ಮನಸ್ಸು ಬಂದತ್ತ ಸ್ವೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. ‘ಪ್ರಯಾಣಕ್ಕಾಗಿ ಪ್ರಯಾಣ’ ಎನ್ನುವ ಷೋಕಿಲಾಲನೂ ನಾನಲ್ಲ. ಇಲ್ಲಿಯವರೆಗೆ ನಾನು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು. ಪ್ರಸಿದ್ಧ ಪಟ್ಟಣಗಳೆಂದು ನಾಡಿನವರ ಬಾಯಲ್ಲೆಲ್ಲ ನಲಿಯುತ್ತಿರುವ ಸ್ಥಳಗಳು ನನ್ನ ಮಟ್ಟಿಗೆ ನಕಾಶದೊಳಗಿನ ಹೆಸರುಗಳು ಮಾತ್ರ. ಪ್ರವಾಸ ಕಥನಗಳನ್ನು ಅಷ್ಟಿಷ್ಟು ಓದಿದ ನಾನು ಆಯಾ ಊರುಗಳನ್ನು ಪ್ರತ್ಯಕ್ಷ ಕಂಡವರಿಗಿಂತ ಚೆನ್ನಾಗಿಬಲ್ಲೆ. ಇದು ನನ್ನ ಕೂಪಮಂಡೂಕತನವೂ ಅಲ್ಲ; ಮನೆಗೇ ಅಂಟಿಕೊಂಡು ಕೂಡುವ ಜಿಗುಳೆತನವೂ ಅಲ್ಲ. ಹಾಗೆ ನೋಡಿದರೆ ಒಂದೇ ಪ್ರದೇಶವನ್ನು ಅದೆಷ್ಟೋ ಸಾರೆ ಸುತ್ತಿದ್ದೇನೆ-ಒಂದೇ ಪುಸ್ತಕವನ್ನು ಹಲವು ಸಾರೆ ಓದಿದಂತೆ. ನನ್ನ ಪ್ರವಾಸದ ಕ್ಷೇತ್ರ ಸಣ್ಣದಿರಬಹುದು. ಆದರೆ ಅದರಲ್ಲಿ ನಾನು ಕಂಡ ರಸದ ಒರತೆ ಮಾತ್ರ ದೊಡ್ಡದು. ಜೀವನದಲ್ಲಿ ಕಾಣಸಿಗದ ಸ್ವಾರಸ್ಯ ನನಗೆ ಪ್ರವಾಸದಲ್ಲಿ ದೊರಕಿದೆ. ಪ್ರವಾಸದಲ್ಲಿ ನಾನು ಅತ್ತಿದ್ದೇನೆ-ನಕ್ಕಿದ್ದೇನೆ. ನಗೆಪಾಟಲು ವ್ಯಕ್ತಿಯೂ ಆಗಿದ್ದೇನೆ. ಹೀರೋ ಆಗಿದ್ದಂತೆ ಝೀರೋ ಕೂಡ ಆದ ಪ್ರಸಂಗಗಳು ಇಲ್ಲದಿಲ್ಲ. ಪರೀಕ್ಷೆಗಾಗಿ ಪರೀಕ್ಷಾ ವಿದ್ಯಾರ್ಥಿಯು ಪಟ್ಟ ದುಗುಡವನ್ನೇ ಪ್ರತಿ ಪ್ರವಾಸವೂ ನನಗಾಗಿ ಹೊತ್ತುತಂದಿದೆ. ಪ್ರವಾಸದ ಮುನ್ನಾದಿನವೂ ನನಗೆ ನಿದ್ರೆಯಿಲ್ಲ-ನಿಶ್ಚಿತ ಸ್ಥಳ ಮುಟ್ಟಿದ ದಿನವೂ ನಿದ್ರೆಯಿಲ್ಲ. ಬಾಳು ಬರಿದಾಗಿ ಕಂಡಾಗ ಏನಾದರೂ ನೆಪಹೂಡಿ ಪ್ರವಾಸ ಕೈಕೊಳ್ಳುತ್ತೇನೆ. ಜೀವನದಲ್ಲಿ ಇಲ್ಲದ ನವ್ಯತೆಯನ್ನು ಬಾಳಿನಲ್ಲಿ ತರಲು ಉಪಕ್ರಮಿಸುತ್ತೇನೆ. ಪ್ರವಾಸವೆಂದರೆ- ನನಗೆ ಪ್ರಯಾಸದ ವಿಷಯವಲ್ಲ, ಅದೊಂದು ಸುಖಪ್ರಸಂಗ.

ನಾನು ಬಸ್ಸು ಪ್ರಯಾಣವನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತೇನೆಯೋ, ಅಷ್ಟೇ ಧೃಡವಾಗಿ ರೇಲು ಪ್ರಯಾಣವನ್ನು ದ್ವೇಷಿಸುತ್ತೇನೆ. ಈ ದ್ವೇಷಕ್ಕೆ ಏನು ಕಾರಣವೋ ಏನೋ. ಅವಾಢವ್ಯವಾದ ರಾಕ್ಷಸೀ ಆಕಾರ, ಅಸಂಖ್ಯಾತ ಬೋಗಿಗಳು, ಹೊಗೆಯನ್ನು ಉಗುಳುತ್ತಿರುವ ಇಂಜಿನ್ನು, ಕಪ್ಪಗಿನ ವೇಷ ಧರಿಸಿದ ಸ್ಪೇಶನ್ ಮಾಸ್ತರು, ಅಪಾರ ಜನಜಂಗುಳಿ ಇವನ್ನೆಲ್ಲ ನೆನಸಿದಾಗ, ರೇಲು ಪ್ರಯಾಣದ ಬಗೆಗೆ ಜಿಗುಪ್ಸೆ ಹುಟ್ಟದೆ ಇರದು. ಎಕ್ಸ್‌ಪ್ರೆಸ್ಸಾದರೆ ಬಹಳ ವೇಗವಾಯಿತು. ಮಾನವನ ಮನೋವೇಗವನ್ನು ಮೀರಿ ನಿಲ್ಲುವ ಆ ವೇಗ ನೆಮ್ಮದಿಯಾಗಿಲ್ಲ. ಇನ್ನು ಪ್ಯಾಸೆಂಜರೋ-ನಮ್ಮ ಹಳ್ಳಿಯ ಒಡ್ಡರ ಗಾಡಿಗಳನ್ನೇ ನೆನಪಿಗೆ ತರುತ್ತವೆ. ಅಮಾನುಷವಾಧ ಅದರ ಸದ್ದೋ, ಮಾನವನನ್ನು ಮೀರಿ ನಿಂತಿದ್ದೇನೆ ಎನ್ನುವ ಅದರ ಭವ್ಯತೆಯೋ ಇಳಿಯುವವರ ಏರುವವರ ಗಜಿಬಿಜಿಯೋ-ನೆನೆಸಿದರೇನೇ ನಡುಕ ಉಂಟಾಗುತ್ತದೆ. ಕೆಲವರು ಮಲಗಿಕೊಂಡು ಗೊರಕೆ ಹೊಡೆಯುವವರ ಸುತ್ತಲು ಹತ್ತಾರು ಜನ ನಿಲ್ಲಲು ಸ್ಥಳವಿಲ್ಲದೆ ತ್ರಿಶಂಕುವಿನಂತೆ ಮೇಲೂ ಏರಲಿಕ್ಕಾಗದೆ ನೆಲಕ್ಕೆ ಕಾಲನ್ನು ಹಚ್ಚಲಿಕ್ಕಾಗದೆ ನಿಲ್ಲುವ ಪ್ರಸಂಗ ಇದೆ. ಇದಕ್ಕೆ ಏನು ಅನ್ನುತ್ತೀರಿ? ನಮ್ಮಲ್ಲಿಯ ಅನಾಗರಿಕ ಸ್ಥಿತಿಯನ್ನು ಅವಲೋಕಿಸಲು ರೇಲು ಪ್ರವಾಸ ಮಾಡೋಣವೇ? ಥರ್ಡ್ ಕ್ಲಾಸ್ ಬೋಗಿಯಂತೂ ಸಾಕ್ಷಾತ್ ನರಕ. ಎಂಜಲು ಅಲ್ಲೆ ಬಿದ್ದಿದೆ. ಬಾಳೆಯ ಸೊಪ್ಪು ಇಂದಿನ ಪ್ಯಾಸೆಂಜರರ ತಲೆ ದಿಂಬಾಗಿದೆ. ಕಣ್ಣಿದ್ದವರಿಗೆ ನೀನೇ ಶಿವಾ, ಕಣ್ಣಿಲ್ಲದವರಿಗ ನೀನೇ ಶಿವಾ ಎನ್ನದೆ ಗತ್ಯಂತರವೇ ಇಲ್ಲ. “ಮೂಗು ಇದ್ದವರು ಪ್ರವಾಸ ಮಾಡಬೇಕು” ಎನ್ನುವ ಸ್ಥಿತಿಯಿದೆ ಇಂದು. ಇಂಥ ರೇಲಿನಲ್ಲಿ ನಾಲ್ಕು ದಿನ ಪ್ರವಾಸ ಮಾಡಿಯೂ ಇದು ನನ್ನ ಟ್ರೇನು ಎನ್ನುವ ಭಾವನೆ ಉಂಟಾಗದು. ಒಟ್ಟಾರೆ ಅಮಾನುಷ ವ್ಯಕ್ತಿಗಳಿಗೆ ಹೇಳಿಮಾಡಿಸಿದ್ದು-ಈ ರೇಲು ಪ್ರಯಾಣ. ನನ್ನಂಥ ಸಾಮಾನ್ಯವ್ಯಕ್ತಿಗೆ ಬಸ್ಸು ಪ್ರಯಾಣವೇ ಸಾಕು.

ಬಸ್ಸು ಪ್ರಯಾಣದಲ್ಲಿ ಏನಿಲ್ಲದ ಸೌಖ್ಯವಿದ. ಅಚ್ಚುಕಟ್ಟುತನವಿದೆ. ನಾಲ್ಕೇ ಮೈಲು ಪ್ರವಾಸ ಮಾಡಿ ಇಳಿಯುತ್ತಿರುವ ವ್ಯಕ್ತಿಯೂ ತನ್ನ ಬಸ್ಸಿನಿಂದಲೇ ಇಳಿಯುತ್ತಿದ್ದೇನೆ-ಎನ್ನುವ ಹೆಮ್ಮೆ ತೋರುತ್ತಾನೆ. ಡ್ರಾಯವ್ಹರ ಕಂಡಕ್ಟರರು ನಿಮ್ಮ ಕಣ್ಣರಿಕೆಯಲ್ಲಿಯಯೇ ಇರುತ್ತಾರೆ. ಈ ರೀತಿ ಬಸ್ಸು ಪ್ರಯಾಣದಲ್ಲಿ ಮಾನವೀಯ ಅಂಶಗಳು ಹೆಚ್ಚಾಗಿವೆ. ಕಂಡಕ್ಟರು ರೈಲಿನ ಗಾರ್ಡ್‌ನಂತೆ ಕೈಗೆ ನಿಲುಕದ ವ್ಯಕ್ತಿಯೇನೂ ಅಲ್ಲ. ಅವನೂ ನಮ್ಮಂತೆ ಸಾಮಾನ್ಯ. ನಮ್ಮ ಎದೆಯಲ್ಲಿ ಮಿಡಿಯುತ್ತಿರುವ ಸಮಸ್ಯೆಗಳೇ ಅವನನ್ನೂ ಕಾಡಿಸುತ್ತವೆ. ಟಿಕೆಟ್ಟು ಹರಿದು ಕೊಡುವಾಗ, ಜನರ ತಲೆಗಳ ಲೆಕ್ಕ ಹಚ್ಚಿಕೊಡುವಾಗ ಅವನೊಬ್ಬ ಮನುಷ್ಯನಾಗಿ ಕಾಣುತ್ತಾನೆಯೇ ಹೊರತು ಯಾಂತ್ರಿಕಯುಗದ ರಾಕ್ಷಸನಾಗಿ ಅಲ್ಲ. ಇನ್ನು ಡ್ರಾಯವ್ಹರನೋ- ನಾಲ್ಪತ್ತು ಜನರ ಜೀವದ ರಕ್ಷಾಭಾರವನ್ನು ಹೊತ್ತಿದ್ದೇನೆ ಎನ್ನುವ ಹೊಣೆಗಾರಿಕೆಯಿಂದ, ಸರಿಯಾದ ವೇಗದಲ್ಲಿ ನಡಯಿಸುವ ವ್ಯಕ್ತಿಯು ಕರ್ಮಯೋಗಿಯಲ್ಲದೆ ಮತ್ತೇನು? ಇನ್ನು ನಾಲ್ವತ್ತು ಜನ; ಅದೊಂದು ಸಂಕ್ಷಿಪ್ತ ವಿಶ್ವ. ವಿಭಿನ್ನ ರುಚಿಯ, ಅಭಿರುಚಿಯ, ಸಂಸ್ಕೃತಿಯ, ವಿಕೃತಿಯ, ವಿವಿಧ ಬಣ್ಣದ, ಮಾತುಗಾರಿಕೆಯ, ಮೂಕುತನದ ವ್ಯಕ್ತಿಗಳು. ಅವರನ್ನು ನಿರೀಕ್ಷಿಸುತ್ತ ಕೂಡುವುದರಲ್ಲಿ ನೂರು ಪುಸ್ತಕ ಒದಗಿಸಲಾಗದ ಸಾಮಗ್ರಿ ದೊರಕುತ್ತದೆ. ನಾಲ್ವತ್ತು ವ್ಯಕ್ತಿಗಳೆಂದರೆ ನಾಲ್ವತ್ತು ಮುಖಗಳು ಮಾತ್ರವಲ್ಲ ನಾಲ್ವತ್ತು ವರ್ಣಮಯ ಚಿತ್ರಗಳು.

ಬಸ್ಸು ಪ್ರಯಾಣದ ಸ್ವರ್ಗಸುಖ ಸಿಗಬೇಕಾದರೆ ತಪಶ್ಚರ್ಯವನ್ನಂತೂ ಮಾಡಲೇಬೇಕು. ಅದೆಂದರೆ ಬಸ್ಸಿಗಾಗಿ ಕಾಯುವದು. ಊಟದ ಮನೆಯಲ್ಲಿ ಒಂದೆರಡು ನಿಮಿಷವಾಗಲಿ- ಕೊನೆ ಗಳಿಗೆಯಾಗಲಿ ತಾಳಬಹುದು. ಕಾಳುಕಡಿಯ ಅಂಗಡಿಯ ಮುಂದೆ ತಾಸುಗಟ್ಟಲೆ ರಣಗುಟ್ಟುತ್ತಿರುವ ಸೂರ್ಯನ ಕೃಪಾಛತ್ರದ ಕೆಳಗೆ ಆಶ್ರಯ ಪಡೆಯಬಹುದು. ಬಸ್ಸಿಗಾಗಿ ಕಾಯುವದೆಂದರೆ ಒಂಟಿಗಾಲಿನ ಮೇಲೆ ನಿಂತು ಶಿವನನ್ನು ಕುರಿತು ತಪಶ್ಚರ್ಯವನ್ನು ಗೈದಂತೆಯೇ ಸೈ. ಅಂತೂ ಬಸ್ಸು ಬಂದುಬಿಟ್ಟಿತಲ್ಲ. ಕೈಯಲ್ಲಿ ಟ್ರಂಕನ್ನು ಹಿಡಿದು ಬಸ್ಸಿನೊಂದಿಗೆ ಸ್ಪರ್ಧೆ ಕಟ್ಟುವಂತೆ ಓಡುತ್ತೀರಿ. ಧೂಳೇ ನಿಮಗೆ ಸಿಕ್ಕ ಪ್ರಾಪ್ತಿ. ಆ ಬಸ್ಸು ನೀವು ಹೋಗುವ ಊರಿನದಲ್ಲ. ಅದಕ್ಕೇನಂತೆ ಇಷ್ಟು ಹಾದಿ ನೋಡಿದವರು ಇನ್ನೊಂದು ಅರ್ಧ ತಾಸು ಕೂಡಲಿಕ್ಕಾಗದೇ? ಇನ್ನೊಂದು ಪ್ಲೇಟು ಚುರುಮರಿ ಚಿವಡಾ ತಿಂದು ಚಹಾ ಕುಡಿದು ಬಂದು ಕುಳಿತರಾಯ್ತು. ನೂರು ಸಲ ಮೋಸಗೊಳಿಸಿ ಕೊನೆಗೂ ನಿಮ್ಮ ಬಸ್ಸು ಬಂದೇ ಬರುವುದು. ಕಂಡಕ್ಟರು ಉಸ್ಸೆಂದು ಕೆಳಗೆ ಇಳಿಯುವನು-‘ಈಗ ಯಾರೂ ಬಸ್ಸನ್ನು ಹತ್ತಬೇಡಿ’ ಎನ್ನುತ್ತ ಕ್ಯೂ ನಿಲ್ಲುತ್ತದೆ. ಕಂಡಕ್ಟರರ ಮರು ಅಪ್ಪಣೆಯಾದ ಕ್ಷಣವೇ ಮಾಯವಾಗಿ ಕುರುಕ್ಷೇತ್ರ ಪ್ರಾರಂಭವಾಗುತ್ತದೆ. ತಿಕ್ಕಾಟ, ಗುದ್ದಾಟ, ಚೀರಾಟ, ಹೋರಾಟಗಳೆಲ್ಲ ನಡೆಯುತ್ತವೆ. ಒಬ್ಬರ ಷರ್ಟು ಹರಿದರೆ, ಇನ್ನೊಬ್ಬರ ಉಸಿರೇ ನಿಂತಿತು. ಮಗುದೊಬ್ಬರ ಬೆರಳೊಂದು ಕತ್ತರಿಸಿಯೇಹೋಯಿತು. ಕೂಸಿನ ಚೀರುವಿಕೆಗಾಗಲಿ ಸ್ತ್ರೀಯರ ಆರ್ತಸ್ವರಕ್ಕಾಗಲಿ ಯಾರೂ ಮಣಿಯುವುದಿಲ್ಲ. ಅಂತೂ ಒಮ್ಮೆ ಬಸ್ಸನ್ನು ಏರಿದಾಗ ಕೊಲಂಬಸ್ ಅಮೆರಿಕೆಯನ್ನು ಪ್ರಥಮ ಬಾರಿ ಕಂಡಂತೆ. ತೇನಸಿಂಗ್ ಎವ್ಹರೆಸ್ಟನ್ನು ಏರಿ ನಿಂತಂತೆ ಭಾಸವಾಗಿ ಸಾತ್ವಿಕ ಆನಂದ ಉಂಟಾಗುವುದು. ಬಸ್ಸು ಬಿಡುವಂತಾದಾಗ ಕೆಳಗೆ ನಿಂತ ಎಲ್ಲರಿಗೂ ಸ್ಥಾನ ಸಿಕ್ಕಿರುವುದು. ಆದರೂ ಈ ಗದ್ದಲ ಏಕೆ ಎಂದು ನೀವು ಕೇಳಬಹುದು. ಈ ಹೋರಾಟವಿಲ್ಲದ ಬಸ್ಸು ಪ್ರಯಾಣ ನೀರಸವಾಗುತ್ತದೆ. ಕುಳಿತು ಕಾಲು ನೋಯುತ್ತವೆ, ಟೊಂಕ ಬಾಗುತ್ತದೆ. ಅದನ್ನು ತಡಗಟ್ಟಲು ಮಾನವನು ತಾನಾಗಿಯೋ ಕಂಡುಹಿಡಿದ ಪದ್ಧತಿಯಿದು. ಬಸ್ಸು ಹೊರಟು ನಿಂತಾಗ ಜೀವನದಲ್ಲಿ ಉದಾತ್ತವಾದುದನ್ನು ಸಾಧಿಸಿದೆವು-ಎಂಬ ಭಾವ ಪ್ರತಿಯೊಬ್ಬ ಪ್ರವಾಸಿಗನ ಮೊಗದಲ್ಲಿ ಮೂಡಿದ್ದನ್ನು ಗಮನಿಸಬಹುದು.

ನಾನಾದರೋ ಇಂಥ ಪ್ರಸಂಗಗಳಲ್ಲಿ ಸಾಕಷ್ಟು ನೂಕು ನುಗ್ಗಾಟಗಳಲ್ಲಿ ಸಿಕ್ಕು ಮೊದಲಿಗನಾಗದಿದ್ದರೂ ಮೊದಲಿಗರಲ್ಲಿ ಓರ್ವನಾಗಬೇಕೆನ್ನುವ ತತ್ವದವನು. ಇಷ್ಟು ಗಡಿಬಿಡಿ ಮಾಡಿ ಏರುವದರಲ್ಲಿ ಒಂದು ಸ್ವಾರ್ಥವಿದೆ. ಅದೇನೆಂದರೆ ಕಿಡಕಿಯ ಹತ್ತಿರದ ಸ್ಥಳ. ಹೊರಗಿನ ಗಾಳಿಯೂ ಬೀಸುತ್ತದೆ. ಒಳಗಿನ ಜನಸಂಪರ್ಕವೂ ತಪ್ಪಿರುವುದಿಲ್ಲ. ಹಾಗೆ ಕಿಡಕಿಯ ಹತ್ತಿರ ಕುಳಿತು ಜನರ ನಡೆನುಡಿಗಳನ್ನು ಗಮನಿಸುವದು, ಬೇಸರವಾದಾಗ ಹೊರಗಿನ ಪ್ರಕೃತಿಯ ಉಪಾಸಕನಾಗಿ ನಿಲ್ಲುವದು, ಮಗುದೊಮ್ಮೆ ಮಾತುಕತೆಗಳಲ್ಲಿ ಭಾಗವಹಿಸಿ ಜೋರಾಗಿ ಮಾತನಾಡುವುದು. ಇಡಿಯ ಪ್ರಯಾಣದ ಅವಧಿಯನ್ನು ನಾಟಕದ ಅವಧಿಯೆಂದು ತಿಳಿದು ಪ್ರೇಕ್ಷಕನಾಗಿ ನಿಲ್ಲುವುದು.

ಜನರು ತಮ್ಮ ತಮ್ಮ ಯೋಗ್ಯತಾನುಸಾರ ಸ್ಥಳಗಳನ್ನು ಅಲಂಕರಿಸಿದ ಬಳಿಕ ಟಿಕೆಟ್ಟು ಸಮಾರಂಭ ನಡೆಯುತ್ತದೆ. ಸ್ತ್ರೀ ಪ್ಯಾಸೆಂಜರೊಂದಿಗೆ ದೊಡ್ಡ ಚರ್ಚೆಯೇ ನಡೆಯುತ್ತದೆ. ‘ಈ ಕೂಸು ನಿಮ್ಮದೇ ಏನ್ರಿ?’ ‘ಹೌದು’ ‘ಎಷ್ಟು ವರ್ಷ ಆಗಿವೆ?’ ‘ಎರಡು ತುಂಬಿ ಮೊನ್ನೆ ಅಮಾವಾಸ್ಯೆಗೆ ಒಂದು ತಿಂಗಳಾಯಿತು’ ‘ಇಲ್ಲ ಮೂರುವರ್ಷ ಆಗಿವೆ’, ಎಂದು ಅರ್ಧ ಟಿಕೇಟನ್ನು ಪಡೆಯಲು ಸೂಚಿಸುವನು. ಅದಕ್ಕೂ ಒಪ್ಪದಿರಲು, ನಮಸ್ಕಾರ ಮಾಡುತ್ತ ನಿಲ್ಲುವ ಪ್ರಸಂಗಳೂ ಇವೆ. ಇನ್ನು ಬಸ್ಸು ಹೊರಡುತ್ತದೆ. ಕಂಡಕ್ಟರನು ತಲೆಗಳನ್ನು ಎಣಿಸುತ್ತಾನೆ. ಒಂದು ಸಂಖ್ಯೆಕಡಿಮೆ ಬೀಳುತ್ತದೆ. ಬಸ್ಸನ್ನು ನಿಲ್ಲಿಸಲಾಗುತ್ತದೆ. ಎಲ್ಲರ ಟಿಕೇಟ್ ಪರೀಕ್ಷೆಯಾಗುತ್ತದೆ. ಸಿಕ್ಕುಬೀಳುವವರು ಹಳ್ಳಿಯ ಮುದುಕಮ್ಮ ಅಥವಾ ಪಟ್ಟಣದ ಸುಶಿಕ್ಷಿತ. ಅವರಿಗಿಷ್ಟು ಮಂಗಳಾರತಿ ಆದನಂತರ ಬಸ್ಸು ನಾಗಾಲೋಟವನ್ನು ಇಕ್ಕುತ್ತದೆ.

ಬಸ್ಸು ಹೊರಟಾಗ, ಪ್ರವಾಸಿಕರೆಲ್ಲರೂ ಸಮಾಧಾನದ ಉಸಿರ್ಗರೆಯುತ್ತಾರೆ. ನಾನು ನೆಪಕ್ಕೆ ಮಾತ್ರ ವೃತ್ತಪತ್ರಿಕೆಯನ್ನು ಹಿಡಿದು ಜನರ ನಿರೀಕ್ಷೆ ಮಾಡುತ್ತಲೋ ಅವರ ಸಂಭಾಷಣೆಯನ್ನು ಕೇಳುತ್ತಲೋ ಕೂಡುತ್ತೇನೆ. ಒಂದು ಸಲ ಕಿಟಕಿಯ ಹತ್ತಿರ ಕುಳಿತು ಬಾಹ್ಯ ಸೌಂದರ್ಯವನ್ನು ಹೀರುತ್ತಲೂ ಆಂತರಿಕ ಸಂಭಾಷಣೆಗಳನ್ನು ಕೇಳುತ್ತಲೂ ಕುಳಿತಿದ್ದೆ. ಬಸ್ಸು ತನ್ನಷ್ಟಕ್ಕೆ ತಾನು ಸಾಗಿತ್ತು. ನನ್ನ ಹತ್ತಿರ, ನನ್ನ ಎರಡಾಕಾರದ ಜೊಂಡಿಗೆ ಮೀಸೆಯ ಹಳ್ಳಿಯ ದಾಂಡಿಗನೊಬ್ಬನು ಕುಳಿತಿದ್ದ. ತನ್ನ ಭುಜದಿಂದ ಡಿಕ್ಕಿ ಹೊಡೆದರೆ ನಾಲ್ಕುದಿನ ಹಾಸಿಗೆಯನ್ನು ಹಿಡಿಯಬೇಕು ಹೀಗಿತ್ತು ಆತನ ಶರೀರ ಸೌಷ್ಟವ. ನಿಮಿಷ ನಿಮಿಷಕ್ಕೊಮ್ಮೆ- “ರಾವ ಸಾಹೇಬ, ಸ್ವಲ್ಪ ಮುಖ ತಿರುವಿರಿ.” ಸ್ಪಲ್ಪವೇಕೆ ಮಹಾರಾಯ ಪೂರ್ತಿ ತಿರುವುತ್ತೇನೋ ಎಂದು ಆಜ್ಞಾಪಾಲನ ಮಾಡಿದರೂ ಆತನ ತಂಬಾಕದ ಉಗುಳು ನನ್ನ ಮುಖದ ಮೇಲೆ ತುಂತುರ ತುಂತುರವಾದರೂ ಬೀಳುತ್ತಿತ್ತು. ‘ಮತ್ ಮಾರೋ ಕೃಷ್ಣ ಪಿಚಕಾರಿ’ ಎನ್ನುವ ಸ್ಥಿತಿಯಾಗಿತ್ತು ನನ್ನದು. ನೀವೇ ಈ ಸ್ಥಳಕ್ಕೆ ಬನ್ನಿ ‘ನಾನು ಆ ಕಡೆ ಬರುತ್ತೇನೆ’ ಎಂದಾಗ ಸಂತೋಷದಿಂದ ತನ್ನ ಭೀಮಕಾಯವನ್ನು ಎತ್ತಿ ಆ ಕಡೆ ಇರಿಸಿದ. ನಾನು ಸೀಟಿನ ದಂಡೆಯ ಮೇಲೆ ಕುಳಿತೂ ಅಲ್ಲದ ನಿಂತೂ ಅಲ್ಲದ ಕುಳಿತು ನಿಲ್ಲಾಸನದ ಸ್ಥಿತಿಯಲ್ಲಿ ನನ್ನ ಪ್ರವಾಸವನ್ನು ಕಳೆದೆ.

ನಾನು ಆಧುನಿಕ ಕಾಲದ ವ್ಯಕ್ತಿಯಾದರೂ ನನ್ನ ಅಭಿರುಚಿಗಳು ೧೯ನೇ ಶತಮಾನದವುಗಳೇ ಆಗಿವೆ. ಈ ರೀತಿ ನಾನು ಪ್ರವಾಸ ಮಾಡುವಾಗ ಉಪಯೋಗಿಸುವುದು ಟ್ರಂಕನ್ನಲ್ಲದೆ ಹೋಲ್ಡಾಲ್ ಅಥವಾ ಸೂಟ್ ಕೇಸ್ ಅಲ್ಲ. ಒಂದು ಸಾರೆ ಸಮೀಪದ ಪಟ್ಟಣದಿಂದ ನಮ್ಮ ಹಳ್ಳಿಗೆ ಹೊರಟಿದ್ದೆ. ಹೊಸ ಟ್ರಂಕಿನಲ್ಲಿ ಅರಿವೆಗಳ, ಕತ್ತೆ ಹೊರಲಾರದ, ಮನುಷ್ಯನು ಓದಲಾಗದ ಪುಸ್ತಕಗಳ ರಾಶಿಯಿತ್ತು. ಕಂಡಕ್ಟರನಿಗೆ ಯಾವುದೋ ವಶೀಲಿ ಹಚ್ಚಿ ಟ್ರಂಕನ್ನು ಬಸ್ಸಿನ ಮೇಲೆ ಇರಿಸದೆ ಬಸ್ಸಿನ ಒಳಗೇನೆ ತಂದೆ. ಅಂದು ವಿಶೇಷ ಗದ್ದಲವಿತ್ತು. ಆ ಟ್ರಂಕು ನೂರು ಜನರ ಕಾಕದೃಷ್ಟಿಗೆ ಈಡಾಯಿತು. ‘ಯಾವ ಮಹಾರಾಯನದೋ ಈ ಟ್ರಂಕು’ ಎಂಬ ಜನರ ಪಲ್ಲವಿಯೊಡನೆ-ನಾನೂ ‘ಸೋ’ ಎಂದೆ ಪೀಡೆ ಕಳೆಯಿತು ಎಂದು-ಪೀಡೆ ಕಳೆಯಲಿಲ್ಲ, ಪ್ರಾರಂಭವಾಯಿತು. ಬಸ್ಸಿನಲ್ಲಿ ನಿಂತುಕೊಂಡಿದ್ದ ಆಜಾನುಬಾಹು ವ್ಯಕ್ತಿಯೊಂದು ಟ್ರಂಕನ್ನೆಳೆದುಕೊಂಡು ಸುಖವಾಗಿ ಕುಳಿತುಬಿಟ್ಟ. ಹಿಂದಿನಿಂದಲೇ ಗೊರಕೆಯೂ ಪ್ರಾರಂಭವಾಯಿತು. ನಾನು ಕುತ್ತುಸಿರುಬಿಟ್ಟೆ ಇಳಿದಾಗ ನನ್ನ ಟ್ರಂಕು ನೆಗ್ಗಿ ನಾದುರಸ್ತಾಗಿದ್ದುದನ್ನು ಕಂಡೆ. ಮೇಲಿನ ಪಟ್ಟಿಯು ನಾಲ್ಕೇ ಇಂಚು ಒಳಹೋಗಿತ್ತು. ಇದೂ ಒಂದು ಪ್ರವಾಸದ ಮೋಜೇ ಸರಿ. ಪ್ರವಾಸಕ್ಕೆ ಒಯ್ದ ಸಾಮಾನುಗಳು ಅದೇ ಸ್ಥಿತಿಯಲ್ಲಿ ತಿರುಗಿ ಬರುವದಿಲ್ಲ. ಕಳೆದುಕೊಂಡಾದರೂ ಬರಬೇಕು ಇಲ್ಲವೆ ಪೂರ್ತಿ ಮೋಡಕಾ ಬಜಾರದಲ್ಲಿಯಾದರೂ ಹಾಕಬೇಕು.

