ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

‘ಯಾಕೆ ಇಷ್ಟು ನಿಧಾನವಾಗಿ ಹೋಗುತಿದ್ದೀರಿ? ಹೀಗೆ ಹೋದರೆ ನಿದ್ದೆ ಮಾಡಿಬಿಡತೇವೆ ಅಷ್ಟೆ. ಯಾಕೆ ಬೇಗ ಬೇಗ ಹೆಜ್ಜೆ ಹಾಕಬಾರದು?’ ಫೆಲಿಸಿಯಾನೂ ರುಯೆಲಾಸ್ ಮುಂದೆ ಇದ್ದವರನ್ನು ಕೇಳಿದ.

‘ನಾಳೆ ಬೆಳಿಗ್ಗೆ ಹೊತ್ತಿಗೆ ಅಲ್ಲಿರತೇವೆ,’ ಅವರು ಅಂದರು.

ಅದೇ ಅವನು ಕೇಳಿದ ಅವರ ಕೊನೆಯ ಮಾತು. ಅವರ ಕೊನೆಯ ಮಾತು. ಆಮೇಲೆ, ಮಾರನೆಯ ದಿನ ಅದನ್ನ ಅವನು ನೆನಪು ಮಾಡಿಕೊಳ್ಳುತ್ತಾನೆ.

ಅವರು ಮೂರು ಜನ ನಡೆಯುತಿದ್ದರು. ನೆಲ ನೋಡಿಕೊಂಡು. ರಾತ್ರಿಯಲ್ಲಿದ್ದ ಒಂದಿಷ್ಟು ಬೆಳಕು ನೆಚ್ಚಿ ನಡೆಯುತಿದ್ದರು.

‘ಕತ್ತಲಿದ್ದರೆ ಒಳ್ಳೆಯದು. ಅವರು ನಮ್ಮನ್ನ ನೋಡುವುದಕ್ಕೆ ಆಗಲ್ಲ,’ ಅಂತ ಕೂಡ ಅಂದಿದ್ದರು-ಸ್ವಲ್ಪ ಮುಂಚೆ ಅಥವಾ ನಿನ್ನೆ ರಾತ್ರಿ. ಅವನಿಗೆ ನೆನಪು ಇರಲಿಲ್ಲ. ಅವನ ಯೋಚನೆಗೆಲ್ಲ ನಿದ್ರೆ ಮೋಡ ಮೆತಿಕೊಂಡಿತ್ತು.

ಈಗ ಏರು ಹಾದಿಯಲ್ಲಿ ನಿದ್ರೆ ಮತ್ತೆ ಬರುತ್ತಿತ್ತು. ಹತ್ತಿರ ಬಂದು ಮೈಯಲಲ್ಲಿ ಎಲ್ಲಿ ಅತೀ ದಣಿದ ಭಾಗ ಎಲ್ಲಿದೆ ಅನ್ನುವುದನ್ನು ಹುಡುಕುತ್ತ ಸುತ್ತು ಹಾಕುತ್ತಿದೆ ಅನ್ನಿಸಿತು. ಕೊನೆಗೂ ಮೇಲೆ ಬಿತ್ತು, ಬಂದೂಕು ಹೊತ್ತ ಬೆನ್ನ ಮೇಲೆ ಎರಗಿತು.

ನೆಲ ಸಮನಾಗಿದ್ದಾಗ ಚುರುಕು ಹೆಜ್ಜೆ ಹಾಕುತಿದ್ದ. ಏರು ಶುರುವಾದಾಗ ನಿಧಾನವಾಗುತಿದ್ದ. ತಲೆ ನಿಧಾನವಾಗಿ ತೂಗುತಿತ್ತು. ನಡೆಯುವುದು ನಿಧಾನವಾಷ್ಟೂ ಹೆಜ್ಜೆಗಳು ಕಿರಿದಾಗುತಿದ್ದವು. ನಿದ್ರೆ ತಲೆಯನ್ನು ತೂಗುತ್ತಿರುವಾಗ ಅವನ ಪಕ್ಕದಲ್ಲೇ ನಡೆಯುತಿದ್ದ ಮಿಕ್ಕವರು ತುಂಬ ಮುಂದೆ ಹೋಗಿದ್ದರು.

ಹಿಂದೆ ಬೀಳುತಿದ್ದ. ಎದುರಿಗೆ ರಸ್ತೆ ಇತ್ತು. ಸುಮಾರಾಗಿ ಕಣ್ಣಿನ ಮಟ್ಟಕ್ಕೇನೇ. ಬಂದೂಕುಗಳ ಭಾರವಿತ್ತು. ಬೆನ್ನು ಬಾಗಿದ ಎಡೆಯಲ್ಲಿ ನಿದ್ರೆ ನಿಧಾನವಾಗಿ ತೆವಳಿಕೊಂಡು ಏರುತಿತ್ತು.

ಹೆಜ್ಜೆ ಸಪ್ಪಳ ಇಲ್ಲವಾಗುತ್ತಿರುವುದು ಕೇಳಿಸಿಕೊಂಡ. ಆ ಪೊಳ್ಳು ಹೆಜ್ಜೆಗಳ ಸದ್ದು ಯಾವಾಗಿನಿಂದ, ಎಷ್ಟು ರಾತ್ರಿಗಳಲ್ಲಿ ಕೇಳುತಿದ್ದಾನೋ ಯಾರಿಗೆ ಗೊತ್ತು: ‘ಲಾಮಗಡಲೇನಾದಿಂದ ಇಲ್ಲಿಗೆ ಮೊದಲನೆಯ ರಾತ್ರಿ; ಆಮೇಲೆ, ಅಲ್ಲಿಂದ ಇಲ್ಲಿಗೆ ಎರಡನೆಯ ರಾತ್ರಿ; ಇದು ಮೂರನೆಯದು. ಇನ್ನು ಬಹಳ ರಾತ್ರಿಗಳನ್ನ ಕಳೆಯುವುದು ಇರಲಾರದು; ಹಗಲು ಹೊತ್ತಾದರೂ ನಿದ್ರೆ ಮಾಡುವ ಹಾಗಿದ್ದಿದ್ದರೆ! ಅವರು ಬೇಡ ಅಂದಿದ್ದರು. ‘ಮಲಗಿರುವಾಗ ಅವರು ಹಿಡಿದು ಹಾಕಬಹುದು, ಹಾಗಾದರೆ ಕೆಟ್ಟದಾಗತದೆ ಅಂಂದಿದರು.’

‘ಯಾರಿಗೆ ಕೆಟ್ಟದಾಗತದೆ?’

ಈಗ ನಿದ್ದೆ ಅವನನ್ನು ಮಾತಾಡಿಸುತಿತ್ತು. ‘ಸ್ವಲ್ಪ ತಾಳಿ, ಇವತ್ತು ರೆಸ್ಟು ಮಾಡತೇವೆ, ನಾಳೆ ಹೆಚ್ಚು ಶಕ್ತಿ, ಹೆಚ್ಚು ಆಸೆ ಕೂಡಿಸಿಕೊಂಡು ಒಂದೇ ಸಾಲಿನಲ್ಲಿ ಹೋಗತೇವೆ, ಬೇಕು ಅಂದರೆ ಓಡತೇವೆ ಅಂತ ಅವರಿಗೆ ಹೇಳಿದೆ.’

ಕಣ್ಣು ಮುಚ್ಚಿ ನಿಂತ. ‘ಅತಿಯಾಯಿತು. ಆತುರ ಮಾಡಿ ನಮಗೇನು ಸಿಗುತ್ತದೆ? ಒಂದು ದಿನ ಉಳಿಯಬಹುದು. ಇಷ್ಟೊಂದು ದಿನ ಕಳೆದಮೇಲೆ ಒಂದು ದಿನ ಉಳಿಸುವುದರಲ್ಲಿ ಅರ್ಥವಿಲ್ಲ.’

ತಟ್ಟನೆ ಜೋರಾಗಿ ಚೀರಿದ ‘ಎಲ್ಲದೀಯಾ?’

ಗುಟ್ಟು ಹೇಳುವ ದನಿಯಲ್ಲಿ, ‘ಹೋಗತಾ ಇರು, ಹೋಗತಾ ಇರು!’ ಅಂದ.

ಮರದ ಬೊಡ್ದೆಗೆ ಒರಗಿದ. ಅಲ್ಲಿ ನೆಲ ತಂಪಾಗಿತ್ತು. ಅವನ ಬೆವರು ತಣ್ಣೀರಾಗಿತ್ತು. ಅವರು ಹೇಳುತಿದ್ದ ಬೆಟ್ಟದ ಸಾಲು ಇದೇ ಇರಬೇಕು.

ಕೆಳಗೆ ಹವಾ ಬಿಸಿಯಾಗಿತ್ತು. ಇಲ್ಲಿ ಕೋಟಿನೊಳಕ್ಕೂ ನಗ್ಗುವ ಥಂಡಿ ಇದೆ. ‘ಅವರು ನನ್ನ ಅಂಗಿ ಬಿಚ್ಚಿ ಹಿಮದ ಕೈಯಲ್ಲಿ ಮೈ ಸವರಿದ ಹಾಗಿದೆ,’ ಅಂದುಕೊಂಡ.

ಪಾಚಿ ಬೆಳೆದಿದ್ದ ನೆಲದ ಮೇಲೆ ಕುಸಿದ. ಮರಗಳ ಗೋಡೆಯ ಮೇಲೆ ಇಳಿದಿದ್ದ ರಾತ್ರಿ ಎಷ್ಟು ಅಗಲವಿದೆಯೋ ಅಳತೆ ಮಾಡುವವನ ಹಾಗೆ ಕೈ ಅಗಲಿಸಿದ. ಟರ್ಪೆಂಟೈನ್ ನೆನಪಿಸುವ ಗಾಳಿಯನ್ನು ಉಸಿರೆಳೆದುಕೊಂಡ. ನಿದ್ರೆಗೆ ಜಾರಿಕೊಂಡ. ಪಾಪಾಸುಕಳ್ಳಿಯ ಮೇಲೆ ಒರಗಿದ. ಮೈ ಬಿಗಿಯುತಿದೆ ಅನ್ನಿಸಿತು.
* * *

ಬೆಳಗಿನ ಜಾವದ ಥಂಡಿ ಅವನನ್ನು ಎಬ್ಬಿಸಿತು. ಇಬ್ಬನಿಯ ವದ್ದೆ. ಕಣ್ಣು ತೆರೆದ. ಕಪ್ಪು ಕೊಂಬೆಗಳಾಜೆ ಮಿನುಗುತಿದ್ದ ಸ್ವಚ್ಛ ನಕ್ಷತ್ರಗಳನ್ನು ಕಂಡ. ‘ಕತ್ತಲಾಗತಾ ಇದೆ,’ ಅಂದುಕೊಂಡ. ಮತೆ ನಿದ್ರೆ ಹೋದ. ಕೂಗಾಟದ ಸದ್ದು, ಗಟ್ಟಿ ರಸ್ತೆಯ ಮೇಲೆ ಗೊರಸಿನ ಸದ್ದು ಕೇಳಿಸಿದಾಗ ಎಚ್ಚರವಾದ. ನಸುಹಳದಿ ಬೆಳಕು ದಿಗಂತದ ಅಂಚಿನಲ್ಲಿತ್ತು.

ಕತೆಗಳನ್ನು ಹೊಡೆದುಕೊಂಡು ಬರುತಿದ್ದವರು ಪಕ್ಕದಲ್ಲಿ ಹಾದು ಹೋಗುತ್ತ ಅವನನ್ನು ನೋಡಿದರು. ‘ಗುಡ್ ಮಾರ್‍ನಿಂಗ್,’ ಅಂದರು.

ಮಾಡಬೇಕಾಗಿದ್ದೇನು? ಜ್ಞಾಪಿಸಿಕೊಂಡ. ಹಗಲಾಗಿತ್ತು. ಕಾವಲಿನವರ ಕಣ್ಣಿಗೆ ಬೀಳದ ಹಾಗೆ ರಾತ್ರಿಯಲ್ಲೇ ಅವನು ಬೆಟ್ಟಗಳ ಸಾಲು ದಾಟಬೇಕಾಗಿತ್ತು. ಬಲವಾದ ಕಾವಲು ಇರುವ ಜಾಗ. ಹಾಗಂತ ಅವರು ಹೇಳಿದ್ದರು.

ಬಂದೂಕುಗಳ ಕಟ್ಟು ಬೆನ್ನಿಗೇರಿಸಿಕೊಂಡ. ರಸ್ತೆಯ ಬದಿಗೆ ಹೋದ. ಬೆಟ್ಟದ ಅಂಚಿಗೆ, ಸೂರ್ಯ ಹುಟ್ಟುತಿದ್ದ ದಿಕ್ಕಿಗೆ ತಿರುಗಿದ. ಏರುತ್ತ, ಇಳಿಯುತ್ತ, ದಿಬ್ಬಗಳನ್ನು ದಾಟಿಕೊಂಡು ನಡೆದ.

‘ಅವನನ್ನ ಅಲ್ಲಿ ಕಂಡೆವು, ಆ ಕಡೆ, ಈ ಕಡೆ ಹೋಗುತ್ತಾ ಇದ್ದ, ಬಂದೂಕುಗಳನ್ನು ಇಟುಕೊಂಡಿದ್ದ.’-ಕತ್ತೆಗಳನ್ನು ಹೊಡೆದುಕೊಂಡು ಹೋಗುವವರು ಹೇಳುತ್ತಿರುವುದು ಕೇಳಿಸಿದ ಹಾಗಿತ್ತು.

ಬಂದೂಕುಗಳ ಕಟ್ಟು ಕೆಳಕ್ಕೆಸೆದ. ಆಮೇಲೆ ತೋಟಾಗಳ ಬೆಲ್ಟು ಕಳಚಿದ. ಮೈ ಸ್ವಲ್ಪ ಹಗುರಾದಂತೆ ಅನ್ನಿಸಿತು. ಓಡುವುದಕ್ಕೆ ಶುರುಮಾಡಿದ. ಕತ್ತೆಗಳವರಿಗಿಂತ ಮೊದಲು ಬೆಟ್ಟದ ಬುಡ ಸೇರಬೇಕು ಅನ್ನುವ ಹಾಗೆ ಓಡಿದ.

‘ಮೇಲಕ್ಕೆ ಏರಬೇಕು, ಟೇಬಲ್ಲಿನ ಹಾಗಿರುವ ಬೆಟ್ಟದ ನೆತ್ತಿಯನ್ನು ಸುತ್ತಿಹಾಕಬೇಕು, ಆಮೇಲೆ ಕೆಳಗಿಳಿಯಬೇಕು.’ ಅವನು ಅದನ್ನೇ ಮಾಡುತಿದ್ದ, ಆದರೆ ಅವರ ಜೊತೆಗಲ್ಲ ಅಷ್ಟೇ.

ಅಂಚಿಗೆ ಬಂದ. ದೂರದಲ್ಲಿ ದೊಡ್ಡ ಬಂಜರು ಬಯಲು ಕಾಣಿಸಿತು.

‘ಅವರು ಅಲ್ಲೇ ಇರತಾರೆ. ಇರಬೇಕು. ತಲೆಯ ಮೇಲೆ ನೆರಳಿಲ್ಲದೆ ಬಿಸಿಲಲ್ಲೇ ರೆಶ್ಟು ತೆಗೆದುಕೊಳ್ಳುತಿರುತ್ತಾರೆ,’ ಅಂದುಕೊಂಡ.

ಇಳಿಜಾರು ಕಣಿವೆಗೆ ಇಳಿದ. ಉರುಳಿದ, ಓಡಿದ, ಮತ್ತೆ ಉರುಳಿ ಮತ್ತೆ ಎದ್ದು ಓಡಿದ.

‘ದೇವರ ಇಚ್ಛೆ,’ ಅಂದುಕೊಳ್ಳುತ್ತ ಮತ್ತೆ ಉರುಳಿ ಪೂರಾ ನೆಲಕ್ಕೆ ಮುಟ್ಟಿದ.

ಕತ್ತೆಗಳನ್ನು ಹೊಡೆದುಕೊಂಡು ಬಂದವರು ಗುಡ್ ಮಾರ್ನಿಂಗ್ ಅಂದದ್ದು ಇನ್ನೂ ಕೇಳಿಸುತ್ತಿದೆ ಅನಿಸುತಿತ್ತು. ಕಣ್ಣು ಆಟ ಕಟ್ಟುತಿದೆ ಅಂದುಕೊಂಡ. ಮೊದಲನೆಯ ಕಾವಲಿನವನ ಹತ್ತಿರ ಹೋಗಿ, ‘ಅವನನ್ನ ಇಂತಿಂಥಾಥಾ ಕಡೆ ನೋಡಿದೆವು, ಇಂತಿಂಥಾ ಕಡ ಹೋದ,’ ಅನ್ನುತ್ತಾರೆ.

ಇದ್ದಕಿದ್ದ ಹಾಗೆ ನಿಶ್ಚಲವಾದ.

‘ಕ್ರಿಸ್ತನೇ!’ ಅಂದ. ‘ವಿವಾ ಕ್ರಿಸೋ ರೇ!’ ಅಂತ ಚೀರಲಿದ್ದವನು ತಡೆದುಕೊಂಡ. ಸೊಂಟದಲ್ಲಿದ್ದ ಪಿಸ್ತೂಲು ತೆಗೆದು ಅಂಗಿಯೊಳಗೆ ಕಂಕುಳಲ್ಲಿ, ಮೈಗೆ ತಾಕುವ ಹಾಗೆ ಇಟ್ಟುಕೊಂಡ. ಅದು ಧೈರ್ಯ ಕೊಟ್ಟಿತು. ದೊಡ್ಡ ಕ್ಯಾಂಫೈರು ಹಾಕಿಕೊಂಡು ಗಲಾಟೆ ಎಬ್ಬಿಸಿಕೊಂಡಿದ್ದ ಸೈನಿಕರ ಗುಂಪನ್ನು ನೋಡುತ್ತ ಮೆಲ್ಲಗೆ ಹೆಜ್ಜೆ ಇಡುತ್ತ ಅಕ್ವಾ ಝರ್ಕ ಬಯಲಿಗೆ ಸಮೀಪವಾದ.

ಬೇಲಿಯವರೆಗೂ ಹೋದ. ಸ್ಪಷ್ಟವಾಗಿ ಕಾಣುತಿದ್ದರು. ಮುಖ ಗುರುತು ಸಿಕ್ಕುತಿತ್ತು. ಅವರೇ. ಅವನ ಚಿಕ್ಕಪ್ಪ ಟಾನಿಸ್, ಚಿಕ್ಕಪ್ಪ ಲಿಬ್ಡೋ. ಸೈನಿಕರು ಕ್ಯಾಂಪ್‌ಫೈರಿನ ಸುತ್ತ ಕುಣಿಯುತಿದ್ದರು. ಚಿಕ್ಕಪ್ಪಂದಿರು ಬೇಲಿಯ ನಡುವೆ ಇದ್ದ ಮರಕ್ಕೆ ನೇತು ಬಿದ್ದು ಜೋತಾಡುತಿದ್ದರು. ಬೆಂಕಿಯಿಂದ ಎದ್ದ ಹೊಗೆ ಅವರಿಗೆ ಗೊತ್ತೇ ಇಲ್ಲ ಅನ್ನುವ ಹಾಗಿದ್ದರು. ಮುಖವೆಲ್ಲ ಮಸಿಯಾಗಿತು, ಕಣ್ಣು ಕಪ್ಪಾಗಿತು.

ಅವರನ್ನೇ ನೋಡುತ್ತ ಇರುವುದಕ್ಕೆ ಮನಸ್ಸಾಗಲಿಲ್ಲ. ಬೇಲಿಯುದ್ದಕ್ಕೂ ತೆವಳಿದ. ಮೂಲೆಯಲ್ಲಿದ್ದ ಹಳ್ಳದಲ್ಲಿ ಬಚ್ಚಿಟ್ಟುಕೊಂಡ. ಹೊಟ್ಟೆಯಲ್ಲಿ ಹಾವು ನುಲಿಯುತ್ತಿದೆ ಅನ್ನಿಸಿದರೂ ನಿರಾಳ ಅನ್ನಿಸಿತ್ತು.

ಹಳ್ಳದಿಂದ ಸ್ವಲ್ಪ ಮೇಲೆ ಯಾರೋ ಮಾತಾಡುತಿದ್ದರು:

‘ಯಾಕೆ ಸುಮ್ಮನೆ ಇದೀರ, ಇವರಿಬ್ಬರನ್ನ ಸಾಯಿಸುವುದು ಬಿಟ್ಟು?’

‘ಇನ್ನೊಬ್ಬ ಬರಲಿ ಅಂತ ಕಾಯುತಿದ್ದೇವೆ. ಮೂರು ಜನ ಅಂದಿದ್ದಾರೆ ಅವರು. ಅಂದಮೇಲೆ ಮೂರು ಜನ ಇರಲೇಬೇಕು. ತಪ್ಪಿಸಿಕೊಂಡಿರುವ ಆ ಒಬ್ಬ ಇನ್ನೂ ಹುಡುಗ ಅಂದಿದಾರೆ. ಹುಡುಗನೋ ಅಲ್ಲವೋ, ದಾರಿಯಲ್ಲಿ ಅವಿತು ಕೂತಿದ್ದು ನಮ್ಮ ಲೆಫ್ಟಿನೆಂಟ್ ಪಾರಾ ಮತ್ತೆ ಅವನ ಜೊತೆ ಇದ್ದವರನ್ನು ಕೊಂದಿದ್ದು ಅವನೇ. ಈ ಇಬ್ಬರು ಮುದುಕರು ಬಂದ ಈ ದಾರಿಯಲ್ಲೇ ಅವನು ಬರಬೇಕು. ಇವತ್ತು, ನಾಳೆ ನೋಡಿ; ಅವನು ಬರದಿದ್ದರೆ ಇರುವವರಲ್ಲಿ ಒಬ್ಬನನ್ನು ಕೊಲ್ಲಿ ಅಂದಿದಾನೆ ಮೇಜರ್. ನಾಳೆ ಸಾಯಂಕಾಲದ ಹೂತ್ತಿಗೆ ಈ ದಾರಿಯಲ್ಲಿ ಯಾವನು ಮೊದಲು ಕಾಣಿಸಿಕೊಳ್ಳುತ್ತಾನೋ ಅವನನ್ನು ಕೊಂದರೆ ಆಯಿತು. ಮೂರು ಜನರನ್ನ ಕೊಲ್ಲಿ ಅನ್ನುವ ಆರ್ಡರು ಕೊಟ್ಟ ಕೆಲಸ ಪೂರೈಸತದೆ.’

‘ನಾವೇ ಹೋಗಿ ಯಾಕೆ ಅವನನ್ನ ಹುಡುಕಬಾರದು? ಸುಮ್ಮನೆ ಇಲ್ಲಿ ಬೋರು ಹೊಡೆಸಿಕೊಳ್ಳುವುದು ತಪ್ಪುತ್ತದೆ.’

‘ಬೇಕಾಗಿಲ್ಲ. ಈ ದಂಗೆಯ ಜನವೆಲ್ಲ ಕೊಮಂಜಾ ಬೆಟ್ಟಸಾಲಿನಲ್ಲೇ ಹೋಗಿ ಕೆಟೋರ್ಸ್‌ನಲ್ಲಿರುವ ಕ್ರಿಸ್ಟೆರೋಸ್ ಗುಂಪಿನ ಜೊತೆ ಸೇರುತ್ತಾರೆ. ಇನ್ನೇನು ಈಗ ಬಂದವರದೇ ಕೊನೆಯ ಗುಂಪು ಇರಬೇಕು. ಇವರನ್ನೆಲ್ಲ ಹೋಗುವುದಕ್ಕೆ ಬಿಡಬೇಕು, ಇವರೆಲ್ಲ ಹೋಗಿ ಲಾಸ್ ಆಲ್ಟೋಸ್ ಸ್ನೇಹಿತರ ಮೇಲೆ ಯುದ್ಧ ಮಾಡಬೇಕು. ಆಗ ಮಜಾ ಇರತದೆ.’

‘ಆಹಾ! ಕೊನೆಗೆ ನಮ್ಮನ್ನೂ ಅಲ್ಲಿಗೇ ಕಳಿಸತಾರೋ ಏನೋ ಮೋಡೋಣ.’

ಹೊಟ್ಟೆಯೊಳಗಿನ ತಳಮಳ ಕಡಮೆಯಾಗುವವರೆಗೆ ಫೆಲಿಸಿಯಾನೊ ರುಯೆಲಾಸ್ ಸುಮ್ಮನೆ ಇದ್ದ. ಇನ್ನೇನು ನೀರಿಗೆ ಧುಮುಕುವವನ ಹಾಗೆ ಆಳವಾಗಿ ಉಸಿರೆಳದುಕೊಂಡ. ನೆಲಕ್ಕೇ ಅಂಟಿಕೊಂಡ ಹಾಗೆ ತೆವಳಿದ.

ಕೊರಕಲಿನ ತುದಿ ತಲುಪಿದ ಮೇಲೆ ನೆಟ್ಟಗೆ ನಿಂತು. ಒತ್ತಾಗಿದ್ದ ಪೊದೆಗಳ ನಡುವೆ ದಾರಿ ಮಾಡಿಕೊಂಡು ಓಡಿದ. ಬಯಲಿನ ವಿಸ್ತಾರದಲ್ಲಿ ಕೊರಕಲು ಕರಗಿ ಹೋಯಿತು ಅನ್ನುವುದು ಸ್ಪಷ್ಟವಾಗುವವರೆಗೆ ಹಿಂದೆ ತಿರುಗಿ ನೋಡಲಿಲ್ಲ, ಓಡುವುದು ನಿಲಸಲಿಲ್ಲ.

ನಿಂತ. ಉಸಿರಾಡುತಿದ್ದ. ಏದುಸಿರು. ನಡುಗುತ್ತಿದ್ದ.
*****

ಟಿಪ್ಪಣಿ:

ಮಧ್ಯ ಮೆಕ್ಸಿಕೋ ಮತ್ತು ಪಶ್ಚಿಮ ಮೆಕ್ಸಿಕೋ ಪ್ರಾಂತ್ಯಗಳಲ್ಲಿ, ೧೯೨೬-೨೯ರ ಅವಧಿಯಲ್ಲಿ ಕ್ರಿಸ್ಟಿರೋ ದಂಗೆ ವ್ಯಾಪಕವಾಗಿತ್ತು. ಮೆಕ್ಸಿಕನ್ ಸರ್ಕಾರದ ಕ್ಯಾತೊಲಿಕ್ ವಿರೋಧಿ ನೀತಿಯನ್ನು ವಿರೋಧಿಸಿ ಈ ದಂಗೆ ನಡೆಯಿತು. ‘ವಿವಾ ಕ್ರೆಸ್ತೋ ರೇ’ ಅನ್ನುವುದು ದಂಗೆಯ ಜನಗಳ ಘೋಷಣೆಯಾಗಿತ್ತು.

ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : La noche que lo dejaron solo / The night they left him alone

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು….?
Next post ನೀನು ದೇವಾ ಒಳಗಣವನು…

ಸಣ್ಣ ಕತೆ

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…