ರಂಗಣ್ಣನ ಕನಸಿನ ದಿನಗಳು – ೪

ರಂಗಣ್ಣನ ಕನಸಿನ ದಿನಗಳು – ೪

ಕಂಬದಹಳ್ಳಿಗೆ ಭೇಟಿ

ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು ಬೇಡವೆಂದು ಬದಿಗೊತ್ತಿ ಚೆಕ್ ಸೂಟನ್ನು ಧರಿಸಿ ಕೊಂಡನು. ಅದನ್ನು ಹೊಸದಾಗಿ ಹೊಲಿಸಿದ್ದುದರಿಂದ ಇಸ್ತ್ರಿ ಮಾಡಿದ್ದು ಮಾಡಿಟ್ಟ ಹಾಗೆಯೇ ಇದ್ದಿತು ; ಮತ್ತು ಚೆನ್ನಾಗಿಯೂ ಇದ್ದಿತು. ಜವಾನನು ಬೂಟ್ಸುಗಳಿಗೆ ಪಾಲಿಷ್ ಕೊಟ್ಟು ಮೆರಗು ಬರುವಂತೆ ಮಾಡಿಟ್ಟಿದ್ದನು. ಕಾಲರು, ನೆಕ್ ಟೈ, ಮೊದಲಾದ ಪಾಶ್ಚಾತ್ಯ ರೀತಿಯ ಉಡುಪಿನ ಸಜ್ಜು ರಂಗಣ್ಣನಿಗೆ ಪ್ರಿಯವಾಗಿದ್ದುವು. ಅವುಗಳನ್ನೆಲ್ಲ ಧರಿಸಿಕೊಂಡು ದೊಡ್ಡ ಕನ್ನಡಿಯಲ್ಲಿ ತನ್ನ ಅಂದ ಚೆಂದಗಳನ್ನು ನೋಡಿಕೊಳ್ಳುತಿದ್ದಾಗ ಹೊಗೆಯಾಡುತ್ತಿದ್ದ ಉಪ್ಪಿಟ್ಟು, ಕಾಫಿ ಮೇಜಿನ ಮೇಲೆ ಬಂದು ಕುಳಿತುವು, ರಂಗಣ್ಣನ ಹೆಂಡತಿ ಸ್ವತಃ ಸಿದ್ಧ ಮಾಡಿ ತಂದಿಟ್ಟ ಉಪಾಹಾರ, ಅವುಗಳನ್ನೆಲ್ಲ ಸ್ವೀಕರಿಸಿ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ರಂಗಣ್ಣ ಮನೆ ಬಿಟ್ಟು ಹೊರಟನು. ಏಳೂವರೆ ಗಂಟೆಗೆ ಪಾಠಶಾಲೆ ಪ್ರಾರಂಭವಾಗುತ್ತದೆ. ಅರ್ಧ ಗಂಟೆಯಲ್ಲಿ ನಾಲ್ಕು ಮೈಲಿ ದೂರದ ಕಂಬದಹಳ್ಳಿಗೆ ಬೈಸ್ಕಲ್ ಮೇಲೆ ಹೋಗಬಹುದು ; ಅದರಲ್ಲೂ ಹೊಸಾ ಹೊಸ ಬಿ. ಎಸ್. ಎ. ಬೈಸ್ಕಲ್ಲ- ಎಂದುಕೊಂಡು ಹೊರಟನು.

ದೊಡ್ಡ ರಸ್ತೆ ಚೆನ್ನಾಗಿತ್ತು. ಅರ್ಧಮೈಲಿ ದೂರ ಹೋದಮೇಲೆ ಬಲಕ್ಕೆ ಬೇರೆ ರಸ್ತೆ ಸಿಕ್ಕಿತು. ಆ ಡಿಸ್ಟ್ರಿಕ್ಟ್ ಬೋರ್ಡ್ ರಸ್ತೆಯಲ್ಲಿ ಮುಂದೆ ಹೋಗಬೇಕಾಗಿತ್ತು. ಆ ಸೀಳು ರಸ್ತೆಯಲ್ಲಿ ನಾಲ್ಕು ಫರ್ಲಾಂಗು ಹೋದನೋ ಇಲ್ಲವೋ ರಸ್ತೆ ಏಕೋ ಅವ್ಯವಸ್ಥೆಯಲ್ಲಿದ್ದ ಹಾಗೆ ಕಂಡಿತು.
ಸಾಲದ್ದಕ್ಕೆ ಹಿಂದಿನ ರಾತ್ರಿ ಸ್ವಲ್ಪ ಮಳೆಯೂ ಬಿದ್ದಿತ್ತು. ಬೆಂಗಳೂರು ಮೈಸೂರುಗಳಲ್ಲಿಯೇ ಹೆಚ್ಚಾಗಿ ಓಡಾಡಿ ಅಭ್ಯಾಸವಿದ್ದವನು ರಂಗಣ್ಣ. ಕಡೆಗೆ ಡಿಸ್ಟ್ರಿಕ್ಟಿನ ಮುಖ್ಯ ಸ್ಥಳಗಳಲ್ಲಿ ಮೂರು ನಾಲ್ಕನ್ನು ಕೂಡ ಸರಿಯಾಗಿ ನೋಡಿರಲಿಲ್ಲ. ಆದ್ದರಿಂದ ಒಳನಾಡಿನಲ್ಲಿ ಬೋರೆಗೌಡನ ರಸ್ತೆಗಳು ಹೇಗಿರುತ್ತವೆ ಎನ್ನುವ ಅನುಭವವೇ ಇರಲಿಲ್ಲ. ನಕ್ಷೆಯಲ್ಲಿ ರಸ್ತೆಯ ಗೀಟನ್ನು ನೋಡಿ, ರಸ್ತೆ ಎಂದರೆ ಬೆಂಗಳೂರು ಪಟ್ಟಣದ ಕೃಷ್ಣರಾಜೇಂದ್ರ ರಸ್ತೆ, ನರಸಿಂಹರಾಜ ರಸ್ತೆ ಅಲ್ಲದಿದ್ದರೂ ವಿಶ್ವೇಶ್ವರಪುರದ ಸಂದು ರಸ್ತೆಗಳಂತಾದರೂ ಇರಬಹುದು ಎಂದು ತಿಳಿದುಕೊಂಡಿದ್ದನು. ಆದರೆ ಈ ರಸ್ತೆ ಹಾಗಿರಲಿಲ್ಲ. ರಸ್ತೆಗೆ ಜಲ್ಲಿ ಎಂದರೆ ಏನೆಂಬುದು ತಿಳಿದೇ ಇರಲಿಲ್ಲ. ಅಗಲ ಕಿರಿದು ; ಪಕ್ಕಗಳಲ್ಲಿ ಹಳ್ಳಗಳು, ಕೆಲವು ಕಡೆ ಆ ಹಳ್ಳಗಳಲ್ಲಿ ನೀರು ರಸ್ತೆಯಲ್ಲಿ ಎತ್ತಿನ ಗಾಡಿಗಳು ಓಡಾಡಿ ಓಡಾಡಿ ಒಂದೊಂದು ಅಡಿಯಷ್ಟು ಹಳ್ಳಗಳು ಬಿದ್ದಿದ್ದ ಉದ್ದನೆಯ ಹಾದಿ ; ಆ ಹಳ್ಳಗಳ ನಡುವೆ ಕಿರಿದಾದ ದಿಣ್ಣೆ; ಪಕ್ಕಗಳಲ್ಲಿ ಮತ್ತು ಅಡ್ಡಲಾಗಿ ಸಹ ಕೊರಕಲುಗಳು, ರಂಗಣ್ಣನಿಗೆ ಬೈಸ್ಕಲ್ ಮೇಲೆ ಹೋಗುವುದು ಬರಬರುತ್ತಾ ದುಸ್ತರವಾಯಿತು. ಅಲ್ಲಲ್ಲಿ ಬೈಸ್ಕಲ್ ಮೇಲೆ ಸರ್ಕಸ್ ಮಾಡಬೇಕಾಗಿ ಬಂತು ; ಒಂದೆರಡು ಸಲ ಚಕ್ರಗಳು ಜಾರಿ ಬಂಡಿಜಾಡಿನ ಹಳ್ಳಕ್ಕೆ ಬೀಳಿಸಿದುವು. ಇದೇನೋ ಫಜೀತಿಗೆ ಇಟ್ಟು ಕೊಂಡಿತು ಎಂದುಕೊಳ್ಳುತ್ತ, ಬೈಸ್ಕಲ್ಲಿಂದ ಇಳಿದು ಅದನ್ನು ತಳ್ಳಿಕೊಂಡು ಮುಂದಕ್ಕೆ ಹೊರಟನು. ಮುಂದೆ ರಸ್ತೆ ಉತ್ತಮ ವಾಗಿರಬಹುದು ಎಂಬುದೊಂದು ಆಶೆ ; ಹೊರಟವನು ಕೆಲಸವನ್ನು ಮುಗಿಸದೆ ಹಿಂದಿರುಗಬಾರದೆಂಬ ಸ್ವಾಭಿಮಾನ. ಆದ್ದರಿಂದ ಬೈಸ್ಕಲ್ಲನ್ನು ತಳ್ಳಿ ಕೊಂಡು ಮುಂದಕ್ಕೆ ಹೊರಟನು. ಒಂದು ಫರ್ಲಾಂಗು ದೂರ ಹೀಗೆ ಹೋದ ಮೇಲೆ ಅವನು ನಿರೀಕ್ಷಿಸಿದ್ದಂತೆಯೇ ಅಲ್ಲಿ ಗಟ್ಟಿನೆಲ, ಸಮ ರಸ್ತೆ ಇತ್ತು. ರಂಗಣ್ಣನಿಗೆ ಮನಸ್ಸಿನಲ್ಲಿ ಸಂತೋಷವಾಯಿತು. ಪಟ್ಟು ಹಿಡಿದು ಕೆಲಸ ಮಾಡಿದರೆ ಕಾರ್ಯ ಕೈಗೂಡುವುದು ಖಂಡಿತ ಎಂಬ ಹಿರಿಯರ ವಾಕ್ಯ ಜ್ಞಾಪಕಕ್ಕೆ ಬಂತು. ಬೈಸ್ಕಲ್ ಹತ್ತಿಕೊಂಡು ಹೊರಟನು. ಎರಡು ಫರ್ಲಾಂಗು ದೂರ ಹೋದಮೇಲೆ ಬೈಸ್ಕಲ್ ಇಳಿಯಬೇಕಾಯಿತು. ಮುಂದೆ ರಸ್ತೆಯಲ್ಲಿ ಅಡ್ಡಲಾಗಿ ಐವತ್ತು ಅಡಿ ಅಗಲಕ್ಕೆ ನೀರು! ಬಲಗಡೆಗೆ ನೋಡುತ್ತಾನೆ ; ಜನಾರ್ದನಪುರದ ಭಾರಿ ಕೆರೆ ಕಾಣುತ್ತಾ ಇದೆ ; ಅದರ ನೀರು ಹಿಂದಕ್ಕೆ ಒಯ್ದು ಕೊಂಡು ಬಂದಿದೆ. ರಸ್ತೆ ಇಳಿ ಜಾರಾಗಿ ನೀರಿನಲ್ಲಿ ಅದೃಶ್ಯವಾಗಿ ಐವತ್ತು ಅಡಿಗಳ ತರುವಾಯ ಪುನಃ ಏರುತ್ತಾ ಹೊರಟಿದೆ ಎಡಗಡೆ ಎಲ್ಲಿಯಾದರೂ ದಾಟಬಹುದೇನೋ ಎಂದು ಪರೀಕ್ಷೆ ಮಾಡಿದರೆ ಅಲ್ಲಿಯೂ ನೀರು, ಕೊಚ್ಚೆ, ಆಚೆಗೆ ಬೇಲಿ, ಬೇಲಿಯಾಚೆ ಗದ್ದೆಗಳು. ರಂಗಣ್ಣನಿಗೆ ಪ್ಯಾದ್‍ಮತ್ ಆಗಿ ಹೋಯಿತು. ನೀರು ಎಷ್ಟು ಆಳವಿದೆಯೋ ತಿಳಿಯದು. ರಸ್ತೆಯಲ್ಲಿ ಜನರ ಓಡಾಟ ಕಾಣಲಿಲ್ಲ. ಹಿಂದಕ್ಕೆ ಹೊರಟು ಹೋಗೋಣವೆಂದರೆ ಪ್ರಥಮ ಪ್ರಯತ್ನದಲ್ಲಿಯೇ ಹೀಗೆ ಭಂಗಪಡುವುದೇ ? ಉತ್ತರ ಕುಮಾರನಂತೆ ಬೆನ್ನು ತೋರಿಸಿ ಓಡುವುದೇ ? ಕೂಡದು ಎಂಬ ಹೆಮ್ಮೆ, ಸ್ವಲ್ಪ ಹೊತ್ತಿನೊಳಗಾಗಿ ಎದುರು ಕಡೆಯಿಂದ ಒಂದು ಎತ್ತಿನಗಾಡಿ ಬಂತು ಅದರ ಹಿಂದೆ ಕೆಲವರು ಗಂಡಸರೂ ಹೆಂಗಸರೂ ಬರುತ್ತಿದ್ದರು. ಗಾಡಿ ಸರಾಗವಾಗಿ ನೀರಿನಲ್ಲಿ ಇಳಿದು ಈಚೆಗೆ ಬಂತು. ಜನರೆಲ್ಲ ನೀರಿನಲ್ಲಿ ಇಳಿದು ಧಾರಾಳವಾಗಿ ನಡೆದುಕೊಂಡು ಬಂದು ಬಿಟ್ಟರು. ನೀರಿನ ಆಳ ಮೊಣಕಾಲು ಮಟ್ಟಿಗೆ ಮಾತ್ರ ಎನ್ನುವದು ತಿಳಿಯಿತು. ನೀರನ್ನು ದಾಟಿಬಂದ ಜನ ರಂಗಣ್ಣನನ್ನು ನೋಡಿ, ‘ಯಾಕ್’ ಸೋಮಿ ಆಂಗ್ ನೋಡ್ತಾ ನಿಂತಿದ್ರಿ? ಮೊಣಕಾಲ್ ಮಟ್ಟ ನೀರೈತೆ, ಅಷ್ಟೆ, ಬೈಸ್ಕೋಲ್ ಮೇಗೆನೆ ನಡೀರಲಾ ಮತ್ತೆ’ ಎಂದು ಹೇಳುತ್ತಾ ಹೊರಟು ಹೋದರು.

