ಎರಡಳೆ ದಾರವು ಬುಡದೊಳಗಿರುವಾಗ
ಹರವಿಕೊಂಡಿದೆ ಬಲೆಯು ಬಿಡಿಸದ ಗಂಟು
ಬಿಡಿಸಿಕೊಳ್ಳುವೆನೆಂದು ಹೆಣಗುವ ಮಾನವ
ತೊಡರಿಕೊಂಡಿಲ್ಲಿಯೆ ಕೊಳೆಯುವನು ಸಿಕ್ಕು

ಹುಟ್ಟಿ ಬಂದುದಕಾಗಿ ಹೊಟ್ಟೆ ಕೊಟ್ಟಿಹ ಶಿವನು
ಹುಟ್ಟಿದ ಸೂರ್ಯನು ಮುಳುಗುವವರೆಗೆ
ಅದನು ತುಂಬಿಸಲಿಕ್ಕೆ ಕಷ್ಟಗಳ ಪಡುವನು
ಮನೆ ಮಠ ವಸ್ತ್ರಾಭರಣವು ಮೇಲೆ

ತನ್ನಯ ವಂಶವು ಮುಂಬರಿಯಬೇಕೆಂದು
ಹೆಣ್ಣು ಗಂಡುಗಳೆಂಬ ಧ್ರುವಗಳ ಹೂಡಿ
ಬಲು ದೊಡ್ಡ ಬಲೆಯನ್ನೆ ನೇಯ್ದಿರುವ ನೋಡಿ
ಬೆರೆಯಲಿರುವುದರಲ್ಲಿ ತೀರೆರಡು ತಮ್ಮ

ಬಾಯೊಂದು ಉಣಲಿಕ್ಕೆ ಬೇರೊಂದು ವಂಶಕ್ಕೆ
ಈಯೆರಡ ಸುದ್ದಾಗಿ ಇಡಬೇಕು ಮುಖ್ಯ
ವೇದಶಾಸ್ತ್ರಾಗಮ ವಿಶ್ವವಿಜ್ಞಾನವ
ಓದಿಲ್ಲ ನಮಗಿಲ್ಲ ಸಂಪೂರ್ಣ ವಿದ್ಯೆ

ಲೌಕಿಕದೊಳಗೆ ಒಳಿತಾಗಿ ಬಾಳಲು
ಸಾಕೇಳು ಈ ಬಲೆಯ ಬಿಡಿಸುವ ವಿದ್ಯೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)