ಯಕ್ಷಗಾನ ಹಿಮ್ಮೇಳ

3.1 ಹಿಮ್ಮೇಳ ಎಂದರೇನು?

ಹಾಡು, ಚೆಂಡೆ, ಮದ್ದಳೆ ಮತ್ತು ಶ್ರುತಿ ಇವನ್ನು ಒಟ್ಟಾಗಿ ಯಕ್ಷಗಾನದ ಹಿಮ್ಮೇಳ ಎಂದು ಕರೆಯಲಾಗುತ್ತದೆ. ಹಿಮ್ಮೇಳದವರು ಎಂದರೆ ಯಕ್ಷಗಾನದಲ್ಲಿ ಭಾಗವತರು, ಚೆಂಡೆಯವರು, ಮದ್ದಲೆಯವರು ಮತ್ತು ಶ್ರುತಿಕಾರರು ಎಂದರ್ಥ. ತೆಂಕಿತಿಟ್ಟಿನ ಹಿಮ್ಮೇಳದಲ್ಲಿ ಈ ನಾಲ್ವರೊಡನೆ ಚಕ್ರತಾಳದವರೂ ಸೇರ್ಪಡೆಯಾಗುತ್ತಾರೆ. ಕರಾವಳಿ ಯಕ್ಷಗಾನದಲ್ಲಿ ಲಯವಾದ್ಯಗಳು ಮಾತ್ರ ಬಳಕೆಯಾಗುತ್ತವೆ. ಉದಾತ ಚೆಂಡೆ ಮತ್ತು ಮದ್ದಳೆ. ಸ್ವರವಾದ್ಯಗಳಾದ ಮುಖವೀಣೆ, ಪಿಟೀಲು, ನಾಗಸ್ವರ ಇತ್ಯಾದಿಗಳು ಬಳಕೆ ಯಾಗುವುದಿಲ್ಲ. ಹಾರ್ಮೋನಿಯಂಅನ್ನು ಅದನ್ನು ಶ್ರುತಿಗೆ ಮಾತ್ರ ಬಳಸಿಕೊಳ್ಳಲಾಗು ತ್ತದೆ. ಸ್ವರದ ಏರಿಳಿತಗಳಿಗನುಗುಣವಾಗಿ ಅಥವಾ ಸ್ವರ ಪ್ರಸ್ತಾರಕ್ಕನುಣವಾಗಿ ಯಕ್ಷಗಾನ ದಲ್ಲಿ ಹಾರ್ಮೋನಿಯಂ ಬಳಕೆಯಾಗುವುದಿಲ್ಲ.

ಪೂರ್ವಂ ಗಾನ ತತೋವಾದ್ಯಂ| ತತಂ ನೃತ್ತಂ ಪ್ರಯೋಜಯೇತ್‌

ಗೀತಂ ವಾದ್ಯಾಂಗ ಸಂಯೋಗತ | ಪ್ರಯೋಗ ಇತಿ ಸಂತತ

ಎಂದು ‘ನಾಟ್ಯಶಾಸ್ತ್ರಂ’ ಹೇಳುತ್ತದೆ. ಮೊದಲು ಗಾಯನ, ಅದರ ಜತೆಯಲ್ಲಿ ವಾದ್ಯ ಮತ್ತು ಆ ಬಳಿಕ ನರ್ತನ ಇದುವೇ ರಂಗ ಪ್ರಯೋಗ. ನರ್ತನ ಮುಮ್ಮೇಳವಾದೆ ಗಾನ ಮತ್ತು ವಾದ್ಯ ಹಿಮ್ಮೇಳವಾಗಿರುತ್ತದೆ.

ಯಕ್ಷಗಾನದ ಹಿಮ್ಮೇಳವಾದ್ಯಗಳು ವಿಶಿಷ್ಟ ಬಗೆಯವು. ಅವುಗಳ ನಾದ ವೀರತ್ವ ಪ್ರಧಾನವಾದುದು. ಬಹಳ ಕಷ್ಟಪಟ್ಟು ಅವುಗಳನ್ನು ಭಕ್ತಿ ಮತ್ತು ಶೃಂಗಾರ ರಸಗಳಿಗೆ
ಒಗ್ಗಿಸಬೇಕಾಗುತ್ತದೆ. ಯಕ್ಷಗಾನವು ವೀರ ಯುಗದಲ್ಲಿ ಬೆಳೆದ ಕಲಾಪ್ರಕಾರ. ಯಕ್ಷಗಾನದ ಅನೇಕ ಸ್ತ್ರೀಪಾತ್ರಗಳು ಪುರುಷ ಪಾತ್ರಗಳಂತೆ ನರ್ತಿಸುತ್ತವೆ. ಉದಾ : ಪ್ರಮೀಳೆ, ದ್ರೌಪದಿ ಪ್ರತಾಪದ ಸುಭದ್ರೆ ಮತ್ತು ದ್ರೌಪದಿ ಇತ್ಯಾದಿ. ಯಕ್ಷಗಾನ ಹುಟ್ಟಿಕೊಂಡಾಗ ಪ್ರಾಯತ ಎಲ್ಲಾ ಸ್ತ್ರೀವೇಷಗಳೂ ಪ್ರಮೀಳೆಯಂತೆ ನರ್ತಿಸುತ್ತಿದ್ದವೋ ಏನೊ? ಚೆಂಡೆ ಮದ್ದಳೆಗಳನ್ನು ಶೇಣಿ ಗೋಪಾಲಕೃಷ್ಣ ಭಟ್ಟರು ರಣವಾದ್ಯಗಳೆಂದು ಹೇಳಿದ್ದಾರೆ. ಸುಳ್ಯದ ತೆಂಕುತಿಟ್ಟು ಹಿತರಕಣಾ ವೇದಿಕೆ ಏರ್ಪಡಿಸಿದ ಸಾಂಪ್ರದಾಯಿಕ ಭಾಗವತಿಕೆ ಕಮ್ಮಟದಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವದಿಂದ ಯಕ್ಷಗಾನದ ಭಾಗವತಿಕೆಯಲ್ಲಿ ಲಾಲಿತ್ಯ ಕಾಣಿಸಿಕೊಂಡಿರುವುದು ಸತ್ಯ. ಆದರೆ ಹಿಮ್ಮೇಳ ಪರಿಕರಗಳು ಬಹುತೇಕವಾಗಿ ಬದಲಾಗದೆ ಉಳಿದುಕೊಂಡಿವೆ.

3.2 ಯಕ್ಷಗಾನ ಭಾಗವತ

ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಕಡತೋಕ ಮಂಜುನಾಥ ಭಾಗವತರು ಹೇಳುವಂತೆ ‘ಈ ಯಕ್ಷಗಾನ ಪ್ರದರ್ಶನದ ಕೇಂದ್ರ ವ್ಯಕ್ತಿ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ.[ ಯಕ್ಷಗಾನ ಮಕರಂದ, 1980, ಪು. 212]

ಸಭಾಲಕ್ಷಣದಲ್ಲಿ ಭಾಗವತನ ಸಲ್ಲಕ್ಷಣಗಳನ್ನು ಹೀಗೆ ಹೇಳಲಾಗಿದೆ:

ಭಕಾರೋ ಭಗವದ್ಭಕ್ತಃ | ಗ ಕಾರೋ ಗರ್ವವರ್ಜಿತ||

ವಕಾರೋ ವಾಕ್ಯಪಾಠೀಚ| ತಕಾರಸ್ತತ್ತ್ವ ನಿರ್ಣಯಃ||

[ಸಭಾಲಕ್ಷಣ, ಪಾವಂಜೆ ಪ್ರತಿ, 1980 ಪುಟ 10]

ಯಕ್ಷಗಾನಕ್ಕೆ ದೇವಾಲಯ ಮೂಲಕಲೆ. ಎಲ್ಲಾ ಯಕ್ಷಗಾನ ಪ್ರಸಂಗಗಳು ಭಗವಂತನ ಆರಾಧನೆಯನ್ನು ಸಮರ್ಥಿಸುತ್ತವೆ. ಭಕ್ತಿ ಎಂದರೆ ಭಗವಂತನಲ್ಲಿಟ್ಟಿರುವ ಪ್ರೇಮ. ಭಗವಂತನು ಐಶ್ವರ್ಯ, ವೀರ್ಯ, ಯಶಸ್ಸು, ಸಿರಿ, ಜ್ಞಾನ ಮತ್ತು ವೈರಾಗ್ಯಗಳೆಂಬ ಆರು ಗುಣಗಳ ಪ್ರತೀಕ. ಯಕ್ಷಗಾನ ಭಾಗವತನಲ್ಲಿ ಈ ಗುಣಗಳಿರಬೇಕು ಎನ್ನುವುದು ವಿದ್ವಾಂಸರ ಅಭಿಮತ.

1. ಭಗವದ್ಭಕ್ತ : ಭಗವಂತನು ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಮ, ಈಶತ್ವ, ವಶಿತ್ವ ಎಂಬ ಅಷ್ಟ ಸಿದ್ಧಿಗಳನ್ನು ಹೊಂದಿರುತ್ತಾನೆ.

ಆತನೆದುರು ಮಾನವ ಎಂದೂ ಕುಬ್ಜನೇ. ಭಗವದ್ಭಕ್ತಿ ಮಾನವನ ಅಹಂಕಾರವನ್ನು ಕಡಿಮೆ ಮಾಡುತ್ತದೆ ಮತ್ತು ವಿನಯವನ್ನು ಬೆಳೆಸುತ್ತದೆ. ವಿದ್ಯಾ ವಿನಯೇನ ಶೋಭತೇ, ವಿದ್ವಾನ್‌ ಸರ್ವತ್ರ ಪೂಜ್ಯತೇ. ವಿದ್ಯೆಯು ವಿನಯಿದಂದ ಶೋಭಿಸುತ್ತದೆ. ವಿನಯವುಳ್ಳ ವಿದ್ವಾಂಸನು ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ. ಭಾಗವತನು ವಿನಯವುಳ್ಳ ವಿದ್ಯಾವಂತನಾಗಿರಬೇಕು.