ರಂಗಣ್ಣ ಎರಡು ನಿಮಿಷಗಳ ಕಾಲ ಆಲೋಚನೆ ಮಾಡಿ, ಬೂಟ್ಸುಗಳನ್ನು ಬಿಚ್ಚಿ, ಕಾಲುಚೀಲಗಳನ್ನು ತೆಗೆದು ಷರಾಯನ್ನು ಮೊಣಕಾಲ ಮೇಲಕ್ಕೆ ಮಡಿಸಿಕೊಂಡು, ಆ ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಇಳಿದನು. ಬೈಸ್ಕಲ್ಲನ್ನು ತಳ್ಳುತ್ತ ಆಚೆಯ ದಂಡೆಯನ್ನು ಸೇರಿದನು. ಆ ದಿಗ್ವಿಜಯದ ಸಂತೋಷ ಹೇಳತೀರದು. ಆಚೆಗೆ ಹೋದ ಮೇಲೆ ಪುನಃ ಬೂಟ್ಸುಗಳನ್ನು ಹಾಕಿಕೊಳ್ಳುವುದು ಕಷ್ಟವಾಯಿತು. ಬೈಸ್ಕಲ್ಲನ್ನು ಒರಗಿಸಿಡುವುದಕ್ಕೆ ಮರವಿಲ್ಲ, ಗಿಡವಿಲ್ಲ ; ಕಡೆಗೆ ಎತ್ತರದ ಒಂದು ಕಲ್ಲು ಸಹ ಇಲ್ಲ! ಆದರೆ ರಂಗಣ್ಣ ಒಳ್ಳೆಯ ಹಂಚಿಕೆಗಾರ. ಹಿಂದೆ ಸ್ಕೌಟು ಮಾಷ್ಟರಾಗಿ ಇದ್ದವನು ! ಬೈಸ್ಕಲ್ಲನ್ನು ನೆಲದ ಮೇಲೆ ಮಲಗಿಸಿ ಏಕಪಾದ ಲೀಲೆಯನ್ನು ತಾಳಿ ಜಯಶೀಲನಾದನು. ಹೀಗೆ ಬೂಟ್ಸುಗಳನ್ನು ಧರಿಸಿದ ಮೇಲೆ ಗಡಿಯಾರವನ್ನು ನೋಡಿ ಕೊಳ್ಳುತ್ತಾನೆ. ಏಳೂವರೆ ಗಂಟೆ ಆಗಿ ಹೋಗಿತ್ತು. ‘ಚಿಂತೆಯಿಲ್ಲ. ಇನ್ನೊಂದು ಅರ್ಧ ಗಂಟೆಯೊಳಗೆ ಕಂಬದಹಳ್ಳಿಯನ್ನು ಮುಟ್ಟುತ್ತೇನೆ’ ಎಂದು ಧೈರ್ಯ ತಂದುಕೊಂಡು ಬೈಸ್ಕಲ್ಲನ್ನು ಹತ್ತಿ ಹೊರಟನು. ರಸ್ತೆ ಮೊದಲಿನಷ್ಟು ಕೆಡುಕಾಗಿರಲಿಲ್ಲ. ಆದರೆ ಅರ್ಧ ಮೈಲಿ ದೂರ ಹೋದನೋ ಇಲ್ಲವೋ ಜನಾರ್ದನಪುರದ ಕೆರೆಯ ನೀರು ಒದ್ದು ಕೊಂಡಿದ್ದ ಎರಡನೆಯ ಹರವು ಅಡ್ಡಲಾಯಿತು. ಆದರೆ ರಂಗಣ್ಣನಿಗೆ ಮೊದಲ ಹರವಿನ ಅನುಭವ ಇದ್ದುದರಿಂದಲೂ, ಅದರಲ್ಲಿ ತಾನು ಜಯಶಾಲಿಯಾಗಿದ್ದುದರಿಂದಲೂ ಈ ವಿಘ್ನ ಅವನನ್ನು ಹೆದರಿಸಲಿಲ್ಲ. ಮೊದಲಿನಂತೆಯೇ ರಂಗಣ್ಣ ಬೂಟ್ಸುಗಳನ್ನು ಬಿಚ್ಚಿ ನೀರಿನ ಹರವನ್ನು ದಾಟಲು ಬೈಸ್ಕಲ್ಲನ್ನು ತಳ್ಳಿಕೊಂಡು ಇಳಿದನು. ಹತ್ತು ಅಡಿ ಹೋದಮೇಲೆ ನೀರು ಮೊಣಕಾಲ ಮಟ್ಟಕ್ಕೆ ಬಂತು ಇನ್ನು ಐದು ಅಡಿ ಹೋಗುವುದರೊಳಗಾಗಿ ಅವನ ಷರಾಯಿ ಕೊನೆಗಳೆಲ್ಲ ತೊಯ್ದು ಹೋದವು. ಇನ್ನು ಐದು ಅಡಿಗಳ ದೂರ ಹೋಗುತ್ತಲೂ ತೊಡೆಗಳ ಅರ್ಧಕ್ಕೆ ನೀರಿನ ಮಟ್ಟ ಬಂತು. ಆಗ ರಂಗಣ್ಣನಿಗೆ ಪೇಚಾಟಕ್ಕಿಟ್ಟು ಕೊಂಡಿತು ! ಆಳ ಇನ್ನೂ ಹೆಚ್ಚಾಗಿದೆಯೋ ಏನೋ ? ಮುಂದಕ್ಕೆ ಹೋಗುವುದೆ ? ಅಥವಾ ಹಿಂದಕ್ಕೆ ಹೊರಟು ಹೋಗುವುದೇ ? ಏನು ಮಾಡಲಿ ? ಎಂದು ಕೊಂಚ ಕಾಲ ಅವನು ಜಲಮಧ್ಯದಲ್ಲಿ ನಿಂತು ಸ್ಫೂರ್ತಿಗಾಗಿ ಉಗ್ರ ತಪಸ್ಸು ಮಾಡಿದನು ಗಾಡಿಗಳೂ ಜನರೂ ಓಡಾಡುವ ರಸ್ತೆ, ಬಹಳ ಆಳವಿದ್ದರೆ ಅವರು ಹೇಗೆ ತಾನೆ ಓಡಾಡಲು ಸಾಧ್ಯ? ಆದ್ದರಿಂದ ತೊಡೆಯ ಅರ್ಧಕ್ಕಿಂತ ಹೆಚ್ಚು ಆಳ ಇರಲಾರದು. ಹೀಗೆ ಪೂರ್ವ ಪಕ್ಷ ಪ್ರಮೇಯಗಳನ್ನು ಜೋಡಿಸಿ ಕೊಂಡು ಸಿದ್ಧಾಂತ ಮಾಡಿದನು. ಅವನು ತರ್ಕ ಶಾಸ್ತ್ರದಲ್ಲಿ ದೊಡ್ಡ ಪಂಡಿತನಾಗಿದ್ದಿರಬೇಕೆಂದು ಯಾರಾದರೂ ಹೇಳಬಹುದು. ಆದರೆ ಅವನು ಹಿಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹುಡುಗ ! ತರ್ಕ ಗ್ರಂಥದ ಗಂಧವನ್ನೇ ಅರಿಯದ ಪಶು. ಕಡೆಗೆ ಅವನು ತರ್ಕಿಸಿದಂತೆಯೇ ನೀರು ತೊಡೆಯ ಅರ್ಧದಷ್ಟೇ ಆಳವಿದ್ದಿತು. ಸ್ವಲ್ಪ ಪ್ರಯಾಸಪಟ್ಟು ಕೊಂಡು ರಂಗಣ್ಣ ಆಚೆಯ ದಂಡೆಯನ್ನು ಸೇರಿದನು. ತನ್ನ ಅವಸ್ಥೆಯನ್ನು ನೋಡಿಕೊಂಡು, ‘ನಕ್ಷೆ ನೋಡಿ ಮೋಸವಾಯಿತು. ಶಂಕರಪ್ಪನನ್ನಾದರೂ ಕೇಳಿದ್ದಿದ್ದರೆ ಚೆನ್ನಾಗಿರುತಿತ್ತು. ಈಗ ಷರಾಯಿಯಲ್ಲಿ ಅರ್ಧದ ಮೇಲೆ ನೆನೆದುಹೋಯಿತಲ್ಲ. ಒಳಗಿನ ಚಡ್ಡಿ ಸಹ ಕೊನೆಗಳಲ್ಲಿ ನೆನೆದು ಹೋಗಿದೆ. ಕಾಲುಗಳೆಲ್ಲ ತಣ್ಣಗಾಗಿ ಕೊರೆಯುತ್ತಿವೆ’-ಎಂದು ಹೇಳಿಕೊಂಡನು. ಇನ್‌ಸ್ಪೆಕ್ಟರ್‌ಗಿರಿಯ ಉತ್ಸಾಹ ಸಹ ಅರ್ಧ ತಣ್ಣಗಾಯಿತು.

ಪುನಃ ಬೂಟ್ಸುಗಳನ್ನು ಕಟ್ಟಿಕೊಂಡು ಒದ್ದೆ ಷರಾಯಿಗಳಲ್ಲಿಯೇ ಬೈಸ್ಕಲ್ಲನ್ನು ಏರಿಕೊಂಡು ಮುಂದಕ್ಕೆ ಹೊರಟನು. ದಾರಿಯಲ್ಲಿ ಎದುರು ಬಿದ್ದ ಗಂಡಸರಲ್ಲಿ, ‘ಅಯ್ಯೋ ಪಾಪ! ಅಯ್ನೋರು ನೆನೆದು ಹೋದರು’ ಎಂದವನೊಬ್ಬ; ‘ಅಯ್ನೋರಲ್ಲ ಕಣೋ! ಯಾರೋ ಸಾಹೇಬ್ರು. ಠೀಕಾಗವ್ರೆ’ ಎಂದವನು ಮತ್ತೊಬ್ಬ, ಆ ಮಾತುಗಳನ್ನು ಅರ್ಧಂಬರ್ಧ ಆಲಿಸಿ ತನ್ನ ಅವಸ್ಥೆಗೆ ಒಳಗೊಳಗೇ ನಗುತ್ತ ಇನ್ನೆರಡು ಮೈಲಿ ದೂರ ಹೋಗುತ್ತಲೂ ದೂರದಲ್ಲಿ ಹಳ್ಳಿ ಇರುವುದು ಗೋಚರವಾಯಿತು. ಬಹುಶಃ ಅದೇ ಕಂಬದಹಳ್ಳಿ ಇರಬೇಕೆಂದು ತೀರ್ಮಾನಿಸಿಕೊಂಡನು. ಇನ್ನು ಸ್ವಲ್ಪ ದೂರ ಮುಂದಕ್ಕೆ ಬರುತ್ತಲೂ ಕಂಬದಹಳ್ಳಿಯ ಭಾರಿ ಕೆರೆ ದೊಡ್ಡ ಕನ್ನಡಿಯ ಹಾಗೆ ಕಣ್ಣಿಗೆ ಬಿತ್ತು. ಅದನ್ನು ನೋಡಿದಾಗ ಆ ಪ್ರಕೃತಿಯ ಸೌಂದರ್ಯಕ್ಕೆ ಸಂತೋಷವೂ ಹಿಂದಿನ ನೀರ ಹರವುಗಳ ಜ್ಞಾಪಕದಿಂದ ಮುಂದೇನು ದೊಡ್ಡ ವಿಘ್ನ ವಿದೆಯೋ ಎಂಬ ಭಯವೂ ಏಕಕಾಲದಲ್ಲಿ ರಂಗಣ್ಣನಿಗೆ ಉಂಟಾದುವು. ಇಷ್ಟು ದೂರ ಬಂದದ್ದಂತೂ ಆಯಿತು ; ಹಳ್ಳಿ ಸಹ ಕಾಣುತ್ತಾ ಇದೆ ; ಇನ್ನೆಲ್ಲ ಅರ್ಧಮೈಲಿ, ಏನು ವಿಘ್ನವಿದ್ದರೂ ದಾಟುವುದೇ ಸರಿ ಎಂದು ನಿಶ್ಚಯ ಮಾಡಿಕೊಂಡು ಮುಂದಕ್ಕೆ ಹೊರಟನು. ಕೆರೆಯ ಕೋಡಿ ಬಳಿ ಬಂದಾಗ ರಸ್ತೆ ಬಹಳ ಇಳಿಜಾರಾಗಿದ್ದುದು ಕಂಡಿತು. ತಾನಿರುವ ಮಟ್ಟಕ್ಕೂ ಕೆಳಗಿನ ಮಟ್ಟಕ್ಕೂ ಇಪ್ಪತ್ತು ಅಡಿಗಳ ಮೇಲೆ ಹಳ್ಳವಿರುವುದಾಗಿ ಕಂಡಿತು. ಅಷ್ಟೇ ಅಲ್ಲ, ಕೆರೆ ಕೋಡಿ ಬಿದ್ದು ನೀರು ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವುದು ಕಂಡಿತು. ಹಳ್ಳಿಯ ಹೆಂಗಸರು ಮೇಲುಗಡೆ, ಆಚೆಯ ದಂಡೆಯಲ್ಲಿ ಪಾತ್ರೆಗಳನ್ನು ಬೆಳಗುತ್ತಿರುವುದು, ಸೀರೆಗಳನ್ನು ಒಗೆಯುತ್ತಿರುವುದು, ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದು – ಮೊದಲಾದುವೆಲ್ಲ ಕಂಡಿತು. ರಂಗಣ್ಣ ಬೈಸ್ಕಲ್ಲಿಂದ ಇಳಿದು ನಡೆದು ಕೊಂಡು ಹೊರಟನು. ನೀರು ಸ್ವಲ್ಪ ರಭಸವಾಗಿಯೇ ಹರಿಯುತ್ತಿದೆ. ಏನು ಮಾಡಬೇಕು ? ಆಳ ಎಷ್ಟಿದೆಯೋ ? ಎಂದು ಆಲೋಚಿಸುತ್ತ ನಿಂತಿದ್ದಾಗ, ಎದುರುಗಡೆಯಿಂದ ಗಾಡಿಯೊಂದು ಇಳಿದು ಬಂತು. ಆಳ ಎಷ್ಟಿದೆಯೋ ಎಂದು ರಂಗಣ್ಣನು ಕುತೂಹಲದಿಂದ ನೋಡಿದನು. ಚಕ್ರಗಳ ಗುಂಬ ನೀರಿನಲ್ಲಿ ಮುಳುಗಿಹೋಯಿತು. ಎತ್ತುಗಳ ಕಾಲುಗಳು ಕಾಣಿಸಲೊಲ್ಲವು. ಗಾಡಿ ಸಹ ಎಲ್ಲಿ ಕೊಚ್ಚಿ ಕೊಂಡು ಹೋಗುವುದೋ ಎನ್ನುವ ಹೆದರಿಕೆಯೂ ಇತ್ತು. ಆದರೆ ಎತ್ತುಗಳು ಬಲವಾಗಿದ್ದುವು ; ಗಾಡಿಯವನೂ ಕಟ್ಟು ಮಸ್ತಾಗಿದ್ದನು. ಆದ್ದರಿಂದ ಗಾಡಿ ನೀರ ಹರವನ್ನು ದಾಟಿ ಈಚೆಯ ದಂಡೆಯನ್ನು ಹತ್ತಿ ಹೊರಟು ಹೋಯಿತು. ರಂಗಣ್ಣ ಆಧೈರ್ಯ ದಿಂದ ನಿಂತು ನೋಡುತ್ತಾ ಇದ್ದಾನೆ! ಕೆಲವರು ಗಂಡಸರು ಮೂಟೆಗಳನ್ನು ಹೊತ್ತುಕೊಂಡು ಎದುರು ಕಡೆಯಿಂದ ಬರುತ್ತಿದ್ದಾರೆ. ಅವರೇನು ಮಾಡುತ್ತಾರೋ ನೋಡೋಣ. ಹಿಂದಕ್ಕೆ ಹೊರಟು ಹೋಗುತಾರೋ ಏನೋ ? ಎಂದು ರಂಗಣ್ಣ ನೋಡುತ್ತಿದ್ದಾನೆ. ಆ ಜನ ಏನೊಂದು ಎಗ್ಗೂ ಇಲ್ಲದೆ ಬಟ್ಟೆಗಳನ್ನು ಮೇಲಕ್ಕೆತ್ತಿಕೊಂಡು ನೀರನ್ನು ದಾಟಿ ಹೊರಟೇ ಹೋದರು ! ಆ ದೃಶ್ಯವನ್ನು ನೋಡಿದ ಮೇಲೆ ರಂಗಣ್ಣನಿಗೆ – ತನ್ನ ಸ್ವಾಭಿಮಾನ ಭಂಗವಾದರೂ ಚಿಂತೆಯಿಲ್ಲ, ಜನಾರ್ದನ ಪುರಕ್ಕೆ ಹಿಂದಿರುಗೋಣ-ಎಂದು ಆಲೋಚನೆ ಬಂತು. ಪುನಃ ಇಷ್ಟು ದೂರ ಬಂದಿದ್ದೇನೆ, ಹಳ್ಳಿ ಸಹ ಕಾಣುತ್ತಿದೆ, ಫಲ ಕೈಗೆ ಎಟಕುತ್ತಿರುವಾಗ ಪ್ರಯತ್ನವನ್ನು ಕೈಬಿಟ್ಟವರುಂಟೆ ? ಎಂದು ಮತ್ತೊಂದು ಆಲೋಚನೆ ಬಂತು. ಹೀಗೆ ಡೋಲಾಯಮಾನಸನಾಗಿದ್ದಾಗ ಎದುರಿಗೆ ಕೆಲವರು ಹೆಂಗಸರು ತಲೆಯಮೇಲೆ ಬುಟ್ಟಿಗಳನ್ನು ಹೊತ್ತು ಕೊಂಡು ಬರುತ್ತಿದ್ದರು. ಅವರು ಸಹ ನೀರಿಗಿಳಿದರು ! ಸಭ್ಯನಾದ ರಂಗಣ್ಣ ಬೈಸ್ಕಲ್ಲನ್ನು ತಿರುಗಿಸಿ ಕೊಂಡು ರಸ್ತೆಯನ್ನು ಹತ್ತಿ ಮೇಲಕ್ಕೆ ಹೊರಟನು. ಸ್ವಲ್ಪ ಹೊತ್ತಿನೊಳಗಾಗಿ ಹಿಂದೆ ಇದ್ದ ಹೆಂಗಸರು ನೀರನ್ನು ದಾಟಿ ರಂಗಣ್ಣನ ಮುಂದೆಯೇ ಹಾದು ಹೊರಟು ಹೋದರು. ಆಗ ರಂಗಣ್ಣ ದೃಢನಿಶ್ಚಯ ಮಾಡಿದನು. ಹೆಂಗಸರು ಕೂಡ ಹೆದರದೆ ನೀರನ್ನು ದಾಟಿ ಹೊರಟು ಹೋದರು. ನಾನು ಅವರಿಗಿಂತ ಕೀಳಾಗಬೇಕೇ ? ಬಟ್ಟೆ ನೆನೆದರೆ ನೆನೆಯಲಿ, ಜೀವ ನೆನೆದರೆ ನೆನೆಯಲಿ. ಈಸಬೇಕು, ನುಗ್ಗಿ ಜೈಸಬೇಕು’ ಎಂದು ಹುರುಪು ಗೊಂಡು ಬೂಟ್ಸುಗಳನ್ನು ಬಿಚ್ಚಿದನು. ಆಗ ಹಳೆಯ ಇನ್‍ಸ್ಪೆಕ್ಟರಿನ ಸಾಮಾನ್ಯ ಪಂಚೆಯ ನೆನಪಾಯಿತು ! ಆತನಂತೆಯೇ ತಾನೂ ಸಹ ಇದ್ದಿದ್ದರೆ ಆಗಿತ್ತಲ್ಲ ಎಂದು ವಿವೇಕೋದಯವಾಯಿತು. ಇವೆಲ್ಲ ಅನುಭವಕ್ಕೆ ಬರುವುದು ಒಳ್ಳೆಯದು ಎಂದು ಹೇಳಿಕೊಳ್ಳುತ್ತ ಷರಾಯಿಯನ್ನೂ ಅಂಗಿಯನ್ನೂ ತೆಗೆದು ಬಿಟ್ಟು ಬರಿ ಚಡ್ಡಿಯಲ್ಲಿ ನಿಂತುಕೊಂಡನು. ಎಲ್ಲವನ್ನೂ ಗಂಟು ಕಟ್ಟಿ ಕೊರಳಿಗೆ ಸುತ್ತಿಕೊಂಡು ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದೆತ್ತಿಕೊಂಡು ಬಲಗೈ ಯಿಂದ ಬೈಸ್ಕಲ್ಲನ್ನು ತಳ್ಳಿ ಕೊಂಡು ನೀರಿನೊಳಕ್ಕೆ ರಂಗಣ್ಣ ಇಳಿದನು. ಆಗಿನ ಅವನ ವಿಚಿತ್ರ ವೇಷ ವನ್ನು ಅವನ ಹೆಂಡತಿ ನೋಡಬೇಕಾಗಿತ್ತು ! ನೀರಿನಲ್ಲಿ ಇಳಿದು ಅರ್ಧಕ್ಕೆ ಬಂದಾಗ ಸೆಳೆವು ಹೆಚ್ಚಾಗಿದ್ದಂತೆ ತೋರಿತು ; ಕಾಲುಗಳು ಸ್ಥಿರವಾದುವು. ಆದರೆ ಹೇಗೋ ದೇವರು ಪಾರು ಮಾಡಿಸಿದನು. ರಂಗಣ್ಣ ನೀರನ್ನು ದಾಟಿಕೊಂಡು ಆಚೆಯ ದಡವನ್ನು ಸೇರಿ ರಸ್ತೆಯನ್ನು ಹತ್ತಿ ಮೇಲಕ್ಕೆ ಬಂದನು ಬೈಸ್ಕಲ್ಲನ್ನು ಮರಕ್ಕೆ ಒರಗಿಸಿ ಅಲ್ಲಿನ ಕಲ್ಲಿನ ಮೇಲೆ ಕುಳಿತುಕೊಂಡನು. ತನ್ನ ಚೆಡ್ಡಿಯೆಲ್ಲ ಒದ್ದೆ ಯಾಗಿದ್ದಿತು ; ನೀರು ತೊಟ್ಟಿಕುತ್ತಿತ್ತು. ಹಿಂದೆ ಅರ್ಧ ದವರೆಗೆ ನೆನೆದಿದ್ದ ಷರಾಯಿ ಈಗ ಏಕಮಾತ್ರ ಆಧಾರ. ಏನು ಮಾಡುವುದು ? ಚೆಡ್ಡಿಯನ್ನು ತೆಗೆದು ಉಪಾಯದಿಂದ ಷರಾಯಿಯನ್ನು ಹಾಕಿಕೊಳ್ಳಬೇಕು ಆದರೆ ಪಂಚೆಯನ್ನು ಬಿಚ್ಚಿ ಕಳಚುವಂತೆ ಚಡ್ಡಿಯನ್ನು ಕಳಚಲಾದೀತೆ ? ಈ ಸಂಕಟವನ್ನು ಅನುಭವಿಸಿದವರಿಗೆ ಅದರ ಆಗು ಹೋಗುಗಳು ಗೊತ್ತು. ಉಳಿದವರಿಗೆ ಹೇಗೆ ಗೊತ್ತಾಗಬೇಕು? ಚೆಡ್ಡಿಯನ್ನು ಬಿಚ್ಚಿ ಬಿಟ್ಟು ಗೊಮ್ಮಟೇಶ್ವರನಂತೆ ನಿಂತು ಷರಾಯಿಯನ್ನು ಹಾಕಿ ಕೊಳ್ಳುವುದಾದರೂ ಹೇಗೆ ? ಜನ ಓಡಾಡುತ್ತಾ ಇದ್ದಾರೆ. ಒದ್ದೆಯ ಚೆಡ್ಡಿ ಯ ಮೇಲೆಯೇ ಸರಾಯಿ ಯನ್ನು ಎಳೆದು ಕೊಂಡು ಹಾಕಿ ಕೊಳ್ಳುವುದೇ ? ಅದರ ಸಂಪರ್ಕದಿಂದ ಷರಾಯಿಯ ಅಂಡಿನ ಭಾಗವೆಲ್ಲ ಒದ್ದೆಯೇ ಆಗುತ್ತದೆಯಲ್ಲ ! ಅದನ್ನು ತಪ್ಪಿಸುವುದು ಹೇಗೆ ? ಹಾಗೆಯೇ ಪಾಠಶಾಲೆಗೆ ಹೋದರೆ ತನ್ನನ್ನು ನೋಡಿ ಹುಡುಗರು ನಗುವುದಿಲ್ಲವೆ ? ಮೇಷ್ಟ್ರು ಏನೆಂದು ಕೊಂಡಾನು ?

