ಆಕಾಶದೆತ್ತರಕೆ ಹಾರಿದ ಹಕ್ಕಿ ಕೊಕ್ಕಿನಲಿ
ಕೊಂಡು ಹೋಯಿತು ಯಾವ ಪೌರುಷದ ಬಿತ್ತು?
ಅದನು ಸ್ವೀಕರಿಸುವುದಕ್ಕೆ ಮಣ್ಣು ಹೊಡೆ ಮರಳಿ
ಮಲಗಿದೆ ಮರಳಿ ಮರಳಿ ಉತ್ತು

ಮರಳುವುದೆ ಆ ಹಕ್ಕಿ ಮರಳಿದರೂ ಅದು
ಉಗುಳುವುದೆ ತನ್ನ ತುತ್ತನೀ ನೆಲದ ಮೇಲೆ
ಜೊಂಪು ತೂಗಿಸುವ ಸುಡು ಬೇಸಗೆ ಮುಗಿದು
ಹೊಡೆಯುವುದೆಂದು ಮೊಳಕೆಯೊಡೆಯಿಸುವ ಮಳೆ

ಆಹ! ಮೈತುಂಬ ಹೂವಾಗಿ ನಿಲ್ಲುವುದು ಬೇವು
ಅದರ ಕೆಳಗೊಂದಷ್ಟು ಹೆಪ್ಪುಗಟ್ಟಿದ ನೆರಳು
ಕನಸುಗಳ ಕಾಣುವೆವು ಹಗಲಲ್ಲೆ ನಾವು
ಒಂದಾದ ಮೇಲೆ ಇನ್ನೊಂದು ಮಗ್ಗುಲು

ನದಿಗಳ ಕಡಿದು ಹರಿಸಿ ಕಾಲುವೆಗಳ
ಬೆಟ್ಟಗಳ ಮೇಲೆ ಮೋಡದ ಢಿಕ್ಕಿ
ನಮ್ಮ ಮನಸ್ಸುಗಳಲ್ಲಿ ಮಿಂಚುಗಳ ಜಳ
ಅಲ್ಲಿಂದಲೇ ಹುಟ್ಟಿ ನೆಗೆದುದು ಆ ಹಕ್ಕಿ
*****

Latest posts by ತಿರುಮಲೇಶ್ ಕೆ ವಿ (see all)