2. ಗರ್ವವರ್ಜಿತ : ಭಾಗವಂತನಲ್ಲಿ ಆಗಾಗ ಬೇರೆ ಬೇರೆ ಕಾರಣಗಳಿಗಾಗಿ ಗರ್ವ ಅಥವಾ ಅಹಂಕಾರ ಹುಟ್ಟಿಕೊಳ್ಳಬಹುದು. ಕೆಲವು ಮೇಳಗಳಲ್ಲಿ ಭಾಗವತನೇ ಯಜಮಾನ ನಾಗಿರುವುದೂ ಇದೆ. ಆತ ಯಕ್ಷಗಾನದ ನಿರ್ದೇಶಕನಾಗಿ ಮೇಳದ ನಾಯಕನಾಗಿರುತ್ತಾನೆ. ಸುಶ್ರಾವ್ಯ ಶಾರೀರದ ಭಾಗವತನ್ನ್ನು ಯಶಸ್ಸು, ಕೀರ್ತಿ ಮತ್ತು ಸಂಪತ್ತು ಹಿಂಬಾಲಿಸಿಕೊಂಡು ಬರುತ್ತವೆ. ಇವು ಭಾಗವತನ ತಲೆ ತಿರುಗಿಸಬಾರದು. ಅವನು ಸ್ಥಿತಪ್ರಜ್ಞನಂತಿರಬೇಕು.

3 ವಾಕ್ಯಪಾಠೀ : ಭಾಗವತನಲ್ಲಿ ತುಂಬಾ ಓದುವ ಹವ್ಯಾಸ ಮತ್ತು ತಪ್ಪಿಲ್ಲದೆ ಪಠನ ಮಾಡುವ ಸಾಮರ್ಥ್ಯವಿರಬೇಕು.’ವಾಕ್ಯಪಾಠ’ಎನ್ನುವುದನ್ನು ರಾಘವ ನಂಬಿಯಾರರು ವಿಶಾಲವಾದ ಓದು, ಆಸ್ವಾದನ ಶಕ್ತಿ, ಆಶುಪದ ರಚನಾ ಕುಶಲತೆ ಮತ್ತು ವಾಕ್ಪಟುತ್ವ ವೆಂದು ಅರ್ಥೈಸಿದ್ದಾರೆ. ಅವರು ಭಾಗವತನನ್ನು ಒಬ್ಬ ಪಾಠಕನೆಂದು ಪರಿಗಣಿಸಿ ಆತನ ಗುಣ ದೋಷಗಳು ಯಾವುವೆಂದು ಹೇಳಿದ್ದಾರೆ.

ಕೋಷ್ಟಕ 3.1 ಭಾಗವತನ ಗುಣ ದೋಷಗಳು

ಗುಣಗಳು                       ದೋಷಗಳು

ಇಂಪಾದ ರಾಗ                   ಗದ್ಯವನ್ನು ರಾಗವಾಗಿ ಎಳೆದು ಮಾತಾಡುವುದು

ಸ್ಫುಟವಾದ ಅಕ್ಷರೋಚ್ಚಾರಣೆ     ಪದ್ಯವನ್ನು ತ್ವರೆಯಿಂದ ಹೇಳುವುದು

ಅರ್ಥವಾಗುವಂತೆ ಪದ ವಿಭಾಗ  ತಲೆಯನ್ನು ಅಲ್ಲಾಡಿಸಿಕೊಂಡಿರುವುದು

ಕೇಳುವಷ್ಟು ಗಟ್ಟಿಯಾದ ದನಿ     ತಪ್ಪುಗಳನ್ನು ತಿದ್ದದೆ ಓದುವುದು

ಸಭಾಕಂಪನವಿಲ್ಲದಿರುವಿಕೆ        ಕುಗ್ಗಿದ ದನಿಯಲ್ಲಿ ಹಾಡುವುದು

ಲಯಬದ್ಧತೆ                       ಅರ್ಥ ತಿಳಿದುಕೊಳ್ಳದೆ ಪದ್ಯ ಹೇಳುವುದು

ಆಧಾರ : ರಾಘವ ನಂಬಿಯಾರ್‌ಹಿಮ್ಮೇಳ, 2007, ಪುಟ 94

4. ತತ್ತ್ವ ನಿರ್ಣಯ : ಪಾತ್ರಧಾರಿಗಳ ಅಜ್ಞಾನ ಅಥವಾ ಶುಷ್ಕ ಪಾಂಡಿತ್ಯದಿಂದ ಪ್ರಸಂಗದ ಕತೆಗೆ ಅಥವಾ ಆಶಯಕ್ಕೆ ಭಂಗವುಂಟಾದಾಗ ಖಚಿತ ತೀರ್ಮಾನಗಳನ್ನು ತೆಗೆದುಕೊಂಡು ಪ್ರಸಂಗ ಮುಂದುವರಿಸುವುದೇ ತತ್ತ್ವ ನಿರ್ಣಯ. ಉದಾಹರಣೆ:
‘ಸುಧನ್ವಾರ್ಜುನ ‘ದಲ್ಲಿ ತನ್ನ ಭಕ್ತನಾದ ಸುಧನ್ವನನ್ನು ಕೊಲ್ಲುವುದನ್ನು ಕೃಷ್ಣ ಒಡಂಬಡದಿದ್ದರೂ ಭಾಗವತ ಸುಧನ್ವನನ್ನು ಕೊಲ್ಲಬೇಕು. ಮಾರೀಚ ತನ್ನ ವಾಕ್ಚಾತುರ್ಯದಿಂದ ರಾವಣನನ್ನು ಸೋಲಿಸಿದರೂ ಭಾಗವತ ಮುಂದಿನ ಪದ ಎತ್ತಿ ಮಾರೀಚನನ್ನು ಮಾಯಮೃಗವನ್ನಾಗಿಸಬೇಕು. ಕೆಲವೊಮ್ಮೆ ರಂಗದಲ್ಲಿ ವರ್ಣ, ಜಾತಿ, ಸ್ತ್ರೀ ಸ್ವಾತಂತ್ರ್ಯಇತ್ಯಾದಿಗಳ ಬಗ್ಗೆ ಬಿಸಿಬಿಸಿ ತರ್ಕಗಳು ಏಳಬಹುದು. ಅದರಿಂದ ಪ್ರಸಂಗ ಕತೆಗೆ ತೊಂದರೆಯಾಗದಂತೆ ಭಾಗವತ ನೋಡಿಕೊಳ್ಳಬೇಕು. ತತ್ತ್ವ ನಿರ್ಣಯವೆಂದರೆ ಪ್ರಸಂಗಕ್ಕೆ ಬದ್ಧತೆ ಎಂದರ್ಥವೇ ಹೊರತು ಭಾಗವತನ ಮನೋಧರ್ಮಕ್ಕೆ ಬದ್ಧತೆ ಎಂದಲ್ಲ.

ಕಡತೋಕಾ ಮಂಜುನಾಥ ಭಾಗವತರ ಪ್ರಕಾರ ‘ಯಕ್ಷಗಾನ ಪ್ರದರ್ಶನದುದ್ದಕ್ಕೂ ಪ್ರಸಂಗದ ಪದ್ಯಗಳನ್ನು ವಿವಿಧ ರಸರಾಗಗಳಲ್ಲಿ ಹಾಡುತ್ತ, ನಟರನ್ನು ಕುಣಿಸಿ, ಮಾತಾಡಿಸಿ, ಸದಾ ಜಾಗೃತನಾಗಿದ್ದು ಆಟವನ್ನು ಸುಸೂತ್ರವಾಗಿ ನಡೆಯಿಸುವ ಜೀವಂತ ಶಕ್ತಿಯಾಗಿ ದುಡಿಯಬೇಕಾದ ಭಾಗವತನ ಜವಾಬ್ದಾರಿ ಬಲು ದೊಡ್ಡದು. ಭಾಗವತಿಕೆ ಎಂಬುದು ಸತತವಾದ ಪರಿಶ್ರಮ, ದೃಢ ಆರೋಗ್ಯ ಮತ್ತು ಉನ್ನತ ಮಟ್ಟದ ಪ್ರತಿಭೆಯನ್ನು ಬಯಸುವ ಕಲಾಕೇತ್ರ. ಯಕ್ಷಗಾನ ಪ್ರದರ್ಶನದ ಯಶಸ್ಸು ಅಪಯಶಸ್ಸುಗಳ ಬಲು ದೊಡ್ಡ ಅಂಶ ಭಾಗವತನದು. ಹಾಗಾಗಿ ಈತನ ಸ್ಥಾನ ಮಾನವೂ ದೊಡ್ಡದು ಹೊಣೆಯೂ ಹಿರಿದು. ರಂಗದ ಮೇಲೆ ಮತ್ತು ರಂಗದ ಹೊರಗೆ ಭಾಗವತನ ಕೆಲಸದ ಮುಖಗಳು ಹಲವಿವೆ. ಮತ್ತು ಈ ಎಲ್ಲಾ ಅಂಶಗಳನ್ನು ಅವಲಂಬಿಸಿಯೇ ಭಾಗವತನ ಯೋಗ್ಯತೆಯೂ, ಅವನಾಡಿಸುವ ಆಟದ ಯಶಸ್ಸೂ ನಿರ್ಣಯಿಸಲ್ಪಡುತ್ತದೆ.’

ಯಕ್ಷಗಾನ ಭಾಗವತನ ಪಾತ್ರ ಹೀಗಿದೆ :

1. ನಿರ್ದೇಶನ : ಭಾಗವತ ಪ್ರಸಂಗದ ನಿರ್ದೇಶಕನಾಗಿರುತ್ತಾನೆ. ಕತೆಯ ಮೂಲ ಆಶಯಕ್ಕೆ ತೊಂದರೆಯಾಗದಂತೆ ಅದನ್ನು ಮುಂದೊಯ್ಯಬೇಕಾದದ್ದು ಅವನ ಕಾರ್ಯ. ಕಲಾವಿದರಿಗೆ ಪ್ರಸಂಗಜ್ಞಾನ ಮತ್ತು ರಂಗಮಾಹಿತಿ ಇಲ್ಲದಿರುವಾಗ ಅವನ್ನು ನೀಡಬೇಕಾದದ್ದು ಭಾಗವತನ ಜವಾಬ್ದಾರಿ. ಪ್ರಸಂಗದ ಪಾತ್ರಗಳನ್ನು ಹಂಚುವವನೂ ಕೂಡಾ ಅವನೇ.

