ಬಾಲಗ್ರಹಕ್ಕೆ ಗುರಿಯಾದ ಚಿತ್ರರಂಗ

ಬಾಲಗ್ರಹಕ್ಕೆ ಗುರಿಯಾದ ಚಿತ್ರರಂಗ

ಅಧ್ಯಾಯ ನಾಲ್ಕು

ಕನ್ನಡ ಚಿತ್ರರಂಗದ ಆರಂಭವೇನೋ ಭರ್ಜರಿಯಾಗಿಯೇ ಆಯಿತೆನ್ನಬಹುದು. ಚಲನಚಿತ್ರರಂಗ ಇನ್ನೂ ಆರಂಭಾವಸ್ಥೆಯಲ್ಲಿತ್ತು. ಪ್ರಯೋಗಗಳಿಗೆ ತೆರೆದ ಬಾಗಿಲಾಗಿತ್ತು. ನಾಟಕದ ಸಿದ್ಧ ಮಾದರಿಗಳನ್ನು ಒಡೆಯುವ ಹಂಬಲ ಹಲವರಲ್ಲಿತ್ತು. ದುಬಾರಿ ವೆಚ್ಚ, ತಾರಾಪದ್ಧತಿ ಇತ್ಯಾದಿ ಬೇನೆಗಳಿಂದ ಮುಕ್ತವಾಗಿತ್ತು. ಬಂಡವಾಳವಿದ್ದವರು, ಚಲನಚಿತ್ರದ ಬಗ್ಗೆ ಕಡುಮೋಹವಿದ್ದವರು ಮಾತ್ರ ಚಲನಚಿತ್ರ ತಯಾರಿಸಲು ಮುಂದೆ ಬಂದರು. ಆದರೆ ಅವರ ಉತ್ಸಾಹಕ್ಕೆ ತಕ್ಕುದಾದ ಮಾರುಕಟ್ಟೆಯೇ ಕನ್ನಡ ಚಿತ್ರರಂಗಕ್ಕೆ ಬಾಲಗ್ರಹವಾಗಿ ಹಿಡಿಯಿತು.

‘ಸತಿ ಸುಲೋಚನಾ’ದಂತಹ ಪ್ರತಿನಾಯಕನ ಕಥಾವಸ್ತು, ‘ಸಂಸಾರ ನೌಕ’ದಂತಹ ಸಾಮಾಜಿಕ ಕಥಾವಸ್ತುಗಳಿಂದ ಪ್ರಯೋಗಗಳನ್ನು ಕೈಗೊಂಡ ಕನ್ನಡ ಚಿತ್ರರಂಗಕ್ಕೆ ಆರಂಭದಲ್ಲಿ ಬಂಡವಾಳ ಹೂಡಿದವರು ಹೊರನಾಡಿನವರು ಇಲ್ಲವೇ ಕನ್ನಡ ರಂಗಭೂಮಿಗೆ ಸಂಬಂಧಿಸಿದವರು. ಗುಬ್ಬಿ ವೀರಣ್ಣನವರು ತಮ್ಮ ಕಂಪನಿಯ ಪ್ರಸಿದ್ಧ ನಾಟಕ ‘ಸದಾರಮೆ’(೧೯೩೫)ಯನ್ನು ಕೊಯಮತ್ತೂರಿನ ಶಾಕುಂತಲ ಪಿಕ್ಚರ್ಸ್‌ನ ಷಣ್ಮುಖ ಚೆಟ್ಟಿಯಾರ್‌ರವರ ಪಾಲುದಾರಿಕೆಯಲ್ಲಿ ತಯಾರಿಸಿದರು. ಮತ್ತೆ ವೀರಣ್ಣನವರು ೧೯೪೧ರಲ್ಲಿ ‘ಸುಭದ್ರ’ ಚಿತ್ರವನ್ನು ನಿರ್ಮಿಸಿದರು. ಮದರಾಸಿನ ಎವಿ‌ಎಂರೊಡಗೂಡಿ ಪ್ರಗತಿ ಪಿಕ್ಚರ್ಸ್ ಲಾಂಛನದಡಿ ನಿರ್ಮಿಸಿದ ‘ವಸಂತಸೇನಾ’ (೧೯೪೧) ಚಿತ್ರ ಉತ್ತಮ ಸಂಪಾದನೆಯನ್ನು ಮಾಡಿತು. ಮರುವರ್‍ಷ ಗುಬ್ಬಿ ಫಿಲಂಸ್ ಲಾಂಛನದಡಿ ‘ಜೀವನ ನಾಟಕ’ (೧೯೪೨) ಚಿತ್ರವನ್ನು ನಿರ್ಮಿಸಿದರು. ಇದು ಮತ್ತೊಂದು ನಾಟಕವನ್ನಾಧರಿಸಿದ ಕನ್ನಡದ ಎರಡನೇ ಸಾಮಾಜಿಕ ಚಿತ್ರ. ಈ ಚಿತ್ರವನ್ನು ತಯಾರಿಸಲು ಪ್ರಸಿದ್ಧ ಕಾದಂಬರಿಕಾರ ಅ.ನ.ಕೃಷ್ಣರಾಯರು ಗುಬ್ಬಿ ವೀರಣ್ಣನವರಿಗೆ ಸಲಹೆ ನೀಡಿ, ಚಿತ್ರಕತೆ-ಸಂಭಾಷಣೆಯನ್ನು ರಚಿಸಿಕೊಟ್ಟರು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಸೋದರ ಡಿ.ಕೆಂಪರಾಜ್ ಈ ಚಿತ್ರದ ನಾಯಕರು. ಮುಂದೆ ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡು ಅಂತಿಮವಾಗಿ ಸೋಲನ್ನನುಭವಿಸಿ ನೇಪಥ್ಯಕ್ಕೆ ಸರಿದರು. ಮತ್ತೊಂದು ವಿಶೇಷತೆ ಈ ಚಿತ್ರದ ನಾಯಕಿ. ಉತ್ತರ ಕರ್ನಾಟಕದ ಮನೆಯೊಂದರಿಂದ ಹೊರಬಿದ್ದು ವಿ.ಶಾಂತರಾಂ ಅವರ ಕಂಪನಿ ಸೇರಿ ‘ಮಾಣುಷಾ’ (ಮರಾಠಿ) ಮತ್ತು ‘ಆದ್ಮಿ’ (ಹಿಂದಿ) ಚಿತ್ರದ ನಾಯಕಿಯಾಗಿ ಭಾರತಾದ್ಯಂತ ಒಂದೇ ಚಿತ್ರದಿಂದ ಮನೆಮಾತಾಗಿದ್ದ ಶಾಂತಾ ಹುಬ್ಳೀಕರ್ ಈ ಚಿತ್ರದ ನಾಯಕಿ. ಚಿತ್ರ ಯಶಸ್ವಿಯಾದರೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

೧೯೪೫ರಲ್ಲಿ ಗುಬ್ಬಿ ಫಿಲಂಸ್‌ರವರು ತಮ್ಮ ಕಂಪನಿಯ ನಾಟಕವನ್ನಾಧರಿಸಿ ನಿರ್ಮಿಸಿದ ‘ಹೇಮರೆಡ್ಡಿ ಮಲ್ಲಮ್ಮ’ ಸಾಕಷ್ಟು ಯಶಸ್ಸು ಕಂಡಿತು. ಯಶಸ್ಸು ಕಂಡ ಚಿತ್ರಗಳ ಸಂಖ್ಯೆ ಒಟ್ಟು ನಿರ್ಮಾಣವಾದ ಸಂಖ್ಯೆಗಳಿಗೆ ಹೋಲಿಸಿದರೆ ಅಷ್ಟೇನೂ ಆಶಾದಾಯಕವಾದ ಚಿತ್ರ ನೀಡುವುದಿಲ್ಲ.

೧೯೩೪ರಲ್ಲಿ ಆರಂಭವಾದ ಚಲನಚಿತ್ರರಂಗ ೧೯೪೯ರ ಅಂತ್ಯದ ವೇಳೆಗೆ ಹದಿನಾರರ ತರುಣಿ. ಆ ತರುಣಿಯಲ್ಲಿ ಅಂತಃಸತ್ವವಿದ್ದರೂ ಬಡಕಲು ದೇಹದವಳು. ಈ ಹದಿನಾರು ವರ್‍ಷಗಳಲ್ಲಿ ತಯಾರಾದ ಚಿತ್ರಗಳ ಸಂಖ್ಯೆ ೨೮. ಅಂದರೆ ವರ್‍ಷಕ್ಕೆ ಸರಾಸರಿ ಎರಡು ಚಿತ್ರಗಳೂ ತಯಾರಾಗಲಿಲ್ಲ. ಅದರಲ್ಲೂ ೧೯೩೮ರಿಂದ ೧೯೪೧-ಮೂರು ವರ್‍ಷ-ರ ಅವಧಿಯಲ್ಲಿ ಒಂದು ಚಿತ್ರವೂ ತಯಾರಾಗಲಿಲ್ಲ. ೧೯೩೫, ೧೯೩೬, ೧೯೪೫ ಮತ್ತು ೧೯೪೮ರಲ್ಲಿ ವರ್‍ಷಕ್ಕೆ ಒಂದೊಂದು ಚಿತ್ರ ಮಾತ್ರ ಬಿಡುಗಡೆ ಕಂಡವು. ಈ ಅವಧಿಯಲ್ಲಿ (೧೯೩೪-೧೯೪೯) ಬಿಡುಗಡೆಯಾದ ೨೮ ಚಿತ್ರಗಳಲ್ಲಿ ಸಾಧಾರಣ ಗಳಿಕೆಯನ್ನು ಕಂಡ ಚಿತ್ರಗಳು ‘ಸತಿ ಸುಲೋಚನಾ’, ‘ಸಂಸಾರನೌಕ’, ‘ಜೀವನ ನಾಟಕ’ (೧೯೪೨), ‘ಸತ್ಯ ಹರಿಶ್ಚಂದ್ರ’ (೧೯೪೩), ‘ವಸಂತಸೇನಾ’ (೧೯೪೧), ‘ಭಕ್ತ ಕುಂಬಾರ’ (೧೯೪೯) ಹಾಗೂ ‘ನಾಗಕನ್ನಿಕ’ (೧೯೪೯) ಮಾತ್ರ.

ಕನ್ನಡ ಚಿತ್ರರಂಗದ ಈ ಆರಂಭದ ಸ್ಥಿತಿಗೆ ಹಲವಾರು ಕಾರಣಗಳನ್ನು ತರ್ಕಿಸಬಹುದು. ಈ ಅವಧಿಯು ಸಿನಿಮಾ ಒಂದು ಜನಪ್ರಿಯ ಮಾಧ್ಯಮವಾಗಿ ರೂಪುಗೊಳ್ಳುತ್ತಿದ್ದ ಕಾಲ. ತನ್ನ ಹೊಸ ತಂತ್ರಜ್ಞಾನದಿಂದ ಅದು ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಕನ್ನಡ ಚಲನಚಿತ್ರರಂಗ ಆರಂಭವಾಗುವ ವೇಳೆಗೆ ಚಾರ್ಲಿ ಚಾಪ್ಲಿನ್‌ನಂಥ ಕಲಾವಿದರು ತಮ್ಮ ವೃತ್ತಿ ಬದುಕಿನ ಶಿಖರವೇರಿದ್ದರು. ಕನ್ನಡ ಚಿತ್ರರಂಗಕ್ಕಿಂತ ಮೂರು ವರ್‍ಷ ಮೊದಲೇ ಆರಂಭವಾದ ಹಿಂದಿ, ತಮಿಳು, ತೆಲುಗು(೧೯೩೧) ಚಿತ್ರರಂಗ ಸಾಕಷ್ಟು ಪ್ರಗತಿ ಕಂಡಿತ್ತು. ಜೆಮಿನಿ ಸ್ಟುಡಿಯೋಸ್‌ರವರು ‘ಚಂದ್ರಲೇಖ’ದಂತಹ ಇತಿಹಾಸ ಪ್ರಸಿದ್ಧ ಚಿತ್ರ ನಿರ್ಮಿಸಿ ಭಾರತೀಯ ಚಲನಚಿತ್ರರಂಗಕ್ಕೆ ಹೊಸಭಾಷ್ಯ ಬರೆದಿದ್ದರು. ಅನೇಕ ಪ್ರಯೋಗಗಳು ವಿಶೇಷವಾಗಿ ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಡೆದಿದ್ದವು. ಅಲ್ಲಿ ಹೊಸತನ ಮತ್ತು ಅದ್ಧೂರಿಯ ಸಂಗಮವಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅದರ ಕೊರತೆಯಿತ್ತು.

ಎರಡನೆಯದಾಗಿ ಕನ್ನಡ ರಂಗಭೂಮಿಯು ಇನ್ನೂ ಪ್ರೇಕ್ಷಕರನ್ನು ಗಾಢವಾಗಿ ಸೆಳೆಯುತ್ತಿತ್ತು. ಅನೇಕ ಚಲನಚಿತ್ರಗಳು ಈಗಾಗಲೇ ಜನಮನ್ನಣೆ ಗಳಿಸಿದ ನಾಟಕಗಳನ್ನೇ ಆಧರಿಸಿದ್ದವು. ಮತ್ತೆ ಅವುಗಳನ್ನೆ ಸಿನಿಮಾ ರೂಪದಲ್ಲಿ ನೋಡಬೇಕಿತ್ತು.

ಎರಡನೆಯ ಮಹಾಯುದ್ಧವು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಲನಚಿತ್ರರಂಗದ ಮೇಲೆ ದುಷ್ಪರಿಣಾಮ ಬೀರಿತು. ಕಚ್ಛಾಫಿಲಂ ಕೊರತೆ, ಹಣಕಾಸು ಅಭಾವ, ಜನರ ಮನಸ್ಸಿನ ಮೇಲೆ ಕವಿದ ಯುದ್ಧದ ಕಾರ್ಮೋಡಗಳು ಚಲನಚಿತ್ರರಂಗದ ಚಟುವಟಿಕೆಯನ್ನು ಕುಂಠಿತಗೊಳಿಸಿದ್ದವು. ಮೊದಲೇ ಅಂಬೆಗಾಲು ಊರಿದ್ದ ಕನ್ನಡ ಚಿತ್ರರಂಗ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯಿತು.

ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಹರಿದು ಹಂಚಿಹೋಗಿದ್ದು ಕನ್ನಡ ಚಿತ್ರಗಳ ವಿತರಣೆಯಲ್ಲಿ ಸಮಸ್ಯೆಯಿತ್ತು. ಆಗಿನ್ನೂ ಸಿನಿಮಾಗೆ ಏಕ ಎರಕದ ಭಾಷೆ ಸಿದ್ಧಗೊಂಡಿರಲಿಲ್ಲ. ಬಹುತೇಕ ನಾಟಕದ ಭಾಷೆ ಹಳೇ ಮೈಸೂರಿನ ಭಾಷೆ ಹಾಗೂ ಉತ್ತರ ಕರ್ನಾಟಕದ ಭಾಷೆಯಾಗಿ ವಿಭಜನೆಗೊಂಡಿತ್ತು. ಕನ್ನಡ ಚಿತ್ರರಂಗಕ್ಕೆ ಆರಂಭದಲ್ಲಿ ಹಳೇ ಮೈಸೂರು ಪ್ರದೇಶವೇ ದೊಡ್ಡ ಮಾರುಕಟ್ಟೆ. ಸಹಜವಾಗಿ ಹಳೇ ಮೈಸೂರು ಪ್ರದೇಶದ ಆಡುಭಾಷೆಗೆ ಹತ್ತಿರವಾದ ಭಾಷೆಯನ್ನೇ ಸಿನಿಮಾಗಳಲ್ಲಿ ಅಳವಡಿಸಬೇಕಿತ್ತು. ಅದು ಉತ್ತರ ಕರ್ನಾಟಕದ ಜನರಿಗೆ ‘ಅರ್ಥ’ವಾಗುವುದು ಕಷ್ಟಸಾಧ್ಯವಿತ್ತು. ಹಾಗೆಯೇ ಉತ್ತರ ಕರ್ನಾಟಕದ ಕನ್ನಡ ಸೊಗಡು ಹಳೆಯ ಮೈಸೂರು ಜನಕ್ಕೆ ‘ಅರ್ಥ’ವಾಗಲಿಲ್ಲ. ೧೯೪೭ರಲ್ಲಿ ತಯಾರಾದ ‘ಚಂದ್ರಹಾಸ’ ಇದಕ್ಕೊಂದು ಉದಾಹರಣೆ. ಖ್ಯಾತ ನಿರ್ಮಾಪಕ, ನಿರ್ದೇಶಕ ಬಿ.ವಿಠಲಾಚಾರ್ಯರವರು ಒಂದೆಡೆ ಹೀಗೆ ಹೇಳುತ್ತಾರೆ. “….. ‘ಚಂದ್ರಹಾಸ’ ತಯಾರಾಗಿತ್ತು. ಅದರಲ್ಲಿ ಒಳ್ಳೊಳ್ಳೆ ಡ್ರಾಮಾ ಆರ್ಟಿಸ್ಟ್‌ಗಳೆಲ್ಲ ಇದ್ದರು. ಖ್ಯಾತ ಗಾಯಕಿ ಅಮೀರ್‌ಭಾಯ್ ಕರ್ನಾಟಕಿ, ಹಂದಿಗನೂರು ಸಿದ್ಧರಾಮಪ್ಪ ಮುಂತಾದ ಘಟಾನುಘಟಿಗಳೆಲ್ಲ ಅಭಿನಯಿಸಿದ್ದರೂ ಆ ಚಿತ್ರ ಫ್ಲಾಪ್ ಆಯಿತು. ಅದರಲ್ಲಿ ಉತ್ತರ ಕರ್ನಾಟಕದ ಭಾಷೆ ಬಳಸಿದ್ದರಿಂದ ಹಳೆಯ ಮೈಸೂರಿನ ಜನರಿಗೆ ಹಿಡಿಸಲಿಲ್ಲ. ಆ ಚಿತ್ರದಲ್ಲಿ ಅಮೀರ್ ಭಾಯ್ ಕರ್ನಾಟಕಿ ಅವರ ಅಭಿನಯವನ್ನು ನೋಡಿದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.”

ಇದೆಲ್ಲದರ ಜೊತೆಗೆ ಕನ್ನಡ ಚಿತ್ರರಂಗ ವಿತರಕರ ನಿರ್ಲಕ್ಷ್ಯಕ್ಕೂ ತುತ್ತಾಯಿತು. ಮೈಸೂರು ರಾಜ್ಯ ಈಗಿನಂತೆಯೇ ಆಗಲೂ ಹಲವು ಭಾಷಾ ಚಿತ್ರಗಳಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿತ್ತು. ಹಿಂದೀ, ತಮಿಳು ಮತ್ತು ತೆಲುಗು ಚಿತ್ರಗಳ ನಂತರ ಕನ್ನಡ- ಹೀಗೆ ಆದ್ಯತಾ ಪಟ್ಟಿಯನ್ನು ವಿತರಕರು ಇಟ್ಟುಕೊಂಡಿದ್ದರು. ಮೈಸೂರು ರಾಜ್ಯಕ್ಕೆ ನಲವತ್ತರ ದಶಕದಲ್ಲಿ ಬೇರೆ ಭಾಷೆಯ ಚಿತ್ರಗಳಿಗೆ ೬೦ ರಿಂದ ೭೦ ಸಾವಿರ ಕೊಟ್ಟು ವಿತರಣಾ ಹಕ್ಕನ್ನು ಪಡೆದುಕೊಳ್ಳುತ್ತಿದ್ದ ವಿತರಕರು ಕನ್ನಡ ಚಿತ್ರಗಳಿಗೆ ನಲವತ್ತು ಸಾವಿರ ಕೊಡಲು ಹಿಂದೇಟು ಹಾಕುತ್ತಿದ್ದರು ಜೊತೆಗೆ ಇತರ ಭಾಷೆಯ ಯಶಸ್ವಿ ಚಿತ್ರಗಳು ಬಿಡುಗಡೆಯಾದಾಗ ಕನ್ನಡ ಚಿತ್ರಗಳನ್ನು ರಿಲೀಸ್ ಮಾಡಿ ನಷ್ಟ ಅನುಭವಿಸಿದ ಉದಾಹರಣೆಗಳು ಇದ್ದವು.

ಆರಂಭದ ಕಾಲದಲ್ಲಿ ಕನ್ನಡ ಚಿತ್ರರಂಗ ಬಾಲಗ್ರಹ ಪೀಡೆಗೆ ಗುರಿಯಾದರೂ ಅದು ಸ್ಪಷ್ಟವಾಗಿ ಬೆಳೆಯುವ ಎಲ್ಲ ಸೂಚನೆಗಳಂತೂ ಇದ್ದವು. ಕನ್ನಡ ಕಲಾವಿದರ ಸಾಮರ್ಥ್ಯ ಎಂದಿಗೂ ಎರಡನೆಯ ದರ್ಜೆಯದಾಗಿರಲಿಲ್ಲ. ಅಭಿನಯ, ಸೌಂದರ್ಯ ಮತ್ತು ಪ್ರಯೋಗಶೀಲತೆ ಅವರಲ್ಲಿ ಸಮೃದ್ಧಿಯಾಗಿತ್ತು. ಆರ್.ಎನ್. ನಾಗೇಂದ್ರರಾಯರು ‘ವಸಂತಸೇನಾ’ ಚಿತ್ರದ ಶಕಾರನ ಪಾತ್ರಕ್ಕೆ ನೀಡಿದ ಸ್ಪರ್ಶ ಅಂಥ ಪ್ರಯೋಗಗಳಲ್ಲೊಂದು. ಆರ್‌ಎನ್‌ಆರ್ ಮತ್ತು ಹೊನ್ನಪ್ಪ ಭಾಗವತರ್ ಹಾಗೂ ಪಂಡರೀಬಾಯಿಯಂಥ ಕಲಾವಿದರು ದಕ್ಷಿಣ ಭಾಷೆಯ ತಮಿಳು, ತೆಲುಗು ಚಿತ್ರಗಳಲ್ಲಿ ಬೇಡಿಕೆಯ ನಟರಾಗಿದ್ದರು. ಸುಬ್ಬಯ್ಯನಾಯ್ಡು, ಗುಬ್ಬಿ ವೀರಣ್ಣನವರಂಥ ಅಪ್ರತಿಮ ಕಲಾವಿದರು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತರು. ೧೯೪೩ರಲ್ಲಿ ಬಿಡುಗಡೆಯಾದ ‘ರಾಧಾರಮಣ’ ಚಿತ್ರದಿಂದ ಟಿ.ಎನ್.ಬಾಲಕೃಷ್ಣರವರು ಬೆಳಕಿಗೆ ಬಂದರು. ತಮ್ಮ ಎತ್ತರದ ನಿಲುವು, ಸದೃಢವಾದ ದೇಹ, ಗಂಭೀರವಾದ ಧ್ವನಿಯಿಂದ ಡಿ. ಕೆಂಪರಾಜ್ ಅರಸುರವರು ಅಭಿನಯದ ಜೊತೆಗೆ ‘ಗ್ಲಾಮರಸ್’ ನಟರಾಗಿಯೂ ಪ್ರಸಿದ್ಧಿಯಾದರು. ಇದರ ಜೊತೆಗೆ ರಂಗಭೂಮಿಯ ಮೂಲಕ ಜನರಿಗೆ ಪರಿಚಯವಾಗಿದ್ದ ಬೇಲೂರು ರಾಘವೇಂದ್ರರಾವ್, ಎಚ್. ರಾಮಚಂದ್ರ ಶಾಸ್ತ್ರಿ, ಢಿಕ್ಕಿ ಮಾಧವರಾವ್, ವಾಸುದೇವ ಗಿರಿಮಾಜಿ, ನಟಿಯರಾದ ತ್ರಿಪುರಾಂಬ, ಲಕ್ಷ್ಮೀಬಾಯಿ, ಕಮಲಾಬಾಯಿ, ಬಳ್ಳಾರಿ ರತ್ನಮಾಲಾ ಮೊದಲಾದವರು ಸಿನಿಮಾ ಅಭಿನಯಕ್ಕೆ ಸಹಜವಾಗಿ ಹೊಂದಿಕೊಂಡಿದ್ದರು.

ಇದೇ ಅವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಒಳಬಲವನ್ನು ತಂದುಕೊಟ್ಟ ಮೂವರು ವ್ಯಕ್ತಿಗಳು ಸಿನಿಮಾಗೆ ಆಗಮಿಸಿದ್ದರು. ‘ಸಂಸಾರನೌಕ’ ಚಿತ್ರದಲ್ಲಿ ನಾಯಕನ ಪಾತ್ರ ವಹಿಸಿದ್ದ ಬಿ.ಆರ್. ಪಂತಲು ಅವರು ಮುಂದೆ ಪದ್ಮಿನಿ ಪಿಕ್ಚರ್ಸ್ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಿದರು. ಆಕಸ್ಮಿಕವಾಗಿ ಚಲನಚಿತ್ರ ನಿರ್ಮಾಣಕ್ಕೆ ಧುಮುಕಿದ ಡಿ.ಶಂಕರ್‌ಸಿಂಗ್ ಹಾಗೂ ಬಿ.ವಿಠಲಾಚಾರ್ಯ ಅವರು ಮಹಾತ್ಮ ಪಿಕ್ಚರ್ಸ್ ಸಂಸ್ಥೆಯಡಿ ಮಿತವ್ಯಯದಲ್ಲೇ ಕನ್ನಡ ಚಿತ್ರಗಳ ಸರಣಿಯನ್ನು ನಿರ್ಮಿಸಿ ಕುಸಿಯುತ್ತಿದ್ದ ಚಿತ್ರರಂಗಕ್ಕೆ ಒಳಬಲವನ್ನು ನೀಡಿ ಉಸಿರು ತುಂಬಿದರು. ಹೀಗಾಗಿ ನಿರಾಶೆಯ ಕೆಸರಿನಲ್ಲಿಯೂ ಭರವಸೆಯ ಕಮಲದ ದಂಟುಗಳು ಬೇರೂರಿದ್ದನ್ನು ಇದೇ ಅವಧಿಯಲ್ಲಿ ಕಾಣಬಹುದಾಗಿತ್ತು.

ಸೈಡ್ ರೀಲ್

‘ಕೃಷ್ಣ ಸುಧಾಮ(೧೯೪೩) -ಬೆಳ್ಳಾವೆ ನರಹರಿಶಾಸ್ತ್ರಿ

* ‘ಜೀವನ ನಾಟಕ’ ಶಾಂತಾ ಹುಬ್ಳೀಕರ್ ನಟಿಸಿದ ಕನ್ನಡದ ಏಕೈಕ ಚಿತ್ರ. ಹುಬ್ಬಳ್ಳಿ ಹತ್ತಿರದ ಗ್ರಾಮವೊಂದರ ಬಡಕುಟುಂಬದಲ್ಲಿ ಜನಿಸಿದ ಶಾಂತಾ ಹುಬ್ಳೀಕರ್ ಹೊಟ್ಟೆಪಾಡಿಗಾಗಿ ನಾಟಕ ಕಂಪನಿ ಸೇರಿದವರು. ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದ ಕರ್ನಾಟಕ ಮೂಲದ ವಿ.ಶಾಂತರಾಂ ಅವರ ಕಣ್ಣಿಗೆ ಬಿದ್ದರು. ವೇಶ್ಯೆಯೊಬ್ಬಳ ಬದುಕನ್ನು ಆಧರಿಸಿದ ಮರಾಠಿ ಚಿತ್ರ ‘ಮಾಣುಷ್’ ಚಿತ್ರದ ನಾಯಕಿಯಾಗಿ ಅಮೋಘ ಅಭಿನಯ ನೀಡಿದರು.

* ಬಳಿಕ ಅದೇ ಚಿತ್ರ ವನ್ನು ಶಾಂತಾರಾಂ ಅವರು ಹಿಂದಿಯಲ್ಲಿ ‘ಆದ್ಮಿ’ ಎಂಬ ಹೆಸರಿನಲ್ಲಿ ನಿರ್ಮಿಸಿದರು. ‘ಆದ್ಮಿ’ ಚಿತ್ರದಲ್ಲಿಯೂ ನಾಯಕಿಯಾಗಿದ್ದ ಶಾಂತಾ ಹುಬ್ಳೀಕರ್ ಬೆಳಗಾಗುವುದರೊಳಗೆ ಭಾರತಾದ್ಯಂತ ಮನೆಮಾತಾಗಿದ್ದರು. ಅನಂತರ ‘ಜೀವನ ನಾಟಕ’ದಲ್ಲಿ ಅಭಿನಯಿಸಿ ಮರಳಿ ಮುಂಬೈಗೆ ತೆರಳಿದ ಅವರ ಬದುಕು ಅನೇಕ ಏಳುಬೀಳುಗಳನ್ನು ಕಂಡಿತು. ತಾರಾಪಟ್ಟ ತರುವ ಎಲ್ಲ ಬಗೆಯ ಪ್ರಸಿದ್ಧಿ, ಅಮಲು, ಮೋಸ, ವಂಚನೆ, ಅಸಹಾಯಕತೆಗಳಿಗೆ ಗುರಿಯಾಗಿ, ಗಳಿಸಿದ್ದೆಲ್ಲವನ್ನು ಕಳೆದುಕೊಂಡರು. ಬದುಕಿನ ಬಹುತೇಕ ಅವಧಿಯನ್ನು ಅಜ್ಞಾತವಾಗಿ ಅನಾಥಾಲಯದಲ್ಲಿ ಕಳೆದ ಶಾಂತಾ ಹುಬ್ಳೀಕರ್ ಕೊನೆಗೂ ಪತ್ರಕರ್ತರೊಬ್ಬರ ಶೋಧದಿಂದ ಬದುಕಿನ ಕೊನೆಯ ದಿನಗಳನ್ನು ಶಾಂತವಾಗಿ ಕಳೆದರು. ಆಕೆಯ ಆತ್ಮಕತೆ ‘ನಾಳೀನ ಚಿಂತ್ಯಾಕ!’ (ಪ್ರ: ಕನ್ನಡ ವಿಶ್ವವಿದ್ಯಾಲಯ, ಹಂಪಿ) ಕೇವಲ ನಟಿಯೊಬ್ಬಳ ಕತೆಯಾಗಿರದೆ ನಲವತ್ತು, ಐವತ್ತರ ದಶಕದ ಭಾರತೀಯ ಚಿತ್ರರಂಗದ ಕನಸುಗಳನ್ನು ಬೆನ್ನುಟ್ಟುತ್ತಿದ್ದ, ಭಗ್ನ ಕನಸುಗಳೊಂದಿಗೆ ಬದುಕುದೂಡುತ್ತಿದ್ದ ಅನೇಕ ತಾರೆಯರ ಪ್ರಾತಿನಿಧಿಕ ಬದುಕಿಗೆ ಕನ್ನಡಿ ಹಿಡಿದಂತಿದೆ.

ಶಾಂತಾ ಹುಬ್ಳಿಕರ್‍

* ಕನ್ನಡ ಚಿತ್ರರಂಗದ ಆರಂಭದಲ್ಲಿ ರಂಗಭೂಮಿಯಲ್ಲದೆ ಬೇರೆ ಬೇರೆ ಸಾಹಿತ್ಯ-ಕಲಾ ಪ್ರಕಾರಗಳಲ್ಲಿ ಪ್ರಸಿದ್ಧರಾದವರು ಪಾಲ್ಗೊಂಡಿದ್ದರು. ಚಿರಂಜೀವಿ (೧೯೩೭) ಚಿತ್ರದಲ್ಲಿ ಸಾಹಿತಿ ದೇವುಡು ನರಸಿಂಹಶಾಸ್ತ್ರಿಯವರು ಅಭಿನಯಿಸಿದ್ದರು. ಹಾಗೆಯೇ ಕೃಷ್ಣ ಸುಧಾಮ (೧೯೪೩) ಚಿತ್ರದಲ್ಲಿ ನಾಟಕಕಾರ ಬೆಳ್ಳಾವೆ ನರಹರಿಶಾಸ್ತ್ರಿಯವರು ಪಾತ್ರವಹಿಸಿದ್ದರೆ ವಾಣಿ (೧೯೪೩) ಚಿತ್ರದ ನಾಯಕರಾಗಿದ್ದವರು ಅಂದಿನ ಪ್ರಸಿದ್ಧ ಪಿಟೀಲು ವಿದ್ವಾಂಸ ಟಿ. ಚೌಡಯ್ಯನವರು. ಕಲ್ಚರ್ ಕಮೆಡಿಯನ್ ಕೆ. ಹಿರಣ್ಣಯ್ಯರವರೂ ಅದೇ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಹೇಮರೆಡ್ಡಿ ಮಲ್ಲಮ್ಮ ಚಿತ್ರದ ಮೂಲಕ ಗೀತರಚನಕಾರರಾಗಿ ಆಗಮಿಸಿದ ಗಮಕಿ ಕು.ರಾ. ಸೀತಾರಾಮಶಾಸ್ತ್ರಿಯವರು ಆ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರು.

* ಚಿತ್ರರಂಗದ ಆರಂಭದಲ್ಲಿ ಕನ್ನಡದ ರಂಗಭೂಮಿ ನಟಿಯರ ಪಾಲಿಗೆ ಸುವರ್ಣಕಾಲ. ಮೂವತ್ತರ ದಶಕದಲ್ಲಿ ರಸಿಕರ ಮನಸೂರೆಗೊಂಡಿದ್ದ, ಸುಂದರ ನಟಿ ತ್ರಿಪುರಾಂಬ, ಲಕ್ಷ್ಮೀಬಾಯಿ, ಕಮಲಾಬಾಯಿ, ಅಶ್ವತ್ಥಮ್ಮ, ಸ್ವರ್ಣಮ್ಮ, ಬಿ.ಜಯಮ್ಮ, ಎಂ.ವಿ.ರಾಜಮ್ಮ, ಎಸ್.ಕೆ.ಪದ್ಮಾದೇವಿ, ಮಳವಳ್ಳಿ ಸುಂದರಮ್ಮ, ಬಳ್ಳಾರಿ ಲಲಿತ, ಬಳ್ಳಾರಿ ರತ್ನಮಾಲಾ, ಪಂಡರೀಬಾಯಿ, ಜಯಶ್ರೀ ಮುಂತಾದವರು ಅಪ್ಪಟ ಕನ್ನಡದ ಕಲಾವಿದೆಯರು. ತಮ್ಮ ಅಭಿನಯ ಮತ್ತು ಗಾಯನದಿಂದ ಪ್ರಸಿದ್ಧರಾದವರು. ಹಿಂದೀ ಚಲನಚಿತ್ರರಂಗದಲ್ಲಿ ನಟಿಯಾಗಿ, ಗಾಯಕಿಯಾಗಿ ಛಾಪು ಮೂಡಿಸಿದ ಅಮೀರ್‌ಭಾಯ್ ಕರ್ನಾಟಕಿಯವರು ಚಿರಂಜೀವಿ (೧೯೩೭) ಮತ್ತು ಚಂದ್ರಹಾಸ (೧೯೪೭) ಚಿತ್ರದಲ್ಲಿ ಅಭಿನಯಿಸಿದ್ದರು. ಹಾಗೆಯೇ ಗಾಯಕ ಪಿ. ಕಾಳಿಂಗರಾವ್ ಅವರೂ ಆರೆನ್ನಾರ್‌ರವರ ‘ವಸಂತಸೇನಾ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅನಂತರ ಕಾಳಿಂಗರಾಯರು ತೆರೆಯ ಮೇಲೆ ಕಾಣಿಸಿಕೊಂಡದ್ದು ‘ತುಂಬಿದ ಕೊಡ’ ಚಿತ್ರದಲ್ಲಿ ‘ಅಂತಿಥ ಹೆಣ್ಣು ನೀನಲ್ಲಾ’ ಕವನವನ್ನು ಹಾಡುವ ದೃಶ್ಯದಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬ್ದಗಳು
Next post ಬೇಸಗೆ

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys