ಹೆಸರು ಅಳಿಸಿ ಬದುಕಬೇಕೊಮ್ಮೆ
ನೀನು ಸಹ ನಾನು ಸಹ ಅವರು ಸಹ
ಹೊಸ ಮಳೆಗೆ ಹೊಸ ದಂಡೆ
ಹೊಸ ಕಡಲು
ಹೊಸ ಜನ್ಮ ತಾಳಿದಂತೆ
ಯಾವ ಕಡಲಿಗೆ ಯಾವ ಹೆಸರು??
ಯಾವ ನದಿಗೆ ಯಾವ ಹೆಸರು??
ಇರುವ ಒಂದೇ ಕಡಲಿನಲ್ಲಿ
ಎಲ್ಲಿ ಮಿಲನವಾದಯೋ??
ಯಾವ ನದಿಯ ಎಲ್ಲಿ ಹುಡುಕಲಿ??
ಈ ಅಪಾರ ಕಡಲಲಿ??
ಹೆಸರಿಟ್ಟಿದ್ದೇವೆ ನಾವು ಅಳೆಯಲಾಗದ ಕಡಲಿಗೆ
ಹೆಸರಿಟ್ಟಿದ್ದಾರೆ ನಮಗೆ ನಮ್ಮ ಹಿರಿಯರು, ಅವರಿಗೆ ಅವರ ಹಿರಿಯರು…ಹೀಗೆ…..
ಪ್ರೀತಿಯನು ಉಸಿರಾಡದ ಊರು
ಯಾವುದಿದೆ ತೋರಿಸಿ
ಊರಿಗೊಂದು ಹೆಸರಿಟ್ಟೆವು
ಉರಿವ ದ್ವೇಷದ ನಡುವೆಯೂ
ತಾಯ್ತನ ಮರೆಯಾದ ದೇಶ ಯಾವುದಿದೆ?
ದೇಶಕ್ಕೊಂದು ಹೆಸರಿಟ್ಟೆವು
ಪ್ರೀತಿ ಹಂಚದ ಭಾಷೆಯಾವುದಿದೆ
ಅದಕ್ಕೂ ಒಂದು ಬಂಧ ಎಳೆದೆವು
ಹೆಸರು ಅಳಿಸಿ ಬದುಕಬೇಕೊಮ್ಮೆ
ಗಾಳಿ ಗಾಳಿಯನು ಉಂಡು ಬದುಕಿದಂತೆ
ಬೆಳಕು ಬೆಳಕನು ಚೆಲ್ಲಿದಂತೆ
ಕತ್ತಲು ಕತ್ತಲನು ಹೊಕ್ಕಿದಂತೆ
ಆಕಾಶವಾಗಿ ಬಯಲಾಗಿ ನದಿ ಕಡಲಾಗಿ
ಕಡಲು ಕಡಲಾಗಿ ವಿಸ್ತರಿಸಿ ವ್ಯಾಪಿಸಿದಂತೆ
ದಂಡೆ ದಂಡೆಗೆ ಜನ್ಮ ನೀಡಿದ ಹಾಗೆ
ಬದುಕಬೇಕೊಮ್ಮೆ ಹೆಸರನಳಿಸಿ
ನನ್ನಿರವು ನಿನ್ನಲಿ ಬಂದು
ನಿನ್ನಿರವು ನನ್ನಲಿ ಮಿಂದು ಬದುಕಬೇಕೊಮ್ಮೆ ಹೆಸರನಳಿಸಿ
*****
- ಮುಗಿಯಲಾರದ ದುಃಖಕೆ - January 7, 2021
- ಮರಳ ಮೇಲೆ ಮೂಡದ ಹೆಜ್ಜೆ - November 15, 2020
- ಸಾಸಿವೆಯಷ್ಟು ಸುಖಕ್ಕೆ….. - August 30, 2020