ರಾತ್ರಿಯು ದಿವಸವಾದರೆ……

ರಾತ್ರಿಯು ದಿವಸವಾದರೆ……

ಮೂಲ: ವಿ ಎಸ್ ಖಾಂಡೇಕರ

ವರಳಿಯಲ್ಲಿಯ ಸಮುದ್ರದ ದೃಶ್ಯ ಮತ್ತು ಅದರ ದಡದಲ್ಲಿಯೇ ನಿಂತ ಕಾಂಗ್ರೇಸ ನಗರದಲ್ಲಿ ನೆರೆದ ಜನಸಮುದ್ರದ ದೃಶ್ಯ ಇವೆರಡನ್ನೂ ನೋಡಿ ನನ್ನ ಮನಸ್ಸಿನಲ್ಲಿ ವಿಚಿತ್ರ ವಿಚಾರಗಳು ತಲೆದೋರಿದವು. ಸಮುದ್ರದಲ್ಲಿ ಮುತ್ತು ರತ್ನಗಳಿರುವಂತೆ ಶಂಖ ಸಿಂಪುಗಳೂ ಇರುವವು. ರಾಷ್ಟ್ರೀಯ ಸಭೆಯ ಅಧಿವೇಶನದ ನಿಮಿತ್ತವಾಗಿ ನೆರೆದ ಆ ಜನಸಮುದಾಯಲ್ಲಿ ಅನೇಕ ತರದ ಜನರೂ ಇದ್ದೇ ಇರುವರು. ಸಮುದ್ರದಲ್ಲಿ ಎಷ್ಟೋ ಜಾತಿಯ ಮೀನಗಳಿರುವಂತೆ ಆ ಜನಸಮುದ್ರದಲ್ಲಿ ಕೇವಲ ನನ್ನ ಗುರುತಿನ ಜನರ ವರ್ಗೀಕರಣ ಮಾಡಿದರೂ ಕೂಡ ಸುಖಾಭಿಲಾಷಿಗಳು, ಲಬ್ಧ ಪ್ರತಿಷ್ಟಿತರು, ಬೇಕಾದ ಕೆಲಸವನ್ನು ಮಾಡಬಲ್ಲವರು ಈ ತೆರದ ತರತರದ ಮೂರ್ತಿಗಳು ಅಲ್ಲಿ ಸಿಕ್ಕುವಂತಿತ್ತು!

ಆದರೆ ಈ ಸಂದಣಿಯಲ್ಲಿ ನನ್ನ ಶಾಲೆಯ ಗೆಳೆಯ ಮಾಧವ ದೇಸಾಯಿಯನ್ನು ದೂರದಿಂದ ನೋಡಿದ ಮಾತ್ರಕ್ಕೆ ನನಗೆ ಆಶ್ಚರ್ಯವಾಯಿತು. ವಿಮಾ ಕಂಪನಿಯ ಏಜಂಟ ರಾಷ್ಟ್ರೀಯ ಸಭೆಗೆ ಬರುವ! ಹಾಗಾದರೆ ಭಿಕ್ಷೆ ಬೇಡುವವನು ರಣಾಂಗಣಕ್ಕೇಕೆ ಹೋಗಬಾರದು? ಮತ್ತು ಕಮ್ಮಾರನು ಸಂಗೀತ ಪರಿಷತ್ತಿನ ಸಭಾ ಸದನೇಕೆ ಆಗಬಾರದು.?

ನಾವು ಒಬ್ಬರೊಬ್ಬರನ್ನು ನೋಡಿದೆವು. ಅವನು ಸಮೀಪಕ್ಕೆ ಬಂದೊಡನೆಯೇ ನಮಸ್ಕಾರ ಮಾಡಿ ನಸುನಕ್ಕ. ನಾನು ಚೇಷ್ಟೆಯ ಸ್ವರದಲ್ಲಿ ಅಂದೆ “ಏನು, ಮಾಧವರಾವ? ನಿಮ್ಮ ವ್ಯವಸಾಯಕ್ಕೇನೂ ಇದು ಅನುಕೂಲ ಕ್ಷೇತ್ರವಲ್ಲ!”

“ಅದೇಕೆ? ಸಾವಿರಾರು ಜನರು ಕೂಡಿರುವರಲ್ಲ ಇಲ್ಲಿ?”

“ಬತ್ತಲೆ ತಿರುಗಾಡುವ ಫಕೀರರ ದೇಶದಲ್ಲಿ ಜವಳೀ ವ್ಯಾಪಾರಿಗೆ ಸಿಗುವದು ದಿವಾಳಿಯೆ!”

ಮಾಧವನು ಸುಮ್ಮನೆ ನಕ್ಕನಷ್ಟೇ! ಇವನು ರಾಷ್ಟ್ರೀಯ ಸಭೆಯದೇ ವಿಮೆಯನ್ನು ಇಳಿಸಲಿಕ್ಕೆ ಬಂದಿರುವನೋ ಏನೋ ಎಂಬ ಸಂಶಯವು ಮನಸ್ಸಿನಲ್ಲಿ ಬಂದು ಹೋಯಿತು.
ಏನಾದರೊಂದು ಮಾತಾಡಬೇಕೆಂದು ನಾನಂದೆ “ನಿನ್ನಂಥವರಂತೂ ಬಹಿಷ್ಕಾರ ಹಾಕಲೇಬೇಕು ರಾಷ್ಟ್ರೀಯ ಸಭೆಯ ಮೇಲೆ”

“ಅದು ಯಾಕಪ್ಪ?”

“ಅದು ಸಾವಕಾಶವಾಗಿ ಸಮಾಜವಾದದ ಕಡೆಗೆ ಹೊರಟಿದೆಯಲ್ಲವೇ?”

“ಹೊರಡಲೊಲ್ಲದೇಕೆ!”

“ವಾಃ! ಈ ಸಮಾಜವಾದವೆಂದರೆ ನಿನ್ನ ಹೊಟ್ಟೆಯ ಮೇಲೆ ಕಾಲು! ತಮ್ಮ ಹಿಂದೆ ಹೆಂಡಿರು ಮಕ್ಕಳ ವಿಷಯದಲ್ಲಿ ಯಾರಾದರೂ ಕಾಳಜೀ ಮಾಡುವವರು ಇರುವರೆಂದು ಒಮ್ಮೆ ಜನಕ್ಕೆ ತಿಳಿಯಲಿ! ಅಲ್ಲಿಂದ ಯಾರು ಇಳಿಸುವರು ನಿನ್ನ ಈ ವಿಮೆಯನ್ನು? ಮತ್ತು….”

“ಇಳಿಸದಿದ್ದರೆ ಬಿಡಲೊಲ್ಲರೇಕೆ, ಸಮಾಜ ತೆಗೆದುಕೊಳ್ಳುವದು, ನಮ್ಮ ಸಮಾಚಾರವನ್ನು!”

ಆತನ ಉತ್ತರವು ಸಮರ್ಪಕವಾಗಿತ್ತು. ಆದರೆ “ಕಲ್ಲೆಣ್ಣೆ ಮಾರುವವನಿಗೆ ರಾತ್ರಿಯು ದಿವಸವಾದದ್ದು ಸೇರಬಹುದೇ? ಇಪ್ಪತ್ತುನಾಲ್ಕು ತಾಸು ದಿವಸವೇ ಆಗಿಬಿಟ್ಟರೆ, ದೀಪ ಯಾರಿಗೆ ಬೇಕಾಗಬಹುದು? ಮತ್ತು ಕಲ್ಲೆಣ್ಣೆ ಕೊಂಡುಕೊಳ್ಳುವವರಾದರೂ ಯಾರು?

“ಇಪ್ಪತ್ತು ನಾಲ್ಕು ತಾಸಿನ ದಿವಸವಾದರೆ, ಅಂಗಡಿಕಾರನ ಸ್ವತಃದ ಕಲ್ಲೆಣ್ಣೆಯ ಖರ್ಚಾದರೂ ಉಳಿದೇ ಬಿಟ್ಟಿತಲ್ಲ!”

ಸವಾರಿಯು ಸಾಮಾನ್ಯ ಗುರುವಿನ ಶಿಷ್ಯನಲ್ಲವೆಂದು ತಿಳಿದುಕೊಂಡು ಆತನನ್ನು ಮನಮುಟ್ಟಿ ಕೇಳಿದೆ “ನಿಜವಾಗಿಯೂ ಸಮಾಜವಾದಕ್ಕೆ ನಿನ್ನ ಒಪ್ಪಿಗೆ ಇದೆಯೇ?”

“ನಿಜವಾಗಿಯೂ ಇದೆ.”

“ನೀನು ಅದರ ವಿಷಯದಲ್ಲಿ ಏನು ಓದಿರುವಿ? ಮಾರ್ಕ್ಸ, ಲೆನಿನ್-”

“ಇವೆಲ್ಲ ಹೆಸರುಗಳನ್ನು ಕೇಳಿರುವೆ ಮಾತ್ರ! ವಿಮಾ ಕಂಪನಿಯ ತುಂಬಿದ ಫಾರ್ಮು, ಮತ್ತು ಹೆಂಡತಿಯ ಪತ್ರ, ಇವೆರಡರ ಹೊರತಾಗಿ ನಾನು, ವಿಶೇಷವಾಗಿ ಏನೂ ಓದುತ್ತಿರುವದಿಲ್ಲ!”

ನಾನು ಆಶ್ಚರ್ಯದಿಂದ ಆತನ ಕಡೆಗೆ ನೋಡತೊಡಗಿದೆ.

ಅವನು ಹೇಳಿದ. ಇದರಲ್ಲೇನಿದೆ ಅಷ್ಟು ಆಶ್ಚರ್ಯಪಡುವಂತಹದು? ನೀನು ಗಾಂಧಿಯ ಚಳವಳಿಯಲ್ಲಿ ಸೇರಿಕೊಂಡು, ದೊಡ್ಡ ದೊಡ್ಡ ವ್ಯಾಖ್ಯಾನ ಹೇಳುವವನೆಂದು ಹೆಸರು ಪಡೆದುಕೊಂಡಿ, ಸಮಾಜವಾದದ ವಿಷಯದಲ್ಲಿ ಮಾತಾಡಹತ್ತಿದಿ-”

ನನ್ನ ವ್ಯಾಖ್ಯಾನಗಳನ್ನು ಓದಿಕೊಂಡೇ ಮಾಧವನು ಸಮಾಜವಾದಕ್ಕೆ ಒಪ್ಪಿಕೊಂಡಂತೆ ತೋರುತ್ತಿತ್ತು. ಅಲ್ಲಿ ಮತ್ತೆ ಯಾರೂ ಇರದಿದ್ದರೆ, ಆ ಕ್ಷಣಕ್ಕೆ ನನ್ನ ಬೆನ್ನು ನಾನೇ ಚಪ್ಪರಿಸಿಕೊಳ್ಳುತ್ತಿದ್ದೆ!

ಮಾಧವನು ಮುಂದೆ ಹೇಳಿದ. “ಪುಸ್ತಕಗಳು ಹತ್ತು ವರ್ಷಗಳಲ್ಲಿ ಕಲಿಸಬಹುದಾದ್ದನ್ನು ಒಂದೇ ಕ್ಷಣದಲ್ಲಿ ಕಲಿಸಿಬಿಡುವಂತಿದೆ. ಡಾಯರೆಕ್ಟ್ ಮೆಥಡ್ ಅದೆ ಅದು?

“ಎಂತಹದು ಅದು?”
“ಅನುಭವದ್ದು!”
“ಅನುಭವವೇ? ಯಾರದು ಅನುಭವ?”

ಆತನ ಕಂಪನಿಯಲ್ಲಿಯ ವರಿಷ್ಠರು ಆತನನ್ನು ಒಳ್ಳೆ ರೀತಿಯಿಂದ ಯಾಗಿ ನಡೆಸಿಕೊಂಡಿರಲಿಕ್ಕಿಲ್ಲವೆಂದೆನಿಸಿತು ನನಗೆ!

“ಅದೊಂದು ಸತ್ಯ ಕಥೆಯೇ ಅದೆಯಪ್ಪ! “ಒಬ್ಬ ಪೋಲೀಸ, ಮತ್ತು ಅವನ ಸಾಹೇಬ” ಇದು ಆ ಕಥೆಯ ಹೆಸರು! ಛೇ, ಹೇಸರೇನೂ ಅಷ್ಟು ಚನ್ನಾಗಿ ಸಾಧಿಸಿಲ್ಲ ನೋಡು. ಕಥೆಯ ಹೆಸರು ಹಳೆಯ ಕಾಲದ್ದಾಗಿದೆ! ಇಲ್ಲದಿದ್ದರೆ ಈಗಿನ ಕಾಲದಲ್ಲಿ – ವನ್ ಪೋಲೀಸ ಮತ್ತು ತಸ್ಯಸಾಹೇಬ ಹೀಗೆ-”

“ಸಾಹೇಬನು ಆ ಪೋಲೀಸನಿಗೆ ದುಷ್ಟ ರೀತಿಯಿಂದ ನಡೆಸಿಕೊಂಡನೇನು?”

“ಉಹುಂ”

“ಅಲ್ಲಿಂದ?”

“ಹೇಳುವೆ ನಡಿ ಸಮುದ್ರದ ಕಡೆಗೆ, ನನ್ನ ಸಮಾಜವಾದದ ಮೂಲ-”
* * * *

ಅವರಿಬ್ಬರು ಒಂದೆಡೆಗೆ ಹೋಗಿ ಕುಳಿತರು. ಅದೇ ಸೂರ್ಯಾಸ್ತವಾಗಿತ್ತು. ನೀರಿನ ಮೇಲೆಯೂ, ಆಕಾಶದಲ್ಲಿಯೂ ಇಡೀ ವಾತಾವರಣದಲ್ಲಿಯೂ ಕೃಷ್ಣವರ್ಣದ ಛಾಯೆಯು ಕುಣಿಯಲಾರಂಭಿಸಹತ್ತಿತ್ತು. ಸಮುದ್ರದ ಸಪ್ಪಳವು ತಾಯಿಗೆ ಹಸಿದ ಮಗುವು ಕೊಡುವ ತೊಂದರೆಯಂತಿತ್ತು. ಬೆರಳುಗಳಿಂದ ಉಸುಕಿನಲ್ಲಿ ಆಟವಾಡುತ್ತಲೇ ನಾನು ಮಾಧವನ ಕಥೆಯನ್ನು ಕೇಳತೊಡಗಿದೆ.

“ನಮ್ಮ ಈ ವ್ಯವಸಾಯಕ್ಕೆ ಮೂಲಪುರುಷನೆಂದರೆ ನಾರದನ ಮಗ-”

“ಎಲೋ ಗೃಹಸ್ಥಾ, ನಾರದನು ಬ್ರಹ್ಮಚಾರಿಯಾಗಿದ್ದನೋ!…”

“ನಾರದನ ದತ್ತಕ ಮಗನೆಂದುಕೋ ಬೇಕಾದರೆ! ವಂಶವೃಕ್ಷದ ಬೇರು ಗಡ್ಡೆಗಳೆಲ್ಲವೂ ಹೀಗೆ ಇರುತ್ತವೆಂದೇ, ನಾವು ವಿಮಾ ಕಂಪನಿಯ ಏಜಂಟರು ಎಲ್ಲಿ ಬೇಕಾದಲ್ಲಿ ಹೋಗುವೆವು…”

“ಮತ್ತು ಈ ವಿಮೆಯ ವ್ಯವಸಾಯದ ಕೀರ್ತನವನ್ನು ಮಾಡುವೆವು. ಅಲ್ಲವೆ?” ಸ್ವಲ್ಪ ನಕ್ಕು ಮಾಧವ ಮುಂದಕ್ಕೆ ಸಾಗಿದ. ” ಹೀಗೆಯೇ ತಿರುಗಾಡುತ್ತ ಒಂದು ದಿವಸ ಒಂದು ಜಿಲ್ಲಾ ಪೊಲೀಸ ಕಚೇರಿಯಲ್ಲಿ ಹೋದೆ. ಹೋದದ್ದಕ್ಕೆ ಸಾರ್ಥಕವಾಗಿ ಎರಡು ಬೇಟೆ ಸಿಕ್ಕೇ ಬಿಟ್ಟವು. ಮೊದಲನೇ ಬೇಟೆ ಒಬ್ಬ ಪೋಲೀಸನದು, ಎರಡನೆಯದು ಆ ಪೋಲೀಸನ ಸರ್ವಶ್ರೇಷ್ಟ ವರಿಷ್ಠನದು!

“ಕೆಳಗಿನ ಅಂತಸ್ತಿನಿಂದ ಒಮ್ಮೆಲೆ ಉಪ್ಪರಿಗೆಗೇ ಹಾರಿದಿ ಎನ್ನ ಬೇಕು!”

“ಆ ಪೋಲೀಸನ ಮನವಲಿಸಬೇಕಾದರೆ ನನಗೆ ಸಾಕು ಸಾಕಾಗಿ ಹೋಯಿತು. ಅವನ ಹೆಂಡತಿಗೆ ಉಂಟಾದ ಜ್ವರದ ಉಪಯೋಗವನ್ನು ಆಗ್ಗೆ ಒಳ್ಳೆ ಚನ್ನಾಗಿ ಮಾಡಿಕೊಂಡು ಬಿಟ್ಟೆ. “ಎಲೋ ಇಂಥ ಸದೃಢಳಾದ ಸಶಕ್ತಳಾದ ನಿನ್ನ ಹೆಂಡತಿ, ಬೇನೆಬಿದ್ದಳೋ ಇಲ್ಲವೋ? ಅಂದ ಮೇಲೆ ನಿನ್ನದಾದರೂ ಏನು ನಿಯಮ?” ಇಂಥ ಎಷ್ಟೋ ಪ್ರಶ್ನೆಗಳೊಂದಿಗೆ ನಾನು ಅವನ ಮೇಲೆ ಸಾಗಿ ಹೋದೆ, ಕಡೆಗೆ ಬಡತನದಿಂದ ಗಟ್ಟಿಯಾಗಿದ್ದ ಆತನ ಮನಸ್ಸಿನ ಪಡದೆಗೆ ಸಾವಕಾಶವಾಗಿ ಛಿದ್ರಗಳು ಬೀಳ ತೊಡಗಿದವು. ಕೊನೆಗೆ, ಪಾಪ! ಐದು ನೂರು ರೂಪಾಯಿಯ ವಿಮೆ ಇಳಿಸಲಿಕ್ಕೆ ಒಪ್ಪಿದ.”

“ಆ ಸಾಹೇಬ ಎಷ್ಟರದು ಇಳಿಸಿದ?”

“ಐದು ಸಾವಿರದ್ದು! ಆತನಿಗೇನೂ ಬಹಳ ಹೇಳಬೇಕಾಗಲಿಲ್ಲ. ನನ್ನ ಕೂಡ ಮಾತಾಡುವ ಮುಂದೆ ಮಾತ್ರ ಸಾಹೇಬರಿಗೆ ಬಹಳ ಶ್ರಮವಾಗುತ್ತಿದ್ದಂತೆ ತೋರುತ್ತಿತು. ನಡುನಡುವೆ ಕೆಮ್ಮೂ ಬರುತ್ತಿತ್ತು. ನಾನು ಮನಸ್ಸಿನಲ್ಲಿಯೇ ಅಂದುಕೊಂಡೆ – ಈ ಅಮಲದಾರನಿಗೆ ಆ ಪೋಲೀಸನಿಗಿಂತ ಹೆಚ್ಚು ಪಗಾರ ದೊರೆಯುವದೆಂದು ನಾನಿಷ್ಟು ಚಡಪಡಿಸುವದು? ಎಷ್ಟು ಕಷ್ಟ ಸಹಿಸುತ್ತಿರಬೇಕು ಈ ಗೃಹಸ್ಥ. ಖೂನಿ, ದರೋಡೆ, ರಾಜಕೀಯ ಚಳವಳಿ-ಒಂದಲ್ಲ ಎರಡಲ್ಲ ಸಾವಿರಾರು ಗೊಂದಲ! ಆತನ ಮುಖಚರ್ಯೆಯ ಮೇಲಿಂದ ಆತನಿಗೆ ಬಹಳ ಜಾಗರಣೆಯಾಗಿರಲಿಕ್ಕೆ ಬೇಕೆಂದು ಕಂಡು ಬರುತ್ತಿತ್ತು! ನಾನು “ಇದೊಳ್ಳೆ ಸಮಾಜವಾದ! ಜಾಗರಣೆಯು ವ್ಯಸನಗಳ ಮೂಲಕವಾದರೂ ಸಂಭವಿಸುವದುಂಟು” ಎಂದುಕೊಂಡೆ.

ಆದರೆ ಮಾಧವನ ಲಕ್ಷವು ನನ್ನ ಕಡೆಗಿರಲಿಲ್ಲ. ಅವನು ಹಾಗೆಯೇ ನೇರವಾಗಿ ಹೇಳುತ್ತಲೇ ಇದ್ದ. ಆ ವರಿಷ್ಟನ ಸವಾರಿಯು ಸುಮ್ಮನೆ ಹೆಸರಿಗೆ ಕಚೇರಿಗೆ ಬಂದಿತ್ತು. ಅತ್ತಿತ್ತ ಸ್ವಲ್ಪ ತಿರುಗಾಡಿ ನೋಡಿ ನಾನು ಅಲ್ಲಿರುವಾಗಲೇ ಸಾಹೇಬರು ಮನೆಯ ಕಡೆಗೆ ಹೋಗಿ ಬಿಟ್ಟರು.”

“ಇತ್ತ ಮನೆಯಲ್ಲಿ ಹೆಂಡತಿ ಬೇನೆಯಿಂದ ನರಳುತ್ತ ಬಿದ್ದಿದ್ದರೂ ಕೂಡ ಆ ಪೋಲೀಸನಿಗೆ ಮನೆಗೆ ಹೋಗಲಿಕ್ಕೆ ಸಿಗಲಿಲ್ಲ!”

“ನಿನ್ನ ಈ ಸಮಾಜವಾದದ ಮೂಲವು ನದಿಯ ಮೂಲಕ್ಕಿಂತಲೂ ಸೂಕ್ಷ್ಮವಾಗಿದ್ದಂತೆ ತೋರುತ್ತದೆ.”

“ಒಂದು ಸ್ವಲ್ಪ ನಾನು ಹೇಳುವದನ್ನಾದರೂ ಕೇಳುವಿಯೋ ಇಲ್ಲವೋ? ಆ ಮೇಲೆ ಬಂದಿತು ಡಾಕ್ಟರ ಪರೀಕ್ಷೆಯ ಪ್ರಶ್ನೆ. ಡಾಕ್ಟರನೇ ಮನೆಗೆ ಬಂದು ಹೋಗಬೇಕೆಂದು ಅಮಲದಾರರು ಚೀಟಿ ಕಳುಹಿದರು. ಸಾಹೇಬರ ಕೋಣೆಯೊಳಗಿನ ವಸ್ತುಗಳ ಮೇಲಿಂದ ಅಲ್ಲಿ ಯಾರಾದರೂ ಬೇನೆಯವರು ಇರಬೇಕೆಂದು ತಿಳಿಯುವಂತಿತ್ತು. ಅಲ್ಲಿಯ ಬಿಸಿ ನೀರಿನ ಚೀಲ, ತಟ್ಟೆಯಲ್ಲಿಯ ಮೋಸಂಬಿ ಹಣ್ಣುಗಳು – ತಪಾಸಣಿಯ ಕಾಲದಲ್ಲಿ ನಾನು ಹೊರಗೇ ಕುಳಿತಿದ್ದೆ. ಡಾಕ್ಟರರು ಹೊರಗೆ ಬಂದು ಹೇಳಿದರು “ಏನೂ ಅಡ್ಡಿಯಿಲ್ಲ. ಎಲ್ಲವೂ ಚನ್ನಾಗಿದೆ. ಆ ಪೋಲೀಸ ಸಿಪಾಯಿಯನ್ನಾದರೂ ಇಲ್ಲಿಗೆ ಕರಿಸಿರುವಿರಲ್ಲವೆ?”

ಆತನಲ್ಲಿ ಏನು ದೋಷ ಸಿಗಬೇಕಾಗಿತ್ತು? ನನಗೆ ಅಂಜಿಕೆಯಿತ್ತು. ಅಮಲ್ದಾರರ ವಿಷಯದಲ್ಲಿಯೇ. ಆದರೆ ಡಾಕ್ಟರರು ಆ ಸಿಪಾಯಿಯ ಕಣ್ಣುಗಳನ್ನು ನೋಡಿ ಕಣ್ಣುಗಳ ಸುತ್ತಲೂ ಹೀಗೇಕೆ ಕರ್ರಗಾಗಿದೆ? ನಿನ್ನ ಮೈಯ್ಯಲ್ಲಿ ರಕ್ತ ಕಡಿಮೆಯಾದಂತೆ ಕಾಣಿಸುತ್ತದೆ?” ಎಂದು ಕೇಳಿದರು.

ಅದು ಹೆಂಡತಿಯ ಬೇನೆಯ ಮೂಲಕ ದಿನಾಲು ಮಾಡಬೇಕಾದ ಜಾಗರಣೆಯ ಪರಿಣಾಮವಾಗಿತ್ತೆಂಬುದು ಸ್ಪಷ್ಟವಿತ್ತು. ಅದರಂತೆ ಅವರಿಗೆ ಹೇಳಿ ಬಿಟ್ಟೆ. ಆಗ್ಗೆ ಡಾಕ್ಟರರು, ಅಂದರು “ಕಂಪನಿಯ ಹಿತವನ್ನು ಚನ್ನಾಗಿಯೇ ಬಯಸುವಿರಲ್ಲ. ಇಲ್ಲಿ ನೋಡಿರಿ ಈತನ ಹಲ್ಲುಗಳನ್ನು! ಎಲ್ಲವೂ ಹುಳತು ಹೋಗಿವೆ. ಪಾಯೋರಿಯಾ ಆದರೂ – ಪಾಯೋರಿಯಾ ಅಂದರಂತೂ ಎಲ್ಲ ರೋಗಿಗಳಿಗೆ ಮೂಲ. ಅಗದೀ ಇತ್ತೀಚಿನ ಶೋಧವು ಇದು! ವೇಳೆ ಬಂದರೆ ಸಂಧಿವಾತವೂ ಆಗಬಹುದು; ಅರ್ಧಾಂಗವಾಯುವಾದರೂ ಆಗಬಹುದು… ”

ಪಾಯೋರಿಯಾದಿಂದ ಪ್ಲೇಗವಾದರೂ ಆಗಬಹುದೆಂದು ಹೇಳುವದು ಡಾಕ್ಟರರ ವಿಚಾರವಿದ್ದಿತೋ, ಏನೊ? ಯಾರು ಬಲ್ಲರು? ಪಾಪ, ಆ ಬಡ ಪೋಲೀಸನು ಮಾತ್ರ ಆ ಡಾಕ್ಟರನ ಶೋಧ ಕೇಳಿ ಗಾಬರಿಯಾದ. ಅಷ್ಟರಲ್ಲಿಯೇ ಡಾಕ್ಟರರು ಆತನ ನಾಡೀಪರೀಕ್ಷೆ ಮಾಡುತ್ತ “ನಾಡಿಯಾದರೂ ಸ್ವಲ್ಪ ವೇಗವಾಗಿಯೂ ನಡಿಯುವದು, ಏನೋ? ನಿನಗೆ ಮೇಲಿಂದಮೇಲೆ ಜ್ವರ ಗಿರ ಬರುತ್ತವೆಯೋ ಏನು?”

ಡಾಕ್ಟರನ ವಿಷಯದಲ್ಲಿ ನನಗೆ ಮನಸ್ವಿಯಾಗಿ ಸಿಟ್ಟು ಬಂದಿತು. ಆ ಬಡ ಪೋಲೀಸನ ಪೂರ್ವ ಜನ್ಮದ ಶತ್ರುವಾಗಿದ್ದನೋ ಏನೋ ಅವ! ಕಡೆಗೆ ಡಾಕ್ಟರ ನನ್ನ ಕಡೆಗೆ ತಿರುಗಿ ಹೇಳಿದ- “ಕೇವಲ ನಿಮ್ಮ ಸಲು ವಾಗಿ ಪಾಸು ಮಾಡಿದ್ದೇನೆ. ಇಲ್ಲದಿದ್ದರೆ ಈ ಕೇಸು-”

ಕಥೆ ಮುಗಿಯಿತೆಂದು ತಿಳಿದು ನಾನಂದೆ “ಅಮಲ್ದಾರರು ಒಂದೆರಡು ನೋಟುಗಳಿಂದ ಡಾಕ್ಟರನ ಕೈ ಬೆಚ್ಚಗೆ ಮಾಡಿರಬೇಕಷ್ಟೆ. ಚಾರು ದತ್ತನಿಗೆ ಬಿದ್ದ ಪ್ರಶ್ನೆ ಅಷ್ಟೇನು ಸರಳವಾದದ್ದಲ್ಲ. ಮರಣಲೇಸೋ, ದಾರಿದ್ರ್ಯ ಲೇಸೊ?”

“ಕಥೆ ಮುಗಿಯುವ ಪೂರ್ವದಲ್ಲಿಯೇ ಹೀಗೆ ತಾತ್ಪರ್ಯ ಹೇಳ ಬೇಡ. ಲಘು ಕಥೆಯ ತತ್ವಕ್ಕೆ ಅದು ಸರಿಯಾಗುವದಿಲ್ಲ!

ನಾನು ನಗುನಗುತ್ತೆ ಕೇಳಹತ್ತಿದೆ. ಆ ನಸುಗತ್ತಲೆಯಲ್ಲಿ ತೆರೆಗಳ ಅಸ್ಪಷ್ಟ ಸಪ್ಪಳವು ಇಡೀ ಪ್ರಪಂಚದಲ್ಲಿಯ ಬಡಬಗ್ಗರ ಆಕ್ರಂದನದ ಪ್ರತಿ ಧ್ವನಿಯಂತೆ ದೂರಿನಿಂದ ಕೇಳಬರುತ್ತಿತ್ತು!

ಮಾಧವನು ಹೇಳತೊಡಗಿದ- ಮುಂದೆ ಮತ್ತೆ ಎರಡು ಮೂರು ವಾರಗಳ ನಂತರ ಮತ್ತೇನಾದರೂ ಗಿರಾಕಿ ಸಿಕ್ಕರೆ ನೋಡಬೇಕೆಂದು ಆ ಊರಿಗೆ ಹೋದಾಗ ಸಹಜ ಆ ಪೋಲೀಸ ಕಚೇರಿಯ ಕಡೆಗೆ ಹೋದೆ.

ಅಲ್ಲಿ ಪೋಲೀಸನೂ ಇಲ್ಲ. ಅಮಲ್ದಾರರೂ ಇಲ್ಲ. ಅವರಲ್ಲಿ ವಿಷಯದ ವಿಚಾರಿಸಲಾಗಿ ಸಾಹೇಬರು ಇತ್ತೀಚೆಗೆ ಕ್ಷಣಮಾತ್ರ ಕಚೇರಿಗೆ ಬಂದು ಹೋಗುತ್ತಿರುವರೆಂಬುದನ್ನು ಕೇಳಿ ನನ್ನ ಮನಸ್ಸಿನಲ್ಲಿ ಯಾವದೋ ಒಂದು ಸಂಶಯವು ಸುಳಿದುಹೋಯಿತು, ಪೋಲೀಸನಂತೂ ಬೇನೆ ಬಿದ್ದಿರುವನೆಂದು ತಿಳಿದು ಬಂದಿತು.

ನನಗೆ ಆಶ್ಚರ್ಯವಾಯಿತು. ನಾನು ಕೇಳಿದೆ “ಏನಾಗಿದೆ ಅವನಿಗೆ?!

“ಆಗುವದೇನು? ಆತನ ಹೆಂಡತಿ ಬೇನೆ ಬಿದ್ದಿರುವಳಲ್ಲ.”

“ಹೀಗೇನು? ಹಾಗಾದರೆ ಅವನು ಹೋದ ತಿಂಗಳೆಲ್ಲ ರಜೆಯ ಮೇಲೆಯೇ ಇದ್ದನೆನ್ನ ಬಾರದೇ?”

“ಕೇವಲ ರಜೆಯ ಮೇಲೆಯೇ ಯಾಕೆ? ‘ಬೇನೆಯ ರಜೆಯ ಮೇಲೆ ಇದ್ದಾನೆ!’

“ಅಂದರೆ?”

“ಇಷ್ಟು ದಿವಸಗಳವರೆಗೆ ಸಿಪಾಯಿಗೆ ಸಾದಾ ರಜೆಯನ್ನು ಕೊಡುವವರಾರು? ಕಡೆಗೆ ಎಲ್ಲಿಂದಲೋ ಒಂದು ಡಾಕ್ಟರ ಸರ್ಟಿಫಿಕೇಟು ಸಂಪಾದಿಸಿ ರಜೆ ಪಡೆದುಕೊಂಡ! ಮೊದಲಾದರೂ ಅವನು ಹೀಗೆಯೇ ರಜೆ ತೆಗೆದುಕೊಳ್ಳುತ್ತಿದ್ದ!”

“ನಾನು ಮತ್ತೆ ಪರವೂರಿಗೆ ಹೋದೆ. ಸುಮಾರು ಎರಡು ತಿಂಗಳು ಗಳವರೆಗೂ ನನಗೆ ತಿರುಗಿ ಬರುವದಾಗಲಿಲ್ಲ. ತಿರುಗಿ ಬಂದ ಮೇಲೆ ಎರಡೂ ಕುಳಗಳು ‘ನಿಕಾಲ’ ಆದವೆಂದು ತಿಳಿದು ಬಂದಿತು”

‘ಆ ಪೋಲೀಸ ಯಾತರಿಂದ ತೀರಿದ?’

“ಹೆಂಡತಿಯ ಟಾಯಫಾಯಿಡ್ ಅಂಟಿಕೊಂಡಿರಬೇಕು ಆತನಿಗೆ. ತೊಂಭತ್ತೊಂದು ದಿವಸ ಜ್ವರ ಬಂದರೂ ಅವಳು ಬದುಕಿದಳು. ಅವನಿಗೆ ಮಾತ್ರ ೮-೧ಂ ದಿವಸಗಳಲ್ಲಿಯೇ ಅಪ್ಪಣೆಯಾಯಿತು.”

“ಮತ್ತು ಅಮಲ್ದಾರರು ಯಾವ ದೈವದುರ್ವಿಪಾಕದಿಂದ ದಿವಂಗತರಾದರೆನ್ನ ಬೇಕು?”

“ಮೆನೆಂಜಾಯಿಟಸ್‍ನಿಂದ” ಎಂದು ಕಚೇರಿಯ ರಿಕಾರ್ಡಿನಲ್ಲಿ ಬರೆಯಲ್ಪಟ್ಟಿದೆ. ಆದರೆ ನನಗನಿಸುವದು, ಅವರಿಗೆ ಕ್ಷಯ ವಿರಲೇಬೇಕೆಂದು!”

“ಮುಗಿಯಿತಲ್ಲವೆ ನಿನ್ನ ಕಥೆ? ಒಳ್ಳೇ ಎರಡು ಪಾತ್ರಗಳು ನೆಲಕ್ಕುರುಳಿದವಲ್ಲ! ಅಥವಾ ಆ ಡಾಕ್ಟರನೊಬ್ಬನನ್ನು ಹಾದೀ ಹಿಡಿಸಬೇಕೆನ್ನುವಿಯೋ?”

“ಇಬ್ಬರ ಹೆಂಡಂದರಿಗೂ ವಿಮೆಯ ಹಣವನ್ನು ದೊರಕಿಸಿಕೊಡುವ ವ್ಯವಸ್ಥೆಯನ್ನು ನಾನೇ ಮಾಡಿದೆ. ಸಾಹೇಬರ ಹಣವು ಮಾತ್ರ ಯಾವ ತಕರಾರು ಇಲ್ಲದೆ ಸಿಕ್ಕು ಹೋಯಿತು. ಆ ಪೋಲೀಸನ ಹೆಂಡತಿಗೆ ಮಾತ್ರ-”

“ಅವಳದೇನಾಯಿತು?

“ವಿಮೆಯನ್ನಿಳಿಸಿದ ದಿವಸದಿಂದ ಅವನು ಕಚೇರಿಯಲ್ಲಿ ಬೇನೆಯ ಮೂಲಕವೆಂದು ರಜೆ ತೆಗೆದುಕೊಂಡಿದ್ದ! ಇದಲ್ಲದೆ ಫಾರ್ಮಿನಲ್ಲಿ ಈ ಮೊದಲು ಎಂದೂ ಬೇನೆಯಿದ್ದಿಲ್ಲವೆಂದು ಬರೆದಿದ್ದರೂ ಕೂಡ, ಬೇನೆಯ ರಜೆಯನ್ನು ಅವನು ಎಷ್ಟೋ ಸಾರೆ ತೆಗೆದುಕೊಂಡಿದ್ದ. ಆ ರಜೆಯ ಸಲುವಾಗಿ ಡಾಕ್ಟರನ ಸರ್ಟಿಫಿಕೆಟನ್ನು ಅವನಾಗಿಯೇ ತಂದು ಕೊನೆ ಯವರೆಗೂ ಕಚೇರಿಯಲ್ಲಿ ಕೊಟ್ಟಿದ್ದ. ಅಮಲದಾರರದೇನು? ಹಾಜರಾಗಿ ಇದ್ದೇ ಇದ್ದರಲ್ಲ! ನಾನೂ ವಿಶ್ವಪ್ರಯತ್ನ ಮಾಡಿದೆ. ಆದರೆ ಆ ಘೋರವಾದ ಬೇನೆಯಿಂದ ಎದ್ದ, ಒಂದೆರಡು ಚಿಕ್ಕ ಮಕ್ಕಳುಳ್ಳ ಆ ಪೋಲೀಸನ ಹೆಂಡತಿಗೇನೂ ಹಣ ಸಿಗುವದು ಸಾಧ್ಯವಾಗಲಿಲ್ಲ! ಇದಕ್ಕೆ ಕಾರಣ?

ಆ ಆಂಧಃಕಾರದಲ್ಲಿ ಅಪಾರವಾದ ಸಾಗರದ ಸ್ಪಂದನದಂತೆ ಕೇಳ ಬರುತ್ತಿರುವ ತೆರೆಗಳ ಭೋರೆಂಬ ಸಪ್ಪಳವನ್ನು ಕೇಳುತ್ತ ನಾವಿಬ್ಬರೂ ಅಲ್ಲಿಯೇ ಎಷ್ಟೋ ವೇಳೆ ಕುಳಿತಿದ್ದೆವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆವರುಗಳ್ಳರು
Next post ಭಯೋತ್ಪಾದಕ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…