ಎಲ್ಲರ ಹತ್ತಿರವೂ ಹೇಳಿ ಹೇಳಿ ಅಪಹಾಸ್ಯ ಮಾಡುವುದಿಲ್ಲವೆ ? ಹೀಗೆ ಭಾವನಾತರಂಗಗಳಲ್ಲಿ ಮುಳುಗುತ್ತ ಏಳುತ್ತ ಸಮಸ್ಯೆ ಬಗೆಹರಿಯದೆ ರಂಗಣ್ಣ ಕಲ್ಲ ಮೇಲೆಯೇ ಕೊಂಚ ಹೊತ್ತು ಒದ್ದೆ ಯಿಂದ ನಡುಗುತ್ತ ಕುಳಿತಿದ್ದನು. ಕಡೆಗೆ ಸಮಸ್ಯೆ ಪರಿಹಾರವಾಯಿತು. ರಂಗಣ್ಣ ತನ್ನ ಅಂಗಿಯನ್ನು ನಡುವಿಗೆ ಸುತ್ತಿ ಚೆಡ್ಡಿಯನ್ನು ಬಿಚ್ಚಿ, ಬರಿಯ ಷರಾಯಿಯನ್ನು ಹಾಕಿಕೊಂಡು ಜಯಶಾಲಿಯಾದನು. ‘ಇಷ್ಟೊಂದು ಸುಲಭೋಪಾಯ ಮೊದಲೇ ಹೊಳೆಯಲಿಲ್ಲವಲ್ಲ!’ ಎಂದು ತನ್ನ ಮಂದಬುದ್ದಿಯನ್ನು ತಾನೇ ಹಳಿದುಕೊಂಡು ಮತ್ತೆ ಉಡುಪನ್ನು ಧರಿಸಿ, ಬೂಟ್ಸು ಹಾಕಿಕೊಂಡು ಹಳ್ಳಿಯ ಕಡೆಗೆ ಹೊರಟನು. ಗಡಿಯಾರವನ್ನು ನೋಡಿದರೆ ಆಗಲೇ ಒಂಬತ್ತು ಗಂಟೆ ಆಗಿಹೋಗಿತ್ತು.

ಹೀಗೆ ರಂಗಣ್ಣ ಸ್ವಲ್ಪ ಮಟ್ಟಿಗೆ ಭಂಗ ಪಟ್ಟಿದ್ದರಿಂದ ಇನ್ಸ್‍ಪೆಕ್ಟರ್ ಕೆಲಸ ಹೂವಿನ ಹಾಸಿಗೆ ಅಲ್ಲವೆಂದೂ ಒಳನಾಡಿನಲ್ಲಿ ಸರ್ಕಿಟು ತಿರುಗುವುದು ಕಷ್ಟದ ಕೆಲಸವೆಂದೂ ಅರಿವಾಯಿತು. ಈಗ ಹೇಗೋ ದಾರಿಯಲ್ಲಿನ ನೀರಿನ ಹರವುಗಳನ್ನು ದಾಟಿ ಬಟ್ಟೆಗಳನ್ನು ತೊಯ್ಸಿಕೊಂಡು ಹಳ್ಳಿಯನ್ನು ಸೇರಿದ್ದಾಯಿತು. ಸ್ಕೂಲುಗಳನ್ನು ನೋಡಿದ ಮೇಲೆ ಜನಾರ್ದನಪುರವನ್ನು ಸೇರುವುದು ಹೇಗೆ ? ಪುನಃ ಫಜೀತಿಗೆ ಸಿಕ್ಕಿಕೊಳ್ಳ ಬೇಕಲ್ಲ. ಅದಕ್ಕೇನು ಪರಿಹಾರ ? ಎಂದು ಆಲೋಚಿಸಿದನು. ಮೇಷ್ಟರ ಸಹಾಯದಿಂದ ಹಿಂದಿರುಗುವುದಕ್ಕೆ ಬೇರೆ ದಾರಿಯನ್ನು ತಿಳಿದು ಕೊಳ್ಳುವುದೊ ಇಲ್ಲದಿದ್ದರೆ ಒಂದು ಗಾಡಿಯನ್ನು ಗೊತ್ತು ಮಾಕೊಂಡು ಬೈಸ್ಕಲ್ಲನ್ನು ಮೇಲೆ ಕಟ್ಟಿ, ತಾನು ಒಳಗೆ ಕುಳಿತು ಕ್ಷೇಮವಾಗಿ ಹಿಂದಿರುಗುವುದೋ- ಈ ಎರಡರಲ್ಲಿ ಏನನ್ನಾದರೂ ಮಾಡೋಣವೆಂದು ನಿರ್ಧರಿಸಿ ಕೊಂಡನು. ಹಳ್ಳಿಯನ್ನು ಪ್ರವೇಶಿಸಿ ಅದರ ಇಕ್ಕಟ್ಟಾದ ಕೊಳಕು ಓಣಿಗಳಲ್ಲಿ ಹೋಗುತ್ತಿದ್ದಾಗ ರಂಗಣ್ಣನಿಗೆ ಬಹಳ ಅಸಹ್ಯವಾಯಿತು. ಇತ್ತ ಅತ್ತ ಹೇಸಿಗೆ ; ಬಚ್ಚಲ ನೀರೆಲ್ಲ ದಾರಿಯಲ್ಲೇ ; ಮೂಳೆ ಬಿಟ್ಟು ಕೊಂಡು ನಿಂತಿದ್ದ ಕೆಲವು ರಾಸುಗಳು ; ತನ್ನನ್ನು ನೋಡಿ ಬಗುಳುತ್ತ ಓಡಿ ಹೋಗುತ್ತಿದ್ದ ನಾಯಿಗಳು ; ಸಗಣಿಯನ್ನು ಬೆರಣಿ ತಟ್ಟುತ್ತಿದ್ದ ಹೆಂಗಸರು ; ಕೆಲವು ಮನೆಗಳ ದಿಣ್ಣೆಗಳ ಮೇಲೆ ಕಂಬಳಿ ಹೊದ್ದು ಕೊಂಡು ಕೆಮ್ಮುತ್ತ ಉಗುಳುತ್ತ ಕುಳಿತಿದ್ದ ಮುದುಕರು, ಅವುಗಳನ್ನೆಲ್ಲ ನೋಡುತ್ತ ಒಂದಷ್ಟು ದೂರ ಹೋದಮೇಲೆ ಪಾಠಶಾಲೆ ಎಲ್ಲಿರುವುದೆಂಬುದನ್ನು ವಿಚಾರಿಸಲು ತೊಡಗಿದನು. ಪಕ್ಕದಲ್ಲಿ ಕೆಲವರು ಎಳೆಯ ಹುಡುಗರು ನಿಂತಿದ್ದರು. ‘ಇಲ್ಲಿ ಪಾಠ ಶಾಲೆ ಎಲ್ಲಿದೆ ? ತೋರಿಸುತ್ತೀಯಾ ?’ ಎಂದು ರಂಗಣ್ಣನು ಕೇಳಿದನು. ಉತ್ತರ ಹೇಳುವುದಕ್ಕೆ ಬದಲು ಆ ಹುಡುಗರು ಗಾಬರಿಯಾಗಿ ‘ಅಮ್ಮಾ!’ ಎಂದು ಅಳುತ್ತಾ ಓಡಿಹೋದರು ! ಇನ್ನು ಸ್ವಲ್ಪ ದೂರ ಹೋದಮೇಲೆ ಎದುರಿಗೆ ಬರುತ್ತಿದ್ದ ಮಧ್ಯ ವಯಸ್ಸಿನ ಹಳ್ಳಿಯವನನ್ನು ನೋಡಿ, ‘ಅಯ್ಯಾ ! ಇಲ್ಲಿ ಪಾಠ ಶಾಲೆ ಎಲ್ಲಿದೆ’ ಎಂದು ಕೇಳಿದನು.
– ‘ನಂಗೊತ್ತಿಲ್ಲ ಸೋಮಿ. ಅದೇನೈತೋ ಅದೇನಿಲ್ಲೋ ಈ ಊರಾಗೆ, ನಾನೀಯೂರವನಲ್ಲ’ ಎಂದು ಹೇಳುತ್ತ, ನಿಲ್ಲದೆ ಆ ಮನುಷ್ಯ ಹೊರಟೇ ಹೋದನು.

ರಂಗಣ್ಣ ಅಲ್ಲಿಯೇ ಸ್ವಲ್ಪ ನಿಂತು ಎದುರಿಗೆ ಬಂದ ಇಬ್ಬರು ಹಳ್ಳಿಯವರನ್ನು ನೋಡಿ, ‘ನೀವು ಈ ಹಳ್ಳಿಯವರೇನಪ್ಪ ?’ ಎಂದು ಕೇಳಿದನು.

‘ಹೌದು ಸೋಮಿ!‘ಇಲ್ಲಿ ಪಾಠಶಾಲೆ ಎಲ್ಲಿದೆ?’

ಅವರು ಬೆಪ್ಪಾಗಿ ನಿಂತು ರಂಗಣ್ಣನನ್ನು ನೋಡುತ್ತ, ‘ಪಾಟ ಶಾಲಾವ ? ಅದೇನ್ ಸೋಮಿ ಆಂಗಂದ್ರೆ?’ ಎಂದು ಕೇಳಿದರು!

‘ಸ್ಕೂಲ್ ! ಹುಡುಗರಿಗೆ ಪಾಠ ಹೇಳಿಕೊಡುವ ಶಾಲೆ ; ಪಾಠ ಶಾಲೆ’

‘ಓಹೋ ! ಇಸ್ಕೊಲಾ ? ಹೈಕ್ಳಮನೆ, ಲೇ ಏಳ್ಲಾ! ಎಲ್ಲೈತೋ ಇಸ್ಕೋಲು. ಸಾಹೇಬ್ರು ಕೇಳ್ತಾವ್ರೆ’ ಎಂದು ಒಬ್ಬನು ಮತ್ತೊಬ್ಬನಿಗೆ ಹೇಳಿದನು.

‘ಇಲ್ಲೇ ಎಲ್ಲೋ ಐತೆ ಸೋಮಿ’ ಎಂದು ಮತ್ತೊಬ್ಬನು ಹೇಳುತ್ತಾ ಬೆನ್ನು ನೋಟವನ್ನು ನಾಲ್ಕೂ ದಿಕ್ಕಿಗೂ ಬೀರುತ್ತಾ ನಿಂತೇ ಇದ್ದನು. ಅಷ್ಟು ಹೊತ್ತಿಗೆ ಕೆಲವರು ದೊಡ್ಡ ಹುಡುಗರು ಆ ಕಡೆ ಬರುತ್ತಿದ್ದರು. ಅವರನ್ನು ದೃಷ್ಟಿಸಿ, ‘ತಾಳಿ ಸೋಮಿ ಆ ಹೈಕ್ಳನ್ನ ಕೇಳಾಣ. ಆವರ್ಗೆ ಗೊತ್ತೋ ಏನೋ? ಎಂದು ಒಬ್ಬ ಗೌಡನು ಹೇಳಿದನು. ಆ ಹುಡುಗರು ಸ್ಕೂಲಿನ ವಿದ್ಯಾರ್ಥಿಗಳಂತೆ ಕಂಡು ಬಂದದ್ದರಿಂದ ರಂಗಣ್ಣನೇ ಅವರನ್ನು ‘ಇಲ್ಲಿ ಸ್ಕೂಲು ಎಲ್ಲಿದೆ ? ಎಂದು ಕೇಳಿದನು. ಅವರು ‘ತೋರ್ಸ್‍ತ್ತೇವೆ ಬನ್ನಿ ಸಾರ್’ ಎಂದು ಹೇಳಿ ಕರೆದುಕೊಂಡು ಹೊರಟರು. ಆ ಇಬ್ಬರು ಹಳ್ಳಿಯವರು, ‘ಎಂಗಾನ ಆಗಲಿ, ಇಸ್ಕೊಲ್ ತೋರ್ಸೋರು ಸಿಕ್ಕರಲ್ಲ ನಮ್ಮಳ್ಳೀಗೆ’ ಎಂದು ಆಡಿಕೊಳ್ಳುತ್ತ ಮುಂದಕ್ಕೆ ಹೊರಟರು.

ಒಂದು ಫರ್ಲಾಂಗು ದೂರ ಎರಡು ಮೂರು ಡೊಂಕು ಓಣಿಗಳನ್ನು ದಾಟಿದ ಮೇಲೆ ಹಳ್ಳಿಯ ಆಚೆಯ ಕೊನೆಯಲ್ಲಿ ಹಳ್ಳಿ ಹೆಂಚು ಹೊದಿಸಿದ್ದ ಒಂದು ಸಣ್ಣ ಕಟ್ಟಡ ಸಿಕ್ಕಿತು. ರಂಗಣ್ಣನಿಗೆ ಬಂದ ಕೆಲಸ ಸದ್ಯ; ನೆರವೇರಿತಲ್ಲಾ ಎಂದು ಸಂತೋಷವಾಯಿತು. ಮುಂದುಗಡೆ ಗೋಡೆಗೆ ಬೈಸ್ಕಲ್ಲನ್ನು ಒರಗಿಸಿಟ್ಟು ಒಳಕ್ಕೆ ಹೋದನು. ಅಲ್ಲಿ ಎಂಟು ಹತ್ತು ಹುಡುಗರು ಎದ್ದು ನಿಂತು ಕೊಂಡು, ‘ನಮಸ್ಕಾರಾ ಸಾರ್’ ಎಂದು ಕಿರಿಚಿದರು. ರಂಗಣ್ಣ ಅವರಿಗೆ ನಮಸ್ಕಾರ ಮಾಡಿದನು. ಮುಂದೆ ನೋಡಿದರೆ ಮೇಷ್ಟರು ಕಣ್ಣಿಗೆ ಬೀಳಲಿಲ್ಲ. ಕುರ್ಚಿ ಖಾಲಿಯಾಗಿತ್ತು.

‘ಈ ದಿನ ಮೇಷ್ಟರು ಬರಲಿಲ್ಲವೇ?’
‘ಇಲ್ಲಾ ಸಾರ್, ರಜಾದ ಮೇಲವ್ರೆ’
‘ನೆನ್ನೆ ಬಂದಿದ್ದರೇನು?’
‘ಇಲ್ಲಾ ಸಾರ್. ಎರಡು ದಿವ್ಸ ಬರೋದಿಲ್ಲ. ಕೆಲಸ ಐತೆ-ಎಂದು ಹೇಳವ್ರೆ?’
‘ಮತ್ತೆ ಸ್ಕೂಲ್ ಬಾಗಿಲು ತೆರೆದಿದೆಯಲ್ಲ ? ಬೀಗ ಯಾರು ತೆಗೆದರು ?’
‘ಬೀಗದ ಕೈ ನಮ್ತಾವ ಕೊಟ್ಟು ಹೋಗ್ತಾರೆ ಸಾರ್, ನಾವೇ ಬೀಗ ತೆಗೆದು ಒಳಗೆಲ್ಲ ಗುಡಿಸಿ ಚೊಕ್ಕ ಮಾಡ್ತೇವೆ. ಮೇಷ್ಟ್ರು ಆಮೇಲೆ ಬಂದು ಪಾಠ ಮಾಡ್ತಾರೆ.’

‘ಮೇಷ್ಟು ಎಲ್ಲಿ ವಾಸಮಾಡುತ್ತಾರೆ?’
‘ನಾಗೇನಳ್ಳಿ ಸಾರ್. ಇಲ್ಲಿಗೆ ಎರಡು ಮೈಲಿ, ಮೇಷ್ಟ್ರು ಬೈಸ್ಕಲ್ ಮಡಕ್ಕೊಂಡವ್ರೆ?

ಮುಂದೆ ರಂಗಣ್ಣನಿಗೆ ಏನು ಮಾಡಬೇಕೆಂಬುದು ಹೊಳೆಯಲಿಲ್ಲ. ಐದು ನಿಮಿಷಗಳ ಕಾಲ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಂಡನು. ಮೇಜಿಗೆ ಮತ್ತು ಪೆಟ್ಟಿಗೆಗೆ ಬೀಗಗಳು ಹಾಕಿದ್ದುವು. ಸ್ಕೂಲಿನ ದಾಖಲೆಗಳೆಲ್ಲ ಒಳಗಿದ್ದುವು. ರಂಗಣ್ಣ ಸಪ್ಪೆ ಮೋರೆ ಮಾಡಿಕೊಂಡು ಚಿಂತಿಸುತ್ತ ಕುಳಿತಿದ್ದನು. ಅವನಿಗೆ ಮುಂದಿನ ಹಳ್ಳಿಗಳಿಗೆ ಹೋಗಬೇಕೆಂಬ ಆಶೆ ಅಳಿದು ಹೋಯಿತು. ಜನಾರ್ದನಪುರಕ್ಕೆ ಹಿಂದಿರುಗಿದರೆ ಸಾಕಪ್ಪ ಎಂದಾಯಿತು. ಆದರೆ ಈಗ ಜನಾರ್ದನಪುರಕ್ಕೆ ಹಿಂತಿರುಗುವುದು ಹೇಗೆ ? ಎಂದು ದೊಡ್ಡ ಯೋಚನೆ ಹಿಡಿಯಿತು. ಬಂದ ದಾರಿ ಹಿಡಿದು ಕೊಂಡು ಹೋಗುವುದೇ ಹೊರತು ಬೇರೆ ಉವಾಯ ಹೊಳೆಯಲಿಲ್ಲ. ನಿಟ್ಟುಸಿರು ಬಿಟ್ಟು ಕೊಂಡು ಎದ್ದನು. ಹೊರಕ್ಕೆ ಬಂದು ಬೈಸ್ಕಲ್ ತಳ್ಳಿ ಕೊಂಡು ಹೊರಟನು. ಅವನ ಅದೃಷ್ಟಕ್ಕೆ ಕೆರೆಯ ಹತ್ತಿರ ಒಂದು ಬೋಳು ಎತ್ತಿನಗಾಡಿ ಜನಾರ್ದನಪುರದ ಕಡೆಗೆ ನಿಧಾನವಾಗಿ ಹೋಗುತ್ತಾ ಇತ್ತು. ಗಾಡಿಯವನನ್ನು ಸ್ವಲ್ಪ ಮಾತನಾಡಿಸಿ ನೋಡಿದನು. ಅವನು ಒಳ್ಳೆಯ ಮನುಷ್ಯ, ‘ನಾನು ದಾಟಸ್ತೇನೆ ಬನ್ನಿ ಸೋಮಿ’ ಎಂದು ಹೇಳಿ ಗಾಡಿ ನಿಲ್ಲಿಸಿದನು. ತಾನೇ ಇಳಿದು ಬಂದು ಬೈಸ್ಕಲ್ಲನ್ನು ಎತ್ತಿ ಒಳಗಿಟ್ಟು, ‘ಏರ್ಕೊಳ್ಳಿ ಸೋಮಿ’ ಎಂದನು.

ರಂಗಣ್ಣ ಎಂದೂ ಬೋಳ ಗಾಡಿಯಲ್ಲಿ ಪ್ರಯಾಣ ಮಾಡಿದವನೇ ಅಲ್ಲ. ಆದರೆ ಆಗಿನ ಸಂದರ್ಭದಲ್ಲಿ ಅದು ಪುಷ್ಪಕವಿಮಾನದಂತೆ ಮನೋಹರವಾಗಿ ಕಂಡಿತು. ಕೋಡಿಯ ನೀರನ್ನು ದಾಟಿದ್ದಾಯಿತು. ಸಮ ರಸ್ತೆಗೆ ಬಂದಮೇಲೆ ಗಾಡಿಯಿಂದ ರಂಗಣ್ಣ ಇಳಿದನು. ಗಾಡಿಯವನು ‘ಮುಂದೆ ಎರಡು ಕಾಲುವೆ ಐತೆ ಸೋಮಿ, ಬರ್ತಾ ಎಂಗ್ ಬಂದ್ರೋ ಕಾಣೆ, ಗಾಡಿಯಲ್ಲೇ ಏರ್ಕೊಳ್ಳಿ, ನಿಮ್ಮ ಮನೇತಾವ ಬಿಟ್ ಬಿಡ್ತೀನಿ’ ಎಂದು ಹೇಳಿದ. ಆ ಸಲಹೆ ಹಿತವಾಗಿಯೇ ಕಂಡಿತು. ಪುನಃ ರಂಗಣ್ಣ ಗಾಡಿಯನ್ನು ಹತ್ತಿದನು. ಗಾಡಿಯವನೊಡನೆ ಮಾತುಕತೆ ಆಡುತ್ತಿದ್ದಾಗ ಒಬ್ಬರಿಗೊಬ್ಬರ ಪರಿಚಯ ಬೆಳೆಯಿತು.

‘ನೀವು ಇಸ್ಕೊಲ್ ಇನ್ಸ್‍ಪೆಕ್ಟ್ರಾ? ನಮ್ಮಳ್ಳಿಗೊಂದು ಇಸ್ಕೊಲ್ ಕೊಡಿ ಸೋಮಿ ! ಈ ಇಸ್ಕೋಲ್ ಮೇಷ್ಟ್ರೂನೂವೆ ನಮ್ಮ ನಾಗೇನಳ್ಳೀಲೆ ಅವ್ರೆ, ಅಲ್ಲೇ ಇಸ್ಕೊಲ್ ಕೊಟ್ರೆ ಅಲ್ಲೇ ಪಾಟ ಮಾಡೋಕೆ ಅವರ್ಗೂ ಅನ್ಕೂಲ.’

‘ಒಳ್ಳೆಯದಪ್ಪ, ಆಗಲಿ ನೋಡೋಣ. ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ನಿಮ್ಮ ಹಳ್ಳಿಯ ಸ್ಥಿತಿ ನೋಡಿದ ಮೇಲೆ ಏನಾದರೂ ಮಾಡೋಣ.’

‘ನಮ್ಮಳ್ಳಿ ದೊಡ್ಡದು ಸೋಮಿ ! ಬಾಳ ಮನೆಗಳಿವೆ. ನನ್ಗೆ ಲೆಕ್ಕ ಬರಾಕಿಲ್ಲ. ನೂರ ಮನೆ ಆದರೂ ಇರಬೋದೋ ಏನೋ, ಓದೋ ಹೈಕ್ಳು ಬಾಳ ಅವ್ರೆ.’

ಆಗಲಪ್ಪ. ನಾನು ಬಂದು ನೋಡುತ್ತೇನೆ. ನಿಮ್ಮ ಮಕ್ಕಳಿಗೆಲ್ಲ ವಿದ್ಯೆ ಹೇಳಿಕೊಡುವುದಕ್ಕೇನೆ ನಮ್ಮ ಇಲಾಖೆ ಇರುವುದು.

‘ನಿಮ್ಗ ಮಕ್ಕಳೆಷ್ಟು ಸೋಮಿ?’

‘ಇಬ್ಬರು ಗಂಡು, ಇಬ್ಬರು ಹೆಣ್ಣು, ನಾಲ್ಕು ಮಕ್ಕಳಿದ್ದಾರೆ.’
‘ಪುಣ್ಯವಂತರು ಸೋಮಿ! ಕೈ ತುಂಬ ಸಂಬಳ ಬರ್ತೈತೆ, ಮಕ್ಕಳು ಮರಿ ಅವ್ರೆ, ನಮ್ಕೇನೈತೆ ? ಒಪ್ಪೊತ್ತು ಹಿಟ್ಟು, ದೇವ್ರು ಅಂಗೇನೇ ನಡೆಸಿಕೊಂಡ್ ಬರ್ತಾನೆ.’

ಹೀಗೆಲ್ಲ ಮಾತುಗಳನ್ನಾಡುತ್ತ ನೀರಿನ ಹರವುಗಳನ್ನು ದಾಟಿದ ಮೇಲೆ ರಂಗಣ್ಣನಿಗೆ ಆ ಬೋಳ ಗಾಡಿಯಲ್ಲಿ ಊರೊಳಗೆ ಹೋಗುವುದಕ್ಕೆ ಮನಸ್ಸು ಒಪ್ಪಲಿಲ್ಲ. ಗಾಡಿಯಿಂದ ಇಳಿದು, ‘ಮುಂದಕ್ಕೆ ರಸ್ತೆ ಸರಿಯಾಗಿದೆ. ಬೈಸ್ಕೂಲ್ ತೆಗೆದು ಕೊಡು, ನಾನು ಹೋಗುತ್ತೇನೆ’ ಎಂದು ಹೇಳಿದನು. ಗಾಡಿಯವನು ಇಳಿದು ಬೈಸ್ಕಲ್ ತೆಗೆದು ಕೊಟ್ಟನು. ‘ನಿನ್ನ ಹೆಸರೇನಪ್ಪ?’ ಎಂದು ಕೇಳುತ್ತ ರಂಗಣ್ಣ ಒಳ ಜೇಬಿನಿಂದ ಎಂಟಾಣೆಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡನು.

‘ನನ್ನೆಸರು ಕರಿಹೈದ ಸೋಮಿ.’

ರಂಗಣ್ಣನು ಎಂಟಾಣೆಯನ್ನು ಕೊಡುವುದಕ್ಕೆ ಹೋದರೆ, ಕರಿಹೈದ ತೆಗೆದುಕೊಳ್ಳಲಿಲ್ಲ.

‘ಅಯ್ಯೋ ಸೋಮಿ ! ನಂಗೆ ದುಡ್ಡು ಗಿಡ್ಡು ಬೇಡ, ಇದೇನು ದೊಡ್ಡದು. ಗಾಡಿ ಜನಾರ್ದನಪುರಕ್ಕೆ ಬರ್ತಿತ್ತು. ನೀವೇನೋ ಅನಿವಾರ್ಯ ಆಗಿ ಬಂದ್ರಿ, ಸುಮ್ ಸುಮ್ಮೆ ಬಂದೀರಾ ? ಇದಕ್ಕೆಲ್ಲ ದುಡ್ಡು ತಕ್ಕೊಂಡ್ರೆ ದೇವರು ಒಳ್ಳೇದ್ ಮಾಡಾಕಿಲ್ಲ ಸೋಮಿ’ ಎಂದು ಹೇಳಿ ಬಿಟ್ಟನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಲೆ
Next post ಜೀವನ ರಸ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys