ಚೈನಿಯ ಗೆಳೆಯ. ಯಾವಾಗಲೂ ತಂಬಾಕು ಬಾಯಲ್ಲಿ ತುಂಬಿರುತ್ತಿತ್ತು. ಪಿಚಿ ಪಿಚಿ  ಉಗುಳುವದೇನು ಸೊಟ್ಟ ಬಾಯಿಮಾಡಿ ಸಿಗರೇಟಿನ ಹೊಗೆ ಬಿಡುವದೇನು- ಹೇಳಲಾಸವಲ್ಲ ಅವನು ಜೋಗಮ್ಮಳೊಬ್ಬಳನ್ನು ಇಟ್ಟು ಕೊಂಡಿದ್ದ. ಅವಳೇನು ಒಳ್ಳೇ ಚೆಲುವೆಯೆಂದು ಮೆಚ್ಚಿದ್ದನೆಂದು ಮಾತ್ರ ಭಾವಿಸಬೇಡಿ.  ಮನೆಯಲ್ಲಿ ಬಂಗಾರದಂಥ ಹೆಂಡತಿಯಿದ್ದೂ ವೇಶ್ಯಾಗಮನ ಮಾಡುವವರನ್ನೂ ಹಣ್ಣುಮಾರುವ ಹೆಂಗಸರಿಗೆ ಮರುಳಾಗಿ ತಿರುಗಾಡುವವರನ್ನೂ ನೀವು  ನೋಡಿಲ್ಲವೇ? ಆ ಜಾತಿಗೆ ಸೇರಿದವ ನಮ್ಮ ನರಸಿಂಗರಾಯ. ಆದರೂ ಶಿಷ್ಟನೋಡಿ ನಮ್ಮ ಸನಾತನೀ ವರ್‍ಗಕ್ಕೆ ಆತ! ದೇವರೂ ದಿಂಡರೂ-ಮಡೀ ಮೈಲಿಗೀ ಬಹಳವಂತೆ ಆತನ ಮನೆಯಲ್ಲಿ! ಆಗಾಗ್ಗೆ ಬ್ರಾಹ್ಮಣರಿಗೆ ಭೋಜನ ದಕ್ಷಿಣೆ ಸಿಗುತ್ತಿತ್ತೆಂಬುದನ್ನು ಬೇರೆ ಹೇಳಬೇಕೆ? ಮನೆಯಲ್ಲಿ ಅಡಿಗೆಗೊಬ್ಬಳು ಅಮ್ಮ! ಪೂಜೆಗೊಬ್ಬ ಬ್ರಾಹ್ಮಣ! ಸಂಬಳಗೊತ್ತು ಮಾಡಿಟ್ಟು ಬಿಟ್ಟಿದ್ದಾರೆ ‘ಜೋಗಮ್ಮನನ್ನು ಇಟ್ಟು ಕೊಂಡಿದ್ದಾರಂತಲ್ರೀ ನಿಮ್ಮ ನರಸಿಂಗ  ರಾಯರು’ ಎಂದು ಯಾರಾದರೂ ಅವರ ಪುರೋಹಿತರಿಗೆ ಕೇಳಿಬಿಟ್ಟರೆ ಏನು ಉತ್ತರಬರುವದು ಗೊತ್ತುಂಟೋ “ದೊಡ್ಡವರು ಹ್ಯಾಗಿದ್ದರೂ ಆಡಿಕೊಳ್ಳಬಾರದು. ಪಾಪ! ಅವಳನ್ನು ಇಟ್ಟುಕೊಂಡಿದ್ದರೂ ಸಹ ಅವಳ ಕೈಯಿಂದ ಎಂದೆಂದೂ ಒಂದು ಲೋಟ ಚಹಕುಡಿಯುವುದಿಲ್ಲ. ಒಳ್ಳೇ ನಿಷ್ಠಾವಂತರು.” (ನಿಷ್ಠಾವಂತಿಕೆ ಆಕೆಯ ಮೇಲೆ ಎಂಬುದು ಅವರ ಮನದೊಳಗಿನ ಅಭಿಪ್ರಾಯವಲ್ಲವಷ್ಟೇ?)
ನರಸಿಂಗರಾಯ ಹೇಗಿದ್ದರೇನು ನಮಗೆ ನಮ್ಮ ಸಮಾಜದ ವಿಚಾರ ಮಾತ್ರ ಎಷ್ಟು ವಿಚಿತ್ರವಾಗಿದೆ ನೋಡಬೇಕಾಗಿದೆ.
  * * *
ಪ್ರಮಿಲೆ ಆ ಜೋಗಮ್ಮನ ಸಾಕು ಮಗಳು, ಯಾವ ಜಾತಿಯೋ ಏನೋ ದೇವರೇ ಬಲ್ಲ. ಮರಾಠಾ ಜಾತಿಯವಳೆಂದು ಜೋಗಮ್ಮ ಹೇಳಿದ್ದಳು. ಒಳ್ಳೇ ಮುದ್ದು ಮುದ್ದಾದ ಹುಡುಗಿ! ಜೋಗಮ್ಮನಿಗೆ ನರಸಿಂಗರಾಯರ ಆಶ್ರಯ ಕೇಳುವದೇನು? ದುಡ್ಡಿಗೆ ಕೊರತೆಯಿರಲಿಲ್ಲ ಅಕೆಗೆ. ಪ್ರಮಿಲೆಗೆ ವಿದ್ಯೆಕಲಿಸುತ್ತಿದ್ದಳು. ಪ್ರಮಿಲೆ ಓದು ಹೇಳಿಸಿಕೊಳ್ಳವುದಕ್ಕೆಂದು ಆಗಾಗ್ಗೆ  ರಾಜಣ್ಣನ ಬಳಿ ಬರುತ್ತಿದ್ದಳು ರಾಜಣ್ಣನೂ ಅವಳ ಮನೆಗೆ ಹೋಗಿ ಬಂದು ಇರುತ್ತಿದ್ದ. ರಾಜಣ್ಣನಿಗೆ ಮನೆಯಲ್ಲಿ ಸಲಿಗೆಯಿಂದ ಕರೆಯುವ ಹೆಸರು  “ರಾಜಾ” ಎಂದು. ರಾಜಾನ ಜೊತೆಗೆ ರಾಣಿಯೆಂದು ಕರೆಯುವುದು ಸೊಗಸಾಗಿ ಕಾಣುತ್ತದೆಂದು ಅವಳ ಸಾಕುತಾಯಿ ಜೋಗಮ್ಮ ಎಳೆಯ ವಯಸ್ಸಿನಲ್ಲಿ ಚೇಷ್ಟೆಗೆಂದು ಪ್ರಮಿಲೆಗೆ “ರಾಣಿ”ಯೆಂದು ಕೂಗುತ್ತಿದ್ದಳು. ಎಳೆಯರಿರುವಾಗ ಹಾಕಿದ ಕಲ್ಪನೆಯು ಮೊಳೆತು ಚಿಗುರಾಯಿತು.
ಅವರಿಬ್ಬರೂ ನಿಜವಾಗಿಯೇಃ ರಾಜಾ-ರಾಣಿಯರಂತೆ ನಕ್ಕು ನಲಿನಾಡುತ್ತಿದ್ದರು. ಇನ್ಸುರೆನ್ಸ ಕಂಪನಿಯ ಏಜಂಟನೊಬ್ಬನು ಒಂದುಸಲ ಅಕಸ್ಮಾತ್ತಾಗಿ ಅವರೂರಿಗೆ ಬಂದಾಗ “ಇಬ್ಬರೂ ಜಾಯಿಂಟ ವಿಮೆ ಇಳಿಸಿ ಬಿಡ್ರಿ” ಎಂದು ಅರಿಯದೆ ನುಡಿದುಬಿಟ್ಟಿದ್ದ. ಮುಂದಿನವರುಷ ಇಳಿಸೋಣ” ಎಂದು ಇಬ್ಬರೂ ಖೊಳ್ಳನೆ ನಕ್ಕು ಬಿಟ್ಟರು. ಇಬ್ಬರ ಬುದ್ಧಿಯೂ ಚುರುಕು.  ಯುವಕ ಸಂಘದವರು ಏರ್‍ಪಡಿಸುವ ಷಾಣ್ಮಾಸಿಕ ವಕ್ತೃತ್ವದಮೇಲಾಟದಲ್ಲಿ ಯಾವಾಗ ನೋಡಿದರೂ ಇವರೇ ಮೊದಲಿನವರಾಗಿರುತ್ತಿದ್ದರು. ಬರೀ ಸ್ಕೂಲು ಬುಕ್ಕುಗಳನ್ನಷ್ಟೇ ಪಠಿಸುತ್ತಾ ಕೂಡದೆ ಬೇರೆ ಬೇರೆ ವಿಷಯಗಳನ್ನು ಓದಿಕೊಂಡಿದ್ದೇ ಇದಕ್ಕೆ ಕಾರಣ.
ಇಂಥ ಪ್ರೇಮಳ ಹೃದಯಿಗಳಿಗೆ ಜಾತಿಬಂಧನದ ತೊಡಕೇ? ಹೃದಯಗಳು ಒಂದಾಗಿದ್ದರೂ ಸಮಾಜಕ್ಕೆ ಇದು ಸಹನೆಯಾಗದಿರುವದು ನಮ್ಮ ದುರ್‍ದೈವವಲ್ಲದೆ ಮತ್ತೇನು? ಬಲುಮೆಯ ಜುಲುಮೆಯ- ಹೃದಯಗಳು ಕೂಡದ-ಮನಸ್ಸಿಲ್ಲದ-ಜೊತೆ, ಸರಿಯಾಗಿಲ್ಲದ-ವಿಷಮ ವಿವಾಹಗಳಿಗೇ ತಲೆ ಬೊಗ್ಗಿಸಿ ಇನ್ನೂ ಎಷ್ಟುಕಾಲ ಒದ್ದಾಡಬೇಕೋ ಈ ಸಮಾಜ- ತಿಳಿಯ  ದಂತಾಗಿದೆ.
ರಾಮಣ್ಣನಿಷ್ಟು ವ್ಯೆಥೆಯಾಗಿರಬೇಕು ಪ್ರಮಿಲೆಗೆ ಬರೆಯುವ? ಪಾಪ! ಮೋರೆಯನ್ನು ಸಹ ಯಾರಿಗೂ ತೋರಿಸಲಾರ. ಮನೆಯಲ್ಲಿಯೇ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಾನೆ.
  * * *
ಕೆಂಪು ಪಾಕೀಟು! ಪ್ರಮಿಲೆ ಗಾಬರಿಯಾದಳು. ಪಾಕೀಟನ್ನು ಹರಿಯುತ್ತಿರುವಾಗಲೇ ತಾನು ತನ್ನ ಹೃದಯವನ್ನೂ ಹರಿದುಕೊಳ್ಳುತ್ತಿರುವೆನೇ ಎಂದೆನ್ನಿಸಿತು. ಕಣ್ಣಲ್ಲಿ ನೀರು ತುಂಬಿ ಬಂದವು. ಹಾಗೂ ಹೀಗೂ ಓದಿ ಮುಗಿಸಿದಳು. ತುರುಬಿನಲ್ಲಿದ್ದ ತನ್ನ ಕಸೂತಿಯ ಸೂಜಿಯನ್ನು ಸರ್ರನೆ ಹಿರಿದುಕೊಂಡಳು. ಒಂದು ಕೈಯಿಂದ ಬ್ಲೋಜಿನೆ ಗುಂಡಿಗಳನ್ನು ಬಿಡಿಸಿ ಕೊಂಡಳು.
“ನೀನು ನಿನ್ನ ಕೈನೆತ್ತರದಿಂದ ಓಲೆ ಬರೆದಿದ್ದರೆ ನಾನು ಈ ಮೊದಲೇ ನಿನಗೆ ಅರ್‍ಪಿಸಿಬಿಟ್ಟಿರುವ ನನ್ನ ಹೃದಯದ ಪವಿತ್ರ ರಕ್ತದಿಂದ ಉತ್ತರ  ಬರೆಯಬೇಕೆನ್ನುತ್ತೇನೆ. ನಿನಗೆ ನನಗಿಂತ ನಿನ್ನ ಆಸ್ತಿ ಮಿಗಿಲೆನಿಸಿತು. ಸಮಾಜ ರಾಕ್ಷಸನ ಬಾಧೆ ತಗುಲಿತು. ವೇಶ್ಯೋಪಾಸಕ ನರಸಿಂಗರಾಯರಿಗೆ ವೇಶ್ಯಾಬಾಜಾರದಲ್ಲಿ ನಾನೂ ಒಂದು ಅಂಗಡಿ ತೆರೆಯಬೇಕೆಂಬ ಅಪೇಕ್ಷೆಯಾಯಿತು. ಈ ಅಂಧ ಸಮಾಜಕ್ಕೆ ಇದಾವುದೂ ಕಾಣುವದಿಲ್ಲ. ನೋಡಲು ಯತ್ನಿಸಿದರೆ ತಾನೇ ಕಾಣುವದು. ಇರಲಿ. ಇಂಥ ಘೋರನರಕದಲ್ಲಿ ಇರುವದರಿಂದಾಗುವ ಲಾಭವಾದರೂ ಏನು?”
ಪ್ರಮಿಲೆ ಇನ್ನೂ ಏನೇನು ಬರೆಯತಕ್ಕವಳಿದ್ದಾಳೋ ಅವಳಿಗೇ ಗೊತ್ತು. ಅಷ್ಟರಲ್ಲಿಯೇ ಹೊರಗೆ ಕಾಲುಸದ್ದು. ಹಠಾತ್ತಾಗಿ ನರಸಿಂಗರಾಯ ಒಳಗೇ ಬಂದುಬಿಟ್ಟನು.
“ಏನಿದು ರಕ್ತ ಸಿಡಿದಂತೆ ಕಾಣುತ್ತದಲ್ಲ ಕೆಳಗೆ”
“ಏನೂ ಇಲ್ಲ ಹೊಲಿಯುವಾಗ್ಗೆ ಸೂಜಿ ಕೈಗೆನಟ್ಟು ಒಂದು ಹನಿ ರಕ್ತ ಬಿದ್ದಿರಬಹುದಿಷ್ಟೆ.” ಎನ್ನುತ್ತ ಓಲೆಯ ಮೇಲೆ ಹತ್ತಿರದಲ್ಲಿದ್ದ ಪುಸ್ತಕವನು ಹೇರಿ ಎದ್ದು ನಿಂತಳು- ಅಲ್ಲಿಯೇ. ನರಸಿಂಗರಾಯ ಪುಸ್ತಕವನ್ನೆತ್ತಿ ಓಲೆಯನ್ನು ತೆಗೆದುಕೊಂಡ. ರಾಜ-ರಾಣಿಯರ ಎರಡೂ ಓಲೆಗಳೂ ಅವನ ಕೈಗೆ ದೊರೆತವು. ಗಾಬರಿ ಗಾಬರಿಯಿಂದ ಓದಿದ ರಕ್ತಮಯ ಓಲೆಗಳನ್ನು ಕೈಯಲ್ಲಿ ಹಿಡಿದುಕೊಳ್ಳುಲು ಯಾವನಿಗೆ ತಾನೆ ಧೈರ್‍ಯವಾದೀತು? ಅವನ  ಹೃದಯವು ಎಚ್ಚತ್ತಿತು. ಅಂದು ಅವನಿಗೆ ಮನವರಿಕೆಯಾಗಿರಬೇಕು, ಕೂಡಿದ ಹೃದಯಗಳೆರಡರ ಅಗಲುವಾಗಿನ ಭೀಕರ ನೋಟ ಹೇಗಿರುವದೆಂಬುದು. ಸಿಂಪ್ಸನ್ನಳಿಗಾಗಿ ಎಂಟನೇ ಎಡ್ವರ್‍ಡ ಬಾದಶಹನು ಸಿಂಹಾಸನವನ್ನೇ ತ್ಯಾಗಮಾಡಿದ ಸುದ್ದಿಯೂ ನರಸಿಂಗರಾಯನಿಗೆ ಅಂದೇ ತಿಳಿದಿದ್ದಿತು. ಪ್ರೇಮಕ್ಕೆ ಜಾತಿಯಿಲ್ಲ ಪಂಥವಿಲ್ಲ, ಭೇದಭಾವಗಳಿಲ್ಲವೆಂಬುದು ಸುಳ್ಳಲ್ಲ! ಕಲ್ಲು ಹೃದಯವು ಕೂಡ ಕರಗಿ ನೀರಾಗಿ ಹೋಯಿತು. ಅಂದು ಒಬ್ಬರಿಗಿಂತ ಒಬ್ಬರಿಗೆ ತಮ್ಮ ದೇಹದ ಪರಿವೆಯೇ ಇರಲಿಲ್ಲ. ನೋಡಿ ಸುರುವುಮಾಡಿದ ಆತನೂ ನೆತ್ತರದ ಓಲೆಯನ್ನೇ ಬರೆಯಲಿಕ್ಕೆ. ಪ್ರಮಿಲೆಯಹಾಗೆ ತಾರುಣ್ಯದ ನೆತ್ತರನೆಲ್ಲಿಂದೆ ಪುಟಿಯಬೇಕು. ಏನೋ ಎರಡೇ ಸಾಲು ಬರೆದು ಮುಗಿಸಿಬಿಟ್ಟ.
“ಇಂದಿನಿಂದ ನೀವಿಬ್ಬರೂ ರಾಜ-ರಾಣಿ.”
ಇಂತು ಹರಸುವ ನರಸಿಂಗರಾಯ.
*****
Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...