ಬಸ್ಸು ಪ್ರಯಾಣ ಸ್ಫೂರ್ತಿಯ ಉಗಮವೂ ಆಗಬಹುದು. ಬಹುಕಾಲ ಮೌನದಲ್ಲಿದ್ದು ಬೇಜಾರುಗೊಂಡಾಗ ಒಳ್ಳೆಯ ಮಾತುಗಾರ ಸಿಕ್ಕರೆ ತೀರಿತು-ಮಾತಿನ ಸುರಿಮಳೆ; ಚರ್ಚೆಯ ಗಂಗಾಪ್ರವಾಹ. ವಿಷಯ ಮುಖ್ಕವಲ್ಲ, ಮಾತೇ ಮುಖ್ಯ. ಭಾರತದ ವಿದೇಶನೀತಿಯಿಂದ ಹಿಡಿದು ಹಳ್ಳಿಯ ಗ್ರಾಮಪಂಚಾಯತಿಯ ಚುನಾವಣೆಯವರೆಗೆ ಶಿಕ್ಷಣದ ಅಧೋಗತಿಯಿಂದ ಜನರ ನೈತಿಕ ಅಧಃಪತನದವರೆಗೆ ಮಾತನ್ನು ಜಗ್ಗಿಯಾಡಲಾಗುತ್ತದೆ. ಒಂದು ಸಾರೆ ಎಲ್ಲಿಯೋ ಪ್ರಾರಂಭವಾದ ಮಾತು ಮತ್ತೆಲ್ಲಿಯೋ ಮುಗಿಯುತ್ತದೆ. ಆಂಧ್ರನಾಡಿನ ಮಾತುಗಾರನೊಡನೆ ಮಾತುಕತೆ ಹೂಡಿದೆ. ದೇಶದ ಸಮಸ್ಯೆಯ ಮೇಲೆ ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸಿದ ಬಳಿಕ ನಮ್ಮ ಸಮೀಪದ ವಿಷಯವೇ ಬಂತು. ನೀವು ದೇಶವೆಲ್ಲ ಸುತ್ತಿದ್ದೀರಿ. ಕರ್ನಾಟಕ ಬಗ್ಗೆ ನಿಮ್ಮ ಅಭಿಪ್ರಾಯವೇನು?-ಎಂದು ಪ್ರಾಂತೀಯ ಅಭಿಮಾನದ ಪ್ರಶ್ನೆ ಕೇಳಿದೆ. ಅದೊಂದು ದರಿದ್ರ ನಾಡು-ಎಂದು ಅವನು ಅಭಿಪ್ರಾಯಪಟ್ಟಾಗ ನಾನು ರೊಚ್ಚಿಗೆದ್ದೆ. ವೀರರ ನಾಡಾದ ಕಲಿಗಳ ನಮ್ಮ ನಾಡಿಗೆ ಅಪಮಾನವೇ ಎಂದು ಕೋಪದಿಂದ ಕುದಿದೆ. ಚರ್ಚೆಯಿಂದ ಗೆದೆಯಲಾಗದೆ, ಇನ್ನು ಮಾರಾಮಾರಿಯಾಗುವ ಸ್ಥಿತಿಯಿತ್ತು. ಸಹಪ್ರಯಾಣಿಕರು ಆ ಕುತ್ತಿನಿಂದ ನಮ್ಮಿಬ್ಬರನ್ನು ಪಾರುಗಾಣಿಸಿದರು. ಹೀಗೆ ಬಸ್ಸು ಪ್ರಯಾಣ ಒಂದೂಂದು ಸಲ ಅನಿರೀಕ್ಷತ ಗುಡಾಂತರಕ್ಕೆ ಈಡೂ ಮಾಡುತ್ತಿರುವುದುಂಟು.

ತೀರ ಇತ್ತೀಚೆಗಾದ ಘಟನೆಯಿದು. ರಾತ್ರಿ ೯ ಗಂಟೆಯಾಗಿರಬಹುದು. ಬಸ್ಸಿನಿಂದ ಇಳಿಯುತ್ತಲೇ ಮುಂದಿನ ಬಸ್ಸು ಸಿದ್ದವಾಗಿ ನಿಂತಿತ್ತು. ನನ್ನ ಗಂಟುಗಳನ್ನು ಬಸ್ಸಿನ ಮೇಲೆ ಒಗೆಯಿಸಿ ಇನ್ನೂ ತಡವಿರಬಹುದು ಎನ್ನುವ ಡೌಲಿನಲ್ಲಿ ಚಹಾ ಕುಡಿಯುವ ದುರ್ಬುದ್ಧಿಯಿಂದ ಹೋಟೆಲಿಗೆ ಹೋದೆ. ಅಂದು ಬಸ್ಟಾಂಡಿನಲ್ಲಿ ಎರಡು ಮೂರು ಬಸ್ಸುಗಳು ಸಾಲಾಗಿ ನಿಂತಿದ್ದವು. ಯಾವುದೋ ಬಸ್ಸಿನಲ್ಲಿ ಏರಿ ಟಿಕೇಟೊಂದನ್ನು ಪಡದೆ. ನನಗೆ ಸಂಶಯವೇನೂ ಬರಲಿಲ್ಲ. ಬಸ್ಸು ಇನ್ನೇನು ಹೊರಡಬೇಕು ಎಂದಾಗ ತಿಳಿದುಬಂತು. ನಾನು ಯಾವ ಊರಿಂದ ಬಂದೆನೋ ಅಲ್ಲಿಗೇ ಹೊರಟಿತ್ತು ಆ ಬಸ್ಸು. ಕಂಡಕ್ಟರನಿಗೆ ಹೇಳಿ ಬಸ್ಸಿನಿಂದ ಲಗುಬಗೆಯಿಂದ ಇಳಿದೆ. ಬಸ್ಸಿನ ನಾಲ್ವತ್ತು ಮುಖಗಳು ನನ್ನನ್ನು ದಿಟ್ಟಿಸಿ ನೋಡುತ್ತಿದ್ದವು. ಅಪಹಾಸ್ಯಗೈಯುತ್ತಿದ್ದವು. ನಾನು ತಲೆಯಿಂದ ಬುಡದವರೆಗೂ ಬೆವರಿನಲ್ಲಿ ಮುಳುಗಿಹೋಗಿದ್ದೆ. ಈ ರೀತಿ ಬಸ್ಸಿನಲ್ಲಿ ನಾನು ಹೀರೋ ಆಗಿದ್ದಂತೆ ಝೀರೋ ಕೂಡಾ ಆಗಿ ನಗೆಗೀಡಾದ ಪ್ರಸಂಗಗಳು ಇವೆ. ಬಸ್ ಪ್ರಯಾಣದಲ್ಲಿ ಸಾಮಾನ್ಯ ಘಟನೆಗಳೇ ಜರುಗಿದರೆ, ಲಾರಿಯಲ್ಲಿ ಅಸಾಮಾನ್ಯ ಘಟನೆಗಳು ಸಂಭವಿಸುತ್ತವೆ. ಒಂದು ಸಾರೆ ಬಸ್ಸು ತಪ್ಪಿತು. ಲಾರಿಯ ಹಾದಿಯನ್ನು ಕಾದು ನಿಂತಾಗ ಮಧ್ಯರಾತ್ರಿಯಾಗಿತ್ತು. ಲಾರಿಯೊಂದು ಬಂದೇ ಬಂತು. ನಾನು ಕುಳಿತುಬಿಟ್ಟೆ. ಲಾಯಿಟಿನ ಬೆಳಕಿನಲ್ಲಿ ನಾನೂ ಡ್ರಾಯವ್ಹರನೂ ಪರಸ್ಪರ ದಿಟ್ಟಿಸಿ ನೋಡಿದೆವು. ಆತನ ನೋಟಕ್ಕೆ ನಡುಗಿಹೋದೆ. ಕೈಯಲ್ಲಿ ಹೊಸದಾಗಿ ಕೊಂಡ ವಾಚು ಇತ್ತು. ಕಿಸೆಯಲ್ಲಿ ೬೦-೭೦ ರೂ. ಇದ್ದವು. ಈ ಹಣದ ಆಸೆಗಾಗಿ ನನ್ನನ್ನು ಕಡಿದು ತುಂಡುಮಾಡಿ, ರೋಡ ಬದಿಗೆ ಒಗೆದರೆ ಏನು ಗತಿ? ಹತ್ತು ನಿಮಿಷಕ್ಕೊಮ್ಮೆ ನನ್ನೆಡೆ ದೃಷ್ಟಿಬೀರುವ ವ್ಯಕ್ತಿಯ ಮೇಲೆ ನನ್ನ ವಿಶ್ವಾಸ ಹಾರಿತು. ಎದೆ ಡವ ಡವ ಅನ್ನುತ್ತಿತ್ತು. ನಾನು ಇಳಿಯಬೇಕಾದ ಸ್ಥಳ ಬರುವವರೆಗೂ ಜೀವದಲ್ಲಿ ಜೀವವಿರಲಿಲ್ಲ. ಡ್ರಾಯವ್ಹರನು ನನ್ನನ್ನು ಜೀವಂತ ಬಿಟ್ಟಾಗ ಅವನು ಹೇಳಿದ ಹಣಕ್ಕಿಂತ ಹೆಚ್ಚಿನ ಹಣ ಕೊಟ್ಟೆ. ‘ಸಲಾಂ ಸಾಬ್’ ಎನ್ನುವ ಆತನ ನುಡಿಯನ್ನು ಕೇಳುವ ವ್ಯವಧಾನವಿರದೆ ಓಡಿಯೇಬಿಟ್ಟದ್ದೆ.

ಬಸ್ಸು ಪ್ರಯಾಣ-ಈ ರೀತಿ ನನ್ನ ಅನುಭವದ ವಲಯವನ್ನು ವಿಸ್ತರಿಸಿದೆ. ಜೀವನದಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಬರಡು ಬಾಳಿನಲ್ಲಿ ಆಶೆಯ ಚಿಗುರನ್ನೂ ಮೂಡಿಸಿದೆ. ಜೀವನದ ಏಕತಾನತೆಯಲ್ಲಿ ವೈವಿಧ್ಯದ ಬಣ್ಣವನ್ನು ತೀಡಿದೆ. ವಿವಿಧ ವ್ಯಕ್ತಿಗಳನ್ನು ನೋಡುವ, ಮಾತನಾಡಿಸುವ ಸಂದರ್ಭವನ್ನು ಒದಗಿಸಿಕೊಟ್ಟು ಬಿಡದೆ ಅವರನ್ನು ಅಭ್ಯಸಿಸುವಂತೆ ಮಾಡಿದೆ. ಇಂತು ಪ್ರವಾಸವೆಂದರೆ ನನಗೆ ಮೋಜಿನ ವಿಷಯವಾಗಿದೆ.
*****