ಉಕ್ಕುವ ಕಡಲ ಮೋಹಿಸುವ ಅವಳ
ಹಠಕ್ಕೆ ಬರ್ಫದ ಬೆಂಕಿಯ ಕುಡಿವ
ಹುಚ್ಚು.
ಸೀದು ಹೋದರೂ ಬಿಸಿಯುಸಿರ
ಹಂಬಲದ ಪಾತ್ರೆ
ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ
ಅವಳ ದಿವ್ಯ ಭಕ್ತಿ.

ಕಪ್ಪು ಬಿಳುಪಿನ ಚಿತ್ರಗಳೇ
ಎದೆಯ ಹಾಳೆಯ ಮೇಲೆ ಒತ್ತಡ ಹೇರಿ
ಅಲ್ಲಿಲ್ಲಿ ಮಸುಕಾಗುತ್ತ
ಕೆಲವೊಮ್ಮೆ ಮುದುರಿಕೊಳ್ಳುತ್ತ
ತನ್ನಷ್ಟಕ್ಕೆ ಮರೆಯಾಗುತ್ತ ಹೋದರೂ
ಪಿಸುಗುಡುತ್ತವೆ ಆಗಾಗ

ಗಿಲೀಟು ಬಣ್ಣಗಳ ಕಂಡಾಗಲೆಲ್ಲಾ
ಕಣ್ಣು ಕಾಡಿಗೆಯರಳಿಸುವುದು
ಕಂಡು ಭಾರವಾಗುವ ಕೈ
ಉಂಗುರ ಬಳೆಗಳು
ತೂಕ ಕುಸಿದು ಹೊರೆಯಾಗುತ್ತವೆ.
ಹೇಮಕುಂಡದ ಬಾಗಿಲು ಮುಚ್ಚಿ
ಹೊಗೆ ಗೂಡು ಉಸಿರಗಟ್ಟಿಸುತ್ತದೆ.

ಬಲೆ ಬೀಸಿದಷ್ಟು ತಪ್ಪಿಸಿಕೊಳ್ಳುವ
ತಿಮಿಂಗಲದ ಜಲಕ್ರೀಡೆಯ ತುಂಬಾ
ಅಲ್ಲಿ ಮೇನಕೆಯರು, ರತಿ ರಂಭೆಯರು
ಮತ್ಸ್ಯಕನ್ಯೆಯರ ಮಾದಕ ಲೋಕ
ತೆರೆದುಕೊಂಡರೂ
ಈಕೆ ಬರಿಯ ಹೆಣ್ಣು ಅಷ್ಟೇ.

ತೆರೆಯದ ಕದ ದೂಡಿ ದೂಡಿ
ದಣಿದ ಮನಸ್ಸು ಪತನಗೊಂಡಿದ್ದು
ಕಾಣಲೇ ಇಲ್ಲ
ಕಾವೇರಿದ ಕಣ್ಣಿಗೆ, ಭೋರ್‍ಗರೆವ ಕಡಲಿಗೆ

ಬುಡಮೇಲಾದ ದೀಪದ ಬುಡ್ಡಿಗೆ
ಹಾಕಿದ ಎಣ್ಣೆ
ಸುರಿದು ಹೋಗಿ ದೀಪ ಹಚ್ಚಲಾಗದೇ,
ಕತ್ತಲಲ್ಲೇ ಕಳೆದ
ಬೆಳದಿಂಗಳ ರಾತ್ರಿಯ ಹಸಿಹಸಿಯ
ಬಯಕೆಯ ನೆನಪುಗಳು.
ಹಳಗನ ಬೀಜಗಳ ಕಾಯ್ದುಕೊಳ್ಳುವುದು
ಕಲೆಯೇ ಹೊರತು ಬೇರೆ ಅಲ್ಲವೇ ಅಲ್ಲ.
*****

Latest posts by ನಾಗರೇಖಾ ಗಾಂವಕರ (see all)