ನಿಂಗ್ ನೆಪ್ಪೈತ ನಂಜಿ?

ಒಂದೇ ಕೇರೀಲ್ ಉಟ್ಟ್ ಬೆಳದೋರು
ಒಂದೇ ಬೀದೀಲ್ ಒತ್ ಕಳದೋರು
ನಾವ್ಗೊಳ್ ಆಡಿ ಮಾಡಿದ್ದೆಲ್ಲಾ
ನಿಂಗ್ ನೆಪ್ಪೈತ ನಂಜಿ?
ಕಲ್ಲು ಬಕ್ರೆ ಆರೀಸ್ಕೋಂತ
ಗಂಡ ಯೆಡ್ತೀರ್ ಸಂಸಾರಾಂತ
ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್
ನಿಂಗ್ ನೆಪ್ಪೈತ ನಂಜಿ? ೧

ರತ್ನ ನಂಜಿ ಗಂಡ ಯೆಡ್ತಿ
ಅಂತ ಕೇರೀವ್ರ್ ಗೇಲೀನ್ ಇಡ್ದಿ
ನಾಚ್ಕೊಂಡ ಮನೆಯಾಗ್ ಔತ್ಕೊಂಡಿದ್ದು
ನಿಂಗ್ ನೆಪ್ಪೈತ ನಂಜಿ?
ಲಗ್ನಕ್ ಮುಂಚೆ ತೋಟಕ್ ಓಗಿ
ಊವ ಕಿತ್ತಿ ನಿಂಗೆ ಕೂಗಿ
ನನ್ ನಂಜೀಂತ ನಾ ಮುಡಿಸಿದ್ದು
ನಿಂಗ್ ನೆಪ್ಪೈತ ನಂಜಿ? ೨

ಲಗ್ನದ್ ದಿವಸ ನಿನ್ ಮೊಕ್ ನಾನು
ಬಂಡಾರಾನ ಅಣೆ ತುಂಬಾನು
ಬಳದಿ ಕನಡಿ ತೋರ್‍ಸಿದ್ ನಿಂಗೆ
ನಿಂಗ್ ನೆಪ್ಪೈತ ನಂಜಿ?
ನೀ ಮನೆಗ್ ಒಸದಾಗ್ ಬಂದೋಳಂತ
ನಿನ್ ಮೊಕಾನೆ ನೋಡಿಗ್ಕೋಂತ
ಆವೊತ್‌ ಚಾಕ್ರೀಗ್ ಓಗ್ನೇನಿಲ್ಲ
ನಿಂಗ್ ನೆಪ್ಪೈತ ನಂಜಿ? ೩

ವೊಸದಾಗ್ ಇಬ್ರೆ ಸಂಸಾರ್ ಊಡಿ
ಯೆಸರು ಪಾಯಸ ಊಟಾ ಮಾಡಿ
ನೆನೆದರ್ ನನಗೇ ನೆಗ ಬರತೈತೆ-
ನಿಂಗ್ ನೆಪ್ಪೈತ ನಂಜಿ?
‘ಇದ್ದಿದ್ ದಿವಸ ಯೆಸರು ಯಿಟ್ಟು
ಇಲ್ದಿದ್ರ್ ಒಟ್ಟೇಗ್ ಬಟ್ಟೇನ್ ಕಟ್ಟು’
ಅಂತ್ ಆಯಾಗಿ ಬದುಕೋಣಾಂದೊ
ನಿಂಗ್ ನೆಪ್ಪೈತ ನಂಜಿ? ೪

ಮನೆಯಾಗ್ ಒಂದ್ ದಿನ ತಿನ್ನಾಕ್ ಇಲ್ದೆ
ನನಗ್ ಇಲ್ಲಾಂತ ನೀನೂ ಒಲ್ದೆ
ಕರೆದೋರ್ ಅಟ್ಟೀಗ್ ಓಗೋಲ್ಲೇಂದದ್
ನಿಂಗ್ ನೆಪ್ಪೈತ ನಂಜಿ?
ಆವೊತ್ತೆಲ್ಲ ಯಿಟ್ಟೇ ಇಲ್ದೆ
ಸಾಯ್ತಿದ್ರೂನೆ ನೆಗತ ಸೋಲ್ದೆ
‘ಬದಕೋದ್ ತಿನ್ನಾಕೆ ಅಲ್ಲಾ’ಂತ ಅಂದದ್
ನಿಂಗ್ ನೆಪ್ಪೈತ ನಂಜಿ? ೫

ಕಷ್ಟ ಸುಕ ಏನ್ ಬಂದ್ರೂನೆ
ನಿಂಗೆ ನಾನೆ ನಂಗೆ ನೀನೆ
ಮುಳುಗೋನ್ ಬೆನ್ನಿನ್ ಬೆಂಡಿದ್ದಂಗೆ
ನಿಂಗ್ ನೆಪ್ಪಿರಲಿ ನಂಜಿ!
ಬಟ್ಟೆ ಒಟ್ಟೇಗ್ ಇಲ್ದಿದ್ರೂನೆ
ನಂ ನಂ ಪ್ರೀತಿ ಇರೊವರ್‍ಗೂನೆ
ದೇ‌ಆ ಓದ್ರು ಮನಸೋಗಾಲ್ಲ-
ನಿಂಗ್ ನೆಪ್ಪಿರಲಿ ನಂಜಿ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೆಂಬ ಹೊತ್ತಿಗೆ
Next post ಗಂಗಮಾಯಿಯ ಹಾಡಿನ ನದಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…