ಪ್ರಿಯ ಸಖಿ,
ಇತ್ತೀಚೆಗೆ ಆತ್ಮೀಯರೊಬ್ಬರಿಗೆ ಅಪಘಾತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಅವರನ್ನು ನೋಡಲು ಹೋದೆ. ಆಸ್ಪತ್ರೆಯ ಎಲ್ಲ ವಾರ್ಡುಗಳಲ್ಲೂ ವಿವಿಧ ರೋಗಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಾಲು ಕಾಣಿಸಿತು. ನನ್ನ ಪರಿಚಿತರು ಎಲ್ಲೆಂದು ಬಿಳಿ ಯೂನಿಫಾರಂ ಧರಿಸಿದ್ದವರೊಬ್ಬರನ್ನು ಕೇಳಿದರೆ, ಅವರು ಸ್ಥಳದಲ್ಲೇ ಸತ್ತರು ಅನ್ಸುತ್ತೆ ಎಂದು ಬಿಟ್ಟರು! ಇದನ್ನು ಕೇಳಿ ಜೀವ ಬಾಯಿಗೆ ಬಂದಾಯ್ತು. ಆತನ ಪಕ್ಕದಲ್ಲಿದ್ದವರು ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋಗಿ ವಿಚಾರಿಸಿ ಎಂದು ದಾರಿ ತೋರಿದರು. ಅಲ್ಲಿ ಬಂದು ನೋಡಿದರೆ……..  ಅದೊಂದು ಜೀವಂತ ನರಕ!

ಕೈ ಕತ್ತರಿಸಿದ್ದವರು, ಕಾಲು ಕತ್ತರಿಸಿದ್ದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿದವರು, …… ಇತ್ಯಾದಿ ಅಪಘಾತಕ್ಕೊಳಗಾದವರ ಸಾಲು ಮಂಚಗಳು. ಮೃತ್ಯುಲೋಕವನ್ನು ಹೊಕ್ಕು ಬಂದಂತಹಾ ಪ್ರೇತ ಕಳೆಯಾಡುವ ಮುಖಗಳು! ಮಂಚಗಳಲ್ಲೊಂದರಲ್ಲಿ ನನ್ನ ಆತ್ಮೀಯರು! ಆ ಎಲ್ಲ ನೋವಿನಿಂದ ಮುಲುಗುಟ್ಟುವ ಸದ್ದಿನಡಿಯಿಂದಲೇ ಮೂಡಿ ಬಂತೊಂದು ಕರುಳು-ಕಿವುಚುವ ಆರ್ತನಾದ! ಅಬ್ಬಾ! ಅದು ಎಷ್ಟು ಮಾರ್ಮಿಕವಾಗಿತ್ತೆಂದರೆ………. ಸಖಿ, ನಾನದನ್ನು ವರ್ಣಿಸಲಾರೆ. ನೋವನ್ನು ಬಣ್ಣಬಣ್ಣದ ಪದಗಳಿಂದ ವರ್ಣಿಸುತ್ತಾ ನೋವಿನನುಭವವನ್ನು ಸಣ್ಣಗಾಗಿಸಲಾರೆ! ಬಹುಶಃ ಅದನ್ನು ಯಾವ ಕವಿಯೂ ಕವಿತೆಯಾಗಿಸಲಾರ. ಯಾವ ಸಂಗೀತಗಾರನೂ ನೋವು ತುಂಬಿ ಹಾಡಲಾರ, ಯಾವ ಚಿತ್ರಗಾರನೂ ತನ್ನ ಚಿತ್ರ, ಶಿಲ್ಪದಲ್ಲಿ ಚಿತ್ರಿಸಲಾರ. ನಿಜಕ್ಕೂ ಆ ವೇದನೆಯನ್ನು ಯಾವ ಸಮರ್ಥ ನಟನೂ ಅಭಿನಯಿಸಿ ತೋರಿಸಲಾರ. ಆ ಕ್ಷಣದಲ್ಲಿ ಅವ್ಯಕ್ತ ಭಾವವೊಂದು ಮನವನ್ನು ಆವರಿಸಿ ಮಿಕ್ಕಿದ್ದೆಲ್ಲಾ ಮಿಥ್ಯ. ಆ ನೋವು ತುಂಬಿದ ಆರ್ತನಾದವೊಂದೇ ಸತ್ಯ ಎನಿಸಿಬಿಟ್ಟಿತು. ಅತ್ಯಂತ ಸಮರ್ಥ ಕಲಾವಿದ ಕೂಡ ಇದರ ಹತ್ತಿರಕ್ಕೆ ಹೋಗಬಲ್ಲ, ಆ ಭಾವನೆಯೇ ಆಗಲಾರ ಅದು ಕಲಾವಿದನ ಮಿತಿಯೂ ಹೌದು!

ಸಖಿ, ಹಾಗಿದ್ದರೆ ಇಂತಹ ಹೃದ್ಯಭಾವನೆಗಳನ್ನು ಹಿಡಿದಿಡಲು ಯಾವ ಸೃಜನಶೀಲ ಕಲೆಗೂ ಸಾಧ್ಯವಿಲ್ಲವೇ? ಗುರುಗಳೊಬ್ಬರು ಹೇಳುತ್ತಿದ್ದುದು ನೆನಪಾಗುತ್ತದೆ. ಇಲ್ಲಿ ಎಷ್ಟೊಂದು ಕಣ್ಣಿನಿಂದ ನೋಡಲಾಗುವುದಿಲ್ಲ. ಅದನ್ನು ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಪ್ರಿಯ ಸಖಿ, ಯಾವ ಮಾಧ್ಯಮದಲ್ಲೂ ಸಮರ್ಥವಾಗಿ ನಮ್ಮ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗದೇ ಸೋಲುತ್ತೇವೆ. ಹಾಗೆ ಸೋತರೂ ಸರಿಯೇ, ಮಾನವನ ಎಲ್ಲ ಭಾವನೆಗಳನ್ನೂ ಹೃದಯದಿಂದ ಅನುಭವಿಸಲೂ ಆಗದಂತೆ ನಾವು ಸೋಲುವುದು ಬೇಡ. ನಾವು ಮಾನವರೆನ್ನುವುದನ್ನು ಎಂದಿಗೂ ಮರೆಯದಿರೋಣ!
*****