ಗಂಗಮಾಯಿಯ ಹಾಡಿನ ನದಿ

ಗಂಗಮಾಯಿಯ ಹಾಡಿನ ನದಿ

ಗಂಗವ್ವ ಗಂಗಮಾಯಿಯಾಗಿ ಹರಿದು ಹೋಗಿ ಭಾರತೀಯರ ಮನದಲ್ಲಿ ಪವಿತ್ರಳಾಗಿ ನಿಂತಿರುವಳಷ್ಟೆ. ಅಷ್ಟೆ ಪಾವನಳಾಗಿ ಗಂಗಜ್ಜಿ ಗಾಣಾದ ಮೂಲಕ ನಿಂತಿದ್ದಾಳೆ. ಅಲ್ಲವೆಂದವರಾರು? ಅವಳ ಗಾನವನ್ನು ಬಲ್ಲವರು, ತಿಳಿಯದೇ ಇರುವವರು ಎಲ್ಲರಿಗೂ ಗಂಗಜ್ಜಿ ಎಂದರೆ ಪ್ರೀತಿ. ಕೆಲವರು ಅವಳ ಅವಾರ್‍ಡುಗಳ ಪಟ್ಟಿಯನ್ನು ನೋಡಿ ಮೋಹಿಸಿ ಏನೋ ಈಕೆ ಬಹಳ ‘ದೊಡ್ಡವಳಿ’ರಬೇಕು ಎಂದುಕೊಂಡಾದರೂ ಇಷ್ಟ ಪಡುತ್ತಿದ್ದರು. ಇಂತಹ ಗಾನ ಗಂಗೆಯ ಆತ್ಮಕಥೆಯನ್ನು ಧಾರವಾಡದ ನಾನಿ ಕಾಕಾ(ಎನ್ಕೆ) ನಿರೂಪಿಸಿದ್ದಾರೆ. ಬಹುದಿನದ ಆತ್ಮೀಯವಾದ ಅವರ ಸಂಬಂಧ ಒಂದು ಒಳ್ಳೆಯ ಹೇಳುವ ಕೇಳುವ ಪರಂಪರೆಯ ದ್ಯೋತಕವಾಗಿ ‘ನನ್ನ ಬದುಕಿನ ಹಾಡು’ ಎಂಬ ಪುಸ್ತಕ ಹೊರಬಂದಿದೆ.

ಗಂಗೂಬಾಯಿಯವರ ಆತ್ಮಕಥೆ ಅನೇಕ ಆಯಾಮಗಳಿಂದ ಮಹತ್ವದ್ದು. ಆಕೆಯ ಬಾಲ್ಯ ಮತ್ತು ಬೆಳೆದು ಬಂದ ಸಾಮಾಜಿಕ ಪರಿಸರವು ಗಾನವಿದುಷಿಯ ಕಷ್ಟಗಳನ್ನು ವಿವರಿಸುತ್ತದೆಯಾದರೆ ಆಕೆಯ ವಿದ್ವತ್ತು ಬೆಳೆದಂತೆ ಬೆಳೆದಂತೆ ಆಕೆಯ ಗಾನ ಕಛೇರಿಗಳ ಸವಾಲು ಸೊಗಸುಗಳು ಇನ್ನೊಂದು ಬಗೆಯ ವಿಸ್ತಾರವನ್ನು ಪಡೆದುಕೊಳ್ಳುತ್ತದೆ. ಇದೆಲ್ಲದಕ್ಕು ಮೀರಿದಂತೆ ಒಬ್ಬ ಹೆಣ್ಣಾಗಿ ಆಕೆ ಗಟ್ಟಿಗಿತ್ತಿಯಾಗಿ ನಿಂತ ಅನುಭವದ ತುದಿಯಲ್ಲಿಯೂ ಹೆಣ್ಣು ಎಂಬುದನ್ನು ಮರೆಯಗೊಡದ ಸಮಾಜದ ವಾಸ್ತವವನ್ನು ಆಕೆ ವಿವರಿಸಿರುವುದು ತುಂಬ ಮುಖ್ಯ ಎನ್ನಿಸುತ್ತದೆ.

ಗಂಗೂಬಾಯಿ ಹುಟ್ಟಿದ್ದು ನಾಚ್‌ಗಾನಾ ಕುಟುಂಬದಲ್ಲಿ. ಇದರಿಂದ ಆಕೆಗೆ ಹಾಡು ಎನ್ನುವುದು ಹುಟ್ಟುತ್ತಲೇ ಅಂಟಿಕೊಂಡ ವ್ಯಾಮೋಹ. ಅವರ ಅಮ್ಮ ಅಂಬಾಬಾಯಿ ಕರ್‍ನಾಟಕ ಸಂಗೀತಗಾರ್‍ತಿಯಾಗಿದ್ದು ಮಗಳನ್ನು ಹಿಂದೂಸ್ಥಾನಿ ಸಂಗೀತಗಾರ್‍ತಿಯಾಗಿ ಮಾಡಲೆಂದೆ ಪರಿಶ್ರಮ ಪಟ್ಟವಳು. ಅವಳ ಹಾಡಿಗಾಗಿ ತನ್ನ ಶೈಲಿಯ ಸಂಗೀತವನ್ನ ಹಾಡುವುದನ್ನು ಬಿಟ್ಟುಕೊಟ್ಟ ತ್ಯಾಗಮಯಿ. ಇಂತಹ ಅಮ್ಮ ಇನ್ನೂ ಪುಟ್ಟ ಹುಡುಗಿಯಾಗಿದ್ದ ಗಂಗೂಬಾಯಿಯವರ ಬೆನ್ನ ಮೇಲೆ ತಾಳ ಹಾಕುತ್ತಾ ಇದ್ದಳಂತೆ. ಈ ತಾಳವು ಗಂಗಮ್ಮನವರಿಗೆ ಒಂದು ಬಗೆಯ ಅಭಯ ಹಸ್ತದಂತೆ ತೋರುತ್ತಿತ್ತಂತೆ. ಆ ತಾಳದ ಲಯವಿಲ್ಲದೇ ಹೋದರೆ ಏನೋ ಕಳಕೊಂಡಂತೆ ಅನಿಸುತ್ತಿತ್ತಂತೆ. ತಾಯಿಯ ಅಭಯ ಎನ್ನುವುದನ್ನು ಗಂಗಮ್ಮ ಕಂಡುಕೊಂಡಿದ್ದು ಹೀಗೆ. ಮುಂದೆ ಈ ತಾಯಿ ಮಗಳು ಸೇರಿ ಗುರುವಾಗುವವರನ್ನು ಹುಡುಕಿದ್ದು, ಹಲವಾರು ಗುರುಗಳ ಮಧ್ಯದಲ್ಲಿ ಸ್ಥಿರವಾಗಿ ಗುರುವಾದವರು ಸವಾಯಿ ಗಂಧರ್‍ವರೆಂಬ ಸ್ವರ ಮಾಂತ್ರಿಕರು. ಈ ಗುರುವಿನೊಂದಿಗಿನ ಆತ್ಮೀಯ ಸಂಬಂಧವನ್ನು ಶಿಷ್ಯೆ ಗಂಗೂ ಚೆನ್ನಾಗಿ ವಿವರಿಸುತ್ತಾರೆ. ಗುರುಗಳ ಸಾಮರ್‍ಥ್ಯವನ್ನು ಒಂದು ಪುಟ್ಟ ಝಲಕ್‌ನಿಂದ ಹಿಡಿದು ಇಡೀದಿನದ ಆಲಾಪದಲ್ಲಿ ನಡೆಯುತ್ತಿದ್ದು ಅದನ್ನು ಗ್ರಹಿಸಲು ಎಷ್ಟೋ ಸಾರಿ ತಾನು ಅಸಮರ್‍ಥಳು ಎನ್ನುವ ಅಭಿಪ್ರಾಯ ಅವರದು. ‘ಗುರುಗಳು ತಮ್ಮ ಸಾಧನೆಯನ್ನು ಕಠಿನ ತಪಸ್ಸಿನಂತೆ ಮಾಡುತ್ತಿದ್ದರು.. ..ಒಮ್ಮೊಮ್ಮೆ ಇಡೀ ದಿನ ಪೂರಾ, ವಿಲಂಬಿತ ಇಲ್ಲದೆ ಖರಜ ವಿಲಂಬಿತದಿಂದ ಮಧ್ಯ ಷಡ್ಜ ಸ್ವರಕ್ಕೆ ಬರುವ ಕ್ರಮವನ್ನಷ್ಟೇ ಪ್ರಾಕ್ಟಿಸು ಮಾಡುತ್ತಿದ್ದುದೂ ಉಂಟಂತೆ’ ಎಂದು ತಮ್ಮ ಗುರುಗಳ ರೀತಿಯನ್ನು ವಿವರಿಸುತ್ತಾರೆ. ಇಂತಹ ಗುರು ತಾನಿನ್ನೂ ಕೆಲವು ವಿಷಯಗಳನ್ನು ಕಲಿಸುವುದಿತ್ತು. ತಮಗೆ ಆಯುಷ್ಯ ಸಾಲದು ಎಂದರಂತೆ! ಈ ಬಗೆಯ ತಪಸ್ಸು, ಸಾಧನೆಯ ಸಂಗತಿಗಳನ್ನು ಕೇಳುವಾಗ ದೇಶಕಾಲಕ್ಕೆ ಅತೀತರಾಗಿ ಬದುಕುವ ಸಂಗೀತ ಸಾಧಕರ ಸಾಧನೆಗೂ ಆಧ್ಯಾತ್ಮಿಕತೆಗೂ ಹೆಚ್ಚಿನ ವ್ಯತ್ಯಾಸವಿಲ್ಲವೆಂಬಂತೆ ತೋರುವುದು. ಇದನ್ನು ಗಂಗಮ್ಮನವರೂ ಹೇಳುತ್ತಾರೆ.

ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡ ಗಂಗೂಬಾಯಿಯವರು ತಮ್ಮ ಸಮಾಜ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ಯಾರಾದಾದರೂ ಮನೆಯ ಕಾಂಪೌಂಡಿನಲ್ಲಿ ಮಾವಿನಕಾಯಿ, ಸಂಪಿಗೆ ಹೂ ಬಿಡಿಸಿಕೊಂಡರೆ ‘ಆ ಹಾಡುವವರ ಮನೆಯ ಹುಡುಗಿ’ ಎಂದು ನನ್ನನ್ನು ಒಳಗೇ ಬರಗೊಡುತ್ತಿದ್ದಿಲ್ಲ’ ಎಂದು ಹೇಳಿಕೊಳ್ಳುತ್ತಾರೆ. ಯಾವುದೇ ಶಿಷ್ಯರ ಮನೆಯಲ್ಲಿ ನಮಗೆ ಊಟದ ಆಮಂತ್ರಣವಿದ್ದಾಗ ನಾವು ನಮ್ಮ ಕೈ ಸಂಗಾತ ನಮ್ಮ ಎಲೆಗಳನ್ನು ಬಳಿದು ಚೆಲ್ಲುತ್ತಿದ್ದೆವು. ನನಗೆ ಈ ವರ್‍ತನೆ ಮನಸ್ಸಿಗೆ ನೋವುಂಟು ಮಾಡುತ್ತಿತ್ತು ಎಂದು ಹಂಚಿಕೊಂಡಿದ್ದಾರೆ. ಗಾಯನ, ನರ್‍ತನಗಳನ್ನು ನಡೆಸುತ್ತಿದ್ದ ಮನೆತನಗಳಿಗೆ ಸಾಮಾಜಿಕವಾಗಿ ಗೌರವ ಇರುತ್ತಿರಲಿಲ್ಲ. ಅವರು ಯಾರಾದರೊಬ್ಬ ಗಣ್ಯರ ಉಪಪತ್ನಿಯಾಗಿ ಜೀವಿಸಬಹುದಿತ್ತಷ್ಟೆ! (ಈ ಸಂಗತಿಯನ್ನು ಗಂಗೂಬಾಯಿ ಯಾವುದೇ ಭಿಡೆಯಿಲ್ಲದೆ ಹೇಳುತ್ತಾರಲ್ಲದೆ ತಾವೊಬ್ಬ ಉಪಪತ್ನಿಯಾಗಿದ್ದುದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ). ತಮ್ಮ ಪಾಲಿಗೆ ಬಂದ ಸಂಸಾರವನ್ನು ಇದ್ದಂತೆ ಒಪ್ಪಿಕೊಂಡು ನಿಷ್ಠೆಯಿಂದ ಸಂಸಾರ ತೂಗಿಸಿದ ಹಿರಿಮೆ ಈಕೆಯದು. ಬಡತನದ ನೋವೂ ಸೇರಿದಂತೆ ಅನೇಕ ಬಗೆಯ ಮೋಸ ಕಪಟಗಳಿಗೆ ಬಲಿಯಾಗಿದ್ದೇನೆ ತಾನು, ಅದು ತನಗೆ ಮಾತ್ರ ಗೊತ್ತು ಎಂದು ನಿಟ್ಟುಸಿರು ಬಿಡುವುದನ್ನು ಆಕೆಯ ಪ್ರಶಸ್ತಿ, ಪುರಸ್ಕಾರಗಳ ಜೊತೆ ಹೋಲಿಸಲೂ ಸಾಧ್ಯವಿಲ್ಲ ಎನ್ನುವಂತಿದೆ. ‘ನನ್ನ ಬಾಲ್ಯದ ಕಷ್ಟದ ಬದುಕು. ಯಜಮಾನರ ಕೈ ಹಿಡಿದ ಮೇಲೆ ಕಣ್ಣೀರಿನ ಬದುಕು. ಮಕ್ಕಳಾದ ಮೇಲೆ ಸಮ್ಮಿಶ್ರ ಭಾವನೆಗಳ ಬದುಕು. ನನ್ನ ಬದುಕಿನ ಹಾಡಿನಲ್ಲಿ ಜೋಗಿಯಾ, ತೋಡಿಗಳೂ ಇವೆ; ಬಸಂತಬಹಾರವೂ ಇದೆ; ಭೈರವಿ ಅಂತೂ ಇದ್ದದ್ದೆ.’ ಎಂದು ತಾವು ಹಾಡುವ ರಾಗಗಳಿಗೆ ತಮ್ಮ ಬದುಕಿನ ಲಯವನ್ನು ಹೋಲಿಕೆ ಮಾಡಿ ಹೇಳಿದ್ದಾರೆ.

ಗಂಗೂಬಾಯಿ ಎತ್ತುವ ಕೆಲವು ಪ್ರಶ್ನೆಗಳು ಅವರ ಸ್ವಾತಂತ್ರ್ಯ ಪ್ರಿಯತೆಯನ್ನೂ ಸ್ವಚ್ಛ ವಿಚಾರವಂತಿಕೆಯನ್ನೂ ತೋರಿಸುವಂತಿವೆ. ಸಂಗೀತಗಾರರನ್ನು ಕರೆಯುವಾಗ ‘ಉಸ್ತಾದ್’(ಮುಸ್ಲಿಂ), ಪಂಡಿತ, ಬುವಾ(ಹಿಂದೂ) ಎಂದು ಕರೆಯಲಾಗುತ್ತದೆ. ಆದರೆ ಸಂಗೀತಗಾರ್‍ತಿಯರು ಎಷ್ಟೇ ಎತ್ತರಕ್ಕೆ ಏರಿದ್ದರೂ ಅವರ ಹೆಸರಿನ ಜೊತೆಗೆ ‘ಬಾಯಿ’ ಸೇರಿಸಿ ಹೇಳಲಾಗುತ್ತದೆ-ಕೇಸರ್ ಬಾಯಿ, ಮೇನಕಾಬಾಯಿ, ಗಂಗೂಬಾಯಿ ಎಂದೂ ಮುಸ್ಲಿಂ ಹೆಂಗಸರಾದರೆ ಅವರನ್ನು ಬೇಗಂ ಅಖ್ತರ್, ರೋಶನಾರಾ ಬೇಗಂ ಎಂದೂ ಕರೆಯುತ್ತಾರೆ. ಇದು ಗಂಗೂಬಾಯಿಯವರಿಗೆ ಹಿಡಿಸಿಲ್ಲ. ಅದನ್ನು ಅವರು ಮೆಲ್ಲಗಿನ ದನಿಯಲ್ಲಿ ಟೀಕಿಸಿದ್ದಾರೆ. ಎಂಎಲ್‌ಎ ಆಗಿದ್ದಾಗ ತಾವು ಮಾಡಬೇಕಾಗಿದ್ದ ಕರ್‍ತವ್ಯ ಏನಾಗಿತ್ತು ಎಂಬುದನ್ನು ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳುತ್ತಾರೆ. ಈ ಬಗೆಯ ಪ್ರಾಮಾಣಿಕತೆ ಅವರಿಗೆ ಬಂದಿರುವುದು ಅವರ ಶುದ್ಧ ಸಂಗೀತದ ಆರಾಧನೆಯಿಂದ.

ಗಂಗೂಬಾಯಿ ಬಹುದೊಡ್ಡ ಗಾಯಕಿಯಾಗಿದ್ದರೂ ಆಕೆಗೆ ಕೌಟುಂಬಿಕ ಸ್ವಾರಸ್ಯ ಇಷ್ಟ. ಇಸ್ಪೀಟು ಆಡುವುದೆಂದರೆ ಬಲುಪ್ರೀತಿ, ಜೀವನದ ಚಿಕ್ಕ ಚಿಕ್ಕ ಸುಖ ಕಷ್ಟಗಳನ್ನು ಅನುಭವಿಸುತ್ತಲೇ ತಮ್ಮ ಸಾಧನೆಯ ಕಡೆಗೆ ಗಮನವಿತ್ತವರು ಅವರು. (ಲೋಹಿಯಾ ಹೇಳಿದಂತೆ ಮಹಿಳೆಯರ ವಿರಾಮ ಎಷ್ಟು ದುಬಾರಿ!). ಸದಾ ಸುತ್ತಿಕೊಂಡ ಸಂಸಾರ ಇನ್ನೊಂದೆಡೆ ಸಾಧನೆಯ ಕಠಿನ ಸವಾಲು(ಇದಕ್ಕೆ ಉದಾಹರಣೆಯಾಗಿ ಅವರು ತಮ್ಮ ಮಕ್ಕಳನ್ನು ತೊಡೆಯ ಮೇಲೆ ಹಾಕಿಕೊಂಡೇ ಎಷ್ಟೋ ಬಾರಿ ತಾಲೀಮು ನಡೆಸುತ್ತಿದ್ದೆ ಎಂದು ಹೇಳುವುದು ನೆನಪಾಗುತ್ತದೆ). ಅನೇಕ ಕಷ್ಟ ನಷ್ಟಗಳ ನಡುವೆ ಸಾಧಿಸುವ ಹೆಣ್ಣು ತನ್ನ ಹೆಣ್ತನವನ್ನು ಬಿಟ್ಟುಕೊಡದೆ ತೂಗಿಸಿಕೊಳ್ಳಬೇಕಾದ ಜವಾಬ್ದಾರಿಗಳನ್ನು ಎಷ್ಟು ಕೊಂಡಾಡಿದರೂ ಸಾಲದು, ಕೊನೆಯಲ್ಲಿ ಒಂದು ಮಾತು- ಗಂಗೂಬಾಯಿ ತಮ್ಮ ಟಾನ್ಸಿಲ್ಸ್ ತೊಂದರೆಯಿಂದಾಗಿ ಕೋಮಲ ಕಂಠದಿಂದ ಗಡಸು ಕಂಠದವರಾಗಿ ಪರಿವರ್‍ತನೆ ಹೊಂದಿದರು. ಈ ರೂಪಾಂತರವೇ ಒಂದು ರೂಪಕದಂತಿದೆ. ಅವರು ಏರಿದ ಎತ್ತರ ಗಂಡಸಿನ ಸಮಸಮಕ್ಕೆ ನಿಂತು ಅದನ್ನೂ ಮೀರಿ ಬರಿಯ ನಾದವಾಗಿ ಉಳಿಯಿತು. ಈ ಪರಿಯ ಸೊಬಗ ಹೇಗೆ ನೋಡದೆ ಹೋಗಬಹುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಂಗ್ ನೆಪ್ಪೈತ ನಂಜಿ?
Next post ನಾವು ಮನೆಯ ಮಕ್ಕಳು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…