2. ಹಿಮ್ಮೇಳಮುಮ್ಮೇಳ ಗುರು : ಹಾಡುಗಾರಿಕೆ ಮಾತ್ರವಲ್ಲದೆ ಚೆಂಡೆ, ಮದ್ದಳೆ ಮತ್ತು ನೃತ್ಯ ಪರಿಜ್ಞಾನ ಇರುವವನೇ ನಿಜವಾದ ಭಾಗವತ. ಅಗತ್ಯ ಬಿದ್ದಾಗ ಅವನು ಚೆಂಡೆಮದ್ದಳೆಯವರಿಗೆ ನಿರ್ದೇಶನ ನೀಡಬೇಕು ಮತ್ತು ಪಾಠ ಹೇಳಿಕೊಡಬೇಕು. ಹಿಂದೆ ಚೆಂಡೆ ಮತ್ತು ಮದ್ದಳೆಗಳನ್ನು ಶ್ರುತಿ ಬದ್ಧಗೊಳಿಸುವುದು ಭಾಗವತನ ಕೆಲಸವಾಗಿತ್ತು. [ಹಿಮ್ಮೇಳ 2007, ಪುಟ 95] ಪಾತ್ರಧಾರಿಗಳಿಗೆ, ಮುಖ್ಯವಾಗಿ ತೆರೆಕಲಾಸ, ಸಭಾಕಲಾಸ, ಒಡ್ಡೋಲಗ, ಯುದ್ದ, ಬೇಟೆ, ಜಲಕೇಳಿ ಇತ್ಯಾದಿ ಸಂದರ್ಭಗಳಲ್ಲಿ ಭಾಗವತ ನಿರ್ದೇಶನ ನೀಡುತ್ತಾನೆ ಅಥವಾ ನೀಡಬೇಕಾಗುತ್ತದೆ.

3. ಪ್ರದರ್ಶನದ ಯಶಸ್ಸಿಗೆ ಕಾರಣ : ಯಕ್ಷಗಾನ ಪ್ರದರ್ಶನದ ಯಶಸ್ಸು ಭಾಗವತನ್ನ್ನು ಅವಲಂಬಿಸಿದೆ. ಕಲಾವಿದರ ಶಕ್ತಿಯನ್ನು ಅರಿತು ಅದನ್ನು ರಂಗದಲ್ಲಿ ಉದ್ದೀಪನಗೊಳಿಸುವುದು ಅವನ ಕರ್ತವ್ಯ. ಹಾಗೆಯೇ ಆತನಿಗೆ ಕಲಾವಿದರ ದೌರ್ಬಲ್ಯಗಳ ಅರಿವಿರಬೇಕು. ಗಿರ್ಕಿ ಹೊಡೆಯಲಾಗದ ಕಲಾವಿದರಿಗೆ ಪದ್ಯದ ಬಿಡ್ತಿಗೆ ನೀಡದೆ ಆಟದ ಯಶಸ್ಸಿಗೆ ಅವನು ಕಾರಣನಾಗಬೇಕು. ಭಾಗವತರು ಅಭಿನಯ ಮಾಡಲು ಸಾಧ್ಯವಾಗದ ಪದ್ಯದ ಸಾಲುಗಳನ್ನು ಪುನರಾವರ್ತಿಸಬಾರದು. ಎರಡು ಪಾತ್ರಗಳು ರಂಗದಲ್ಲಿರುವಾಗ ಒಬ್ಬನಿಗೆ ಕುಣಿತ ಚೆನ್ನಾಗಿ ಬಂದರೂ, ಇನ್ನೊಬ್ಬನಿಗೆ ಬಾರದಿದ್ದರೆ ಸಮತೋಲನ ಕಾಯ್ದುಕೊಳ್ಳಲು ಭಾಗವತನಿಗೆ ಸಾಧ್ಯವಾಗಬೇಕು. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನವಲ್ಲದ ಅದೊಂದು ಸಾಮುದಾಯಿಕ ಕಲೆ ಎಂಬ ಅರಿವಿರುವವನೇ ಒಳ್ಳೆಯ ಭಾಗವತನಾಗಲು ಸಾಧ್ಯ.

4. ಸಮನ್ವಯ ಸಾಧನೆ : ಯಕ್ಷಗಾನ ಮೇಳದಲ್ಲಿ ಅನೇಕ ಜನರಿರುತ್ತಾರೆ. ಅವರ ನಡುವೆ ವಿಭಿನ್ನ ಕಾರಣಗಳಿಂದಾಗಿ ಭಿನ್ನಾಭಿಪ್ರಾಯ ತಲೆದೋರುತ್ತಿರುತ್ತದೆ. ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಬೇಕಾದರೆ ಮೇಳದವರು ಯುದ್ಧಸ್ಫೂರ್ತಿಯಿಂದ ದುಡಿಯ ಬೇಕಾಗುತ್ತದೆ. ಅದಕ್ಕೆ ಭಾಗವತ ಸಮನ್ವಯ ಕಾರನಂತೆ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಭಾಗವತನ ಕೆಲಸ ಬಹಳ ದೊಡ್ಡದು.

ಕೋಷ್ಟಕ 3.2 ಭಾಗವತನ ಲಕ್ಷಣಗಳು

ಈವರೆಗಿನ ವಿಶ್ಲೇಷಣೆಯ ಆಧಾರದಲ್ಲಿ ಭಾಗವತನ ಗುಣಲಕ್ಷಣಗಳನ್ನು ಹೀಗೆ ಕ್ರೋಢೀಕರಿಸಬಹುದು:

ಭಾಗವತನಲ್ಲಿ ನಾಯಕತ್ವದ ಗುಣವಿರಬೇಕು.

ಆತನಿಗೆ ಸಂಗೀತ, ರಾಗ, ತಾಳ, ಲಯ, ನಾಟ್ಯಜ್ಞಾನವಿರಬೇಕು.

ಆತನಿಗೆ ಚೆಂಡೆಮದ್ದಳೆ ಜ್ಞಾನವಿರಬೇಕು.

ಆತನಿಗೆ ಪ್ರಸಂಗ ಜ್ಞಾನದೊಡನೆ ಖಚಿತ ರಂಗ ಮಾಹಿತಿ ಇರಬೇಕು.

ಅವನ ಸ್ವರ ಸುಶ್ರಾವ್ಯವಾಗಿದ್ದು ಸ್ಪಷ್ಟವಾಗಿ ಕೇಳಿಸುವಂತಿರಬೇಕು.

ರಸಜ್ಞಾನದೊಡನೆ ಆತನಲ್ಲಿ ಅನ್ವಯಿಕ ಗುಣವಿರಬೇಕು.

ಆತನಲ್ಲಿ ಸಮಯ ಪ್ರಜ್ಞೆ ಮತ್ತು ಸಮಚಿತ್ತತ್ವ ಇರಬೇಕು.

ಯಕ್ಷಗಾನದ ಮಟ್ಟಿಗೆ ಅವನು ಸರ್ವಜ್ಞನಾಗಿರಬೇಕು.

ಸಂಪ್ರದಾಯ ಬದ್ಧತೆಯೊಡನೆ ಆತನಲ್ಲಿ ಆವಿಷ್ಕಾರಿಕ ಗುಣವಿರಬೇಕು.

ಆತನಲ್ಲಿ ಸಂದರ್ಭಶೀಲತೆ ಮತ್ತು ಕಾಲಬದ್ಧತೆ ಇರಬೇಕು.

ಆತನಿಗೆ ಪೂರ್ವ ರಂಗದ ಖಚಿತ ಜ್ಞಾನವಿರಬೇಕು.

ಆತನಲ್ಲಿ ಸಮನ್ವಯಕಾರನ ಗುಣವಿರಬೇಕು.

ಆತ ರಾಜಕೀಯ, ಜಾತಿಮತ, ಕೋಮು ಭಾವಗಳಿಂದ ಮುಕ್ತನಾಗಿರಬೇಕು.

ಎಲ್ಲಾ ಕಲಾವಿದರನ್ನು ಅವನು ಸಮಾನವಾಗಿ ಕಾಣಬೇಕು.

ಆತನಿಗೆ ಕಲಾವಿದರ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರಬೇಕು.

ಆತನಲ್ಲಿ ಸಾಕಷ್ಟು ವ್ಯವಹಾರ ಜ್ಞಾನವಿರಬೇಕು.

ಅವನು ಕಲಾವಿದರ ಆರ್ಥಿಕಸಾಮಾಜಿಕ ಶೋಷಣೆಯಾಗದಂತೆ ನೋಡಿಕೊಳ್ಳಬೇಕು.

ಆತನಲ್ಲಿ ಯಾವುದೇ ದುಶ್ಚಟಗಳಿರಬಾರದು.

ಕಡತೋಕಾ ಮಂಜುನಾಥ ಭಾಗವತರ ಪ್ರಕಾರ ‘ಭಾಗವತನಿಗೆ ಯಕ್ಷಗಾನದ ಹಾಡುಗಾರಿಕೆಗೆ ಒಪ್ಪುವ ಸತ್ತ್ವಯುತ ಕಂಠ, ಸುದೃಢ ಆರೋಗ್ಯಗಳೊಂದಿಗೆ, ಸ್ವರಶುದ್ಧಿ, ರಾಗಶುದ್ಧಿಗಾಗಿ ಶಾಸ್ತ್ರೀಯ ಸಂಗೀತದ ಸಾಮಾನ್ಯ ಪರಿಚಯವಾದರೂ ಬೇಕು. ಕನ್ನಡ ಭಾಷೆಯ ಮೇಲೆ ಒಳ್ಳೆಯ ಹಿಡಿತವಿರಬೇಕು. ಭಾರತ, ಭಾಗವತಾದಿಗಳ ಜ್ಞಾನ ಇದ್ದು, ಅವುಗಳನ್ನು ರಂಗದಲ್ಲಿ ತರುವ ತಂತ್ರದ ಅರಿವು, ಅವುಗಳಲ್ಲಿ ಬರುವ ಸನ್ನಿವೇಶಗಳನ್ನು, ಪಾತ್ರಗಳನ್ನು ಅರ್ಥವಿಸುವ ಪ್ರತಿಭೆ, ಪುರಾಣಲೋಕವನ್ನು ಒಳಹೊಕ್ಕು ನೋಡುವ ದೃಷ್ಟಿ ಅವಶ್ಯ. ನಾಟಕಶಾಸ್ತ್ರ, ಅಲಂಕಾರಶಾಸ್ತ್ರ, ವ್ಯಾಕರಣಗಳನ್ನು ತಕ್ಕಷ್ಟು ಮಟ್ಟಿಗಾದರೂ ಭಾಗವತ ಅಭ್ಯಸಿಸುವುದು ಸೂಕ್ತ.[ ಯಕ್ಷಗಾನ ಮಕರಂದ, 1980, ಪುಟ 212]

ಯಕ್ಷಗಾನ ಭಾಗವತಿಕೆ ಒಂದು ವಿಶಿಷ್ಟ ಕಲೆ. ಅದು ಹೇಗಿರಬೇಕೆಂದು ಎಂ. ರಾಜಗೋಪಾಲಾಚಾರ್ಯರು ಸೂಚಿಸಿದ್ದಾರೆ:

ಹೆಚ್ಚು ಸಂಗತಿಗಳಿರಬಾರದು.

ಸಾಮಾನ್ಯವಾದ ರಕ್ತಿ ರಾಗಗಳೇ ಇರಬೇಕು

ಸರಳವಾದ ತಾಳಲಯಗಳಿರಬೇಕು

ಸಾಹಿತ್ಯದ ಅಕರಗಳನ್ನು ರಾಗಕ್ಕಾಗಿ ಎಳೆಯಕೂಡದು

ಅರ್ಥ ಕೆಡದಂತೆ ಹಾಡಬೇಕು

ಎತ್ತುಗಡೆಯಲ್ಲೇ ಭಾವವ್ಯಂಜಕವಾಗುವಂತಹ ರಾಗಸಂಚಾರವಿರಬೇಕು.

ಹಾಡು, ಶ್ರುತಿ ಬಿಡದೆ ಮಧ್ಯತಾರಸ್ಥಾಯಿಗಳಲ್ಲಿ ಮಿತವಾಗಿರಬೇಕು.

‘ಯಕ್ಷಗಾನ ಪ್ರಸಂಗಗಳನ್ನು ಅಲ್ಲಿ ಬಳಸಿದ ಛಂದಸ್ಸುಗಳಲ್ಲೇ ಹಾಡಬೇಕೆಂದಿಲ್ಲ. ಆದರೆ ಛಂದಸ್ಸಿನ ಪರಿಚಯದಿಂದ ಹಾಡಿಕೆಯಲ್ಲಿ ಒಂದು ಬಿಗು, ಸೊಗಸು ಉಂಟಾಗುತ್ತದೆ. ಅಲ್ಲದೆ ಪ್ರಸಂಗದ ಪದ್ಯಗಳು ಕೆಲವೊಮ್ಮೆ ತಾಳಕ್ಕೆ ಬಾರದಿದ್ದಾಗ ಅಕರಗಳನ್ನು ಸೇರಿಸಿಯೋ, ತೇಲಿಸಿಯೋ ಹಾಡಬೇಕಾದ ಸಂದರ್ಭವಿರುತ್ತದೆ. ಅಲ್ಲಿಯೂ ಛಂದಸ್ಸಿನ ಜ್ಞಾನ ನೆರವಾಗ ಬಹುದು. ಈ ದೃಷ್ಟಿಯಿಂದ ಯಕ್ಷಗಾನದ ನಿಜವಾದ ಧಾಟಿಯನ್ನು ಛಂದಸ್ಸಿನ ಮೂಲಕ ಕಂಡುಹಿಡಿದು ಅದಕ್ಕೆ ತಕ್ಕ ರಾಗವನ್ನು ಬಳಸಿ ಹಾಡುವುದರಿಂದ ಪರಿಣಾಮ ಇನ್ನೂ ಹೆಚ್ಚಾಗಬಹುದೆಂದು ಕಾಣುತ್ತದೆ.’ [ಯಕ್ಷಗಾನ ಮಕರಂದ, 1980, ಪುಟ 87]

ಭಾಗವತನ ಲಯವಾದ್ಯಕ್ಕೆ ‘ತಾಳ’ ಎಂದು ಹೆಸರು. ಬಡಗುತಿಟ್ಟಿನವರು ಸಣ್ಣ ಚಕ್ರತಾಳವನ್ನು ‘ತಾಳ’ ಸಾಧನವಾಗಿ ಬಳಸುತ್ತಾರೆ. ತೆಂಕುತಿಟ್ಟಿನವರು ಸಣ್ಣ ಜಾಗಟೆಯನ್ನು ಬಳಕೆ ಮಾಡುತ್ತಾರೆ. ಲಯವಾದ್ಯವಾಗಿ ಬಳಕೆಯಾಗುವ ತಾಳವು ಲೋಹದಿಂದ ಮಾಡಲ್ಪಟ್ಟಿ ರುತ್ತದೆ ಮತ್ತು ಅದು ಶ್ರುತಿ ಬದ್ಧವಾಗಿರುತ್ತದೆ. ತೆಂಕುತಿಟ್ಟಿನಲ್ಲಿ ಜಾಗಟೆ ಕೋಲಾಗಿ ಜಿಂಕೆ ಅಥವಾ ರಾಸುಗಳ ಕೋಡುಗಳನ್ನು ಬಳಸುವ ಪರಿಪಾಠವಿತ್ತು. ಈಗ ಮರದ ಕೋಲು ಗಳನ್ನೇ ಬಳಸಲಾಗುತ್ತದೆ.

ತೆಂಕು ಮತ್ತು ಬಡಗು ತಿಟ್ಟಿನ ಕೆಲವು ಪ್ರಸಿದ್ಧ ಭಾಗವತರುಗಳು ಇವರು :

ದೊಡ್ಡ ಬಲಿಪ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು. ತಲೆಂಗಳ ಶಂಭಟ್ಟರು, ಇರಾ ಗೋಪಾಲಕೃಷ್ಣ ಭಾಗವತರು, ಸರವು ಕೃಷ್ಣಭಟ್ಟರು, ಸಣ್ಣ ಬಲಿಪ ಭಾಗವತು, ದಾಮೋದರ ಮಂಡೆಚ್ಚರು ಪುತ್ತಿಗೆ ರಾಫೆರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್ಟ, ದಿನೇಶ ಅಮ್ಮಣ್ಣಾಯ, ದಾಸರಬೈಲು ಚಿನಿಯ ನಾಯ್ಕ ಮುಂತಾದವರು ಇವರೆಲ್ಲಾ ತೆಂಕುತಿಟ್ಟು ಸಂಪ್ರದಾಯದವರು. ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್‌, ಮರವಂತೆ ನರಸಿಂಹದಾಸ್‌, ಗುಂಡ್ಮಿ ರಾಮಚಂದ್ರ ನಾವಡ, ನಾರಣಪ್ಪ ಉಪ್ಪೂರು, ನೆಬ್ಬೂರು ನಾರಾಯಣ ಭಾಗವತರು, ನೀಲಾವರ ರಾಮಕೃಷ್ಣಯ್ಯ, ಗುಂಡ್ಮಿ ಕಾಳಿಂಗ ನಾವಡ, ಕೆರೆಮನೆ ಮಹಾಬಲ ಹೆಗ್ಡೆಇವರೆಲ್ಲಾ ಬಡಗು ತಿಟ್ಟು ಸಂಪ್ರದಾಯದವರು. ಕಡತೋಕಾ ಮಂಜುನಾಥ ಭಾಗವತರು ತೆಂಕು ಬಡಗು ಸವ್ಯಸಾಚಿ.

ಸಂಗೀತಗಾರ ಮತ್ತು ಶ್ರುತಿಕಾರ : ಪೂರ್ವರಂಗದ ಹಾಡುಗಳನ್ನು ಹಾಡುವ ಭಾಗವತ ನನ್ನು ಸಂಗೀತಗಾರ ಎಂದು ಕರೆಯುವ ರೂಢಿಯಿದೆ. ಸಭಾಲಕ್ಷಣವನ್ನು ಹಾಡಬಲ್ಲವನೇ ಸಂಗೀತಗಾರ. ಆತ ನಿಪುಣನಾದರೆ ಕೆಲವು ಪದ್ಯಗಳನ್ನು ಹಾಡುವ ಅವಕಾಶ ಅವನಿಗೆ ಸಿಗುತ್ತದೆ. ಸಂಗೀತಗಾರನನ್ನು ಉಪ ಭಾಗವತ ಎಂದು ಕರೆಯಬಹುದು. ಪ್ರಧಾನ ಭಾಗವತ ರಂಗದ ಪಡಿಮಂಚವೇರಿ ಕುಳಿತ ಬಳಿಕ ಸಂಗೀತಗಾರ ಚಕ್ರತಾಳ ಬಾರಿಸುತ್ತಾನೆ. ಬಡಗು ತಿಟ್ಟಿನಲ್ಲಾದರೆ ಭಾಗವತರ ಹತ್ತಿರವೇ ನಿಂತು ಭಾಗವತಿಕೆ ಮತ್ತು ರಂಗಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ಚಕ್ರತಾಳ ಬಾರಿಸುವುದೂ ಒಂದು ಕಲೆಯೇ. ತಾಳ ಮತ್ತು ಲಯದ ಖಚಿತ ಜ್ಞಾನ ಇಲ್ಲದವರು ಚಕ್ರತಾಳ ಬಾರಿಸುವಂತಿಲ್ಲ, ಬಾರಿಸಕೂಡದು.

ಭಾಗವತರು ಹಾಡಿಗೆ ಆಧಾರವಾಗಿ ರಾಗದಸ್ತರ ಉಳಿಸಿಕೊಳ್ಳಲು ಶ್ರುತಿಯನ್ನು ಬಳಸುತ್ತಾರೆ. ಶ್ರುತಿಯ ಸಾಧನವಾಗಿ ಬಹುತೇಕವಾಗಿ ಹಾರ್ಮೋನಿಯಂ ಬಳಕೆಯಾಗುತ್ತದೆ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಶ್ರುತಿಪೆಟ್ಟಿಗೆ ಬಳಕೆಗೆ ಬಂದಿದೆ. ಇದರಲ್ಲಿ ಸ್ವರಗಳ ಆಯ್ಕೆಗೆ ಅಪರಿಮಿತ ಅವಕಾಶವಿದೆ. ಇದನ್ನು ಒಯ್ಯುವುದೂ ಕೂಡಾ ಸುಲಭ. ಭಾಗವತನೇ ಇದನ್ನು ನಿಯಂತ್ರಿಸುವುದರಿಂದ ಪ್ರತ್ಯೇಕ ಶ್ರುತಿಕಾರನ ಅಗತ್ಯವಿರುವುದಿಲ್ಲ.

3.3 ಯಕ್ಷಗಾನದ ಚೆಂಡೆ ಮತ್ತು ಚೆಂಡೆವಾದಕ

ವೀರರಸ ಪೋಷಣೆಗೆ ಪೂರಕವಾದ ಮರದ ಉದ್ದನೆಯ ಕಳಸಿಗೆಯಿಂದ ಮಾಡಿದ, ಚರ್ಮದ ಮುಚ್ಚಿಗೆಯ ಮತ್ತು ಬಳ್ಳಿಗಳಿಂದ ಆವೃತ್ತವಾದ ಒಂದು ಲಯವಾದ್ಯವೇ ಚೆಂಡೆ. ಅದನ್ನು ಬಾರಿಸುವವನನ್ನು ಚೆಂಡೆವಾದಕ ಎಂದು ಕರೆಯಲಾಗುತ್ತದೆ. ಆದರೆ ಯಕ್ಷಗಾನ ದಲ್ಲಿ ಚೆಂಡೆಮದ್ದಲೆವಾದಕನನ್ನು ಮದ್ದಳೆಗಾರ ಎಂದೇ ಗುರುತಿಸಲಾಗುತ್ತದೆ. ಯಕ್ಷಗಾನ ದಲ್ಲಿ ಚೆಂಡೆಗಿಂತಲೂ ಮದ್ದಳೆಗೆ ಪ್ರಾಶಸ್ತ್ಯ ಎಂಬುದನ್ನು ಇದು ಸೂಚಿಸುತ್ತದೆ.

ಬಯಲಾಟಗಳು ರಾತ್ರಿಯಿಡೀ ನಡೆಯುವ ಪ್ರದರ್ಶನಗಳು. ಪ್ರದರ್ಶನದುದ್ದಕ್ಕೂ ಬರುವ ಯುದ್ಧ, ಬೇಟೆ, ಒಡ್ಡೋಲಗ, ಪ್ರವೇಶ ಇತ್ಯಾದಿ ಸಂದರ್ಭಗಳಲ್ಲಿ ಚೆಂಡೆ ಬಳಕೆಯಾಗುತ್ತದೆ. ಚೆಂಡೆ ನಿದ್ದೆಯನ್ನು ಹೊಡೆದೋಡಿಸುವ, ನೃತ್ಯ ಗೊತ್ತಿಲ್ಲದವನನ್ನೂ ಕುಣಿಯಲು ಪ್ರಚೋದಿಸುವ ಒಂದು ಅದ್ಭುತ ಲಯವಾದ್ಯ.

ಕೋಷ್ಟಕ 3.3 ಚೆಂಡೆ ವಾದಕನ ಪಾತ್ರ

ಯಕ್ಷಗಾನದಲ್ಲಿ ಚೆಂಡೆವಾದಕನಿಗೆ ವಿಶಿಷ್ಟ ಸ್ಥಾನವಿದೆ. ಆತನ ಪಾತ್ರವನ್ನು ಹೀಗೆ ವಿವರಿಸಬಹುದು :

ಪಾತ್ರಗಳ ಪ್ರವೇಶ ಮತ್ತು ನಿರ್ಗಮನವನ್ನು ಪರಿಣಾಮಕಾರಿಯನ್ನಾಗಿಸುವುದು.

ಒಡ್ಡೋಲಗ, ಬೇಟೆ ಮತ್ತು ಯುದ್ಧ ಸಂದರ್ಭಗಳನ್ನು ಅರ್ಥಪೂರ್ಣವಾಗಿಸುವುದು.

ರಕ್ಕಸವೇಷ, ಹೆಣ್ಣು ಬಣ್ಣ, ವರಾಹ, ನರಸಿಂಹ ಇತ್ಯಾದಿ ವಿಶಿಷ್ಟ ವೇಷಗಳಿಗೆ ಭಯಾನಕತೆಯನ್ನು ಕಲ್ಪಿಸುವುದು.

ರುದ್ರ, ವೀರ ಮತ್ತು ಭೀಭತ್ಸ ರಸಾಭಿವ್ಯಕ್ತಿಗೆ ಸಹಕರಿಸುವುದು.

ಪ್ರೇಕಕರನ್ನು ಆಕರ್ಷಿಸುವುದು.

ಹಿಂದೆ ಪ್ರಚಾರ ಮಾಧ್ಯಮಗಳ ಭರಾಟೆ ಇರದಿದ್ದ ಕಾಲದಲ್ಲಿ ಚೆಂಡೆ ಪ್ರಚಾರ ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತಿತ್ತು. ಯಕ್ಷಗಾನ ಬಯಲಾಟವಿರುವ ಊರಲ್ಲಿ ಎತ್ತರದ ಗುಡ್ಡವೇರಿ ಚೆಂಡೆ ಬಾರಿಸಿ ಜನರನ್ನು ಆಕರ್ಷಿಸಲಾಗುತ್ತಿತ್ತು. ಅದಕ್ಕೆ ‘ಕೇಳಿ ಬಡಿಯು ವುದು’ ಎಂದು ಹೆಸರು. ಈಗ ಪ್ರಸಂಗದ ಆರಂಭಕ್ಕೆ ಮುನ್ನ ಸ್ವಲ್ಪ ಹೊತ್ತು ಚೆಂಡೆ ಬಡಿಯುವುದಿದೆ. ಅದನ್ನು ‘ಪೀಠಿಕೆ ಬಾರಿಸುವುದು’ ಎಂದು ಕರೆಯಲಾಗುತ್ತದೆ.

ತೆಂಕುತಿಟ್ಟಿನಲ್ಲಿ ಚೆಂಡೆವಾದಕ ಪ್ರವೇಶ ದ್ವಾರದಲ್ಲಿ, ಭಾಗವತನ ಎಡಪಾರ್ಶ್ವದಲ್ಲಿ ನಿಂತಿರುತ್ತಾನೆ. ಬಡಗು ತಿಟ್ಟಿನ ಚೆಂಡೆವಾದಕ ಭಾಗವತನ ಬಲ ಪಾರ್ಶ್ವದಲ್ಲಿ ಕುಳಿತಿರುತ್ತಾನೆ. ಚೆಂಡೆವಾದಕ ಬಹುತೇಕವಾಗಿ ನುರಿತ ಮದ್ದಳೆ ವಾದಕನೂ ಆಗಿರುತ್ತಾನೆ. ಅವನಿಗೆ ಪ್ರಸಂಗ ಜ್ಞಾನ, ರಂಗ ಮಾಹಿತಿ ಮತ್ತು ಕಲಾವಿದರ ಶಕ್ತಿ ಹಾಗೂ ದೌರ್ಬಲ್ಯಗಳ ಅರಿವಿದ್ದರೆ ಯಕ್ಷಗಾನ ಪ್ರದರ್ಶನ ಯಶಸ್ಸನ್ನು ಕಾಣುತ್ತದೆ.

ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನ ಚೆಂಡೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಚೆಂಡೆ ತಯಾರಿಸಲು ಬಹುತೇಕವಾಗಿ ಹಲಸು ಮತ್ತು ಕಾಚು ಮರಗಳನ್ನು ಬಳಸುತ್ತಾರೆ. ತೆಂಗಿನ ಮರದ ಕಾಂಡವನ್ನೂ ಬಳಸುವುದಿದೆ. ಚೆಂಡೆಯ ಮುಚ್ಚಿಗೆಗೆ ದನದ ಕರುವಿನ ಅಳ್ಳೆಯ ಚರ್ಮ ಬಳಸಲಾಗುತ್ತದೆ.

ಚೆಂಡೆಯ ಬಗ್ಗೆ ರಾಘವ ನಂಬಿಯಾರರ ವಿವರಣೆ ಹೀಗಿದೆ ; ‘ತೆಂಕು ತಿಟ್ಟಿನ ಚೆಂಡೆಯ ಕಳಸಿಗೆ ಉದ್ದ ಹದಿನೇಳುವರೆ ಅಡಿ. ಎರಡೂ ಮುಖಗಳ ಹೊರವ್ಯಾಸ ಒಂಬತ್ತೂವರೆ ಅಡಿ. ಈ ಕಳಸಿಗೆ ಬಿಳಿ ನಾಲ್ಕು ಶ್ರುತಿಗೆ ಉತ್ತಮವಾಗಿ ಒದಗುತ್ತದೆ. ಬಾಯ ಹೊರವ್ಯಾಸ ಒಂಬತ್ತು ಮುಕ್ಕಾಲು ಅಡಿ ಇದ್ದರೆ ಕಪ್ಪು ಮೂರು, ಬಿಳಿ ಐದು ಶ್ರುತಿಗಳಿಗೆ ಒದಗುತ್ತದೆ. ಚೆಂಡೆ ಒಂದು ಮುಖದಲ್ಲಿ ಮಾತ್ರ ನಾದ ನೀಡುವ ವಾದ್ಯ. ಇನ್ನೊಂದು ಮುಖ ನಾದ ಎಬ್ಬಿಸಿಕೊಡಲು ಆಧಾರ ನೀಡುತ್ತದೆ ಅಷ್ಟೆ. ಮೇಲೆ ನಿಲ್ಲುವ ಮುಖ ಬಾರಿಸಲು ಇರುವಂಥದ್ದು. ಕೆಳಗಿನ ಮುಚ್ಚಿಗೆಗೆ ಹೊಡೆದರೆ ಬೆನ್ನಿಗೆ ಹೊಡೆದಂತೆ ದಬ್‌, ದಬ್‌ ಸದ್ದು ಬರುತ್ತದೆ. ತೆಯ್ಯಂ ಆರಾಧನೆ ಹಾಗೂ ಕೇರಳದ ದೇವಸ್ಥಾನಗಳು ಪೂಜೆ ವೇಳೆ ಬಳಸುವ ಚೆಂಡೆಗೆ ಒತ್ತು ನೀಡಲು ಕೆಳ ಮುಚ್ಚಿಗೆಗೆ ಬಡಿಯುವುದುಂಟು. [ ಹಿಮ್ಮೇಳ, ಪುಟ 156]

ಬಡಗು ತಿಟ್ಟಿನ ಚೆಂಡೆಯ ಎತ್ತರ ಹದಿನೇಳು ಮುಕ್ಕಾಲು ಇಂಚು. ಮುಚ್ಚಿಗೆಯ ಹೊರವ್ಯಾಸ ಎಂಟೂಕಾಲು ಇಂಚು. ಹಿಂದೆ ಬಡಗು ತಿಟ್ಟಿನಲ್ಲಿ ಚೆಂಡೆಗೆಂದೇ ಪ್ರತ್ಯೇಕ ವ್ಯಕ್ತಿ ಇರಲಿಲ್ಲ. ರಾಘವ ನಂಬಿಯಾರರು ದಾಖಲಿಸುವಂತೆ ‘ಚೆಂಡೆಯನ್ನು ತೆಂಕುತಿಟ್ಟಿನಲ್ಲಿ ಮದ್ದಳೆಗಾರ ಬಾರಿಸುವುದಾದರೆ, ಬಡಗು ತಿಟ್ಟಿನಲ್ಲಿ ಮದ್ದಳೆಗಾರ ಚೆಂಡೆ ಬಾರಿಸಲಾರ. ಹಾಸ್ಯಗಾರ ಮತ್ತು ಸಖೀ ವೇಷದವರು ಚೆಂಡೆ ಬಾರಿಸಬೇಕು. ಚೆಂಡೆ ಬಾರಿಸಲು ಗೊತ್ತಿಲ್ಲ ವಾದರೆ ಸಖಿ ವೇಷವಾಗಿ ಮೇಳಕ್ಕೆ ಸೇರ್ಪಡೆ ಆಗುತ್ತಿರಲಿಲ್ಲ. ಹಾಸ್ಯಗಾರ ಕುಣಿಯ ಬೇಕಾದಾಗ ಸಖೀ ವೇಷದವನೂ, ಹಾಸ್ಯಗಾರನ ವೇಷ ಇಲ್ಲದಿರುವಾಗ ಹಾಸ್ಯಗಾರನೂ ಚೆಂಡೆ ಬಾರಿಸುವುದು ಪದ್ಧತಿ. ಕೋಡಂಗಿ ಸಹಿತ ಶಿಕ್ಷಾರ್ಥಿ ಸಖಿ ವೇಷದವರು ಕೂಡದಿ ಕಲಾವಿದರಿಗೆ ಚೆಂಡೆ ಸಹಿತ ಎಲ್ಲಕ್ಕೂ ಮೇಳದಲ್ಲಿ ಹಾಸ್ಯಗಾರನೇ ಗುರು. ಹಾಸ್ಯಗಾರ ಮೇಳದ ಸರ್ವ ಅಂಗಗಳ ನಿಷ್ಣಾತ ಎಂದು ಅರ್ಥ.[ ಅದೇ ಪುಟ 158]

ನಂಬಿಯಾರರ ಪ್ರಕಾರ ಬಡಗು ತಿಟ್ಟಿನಲ್ಲಿ ಚೆಂಡೆಗೆ ಮಹತ್ವ ಬಂದದ್ದು 1965ರ ಬಳಿಕ ಕೆಮ್ಮಣ್ಣು ಆನಂದರಾಯರಿಂದಾಗಿ. ಅವರು ಚೆಂಡೆ ವಾದನಕ್ಕೆ ಇಂಪು ಮತ್ತು ಲಾಲಿತ್ಯವನ್ನು ತಂದುಕೊಟ್ಟ ಬಳಿಕ ಹಿಂದೆ ಒಡ್ಡೋಲಗ, ಬೇಟೆ, ಯುದ್ಧ, ಪ್ರಯಾಣಗಳಿಗೆ ಮಾತ್ರ ಬಳಕೆಯಾಗುತ್ತಿದ್ದ ಚೆಂಡೆ, ಜಲಕೇಳಿ, ಪ್ರಣಯ, ಹಾಸ್ಯ, ಶೃಂಗಾರ ಇತ್ಯಾದಿ ರಸಗಳಿಗೂ ಬಳಕೆಯಾಗತೊಡಗಿತು. ತೆಂಕುತಿಟ್ಟಿನಿಂದಾಗಿ ಬಡಗಿನಲ್ಲೂ ಚೆಂಡೆ ವಾದನಕ್ಕೆ ಮಹತ್ವ ಬಂತು. ಬಡಗು ತಿಟ್ಟಿನಿಂದಾಗಿ ತೆಂಕಿನಲ್ಲೂ ಚೆಂಡೆಯನ್ನು ಸೌಮ್ಮ ರಸಗಳಿಗೂ ಬಳಸುವ ಪರಿಪಾಠ ಆರಂಭವಾಯಿತು.

ತೆಂಕು ಮತ್ತು ಬಡಗಿನಲ್ಲಿ ಚೆಂಡೆ ಬಾರಿಸಲು ಬಳಸುವ ಕೋಲುಗಳು ಒಂದೇ ತೆರನಾಗಿಲ್ಲ.    ತೆಂಕುತಿಟ್ಟಿನಲ್ಲಿ ಬಲಗೈ ಕೋಲು ಸುಮಾರು ಹದಿಮೂರು ಇಂಚು ಉದ್ದದ ಖಡ್ಗದಂತೆ ಬಾಗಿದ ಆಕೃತಿಯಲ್ಲಿ ಇರುತ್ತದೆ. ಇದರ ಹಿಡಿಕೆಯ ವ್ಯಾಸ ಒಂದು ಇಂಚಿನಷ್ಟು ಇರುತ್ತದೆ. ಉರುಟಾಗಿರುವ ಈ ಕೋಲಿನ ತುದಿಯ ವ್ಯಾಸ ಮೂರರಿಂದ ನಾಲ್ಕು ನೂಲುಗಳಷ್ಟು ಇರುತ್ತದೆ. ಎಡಗೈ ಕೋಲಿನ ಉದ್ದ ಒಂಬತ್ತು ಇಂಚುಗಳಷ್ಟು ಇರುತ್ತದೆ.

ಎಡಕೋಲಿನ ತುದಿ ಬಲಗೋಲಿನ ತುದಿಯಷ್ಟೇ ವ್ಯಾಸ ಹೊಂದಿರುತ್ತದೆ. ಎಡಗೋಲಿನ ಹಿಡಿಯ ವ್ಯಾಸ ಸುಮಾರು ಮುಕ್ಕಾಲು ಇಂಚು. ಎರಡೂ ಕೋಲುಗಳ ತುದಿ ಒಂದೇ ಆಕಾರಗಾತ್ರಗಳಲ್ಲಿ ಇರುತ್ತವೆ.[ ಹಿಮ್ಮೇಳ, ಪುಟ 162]

ತೆಂಕುತಿಟ್ಟಿನ ಚೆಂಡೆಕೋಲನ್ನು ಅಬ್ರಂಗಾಯಿಮರದ ಕೊಂಬೆ ಅಥವಾ ಬೇರಿನಿಂದ ಇಲ್ಲವೇ ದಾಸವಾಳದ ಗೆಲ್ಲಿನಿಂದ ತಯಾರಿಸುತ್ತಾರೆ. ಚೆಂಡೆ ಕೋಲಿನ ತುದಿಗೆ ಗಾಜಿನ ಚೂರನ್ನು ಕುಳ್ಳಿರಿಸಿದರೆ ವಿದ್ಯುತ್ತಿನ ಬೆಳಕಿಗೆ ಕಿಡಿಹಾರಿದ ಅನುಭವವಾಗುತ್ತದೆ.

‘ಸುಮಾರು ಹತ್ತರಿಂದ ಹನ್ನೊಂದುವರೆ ಇಂಚು ಉದ್ದದ, ತಲೆ ದಪ್ಪಗಿರುವ ನಾಗರಬೆತ್ತದ ಕೋಲುಗಳಿಂದ ಚೆಂಡೆಯನ್ನು ಬಾರಿಸುವುದು ಬಡಗು ತಿಟ್ಟಿನ ಪದ್ಧತಿ. ಕೋಲುಗಳನ್ನು ಕಿಸ್ಗಾರ ಕೇಪುಳದಿ ಗಿಡದ ದಪ್ಪಗಿನ ಗೆಲ್ಲುಗಳಿಂದಲೂ ಮಾಡುವುದುಂಟು. ಎರಡು ಕೋಲುಗಳದೂ ಒಂದೇ ಪ್ರಮಾಣದ ಗಾತ್ರ ಮತ್ತು ಆಕಾರ. ಕೋಲಿನ ದಪ್ಪಗಿನ ತಲೆಯಿಂದ ಚೆಂಡೆಯನ್ನು ಬಾರಿಸುತ್ತಾರೆ. ಸುಮಾರು ಅರುವತ್ತು ಡಿಗ್ರಿಯಲ್ಲಿ ಒಂದಕ್ಕೊಂದು ತಾಗದೆ ಕೋಲುಗಳು ಚೆಂಡೆಯ ಮೇಲೆ ಕುಣಿಯುತ್ತವೆ. ಕೋಲಿನ ಬಾರಿಸುವ ತಲೆಯಲ್ಲಿ ತೆಂಕುತಿಟ್ಟಿನ ಕೋಲುಗಳಿಗೆ ಮಾಡುವಂತೆ ಕುಳಿ ತೋಡಿ ಅದರಲ್ಲಿ ಕನ್ನಡಿ ಚೂರನ್ನು ಅಂಟಿಸಿ ಅಂದ ಬರಿಸುವ ಕುಶಲತೆಯನ್ನು ಬಡಗು ತಿಟ್ಟಿನ ಚೆಂಡೆ ವಾದಕರೂ ಮಾಡುತ್ತಾರೆ.[ ಹಿಮ್ಮೇಳ, ಪುಟ 163]

3.4 ಯಕ್ಷಗಾನದ ಮದ್ದಳೆ ಮತ್ತು ಮದ್ದಳೆಗಾರ

ಮದ್ದಳೆಯು ಚೆಂಡೆಯಂತೆ ಚರ್ಮವನ್ನು ಬಿಗಿದು ತಯಾರಿಸಿದ ಒಂದು ಲಯವಾದ್ಯ. ಮೂಡಲಪಾಯ ಯಕ್ಷಗಾನದಲ್ಲಿ ಚೆಂಡೆ ಇಲ್ಲ. ಆದರೆ ಮದ್ದಲೆ ಮೂಡಲಪಾಯ, ದೊಡ್ಡಾಟ, ಕಥಕ್ಕಳಿ, ಬಡಗು ತಿಟ್ಟು, ತೆಂಕುತಿಟ್ಟುಹೀಗೆ ಬಹುತೇಕ ಎಲ್ಲಾ ಕಲಾ ಪ್ರಕಾರ ಗಳಲ್ಲಿ ಬಳಕೆಯಲ್ಲಿದೆ. ಮದ್ದಳೆಯಿಲ್ಲದೆ ಯಕ್ಷಗಾನ ಪ್ರದರ್ಶನವಿಲ್ಲ. ಮದ್ದಳೆಯ ಬಲ ಭಾಗದ ‘ಛಾಪು’ ಹೆಸರಿನ ನಾದವು ಭಾಗವತನಿಗೆ ಶ್ರುತಿಯಂತೆ ಸಹಾಯಕವಾಗಿದೆ.

ಮದ್ದಳೆಯು ನವರಸಗಳಲ್ಲೂ ಬಳಕೆಯಾಗುವ ಹಿಮ್ಮೇಳ ಸಾಧನವಾಗಿದೆ. ವಿತಾಲದ ಪದ್ಯಗಳನ್ನು [ಉದಾ : ಭಾಮಿನಿ, ವಾರ್ಧಿಕ್ಯ, ಕಂದ, ದ್ವಿಪದಿ ಇತ್ಯಾದಿ] ಹೇಳುವಾಗ ಮಧ್ಯೆ ಮಧ್ಯೆಮದ್ದಳೆಯ ‘ಛಾಪು’ ಬೀಳಬೇಕೆಂಬ ಅಲಿಖಿತ ನಿಯಮವಿದೆ. ಮದ್ದಳೆಯ ನಡೆಗಳು ಶೃಂಗಾರ ರಸವನ್ನು ಅತ್ಯಂತ ಪರಿಣಾಮಕಾರಿಯನ್ನಾಗಿಸುತ್ತವೆ. ಸ್ತ್ರೀ ಪಾತ್ರಧಾರಿಯ ಯಶಸ್ಸು ಮದ್ದಳೆ ವಾದನ ವೈವಿಧ್ಯದಲ್ಲಿರುತ್ತದೆ.

ಮದ್ದಳೆಯ ಆಕೃತಿ ಹೇಗಿರಬೇಕೆಂದು ಸಭಾಲಕ್ಷಣ ಹೇಳುತ್ತದೆ :

ಮೃದಂಗೋ ರೂಕಕಾಂಗಶ್ಚ | ವರ್ತಲಾಕಾರ ಉನ್ನತಂ||

ಸೂರ್ಯಚಂದ್ರಾಕೃತೇ ಚರ್ಮ |ದ್ವಿಭಾಗೇ ಮಧ್ಯಕೇ ದೃಶಾ||

ಪುರುಷಾರ್ಧ ಪ್ರಮಾಣೇನ| ಕರ್ಣಕುಂಡಲ ಶೋಭಿತಃ||

ಮಣಿ ಹಸ್ತೇ ಸುವಿಸ್ತೀರ್ಣಃ| ಬತ್ತೀಸಾಲಯ ರಂಜಿತಃ ||

[ಸಭಾ ಲಕ್ಷಣ, ಪಾವಂಜೆ ಪ್ರತಿ, 1980, ಪುಟ 12]

ಕೋಷ್ಟಕ 3.4 ಮದ್ದಳೆಯ ಲಕ್ಷಣಗಳು

ಸಭಾಲಕ್ಷಣದ ಇವೆರಡು ಶ್ಲೋಕಗಳ ಆಧಾರದಲ್ಲಿ ಮದ್ದಳೆಯ ಲಕ್ಷಣಗಳನ್ನು ಹೀಗೆ ಪ್ರಸ್ತುತಪಡಿಸಬಹುದು.

ಅದು ಗಡುಸಾದ ರೂಕ್ಕದ ಅಂಗವುಳ್ಳದ್ದು.

ಅದರ ವರ್ತುಲಾಕಾರದ ನಡುಭಾಗ ಉನ್ನತವಾಗಿದೆ.

ಅದರ ಎರಡು ಮುಖಗಳು ಸೂರ್ಯ ಚಂದ್ರರ ಹಾಗೆ ವೃತ್ತಾಕಾರದಲ್ಲಿವೆ.

ಅದು ಪುರುಷಾರ್ಧ ಪ್ರಮಾಣದ್ದಾಗಿದೆ. ಎರಡೂವರೆ ಅಡಿ

ಮುಚ್ಚಿಗೆಯ ಚರ್ಮಗಳಲ್ಲಿ 32ಮನೆಗಳಿವೆ. ಬತ್ತೀ ಸಾಲಯ.

ಮದ್ದಳೆ ನಾದ ಹೊರಡಿಸಲು ಕರ್ಣ ಎಂಬ ಮಿಶ್ರಣವನ್ನು ಮುಚ್ಚಿಗೆಯ ಮಧ್ಯ ದಲ್ಲಿ ಹಾಕಲಾಗುತ್ತದೆ.

ಮದ್ದಳೆಯ ಅಂಚುಗಳ ಚರ್ಮದ ದಾರದ ಉಗುರಗಳಲ್ಲಿ ಕುಂಡಲದಂತಹ ಮಣಿಗಳಿರುತ್ತವೆ.

[ಆಧಾರ : ಹಿಮ್ಮೇಳ, ಪುಟ 142]

ಮದ್ದಳೆಯ ಪ್ರಮಾಣ ಈಗ ಬಹಳ ಕಡಿಮೆಯಾಗಿದೆ. ಕುಂಡಲಗಳನ್ನು ಇರಿಸುವ ಪರಿಪಾಠ ಈಗ ಇರುವುದಿಲ್ಲ. ಅದು ಬಿಟ್ಟರೆ ಸಭಾಲಕ್ಷಣ ಹೇಳುವ ಉಳಿದೆಲ್ಲಾ ವಿವರ ಗಳನ್ನು ಈಗಲೂ ಮದ್ದಳೆಯಲ್ಲಿ ಕಾಣಬಹುದು. ಮದ್ದಳೆಯ ಕಳಸಿಗೆಗೆ ಹೊನ್ನೆಮರ, ಖದಿರ, ಹಲಸು, ಕಕ್ಕೆ ಮರಗಳು ಬಳಕೆಯಾಗುತ್ತವೆ. ಮದ್ದಳೆಯ ಕಳಸಿಗೆಯನ್ನು ‘ಕುತ್ತಿ’ ಎಂದು ಕರೆಯಲಾಗುತ್ತದೆ. ಸಾಧಾರಣ ಒಂದೂವರೆ ವರ್ಷ ಪ್ರಾಯದ ದನದ ಎಳೆಹೆಣ್ಣು ಗರುವಿನ ಚರ್ಮ ಮುಚ್ಚಿಗೆಗೆ ಬಳಕೆಯಾಗುತ್ತದೆ. ಕಿಟ್ಟ ಕಮ್ಮಾರ ಶಾಲೆಯಲ್ಲಿ ಸಿಗುವ ಕಬ್ಬಿಣದ ಧೂಳು’, ಅನ್ನ ಮತ್ತು ಗುಲಗುಂಜಿ ಅಂಟು ಸೇರಿಸಿ ‘ಕರ್ಣ’ ಹಾಕಲಾಗುತ್ತದೆ. ಈಗ ರಾಕ್‌ ಫಾಸ್ಪೇಟನ್ನು ಕಿಟ್ಟವಾಗಿ ಬಳಸುವುದುಂಟು.’ಕರ್ಣ’ ಮದ್ದಲೆಯ ಮಧ್ಯದ ಕಪ್ಪು ವೃತ್ತಾಕಾರವಾಗಿದ್ದು ಅದು ನಾದ ವೈವಿಧ್ಯಕ್ಕೆ ಕಾರಣವಾಗಿರುತ್ತದೆ. ಮದ್ದಳೆಯ ‘ಬಲ’ದ ನಾದ ಚೆನ್ನಾಗಿ ಬರಬೇಕಾದರೆ ‘ಎಡ’ಕ್ಕೆ ಕರ್ಣದ ಬದಲು ‘ಬೋನ’ ಹಚ್ಚುವುದಿದೆ. ಚೆನ್ನಾಗಿ ಬೆಂದ ಬೆಳ್ತಿಗೆ ಅನ್ನಕ್ಕೆ ಬೂದಿಯನ್ನು ಸೇರಿಸಿ ಮಾಡುವ ಮಿಶ್ರಣವೇ ಬೋನ.

ಕೋಷ್ಟಕ 3. 5 ಮದ್ದಳೆ ವಾದಕನ ಪಾತ್ರ

ಮದ್ದಳೆ ವಾದಕನನ್ನು ಮದ್ಲೆಗಾರ ಎಂದು ಕರೆಯಲಾಗುತ್ತದೆ. ಅನುಭವದ ಆಧಾರ ದಲ್ಲಿ ಹಿರಿಯವನು ಇಡಿ ಮದ್ಲೆಗಾರನಾದರೆ ಕಿರಿಯವನು ಒತ್ತು ಮದ್ಲೆಗಾರನೆನಿಸುತ್ತಾನೆ. ಯಕ್ಷಗಾನದಲ್ಲಿ ಮದ್ದಳೆಗಾರನ ಪಾತ್ರ ಹೀಗಿದೆ :

ಮದ್ದಳೆಗಾರ ಹೊರಡಿಸುವ ನಾದದಿಂದ ಭಾಗವತನ ಕಂಠಶ್ರೀ ಸುಶ್ರಾವ್ಯವಾಗುತ್ತದೆ.

ಮದ್ದಳೆಗಾರ ಹಾಡಿನ ಲಯವನ್ನು ಸ್ಥರಪಡಿಸಿಕೊಡುತ್ತಾನೆ.

ಅವನು ವಿವಿಧ ಗತಿ ಭೇದಗಳಿಂದ ಕುಣಿತಕ್ಕೆ ಸ್ಫೂರ್ತಿ ಪ್ರೇರಣೆ ನೀಡುತ್ತಾನೆ.

ಭಾಗವತನ ಯಶಸ್ಸಿಗೆ ಮತ್ತು ಸೋಲಿಗೆ ಮದ್ದಳೆಗಾರ ಕಾರಣನಾಗುತ್ತಾನೆ.

ಪಾತ್ರಧಾರಿಯ ಯಶಸ್ಸಿಗೆ ಮದ್ದಳೆಗಾರ ಬಹುಮುಖ್ಯ ಕಾರಣನಾಗಿಬಿಡುತ್ತಾನೆ.

‘ಮೇಳದಲ್ಲಿ ಭಾಗವತನ ಅನಂತರದ ಸ್ಥಾನ ಮದ್ದಳೆಗಾರನಿಗೆ. ಮೇಳದಲ್ಲಿ ಭಾಗವತ ಬಲು ಮುಖ್ಯ ವ್ಯಕ್ತಿಯಾದರೆ, ಅವನಿಗೆ ಬಲು ಮುಖ್ಯನಾಗುವುದು ಮದ್ದಳೆಗಾರ. ನಿಜಕ್ಕಾದರೆ ಭಾಗವತ ಮತ್ತು ಮದ್ದಳೆಗಾರ ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಒಂದೇ ಯೋಗ್ಯತೆಯವರು. ಮದ್ದಳೆಗಾರನೆಂದರೆ ಉತ್ತಮ ಭಾಗವತನ ಯೋಗ್ಯತೆ ಉಳ್ಳವನೇ. ಭಾಗವತರಿಲ್ಲದಿದ್ದರೆ ಪ್ರಸಂಗದ ನಡೆಯನ್ನು ಹೇಳಿಕೊಡುವ ಯೋಗ್ಯತೆ ಇರುವುದು ಮದ್ದಳೆಗಾರನಿಗೆ. ಭಾಗವತನಂತೆ ಈತನಿಗೂ ಪ್ರಸಂಗಗಳೆಲ್ಲಾ ಕಂಠಸ್ಥ. ರಂಗಕ್ರಿಯೆಯನ್ನು ನಡೆಸುವ ಜವಾಬ್ದಾರಿ ಪೂರ್ತಿ ಮದ್ದಳೆಗಾರನದೇ.’ [ಹಿಮ್ಮೇಳ, ಪುಟ 98]

ಮದ್ದಳೆಗಾರನ ಗುಣ ಲಕ್ಷಣಗಳಿವು :

ತಾಳ, ಲಯ, ರಸ, ಭಾವ ಜ್ಞಾನ

ಸಂಪೂರ್ಣ ರಂಗಮಾಹಿತಿಗಳ ಅರಿವು

ಶಾಸ್ತ್ರೀಯ ಸಂಗೀತದ ಜ್ಞಾನ.

ಪ್ರಸಂಗಗಳ ಪ್ರಯೋಗ ಜ್ಞಾನ.

ಕಲಾವಿದನ ದೈಹಿಕ ಮತ್ತು ಮನೋಸ್ಥತಿಯ ಅರಿವು

ಭಾಗವತನನ್ನು ಮತ್ತು ಪಾತ್ರಧಾರಿಗಳನ್ನು ಉತ್ತೇಜಿಸುವ ಗುಣ.

ನಿರ್ದೇಶನ ಸಾಮರ್ಥ್ಯ.

ನೆಡ್ಲೆ ನರಸಿಂಹ ಭಟ್ಟ, ಕುದ್ರೆಕೋಡ್ಲು ರಾಮಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌, ಗೋಪಾಲ ಕೃಷ್ಣ ಕುರುಪ್‌, ದಿವಾಣ ಭೀಮಭಟ್‌, ಕಾಸರಗೋಡು ವೆಂಕಟ್ರಮಣ, ಪದ್ಯಾಣ ಶಂಕರ ನಾರಾಯಣ ಭಟ್‌ ಜನಾರ್ದನ ಮದ್ಲೆಗಾರ್‌, ಅಡೂರು ಗಣೇಶ ಮುಂತಾದವರು ತೆಂಕುತಿಟ್ಟಿನ ಪ್ರಸಿದ್ಧಿ ಮದ್ದಳೆಗಾರರು. ಹಿರಿಯಡಕ ಗೋಪಾಲರಾವ್‌, ಬಸವ ಗಾಣಿಗ, ದುರ್ಗಪ್ಪ ಗುಡಿಗಾರ್‌, ಮಹಾಬಲ ಕಾರಂತ, ಕರ್ಕಿ ಪ್ರಭಾಕರ ಭಂಡಾರಿ ಮೊದಲಾದವರು ಬಡಗು ತಿಟ್ಟಿನ ಖ್ಯಾತ ಮದ್ದಳೆಗಾರರು.

ಅಭ್ಯಾಸದ ಪ್ರಶ್ನೆಗಳು

1. ಹಿಮ್ಮೇಳ ಎಂದರೇನು?

2. ಯಕ್ಷಗಾನ ಭಾಗವತನಲ್ಲಿ ಇರಬೇಕಾದ ಆರು ಗುಣಗಳು ಯಾವುವು?

3. ಯಕ್ಷಗಾನ ಹಿಮ್ಮೇಳದ ಪರಿಕರಗಳು ಯಾವುವು?

4. ಯಕ್ಷಗಾನ ಭಾಗವತನ ಗುಣ ದೋಷಗಳಾವುವು?

5. ಯಕ್ಷಗಾನದಲ್ಲಿ ಭಾಗವತನ ಪಾತ್ರವೇನು?

6. ಭಾಗವತನ ಲಕ್ಷಣಗಳು ಯಾವುವು?

7. ಚೆಂಡೆ ಎಂದರೇನು? ಯಕ್ಷಗಾನದಲ್ಲಿ ಚೆಂಡೆ ವಾದಕನ ಪಾತ್ರವೇನು?

8. ಮದ್ದಳೆ ಎಂದರೇನು? ಅದರ ಲಕ್ಷಣಗಳಾವುವು?

9. ಮದ್ದಳೆಗಾರನ ಪಾತ್ರವನ್ನು ತಿಳಿಸಿ.

10. ಮದ್ದಳೆಗಾರನ ಗುಣಲಕ್ಷಣಗಳಾವುವು ?

ಕಠಿಣ ಪದಗಳು

ಎತ್ತುಗಡೆ = ಪದ್ಯವನ್ನು ತಾಳವನ್ನು ಎತ್ತುವ ಸ್ಥಾನ.

ಒತ್ತು ಮದ್ಲೆಗಾರ = ಪ್ರಧಾನ ಮದ್ಲೆಗಾರನ ಸಹಾಯಕ.

ಕರ್ಣ = ಮದ್ದಳೆಯ ಮುಚ್ಚಿಗೆಯ ಮಧ್ಯದ ಕಪ್ಪಾದ ವೃತ್ತಾ ಕಾರದ ಪದರ.

ಕೇಳಿ = ಜನರನ್ನು ಆಕರ್ಷಿಸಲು ಸಂಜೆ ಹೊತ್ತು ಎತ್ತರದ ಪ್ರದೇಶದಲ್ಲಿ ನಿಂತು ಚೆಂಡೆ ಬಾರಿಸುವುದು.

ಗಿರ್ಕಿ = ಧಿಗಿಣ. ಎತ್ತರಕ್ಕೆ ಹಾರುವುದು.

ತೆರೆ ಕಲಾಸ = ಪ್ರವೇಶ ಕಾಲದಲ್ಲಿ ತೆರೆಯನ್ನು ಬಳಸಿ ಮಾಡುವ ನೃತ್ಯ.

ಪಡಿಮಂಚ = ಹಿಂದೆ ಭಾಗವತರು ಮತ್ತು ಮದ್ದಳೆಗಾರರು ರಂಗದಲ್ಲಿ ಕುಳಿತುಕೊಳ್ಳಲು ಬಳಸುತ್ತಿದ್ದ ಪೀಠ.

ಪೀಠಿಕೆ = ಪ್ರಸಂಗಾರಂಭಕ್ಕೆ ಮೊದಲು ಚೆಂಡೆ ಬಾರಿಸುವುದು.

ಬಿಡ್ತಿಗೆ = ಪದ್ಯದ ಮೊದಲ ಚರಣ ಹಾಡಿದ ಬಳಿಕ ನೃತ್ಯಕ್ಕೆ ಕೊಡುವ ಅವಕಾಶ.

ಬೋನ = ಮದ್ದಳೆಯ ಎಡಭಾಗಕ್ಕೆ ಹಚ್ಚುವ ಮಿಶ್ರಣ.

ಮುಕ್ತಾಯ = ಪದ್ಯದ ಕೊನೆಯ ಬಳಿಕಿನ ಹಿಮ್ಮೇಳ.

ಲಯವಾದ್ಯ = ಬಾಯಿಯ ಬಳಕೆ ಬೇಕಿಲ್ಲದ ಚೆಂಡೆ, ಮದ್ದಳೆ ಇತ್ಯಾದಿಗಳು.

ಸಂಗೀತಕಾರ = ಸಭಾಲಕ್ಷಣದ ಹಾಡುಗಾರ.

ಸಭಾ ಕಲಾಸ = ದೇವೇಂದ್ರ, ಅರ್ಜುನ, ರಾಮ, ಶತ್ರುಘ್ನ ಮುಂತಾದ ಪೀಠಿಕೆ ವೇಷಗಳ ವಿಶಿಷ್ಟ ಪ್ರವೇಶ ನೃತ್ಯ.

ಸ್ವರವಾದ್ಯ = ಬಾಯಿಯ ಬಳಕೆ ಬೇಕಿರುವ ನಾಗಸ್ವರ, ಪುಂಗಿ, ಕೊಳಲು ಇತ್ಯಾದಿಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ
Next post ನೇತಾಜಿ ಮತ್ತು ರೋಮೇನ್ ರೋಲಾ*

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys