ಜಗತ್ತಿನಾದ್ಯಂತ ಇತ್ತೀಚೆಗೆ ಪರಿಸರಮಾಲಿನ್ಯ ಶಬ್ಧ ಮಾಲಿನ್ಯ, ಭೂಮಿಯನ್ನು ಕೊರೆಯುವುದು, ಸ್ಫೋಟಗೊಳಸುವುದು ಇದೇ ಮೊದಲಾದ ಕಾರಣಗಳಿಂದಾಗಿ ಭೂಮಿ ನಿಧಾನವಾಗಿ ಬಿಸಿಯಾಗುತ್ತಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಭೂಮಿ ಬಿಸಿಯಾದಾಗ ಸ್ವಾಭಾವಿಕವಾಗಿ ಹಲವಾರು ಬಗೆಯ ರೋಗಗಳು ಉಗ್ರರೂಪತಾಳುತ್ತಲಿವೆ ಎಂದು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ವ್ಯಾಪಕವಾಗಿ ರೌದ್ರ ರೂಪತಾಳಿದ್ದ ಮಲೇರಿಯಾ ಕಾಯಿಲೆಯ ನಿರ್‍ನಾಮದ ಸೂಚನೆ ಸಿಕ್ಕಿತ್ತು ಆದರೆ ಡಿ.ಡಿ.ಟಿಯ ಬಳಕೆ ಆರಂಭ ಗೊಂಡಾಗಿನಿಂದ ಸೊಳ್ಳೆಗಳು ಕಡಿಮೆಯಾಗುತ್ತ ಬರುತ್ತವೆ ಎಂದು ಭಾವಿಸಲಾಗಿತ್ತು.
ಆದರೆ ಈಗ ಮಲೇರಿಯಾ, ಡೆಂಗೆಜ್ವರ ಮುಂತಾದ ಕಾಯಿಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪೀಡಿಸುತ್ತಿವೆ. ಈ ರೀತಿ ಏರುತ್ತಿರುವ ರೋಗಗಳಿಗೂ ಭೂಮಿಯ ಉಷ್ಣತೆಗೂ ಸಂಬಂಧ ಇರುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದೇ ಸಂದರ್‍ಭದಲ್ಲಿ ಜಗತ್ತಿನ ಎಲ್ಲದೇಶಗಳು ಪರಿಸರ ಮಲಿನತೆಯನ್ನು ನಿಯಂತ್ರಿಸಿ ಭೂಮಿಯ ಉಷ್ಣತೆಯ ಏರಿಕೆಯನ್ನು ತಡೆಗಟ್ಟಬೇಕೆಂದೂ ಇಲ್ಲದಿದ್ದಾರೆ ಜಗತ್ತು ಹಲವಾರು ರೋಗಗಳಿಗೆ ಸುಲಭವಾಗಿ ಗುರಿಯಾಗಬಹುದೆಂದೂ ಎಚ್ಚರಿಸಿದರು. ಅಮೇರಿಕಾದ ಸಾರ್ವಜನಿಕ ಆರೋಗ್ಯ ಒಕ್ಕೂಟದ ಅಧ್ಯಕ್ಷ ಡಾ|| ಬ್ಯಾರಿಲೇವಿ ನಾವು, ಮುಂದೆ ಆಗಬಹುದಾದ ಗಂಡಾಂತರದ ಸಾಧ್ಯತೆಗಳನ್ನು ಸೂಚಿಸುತ್ತಿಲ್ಲ. ನಾವು ನಿಲ್ಲಿಸಬಹುದಾಗಿದ್ದ ರೋಗಗಳಿಂದಾಗಿಯೇ ಈಗ ಸಾವಿರಾರು ಜನಗಳು ಸಾಯುತ್ತಿದ್ದಾರೆ. ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಾಳಬಹುದೆಂದು, ಎಚ್ಚರಿಸಿದ್ದರು.
ಅನೇಕ ಬಗೆಯಾಗಿ ಹೊಗೆಯನ್ನು ಹೊರಹಾಕುತ್ತಿರುವುದರಿಂದಾಗಿ ರಾಸಾಯನಿಕಗಳನ್ನು ಹೊರಬಿಡುತ್ತಿರುವುದರಿಂದಾಗಿ ವಿಷಾನೀಲಗಳನ್ನು ಬಿಡುತ್ತಿರುವುದರಿಂದಾಗಿ ಆಳವಾದ ಗಣಿಗಳನ್ನು ತೊಡಿ ಸ್ಫೋಟಿಸುವುದರಿಂದಾಗಿ ಭೂಮಿಯ ಸುತ್ತ ಉಷ್ಟತೆಯು ಆವರಿಸಿಕೊಳುತ್ತಾ ಹೋಗುತ್ತಿದೆ. ಅಂತರ್ಜಲ ಬತ್ತಿ ಬರಡಾಗಿ ತಾಪ ಮಾನಕ್ಕೆ ಕಾರಣವಾಗುತ್ತಲಿದೆ. ಒಂದು ಶತಮಾನದಲ್ಲಿ ಭೂಮಿಯ ಉಷ್ಣತೆಯು ಒಂದರಿಂದ ಈಗೀಗ ಎರಡು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರುವ ಹಾಗೂ ಈ ಕಾರಣಗಳಿಂದ ಕಡಲಿನ ಮಟ್ಟವು ೧೫ ಸೆಂ.ಮಿ ಗಳಿಂದ ಒಂದು ಮೀಟರ್‌ಗಳಷ್ಟು ಏರುವ ಅಪಾಯವಿದೆ. ಇಡೀ ಜಗತ್ತೇ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿದ್ಯುತ್ ಉತ್ಪಾದನೆ, ಅಡುಗೆ ಮಾಡುವುದು, ವಾಹನಗಳಿಗೆ ಇಂಧನ ಮುಂತಾದ ಕಾರಣಗಳಿಂದಾಗಿ ಅತೀವ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳು ಸೌದೆ ಮತ್ತು ಕಲ್ಲಿದ್ದಲು ಸುಟ್ಟು ಹೋಗುತ್ತವೆ. ದೇಶ ದೇಶಗಳ ಆರ್ಥಿಕ ಅಭಿವೃದ್ಧಿಯೇ ಈ ರೀತಿಯ ಇಂಧನ ಬಳಕೆಯ ಮೇಲೆ ಆಧಾರಿತವಾಗಿರುವುದರಿಂದ ಇಂತಹ ಇಂಧನ ಬಳಕೆಯನ್ನು ಕಡಿಮೆಗೊಳಿಸುವುದಾಗಲೀ, ನಿಯಂತ್ರಿಸುವುದಾಗಲೀ ಸಾಧವಿಲ್ಲವಾಗಿದೆ. ಕಡಿಮೆ ಇಂಧನ ಬಳಸಿ ಅಧಿಕ ಶಕ್ತಿ ಉತ್ಪಾದನೆಗೊಳಿಸುವ ಪರಿಸರದ (ಜೈವಿಕ) ಶಕ್ತಿಯಿಂದ ಶಕ್ತಿ ಪಡೆದು ಪರಿಸರವನ್ನು ಶುದ್ದವಾಗಿರಿಸಿಕೊಳ್ಳುವ ಆಲೊಚನೆಯನ್ನು ಮಾಡಬೇಕಿದೆ.
*****



















