ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು
ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು
ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು
ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು
ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಇವರು ಇಲ್ಲಿ ಅಭಿನಂದಿಸುತ್ತಾರೆ.
ಇಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಅವರು ಅಲ್ಲಿ ಅಭಿನಂದಿಸುತ್ತಾರೆ.
ಇನ್ನೆಷ್ಟುದಿನ ಈ ಕಣ್ಣಮುಚ್ಚಾಲೆಯಾಟ
ಹಿರೋಶೀಮಾ ನಾಗಾಸಾಕಿಗಳ ದುರಂತ
ಕಲಿಸಲಿಲ್ಲವೇ ನಮಗಿನ್ನೂ ಪಾಠ?
ನಮ್ಮನಾಳುವ ಓ! ದೊರೆಯೇ ನಿಲ್ಲಿಸಿಬಿಡು
ನಿನ್ನ ಮದ್ದಿನ ಕಾರ್ಖಾನೆಯನ್ನು
ಇನ್ನೆಷ್ಟು ದಿನ ತಯಾರಿಸುತ್ತಿರಬೇಕು ನಾವು
ಮದ್ದು, ಗುಂಡು, ಬಾಂಬು, ಮಿಸಯಿಲ್ಲು
ಇನ್ನೆಷ್ಟು ದಿನ ಹರಿಯುತ್ತಿರಬೇಕು ಹೇಳು
ನಿರಪರಾಧಿ ಬಾಂಧವರ ರಕ್ತ?
ಅದಕ್ಕೆ… ನಿಲ್ಲಿಸಿಬಿಡು ದೊರೆಯೇ
ನಿನ್ನ ಮುದ್ದಿನ ಕಾರ್ಖಾನೆಯನ್ನು.
ಸಾಕು ಮಾಡು ಮದ್ದು ಗುಂಡಿನ ಘಾಟು
ಜೀವ ವಿರೋಧಿಗಳ ಥಾಟು
ಜೀವಂತ ಝಾಗಝಾಗಿಸುವ ನಗರಗಳ
ಮೇಲೆ ಬೆಂಕಿ ಮಳೆ ಸುರಿದದ್ದು ಸಾಕು
ಸಾಕು… ಅಧಿಕಾರದ ಅಹಮ್ಮಿನಲ್ಲಿ
ಒಡ ಹುಟ್ಟಿದವರ ಸುಟ್ಟಿದ್ದು.
ಹಾರುವ ಹಕ್ಕಿಗೆ ಗಡಿಗಳ ನಿರ್ಬಂಧವೆ?
ಸುಮಧುರ ಸಂಗೀತಕೆ ವಿಭಾಜಕ ರೇಖೆಗಳೇ
ತಣ್ಣಗೆ ಬೀಸುವ ತಂಗಾಳಿಗೆ ಗಿಡಗಳ ತಡೆಯೇ?
ನೆರಳು ಬಿಸಿಲಿಗೆ, ಸೂರ್ಯ ಚಂದ್ರರಿಗೆ
ತಡೆದು ನಿಲ್ಲಿಸುವ ಗಡಿಗಳುಂಟೆ
ಹುಡುಕಬಹುದೆ ಒಬ್ಬ ಪಾಕಿಸ್ತಾನಿಯನ್ನು
ನುಸ್ರತ್ ಫತೇ ಅಲಿಯವರ ಗಾಯನದಲಿ.
ಹುಡುಕಬಹುದೆ ಒಬ್ಬ ಹಿಂದುಸ್ತಾನಿಯನು
ಲತಾಮಂಗೇಶ್ಕರಳ ಸುಮಧುರ ಕಂಠದಲ್ಲಿ
ಹೇಳು ಪ್ರಭುವೇ! ಪ್ರೀತಿಗೆ ಗಡಿಗಳುಂಟೆ?
*****



















