ನನ್ನ ಮಾತುಗಳು
ಉತ್ತರಾರ್ಧ
೧
ಇಲ್ಲಿಯ ಕವಿತೆಗಳನ್ನು ನಾನು ನೀಳ್ಗವಿತೆಗಳೆಂದು ಕರೆದಿದ್ದೇನೆ. ಅದಕ್ಕೆ ಕಾರಣವಾದರೂ ಇದೆ. ಪ್ರತಿಯೊಂದು ಕವಿತೆಯೂ ಒಂದು ಸ್ವತಂತ್ರವಾದ ಭಾವನೆಯ ಸುತ್ತು ಬೆಳೆದ ಬಂದ ದೇಹನವೆನ್ನಬಹುದು. ಯಥಾವತ್ತಾಗಿ ಈ ಭಾವನೆಯನ್ನು ನಿರೂಪಿಸಿದರೆ ಕವಿತೆಯು ಒಂದು ಗೀತೆಯಾಗುವದು. ಆದರೆ ಭಾವನೆಯು ಸ್ವತಂತ್ರವಾಗುಳಿದರೂ ಅದು ಮನಸ್ಸಿನಲ್ಲಿ ಹೆಚ್ಚಾಗಿ ಬಿಂಬಿಸುವಂತೆ ಮಾಡಲು ಅನೇಕ ಹಾದಿಗಳಿವೆ. ಭಾವನೆಯನ್ನು ಸರಳವಾಗಿ (ಅಲಂಕಾರಯುಕ್ತವಾಗಿದ್ದರೂ) ನಿರೂಪಿಸದೆ ಅದನ್ನು ಒ೦ದು ಕಥೆಯೊಳಗಿ೦ದ ಹಾಯಿಸಿ ತರಬಹುದು; ದೃಶ್ಯರೂಪವಾಗಿ ಅದನ್ನು ಚಿತ್ರಿಸಬಹುದು; ಇಲ್ಲದೆ ಅದಕ್ಕೆ ವಿಚಾರಗಳ ಬೆಂಬಲವನ್ನು ಕೊಡಬಹುದು. ಇದರಲ್ಲಿಯ ಯಾವ ರೀತಿಯನ್ನು ಅನುಸರಿಸಿದರೂ ಕವಿತೆಯು ನೀಳ್ಗವಿತೆಯಾಗುವದು. ‘ಸೆಳವಿ’ನಲ್ಲಿಯ ಸಂವಾದ ವಿಧಾನ (ದೃಶ್ಯದ ಒಂದು ರೀತಿ) ಹಾಗು ವಿಚಾರಸರಣಿ; ‘ಪತನ’ದಲ್ಲಿಯ ವಿಚಾರಸರಣಿ ಹಾಗು ದೃಶ್ವರೂಪ; ‘ತೀರದ ದಾರಿ’ಯಲ್ಲಿಯ ದೃಶ್ಯಮಯತೆ; ‘ಮಹಾಶ್ವೇತೆ’ಯಲ್ಲಿರುವ ನಾಟಕದ ಹೊಳಹು; ‘ತಾಯವ್ವನ ಸಮಾಧಿ’ ಯಲ್ಲಿಯ ಕಥೆ; ಹಾಗು ‘ಕಲೋಪಾಸಕ’ದಲ್ಲಿಯ ಕಥೆ, ವಿಚಾರಸರಣಿ, ಮತ್ತು ಸಂವಾದ ಕ್ರಮಗಳು,-ಇವೆಲ್ಲ ಆಯಾ ಕವಿತೆಯನ್ನು ನೀಳ್ಗವಿತೆಯನ್ನಾಗಿ ಮಾಡಿದ ಅಂಗಗಳು.
ಆದರೆ ಒಂದು ಅಂಗವಾಗಿ ಬಂದ ಕ್ರಮವು ಸರ್ವಾಂಗವನ್ನು ವ್ಯಾಪಿಸಿದರೆ ಕವಿತೆಯು ನೀಳ್ಗವಿತೆಯಾಗುವದಿಲ್ಲ; ಅದೊಂದು ಪದ್ಯಕಥೆ (Narrative poem) ಪದ್ಯಪ್ರಬಂಧ (Argument in verse) ಇಲ್ಲವೆ ದೃಶ್ಯ ಕಾವ್ಯವಾಗಬಹುದು. ಈ ರೀತಿಯಾಗಿ ನೋಡಿದಲ್ಲಿ ‘ಮಹಾಶ್ವೇತೆ’ಯನ್ನು ಒಂದು ನೀಳವಿತೆಯೆಂದು ಕರೆಯುವದಕ್ಕಿಂತ ದೃಶವೆಂದು ಕರೆದರೆ ಒಳ್ಳೆ ಯದಾಗಬಹುದು. ಈ ಮಾತು ಹೆಚ್ಚು ಕಡಿಮೆ ‘ತೀರದ ದಾರಿ’ಗೂ ಅನ್ವಯಿಸುವದು. ಇದೇ ದೃಷ್ಟಿಯಿಂದ ‘ತಾಯವ್ವನ ಸಮಾಧಿ’ ಯು ಒಂದು ಪದ್ಯಕಥೆಯನ್ನ ಬಹುದು. ಆದರೆ ನನಗೆ ತೋಚಿದಂತೆ ಈ ಕ್ರಮಗಳಿಗಿಂತ ಮೂಲಭಾವನೆಯೇ ಪ್ರತಿಯೊಂದು ಕೃತಿಯಲ್ಲಿ ಪ್ರಬಲವಾಗಿದ್ದರಿಂದ ಇವೆಲ್ಲವುಳನ್ನು ನೀಳವಿತೆಗಳೆಂದು ಕರೆದಿದ್ದೇನೆ.
ಕಾವ್ಯಸ್ಫೂರ್ತಿಯು ಏಕಕಾಲದಲ್ಲಿ ಬಹಳ ಹೊತ್ತಿನವರೆಗೆ ಕೆಲಸ ಮಾಡಲಾರದು; ಕಾರಣ ಪ್ರತಿಯೊಂದು ನೀಳ್ಗೆವಿತೆಯೂ ಕೆಲವು ಲಘು ