ಸಾಗರದಡಿಯ ಇಂದ್ರನಗರಿ ಹವಳ ದಿಬ್ಬಗಳು

ಸಾಗರದಡಿಯ ಇಂದ್ರನಗರಿ ಹವಳ ದಿಬ್ಬಗಳು

ಸಾಗರದ ಕ್ಷಾರ ನೀರಿನಲ್ಲಿ ಇಂದ್ರನಗರಿಯಂತೆ ಕಾಣಿಸುತ್ತವೆ ಹವಳ ದಿಬ್ಬಗಳು. ಇವನ್ನು ನಿರ್ಮಿಸಿದುದು ಪ್ರಾಣಿಲೋಕದ ಕ್ಷುಲ್ಲಕ ಜಲಚರ ಜೀವಿಗಳು.

ಪ್ರತಿಯೊಂದು ಹವಳವು ಸಾವಿರಾರು ಸಿಲಿಂಟರೇಟ್ ಪ್ರಾಣಿಗಳ ಸಮೂಹವಾಗಿದೆ. ಸುಮಾರು ಎರಡು- ಮೂರು ಸೆಂಟಿಮೀಟರ್ ನಷ್ಟು ಉದ್ದದ ಈ ಹವಳ ಜೀವಿಗಳ ಶರೀರ ಮೃದುವಾಗಿದ್ದು, ಶರೀರದ ಮೇಲ್ಬಾಗದಲ್ಲಿ ವೃತ್ತಾಕಾರದ ಬಾಯಿಯಿದೆ. ಅದರ ಸುತ್ತ ಹಲವು ಬೆರಳಿನಾಕಾರದ ಟೆಂಟ್ಯಾಕಲ್‌ಗಳಿವೆ. ಕಡಲಿನಲ್ಲಿ ಹೇರಳವಾಗಿ ಸಿಗುವ ಪ್ಲಾಂಕ್ಟನ್‍ಗಳಂತಹ ಸೂಕ್ಷ್ಮಜೀವಿಗಳೇ ಅದರ ಆಹಾರ. ಗ್ರಹಣಾಂಗಗಳ ಸಹಾಯದಿಂದ ಆಹಾರವನ್ನು ನೇರವಾಗಿ ಕರುಳಿಗೇ ಸೇರಿಸುತ್ತದೆ. ಅಲ್ಲದೇ ಈ ಗ್ರಹಣಾಂಗಗಳು ನೆಮಟೋ ಸಿಸ್ಟಗಳೆಂಬ ಕುಟುಕು ಕೋಶಗಳನ್ನು ಹೊಂದಿದ್ದು ಪ್ರಾಣಿಗಳನ್ನು ಹಿಡಿಯಲು ಸಹಕರಿಸುತ್ತವೆ. ಹವಳದ ಜೀವಿಯ ಮೈಮೇಲೆ ಮೊಳಕೆಯೊಡೆದು ಅವೇ ಮರಿಗಳಾಗಿ, ಹೊಸ ಜೀವಿಗಳಾಗಿ ಬೆಳೆಯುತ್ತವೆ. ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಜೀವಿಸುವ ಹವಳದ ಜೀವಿಗಳು ಸಾಗರ ನೀರಿನಿಂದ ಕ್ಯಾಲ್ಸಿಯಂ ಕಾರ್ಬೋನೇಟನ್ನು ಸಂಗ್ರಹಿಸಿ ಗಟ್ಟಿಯಾದ ಕ್ಯಾಲ್ಸಿಯಂ ಅಸ್ಥಿ ಪಂಜರವನ್ನು ತಮ್ಮ ಸುತ್ತ ಕಟ್ಟುತ್ತವೆ. ಹವಳಗಳಲ್ಲಿ ಸಂತಾನೋತ್ಪತ್ತಿಯು ಮುಖ್ಯವಾಗಿ ಬಡ್ಡಿಂಗ್ ವಿಧಾನದಿಂದ ನಡೆಯುತ್ತದೆ, ಇದು ಮುಂದುವರಿದಂತೆ ಹವಳ ದಿಬ್ಬಗಳ ಸಮೂಹ ಹೆಚ್ಚುತ್ತದೆ. ಒಂದು ವೇಳೆ ಹವಳಗಳು ಬಿರುಗಾಳಿ ಮತ್ತಿತರ ಕಾರಣಗಳಿಂದ ತುಂಡಾದರೆ, ಆ ತುಂಡಿನಿಂದ ಮತ್ತೊಂದು ಹವಳದ ಗುಂಪು ಬೆಳೆಯುತ್ತದೆ. ಹೀಗೆ ನಿರಂತರವಾಗಿ ಹವಳದಿಬ್ಬಗಳು ಹೆಚ್ಚುತ್ತ ಹೋಗುತ್ತವೆ.

ಹವಳದಿಬ್ಬಗಳು ಹಲವು ಜಲಪ್ರಾಣಿಗಳಿಗೆ ವಾಸಸ್ಥಾನವಾಗಿರುವುದರಿಂದ ಅವನ್ನು ಮಳೆ ಕಾಡುಗಳಿಗೆ ಹೋಲಿಸಲಾಗಿದೆ. ಅವು ದ್ವೀಪಗಳನ್ನು ರಕ್ಷಿಸುವುದರೊಂದಿಗೆ ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಮನ್ನಾರ್ ಕೊಲ್ಲಿ, ಕಚ್ ಕೊಲ್ಲಿ, ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ, ಮಾಲ್ಡೀವ್ ಮತ್ತು ಶ್ರೀಲಂಕಾಗಳಂತಹ ಕರಾವಳಿ ಪ್ರದೇಶದ ಜನಾಂಗಗಳು ಹವಳ ದಿಬ್ಬಗಳಲ್ಲಿ ವಾಸಿಸುವ ವಿಧವಿಧವಾದ ಮೀನುಗಳನ್ನು ಅವಲಂಬಿಸಿವೆ.

ಹವಳ ದಿಬ್ಬಗಳು ೫೦ ರಿಂದ ೭೦ ಮೀಟರ್ ಆಳದವರೆಗಿನ ನೀರಿನಲ್ಲಿ ಸುಮಾರು 30° ಸೆ.ನಷ್ಟು ಉಷ್ಣತೆಯ, ಬೆಳಗು ಹಾಯುವ, ೩೨ ರಿಂದ ೩೫% ಲವಣಯುಕ್ತ ನೀರಿನಲ್ಲಿ ಸುಲಭವಾಗಿ ಬೆಳೆಯುತ್ತವೆ.

ಒಮ್ಮೆ ಹವಳ ದ್ವೀಪಗಳು ಬೆಳೆದವೆಂದರೆ ಅವು ಹೊಸ ಪರಿಸರವನ್ನೇ ಸೃಷ್ಟಿಸುತ್ತವೆ. ಸರ್ಪ, ಮೃದ್ವಂಗಿ, ವಲಯವಂತುಗಳು, ಕಂಟಕ ಚರ್ಮಿಗಳು, ಸಂಧೀಪದಿಗಳು, ಕಡಲ ಸೌತೆ, ಕಡಲ ಬೀಸಣಿಗೆ, ಮೀನುಗಳು ಮುಂತಾದ ಕಡಲ ಜೀವಿಗಳಿಗೆ ವಾಸಸ್ಥಾನವಾಗುತ್ತವೆ. ಒಂದು ಆಂದಾಜಿನ ಪ್ರಕಾರ ಸುಮಾರು ೯೦,೦೦೦ಕ್ಕೂ ಹೆಚ್ಚಿನ ಪ್ರಬೇಧಗಳು ಹವಳ ದಿಬ್ಬಗಳಲ್ಲಿ ವಾಸಿಸುತ್ತವೆ. ಹೀಗೆ ಅದ್ಭುತವಾದ ಹವಳ ದಿಬ್ಬಗಳನ್ನು ನಿರ್ಮಿಸುವ ಹವಳದ ಜೀವಿಗಳಿಗೆ
೨೨೫ ದಶಲಕ್ಷ ವರ್ಷಗಳ ಇತಿಹಾಸವಿದೆ. ಅವು ಸುಮಾರು ೮೦೦ ಪ್ರಬೇಧಗಳನ್ನು ಹೊಂದಿವೆ.

ಭಾರತದಲ್ಲಿ ಪಶ್ಚಿಮದ ಲಕ್ಷದ್ವೀಪಗಳಲ್ಲಿ ಹಾಗೂ ಪೂರ್ವದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹವಳ ದಿಬ್ಬಗಳನ್ನು ಕಾಣಬಹುದು. ಕಛ್ ಕರಾವಳಿ ತೀರ, ಪಾಲ್ಕ್ ಮತ್ತು ಮುನ್ನೂರು ಕೊಲ್ಲಿಯಲ್ಲಿ ಸಣ್ಣ ಸಣ್ಣ ಹವಳ ದಿಬ್ಬಗಳನ್ನು ಕಾಣಬಹುದು.

ಹವಳ ದಿಬ್ಬಗಳನ್ನು ಅಂಚುದಿಬ್ಬ (Fringing Reef) ಅಡ್ಡೆ ದಿಬ್ಬ (Barrier Reef) ಮತ್ತು ಆಡಲು ದಿಬ್ಬಗಳು (Atolls) ಎಂದು ಮೂರು ಮುಖ್ಯವಾದ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಅಂಚು ದಿಬ್ಬಗಳು ಸುಮಾರು 20° ಸೆ. ನಷ್ಟು ಉಷ್ಣತೆಯ ಕಡಲ ತೀರದಲ್ಲಿ ಮತ್ತು ೩೫% ರಷ್ಟು ಲವಣಯುಕ್ತ ನೀರಿನಲ್ಲಿ ಬೆಳೆಯುತ್ತವೆ. ಭಾರತದಲ್ಲಿ ಮುನ್ನೂರ ಕೊಲ್ಲಿ, ಪೂರ್ವ ಕರಾವಳಿಯಲ್ಲಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಸುತ್ತಮುತ್ತ ಅಂಚುದಿಬ್ಬಗಳನ್ನು ಕಾಣಬಹುದು. ಅಡ್ಡೆ ದಿಬ್ಬಗಳು ಲಗೂನ್‌ಗಳಿಂದ ಬೇರ್ಪಟ್ಟಿವೆ. ಆಸ್ಟ್ರೇಲಿಯಾ ದೇಶದಲ್ಲಿ “ದಿ ಗ್ರೇಟ್ ಬ್ಯಾರಿಯರ್ ರೀಫ್” ಎಂಬ ಜಗತ್ಪ್ರಸಿದ್ಧ ಅಡ್ಡೆ ದಿಬ್ಬವನ್ನು ಕಾಣಬಹುದು. ಇದು ೨,೦೦೦ ಕಿ.ಮೀ.ಗಳಷ್ಟು ಉದ್ದವಾಗಿದ್ದು, ೧೫ ರಿಂದ ೩೫೦ ಕಿ. ಮೀ. ದಪ್ಪವಾಗಿದೆ. ಅದು ಆಕ್ರಮಿಸಿರುವ ಜಾಗ ಸುಮಾರು ೨೨೫,೦೦೦ ಚ.ಕಿ.ಮೀಗಳು ಎಂದರೆ ಆಶ್ಚರ್ಯವಾಗುತ್ತದೆ. ಅಡಲು ದಿಬ್ಬಗಳು ಸಮುದ್ರದ ತೀರದಲ್ಲಿ ಬೆಳೆಯುತ್ತವೆ. ಮಾಲ್ಡೀವ್ ಮತ್ತು ಲಕ್ಷದ್ವೀಪಗಳಲ್ಲಿ ಇಂತಹ ದಿಬ್ಬಗಳನ್ನು ಕಾಣಬಹುದು.

ಹವಳ ದಿಬ್ಬಗಳು ಸಮುದ್ರದಲ್ಲಿ ಸೂರ್ಯ ಕಿರಣಗಳು ಹಾಯುವಷ್ಟು ಆಳದವರೆಗೆ ಮಾತ್ರ ಬೆಳೆಯುತ್ತವೆ. ಜೂ ಕ್ಯಾಂಥೆಲ್ಲೆ ಎಂಬ ಹರಿಧ್ವರ್ಣಯುಕ್ತ ಏಕಕೋಶ ಸಸ್ಯಗಳು ಹವಳದ ಬಣ್ಣಗಳಿಗೆ ಕಾರಣವಾಗಿವೆ. ಇವು ಪಾಚಿಗಳ ಗುಂಪಿಗೆ ಸೇರಿದವಾಗಿವೆ. ಹವಳ ಪರಿಸರ ವ್ಯವಸ್ಥೆ ಯಲ್ಲಿ ಇವೇ ಪ್ರಮುಖ ಪ್ರಾಥಮಿಕ ಆಹಾರ ಉತ್ಪಾದಕಗಳು. ಅವು ಸೂರ್ಯಕಿರಣ ಮತ್ತು ಕಾರ್ಬನ್ ಡೈ ಆಕ್ಸೈಡ್ ಬಳಸಿಕೊಂಡು ಆಹಾರ ತಯಾರಿಸಿಕೊಂಡು ಪಾಲಿಪ್‌ಗಳಿಗೆ ಒದಗಿಸುತ್ತದೆ. ಅವನ್ನು ಜಲಚರ ಪ್ರಾಣಿಗಳು ಆಹಾರವಾಗಿ ಉಪಯೋಗಿಸುತ್ತವೆ.

ದಿಬ್ಬಗಳಲ್ಲಿ ಕೆಂಪು ಹವಳ, ಪಟ್ಟೆ ಹವಳ, ಮೆದು ಹವಳ, ಕೊಳವೆ ಹವಳ, ಮೆದುಳು ಹವಳ, ಶಿಲೀಂಧ್ರ ಹವಳ ಮುಂತಾದವುಗಳಂತೆ ಅವುಗಳ ಗಾತ್ರ, ರಚನೆ ಮತ್ತು ಆಕಾರಗಳ ಆಧಾರದ ಮೇಲೆ ವಿಂಗಡಿಸಲಾಗಿದೆ.

ಹವಳಗಳಲ್ಲಿ ಕೆಂಪು ಹವಳ ಅತ್ಯಂತ ಬೆಲೆಬಾಳುವ ಶ್ರೇಷ್ಠ ವಸ್ತು. ಇದನ್ನು ನವರತ್ನಗಳ ಸಾಲಿಗೆ ಸೇರಿಸಲಾಗಿದೆ. ಇವುಗಳಿಂದ ತಯಾರಿಸಿದ ಮಣಿಗಳನ್ನು ಪೋಣಿಸಿ ತಯಾರಿಸಿದ ಹಾರಗಳು ಅತ್ಯುತ್ತಮ ಆಭರಣಗಳಾಗುತ್ತವೆ. ಅಲ್ಲದೇ ಹವಳದ ಮರಳನ್ನು ಸಿಮೆಂಟ್ ತಯಾರಿಕೆಯಲ್ಲೂ ಹೇರಳವಾಗಿ ಉಪಯೋಗಿಸಲ್ಪಡುತ್ತದೆ.

ಜಗತ್ತಿನಾದ್ಯಂತ ಹವಳ ದಿಬ್ಬಗಳು ವಿನಾಶದತ್ತ ಸಾಗುತ್ತಿವೆ. ಈ ವಿನಾಶಕ್ಕೆ ಮಾನವನ ದುರಾಸೆ, ಚಂಡಮಾರುತಗಳು, ಮಾಲಿನ್ಯ, ಪರಭಕ್ಷಣೆ ಮತ್ತು ರೋಗಗಳು ಕಾರಣವಾಗಿವೆ.

ಹವಳ ದಿಬ್ಬಗಳಲ್ಲಿ ವಾಸಿಸುವ ಚಿತ್ರ-ವಿಚಿತ್ರವಾದ ಮೀನುಗಳು ಪಂಚತಾರಾ ಹೋಟೆಲ್ಲುಗಳ ತಟ್ಟೆಗಳಲ್ಲಿ ಆಹಾರವಾಗಿ ಬಡಿಸಲ್ಪಡುತ್ತವೆ. ಇಂಥ ಆಹಾರ ಜನಪ್ರಿಯವೂ ಕೂಡ. ಹಾಗಾಗಿ ಅಂಥ ಮೀನುಗಳನ್ನು ರಾಶಿರಾಶಿಯಾಗಿ ಹಿಡಿಯಲು ಮೀನುಗಾರರು ಹವಳದ ದಿಬ್ಬಗಳಿಗೇ ಸ್ಫೋಟಕ ಮದ್ದು ಹಾಕಿ ಸ್ಫೋಟಿಸಿ ಛಿದ್ರಛಿದ್ರಗೊಳಿಸುತ್ತಾರೆ. ಸ್ಫೋಟಕ್ಕೆ ಸಿಕ್ಕಿ ಸಾಯುವ ಮೀನುಗಳನ್ನು ಒಯ್ಯುತ್ತಾರೆ. ಅಲ್ಲದೇ, ಹವಳ ಲೋಕಗಳಲ್ಲಿ ವಾಸಿಸುವ ಬಣ್ಣಬಣ್ಣದ ಮೀನುಗಳನ್ನು ಹಿಡಿದು ಪೂರೈಸಲು ಅವುಗಳನ್ನು ಧ್ವಂಸಿಸುತ್ತಾರೆ.

ನಾವು ವಿಪರೀತವಾಗಿ ಬಳಸುತ್ತಿರುವ ಕೃತಕ ಗೊಬ್ಬರಗಳು ಕೀಟನಾಶಕಗಳು ನದಿಗಳ ಮೂಲಕ ಸಾಗರ, ಸಾಗರದಿಂದ ಹವಳ ದಿಬ್ಬ ತಲುಪಿ ಅಲ್ಲಿನ ಜೀವಸಂಕುಲವನ್ನು ನಾಶಗೊಳಿಸುತ್ತಿವೆ. ಕಡಲ ತೀರದಲ್ಲಿ ಮುಗಿಲು ಮುಟ್ಟುವಂತೆ ನಿರ್ಮಾಣವಾಗುತ್ತಿರುವ ಮಹಾನಗರಗಳ ಹೊಲಸು ನೀರು ಅಪಾರ ಪ್ರಮಾಣದಲ್ಲಿ ಸಾಗರ ಸೇರಿ ಅಪಾಯಕ್ಕೆಡೆ ಮಾಡಿದೆ.

ಸಾಗರಗಳಲ್ಲಿ ಹಡಗುಗಳ ಮೂಲಕ ತೈಲ ಸಾಗಾಣಿಕೆ, ತೈಲ ಸೋರಿಕೆ ಮತ್ತು ಉಷ್ಣ ಮಾಲಿನ್ಯದಿಂದಲೂ ಹವಳ ದಿಬ್ಬಗಳು ವಿನಾಶವಾಗುತ್ತಿವೆ. ಹವಳ ದಿಬ್ಬಗಳ ನಾಶಕ್ಕೆ ಕಾರಣವಾಗಿರುವ ಇನ್ನೊಂದು ಸಮಸ್ಯೆಯೆಂದರೆ ಬಿಳುಚುವಿಕೆ (Bleaching), ಜೂ ಕ್ಯಾಂಥಿಲ್ಲೆ ಪಾಚಿಯು ದ್ಯುತಿಸಂಶ್ಲೇಷಣೆ ವರ್ಣದ್ರವ್ಯ ಕಳೆದುಕೊಂಡಾಗ ಇದು ಸಂಭವಿಸುತ್ತದೆ. ಅಲ್ಪಾವಯೋಲೆಟ್ ವಿಕಿರಣ, ಕಡಿಮೆ ಲವಣಯುಕ್ತತೆ, ಅತಿ ಹಸಿಗಟ್ಟಿಕೆ (Sedimentation), ಔದ್ಯೋಗಿಕ ಮತ್ತು ಗ್ರಾಮಸಾರ ಮಾಲಿನ್ಯಗಳಿಂದಲೂ ಹವಳ ದಿಬ್ಬಗಳಲ್ಲಿ ಬೀಚಿಂಗ್‌ಗೆ ಕಾರಣವಾಗಿದೆ. ಹಸಿರುಮನೆ ಅನಿಲಗಳೂ ಇದಕ್ಕೆ ಮತ್ತೊಂದು ಕಾರಣವಾಗಿದೆ. ಭಾರತ, ಕೀನ್ಯಾ, ಮಾರಿಷಸ್, ಸೋಮಾಲಿಯಾ, ಮಡಗಾಸ್ಕರ್‌, ಮಾಲ್ಡೀವ್, ಇಂಡೋನೇಷಿಯಾ, ಶ್ರೀಲಂಕಾ, ಥೈಲ್ಯಾಂಡ್, ಅಂಡಮಾನ್, ಮಲೇಶಿಯಾ, ಓಮಾನ್ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಹವಳ ದಿಬ್ಬಗಳು ಬೀಚಿಂಗ್ ಸಮಸ್ಯೆಯಿಂದ ಬಳಲುತ್ತಿವೆಯೆಂದು ತಿಳಿದು ಬಂದಿದೆ.

ಈ ಮುಂಚೆ ವಿವರಿಸಿದಂತೆ ಸುಮಾರು ೩೦ ಸೆ.ನಷ್ಟು ಉಷ್ಣತೆಯ ಸಾಗರ ನೀರು ಹವಳ ದಿಬ್ಬಗಳ ಬೆಳವಣಿಗೆಗೆ ಕಾರಣವಾಗಿದೆ. ಆದರೆ ಹಿಂದೂ ಮಹಾಸಾಗರದಲ್ಲಿನ ನೀರಿನ ಉಷ್ಣತೆ 36° ಸೆ. ನಷ್ಟು ಹೆಚ್ಚಾಗಿದ್ದು ತಿಳಿದು ಬಂದಿದೆ ಎನ್ನುತ್ತಾರೆ ಚೆನೈನಲ್ಲಿರುವ ಭಾರತೀಯ ಪ್ರಾಣಿ ಸಂರಕ್ಷಣಾ ಕೇಂದ್ರದ ವಿಜ್ಞಾನಿಯಾದ ಡಾ. ಕೆ. ವೆಂಕಟ ರಾಮನ್ ಅವರು. ಇದು ಬಿಳುಚುವಿಕೆಗೆ ಕಾರಣವಾಗಿದ್ದು, ಅದರಲ್ಲಿ ವಾಸವಾಗಿರುವ ಮೀನುಗಳು ದಿಬ್ಬಗಳನ್ನು ತೊರೆಯುತ್ತಿವ ಎನ್ನುತ್ತಾರೆ.

ಮನ್ನಾರ್ ಕೊಲ್ಲಿಯಲ್ಲಿ ಬಿಳುಚುವಿಕೆಯು ೭೫% ನಷ್ಟಿದೆ. ಕಚ್ ಕೊಲ್ಲಿಯಲ್ಲಿ ಸುಮಾರು ೩೦% ದಷ್ಟು. ಶ್ರೀಲಂಕಾದ ವಿಜ್ಞಾನಿಗಳ ಪ್ರಕಾರ ಅಲ್ಲಿನ ಸಾಗರದಲ್ಲಿ ಇದು ಪ್ರತಿಶತಕ್ಕಿಂತ ಹೆಚ್ಚು. ಸಾಗರ ವಿಜ್ಞಾನಿಗಳು ಎಲ್‌ನಿನೋವೂ ಇದಕ್ಕೆ ಮತ್ತೊಂದು ಕಾರಣವಾಗಿದೆ ಎನ್ನುತ್ತಾರೆ. ಬಿಳುಚುವಿಕೆಯು ಭೂಮಿ ಬಿಸಿಯಾಗುವಿಕೆಯ ಇನ್ನೊಂದು ಪರಿಣಾಮ ಎಂಬುದು ಮಾನವನು ಅರಿಯಬೇಕಾಗಿದೆ.

ಹವಳ ದಿಬ್ಬಗಳು ಕಪ್ಪು ಪಟ್ಟೆ ರೋಗದ ಕಾರಣದಿಂದಲೂ ಕಂಗೆಟ್ಟಿವೆ. ಈ ರೋಗಕ್ಕೆ ಪಾಚಿಗಳು ಕಾರಣವಾಗಿವೆ. ಇದು ಬಂದಾಗ ಸುಮಾರು ೧ ಸೆಂ.ಮೀನಷ್ಟು ದಪ್ಪನಾದ ಕಪ್ಪು ಪಟ್ಟೆ ಕಾಣಿಸಿಕೊಳ್ಳುವುದು. ಬಿಳಿ ಪಟ್ಟೆ ರೋಗ ಹವಳ ದಿಬ್ಬಗಳಿಗೆ ಹರಡುವ ಇನ್ನೊಂದು ಸಾಮಾನ್ಯ ರೋಗ. ಈ ರೋಗಕ್ಕೆ ಕಾರಣವಾದ ಜೀವಿಯಿನ್ನೂ ಪತ್ತೆಯಾಗಿಲ್ಲ.

ಪಾಚಿ ಮತ್ತು ಶಿಲೀಂಧ್ರಗಳು ಹವಳ ದಿಬ್ಬಗಳನ್ನು ಹೊಕ್ಕಿ ಜೈವ ಸವಕಳಿಗೆ ಕಾರಣವಾಗುತ್ತವೆ. ಹವಳಗಳನ್ನು ಅಡ್ಡ ಛೇದಗೊಳಿಸಿದರೆ ಈ ಪಾಚಿಗಳ ಹಸಿರು ಪಟ್ಟೆಗಳನ್ನು ಕಾಣಬಹುದು.

ಇವೆಲ್ಲ ಕಾರಣಗಳಿಂದ ಜಗತ್ತಿನ ಒಟ್ಟು ಹವಳ ಲೋಕದ ಶೇಕಡ ೧೦ ರಷ್ಟು ಭಾಗ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಪ್ರಪಂಚದ ಒಟ್ಟೂ ಹವಳ ದಿಬ್ಬಗಳ ಶತಾಂಶ ೩೦ ಭಾಗ ಚಿಂತಾಜನಕ ಸ್ಥಿತಿ ತಲುಪಿದೆ. ಇದೇ ಸ್ಥಿತಿಯು ಮುಂದುವರಿದಲ್ಲಿ ಮುಂದಿನ ಒಂದೆರಡು ದಶಕಗಳಲ್ಲಿ ಸಂಪೂರ್ಣವಾಗಿ ನಾಶವಾಗಬಹುದು. ಅಷ್ಟೇ ಅಲ್ಲ ಹವಳ ದಿಬ್ಬಗಳನ್ನಾಶ್ರಯಿಸಿರುವ ಸಾವಿರಾರು ಪ್ರಭೇದದ ಜಲಚರ ಜೀವಿಗಳು ಅಪಾಯದಲ್ಲಿ ಸಿಲುಕಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಡ್ಡೆ ಗೆಣಸು ರುಚಿಸಬೇಕಾದರೆ ಹಸಿವು ಬೇಕಲ್ಲಾ ?
Next post ಏಕೆ ದೂಷಿಸುವೆ ಎನ್ನ?

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys