ಅಧ್ಯಾಪಕರಿಲ್ಲ, ಜಾಗ್ರತೆ!

ಅಧ್ಯಾಪಕರಿಲ್ಲ, ಜಾಗ್ರತೆ!

ಅಧ್ಯಾಪಕರನ್ನು ಕೇವಲ ಬಾಯಿಮಾತಿನಲ್ಲಲ್ಲದೆ ನಿಜವಾಗಿಯೂ ಗೌರವಿಸದ ಸಮಾಜದಲ್ಲಿ ಅಧ್ಯಾಪಕರ ಕೊರತೆ ತಲೆದೋರಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಭಾರತದ ಸದ್ಯದ ಸ್ಥಿತಿ ಅಂತೆಯೇ ಆಗಿದೆ. ಒಳ್ಳೆಯ ಅಧ್ಯಾಪಕರೇ ಇಲ್ಲ! ವಾಸ್ತವದಲ್ಲಿ ಇದೊಂದು ಜಾಗತಿಕ ಸಮಸ್ಯೆ. ಆದರೂ ಭಾರತೀಯರು ಅಧ್ಯಾಪಕರನ್ನು ಕೊಂಡಾಡುವಂತೆ ಬೇರೆ ಯಾವ ಸಮಾಜವೂ ಕೊಂಡಾಡುವುದಿಲ್ಲ. ಗುರುವನ್ನು ತಂದೆತಾಯಿಯರಿಗೂ ದೇವರಿಗೂ ಸಮಾನ ಎನ್ನುತ್ತೇವೆ. ಗುರುದೇವೋ ಮಹೇಶ್ವರಃ ಅಲ್ಲವೇ? ಆದರೆ ನಿಜಕ್ಕೂ ನಮಗೆ ಅಧ್ಯಾಪಕರೆಂದರೆ ಅಷ್ಟಕ್ಕಷ್ಟೆ. ಸಮಾಜದಲ್ಲಿ ಅಧ್ಯಾಪಕರಿಗಿರುವ ಸ್ಥಾನ ತಿಳಿಯಬೇಕಿದ್ದರೆ, ನಮ್ಮ ಯಾವುದೇ ಶಾಲೆಯ ಮಕ್ಕಳನ್ನೂ ಕೇಳಿದರೆ ಸಾಕು, ಮುಂದೇನಾಗುತ್ತೀಯಾ ಎಂದು. ಡಾಕ್ಟರ್, ಎಂಜಿನೀಯರ್, ಲಾಯರ್, ಎಂಜಿನ್ ಡ್ರೈವರ್ ಏನು ಬೇಕಾದರೂ ಮಕ್ಕಳು ಆಗಲು ತಯಾರಿರುತ್ತಾರೆ; ಆದರೆ ಒಬ್ಬನೇ ಒಬ್ಬ ಹುಡುಗ ಅಥವಾ ಹುಡುಗಿ ತಾನು ಮುಂದೆ ಅಧ್ಯಾಪಕನಾಗಬೇಕೆಂದಿದ್ದೇನೆ ಎಂದು ಹೇಳಿದರೆ ನನ್ನಾಣೆ! ಯಾಕೆಂದರೆ ಅಧ್ಯಾಪಕ ವೃತ್ತಿ ಅತ್ಯಂತ ಜೋಬದ್ರ ಕೆಲಸ ಎಂದಾಗಿಬಿಟ್ಟಿದೆ. ಅಥವಾ ಅದೊಂದು ವೃತ್ತಿಯೇ ಅಲ್ಲ; ಉಳಿದ ಯಾವ ಉದ್ಯೋಗವೂ ಸಿಗದವರು ಆಶ್ರಯಿಸಿಕೊಂಡಿರುವ ನೌಕರಿಯಷ್ಟೆ ಎಂಬ ಧೋರಣೆ ಮನೆಮಾಡಿದೆ. ಇದು ಕೇವಲ ಶಾಲೆಗಳಿಗೆ ಸಂಬಂಧಿಸಿದ ವಿಚಾರವೇ ಅಲ್ಲ, ಕಾಲೇಜು, ವಿಶ್ವವಿದ್ಯಾಲಯಗಳಿಗೂ ಸಂಬಂಧಿಸಿದ್ದು. ಇಂದು ನಮ್ಮಲ್ಲಿ ಅತ್ಯಂತ ಉನ್ನತಮಟ್ಟದ ವಿದ್ಯಾಸಂಸ್ಥೆಗಳನಿಸಿರುವ ಐ.ಐ.ಟಿ. ಹಾಗೂ ಐ.ಐ.ಎಮ್.ಗಳಲ್ಲೂ ಕಲಿಯುವ ವಿದ್ಯಾರ್ಥಿಗಳಿಗಿರುವಷ್ಟು ಗೌರವ ಅಲ್ಲಿ ಕಲಿಸುವವರಿಗಿಲ್ಲ! ಅಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ದೃಷ್ಟಿಯಲ್ಲೇ ತಮ್ಮ ಅಧ್ಯಾಪಕರು ಇನ್ನೇನೂ ಕೆಲಸ ಸಿಗದೆ ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದುಕೊಂಡಿರುವುದೇ ಹೆಚ್ಚು. ವಾಸ್ತವದಲ್ಲಿ ಕೂಡಾ, ಈ ಸಂಸ್ಥೆಗಳಲ್ಲಿನ ಅಧ್ಯಾಪಕರಿಗಿಂತ ಇಮ್ಮಡಿ ಮುಮ್ಮಡಿ ಸಂಬಳ ಹೊರಗೆ ಕಂಪೆನಿಗಳಲ್ಲಿ ತಮಗೆ ಸಿಗುವ ಭರವಸೆ ಇಲ್ಲಿನ ವಿದ್ಯಾರ್ಥಿಗಳಿಗಿದೆ. ಆದ್ದರಿಂದ ಇನ್ನೂ ಓದುಮುಗಿಸಿರದಿದ್ದರೂ ಈ ವಿದ್ಯಾರ್ಥಿಗಳು ತಾವು ತಮಗೆ ಕಲಿಸುವವರಿಗಿಂತ ದೊಡ್ಡವರು ಎಂಬ ರೀತಿಯಲ್ಲಿ ಓಡಾಡುತ್ತಾರೆ. ಸಂಬಳಕ್ಕೂ ಸಾಮಾಜಿಕ ಗೌರವಕ್ಕೂ ತಾಳಮೇಳ ಹಾಕಬಾರದು ಎಂದು ನಾವು ಉಪದೇಶಿಸಬಹುದು. ಆದರೆ ಇದು ಆದರ್ಶದ ವಿಚಾರ.

ಅಧ್ಯಾಪಕರಿಗೆ ಸಂಬಳ ಕಡಿಮೆಯೆನ್ನುವುದು ಒಂದು ಕಾರಣವಾದರೆ ಈ ವೃತ್ತಿ ಸಂಪೂರ್ಣವಾಗಿ ನಿಷ್ಪ್ರಭವಾಗಿರುವುದು ನಮ್ಮ ಯುವ ಜನತೆಯನ್ನು ಇದರಿಂದ ವಿಮುಖವಾಗಿಸುವುದಕ್ಕೆ ಇನ್ನೊಂದು ಕಾರಣ. ವೈದ್ಯಕೀಯ ಮತ್ತು ಎಂಜಿನೀಯರಿಂಗ್ ಯಾವತ್ತೂ ನಮ್ಮ ಯುವಕರಿಗೆ ಮೊದಲ ಆಕರ್ಷಣೆ. ಇವನ್ನು ಒತ್ತಟ್ಟಗಿರಿಸಿದರೆ, ಒಂದು ಕಾಲದಲ್ಲಿ ಬ್ಯಾಂಕಿಂಗ್ ಬಹಳ ಆಕರ್ಷಣೀಯವಾದ ಆಯ್ಕೆಯೆನಿಸಿತ್ತು. ನಂತರದ ದಶಕಗಳಲ್ಲಿ ಕಂಪ್ಯೂಟರ್, ಐಟಿ, ಎಂ.ಬಿ.ಎ.ಗಳು ಆದುವು. ಇವತ್ತು ನಾಲಿಗೆಯಿದ್ದವರಿಗೆ ಡಿಗ್ರಿಯೊಂದಿದ್ದರೆ ನಗರಗಳಲ್ಲಿ ಯಾವುದಾದರೊಂದು ಕಂಪೆನಿಯಲ್ಲಿ ತಿಂಗಳಿಗೆ ಐದೋ ಹತ್ತೋ ಸಾವಿರ ರೂಪಾಯಿಗಳ ಕೆಲಸ ಸಿಗುವುದು ಕಷ್ಟವಲ್ಲ. ಅಂಥವರು ಮೋಹಕ ಮೋಟಾರ್ ಬೈಕ್ ಇಟ್ಟುಕೊಂಡು ಓಡಾಡುತ್ತ ಸೆಲ್‌ಫೋನ್ನಲ್ಲಿ ಮಾತಾಡುವ ಗತ್ತೇ ಬೇರೆ! ಇವರ ಮುಂದೆ ಶಾಲೆ ಕಾಲೇಜುಗಳ ಅಧ್ಯಾಪಕರು ಯಾವ ಲೆಕ್ಕಕ್ಕೆ? ಕೆಲವು ಹಂಗಾಮಿ ಕಾಲೇಜು ಅಧ್ಯಾಪಕರಿಗೆ ಇವರಷ್ಟೂ ಸಂಬಳ ಸಿಗುತ್ತಿಲ್ಲ ಎನ್ನುವುದನ್ನು ನಾವು ಅರಿತಿರಬೇಕು. ಆದರಿದು ಕೇವಲ ಸಂಬಳದ ವಿಷಯವೂ ಅಲ್ಲ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುವವನಿಗೆ ಆ ಕಂಪೆನಿಯ ಹೆಸರಿನ ಪ್ರಭಾವಳಿ ಒಂದು ಅಸ್ಮಿತೆಯನ್ನು, ಅದರ ಮೂಲಕವಾದ ಆತ್ಮಗೌರವವನ್ನು ಒದಗಿಸುತ್ತದೆ. ಇದಕ್ಕೆ ಬದಲು ತಾನೊಬ್ಬ ಭೌತಶಾಸ್ತ್ರದ ಅಧ್ಯಾಪಕನೆಂದರೆ ಸಮಾಜ ಈತ ಏತಕ್ಕೂ ಬೇಡದವನೆಂದು ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು! ಇದಕ್ಕೆ ಕಾರಣ ಅಜ್ಞಾನವಲ್ಲ, ಪ್ರಭಾಶೂನ್ಯತೆ. ಹೀಗಿರುತ್ತ ನಮ್ಮ ಯುವಜನತೆಗೆ ಐಬಿ‌ಎಮ್, ಜಿ.ಎಮ್, ಜಿ.ಇ. ಟಾಟಾ ಕನ್ಸಲ್ಟೆನ್ಸಿ, ವಿಪ್ರೋ, ರಿಲಾಯನ್ಸ್ ಮುಂತಾದವುಗಳ ನೌಕರಿಯ ವಿರುದ್ಧ ಅಧ್ಯಾಪನವೃತ್ತಿ ಒಂದು ಆಯ್ಕೆಯಾಗಿ ತೋರುವುದು ಹೇಗೆ? ಅದರಲ್ಲೂ ಈ ಹಂಗಾಮಿ, ಗುತ್ತಿಗೆ, ಅರೆಕಾಲಿಕ ಮುಂತಾದ ಅಪಮೌಲ್ಯದ ಉಪಾಧಿಗಳು ಬೇರೆ!

ನಿಜ, ಸರಕಾರಿ ನೌಕರಿಗಳು ಕಡಿಮೆಯಾಗಿರುತ್ತ, ಮೀಸಲಾತಿನ ಮಿತಿಗಳೂ ಇರುತ್ತ, ನಮ್ಮ ಯುವಜನತೆ ಆದಷ್ಟು ಬೇಗನೆ ಆದಷ್ಟು ಭವಿಷ್ಯದ ಭರವಸೆಯಿರುವ ಕಡೆ ಕೆಲಸ ಹುಡುಕುವುದರಲ್ಲಿ ಆಶ್ಚರ್ಯವಿಲ್ಲ. ಒಟ್ಟಾರೆ ಸಮಾಜದ ದೃಷ್ಟಿಯಿಂದ ಇದರಲ್ಲಿ ತಪ್ಪೂ ಇಲ್ಲ. ಆದರೂ ಮುನ್ನೋಟವಿರುವ ರಾಷ್ಟವೊಂದು ತನ್ನ ಶಿಕ್ಷಣ ಕ್ಷೇತ್ರವನ್ನು ಸದಾಕಾಲ ಶ್ರೀಮಂತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಯಾಕೆಂದರೆ, ನಾವು ಇನ್ನೇನನ್ನು ಬೇಕಾದರೂ ತಾತ್ಕಾಲಿಕವಾಗಿ ಆಮದು ಮಾಡಿಕೊಳ್ಳಬಹುದು; ಆದರೆ ಶಿಕ್ಷಕರನ್ನು ಯಾವಾಗ ಆಮದುಮಾಡಬೇಕಾಗುತ್ತದೋ ಆಗ ಎಲ್ಲೋ ಎಡವಟ್ಟಾಗಿದೆಯೆಂದೇ ಲೆಕ್ಕ. ವಾಸ್ತವದಲ್ಲಿ ನಾವೇ ಶಿಕ್ಷಕರನ್ನು ರಫ್ತು ಮಾಡುವ ಸ್ಥಿತಿಯಲ್ಲಿರಬೇಕು. ಕಾರಣವಿಷ್ಟೆ. ಭಾರತದಲ್ಲಿ ಹೇಳಿಕೊಳ್ಳುವಷ್ಟು ಖನಿಜ ಸಂಪತ್ತಾಗಲಿ, ತೈಲ ಸಂಪತ್ತಾಗಲಿ ಇಲ್ಲ; ಇತರ ನೈಸರ್ಗಿಕ ಸಂಪತ್ತೂ ಹೆಚ್ಚುಕಾಲ ಬರುವುದಿಲ್ಲ. ಹೀಗಿರುತ್ತ ನಾವು ವಿದ್ಯೆಯನ್ನೇ ನಮ್ಮ ಸಂಪತ್ತಾಗಿ ಮಾಡಿಕೊಳ್ಳಬೇಕು. ದೇಶ ದೇಶಗಳು ಎಷ್ಪೇ ಮುಂದರಿದರೂ, ವಿದ್ಯಾಭ್ಯಾಸ ಕ್ರಮ ಎಷ್ಟೇ ಬದಲಾದರೂ ಅಧ್ಯಾಪಕರಿಲ್ಲದಂಥ ನಾಗರಿಕ ಸಮಾಜವೊಂದನ್ನು ಯಾವುದೇ ಘಟ್ಟದಲ್ಲೂ ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಹುಟ್ಟಿದ ಪ್ರತಿಯೊಂದು ಮಗುವೂ ಹೊಸದಾಗಿ ಎಲ್ಲವನ್ನೂ ಆರಂಭದಿಂದ ಕಲಿತುಕೊಳ್ಳಬೇಕಾಗುತ್ತದೆ ಎನ್ನುವುದು ಶಾಶ್ವತ ಸತ್ಯ. ವಿದ್ಯೆಯನ್ನು ಯಾವ ಮಗುವೂ ಆನುವಂಶಿಕವಾಗಿ ಹುಟ್ಟಿನಿಂದಲೇ ಪಡೆಯದು. ಆದ್ದರಿಂದ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಮುಂತಾದ ರೀತಿಯ ಶಿಕ್ಷಣ ಸಂಸ್ಥೆಗಳು ಎಂದೂ ಇಲ್ಲದಾಗುವುದಿಲ್ಲ. ಯಾವ ದೇಶ ಶಿಕ್ಷಣಕ್ಕೆ ಸಾಕಷ್ಟು ಒತ್ತುಕೊಡುತ್ತದೋ ಅದು ಯಾವಾಗಲೂ ಮುಂದೆ ಇರುತ್ತದೆ.

ಅಂತರ್‌ಶಿಸ್ತು ಎಂಬ ಫ್ಯಾಶನಿನಲ್ಲಿ ಆಧುನಿಕರು ಒಂದು ತಪ್ಪು ಮಾಡುತ್ತಿದ್ದಾರೆ. ಇದೂ ಕೂಡಾ ಮೂಲಭೂತ ಶಿಸ್ತುಗಳನ್ನು ಕಲಿಸುವ ಅಧ್ಯಾಪಕರು ಕಡಿಮೆಯಾಗುವುದಕ್ಕೆ ಒಂದು ಕಾರಣ. ಉದಾಹರಣೆಗೆ, ಬಯೋಕೆಮಿಸ್ಟ್ರಿ, ಬಯೋಫಿಸಿಕ್ಸ್, ಮೊಲೆಕ್ಯುಲರ್ ಬಯಾಲಜಿ, ವಸಾಹತು ಅಧ್ಯಯನ, ಮಹಿಳಾಧ್ಯಯನ ಮುಂತಾದ ಹೊಸ ಹೊಸ ಅಧ್ಯಯನ ವಿಭಾಗಗಳು ಈಗ ಪ್ರಚುರವಾಗಿವೆ. ಇವೆಲ್ಲವೂ ಬೇಕು ನಿಜ. ಆದರೂ ಇವಕ್ಕೆಲ್ಲಕ್ಕೂ ಆಹಾರವೊದಗಿಸುವ ಮೂಲಭೂತ ಶಿಸ್ತುಗಳನ್ನು ಕಡೆಗಣಿಸಿದರೆ ಹೇಗೆ? ಎಂಜಿನಿಯರಿಂಗ್ ಎನ್ನೋದೊಂದು ಮೂಲಭೂತ ಶಿಸ್ತು ಅಲ್ಲ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದುವು ಮೂಲಭೂತ ಶಿಸ್ತುಗಳು. ಆದ್ದರಿಂದ ಒಂದು ಎಂಜಿನಿಯರಿಂಗ್ ಕಾಲೇಜು ನಡೆಯಬೇಕಾದರೆ ಈ ಬೇರೆ ಬೇರೆ ಮೂಲಭೂತ ಶಿಸ್ತುಗಳಲ್ಲಿ ಪಾಂಡಿತ್ಯ ಸಂಪಾದಿಸಿದ ಹಲವಾರು ಅಧ್ಯಾಪಕರು ಬೇಕಾಗುತ್ತದೆ. ಇದೇ ಸಂಗತಿ ವೈದ್ಯಕೀಯ ರಂಗದಲ್ಲೂ ಕಾಣುತ್ತದೆ. ಹೊಸ ಎಂಜಿನೀಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳು ಬೇಕೆಂದು ಹೇಳುತ್ತೇವೆ; ಆದರೆ ಅವಕ್ಕೆ ಪೂರಕವಾದ ಮೂಲಭೂತ ಶಿಸ್ತುಗಳಿರುವ ಕಾಲೇಜುಗಳು ಬೇಡವೇ? ಅಂಥ ಕಾಲೇಜುಗಳು ಇಲ್ಲವೆಂದಲ್ಲ. ಸಾಕಷ್ಟು ಇವೆ. ಆದರೆ ಇವು ಈಗ ಬುದ್ಧಿವಂತ ವಿದ್ಯಾರ್ಥಿಗಳನ್ನು ಆಕರ್ಷಿಸುವುದಿಲ್ಲ. ವಿಜ್ಞಾನದಲ್ಲೇ ಹೀಗಿರುತ್ತ ಇನ್ನು ಕಲಾವಿಭಾಗದ ಮಾತೇನು? ಚರಿತ್ರೆ, ಸಮಾಜವಿಜ್ಞಾನ, ತರ್ಕಶಾಸ್ತ್ರ, ತತ್ವಜ್ಞಾನ ಮುಂತಾದ ಶಿಸ್ತುಗಳನ್ನು ಕೇಳುವವರೇ ಇಲ್ಲದಾಗಿದೆ.

ಯಾವುದೇ ವಿಷಯದಲ್ಲೂ ಒಬ್ಬ ಪಂಡಿತನನ್ನು ಒಂದು ದಿನದಲ್ಲಿ ತಯಾರಿಸುವುದು ಸಾಧ್ಯವಿಲ್ಲ. ಪಾಂಡಿತ್ಯವೆನ್ನುವುದು ಜೀವನದುದ್ದಕ್ಕೂ ಇರುವ ಆಸಕ್ತಿ. ನಿಜವಾದ ಪಾಂಡಿತ್ಯವಿರುವ ಶಿಕ್ಷಕರು ಸಮಾಜಕ್ಕೆ ನಿರಂತರವಾಗಿ ದೊರೆಯುತ್ತಿರಬೇಕಾದರೆ ನಾವು ಅದಕ್ಕೋಸ್ಕರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಈಚೆಗೆ ಅಲ್ಲಲ್ಲಿ ಆರಂಭವಾಗುತ್ತಿರುವ ಐದು ವರ್ಷಗಳ ಸಮ್ಮಿಳಿತ ಅರ್ಥಾತ್ ‘ಇಂಟಿಗ್ರೇಟೆಡ್’ ಕೋರ್ಸುಗಳು ಬಹುಶಃ ಸರಿಯಾದ ಹೆಜ್ಜೆ. ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಈಗ ಕೆಲವೊಂದು ಪ್ರಾಂತಗಳಲ್ಲಿ ಇಂಥ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳಿದ್ದು ಇವು ಒಳ್ಳೆಯ ಕೆಲಸ ಮಾಡುತ್ತಿವೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಈ ಸಮ್ಮಿಳಿತ ಶಿಕ್ಷಣ ನೀಡುವುದು ಸರಿಯಾಗಿರುತ್ತದೆ. ಆದರೆ ಭಾಷೆ, ಸಾಹಿತ್ಯ ಮತ್ತು ಸಮಾಜವಿಜ್ಞಾನಗಳ ಗತಿಯೇನು? ಈ ಕುರಿತು. ವ್ಯಾಪಕವಾದ ಚರ್ಚೆ ನಡೆಯಬೇಕಾಗಿದೆ.

ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಸಂದರ್ಭದಲ್ಲೇ ಕಲಿಸುವುದಕ್ಕೂ ಕಲಿಯಬೇಕು. ಇದೇನೂ ಅಸಾಧ್ಯವಾದ ಸಂಗತಿಯಲ್ಲ. ಅಧ್ಯಾಪಕರ ಉಸ್ತುವಾರಿಯಲ್ಲಿ ಸುಲಭವಾಗಿ ಕರಗತಮಾಡಿಕೊಳ್ಳಬಹುದಾದ ಕಲೆ ಇದು. ಆಗ ವಿದ್ಯಾರ್ಥಿಗಳಲ್ಲಿರುವ ಸಭಾಕಂಪನವೂ ಹೊರಟುಹೋಗುತ್ತದೆ. ಅವರ ಸಂವಹನ ಸಾಮರ್ಥ್ಯವೂ ಹೆಚ್ಚುತ್ತದೆ. ಜತೆ ಜತೆಯಲ್ಲೇ ಆಯಾ ವಿಷಯದ ಕುರಿತಾದ ಅವರ ಪರಿಜ್ಞಾನವೂ ಹೆಚ್ಚುತ್ತದೆಯೆಂದು ಬೇರೆ ಹೇಳಬೇಕಾದ್ದಿಲ್ಲ. ಅದೇ ರೀತಿ, ಅಧ್ಯಾಪಕರು ಕೂಡಾ ತಂತಮ್ಮ ವಿಷಯಗಳನ್ನು ಒಂದು ಗುಂಗಿನಂತೆ ಹಚ್ಚಿಕೊಳ್ಳಬೇಕಾದ ಅಗತ್ಯವಿದೆ. ಹಾಗೂ ಅಧ್ಯಾಪಕರಿಗೆ ವಿಷಯಜ್ಞಾನ ಹೆಚ್ಚಿಸಿಕೊಳ್ಳುವುದಕ್ಕೆ ಸರಿಯಾದ ಅನುಕೂಲತೆಗಳು ಸಿಗಬೇಕು. ಇಷ್ಟೇ ಮುಖ್ಯವಾಗಿ, ನನಗನಿಸುವುದೆಂದರೆ, ಈಗಿರುವ ಶಾಲೆ -ಕಾಲೇಜು ಯುನಿವರ್ಸಿಟಿಯೆಂಬ ಕಂದರವನ್ನು ದಾಟಿ ವಿಷಯಜ್ಞಾನದ ಮೇಲೆ ಅಧ್ಯಾಪಕರು ಪರಸ್ಪರ ಸಂಪರ್ಕದಲ್ಲಿ ಇರಬೇಕು. ಯುನಿವರ್ಸಿಟಿಯ ಪ್ರೊಫೆಸರರು ವರ್ಷದಲ್ಲಿ ಒಂದು ವಾರವಾದರೂ ಯಾವುದಾದರೊಂದು ಕೆಳ ಹಂತದ ತರಗತಿಯಲ್ಲಿ ಪಾಠ ಹೇಳುವಂತಾಗಬೇಕು. ಅದೇ ರೀತಿ, ಶಾಲಾಧ್ಯಾಪಕರು ಯುನಿವರ್ಸಿಟಿ ಕ್ಲಾಸುಗಳಲ್ಲಿ ಕೆಲವು ಸಮಯ ಕುಳಿತುಕೊಂಡು ಪಾಠ ಕೇಳುವ ಅವಕಾಶ ಇರಬೇಕು. ಇಂಥ ಸಂಪರ್ಕದಲ್ಲಿ ಕೀಳರಿಮೆಗಳು ಇಲ್ಲದಾಗಿ, ಮನಸ್ಸು ವಿಷಯಕೇಂದ್ರೀಕೃತವಾಗುತ್ತದೆ. ಅಧ್ಯಯನನಿರತ ಸಮಾಜದಲ್ಲಿ ಮಾತ್ರವೇ ನಿರಂತರವಾಗಿ ಅಧ್ಯಾಪಕರು ಇರುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯವೆ ದೇವಾಲಯವಿಲ್ಲಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೬

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…