ಹೂವಿನ ಪೂಜೆ

ಹೂವಿನ ಪೂಜೆ

ನ್ಯೂಯಾರ್ಕಿನ ನಮ್ಮ ಡೌನ್ಟೌನ್ ಆಫೀಸಿನಲ್ಲಿ, ಬ್ರಿಜೆಟಳನ್ನು ಮೊತ್ತಮೊದಲು ನೋಡಿದಾಗ ನನಗೆ ಥಟ್ಟನೆ ರಾಜಿಯದೇ ನೆನಪಾಗಿತ್ತು. ಯಾಕೆಂದು ಗೊತ್ತಿಲ್ಲ; ಅಂದರೆ ಮುಖಲಕ್ಷಣದಲ್ಲಿ ಅವಳಿಗೆ ರಾಜಿಯ ಹೋಲಿಕೆ ತಟಕೂ ಇರಲಿಲ್ಲ. ರಾಜಿಯದು ಉದ್ದ ಚೂಪು ಕೋಲಿನಂತಹ ಮುಖವಾದರೆ, ಬ್ರಿಜೆಟಳ ಚಚ್ಚೌಕ ಮುಖದಲ್ಲಿ ಹಸುರು ಗಾಜಿನ ಮಣಿಯಂತಹ ಕಣ್ಣು. ಇನ್ನು ಮೈ ಬಣ್ಣವಂತೂ ಬ್ರಿಜೆಟ್ಟಳದು ಕೇಳಬೇಕೆ, ನಗುವಾಗ ಬಿಡಿ, ಏರುದನಿಯಲ್ಲಿ ಮಾತನಾಡುವಾಗಲೂ ಕೆಂಪೇರುವ ಬಣ್ಣ. ರಾಜಿಯದಾದರೆ ಸಾಮಾನ್ಯ ಮಸಕು ಬಣ್ಣ. ತುಂ¨ ಬಿಳಿಯೂ ಅಲ್ಲ, ತೀರ ಕಪ್ಪೂ ಅಲ್ಲ.

ಆದರೆ ರಾಜಿಯನ್ನು ನೆನಪಿಸುವಂಥದ್ದು ಅದೇನೋ ಅವಳಲ್ಲಿತ್ತು. ಅದು ಅವಳ ಚಚ್ಚೌಕದ ಭುಜವಿರಬಹುದು. ಫಕ್ಕನೆ ಕೂದಲಿನ ಮೇಲೆ ಹಣಿಗೆಯಾಡಿಸಿ, ಹಣಿಗೆಯನ್ನು ತೆಗೆದಿಡುವ ವೇಗವಿರಬಹುದು. ‘ನಡೆಯಿರಿ, ಹೊರಡುವ’ ಎಂದು ಉಳಿದವರನ್ನು ಒಂದೇ ಮಾತಿನಲ್ಲಿ ದೂಡಿದಂತೆ ಹೊರಡಿಸುವ ಚಾಕಚಕ್ಯತೆಯಿರಬಹುದು. ಅಥವಾ ಸೊಂಟದ ಮೇಲೆ ಎರಡೂ ಕೈ ಇರಿಸಿ, ಕಾಲಗಲಿಸಿ ನಿಲ್ಲುವ ಭಂಗಿಯಿರಬಹುದೇನೋ. ಅಂತೂ, ನಿಲ್ಲುವುದರಲ್ಲಿ, ನಡೆಯುವುದರಲ್ಲಿ, ಸಂದರ್ಭವನ್ನು ಕೂಡಲೇ ಕೈಯೊಳಗೆ ತೆಗೆದುಕೊಳ್ಳುವುದರಲ್ಲಿ ನನಗೆ ಸಾಮ್ಯ ಕಂಡಿರಬೇಕು.

ನಾನು ಕೆಲಸಕ್ಕೆ ಸೇರುವಾಗ ಬ್ರಿಜೆಟ್ ವಾರದ ಮಟ್ಟಿಗೆ ನ್ಯೂಯಾರ್ಕಿನ ಪ್ರಧಾನ ಆಫೀಸಿನಲ್ಲಿದ್ದಳು. ಆವತ್ತು ಬಂದವಳು, ಸರೂತಕ್ಕೆ ನಡೆಯುತ್ತ ಒಳಗೆ ಬಂದು, ಚಚ್ಚೌಕದ ಭುಜವನ್ನು ನೇರವಾಗಿಟ್ಟುಕೊಂಡೇ ತಿರುಗಿ, ಕಂಪ್ಯೂಟರಿನ ಸ್ವಿಚ್ ಒತ್ತಿ, ಚೀಲದಿಂದ ತೆಗೆದ ಪುಟ್ಟ ಹಣಿಗೆಯಿಂದ ಎರಡೇ ಕೈ ಚಳಕದಲ್ಲಿ ಕೂದಲನ್ನು ಗಂಡಸರಂತೆ ಹಿಂದಕ್ಕೂ ಮೇಲಕ್ಕೂ ಬಾಚಿ, ಕೆಲಸಕ್ಕೆ ತೊಡಗಿದ್ದಳು.

ಚಚ್ಚೌಕದ ಭುಜವನ್ನು ನೇರವಾಗಿಸಿಕೊಂಡೇ ಅವಳು ತಿರುಗಿದ್ದೇ, ನನಗೆ ಮಿಂಚಿನಂತೆ ರಾಜಿಯ ನೆನಪನ್ನು ತಂದಿತ್ತು.

ಮುಂದೆ ಆಫೀಸಿಗೆ ಬಂದ ಹೊಸ ಅಕೌಂಟ್ಸ್‌ ಪ್ಯಾಕೇಜನ್ನು ಅವಳು ನನಗೆ ಅರ್ಥೈಸಿ ಹೇಳಿಕೊಡುವಾಗ. ಅವಳನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶ ಸಿಕ್ಕಿತು. ಕತ್ತನ್ನು ಕೊಂಕಿಸಿ, ಒಂದು ಕೈಯ್ಯಲ್ಲಿ ಕಂಪ್ಯೂಟರಿನ `ಮೌಸ’ನ್ನು ಓಡಿಸುತ್ತ, ಅವಳು ನನಗೆ ವಿವರಿಸುತ್ತಿದ್ದರೆ, ಥೇಟ್ ಬೀಜಗಣಿತದ ಪಾಠ ಹೇಳಿ ಕೊಡುವ ರಾಜಿಯ ಚೂಪು ದೃಷ್ಟಿಯೇ. ಲೆಕ್ಕವೆಂದರೆ ರಾಜಿಯ ಬಾಯಲ್ಲಿ ನೀರು ಬರುತ್ತಿತ್ತು. ಪಟಪಟನೆ ವಿವರಿಸಿ, ಚಕಚಕನೆ ಮಾಡಿ ತೋರಿಸುವಾಗ ಅಷ್ಟೇ ತ್ವರಿತದಲ್ಲಿ ನಾವು ಅರ್ಥ ಮಾಡಿಕೊಳ್ಳದಿದ್ದರೆ ಮಾತ್ರ ನಮ್ಮ ಗತಿ ಪಡ್ಚ. ಒಂದು ದಿನ ಕ್ಯಾಫಿಟೇರಿಯಾದಲ್ಲಿ ಕುಳಿತಿದ್ದಾಗ ಬ್ರಿಜೆಟಳೊಡನೆ ರಾಜಿಯ ಬಗ್ಗೆ ಹೇಳುತ್ತಿದ್ದೆ. ಹಸುರು ಕಣ್ಣುಗಳಿಂದ ನನ್ನನ್ನೇ ನೆಟ್ಟಗೆ ನೋಡುತ್ತಾ, `ಕೆಲವರು ಹಾಗೆ; ನಮ್ಮೊಳಗೆ ಸದಾ ಇದ್ದು ಬಿಡುತ್ತಾರೆ.’ ಎಂದಿದ್ದಳು. ಅವಳ ಮಾತು ಎಷ್ಟು ಸತ್ಯ.

ರಾಜಿ ಸತ್ತು ಈಗ ಹದಿನೈದು ವರ್ಷಗಳ ಮೇಲಾಗಿತ್ತು. ಅವಳು ಸಾಯುವಾಗ ನಾನು ಪಿಯೂಸಿ ತರಗತಿಯಲ್ಲಿದ್ದೆ. ಸಪೂರ ಕೋಲು ಮುಖದ ರಾಜಿಯನ್ನು ಸುಂದರಿ ಎಂದು ಹೇಳಲು ಸಾಧ್ಯವಿದ್ದಿರಲಿಲ್ಲವಾದರೂ, ಅವಳ ಮುಖದಲ್ಲೊಂದು ಸ್ವಾರಸ್ಯವಿತ್ತು. ಸೆರಗನ್ನು ಮೂರು ಪಟ್ಟಿ ಮಾಡಿ ಎದೆಯ ಮೇಲೆ ಇಟ್ಟು ಪಿನ್ನು ಹಾಕಿದಳೆಂದರೆ ಮತ್ತೆ ಯುದ್ಧಕ್ಕೆ ಹೊರಟ ಮರ್ಜಿಯೇ. ಆ ಸೆರಗೂ, ಏರುತಗ್ಗಿಲ್ಲದ ಚಟ್ಟೆ ಎದೆಯ ಮೇಲೆ ಅತ್ತಿತ್ತ ಹಂದದೆ ಅವಳು ಇಟ್ಟಂತೆ ಇದ್ದುಬಿಡುತ್ತಿತ್ತು.

ಊರಲ್ಲಿ ಹೊಸದಾಗಿ ಕಾಲೇಜು ಆರಂಭವಾಗುವಾಗ ಅವಳು ಮೆಟ್ರಿಕ್ ಮುಗಿಸಿ ಎರಡು ವರ್ಷಗಳಾಗಿದ್ದವು. ಮತ್ತೆ ಮನೆಯಲ್ಲಿ ಹಟ ಹಿಡಿದು, ಮೂರು ಹಗಲು, ಮೂರು ರಾತ್ರಿ ಉಪವಾಸ ಮಾಡಿ ಅವಳು ಕಾಲೇಜು ಸೇರಿದ್ದಳು. ಅವಳು ಹಾಗೆ ಮಾಡಿದ್ದರಿಂದಲೇ ಮುಂದೆ ನಮಗೆಲ್ಲ ಸಲೀಸಾಗಿ ಕಾಲೇಜಿಗೆ ಹೋಗುವುದಾಗಿರಬೇಕು. ನಮ್ಮ ಮತ್ತು ದೊಡ್ಡಪ್ಪಯ್ಯನ ಕುಟುಂಬಗಳು ಒಂದೇ ಮನೆಯಲ್ಲಿ ಇದ್ದುದರಿಂದಲೋ ಏನೋ, ದೊಡ್ಡಪ್ಪಯ್ಯನ ಹಿರಿಯ ಮಗಳಾದ ರಾಜಿ ನಮಗೆಲ್ಲ ಒಂದು ಮೇಲ್ಪಂಕ್ತಿಯಂತಿದ್ದಳು. ಅಂತೂ ನಮ್ಮ ಕುಟುಂಬದಲ್ಲಿ ಕಾಲೇಜು ಸೇರಿದವಳೂ ಅವಳೇ ಮೊದಲು; ಮತ್ತೆ ಕೆಲಸಕ್ಕೆ ಸೇರಿದ್ದೂ ಅವಳೆ ಸುರು. ಅದು ಒಂದು ದೊಡ್ದ ಕತೆ.

ಪದವಿ ಮುಗಿಸಿದ್ದೇ ಬ್ಯಾಂಕಿನ ಕೆಲಸಕ್ಕೆ ಅರ್ಜಿ ಹಾಕತೊಡಗಿದ್ದಳು. ನೇರವಾಗಿ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲವಾದರೂ, ಕೆಲಸಕ್ಕೆ ಹೋಗುವ ಅವಳ ಇರಾದೆ ಸರ್ವವಿದಿತವಾದದ್ದಾಗಿತ್ತು. ಅಂದರೆ ಪದವಿಯ ಮೂರು ವರ್ಷಗಳಲ್ಲಿಯೂ ಆಗಿಂದಾಗ ಅವಳ ಬಾಯಿಯಿಂದ ಹಾಗಲ್ಲ ಹೀಗೆಂದರೆ ಅದೇ ಮಾತು. ಅಜ್ಜಿಯ ಕನ್ನಡಕ ಸರಿಯಿಲ್ಲ ಎಂದರೂ, `ಅಜ್ಜಿ, ನಂದೊಂದು ಬಿಕಾಂ ಮುಗೀಲಿ. ಕೆಲಸಕ್ಕೆ ಸೇರ್ಕಂಡ ಮಾರನೇ ದಿವ್ಸ ನಿಮ್ಗೆ ಕನ್ನಡ್ಕ. ಆಯ್ತ?’’ಎಂದಾಯ್ತು. `ಹೌದೀಗ. ಕೆಲ್ಸವಾ ಗಿಲ್ಸವಾ? ಕಾಲೇಜಿಗೆ ಕಳ್ಸಿದ್ದೇ ಯಾಕಂಬಗಿತ್ತ್‌ ನಂಗೆ? ನೀ ಹೀಂಗ್ ಮಾತಾಡಿರೆ, ಈಗ್ಲೆ ರಾಮಚಂದ್ರನಿಗೆ ಹೇಳಿ ಕಾಲೇಜ್ ಬಿಡ್ಸಿ ನಿಂಗೆ ಮದಿ ಮಾಡ್ಸ್ತೆ ಕಾಣು.’’ಎಂದು ಮುಂತಾಗಿ ಅಜ್ಜಿ ಸಹಸ್ರ ನಾಮಾರ್ಚಣೆ ಮಾಡಿದರೂ ಅವಳಿಗೆ ಅದರ ಲಕ್ಷ್ಯವಿರುತ್ತಿರಲಿಲ್ಲ. `ಮದಿಯಾ ಮತ್ತೆಂತದ? ಹೋಯ್ನಿ ಹೋಯ್ನಿ.’ ಎಂದು ಹಾರಿಸಿಬಿಡುತ್ತಿದ್ದಳು. ಅಜ್ಜಿಯೂ ಅದನ್ನು ಕುಶಾಲೆಂದು ತಿಳಿದು ಮಾತಿಗೆ ಮಾತು ಕೊಡುತ್ತಿದ್ದರಷ್ಟೆ.

ಅಜ್ಜಿ ಅಂತ ಏನು, ಎಲ್ಲರೂ ತಿಳಿದದ್ದು ಕುಶಾಲೆಂದೇ. ಮದುವೆಯ ನೆಂಟಸ್ತಿಕೆ ಬಂದಾಗ ಅವಳು ಆ ಮಟ್ಟದಲ್ಲಿ ಅದನ್ನು ಎದುರಿಸಬಹುದೆಂದು ಯಾರೂ ಕನಸಿನಲ್ಲೂ ಎಣಿಸಿರಲಿಲ್ಲ. ಇಷ್ಟು ವರ್ಷದ ಮೇಲೂ ಅದನ್ನೀಗ ಯೋಚಿಸುವಾಗ ನನ್ನ ಮೈಯೆಲ್ಲ ಕೊಕ್ಕೆ ಕಟ್ಟಿದ ಹಾಗಾಗುತ್ತದೆ. ಅವಳೊಳಗೆ ಒಂದು ಹುಚ್ಚು ಧೈರ್ಯವಿತ್ತು. ಏನಾದರೂ ಮಾಡಬೇಕೆಂದರೆ, ಹಿಂದುಮುಂದು ನೋಡದೆ ಸೀದಾ ಮಾಡಿಯೇ ಬಿಡುವ ಒಂದು ರೀತಿಯ ವಿಚಿತ್ರ ಎದೆಗಾರಿಕೆ. ಇಲ್ಲದಿದ್ದರೆ, ಎಲ್ಲರನ್ನೂ ಎದುರಿಸಿಕೊಂಡು ಕೆಲಸಕ್ಕೆ ಸೇರಿ, ಮಂಗಳೂರಿನಲ್ಲಿ ಮನೆಮಾಡಿಕೊಂಡು ಇರಬೇಕೆಂದರೆ! ಬಹುಶಃ ನನ್ನಿಂದ ಇವತ್ತಿಗೂ ಸಾಧ್ಯವಿರುತ್ತಿತ್ತೋ ಇಲ್ಲವೋ.

ಅಜ್ಜಿ ಒಮ್ಮೊಮ್ಮೆ ಹೇಳುವುದಿತ್ತು, `ಅದು ಗಂಡುಕೋಟಿ. ಭಾಮಿಲ್ಲ, ಭಕ್ತಿಲ್ಲ. ಒಪ್ಪ ಒಯನ ಒಂ„„ದೂ ಕೇಣ್ಬೇಡ.’ ಅಂತ. ಆದರೆ ಅಜ್ಜಿಯದೂ ವಿಚಿತ್ರ. ಒಂದೊಂದು ಸಲ ಅದೇ ಶಬ್ದಗಳನ್ನು ಉಪಯೋಗಿಸಿಯೂ ಅವಳ ಮಾತು ಹೊಗಳುವ ದಾಟಿಗೆ ತಿರುಗಿದ್ದೂ ಇತ್ತು. ಅಂದರೆ, `ಏನ್ ಬೇಕಾರೆ ಹೇಳಿ. ಆ ರಾಜಿ ಒಂದಿದ್ದರೆ ಗಂಡುಬಲ. ಒಳ್ಳೆ ಎದಿಗಾರ್ತಿ ಹೆಣ್ಣದು, ನಿಮ್ಕಣಾಂಗೆಲ್ಲ ಅಲ್ಲ. ಆ ಹೆಣ್ಣಿದ್ರೆ ಒಂದು ನಮೂನಿ ಧೈರ್ಯ, ಹೌದ.’’ಎಂದು ಬಿಡುತ್ತಿದ್ದಳು. ಅಜ್ಜಿಯ ಮಾತಿನಲ್ಲಿ ಮಾತ್ರ ಸುಳ್ಳಿನ ಲವಲೇಶವಿರಲಿಲ್ಲ. ಆ ಧೈರ್ಯದ ಅನುಭವವನ್ನು ರಾಜಿಯ ಸಾಮೀಪ್ಯದಲ್ಲಿದ್ದುಕೊಂಡೇ ಪಡೆಯಬೇಕು. ಮನೆಯಲ್ಲಿ ಬಿಡಿ, ಶಾಲೆಯಲ್ಲಿ ಸಹ ನಮಗೆ ಏನು  ತೊಂದರೆ ತಾಪತ್ರಯಗಳು ಬಂದರೂ, ನಾವು ರಾಜಿಯ ಮೊರೆ. `ರಾಜಿ, ಆ ಹುಡುಗ ನನ್ನ ಕಡ್ಡಿ ಎಲ್ಲ ತುಂಡು ಮಾಡ್ತ.’ ಎಂದರೆ, `ತಡಿ, ಅವನ ಗರ ಬಿಡಿಸ್ತೆ.’’ ಎಂದವಳು, ಮರುದಿನ ಬಿಡುವಿನ ಸಮಯದಲ್ಲಿ ಸರೂತಕ್ಕೆ ನಮ್ಮ ಕ್ಲಾಸಿಗೆ ಬಂದು ನಿಂತದ್ದೇ ಗೊತ್ತು. ನಾನು, ನಮ್ಮ ಮನೆಯವರು ಆಯಿತಲ್ಲ, ಇನ್ನು ಅಕ್ಕಪಕ್ಕದವರು, ಗುರುತಿನವರು ಎಲ್ಲರೂ ಅಷ್ಟೆ. ದೂರು ತೆಗೆದುಕೊಂಡು ಬರುವುದು ಅವಳ ಹತ್ತಿರವೇ. ಒಮ್ಮೊಮ್ಮೆ ದೂರು ತರುವ ಅಗತ್ಯವೂ ಇರುವುದಿಲ್ಲ. ಅನ್ಯಾಯದ ಸುದ್ದಿ ಕಿವಿಗೆ ಬಿದ್ದರೂ ಸಾಕು, `ಹೋಯಿತಲ್ಲಿ ಗುರ್ಕಾರ್ತಿ. ಇದನ್ನ ಯಾರ್ ಕರೆದವ್ರು ಈಗ?’’ ಎಂದು ಅವಳ ಅಮ್ಮ ಬೈಯ್ಯುತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ, `ಎಲ್ಲಿ, ಏನು?’ ಅಂತ ಹೊರಟಾಗುತ್ತಿತ್ತು.

ಬದಿಮನೆಯ ಶ್ಯಾಮಲಿಯಂತೂ ಕೂತರೆ ನಿಂತರೆ, `ರಾಜೀ………….. ರಾಜೀ……….’ ಅಂತ ಓಡಿ ಬರುತ್ತಿದ್ದಳು. ಒಂದು ಸಲ ತನ್ನ ಬೆನ್ನಿಗೆ ಗುರಿಯಿಟ್ಟು ಯಾರೋ ಚೆಂಡು ಎಸೆದರೆಂದು ಶ್ಯಾಮಲಿ ಬಂದು ಫಿರ್ಯಾದು ಕೊಟ್ಟದ್ದೇ, ರಾಜಿ ಹೋಗಿ ಆ ಚೆಂಡನ್ನು ಗುದ್ದಿ ಒಡೆದು ಎರಡು ತುಂಡು ಮಾಡಿ ಆ ಹುಡುಗನ ಮುಖಕ್ಕೆ ಎಸೆದು ಬಂದಿದ್ದಳು.

ಹಾಗಂತ, ಕೆಲವೊಮ್ಮೆ ಅವಳ ಹತ್ತಿರ ಹೇಳಲಿಕ್ಕೆ ಹೇಳಿ, ಮತ್ತೆ, `ಶ್ಶೆ, ಹೇಳುಕಾಗ ಇತ್ತು.’ ಎಂದು ನಾಲಗೆ ಕಚ್ಚಿಕೊಂಡ ಪ್ರಸಂಗಗಳೂ ಇದ್ದವು.  ಮೂರನೇ ಕ್ಲಾಸಿನ ಬಿಜ್ಜು ಟೀಚರೊಮ್ಮೆ ನನ್ನ ಕೈಗಂಟಿಗೆ ಹೊಡೆದಾಗ ಹಾಗೇ ಆಗಿತ್ತು. ಬಾಯಿ ತಪ್ಪಿ ಅವಳ ಹತ್ತಿರ ಹೇಳಿದ್ದೇ ಸೈ. ಟೀಚರ ಹತ್ತಿರ ಮಾತಾಡಲಿಕ್ಕೆ ಹೊರಟದ್ದೇ ಸವಾರಿ. ನನಗೆ ಮಾತ್ರ ಆಗ ಭೂಮಿಯೇ ಬಾಯಿಬಿಡಬಾರದಿತ್ತೇ ಎಂದಾಗದೆ ಇರಲಿಲ್ಲ. ಆದರೆ ನನ್ನ ಭುಜದ ಮೇಲೆ ಒಂದು ಕೈ ಇಟ್ಟುಕೊಂಡು ಅವಳು ಬಿಜ್ಜು ಟೀಚರ ಹತ್ತಿರ ಮಾತನಾಡಿದ್ದನ್ನು ಎಣಿಸಿದರೆ, ಭುಜದ ಮೇಲಿನ ಅವಳ ಕೈಯ ಸ್ಪರ್ಷದ ಅನುಭವ ಈಗಲೂ ನನಗಾಗುತ್ತದೆ.

 

ಬ್ರಿಜೆಟಳ ಪರಿಚಯವಾಗುತ್ತ ಹೋದಂತೆ, ಅವಳ ರೀತಿನೀತಿ, ಆಸಕ್ತಿಗಳು, ಮಾತುಕತೆಗಳು, ಜೀವನದ ಬಗೆಗಿನ ಅವಳ ಸೂಕ್ಷ್ಮ ನೋಟಗಳು ನನಗೆ ಹಿಡಿಸತೊಡಗಿದುವು. ಯಾವುದಾದರೂ ಹೊಸ ಪುಸ್ತಕದ ಬಗ್ಗೆ, ಅಥವಾ ಕಲೆಯ ಹೊಸ ಅಲೆಯೊಂದರ ಬಗ್ಗೆ ಅವಳು ಏನಾದರೂ ಹೇಳುತ್ತಿದ್ದರೆ ಕೇಳಲು ನನಗೆ ಇಷ್ಟವಾಗುತ್ತಿತ್ತು. ಕಲಾವಿದೆಯಾದ ಅವಳ ಗೆಳತಿ ಜ್ಯೂಡಿಯಿಂದಾಗಿ, ಮೆಟ್ರೊಪೊಲಿಟನ್ ಮ್ಯೂಸಿಯಂನ ಕಲೋತ್ಸವ ಒಂದಕ್ಕೆ ನಾವು ಮೂವರು ಒಟ್ಟಿಗೆ ಹೋಗಿ ನೋಡಿ ಬಂದಿದ್ದೆವು. ಜ್ಯೂಡಿಯ ಸೊಲೊ ಕಲಾಪ್ರದರ್ಶನ ನಡೆದಾಗ ಬ್ರಿಜೆಟಳೊಟ್ಟಿಗೆ ನಾನೂ ಸಾಕಷ್ಟು ಓಡಾಡಿದ್ದೆ ಕೂಡಾ.

ಒಂದು ಮಧ್ಯಾಹ್ನ ಕೆಲಸದ ಹೊತ್ತಿನಲ್ಲಿ, ನನ್ನೊಡನೆ ಕೆಲಸ ಮಾಡುತ್ತಿದ್ದ ನಮ್ಮ ವಿಭಾಗದ ಅಕೌಂಟ್ಸ್‌ ಸಹಾಯಕಿ ಹಿಲರಿ ನನ್ನನ್ನು ಕರೆದು, `ಗೀತಾ ಅಲ್ಲಿ ನೋಡಲ್ಲಿ.’ ಎಂದು ಕಣ್ಸನ್ನೆ ಮಾಡಿದಳು. ನೋಡಿದರೆ, ಹೊಸದಾಗಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ್ದ ನಿಕ್ ಟೈಲರ್ ಎಂಬಾತ ಏನೇನೋ ಜೋಕ್ ಹೇಳಿ ಬ್ರಿಜೆಟಳನ್ನು ನಗಿಸಲು ಯತ್ನಿಸುತ್ತಿದ್ದ. `ಪೂರ್ ಚಾಪ್, ಅವಳನ್ನು ಒಲಿಸಿಕೊಳ್ಳಲು ನೋಡುತ್ತಿದ್ದಾನೆ. ಅವಳಿಗೆ ಆಗಲೇ ಮದುವೆಯಾಗಿದೆಯೆಂದು ಅವನಿಗೆ ಗೊತ್ತಿರಲಿಕ್ಕಿಲ್ಲ.’ ಎಂದು ಹಿಲರಿ ಕಣ್ಣು ಮಿಟುಕಿಸಿದಳು. ನನಗೆ ಅರ್ಥವಾಗಲಿಲ್ಲ. `ಏನು?’ ಎಂಬಂತೆ ಹುಬ್ಬು ಏರಿಸಿದೆ. `ಶಿ ಎಂಡ್ ಜ್ಯೂಡಿ ಆರ್ ಎಸ್ ಗುಡ್ ಎಸ್ ಮ್ಯಾರೀಡ್.’ ಎಂದಳು. ಮತ್ತೆ ಬಗ್ಗಿ ನನ್ನ ಕಿವಿಯಲ್ಲಿ, `ಅವಳು ಲೆಸ್ಬಿಯನ್(ಸಲಿಂಗಿ)’ ಎಂದು ಪಿಸುಗುಟ್ಟಿದಳು. ನಾನು ಸುಮ್ಮನಿದ್ದೆ. ಆದರೆ ಅದನ್ನು ಕೇಳಿದ ನನ್ನ ಮನಸ್ಸು ಮುಂಚಿನಂತಿರುವುದು ಸಾಧ್ಯವಿಲ್ಲವೆನ್ನುವುದು ಹಿಲರಿಗೂ ಗೊತ್ತಿದ್ದಂತಿತ್ತು. ಅದೇ ಅವಳ ಉದ್ದೇಶವೂ ಆಗಿದ್ದಿರಬೇಕೆಂಬ ಸಂಶಯವೂ ನನಗಾಯಿತು. ಏಕೆಂದರೆ ನನ್ನ ಕಿವಿಯ ಹಾಳೆಗಳನ್ನು ಬಿಸಿಯೇರಿಸಿದ ಅವಳ ದನಿಯ ಉಸುರಿನಲ್ಲಿ ಉತ್ಸುಕತೆಯ ಛಾಯೆ ಸ್ಪಷ್ಟವಾಗಿತ್ತು.

ಜ್ಯೂಡಿ ಮತ್ತು ಬ್ರಿಜೆಟ್ ಒಟ್ಟಿಗೆ ವಾಸಿಸುತ್ತಿದ್ದರೆಂಬ ಸಂಗತಿ ನನಗೆ ಈ ಮೊದಲೇ ತಿಳಿದಿತ್ತಾದರೂ, ಹಿಲರಿಯ ಮಾತು ನನ್ನನ್ನು ಸ್ವಲ್ಪ ಮಟ್ಟಿಗೆ ಬುಡ ತಪ್ಪಿಸಿದಂತಾಯಿತು. ಆ ನಂತರದ ಕೆಲ ದಿನಗಳಲ್ಲಿ ನನಗರಿವಿಲ್ಲದೆಯೇ  ನಾನು ತುಸು ಅನ್ಯಮನಸ್ಕಳಾಗಿಯೇ ಇದ್ದೆನೆನ್ನಬಹುದು.

ಮುಂದೊಂದು ದಿನ ಬೆಳಿಗ್ಗೆ ಆಫೀಸಿಗೆ ಬಂದಾಗ ನನ್ನ ಮೇಜಿನ ಮೇಲಣ ಪೆನ್ನು ದಾನಿಗೆ ಒಂದು ಅಂಟುಕಾಗದ ಹಚ್ಚಿಕೊಂಡಿತ್ತು. ನೋಡಿದರೆ, `ಇದರ ಅಡಿ `ಶಿಕಾಗೊ’’ ಸಂಗೀತ ನಾಟಕದ ಎರಡು ಪಾಸುಗಳು, ನಿನಗೂ, ಮಹೇಶನಿಗೂ; ತಪ್ಪದೆ ನೋಡಿ. – ಬ್ರಿಜೆಟ್.’ ಎಂದಿತ್ತು. ಅಬ್ಬ! ಆಜ್ಞೆಯೇ! ಎಂದನ್ನಿಸಿತಾದರೂ, ’ಬ್ರಿಜೆಟಳ ಚುರುಕು ಅಕ್ಷರ ಜೋಡಣೆ ನೋಡಿ ನಗು ಬರದಿರಲಿಲ್ಲ. ನಾನು ಮತ್ತು ನನ್ನ ಗಂಡ ಮಹೇಶ ಬಹಳ ದಿನಗಳಿಂದ ನೋಡಬೇಕೆಂದು ಬಂiÀÄಸಿದ್ದ ನಾಟಕವದು. ನಾಟಕಕ್ಕಂತೂ ಹೋಗಿಯೇ ಹೋದೆವು. ವಾಪಸ್ಸು ಬರುವಾಗ ಟಿಕೇಟಿನ ಹಣ ಕೊಡಲು ಹೋದರೆ ಬ್ರಿಜೆಟ್ ಸುತಾರಾಂ ಒಪ್ಪಲಿಲ್ಲ. ಬದಲು, `ಎಷ್ಟು ದಿನಗಳಿಂದ ಪೆಚ್ಚು ಮೋರೆ ಮಾಡ್ಕೊಂಡು ಕೂತಿರ್ತಿದ್ದಿಯಲ್ಲ.’ ಎಂದು ಎರಡೂ ತೋರು ಬೆರಳುಗಳಿಂದ ತನ್ನ ಬಾಯಿಯ ಬದಿಗಳನ್ನು ಕೆಳ ಮುಖಕ್ಕೆ ಜಗ್ಗಿ ಹಿಡಿದು ನನ್ನನ್ನು ಲೇವಡಿ ಮಾಡಿ, `ಅದಕ್ಕೆ ಇದು ನನ್ನ ಟ್ರೀಟ್.’ ಎಂದು ಬೆನ್ನಿಗೆ ಗುದ್ದಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಜ್ಯೂಡಿ ನನ್ನನ್ನು ನೋಡಿ, `ಸೊ, ಆರ್ ಯು ಒಕೇ ನೌ?’’ಎಂದು ಹೇಳುತ್ತಿದ್ದಂತೆ, ಇಬ್ಬರೂ ಕೈಯ್ಯಾಡಿಸಿಕೊಂಡು ಹೊರಟು  ಹೋಗಿಯೂ ಆಯ್ತು.

ದಿನಗಳೆದಂತೆ ನಿಧಾನವಾಗಿ ಬ್ರಿಜೆಟಳ ಬಗೆಗೆ ನನಗಿದ್ದ ಪೂರ್ವಗ್ರಹದ ಪರೆ ಕಳಚಿಕೊಳ್ಳುತ್ತ ಬರುತ್ತಿದ್ದಂತೆ, ಒಂದು ದಿನ ಏನಾಯ್ತೆಂದರೆ, ನನ್ನ ಕ್ಯಾಬಿನ್ನಿನಿಂದ ಹೊರಗೆ ಕಾಲಿಡುವಾಗ ಅಲ್ಲಿ ಬಿದ್ದಿದ್ದ ಪೆನ್ಸಿಲೊಂದರ ಮೇಲೆ ಕಾಲಿಟ್ಟದ್ದೊಂದು ಗೊತ್ತು. ಉದ್ದಕ್ಕೂ ಜಾರಿ ಹೋಗಿ ಮುಂದಿದ್ದ ಮೇಜಿಗೆ ಹಣೆ ಗುದ್ದಿ, ಗೋಡೆಗೆ ತಾಗಿ ಬಿದ್ದು ಬಿಟ್ಟಿದ್ದೆ. ಒಂದು ಕ್ಷಣಕಾಲ ಕಣ್ಣು ಕತ್ತಲೆ ಬಂದಿತ್ತು. ಎಚ್ಚರಾಗುವಾಗ ಬದಿಯ ಕೋಣೆಯಲ್ಲಿ ಮಲಗಿದ್ದೆ. ಕಣ್ಣಿನ ಮೇಲೆ ಸ್ವಲ್ಪ ಗುದ್ದಿದ ಹಾಗಾಗಿ ಗುಳ್ಳೆ ಬಂದಿತ್ತು. ಎದ್ದು ಕುಳಿತು ಕೊಳ್ಳುವಷ್ಟರಲ್ಲಿ, ಹತ್ತಿರ ನಿಂತಿದ್ದ ಬ್ರಿಜೆಟ್, `ಈಗ ಸೀದ ನನ್ನ ಮನೆಗೆ ಹೋಗಿ ಸ್ವಲ್ಪ ಆರಾಮ ಮಾಡುವುದು. ಆಮೇಲೆ ನಿನ್ನ ಮನೆಗೆ. ನಡಿ.’’ ಎಂದಳು. ಹಾಗನ್ನುವಾಗ, ಅವಳ ಎರಡೂ ಕೈಗಳು ಸೊಂಟದ ಮೇಲಿದ್ದವು. ಅವಳ ಮಾತಿನ ಧಾಟಿಯಲ್ಲಿದ್ದ ಆಜ್ಞೆ ನನಗೆ ಹಿಡಿಸಲಿಲ್ಲ. ಅಥವಾ ಅವಳು ನಿಂತ ಭಂಗಿಯೋ? ಅಂತೂ ಅವಳು ಆ ಮಾತಾಡಿ ಮುಗಿಸಲಿಕ್ಕಿಲ್ಲ, ನನ್ನ ಕಣ್ಣಲ್ಲಿ ನೀರು ತುಳುಕಿ ನಾನು ಬಿಕ್ಕಳಿಸಿದೆ. ನನ್ನ ಈ ತರದ ನಡೆವಳಿಕೆ ನನಗೇ ತೀರ ಅನಿರೀಕ್ಷಿತವಾಗಿತ್ತು. ಕೆಲವೊಮ್ಮೆ ಎಷ್ಟು ಹೊತ್ತಿಗೆ ನಾವು ಏನು ಮಾಡಬಹುದು, ನಮ್ಮ ಭಾವನೆಗಳು ಹೇಗೆ ಕೆರಳಬಹುದೆಂಬ ಲವಲೇಶ ಸುಳಿವಾದರೂ ನಮಗೇ ಇರುವುದಿಲ್ಲವಲ್ಲ ಎಂದು ನನ್ನ ಅವಸ್ಥೆ ನೋಡಿ ನನಗೆ ನಾಚಿಕೆಯೂ ಆಗಿ ಬಿಟ್ಟಿತ್ತು.

ರಾಜಿಯ ನೆನಪು ನನ್ನನ್ನು ತೀರ ಕಾಡಿದಾಗೆಲ್ಲ, ಅವಳ ಬಗ್ಗೆ ಎಣಿಸುತ್ತ ಹೋದಂತೆ ಏನೋ ಅಸಹನೆ, ಯಾವುದೋ ಬೇಜಾರು, ಒಟ್ಟೊಟ್ಟಿಗೆ ಆತ್ಮೀಯತೆಯ ಉಜೆಯೂ ಸೇರಿ ಒಳಗಿಂದ ಒಮ್ಮೊಮ್ಮೆ ಒತ್ತಡ ಒತ್ತೊತ್ತಿ ಬರುವುದಿತ್ತು. ಈಗ, ಸೊಂಟದ ಮೇಲೆ ಕೈ ಇರಿಸಿದ ಬ್ರಿಜೆಟ್ ಇದ್ದಕ್ಕಿದ್ದಂತೆ, `ನಡಿ ಮನೆಗೆ.’ ಎನ್ನುತ್ತಲೂ, ಆ ಕ್ಷಣದಲ್ಲಿ, ಅದೇ ರೀತಿಯ ಒತ್ತಡ ಒಳಗಿನಿಂದ ಏರಿ ಬಂದಂತಾಗಿ, ನೋವಾದ ಹಣೆಯನ್ನು ಒತ್ತಿ ಹಿಡಿದು, ಅವಳತ್ತ ದೃಷ್ಟಿ ಹರಿಸಿದ ನನಗೆ ದುಃಖ ತಡೆಯದಂತಾಗಿತ್ತು.

ಮತ್ತೆ ಬ್ರಿಜೆಟಳ ಮನೆಯಲ್ಲಿ ಅವಳ ಸಂಗಾತಿ ಜ್ಯೂಡಿ ನನ್ನ ಹಣೆಯ ಮೇಲಿನ ಮೊಳಪೆಯನ್ನು ನೋಡಿ, ಮಂಜುಗಡ್ಡೆಯ ಪಟ್ಟಿ ಮಾಡಿ ತಂದಳು. ತೆಳ್ಳಗೆ ಕೆಂಪುಕೆಂಪಗಿನ ಮುಖದ ಜ್ಯೂಡಿಯ ಸೊಂಟವಂತೂ ಅಸೂಯೆ ಹುಟ್ಟಿಸುವಂತೆ ಒಂದೇ ಮುಷ್ಠಿಯಷ್ಟಿದ್ದು, ಆಕೆ ಯಾವ ಅಂಗಿ ತೊಟ್ಟರೂ ಅದು ಮೈಯ ಭಾಗದಂತಾಗಿ ಬಿಡುತ್ತಿತ್ತು. ಯಾವುದೋ ಹಾಡನ್ನು ಗುಣುಗುಣಿಸುತ್ತ, ಕುಣಿಯುವ ಹೆಜ್ಜೆಯಲ್ಲಿ ಅವಳು ಓಡಾಡುವುದನ್ನು ನೋಡಲು ಮುದವೆನಿಸುತ್ತಿತ್ತು. ಮೂರು ಕಪ್ಪುಗಳ ತುಂಬ ನೊರೆಯುಕ್ಕುವ ಕಾಫಿ ಮತ್ತು ಮಫಿನ್ಸುಗಳ ತಟ್ಟೆಯೊಡನೆ ಬಂದ ಬ್ರಿಜೆಟ್, `ಇಕೋ ನಿನ್ನ ಇಷ್ಟದ ಕಾಫಿ.’ ಎಂದಳು. ಆರಾಮ ಕುರ್ಚಿಯಲ್ಲಿ ಒರಗಿ, ಹಣೆಗೆ ಮಂಜುಗಡ್ಡೆಯ ಪಟ್ಟಿಯನ್ನಿಟ್ಟುಕೊಂಡು, ಕಾಫಿ ಹೀರುತ್ತಿದ್ದಂತೆ, ನನ್ನ ಮನಸ್ಸು ಒಂದು ಸ್ಥಿಮಿತಕ್ಕೆ ಬರತೊಡಗಿತು.

ಚಳಿಗಾಲದ ಮಧ್ಯಾಹ್ನದ ತಣ್ಣಗಿನ ಬೆಳಕಿನ ನಸು ಹಳದಿ ಪ್ರಭೆಯಲ್ಲಿ ಅವರಿಬ್ಬರ ಆತ್ಮೀಯ ಒಡನಾಟ, ಮೆಲು ಮಾತುಕತೆಗಳು, ಮನೆವಾರ್ತೆಯ ಬೆಚ್ಚನೆಯ ಸದ್ದುಗಳು, – ನನ್ನೊಳಗೆ ಎಂದೋ ಕಳೆದುಹೋಗಿದ್ದ ಬದುಕಿನ ಭಾಗವೊಂದನ್ನು ಪುನಃ ಸೃಷ್ಟಿಸುತ್ತಿರುವಂತೆ ಅನ್ನಿಸತೊಡಗಿ ಮನಸ್ಸು ತನ್ನಿಂದ ತಾನೇ ಶಾಂತವಾಗುತ್ತ ಹೋಯಿತು. ಕೈಗೆ ಸಿಗದೆ ಎಲ್ಲೋ ಮುಲ್ಲೆಯಲ್ಲಿ ಅಡಗಿದ್ದ ಕಗ್ಗಂಟೊಂದು ಮೆಲ್ಲಮೆಲ್ಲನೆ ಬಿಡಿಸಿಕೊಳ್ಳುತ್ತಿರುವುದು ನನ್ನ ಅನುಭವಕ್ಕೆ ಬರತೊಡಗಿತು. ಬಿಡಿಸಿಕೊಳ್ಳುತ್ತಿರುವ ನನ್ನ ಅನುಭವಗಳಿಗೆ ಜೀವ ತುಂಬುವವಳಂತೆ ನಾನು ರಾಜಿಯ ಬಗ್ಗೆ, ನಮ್ಮಜ್ಜಿಯ ಬಗ್ಗೆ, ನೆರೆಯ ಶ್ಯಾಮಲಿಯ ಬಗ್ಗೆ ಹೇಳುತ್ತ ಹೋದೆ.

 

ಅಜ್ಜಿಂiÀi  ಕೊನೆಗಾಲದಲ್ಲಿ ಸ್ನಾನಪಾನ ಎಲ್ಲ ಅಮ್ಮ ಮಾಡಿಸುತ್ತಿದ್ದಳಾದರೂ, ಅವರನ್ನು ಎತ್ತಿಕೊಂಡು ಬಚ್ಚಲು ಮನೆಗೆ ತೆಗೆದುಕೊಂಡು ಹೋಗುತ್ತಿದ್ದವಳು ರಾಜಿಯೇ. ರಪ್ಪನೆ ಎತ್ತಿ ಲೀಲಾಜಾಲವಾಗಿ ಅಜ್ಜಿಯ ದೇಹವನ್ನು ಅವರೇ ಹೇಳುತ್ತಿದ್ದಂತೆ `ಹೂವಿನ ಕಣಾಂಗೆ’ ’ಅಲ್ಲಿಂದಿಲ್ಲಿ ಇಡುತ್ತಿದ್ದಳು. ಆಗ ಅವಳು ಬಿಕಾಂ ಕೊನೆಯ ವರ್ಷದಲ್ಲಿದ್ದಳು. ಮಾಧವಣ್ಣ ಎತ್ತಿದರೂ ಅಜ್ಜಿಗೆ ಸಮವಾಗುತ್ತಿರಲಿಲ್ಲ. ಮತ್ತೆ ರಾಜಿಯ ಕಡೇ ಪರೀಕ್ಷೆಯ ದಿನವೇ ಅಜ್ಜಿ ಸತ್ತದ್ದು. ರಾತ್ರಿ ಇಡೀ ಯಾರಿಗೂ ಸಮ ನಿದ್ದೆ ಇರಲಿಲ್ಲ. ಅಷ್ಟಿದ್ದೂ, ಆವತ್ತಿನ ದಿನ ರಾಜಿ ಪರೀಕ್ಷೆ ಕಟ್ಟಲು ಹೋಗಿದ್ದಳು. ಈ ಸಲ ಹೋದರೆ ಹೋಗಲಿ, ಒಕ್ಟೋಬರಿನಲ್ಲಿ ಕಟ್ಟಿದರಾಯ್ತು ಎಂದು ನನ್ನ ದೊಡ್ಡಪ್ಪಯ್ಯ, ಅಂದರೆ ರಾಜಿಯ ತಂದೆಯಾದಿಯಾಗಿ ಪ್ರತಿಯೊಬ್ಬರು ಹೇಳುತ್ತಿದ್ದರೂ ಕೇಳದೆ, ನೆಟ್ಟಗೆ ಕಾಲೇಜಿಗೆ ನಡೆದಿದ್ದಳು. ಅವಳ ಎದೆಗಾರಿಕೆಯೆಂದರೆ ಹಾಗೆ.

ಇನ್ನು, ಬದಿಮನೆಯ ಶ್ಯಾಮಲಿಗೆ ಟೈಫಾಯಿಡ್ ಆಗಿ ಲಾಚಾರ ಆದಾಗ ರಾಜಿಯಲ್ಲದಿದ್ದರೆ ಅವಳು ಬದುಕುವ ಆಶೆ ಇದ್ದಿರಲಿಲ್ಲ, ಅವಳನ್ನು ಆಸ್ಪತ್ರೆಗೆ ಸೇರಿಸಲೂ ರಾಜಿಯೇ ಕಾರಣ. `ಆಸ್ಪತ್ರೆಗೆ ಹಾಕ್ತ್ರಿಯ? ಇಲ್ಲಾ ಅವಳನ್ನ ಕೊಲ್ತ್ರಿಯ?’ ’ಅಂತ ಶ್ಯಾಮಲಿಯ ಮನೆಯವರ ಹತ್ತಿರ ಕಣ್ಣಿಗೆ ಕೈ ಹಾಕಿ ಪ್ರಶ್ನಿಸಿದ್ದಳು. ಮತ್ತೆ ಆಸ್ಪತ್ರೆ-ಮನೆ ಅಂತ ಓಡಾಡಿದವಳೂ ಅವಳೇ. ಹಸೆ ಕಚ್ಚಿ ಮಲಗಿದ್ದ ಆ ಹುಡುಗಿ ಮೇಲೆ ಬಿದ್ದದ್ದೇ ರಾಜಿಯಿಂದ ಎನ್ನಬಹುದೇನೋ.

ಬಾಳೆ ಗಿಡದಂತೆ ಬಳುಕಿಕೊಂಡಿರುತ್ತಿದ್ದ ಶ್ಯಾಮಲಿ ಮೇಣದ ಬೊಂಬೆಯಂತಿದ್ದಳು. ಒಳ್ಳೆ ಅರಸಿನ ಬಿಳಿ ಮೈಬಣ್ಣ; ತೊಡೆಯ ವರೆಗೆ ಬರುವ ದಟ್ಟ ಕರಿ ಕೂದಲು. `ಫೂ ಅಂತ ಉರುಪಿದ್ರೆ ಅಚೆ ಮನೆಗೆ ಹಾರಿ ಹೋಪಿ.’ ’ಎಂದು ರಾಜಿ ಅವಳನ್ನು ಗಾಳಿಗೆ ಹಿಡಿಯುವುದಿತ್ತಾದರೂ, ಉರುಟುರುಟು ಮೈ ಕಟ್ಟಿನ ಅವಳು ಹೇಳುವಂತಹ ಸಪೂರವೇನಿರಲಿಲ್ಲ. ತಂದೆ ತಾಯಿ ಇಲ್ಲದ ಅವಳು ನಮ್ಮ ಪಕ್ಕದ ಮನೆಯಲ್ಲಿರುವ ಅವಳ ದೂರದ ಸಂಬಂಧಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ಕಲಿಯುತ್ತಿದ್ದಳು. ರಾಜಿಯ ತರಗತಿಯಲ್ಲೇ ಇದ್ದ ಅವಳು ಶಾಲೆಗೆ ಹೋಗುವಾಗ ನಮ್ಮ ಜೊತೆಯಲ್ಲೇ ಬರುತ್ತಿದ್ದಳುü. ವಾಪಾಸು ಬಂದ ಮೇಲೆ ಮಾತ್ರ ನಾವೆಲ್ಲ ಮನೆಯೊಳಗೆ ಬಂದು ಅದೆಷ್ಟೋ ಹೊತ್ತಿನ ವರೆಗೂ ಗೇಟಿನ ಬುಡದಲ್ಲಿ ಅವರಿಬ್ಬರ ಮಾತುಕತೆ ಸಾಗಿಕೊಂಡಿರುತ್ತಿದ್ದುದು ನಿತ್ಯದ ರೂಢಿ. ಅವರ ಈ ಸಂಜೆಯ ಪಟ್ಟಾಂಗವು ನಮ್ಮ ಮನೆಯಲ್ಲಿ ಮಾತ್ರವಲ್ಲ, ನಮ್ಮ ರಸ್ತೆಯಲ್ಲೂ ಸಾಕಷ್ಟು ಹೆಸರುಮಾಡಿತ್ತು. ರಜೆಯ ದಿನಗಳಲ್ಲಂತೂ ಅವರ ಮಾತಿಗೆ ವಿರಾಮವೇ ಇರುತ್ತಿರಲಿಲ್ಲ. ಅದೆಷ್ಟು ಮಾತು, ಅದೇನು ನಗೆ. ಅವರ ಪಂಚಾತಿಕೆಗಳಲ್ಲಿ ನಾನೂ ಹೆಚ್ಚಾಗಿ ಭಾಗಿಯಾಗುತ್ತಿದ್ದೆನಾದರೂ, ಆಮೇಲಾಮೇಲೆ, ಅವರು ಅದೆಷ್ಟೇ ನನ್ನನ್ನು ತಮ್ಮೊಡನೆ ಸೇರಿಸಿಕೊಂಡರೂ, ಯಾಕೋ ಅವರ ಮಧ್ಯದಲ್ಲಿ ನಾನೆಲ್ಲೋ ಹೊರಗಿನವಳಾದೆನೇನೋ ಎಂಬ ಭಾವನೆ ಒಮ್ಮೊಮ್ಮೆ ಸೂಕ್ಷ್ಮವಾಗಿ ನನ್ನೊಳಗೆ ನುಸುಳಿ ಮಾಯವಾಗುತ್ತಿತ್ತು. ನಾನು ಬಂದೊಡನೆ ಅವರಿಬ್ಬರು ಫಕ್ಕನೆ ಮಾತು ನಿಲ್ಲಿಸಿ ಬಿಟ್ಟಂತೆ, ವಿಷಯಾಂತರ ಮಾಡಿದಂತೆ ನನಗೆ ಭ್ರಮೆಯಾಗುತ್ತಿದುದೂ ಇತ್ತು.

ಶ್ಯಾಮಲಿಯನ್ನು ಎಲ್ಲರೂ ಕರೆಯುತ್ತಿದ್ದುದೇ ರಾಜಿಯ ಬಾಲ ಎಂದು. ಎಲ್ಲಿಗೇ ಹೋಗಲಿ, ಬರಲಿ, ಜೋಡಿ ಹಕ್ಕಿಗಳಂತೆ ಇಬ್ಬರೂ ಅಂಟಿಕೊಂಡೇ ಹೋಗಬೇಕು, ಬರಬೇಕು. ರಾಜಿ ಹೇಳಿದ್ದು, ಮಾಡಿದ್ದು ಶ್ಯಾಮಲಿಗೆ ಸಮ. ಅವಳ ಕೈಯ್ಯಲ್ಲಿ ಒಂದು ಹೂವೋ, ಚಾಕಲೇಟೋ ಏನಿದ್ದರೂ, `ರಾಜೀ………..’’ ಎಂದು ಓಡಿ ಬಂದು ರಾಜಿಗೆ ಕೊಟ್ಟರೇ ಅವಳಿಗೆ ಸಮಾಧಾನ. ಇನ್ನು ರಾಜಿಗಂತೂ ಕೇಳುವುದೇ ಬೇಡ. ಏನಿದ್ದರೂ, `ಪಾಪ, ಶಾಮಲಿಗಿರಲಿ, ಅಲ್ದಾ?’’ಎಂದು ಹೇಳಿ, ತೆಗೆದಿಡುತ್ತಿದ್ದಳು. ಕ್ರಮೇಣ ಹಾಗೆ ಹೇಳುವ ಕಟ್ಟಳೆಯೂ ನಿಂತು, ಅವಳ ಹತ್ತಿರ ಏನಿದ್ದರೂ, ಅದರಲ್ಲಿ ಶ್ಯಾಮಲಿಯದೇ ಹಕ್ಕು ಎಂಬಂತೆ ನಾವು ಓರಗೆಯವರೆಲ್ಲ ಸಹಜವಾಗಿಯೇ ಭಾವಿಸುವಷ್ಟರ ಮಟ್ಟಿಗೆ ಅದು ಮುಂದುವರಿದಿತ್ತಾದರೂ, ಒಮ್ಮೊಮ್ಮೆ ಮಾತ್ರ ನನ್ನ ಮನಸ್ಸಿಗೆ ರಗಳೆಯೆನಿಸದಿರುತ್ತಿರಲಿಲ್ಲ. ಹಾಗಂತ ಶ್ಯಾಮಲಿಯೆಂದರೆ ನನಗೆ ತುಂಬ ಅಚ್ಚುಮೆಚ್ಚೂ ಇತ್ತು. ನನಗಂತ ಅಲ್ಲ, ನಮ್ಮ ಮನೆಯಲ್ಲಿ ಎಲ್ಲರಿಗೂ ಅವಳೆಂದರೆ ಮರುಕ, ಮಮತೆ. ನನ್ನ ಮಟ್ಟಿಗಂತೂ, ನನ್ನ ಹೊಲಿಗೆಯಾದಿ ಹೊಲಿಗೆ, ಕ್ರಾಫ್ಟಾದಿ ಕಾಫ್ಟಿನ ಎಲ್ಲ ಕೆಲಸಗಳನ್ನೂ ಕೊನೆಯ ನಿಮಿಷದಲ್ಲಿ ನನಗೆ ಮಾಡಿಕೊಡುತ್ತಿದ್ದವಳು ಅವಳೆ. ಅಲ್ಲದೆ, ಜಿಬ್ಲಿ, ರಿಂಗ್, ಥ್ರೋ ಬಾಲ್, ಯಾವ ಆಟಕ್ಕೂ ನಾನು ಕರೆದ ಕೂಡಲೇ ಬರುವವಳೂ ಅವಳೆ. ಅಷ್ಟಿದ್ದೂ, ಶ್ಯಾಮಲಿಗೂ ನನಗೂ, ಶಾಲೆಯಲ್ಲೋ, ಆಟದಲ್ಲೋ ಜಗಳವೇನಾದರೂ ಆಗಿ, ಶ್ಯಾಮಲಿ, `ತಡಿ, ರಾಜಿಯತ್ರ ಹೇಳ್ತೆ.’’ಅಂದರೆ ಸಾಕು, `ರಾಜಿ ನನ್ನ ಅಕ್ಕ, ನಿನ್ನ ಅಕ್ಕ ಅಲ್ಲ, ಆಯ್ತ?’ ಎಂದು ಕದನಕ್ಕಿಳಿದವಳಂತೆ ಹಕ್ಕು ಸ್ಥಾಪಿಸಲು ಹೊರಡುತ್ತಿದ್ದೆ. ಆದರೆ ಈಗ ಯೋಚಿಸುವಾಗ, ಯಾವುದೇ ಹಕ್ಕುಗಳನ್ನು ಮೀರಿ ನಿಂತ, ಸಂಬಂಧಗಳ ಆಚೆಗಿನ ಆತ್ಮೀಯ ಬಂಧನ ಅವರದಾಗಿತ್ತೇನೋ ಎಂದು ನನಗನಿಸುತ್ತಿದೆ.

ನನ್ನ ಯೋಚನೆಗಳನ್ನು ಸಮರ್ಥಿಸುತ್ತ, `ಯೂ ಸೆಡ್ ಇಟ್, ಗೀಟಾ.’ ಎಂದ ಬ್ರಿಜೆಟ್ ನಾನು ಹೇಳಿದ್ದು ಅಕ್ಷರಶಃ ನಿಜ ಎಂದಳು. ಕನ್ನಡಿಯೆದುರು ನಿಂತು ಕೂದಲಿನ ಕೆಲವೇ ಎಳೆಗಳಿಗೆ ಚಿನ್ನದ ಮೆರುಗನ್ನು ಲೇಪಿಸಲು ಒದ್ದಾಡುತ್ತಿದ್ದ ಜ್ಯೂಡಿ, `ಓಹ್, ಐ ಕಾಂಟ್. ದಿಸ್ ಇಸ್ ಇಂಪೋಸಿಬಲ್.’ ಎಂದು ಕಾಲು ಬಡಿದಳು. `ನೀನೊಬ್ಬಳು. ತಾ ಇಲ್ಲಿ; ಲೆಟ್ ಮಿ ಟ್ರೈ.’ ಎಂದು ಬ್ರಿಜೆಟ್ ಅವಳನ್ನು ಕರೆದು, ಚಿನ್ನದ ಬಣ್ಣ ತುಂಬಿದ ಪುಟ್ಟ ಬಾಟಲಿ ಮತ್ತು ಸಪೂರ ಹಿಡಿಕಡ್ಡಿಯಂತಹ ಬ್ರಶ್ಶನ್ನು ಅವಳ ಕೈಯಿಂದ ತೆಗೆದು ಕೊಂಡವಳು, – ಗೀತಾ, ಈ ಹುಡುಗಿಯನ್ನು ನಾನು ಮೊತ್ತ ಮೊದಲು ಭೇಟಿಯಾದದ್ದು ಎಲ್ಲಿ ಗೊತ್ತಾ? ನನ್ನ ಅಮ್ಮನ ತಂಗಿಯ ಮನೆಯಲ್ಲಿ ಕ್ರಿಸ್ಮಸ್ಸಿನ ಒಂದು ಸಂಜೆ -’ಎಂದಳು.

ಪರಿಚಯ ಆದ ಕ್ಷಣದಿಂದಲೇ ಅವರಿಗೆ ಒಬ್ಬರಿನ್ನೊಬ್ಬರಲ್ಲಿ ಆಸಕ್ತಿ ಬೆಳೆಯಿತಂತೆ. ಮತ್ತೆ ಆರೇ ತಿಂಗಳಲ್ಲಿ ನಾವು ಜೊತೆಗಿರಲು ತೊಡಗಿದೆವು ಎಂದಳು.

`ನಿಮ್ಮ ಮನೆಯಲ್ಲಿ….?’ ನಾನು ಅನುಮಾನಿಸುತ್ತಲೇ ದನಿ ಹೊರಡಿಸಿದೆ.

ತಂದೆಗಿಂತ ಅವಳ ತಾಯಿಯದೇ ಹೆಚ್ಚು ಸಮಸ್ಯೆಯಾಗಿತ್ತಂತೆ. `ಗಂಡಸೊಬ್ಬನೊಂದಿಗೆ ಇಡೀ ಜೀವಮಾನವನ್ನು ಕಳೆಯುವುದನ್ನು ನಾನು ಊಹಿಸಲೂ ಆರೆ.’ ಎಂದು ತನ್ನ ತಾಯಿಗೆ ಮನವರಿಕೆ ಮಾಡಿಸಬೇಕಾದರೆ ಸಾಕುಸಾಕಾಯಿತೆಂದು ಹೇಳಿದಳು. ಆ ಮಾತನ್ನು ಈಗ ಹೇಳುವಾಗಲೂ ಅವಳ ದೇಹವು ಸಣ್ಣಗೆ ಕಂಪಿಸಿತು. ಅವಳ ತಾಯಿ ಕಾಲೇಜೊಂದರಲ್ಲಿ ಚರಿತ್ರೆಯ ಪ್ರಾಧ್ಯಾಪಕಿಯಂತೆ. ಆದರೂ, `ಶಿ ಹೆಡ್ ದ ಶಾಕ್ ಓಫ್ ಹರ್ ಲೈಫ್ ವೆನ್ ಐ ಟೊಲ್ಡ್‌ ಹರ್.’ ’ಎಂದಳು ಬ್ರಿಜೆಟ್.

ಮತ್ತೆ ಅವಳ ಸ್ವರದಲ್ಲಿ ಮರುಕವೂ ಮೂಡಿತು, `ಪಾಪ, ನಿಜ ಹೇಳಬೇಕೆಂದರೆ ನನ್ನ ಅಮ್ಮನೇ ನನ್ನನ್ನು ಆವತ್ತು ಚಿಕ್ಕಮ್ಮನ ಮನೆಗೆ ಕಳಿಸಿದವಳು.’ ಅವಳ ತಾಯಿಯೂ, ಚಿಕ್ಕಮ್ಮನೂ ಸೇರಿ ಯಾವುದೋ ಹುಡುಗನನ್ನು ಅವಳಿಗೆ ಗಂಟು ಹಾಕುವವರಿದ್ದರಂತೆ. ಆದರೆ ಅಲ್ಲಿ ತನಗೆ ಗಂಟು ಬಿದ್ದವಳು ಇವಳು ಎನ್ನುತ್ತ ಬ್ರಿಜೆಟ್ ಬ್ರಶ್ಶಿನ ತುದಿಯಿಂದ ಜ್ಯೂಲಿಯ ತಲೆಗೆ ಬಡಿದಳು.

ನೆತ್ತಿಯ ಮೇಲಿನ ನಾಲ್ಕೇ ನಾಲ್ಕು ಎಳೆ ಕೂದಲಿಗೆ ಮಾತ್ರ ಬಣ್ಣ ಬಳೆಯುವಂತೆ ಎಚ್ಚರಿಕೆ ನೀಡುತ್ತ ಜ್ಯೂಡಿ ಬ್ರಿಜೆಟಳ ಎದುರಿನ ಸ್ಟೂಲಿನಲ್ಲಿ ಕುಳಿತಳು. ಜ್ಯೂಡಿಯ ಹೆತ್ತವರಿಗೆ ಇನ್ನೂ ಅವಳ ಮೇಲೆ ಅಸಮಾಧಾನವಿದ್ದಂತಿತ್ತು. `ಅವರ ಜೀವನ ಅವರಿಗೆ, ನಮ್ಮದು ನಮಗೆ.’ ಎಂದಳು ಅವಳು.

ಶ್ಯಾಮಲಿಯ ಮಾರುದ್ದ ಕೂದಲಿಗೆ ಎಣ್ಣೆ ಹಾಕಿ ಕೀಸಿ ಬಾಚಿ, ಜಡೆ ಕಟ್ಟುವುದೆಂದರೆ ರಾಜಿಗೆ ಮಹಾ ಅರ್ತಿ. ಪ್ರತಿ ಸಲ ಬಾಚಿದ ಮೇಲೂ, ಜಡೆಯನ್ನು ಹಿಂದಕ್ಕೂ ಮುಂದಕ್ಕೂ ಜಗ್ಗುತ್ತಾ, `ಕೇರಿಯಾ, ಮರಿಯಾ? ಕಂಗಾ, ತಾರೆಯಾ? ಸಾದಿಯಾ ಬೀದಿಯಾ?…….’’ಎಂದು ಕೇಳುವಾಗ. `ಕೇರಿ…. ಕಂಗು…’ ಎಂದು ಶ್ಯಾಮಲಿಯೊಟ್ಟಿಗೆ ನಾವೂ ದನಿಗೂಡಿಸುತ್ತಿದ್ದೆವು. ಬುಡದಲ್ಲಿ ಮುಷ್ಟಿಗೆ  ಸಿಗದಷ್ಟು ಅಗಲವಿದ್ದು, ಕ್ರಮೇಣ ಚೂಪಾಗುತ್ತ ಹೋಗುವ ಅವಳ ಜಡೆ ನಮಗಾಗ ಒಮ್ಮೆ ಕೇರೆ ಹಾವಿನಂತೆ, ಇನ್ನೊಮ್ಮೆ ಅಡಿಕೆಯ ಮರದಂತೆ… ಹೀಗೆ ಕಾಣುತ್ತ ಹೋಗುತ್ತಿತ್ತು.

ಮೆಟ್ರಿಕ್ ಮುಗಿದ ಮೇಲೆ ಶ್ಯಾಮಲಿಯ ವಿದ್ಯಾಭ್ಯಾಸ ನಿಂತು ಬಿಟ್ಟಿತ್ತು. ಮನೆಕೆಲಸ ಮಾಡಿಕೊಂಡು ಇರುತ್ತಿದ್ದಳು. ಹೈಸ್ಕೂಲಿನಲ್ಲಿದ್ದಾಗಲೂ ಅವಳಿದ್ದ ಮನೆಯಲ್ಲಿನ ಕೆಲಸಕಾರ್ಯಗಳ ಒತ್ತಡದಿಂದಾಗಿ ಅವಳಿಗೆ ಓದುಬರಹದ ಕಡೆಗೆ ಅಷ್ಟೊಂದು ಲಕ್ಷ್ಯ ಕೊಡುವುದಕ್ಕಾಗುತ್ತಿದ್ದಿರಲಿಲ್ಲ. ಅದೆಷ್ಟೋ ಸಲ ಶಾಲೆಗೆ ಬರಲಿಕ್ಕೂ ಅವಳಿಗೆ ಪುರುಸೊತ್ತು ಇರುತ್ತಿರಲಿಲ್ಲ. ಆಗೆಲ್ಲ ರಾಜಿ ಅವಳಿಗೇನು ಸ್ವಲ್ಪ ಸಹಾಯ ಮಾಡುತ್ತಿದ್ದಳೇ? ನೋಟ್ಸು ಬರೆಯುವುದು, ಲೆಕ್ಕ ಹೇಳಿಕೊಡುವುದು, ಎಂದು ತನ್ನ ಓದಿನಗಿಂತ ಹೆಚ್ಚು ಕಾಳಜಿ ವಹಿಸುತ್ತಿದ್ದಳು. ಇದು ಎಷ್ಟರ ವರೆಗೆಂದರೆ, – ಒಮ್ಮೆ ನನ್ನ ಲೆಕ್ಕ ಪರೀಕ್ಷೆಯ ದಿನ; ಅದರ ಗೊಡವೆಯೇ ಇಲ್ಲದೆ, ರಾಜಿ ನಸುಕಿನ ಹೊತ್ತಿನಲ್ಲಿ ಕರಕರ ಶ್ಯಾಮಲಿಯ ನೋಟ್ಸು ಗೀಚುತ್ತ ಕುಳಿತಿದ್ದಳು. ಅವಳನ್ನೇ ದುರುಗುಟ್ಟಿ ನೋಡಿದ ನಾನು, ಪುಸ್ತಕಗಳನ್ನು ಎದೆಗವಚಿಕೊಂಡು ನಿಂತು, `ನಾ ಫೇಲ್ ಆದ್ರೂ ನಿಂಗೇನು ಬೇಜಾರಿಲ್ಲ, ಅಲ್ದ?’ ಎಂದಿದ್ದೆ. ನನ್ನ ಒಂದೊಂದು ಶಬ್ದದಲ್ಲೂ ಸಿಟ್ಟು ಸೂಸುತ್ತಿದ್ದಿರಬೇಕು. ಆದರೆ, ರಾಜಿಗೆ ಮಾತ್ರ ಅದನ್ನು ಕೇಳಿ ತಡೆಯಲಾಗದ ನಗು ಬಂದಿತ್ತು. ಪುಸ್ತಕ ಮುಚ್ಚಿಟ್ಟು, ನನ್ನ ಬಳಿಗೆ ಬಂದು ನನ್ನನ್ನು ಬಾಚಿ ಹಿಡಿದು, `ಆಯ್ತು ಮಾರಾಯ್ತಿ, ಬಾ ಲೆಕ್ಕ ಹೇಳಿ ಕೊಡ್ತೆ.’ ಎಂದಿದ್ದಳು.  ಅಷ್ಟೇ ಅಲ್ಲ, ಮುಂದೆ ಯಾವ ಯಾವಾಗೆಲ್ಲ, ನನ್ನ ಈ ಮಾತುಗಳನ್ನು ನೆನೆಸಿಕೊಂಡು, ಹೇಳಿ ಹೇಳಿ, ನಗುತ್ತಿದ್ದಳು. ಕೆಲವೊಮ್ಮೆ ಶ್ಯಾಮಲಿಯ ಹತ್ತಿರವೇ ಹೇಳಿಕೊಂಡು ನಗುವುದು ಬೇರೆ. ನನಗೆ ಆಗೆಲ್ಲ ಶ್ಯಾಮಲಿಗೆ ಹಾಗೆ ನಗಲಿಕ್ಕೆ ಏನು ಹಕ್ಕು ಎಂದೆನಿಸಿ, ಅವರ ನಗೆಯಲ್ಲಿ ಪಾಲುಗೊಳ್ಳಲು ಸೆಡ ಬಿಡುತ್ತಿರಲಿಲ್ಲ.

ನನ್ನ ಮಾತು ಕೇಳಿ ಬ್ರಿಜೆಟ್ `ಐ ನೊ.’ ಎಂದು ನಕ್ಕಳು. ಕನ್ನಡಿಯೆದುರು ನಿಂತು ಕೂದಲಿಗೆ ಕ್ಲಿಪ್ ಸಿಕ್ಕಿಸುತ್ತಿದ್ದ ಜ್ಯೂಡಿ ಕಿಟಿಕಿಟಿ ಎಂದು ನಗತೊಡಗಿದ್ದಲ್ಲದೆ, ಕೂದಲು ಬಾಚುವುದನ್ನು ಬಿಟ್ಟು, ಕೆನ್ನೆಯುಬ್ಬಿಸಿ  ನನ್ನನ್ನು ಅಣಕಿಸತೊಡಗಿದಳು. ನನಗೂ ನಗೆ ತಡೆಯಲಿಲ್ಲ. `ಯೂ ನಾಟಿ.’ ಎಂದು ಅಲ್ಲೆ ಇದ್ದ ಹೂದಾನಿಯನ್ನು ಅವಳತ್ತ ಎಸೆಯುವಂತೆ ಎತ್ತಿ ಹಿಡಿದೆ. ಅವಳು ಹೆದರಿದವಳಂತೆ ಓಡಿ ಬಂದು ಬ್ರಿಜೆಟಳ ಹಿಂದೆ ಅಡಗಿ ಅವಳ ಭುಜ ಹಿಡಿದು ನಿಂತಳಾದರೂ, ಅವಳ ಮುಖದ ಮೇಲಿನ  ನಗೆ ಮಾಸಿರಲಿಲ್ಲ. `ಓಕೆ, ಓಕೆ.’ ಎಂದ ಬ್ರಿಜೆಟ್, ಭುಜದ ಮೇಲಿದ್ದ ಜ್ಯೂಡಿಯ ಕೈ ಹಿಡಿದುಕೊಂಡವಳು, `ಮುಂದೆ?’ ಎನ್ನುವಂತೆ ನನ್ನನ್ನು ನೋಡಿದಳು.

ಆ ಕ್ಷಣಕ್ಕೆ ನನಗೆ ಯಾಕೋ ಹೂವಿನ ಪೂಜೆಯ ಘಟನೆ ಫಕ್ಕನೆ ನೆನಪಾಯಿತು. ಸಣ್ಣಂದಿನ ಅದೆಷ್ಟೋ ಘಟನೆಗಳು ನೆನಪಿನಿಂದ ಜಾರಿ ಹೋಗಿವೆಯಾದರೂ, ಹೂವಿನ ಪೂಜೆಯ ಈ ಘಟನೆ ಯಾಕೆ ಇಷ್ಟು ಸ್ಪಷ್ಟವಾಗಿ ನೆನಪುಳಿಯಬೇಕಿತ್ತೋ ನನಗೊತ್ತಿಲ್ಲ.

ದೇವಸ್ಥಾನದಲ್ಲಿ ಹೂವಿನ ಪೂಜೆಯೆಂದು ನಾವೆಲ್ಲ ಒಂದು ರಾಶಿ ಹೂವಿನೆದುರು ಕುಳಿತುಕೊಂಡು ಮಾಲೆ ಕಟ್ಟುತ್ತಿದ್ದೆವು. ಅದೇನೋ ಮುನ್ನೂರು ಮೊಳದ ಮಾಲೆ ಹಾಕುತ್ತೇನೆಂದು ನಮ್ಮ ಅಜ್ಜಿ ಹೇಳಿಕೊಂಡಿದ್ದರಂತೆ. ಮನೆ ತುಂಬ ಮಲ್ಲಿಗೆ, ಜಾಜಿ, ಸೇವಂತಿಗೆ ಹೂಗಳ ಘಮ್ಮ ಪರಿಮಳ. ಮಾಲೆ ಕಟ್ಟುವುದರಲ್ಲಿ ಅತಿ ಜಾಣೆಯೆಂದರೆ ರಾಜಿಯೇ. ಅವಳು ತಾನು ಸರಸರನೆ ಕಟ್ಟುವುದಲ್ಲದೆ, ಮಧ್ಯ ಮಧ್ಯ ನಾವು ಕಟ್ಟಿದ್ದನ್ನು ಸರಿಮಾಡುತ್ತಿದ್ದಳು. ಮುಕ್ಕಾಲಂಶ ಮಾಲೆಗಳಲ್ಲಿ ಅವಳದೇ ಕೈವಾಡವೆಂದರೂ ನಡೆದೀತು. ಮಾಲೆಯ ಕೆಲಸ  ಮುಗಿಯುತ್ತ ಬರುವಾಗ ಅಜ್ಜಿ, “ಇನ್ನು, ನಮ್ಮ ರಾಜಿ ಮದಿಯೊಂದು ಸಸೂತ್ರ ನಡೆದ್ರೆ, ಆಗ ಇನ್ನೊಂದು ಹೂಗಿನ್ ಪೂಜೆ ಮಾಲಿಂಗೇಶ್ವರನಿಗೆ.’ ’ಎಂದು ಕುಳಿತಲ್ಲಿಂದಲೇ ಮಾಲಿಂಗೇಶ್ವರನಿಗೆ ಕೈಮುಗಿದರು.’ ಆಗ ದೊಡ್ಡಮ್ಮ ಚಿಂತೆಯನ್ನು ಲೇಪಿಸಿಕೊಂಡಂತಿದ್ದ ತಮ್ಮ ಮುಖವನ್ನೊಮ್ಮೆ ಉದ್ದಕ್ಕೆ ಹಿಗ್ಗಿಸಿ ಎಳೆದು, `ಏನೋಪ್ಪ, ಇದೊಂದು ಕೊದಂಟಿ ಹಾಂಗೆ ಬೆಳ್ಕಂಡಿತ್ತು. ಎಲ್ಲಿ ತಯಾರಾಗಿ ಕೂತಿದ್ನ?’ ಎಂದರು. `ಆಪುದು ತಪ್ಪ, ಆಗದಿದ್ದುದ್ ಆಗ. ನಿಂಗೆ ಮಂಡೆಬಿಸಿ ಬೇಡ, ಗೊತ್ತಾಯ್ತ? ನಾ ಎಲ್ಲ ಅಂದಾಜು ಮಾಡಿಟ್ಟಿದ್ದೆ. ನಮ್ಮ ರಮ ಬಂದವಳು ಹೇಳಿದ್ಳಲ್ಲ. ಅವಳ ಪೈಕಿ ಆ ಕೋಟೇಶ್ವರದ ಮಾಣಿ. ಜಾತ್ಕ ಕೊಟ್ಟಿದ್ದೆ. ಜಾತ್ಕ ಕೂಡಿರೆ, ಪರೀಕ್ಷೆ ಮುಗಿಯೂಕೂ ಆಚೀಚೆ ಕಾಂಬುದಲ್ಲ.’ ಎಂದು ಅಜ್ಜಿ ನಿರ್ಧಾರಿತವಾಗಿ ಎಂಬಂತೆ ಹೇಳಿದ್ದರು. ಮತ್ತೆ, `ಈ ಹೆಣ್ಣು ಒಪ್ಕಾಯ್ತಲ್ಲತ್ತೆ.’ ಎಂಬ ದೊಡ್ಡಮ್ಮನ ಆತಂಕದ ಸ್ವರಕ್ಕೆ, `ಒಪ್ಪದೆ ಎಲ್ಲಿ ಹೋತ್ತ್‌? ನೀ ಮಾತಾಡ್ ಬೇಡ.’ ಅಜ್ಜಿಯ ಆಶ್ವಾಸನೆಯ ನುಡಿ.

ಉಯ್ಯಾಲೆಯಲ್ಲಿ ಕುಳಿತು ಹೂ ಕಟ್ಟುತ್ತಿದ್ದ ರಾಜಿ ಈ ಎಲ್ಲ ಮಾತುಗಳನ್ನು ಕೇಳಿಯೂ ಕೇಳದಂತಿದ್ದಳು. ಅಲ್ಲೇ ಬದಿಯಲ್ಲಿ ಕುಳಿತ ಶ್ಯಾಮಲಿ ಮುಖ ತಗ್ಗಿಸಿ ಹೂ ಸುರಿಯುತ್ತಿದ್ದಳು. `ಏ, ಶ್ಯಾಮ್ಲಿ, ಎಂತದ? ಎಂತಾಯ್ತ ನಿಂಗೆ?’’ ಎನ್ನುವ ರಾಜಿಯ ಗಡಸು ದನಿ ಕೇಳಿದಾಗಲೇ, ಬಾಳೆಯ ನಾರನ್ನು ನೀರಲ್ಲಿ ಅದ್ದಿಡುತ್ತಿದ್ದ ನಾನು ಮುಖವೆತ್ತಿ ನೋಡಿದ್ದು. ತಗ್ಗಿಸಿದ ಶ್ಯಾಮಲಿಯ ಮುಖವೆಂಬುದು ಇದ್ದಕ್ಕಿದ್ದಂತೆ ಹಿಪ್ಳು ಕಟ್ಟತೊಡಗಿತ್ತು. ಧುಮುಕುವ ದುಃಖವನ್ನು ತಡೆಯುವವಳಂತೆ ತುಟಿ ಕಚ್ಚಿಕೊಂಡು ಕೈಯ್ಯಲ್ಲಿದ್ದ ಹೂವಿನ ಸರವನ್ನೇ ದಿಟ್ಟಿಸುತ್ತಿದ್ದ ಅವಳು ರಾಜಿಯ ಮಾತಿಗೆ ತಲೆಯೆತ್ತಿ ಮೇಲೆ ನೋಡಲಿಲ್ಲ; ಒಂದಕ್ಷರ ಮಾತನಾಡಲೂ ಇಲ್ಲ.

`ಯಾಕೆ? ಎಂತಾಯ್ತು ರಾಜಿ?’ ಎಂದ ನನ್ನ ಮಾತು ಅವರಿಬ್ಬರ ಕಿವಿಗೆ ಬಿದ್ದ ಕುರುಹು ಕಾಣಲಿಲ್ಲ. ಮತ್ತೆ ರಾಜಿಯೇ, ಶ್ಯಾಮಲಿಯ ಭುಜದ ಮೇಲೆ ಕೈ ಇರಿಸಿ, ಅವಳ ತಗ್ಗಿದ ಮುಖವನ್ನೇ ನೋಡುತ್ತ, ಒಳದನಿಯಲ್ಲಿ, `ನೀ ಹೆದರ್ಬೇಡ, ಶ್ಯಾಮ್ಲಿ, ಇವರು ಎಷ್ಟೇ ಮಾತಾಡಲಿ. ಮದಿ ಮಾಡ್ಕಂಬವಳು ನಾನಲ್ದ? ಅಜ್ಜಿಗೆ ಬೇರೆ ಕಸಬಿಲ್ಲ.’ ಎಂದು ಪಿಸುನುಡಿದಳು. ಮತ್ತೆ ಶ್ಯಾಮಲಿಯೆಡೆ ಬಗ್ಗಿ, `ಮಂಗ್ಳೂರಿಗೆ ಹೋಯಿ ನಾನ್ ಮನೆ ಮಾಡಿದ ಮೇಲೆ, ನೀ ಸಾ ನನ್ನೊಟ್ಟಿಗೆ ಬಾ. ನೀ ಬೇಕಾದ್ರೆ ಅಲ್ಲಿ ಕಾಲೇಜು ಕಲೀಲಕ್ಕು, ಆಯ್ತ?’ ಎಂದಳು. ಸಣ್ಣ ಮಕ್ಕಳೊಡನೆ ಮಾತನಾಡುವ  ಕಕ್ಕುಲತೆಯಿತ್ತು ರಾಜಿಯ ಸ್ವರದಲ್ಲಿ. ತುಂಬಿದ ಕಣ್ಣುಗಳನ್ನು ಮೇಲೆತ್ತಿದ ಶ್ಯಾಮಲಿ ರಾಜಿಯನ್ನು ನೋಡಿ ಕ್ಷೀಣ ನಗೆ ನಕ್ಕಳು. ಅವರಿಬ್ಬರು ಒಬ್ಬರನ್ನೊಬ್ಬರು ನೋಡಿದ ಆ ನೋಟದಲ್ಲಿ ಅದೇನೋ ಇತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು. ಥಟ್ಟನೆ ನಾನೊಬ್ಬಳು ಹೊರಗಿನವಳೆಂಬ ಭಾವನೆ ಬಂದು, ನನಗೆ ಅರ್ಥವಾಗದ ಅದೇನೋ ಗುಟ್ಟು ಅವರಿಬ್ಬರ ನಡುವೆ ಇದ್ದಂತೆ ಪ್ರಥಮ ಬಾರಿಗೆ ನನಗನ್ನಿಸಿದ್ದು ಆಗಲೇ.

ಮತ್ತೆ ದೇವಸ್ಥಾನಕ್ಕೆ ಹೊರಡುವಾಗ ಹೂಮಾಲೆಗಳನ್ನೆಲ್ಲ ಕಾರಿನ `ಡಿಕ್ಕಿ’ಯಲ್ಲಿಟ್ಟು, ಹಿಡಿಯುವಷ್ಟು ಜನ ಕಾರಿನೊಳಗೆ ಕುಳಿತ ಮೇಲೆ ರಾಜಿ ಮತ್ತು ಶ್ಯಾಮಲಿ ನಡೆದುಕೊಂಡು ಬರುವುದೆಂದಾಯಿತು. `ಹಾಂಗಾರ್ ನಾ ಸಾ ನಡ್ಕಂಡು…’ ಎಂದು ಕೂಗಿ, ನಾನೂ ಅವರ ಹಿಂದೆ ಓಡಿದೆ. ದೇವಸ್ಥಾನವೇನು ಅಂಥ ದೂರವಿರಲಿಲ್ಲ. ಹೆಚ್ಚೆಯ ಮೇಲೆ ಹೆಜ್ಜೆ ಹಾಕಿ ನಡೆದರೂ ಐದು ನಿಮಿಷಕ್ಕಿಂತ ಹೆಚ್ಚು ಬೇಡ.

ದೇವಸ್ಥಾನದ ಒಳಗೆ ಹೋದರೆ ಮೇಲಿನಿಂದ ಕೆಳಗಿನ ವರೆಗೆ ಇಳಿಬಿಟ್ಟ ಹೂವಿನ ಮಾಲೆಗಳ ಸಾಲೇ ಸಾಲು. ಮೈ ಜುಮ್ಮೆನ್ನಿಸುವ, ಮತ್ತು-ಭರಿಸುವ ಪರಿಮಳ. ಪೂಜೆ ಮುಗಿಯುವ ವರೆಗೂ ಕೈಕೈ ಹಿಡಿದು ನಿಂತಿದ್ದ ಅವರಿಬ್ಬರನ್ನು ಬಿಟ್ಟು ನಾನು ಹಂದಲಿಲ್ಲ. ಶ್ಯಾಮಲಿ ಏನೋ ಪಿಸುಗುಟ್ಟಿದ್ದಕ್ಕೆ, ರಾಜಿ, `ಅಗ್ನಿ ಸಾಕ್ಷಿ, ಜಲ ಸಾಕ್ಷಿ… ಇಲ್ಲಿ ಹೂವಿನ ಸಾಕ್ಷಿ,,,,,,,.’ ಎಂದೇನೋ ಹೇಳಿದಂತಾಯಿತು. ಘಂಟಾನಾದದಲ್ಲಿ ಸರಿ ಕೇಳುತ್ತಲೂ ಇರಲಿಲ್ಲ. `ಯಾಕೆ? ಹೂವಿನ ಸಾಕ್ಷಿಯಾ?’ ಎಂದು ಕೇಳಿದ ನನ್ನ ಪ್ರಶ್ನೆಯೆಂಬುದು ಪೂಜೆಯ ಸದ್ದಿನಲ್ಲಿ ಪೂರ್ತಿ ಮುಳುಗಿಹೋಗಿರಬೇಕು. ಪ್ರಸಾದ ತೆಗೆದುಕೊಂಡು ಅಲ್ಲಿಂದ ಹೊರಡುವಾಗ, ಗೇಟು ದಾಟುತ್ತಿದ್ದ ರಾಜಿ ಮಲ್ಲಿಗೆಯ ಚಂಡೊಂದನ್ನು ತನ್ನ ಜಡೆಗೆ ಸಿಕ್ಕಿಸಿಕೊಂಡು, ಮತ್ತೊಂದನ್ನು ಶ್ಯಾಮಲಿಯ ಜಡೆಗೆ ಮುಡಿಸುವುದು ಕಂಡಿತು.

ತದೇಕಚಿತ್ತದಿಂದ ಕೇಳುತ್ತಿದ್ದ ಬ್ರಿಜೆಟ್, `ಹೌ ಬ್ಯೂಟಿಫುಲ್!’ ಎಂದು ಉದ್ಘರಿಸಿದಳು. ಅವಳಿನ್ನೂ ತನ್ನ ಭುಜದ ಮೇಲಿದ್ದ ಜ್ಯೂಡಿಂiÀi  ಕೈಗಳನ್ನು ಹಿಡಿದೇ ಇದ್ದಳು. ಗದ್ದವನ್ನು ಬ್ರಿಜೆಟಳ ತಲೆಗೆ ಊರಿ ನಿಂತಿದ್ದ ಜ್ಯೂಡಿಯಂತೂ ಹೊಳೆಯುವ ಕಣ್ಣುಗಳಿಂದ ನನ್ನನ್ನು ದಿಟ್ಟಿಸುತ್ತಿದ್ದವಳು,

`ನೀನು ಹೇಳುವಾಗ ನಿನ್ನ ಆ ಮಲ್ಲಿಗೆ ಹೂವಿನ ಪರಿಮಳ ನನ್ನ ಮೂಗಿನೊಳಗೆಲ್ಲ ವ್ಯಾಪಿಸಿತು.’ ಎಂದು ಧೀರ್ಘವಾಗಿ ಆಸ್ವಾದಿಸುವವಳಂತೆ ಶ್ವಾಸವನ್ನು ಎಳೆದುಕೊಂಡು, ಅರ್ಧ ನಿಮೀಲಿತನೇತ್ರಳಾಗಿ, `ಪ್ರೀತಿ ಎಂದರೂ ಹಾಗೇ ಅಲ್ಲವೇ? ಹೂವಿನ ಸೂಕ್ಷ್ಮ ಸುವಾಸನೆಯ ಪಸರುವಿಕೆಯಂತೆ, ಹರಿವ ನೀರಿನ ಅನಿರ್ಬಂಧ ಓಟದಂತೆ, ಸಂಗೀತದ ಮಧುರ ಅಲೆಗಳಂತೆ….’ ಎನ್ನತೊಡಗಿದಳು.

 

ವಿಚಿತ್ರವೆಂದರೆ, ರಾಜಿ ಸಾಯುವ ಕೆಲವು ಸಮಯ ಮೊದಲಿನಿಂದಲೇ ನಾನು ಅವಳಲ್ಲಿ ಮಾತು ಬಿಟ್ಟಿದ್ದೆ. ಅದೊಂದು ರೀತಿಯ ಮಕ್ಕಳಾಟಿಕೆಯ ಸಿಟ್ಟು ಇದ್ದಂತೆ. ಮಾತು ಬಿಟ್ಟದ್ದೆಂದರೆ, ಬಿಟ್ಟೇಬಿಟ್ಟದ್ದೆಂದಲ್ಲ. ಸರಿಯಾಗಿ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಅಂದರೆ, ಒಂದು ರೀತಿಯ ಸೂಕ್ಷ್ಮವಾದ ಕಡೆಗಣಿಸುವಿಕೆ. ಅಂತೂ ಏನಾದರೂ ಅಲ್ಲದ್ದು ಮಾಡಿ, ಅವಳು ರೇಗುವಂತೆ ಮಾಡುತ್ತಿದ್ದೆ. ಅವಳು ಕರೆದರೆ ಕೇಳದಂತೆ ಹೋಗುವುದು, ಅವಳು ಹೇಳಿದ್ದರ ವಿರುದ್ಧ ಮಾಡುವುದು, ಇತ್ಯಾದಿ. ಒಮ್ಮೊಮ್ಮೆಯಂತೂ, ಅದೆಂಥ ಹುಚ್ಚುತನದ ಕೆಲಸ ಮಾಡುತ್ತಿದ್ದೆನೆಂದರೆ, `ಹೋಂ ವರ್ಕ್ ಮಾಡಿದ್ದಿಯನಾ?’ ಅಂತ ರಾಜಿ ಕೇಳಿದ್ದೇ ಆದರೆ `ಇಲ್ಲ, ನಾನ್ ಮಾಡುದಿಲ್ಲ.’’ ಎಂದು ಬಾಯಿ ವಾರೆ ಮಾಡಿ ಹೇಳಿ, ಹಠದಲ್ಲೆಂಬಂತೆ ಮಾಡದೇ ಇದ್ದು, ಎಷ್ಟರವರೆಗೆಂದರೆ ಶಾಲೆಯಲ್ಲಿ ಬೈಗಳು ತಿನ್ನಿಸಿ ಕೊಳ್ಳುವ ವರೆಗೂ ಅದು ಮುಂದುವರಿಯುತ್ತಿತ್ತು.

ಅದು ಯಾಕೆ ಹಾಗೆ ಮಾಡಿದೆನೆಂದು ಇವತ್ತಿಗೂ ನನಗೆ ಸರಿಯಾಗಿ ಗೊತ್ತಿಲ್ಲ. ಈಗ ಇಷ್ಟು ವರ್ಷಗಳ ಮೇಲೆ ಅವನ್ನೆಲ್ಲ ಎಣಿಸುವಾಗ ನನಗೆ ಕುಚೋದ್ಯವೆನಿಸುತ್ತದೆ. ಇವತ್ತೀಗ ಆಗಿನವರು ಎಷ್ಟೆಲ್ಲ ಜನ ಈ ಪ್ರಪಂಚದಲ್ಲಿ ಇಲ್ಲ, – ರಾಜಿ, ಅಜ್ಜಿ, ಶ್ಯಾಮಲಿ, ದೊಡ್ಡಪ್ಪಯ್ಯ. ಆಗ ಮಾತ್ರ ನಮ್ಮ ಸುತ್ತ ಇರುವ ಜಗತ್ತೆಲ್ಲ ಎಂದೆಂದಿಗೂ ಸ್ಥಿರ ಎನ್ನುವ ಭಾವದಲ್ಲಿ ಸಿಟ್ಟು, ಸೆಡವು, ಇನ್ನೊಂದು ಅಂತ ಪ್ರತಿಯೊಬ್ಬರ ಮೇಲೂ ನಮ್ಮದೊಂದು ಹಕ್ಕು ಸ್ಥಾಪನೆಯೇ ನಡೆಯುತ್ತಿತ್ತು.

ಆವತ್ತು ಅವಳು ಮಂಗಳೂರಿಗೆ ಹೊರಟ ದಿನವೂ, ಮುಖ ಬಿಮ್ಮಗೆ ಮಾಡಿಕೊಂಡೇ ಇದ್ದೆ ನಾನು. ಅವಳು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದಾಳೆಂಬ ದುಃಖಕ್ಕಿಂತ ಹೆಚ್ಚು, ಹೊರಡುವ ತಯಾರಿಯಲ್ಲಿನ ಅವಳ ಖುಶಿ ನನ್ನಲ್ಲಿ ಸಿಟ್ಟು-ಸಂಕಟಗಳನ್ನು ಉಂಟುಮಾಡಿತ್ತು. ಹೊಸ ಮನೆ ಮಾಡುವಾಗ ಸಹಾಯಕ್ಕೆಂದು ಶ್ಯಾಮಲಿಯೂ ಪೆಟ್ಟಿಗೆ ಕಟ್ಟಿದ್ದಳು. ಅದು ನನ್ನಲ್ಲಿ ಇನ್ನಷ್ಟು ಹಿಂಸೆಗೆ ಕಾರಣವಾಗಿತ್ತು.

ಹೊರಡಲು ತಯಾರಾಗಿ ಕಾರಿನ ಹತ್ತಿರ ನಿಂತಿದ್ದಾಗ, ಅವರವರೊಳಗೆ ಏನೋ ಮಾತಾಡಿಕೊಂಡು ನನ್ನನ್ನು ನೋಡಿ ನಕ್ಕದ್ದು ನನಗೆ ಎಡೆಕಣ್ಣಿನಿಂದ ಕಾಣುತ್ತಿತ್ತು. `ಅದಕ್ಕಾ? ಅದಕ್ಕೆ ಮಾ ಸಿಟ್ಟು.’ ’ಎಂದು ನನ್ನ ಅಮ್ಮ ಹೇಳುವುದೂ ಕೇಳಿಸಿತ್ತು. ರಾಜಿ, `ಏ ಹೆಣ್ಣೆ, ಇಲ್ಲಿ ಬಾ’ ಎಂದಂತಾದರೂ ನಾನು ಹಂದದೆ ನಿಂತಿದ್ದೆ. ಫಕ್ಕನೆ ನನ್ನ ಹತ್ತಿರ ಬಂದ ರಾಜಿ ನನ್ನನ್ನು ಮೈಗಾನಿಸಿಕೊಂಡು, `ಏ  ಸಿಟ್ಟನಾ? ರಜೆ ಬಂದಕೂಡಲೇ ಬಾ ಆಯ್ತ?’’ ಎಂದು ನನ್ನ ಮುಖ ನೇವರಿಸಿದ್ದಳು. ನನಗೆ ಬಿಕ್ಕಳಿಸುವಂತಾಗಿತ್ತು.  ಶ್ಯಾಮಲಿಯೂ ಓಡಿ ಬಂದು, `ಹೋಗಿ ಬರ್ತೆ ಗೀತಾ.’ ಎಂದು ಎರಡೂ ಕೈ ಹಿಡಿದು ಹೇಳಿದ್ದಳು. ಅಷ್ಟಾದರೂ ನನ್ನ ಮುಖವನ್ನು ಕಷ್ಟದಲ್ಲಿ ಬೀಗಿಸಿಕೊಂಡೇ ಅದು ಹೇಗೆ ಇದ್ದೆನೋ.

ಕಾರು ಹತ್ತಿ ಅವರು ಹೋಗುವುದನ್ನು ಬಾಗಿಲ ದಾರಂದಕ್ಕೆ ಒರಗಿ ನಿಂತು, ಕಡೆಗಣ್ಣಿನಿಂದ ನೋಡಿದ್ದೆಷ್ಟೋ ಅಷ್ಟೆ. ಅದೇ ಅವರ ಬಗ್ಗೆ ಇವತ್ತಿಗೂ ನನ್ನಲ್ಲುಳಿದ ಕೊನೆಯ ದೃಶ್ಯ, – ಕಾರೊಳಗೆ ತುರುಕಿ ಕುಳಿತು ಕಿಟಿಕಿಯ ಗಾಜಿನ ಎಡಕಿನೊಳಗಿಂದ ಕೈಯಾಡಿಸಿ, ಅವರಿವರನ್ನು ಕರೆದು ಟಾ ಟಾ ಹೇಳುತ್ತಿರುವ ಅವರ ಕೈಗಳ ಬೀಸು, ನಗುತ್ತಿರುವ ಮುಖದ ಭಾಗಗಳು, ಗಾಳಿಗೆ ಹಾರುತ್ತಿದ್ದ ಮುಂಗುರುಳುಗಳು. ಮುಖ ಕೆಳಗೆ ಮಾಡಿ ನಿಂತು, ಅಂಗಿಯ ನೂಲು ಕೀಳುವುದರಲ್ಲಿ ಮಗ್ನಳಾಗಿದ್ದಂತಿದ್ದ ನಾನು ಕೊನೆಯದಾಗಿ ಅವರಿಗೆ ಕೈಯಾಡಿಸಲೂ ಹೋಗಿರಲಿಲ್ಲ. ಹೋದರೆ ಹೋಗಲಿ, ಇವರಿಲ್ಲದಿದ್ದರೇನು ಮಹಾ ಎಂಬಂತೆ ನಿಂತಿದ್ದೆ.

ಆಗ ಹೋದ ಅವರಿಬ್ಬರು ಮತ್ತೆ ತಿರುಗಿ ಬರಲಿಕ್ಕಿಲ್ಲವೆಂದು ಯಾರಾದರೂ ಕನಸಿನಲ್ಲಾದರೂ ಎಣಿಸಿದ್ದರೇ? ಮಂಗಳೂರಿಗೆ ಹೋದ ಕೆಲವೇ ಸಮಯದಲ್ಲಿ ರಾಜಿಯ  ಮದುವೆ ನಿಶ್ಚಯವಾಗಿತ್ತು. ಅವಳು ಮದುವೆ ಬೇಡ ಬೇಡವೆಂದು ಹೇಳುತ್ತಿದ್ದಂತೆ, ಮಂಗಳೂರಿನಲ್ಲಿಯೇ ದೊಡ್ಡಪ್ಪಯ್ಯನ ಪರಿಚಯದವರ ಮನೆಯಲ್ಲಿ ಹುಡುಗಿ ನೋಡುವ ಶಾಸ್ತ್ರವೂ ನಡೆದು, ಎಲ್ಲರಿಗೂ ಒಪ್ಪಿಗೆಯಾಗಿ ದಿನ ನಿಶ್ಚಯ ಮಾಡಿಯೂ ಬಿಟ್ಟಿದ್ದರು. ಮೇಯಲ್ಲಿ ಮದುವೆ, ಮದುವೆಗೆ ಇನ್ನೇನು ಎರಡೇ ತಿಂಗಳು, ಎಂದಿರುವಾಗಲೇ ಅವಳು ತೀರಿಕೊಂಡದ್ದು.

ಹೇಳುತ್ತ ಹೇಳುತ್ತ ನನಗೆ ಗಂಟಲು ಕಟ್ಟಿ ಬಂದಿತ್ತು. ಒಣಗಿ ಹೋದ ನನ್ನ ಹಣೆಯ ಪಟ್ಟಿಯನ್ನು ತೆಗೆದಿಡುತ್ತ ಬ್ರಿಜೆಟ್, `ಮನುಷ್ಯನ ಮನಸ್ಸು ಎಷ್ಟು ಸಂಕೀರ್ಣವೆಂದರೆ, ನಮ್ಮ ಹತ್ತಿರದವರನ್ನೇ ಅರ್ಥ ಮಾಡಿಕೊಳ್ಳಲಿಕ್ಕೆ ಒಮ್ಮೊಮ್ಮೆ ಇಡೀ ಜನ್ಮ ಸಾಕಾಗುವುದಿಲ್ಲ. ಅಲ್ಲವೇ?’ ಎಂದಳು. ಹೌದೆನಿಸಿತು ನನಗೆ. ರಾಜಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾನೆಂದೇನು, ಎಲ್ಲರೂ ಸೋತಿದ್ದರೆಂದು ನನಗೆ ಈಗ ಅನಿಸತೊಡಗಿತ್ತು. ಬ್ರಿಜೆಟಳ ಮಾತಿಗೆ ನಾನು ಏನೂ ಹೇಳಲಿಲ್ಲ. ನನ್ನ ಗಂಟಲು ಸುಸ್ತಾಗಿ, ಇನ್ನು ಸ್ವರ ಹೊರಡದಷ್ಟು ಶುಷ್ಕವಾಗಿತ್ತು.

 

ಅಷ್ಟೆಲ್ಲ ಮಾತನಾಡಿಕೊಂಡು ಕುಳಿತಿದ್ದರೂ, ರಾಜಿ ಮತ್ತು ಶ್ಯಾಮಲಿ ಸತ್ತ ಬಗೆಯನ್ನು ಬ್ರಿಜೆಟಳಿಗೆ ಹೇಳುವುದು ನನ್ನಿಂದ ಸಾಧ್ಯವಾಗಿರಲಿಲ್ಲ. ಅವರಿಬ್ಬರ ಮರಣದ ಬಗ್ಗೆ ನನಗಾದರೂ ಎಷ್ಟು ಗೊತ್ತಿತ್ತು? ಸುತ್ತಿ ಬಳಸಿ ಅಲ್ಪಸ್ವಲ್ಪ ವಿಷಯ ಗೊತ್ತಾಗುವಾಗ ನಾನು ಮದುವೆಯಾಗಿ ಊರು ಬಿಟ್ಟಾಗಿತ್ತು. ಗುಟ್ಟು, ಮಾಹಾಗುಟ್ಟು, ಮರ್ಯಾದೆ, ಮಾನ ಎಂದು ನಮ್ಮ ಮನೆಯಲ್ಲಿ ಯಾವದೇ ವಿಷಯವನ್ನಾದರೂ ಸರಿಯಾಗಿ ಹೇಳುವ ಕ್ರಮ ಇತ್ತೇ? ಇವತ್ತಿಗೂ ಸ್ಪಷ್ಟ ವಿವರಗಳನ್ನು ನನಗೆ ಹೇಳಿದವರಿದ್ದಾರೆಯೇ?

ಒಂದು ದಿನ ರಾಜಿ ಬ್ಯಾಂಕಿನ ಗೆಳತಿಯರೊಡನೆ ಶ್ಯಾಮಲಿಯನ್ನೂ ಕರೆದುಕೊಂಡು ವಿಹಾರಕ್ಕೆಂದು ಉಳ್ಳಾಲದ ಸಮುದ್ರ ಬದಿಗೆ ಹೋಗಿದ್ದಳಂತೆ. ಹಾಗೆ ಹೋದಾಗ ಉಳ್ಳಾಲದ ಸಮುದ್ರದಲ್ಲಿ ಮುಳುಗಿ ಸತ್ತದ್ದೆಂದು ಗೊತ್ತಷ್ಟೆ.

ಆಗ ಮಾರ್ಚ್ ತಿಂಗಳು. ಸುದ್ದಿ ಬರುವಾಗ ನಮಗೆ ವರ್ಷದ ಕೊನೆಯ ಪರೀಕ್ಷೆ ನಡೆಯುತ್ತಿತ್ತು. ನಮ್ಮ ಅಮ್ಮನ ಹೊರತು, ದೊಡ್ಡವರೆಲ್ಲರೂ ತತ್ಕ್ಷಣ ಮಂಗಳೂರಿಗೆ ಹೊರಟು ಹೋಗಿದ್ದರು. ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ನಾವು ಮಕ್ಕಳು ಮಾತ್ರ. ಅಮ್ಮನ ಹತ್ತಿರ ಏನೂ ಕೇಳುವ ಹಾಗಿರಲಿಲ್ಲ. ಕಣ್ಣು ಕೆಂಪು ಮಾಡಿಕೊಂಡು ಒಂದು ರೀತಿಯ ವಿಚಿತ್ರ ಸಿಟ್ಟಿನಲ್ಲಿದ್ದಳು ಆಗ ಅವಳು. ಅದು ಸಿಟ್ಟೋ, ಅಸಹಾಯಕತೆಯೋ ನನಗೆ ಗೊತ್ತಿಲ್ಲ. ಏನು ಕೇಳಿದರೂ ಅಬದ್ಧ ಉತ್ತರವೇ ಅವಳ ಬಾಯಿಯಿಂದ ಹೊರಡುತ್ತಿದ್ದದ್ದು ಮಾತ್ರ ನನಗೆ ಸರಿಯಾಗಿ ನೆನಪಿದೆ. `ಪೆನ್ಸಿಲ್ ಬೇಕು. ನಾಡಿದು ಪರೀಕ್ಷೆ’ ಎನ್ನುವಾಗಲೂ, `ಪೆನ್ಸಿಲೂ ಬೇಡ ಏನೂ ಬೇಡ. ಕಲಿತು ನಮ್ಮನ್ನು ಉದ್ಧಾರ ಮಾಡುದು ಅಷ್ಟರಲ್ಲೇ ಉಂಟು. ಆ ಮೊಂಡು ಪೆನ್ಸಿಲು ಸಾಕು ನಿನ್ನ ಸುರ್ಪಕ್ಕೆ.’ ಅಂತಲೋ… `ಪೆನ್ಸಿಲು ನನ್ನ ಕರ್ಮಕ್ಕೆ. ನಿಮಗೆಲ್ಲ ಸಲಿಗೆ ಕೊಟ್ಟದ್ದು ಜಾಸ್ತಿಯಾಯ್ತು…’’ ಅಂತಲೋ, ಒಟ್ಟಾರೆ ಅಲ್ಲಸಲ್ಲದ ಮಾತುಗಳೇ.

ಅದೇ ಸಮಯ, ಮನೆಯಲ್ಲಿ ಏನೇನೋ ಘಟನೆಗಳು ಸಂಭವಿಸಿ, ಆ ವಿಷಯ ಮಾತನಾಡಲೂ ಯಾರಿಗೂ ವ್ಯವಧಾನವಿಲ್ಲದಂತಾಗಿತ್ತು. ನಾವು ಹುಡುಗಿಯರಂತೂ ಅದೊಂದು ನಿಷೇದಿಸಲ್ಪಟ್ಟ ವಿಷಯವಿದ್ದಂತೆ, ಆ ಬಗ್ಗೆ ಉಸಿರೆತ್ತಲೂ ಅಂಜುತ್ತಿದ್ದೆವು. ದೊಡ್ಡಪ್ಪಯ್ಯ ಹೃದ್ರೋಗದಿಂದ ಗತಿಸಿದ್ದು, ದೊಡ್ಡಮ್ಮನಿಗೆ ಮತಿಭ್ರಮಣೆಯಾದಂತಾಗಿ ತಿಂಗಳುಗಟ್ಟಲೆ ಕಂಕನಾಡಿ ಆಸ್ಪತ್ರೆಯಲ್ಲಿ ಇದ್ದುದು, ಪಡುಬಿದ್ರಿ ಅತ್ತೆಯ ಮಗಳ ಮದುವೆ ನಿಂತುಹೋದದ್ದು, ಹೀಗೆ, ಘಟನೆಗಳು ಒಂದರ ಹಿಂದೊಂದರಂತೆ ನಡೆಯುತ್ತಾ, ನಮ್ಮನ್ನು ಅದರೊಳಗೆ ಸುಳಿದು ಸುತ್ತಿ ತೇಲಿಸುತ್ತಿದ್ದಂತೆ, ನಾವು `ದೊಡ್ಡವರೆ’ನ್ನುವ ಪಟ್ಟಕ್ಕೆ ಬಂದುಬಿಟ್ಟಿದ್ದೆವು.

ಅವರಿಬ್ಬರೇ ಸಮುದ್ರ ತೀರಕ್ಕೆ ಹೋದದ್ದೆಂದು ನನಗೆ ಗೊತ್ತಾದದ್ದೂ ನನ್ನ ಮದುವೆಯಾಗಿ ಎಷ್ಟೋ ವರ್ಷಗಳ ನಂತರವೇ. ಮಾಧವಣ್ಣ ಹೇಳಿಯೇ ಗೊತ್ತಾಗಿದ್ದು. ಮಡಿಕೇರಿಯಲ್ಲಿದ್ದ ಮಾಧವಣ್ಣನ ಮನೆಗೆ ಎರಡು ದಿನ ಉಳಕೊಳ್ಳಲಿಕ್ಕೆಂದು ಹೋಗಿದ್ದಾಗ, `ಪಿಕ್ನಿಕ್-ಗಿಕ್ನಿಕ್ ಎಲ್ಲ ಸುಳ್ಳು ಗೀತಾ. ಉಳ್ಳಾಲಕ್ಕೆ ಅವರಿಬ್ಬರೇ ಹೋದ್ದು. ಆಫೀಸಿನವರು ಯಾರೂ ಇರಲಿಲ್ಲ.’’ ಎಂದಿದ್ದ. ಮಂಗಳೂರು ಮನೆ ಖಾಲಿ ಮಾಡಿದಾಗ ಅವನಿಗಾದ ವಿಚಿತ್ರ ಸಂಕಟವನ್ನೂ ಆಗಲೇ ಅವನು ನನಗೆ ಹೇಳಿದ್ದು. ದೊಡ್ಡಪ್ಪಯ್ಯನ ಪರಿಚಯದ ವಕೀಲರೊಬ್ಬರ ಮನೆಯ ಆವರಣದಲ್ಲಿಯೇ ಬ್ಯಾಂಕಿನ ಅಧಿಕಾರಿಗಳಿಗೆಂದೇ ಕಟ್ಟಿಸಿದ ಬಿಡಾರವಂತೆ. ರಾಜಿಯನ್ನು ಹುಡುಗ ನೋಡಲಿಕ್ಕೆ ಬಂದಂದ್ದೂ ಆ ವಕೀಲರ ಮನೆಯಲ್ಲಿಯೇ ಎಂದಿದ್ದ.

ರಾಜಿ ಹೋಗಿ ತಿಂಗಳಲ್ಲಿ ಅವನೊಬ್ಬನೇ ಹೋಗಿ ಅಲ್ಲಿನ ಸಾಮಾನುಗಳನ್ನೆಲ್ಲ ಗಂಟುಕಟ್ಟಿಕೊಂಡು ಬಂದದ್ದು ನನಗೆ ಸರಿಯಾಗಿ ನೆನಪಿತ್ತು. ಉಜುಂಬಿ ಇಟ್ಟ ಕಿತ್ತಳೆ ಹಣ್ಣಿನಂತಾಗಿದ್ದ ಆವತ್ತಿನ ಅವನ ಮುಖವನ್ನು ನಾನು ನನ್ನ ಜನ್ಮದಲ್ಲಿ ಮರೆಯಲಿಕ್ಕಿಲ್ಲ. ಆದರೆ ಆ ದಿನ ಮಾತ್ರ ಅವನು ಒಂದಕ್ಷರ ಮಾತನಾಡಿರಲಿಲ್ಲ. ಹಾಸಿಗೆಯ ಸುರುಳಿಯನ್ನು ಹೆಗಲ ಮೇಲೆ ಇಟ್ಟುಕೊಂಡು, ಪೆಟ್ಟಿಗೆ ಮತ್ತು ಸಾಮಾನಿನ ಗಂಟನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಬಡಬಡ ಮೆಟ್ಟಿಲು ಹತ್ತಿ ಅಟ್ಟಕ್ಕೆ ಹೋದಾಗ ನಾನೂ ಅವನ ಹಿಂದೆ ಹೋಗಿದ್ದೆ. ಸಾಮಾನು ಇಳಿಸಿದವನು ಹಾಸಿಗೆ ಸುರುಳಿಯ ಮೇಲೆ ಅಲುಗಾಡದೆ ಕುಳಿತು ಬಿಟ್ಟಿದ್ದ. ಕಾಲ ಗಂಟಿನ ಮೇಲೆ ಕೈಗಳನ್ನು ಮಡಚಿಟ್ಟು, ಅದರೊಳಗೆ ಮುಖ ಹುದುಗಿಸಿ ಕುಳಿತ ಅವನನ್ನು ಮಾತನಾಡಿಸಲು ನನಗೆ ಆಗ ಅಂಜಿಕೆಯೇ ಆಗಿತ್ತು.

ಇನ್ನು, ಹೋಗುವ ಮೊದಲೇ ರಾಜಿ ಕಾಗದ ಬರೆದಿಟ್ಟು ಹೋಗಿದ್ದಳೆಂಬುದಂತೂ ಇತ್ತೀಚೆಗೆಂದರೆ ತೀರ ಇತ್ತೀಚೆಗೆ, ಕಳೆದ ಸಲ ರಜೆಗೆ ಊರಿಗೆ ಹೋದಾಗ ನಿರ್ಮಲತ್ತೆ ಹೇಳಿಯೇ ನನಗೆ ತಿಳಿದದ್ದು.

ಮಂಗಳೂರಿನಲ್ಲಿ ರಾಜಿಯ ಮನೆಯ ಬೀಗ ಒಡೆಯುವಾಗ ನಿರ್ಮಲತ್ತೆಯೂ ಜತೆಯಲ್ಲಿದ್ದಳಂತೆ. `ನಾವಿಬ್ಬರು ಒಬ್ಬರನ್ನಗಲಿ ಒಬ್ಬರು ಇರಬಂiÀÄಸುವುದಿಲ್ಲ. ಅದಕ್ಕೆ ಜೊತೆಯಾಗಿಯೇ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ್ದೇವೆ. ದಯವಿಟ್ಟು ಕ್ಷಮಿಸಿ.’ ಎಂದು ಅವಳು ಬರೆದ ಪತ್ರದ ಒಕ್ಕಣೆಯನ್ನು ನಿರ್ಮಲತ್ತೆ ನನಗೆ ಹೇಳುವಾಗ, ಒಂದಿಷ್ಟು ಚಿತ್ತಿಲ್ಲದ ಕಾಗದದಲ್ಲಿ ಬಲಕ್ಕೆ ವಾಲಿ ನಿಂತ ರಾಜಿಯ ಉದ್ದುದ್ದದ ಅಕ್ಷರಗಳು ನನ್ನ ಕಣ್ಣಿಗೆ ಕಟ್ಟಿದವು. ಕೊನೆಯಲ್ಲಿ ರಾಜಿಯ ಸಹಿಯಲ್ಲಿದ್ದ `ಜಿ’ ಯ ಸುರುಳಿಯಿಂದ ಕೆಳಗಿಳಿದ ಗೀಟು ಎಡಕ್ಕೆ ತಿರುಗಿ ಮೂಡಿಸಿದ ಅಡಿಗೆರೆಯೂ ಕಾಣಿಸದಿರಲಿಲ್ಲ. `ಒಟ್ಟಾರೆ ಗ್ರಾಚಾರ.’ ಎಂದು ಕೈಯಿಂದ ಹಣೆಯನ್ನೊಮ್ಮೆ ಬಟ್ಟಿಕೊಂಡಳು ನಿರ್ಮಲತ್ತೆ.

`ಅದಕ್ಕಿಂತ ಮುಂಚೆ ಒಂದ್ಸಲ ನಾ ಅಲ್ಲಿಗ್ ಹೋಯಿದ್ದೆ ಮಾರಾಯ್ತಿ.’ ಎಂದ ನಿರ್ಮಲತ್ತೆ, `ಯಂತದೋ ಕೆಲ್ಸಕ್ಕೆ……….. ಎಂತಪ್ಪ?…… ’ ಎಂದು ಕಾರಣಕ್ಕಾಗಿ ತಡಕಾಡಿದಾಗ, ನಿರ್ಮಲತ್ತೆಯ ಸ್ವಭಾವ ಗೊತ್ತಿದ್ದ ನನಗೆ ರಾಜಿಯ ಮನೆಯನ್ನು ನೋಡುವ ಕುತೂಹಲದಲ್ಲಿಯೇ ಅವಳು ಹೋಗಿದ್ದಿರಬೇಕು ಎಂದು ಊಹಿಸುವುದು ಕಷ್ಟವಾಗಲಿಲ್ಲ. `ಹಾಂ…. ಅದೇ ಹಬ್ಬಕ್ಕೆ ಸೀರೆ ತೆಕಂಬುಕೆ ಅಂತ ಮಂಗ್ಳೂರಿಗೆ ಹೋದವ್ರು ನಾವು; ಹಾಂಗಾರೆ ರಾಜಿ ಮನೆ ಮಾಡಿದ್ಳಂತಲ್ಲ, ಕಂಡ್ಕಂಡು ಹೋಪ ಅಂತಲೇ ಹೋದ್ದು. `ಇವರೂ’ ’ಇದ್ರು ಒಟ್ಟಿಗೆ.’ ನಿರ್ಮಲತ್ತೆ ಹಾಗನ್ನುವಾಗ, ಕೈಗಳೆರಡನ್ನೂ ಮಡಚಿ ತಲೆಯ ಹಿಂದೆ ಇಟ್ಟು, ಆರಾಮ ಕುರ್ಚಿಯಲ್ಲಿ ಒರಗಿದ್ದ ಮಾವಯ್ಯ, ಹೌದೆಂಬಂತೆ ತಲೆಯಾಡಿಸಿದರು. ಮಾವಯ್ಯನಿಗೆ ಮೊದಲೇ ಮಾತು ಕಡಿಮೆ. ಈಗಂತೂ ಕಾಲಗಂಟಿನ ನೋವಿನಿಂದಾಗಿ ಮಾತು ಇನ್ನಷ್ಟು ಕಮ್ಮಿಯಾಗಿತ್ತು. ನಿರ್ಮಲತ್ತೆಯೇ ಹೇಳುತ್ತ ಹೋದಳು.

ಹೋದರೆ ಎಂಥ ನೋಡುವುದು! ಅಬ್ಬ, ಹೆಣ್ಣಿನ ಸಾಧನೆಯೇ ಅಂತ ಬೆರಗು ಪಟ್ಟಳಂತೆ. ಒಬ್ಬಳು ಗರಗರ ಕಾಯಿ ಹೆರೆಯುವಷ್ಟರಲ್ಲಿ ಇನ್ನೊಬ್ಬಳು ಬಾಣಾಲೆಯಲ್ಲಿ ಒಗ್ಗರಣೆ ಹಾಕಿ ಪಟಪಟ ಅವಲಕ್ಕಿ ಒಗ್ಗರಿಸಿ ಆಯಿತಂತೆ. ಒಬ್ಬಳು ಫಿಲ್ಟರಿಗೆ ಪುಡಿ ತುಂಬಿಸಿದರೆ, ಇನ್ನೊಬ್ಬಳು ಹಾಲು ಕಾಯಿಸಿ, ಕಾಫಿ ತಂದಾಯಿತು. `ಅಯ್ಯೋ, ಒಂದು ಉಮೇದಂದ್ರೆ….ಹೇಳೂಕೆಡೆಯ.’ ಎನ್ನುವಾಗ ನಿರ್ಮಲತ್ತೆಯ ಸ್ವರವೂ ಏರಿತ್ತು. `ಇಲ್ನೋಡಿ ಅತ್ತೆ, ಅದ್ ಕಾಣಿ ಮಾವಯ್ಯ ಅಂತ ಎಲ್ಲ ತೋರ್ಸೀರಪ್ಪ…ಇಬ್ರೂ ಸೇರಿ…… ಮನೆ ಎಲ್ಲ ಕಳ ಕಳ. ನಾವ್ ಇಷ್ಟ್‌ ವರ್ಷ ಮನೆ ಮಾಡಿಯವ್ರು ದಂಡ ಅಂದೆ ನಾನು.’’ ನಿರ್ಮಲತ್ತೆ ಹಾಗೆ ಹೇಳುವಾಗ, ಅವಳ ಸ್ವರದಲ್ಲಿ ಹೊಗಳಿಕೆಯೊಂದಿಗೆ ಸ್ವಲ್ಪ ಹೀಯಾಳಿಕೆಯೂ ಬೆರೆತಂತಿತ್ತು. `ಅವಳು ಆಫೀಸಿಗೆ ಹೋದಾಗ ಇವಳೇ ಎಲ್ಲ ಅಡಿಗೆ ಮಾಡಿ ಇಡುದಂಬ್ರಪ್ಪ. ಒಬ್ರಿಗೊಬ್ರು ಏಕ ರಥ.’ ಎಂದೂ ಸೇರಿಸಿದಳು.

ಅಡುಗೆ ಚಿಟ್ಟೆಯ ಮೇಲಿರುವ ಮರದ ಹಲಗೆಯ ಮೇಲೆ ನೀಟಾಗಿ ಜೋಡಿಸಿಟ್ಟ ಪುಟ್ಟ ಪುಟ್ಟ ಸ್ಟೀಲಿನ ಡಬ್ಬಿಗಳ ಬಗ್ಗೆ ಹೇಳುತ್ತ, `ಅವಳ ಸಂಬಳದಲ್ಲೇ ತೆಕಂಡದ್ದಂಬ್ರು ಮಾರಾಯ್ತಿ.’ ಎಂದು ಅಚ್ಚರಿಯೂಪಟ್ಟಳು. ಮರುಮಾತಿನಲ್ಲೇ ಅವಳ ಏರುಸ್ವರ ಕೆಳಗಿಳಿದು, `ಎಣ್ಸಿದ್ರೆ ಈಗ ಹೊಟ್ಟೆಸುಡುತ್ತ್‌ ಪಾಪ.’ ಎಂದು ಒಂದು ನಿಟ್ಟುಸಿರೂ ಬಿಟ್ಟಳು.

`ಮಾ ಗಟ್ಟಿಗಾರ್ತಿ, ಸತ್ತ ಹೆಣನ್ನ ಎತ್ತಿ ಕೂಡ್ಸುವವ್ಳು ಅವ್ಳು, ಅಂತ ನಮ್ಮಮ್ಮ ಹೊಗಳಿಹಾಡ್ತಿದ್ದ್‌ಳಲ್ಲ. ಅವ್ಳೇ ಜೀವ ತೆಕಂಬುದಂದ್ರೆ?’ ಅಜ್ಜಿ ಹೊಗಳಿದ್ದರ ಬಗ್ಗೆಯೂ ಅಸಮಧಾನವಿದ್ದಂತ್ತಿತ್ತು ನಿರ್ಮಲತ್ತೆಯ ಮಾತಿನ ಧಾಟಿಯಲ್ಲಿ.

ಅಷ್ಟು ಹೊತ್ತು ಸುಮ್ಮನೆ ಕುಳಿತಿದ್ದ ನಿರ್ಮಲತ್ತೆಯ ಗಂಡ, `….. ಎಂಥಾ„„ಯ್ತ?…. ಏನ್ ಕಂಡಿತಾ, ಪಾಪ ಅದ್ಕೆ?……….’ ಎಂದು ವ್ಯಥೆಯ ದನಿಯಲ್ಲಿ ಸುರುಮಾಡಿದರು. ಮಿತಭಾಷಿಯಂತೂ ಆಯಿತಲ್ಲ, ಮಾವಯ್ಯನ ಮಾತು ತೀರ ನಿಧಾನ ಕೂಡಾ, ತೂಕ ಮಾಡಿದಂತೆ. ಅವರು ಮಾತು ಮುಂದುವರಿಸುವುದರೊಳಗೆ ನಿರ್ಮಲತ್ತೆ ಮಧ್ಯ ಬಾಯಿ ಹಾಕಿ,  `ಮದಿ ಬ್ಯಾಡ, ಮದಿ ಬ್ಯಾಡಾ, ನನ್ನ ಹೀಂಗೇ ಬಿಟ್ಬಿಡಿ, ನಾವ್ ಹೀಂಗೆ ಇರ್ತೊ, – ಅಂದ್ರೆ ಏನರ್ಥ?’ ಎಂದು ಮಾವಯ್ಯನಿಗೇ ಸವಾಲೊಡ್ಡಿದಂತೆ ಕೇಳಿದಳು. ಮಾವಯ್ಯ ತಲೆಯ ಹಿಂದಿರಿಸಿದ್ದ ಕೈಗಳನ್ನು ತೆಗೆದು ಕುರ್ಚಿಯ ಕೈಗಳ ಮೇಲಿರಿಸುತ್ತ, `ನನ್ನ ಹತ್ರ ಕೇಂಡ್ರೆ ಗೀತಾ, ನಿನ್ನ್‌ ಅಪ್ಪಯ್ಯನೂ, ದೊಡ್ಡಪ್ಪಯ್ಯನೂ ಸೇರಿ ಅಮಸ್ರ ಮಾಡೀರು.’ ಎಂದು ಹೇಳಿ ಸುಮ್ಮನಾದರು.

ನಿರ್ಮಲತ್ತೆ ಅಲ್ಲಿಗೆ ಬಿಡಲಿಲ್ಲ, `ಆ ಶ್ಯಾಮಲಿ ಹೆಣ್ಣಿದೂ ಭಾಳ ಅಧಿಕ ಆಯ್ತ. ಅದ್ ಯಾವ ನಮೂನಿ ಮಾಯಾಪಾಶ? ಪ್ರಪಂಚದಲ್ಲಿಲ್ಲದ್ದು? ದೊಡ್ಡಣ್ಣಯ್ಯ ಗಲಾಟೆ ಮಾಡಿಯ. ನಿಶ್ಚಯ ಮಾಡಿಯಾಯ್ತು, ಮದಿ ಮಾಡಿಯೇ ಶುದ್ಧ, ಮರ್ಯಾದಿ ಪ್ರಶ್ನೆ, – ಅಯ್ಯಯ್ಯೋ, ಒಂದೆರಡಲ್ಲ, ಬಾಯಿಗೆ ಬಂದದ್ದ್‌ ಹೇಳಿಯ ಅಂತ ಮಾಡುವ. ಆದರೆ ಅವ ಹೇಳಿದ್ದ್‌ರಲ್ಲಿ ತಪ್ಪು ಏನಾರೂ ಇತ್ತ? ನೀನೇ ಹೇಳ್.’ ಎಂದು ನನ್ನನ್ನು ಕೇಳಿದಳು.

ಮಧ್ಯದಲ್ಲಿ ನಿರ್ಮಲತ್ತೆ ಮಾತನಾಡಲೇ ಇಲ್ಲವೆನೋ ಎಂಬಂತೆ ಮಾವಯ್ಯ ತಮ್ಮ ಮುಂಚಿನ ಮಾತನ್ನು ಮುಂದುವರಿಸುತ್ತಾ, ಬಲಕೈ ಬೆರಳುಗಳನ್ನೊಮ್ಮೆ ಕೊಡಕಿ, `ಈಗ ಅದೆಲ್ಲ ಹೇಳಿ ಏನ್ ಪ್ರಯೋಜನ, ಹೇಳ್? ಹೇಳೂದೂ ಸಮ ಅಲ್ಲ……. ಒಟ್ಟಾರೆ…….’ ಎಂದವರು ಮೊಣಕಾಲಿನ  ಗಂಟು ಹಿಡಿದು ಎದ್ದು ನಿಂತರು.

ಕಾಲು ಚಾರಿಸಿಕೊಂಡು ನಡೆಯ ತೊಡಗಿದ ಮಾವಯ್ಯ, `ಮತ್ತೇನಲ್ಲ. ಮದಿ ಒಂದು ಮಾಡಿಬಿಟ್ರೆ ಎಲ್ಲ ಸಮ ಆತ್ತು ಅಂತ. ಆದ್ರೆ ಕೆಲವು ಸಲ ಹಾಂಗಾತಿಲ್ಲ ಕಾಣು.’ ಎಂದರು. ವಾಲಿಕೊಂಡು ಹೆಜ್ಜೆಯಿಡುತ್ತ ಹೊರಗೆ ಕಾಲಿಟ್ಟವರು, `ಅವರಷ್ಟಕ್ಕೆ ಅವು ಇರ್ತಿದ್ದೊ…….. ಎಲ್ಲ ಒಂದೊಂದು ಕಾಲ.’ ಎಂದರು ತಮ್ಮಷ್ಟಕ್ಕೇ ಎಂಬಂತೆ. ಅವರೆಂದ ಮಾತು ಬಾಗಿಲ ಹೊರಗಿನಿಂದ ತೇಲಿಕೊಂಡು, ನಿರ್ಮಲತ್ತೆಯ ಮಾತುಗಳೆಡೆಯಿಂದ ತೂರಿ ಬಂದು ನನ್ನನ್ನು ತಟ್ಟಿತು.

ಮಡಿಕೇರಿಯಲ್ಲಿ ಮಾಧವಣ್ಣನೂ ಇಂಥದೇ ಮಾತುಗಳನ್ನು ಹೇಳಿದ್ದನೆಂಬುದು ನನಗೆ ಆಗ ನೆನಪಾಯಿತು. ಮಳೆಗಾಲದ ಆರಂಭದ ದಿನಗಳವು. ಆ ರಾತ್ರಿ ಮಾಧವಣ್ಣನ ಮನೆಯ ಮುಖಾರಿಯಲ್ಲಿ ಕುಳಿತು ಮಾತನಾಡುತ್ತಿದ್ದೆವು. ಹೊರಗಿನಿಂದ ಮಳೆ ಹನಿಕಡಿಯದೆ ಸುರಿಯುತ್ತಿತ್ತು. ಶಾಲೊಂದನ್ನು ಭುಜದ ಸುತ್ತ ಹೊದ್ದುಕೊಂಡ ನಾನು ಸೋಫಾದ ಮೇಲೆ ಚಟ್ಟಮುಟ್ಟ ಹಾಕಿ ಕುಳಿತಿದ್ದೆ. ಮಾಧವಣ್ಣನ ಹೆಂಡತಿ ನನ್ನ ಬದಿಯಲ್ಲೇ ನೆಲದಲ್ಲಿ ಸೋಫಾಕ್ಕೆ ಒರಗಿ ಕುಳಿತು ನೀಡಿದ ಕಾಲ ಮೇಲೆ ಮಲಗಿದ ಮಗುವನ್ನು ಮೃದುವಾಗಿ ತಟ್ಟುತ್ತಿದ್ದಳು. ಎದುರಲ್ಲಿ ಮುಖಾರಿಯ ದಂಡೆಯ ಮೇಲೆ ಎರಡೂ ಬದಿಗೆ ಅಂಗೈ ಊರಿ ಕುಳಿತು ಮಾಧವ ಮಾತನಾಡುತ್ತಿದ್ದ.

ಅದು ಹೇಗೋ ವಿಷಯ ರಾಜಿಯತ್ತ ತಿರುಗಿತ್ತು. ಅಂತಹದೇ ಒಂದು ಮಳೆಗಾಲದ ದಿನವೇ ಅವನು ಸಾಮಾನು ತರಲು ರಾಜಿಯ ಮನೆಗೆ ಹೋಗಿದ್ದು. ಬ್ಯಾಂಕಿನವರು ಎರಡು ಮೂರು ತಿಂಗಳು ಕಾದರಂತೆ. ಆಮೇಲೆ ಮನೆ ಖಾಲಿ ಮಾಡಿ ಎಂದು ದೊಡ್ಡಪ್ಪಯ್ಯನಿಗೆ ಕಾಗದ ಬರೆದರಂತೆ. `ನೀನೇ ಹೋಯಿ ನಿಂಗೆ ಕಂಡಂತೆ ಬೇಕಾದ್ದ್‌ ತೆಕಂಡು ಬಾ, ಉಳಿದದ್ದನ್ನು ಅಲ್ಲೇ ವಿಲೇವಾರಿ ಮಾಡು.’ ಎಂದು ದೊಡ್ಡಪ್ಪಯ್ಯ ಅವನ ಆಫೀಸಿಗೆ ಫೋನು ಮಾಡಿ ಹೇಳಿದ್ದರಂತೆ.

`ಘುಂ ಎಂಬ ಖಾಲಿ ಮನೆ. ನರ ಮನುಷ್ಯ ಇಲ್ಲ. ಗೋಳಂದ್ರೆ ಗೋಳು. ಆ ಖಾಲಿ ಮನೆಗೆ ಹೋದ ನನ್ನ ಅನುಭವ ಯಾರಿಗೂ ಬೇಡ.’ ಎನ್ನುತ್ತಾ ಭುಜ ಅದುರಿಸಿದ್ದ ಮಾಧವ. `ಅದೇ….. ಅವರಿಬ್ಬರೂ ಹೋಯ್ಲಿಕ್ಕೆ ಎರಡು ತಿಂಗಳಿದ್ದಿತ್ತ ಏನಾ…..  ಆಗ ಅದೇ ಮನೆಗೆ ಹೋದಾಗ? ಛೇ, ಆ ಅನುಭವ, ಆವಾಗ್ಳಿನ್ ಗವi್ಮತ್ತೇ ಬೇರೆ.’ ಆಗ ಅವನು ದೊಡ್ದಮ್ಮ ಕೊಟ್ಟಿದ್ದ ಪಾರ್ಸೆಲು ರಾಜಿಗೆ ಕೊಡಲಿಕ್ಕೆಂದು ಹೋದದ್ದಂತೆ.

ಇಬ್ಬರೂ ಸೇರಿ, ರಾತ್ರಿ ಊಟ ಮಾಡಿಕೊಂಡೇ ಹೋಗಬೇಕೆಂಬ ಆತ್ಮೀಯ ಒತ್ತಾಯಕ್ಕೆ ಅವನನ್ನು ಒಳಪಡಿಸಿದ್ದಷ್ಟೇ ಅಲ್ಲದೆ, ಅದರೊಟ್ಟಿಗೇ, ಹಾಸ್ಟೆಲ್ನ ಕೆಟ್ಟ ಊಟ ಮಾಡುವವನಿಗೆ ಎಲ್ಲಿಯ ಊಟವಾದರೇನಂತೆ ಎಂದು ಬಾಯ್ತುಂಬ ನಗಲಿಕ್ಕೂ ನಕ್ಕರಂತೆ. ಆಮೇಲೆ, ಅವನಿಗಾಗಿ ಏನೋ `ಸ್ಪೆಶಲ್’ ಮಾಡುತ್ತೇವೆಂದು ಅಡುಗೆ ಮನೆಯಲ್ಲಿ ದಡಬಡ ಶಬ್ದ ಮಾಡಿಕೊಂಡು ಓಡಾಡಿದ್ದೇ ಓಡಾಡಿದ್ದಂತೆ. `ನೀವೆಲ್ಲ ಮನೆ ಆಟ ಆಡ್ತಿದ್ರಿಯಲ್ಲ, ಥೇಟು, ಅದೇ ನೆನಪಾಯ್ತು ನಂಗೆ.’ ಎಂದಿದ್ದ ಮಾಧವ. ಮತ್ತೆ, ಅವನನ್ನೂ ನಗಿಸಿಕೊಂಡು, ತಾವೂ ನಕ್ಕು, ಅಂತೂ, ಮೂಗಿನ ವರೆಗೆ ತಿನ್ನಿಸಿ ಬಿಟ್ಟರಂತೆ. ಊಟವಾದ ಮೇಲೂ ಎಷ್ಟೋ ಹೊತ್ತು ಮಾತನಾಡುತ್ತಾ ಕುಳಿತಿದ್ದರಂತೆ. ಶ್ಯಾಮಲಿ ಕಾಲೇಜಿಗೆ ಹೋಗುವ ವಿಷಯ, ಅದೂ, ಇದೂ ಅಂತ `ಮಾತಾಡ್ತಾ ನೆಗಾಡ್ತಾ ಹೊತ್ತು ಹೋದ್ದೇ ಗೊತ್ತಾಯ್ಲಿಲ್ಲ’ವೆಂದಿದ್ದ.

ಬಿದಿರಿನ ಕುರ್ಚಿಗಳ ಬೆನ್ನಿಗೆ ಹೊದಿಸಿದ ಡಿಸೈನು ಹಾಕಿದ ಕವರುಗಳು, ಮೇಜಿನ ಮೇಲೆ ಹಾಸಿದ ಲೇಸಿನ ಬಟ್ಟೆ, ಗೋಡೆಯಲ್ಲಿ ರಾರಾಜಿಸುತ್ತಿದ್ದ ಮಣಿ ಪೋಣಿಸಿ ಮಾಡಿದ ಆನೆಯ ಚಿತ್ರ – ಮಾಧವಣ್ಣ ಎಲ್ಲವನ್ನೂ ವಿವರಿಸಿದ್ದ. ಶ್ಯಾಮಲಿಯನ್ನು ಬೊಟ್ಟು ಮಾಡಿ ತೋರಿಸುತ್ತ, `ಎಲ್ಲ ಇವಳದ್ದೇ ಕೆಲಸ.’ ಎಂದು ರಾಜಿ ದೂರುವ ದನಿಯಲ್ಲಿ ಹೆಮ್ಮೆಯಿಂದ ಹೇಳಿದ್ದನ್ನೂ ಹೇಳಿದ.

ಆದರೆ ಎರಡು ಮೂರು ತಿಂಗಳು ಖಾಲಿ ಇದ್ದ ಮನೆ ಅದೆಷ್ಟು ಬದಲಾಗಬಹುದೆಂದು ಆ ದಿನ ಅಲ್ಲಿಗೆ ಹೋದಾಗಲೇ ತನಗೆ ಅರಿವಾದದದ್ದು ಎಂದು ಅವನು ಹೇಳುತ್ತಿದ್ದಂತೆ ನಾನೂ ಅವನೊಡನೆ ಆ ಮನೆಯನ್ನು ಹೊಕ್ಕಿದ ಅನುಭವ ನನಗಾಯಿತು. ಮುಸ್ಸಂಜೆಯ ಕತ್ತಲು, ಜಿನುಗುತ್ತಿದ್ದ ಸಣ್ಣ ಮಳೆ, ಬಾಗಿಲು ತೆಗೆದು ಒಳಗೆ ಹೋಗಿ ಲೈಟು ಹಾಕಿದ್ದೇ ಇಡೀ ಮನೆ ಸುಸ್ತು ಹೊಡೆದಂತೆ ನೀರವ. ನಾಲ್ಕು ಹೆಜ್ಜೆ ಹಾಕುವಾಗ ದಪ್ಪ ಧೂಳಿನಲ್ಲಿ ಸ್ಪಷ್ಟವಾಗಿ ಮೂಡಿ ಬಂದ ಹೆಜ್ಜೆಯ ಗುರುತುಗಳು. ಒಡೆದು ಬಿದ್ದಿದ್ದ ಕಿಟಿಕಿಯ ಗಾಜಿನ ತುಂಡುಗಳು, ಕಿಟಿಕಿಯಿಂದ ಒಳಗೆ ತೂರಿಬಂದು ಮುಲ್ಲೆಯಲ್ಲಿ ಮಡುಕಟ್ಟಿ ನಿಂತ ಮಳೆನೀರು. ನೀರಿನ ಪಸೆಯಿಂದ ಬುಗುಟು ಹಿಡಿದ, ಕುರ್ಚಿಯ ಬೆನ್ನಿನ  ಡಿಸೈನು ಹಾಕಿದ ಕವರುಗಳು, ಗಾಳಿಗೆ ಹಾರಿ ನೆಲದ ಮೇಲೆ ಹರಡಿ ಬಿದ್ದು ನೆಲಕ್ಕಂಟಿದ ಕಾಗದಗಳು, ಅಂಚೆಪೇದೆ ಬಿಸಾಡಿ ಹೋದ ಧೂಳು ಮುತ್ತಿದ ಪತ್ರಗಳು. ಇನ್ನು ಅಡುಗೆ ಮನೆಯಲ್ಲಿ ತಮ್ಮದೇ ಮನೆಯೆಂಬಂತೆ ಓಡಾಡುತ್ತಿದ್ದ ಅಕ್ಕಳೆಗಳು, ಮರದ ಹಲಗೆಯ ಮೇಲಿನಿಂದ ಗೋಡೆಗೆ, ಅಲ್ಲಿಂದ ಮಾಡಿನ ವರೆಗೆ ನೇಲುತ್ತಿದ್ದ ಜೇಡರ ಬಲೆಯ ಜಾಲ, ಒಲೆ ಚಿಟ್ಟೆಯ ಮೇಲೆ ಬಿದ್ದಿದ್ದ ಗುಬ್ಬಚ್ಚಿ ಗೂಡಿನ ಕಸ ಮತ್ತು ಒಣಗಿ ಜಿಡ್ಡುಕಟ್ಟಿದ್ದ ಹಿಕ್ಕೆ.

ಆ ಎರಡು ಕೋಣೆಯ ಮನೆಯಲ್ಲಿ ನಿಂತ ಮಾಧವಣ್ಣನಿಗೆ ಈ ಲೋಕದಲ್ಲಿ ತಾನೊಬ್ಬನೇ ಉಳಿದಿದ್ದೇನೆಂಬ ವಿಚಿತ್ರ ಏಕಾಂತತೆಯ ಭಾವನೆಯುಂಟಾಗಿ, ಖಿನ್ನತೆಯ ಭಾರದಿಂದ ಜಗ್ಗಿಹೋದನಂತೆ.

ಆದರೆ, ಗೋಡೆಯ ಮೇಲಿನ ಮೊಳೆಗೆ ಸಿಕ್ಕಿಸಿದ್ದ ರಾಜಿ ಮತ್ತು ಶ್ಯಾಮಲಿ ಒಟ್ಟಿಗಿದ್ದ ಫೋಟೋದಲ್ಲಿನ ಅವರ ಮುಗುಳ್ನಗೆಯನ್ನು ನೋಡುತ್ತಿದ್ದಂತೆ, ಅವರ ಹುಚ್ಚು ಕನಸು ಮುಗಿದ ಮೇಲಿನ ವಾಸ್ತವ್ಯದ ಅರಿವು ಅವರಿಗಿನ್ನೂ ಆಗಿಯೇ ಇಲ್ಲವೆನೋ ಎಂದೆನಿಸಿತಂತೆ.

2003

*****

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಹ
Next post ಹೆಸರು ಅಳಿಸಿ ಬದುಕಬೇಕೊಮ್ಮೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys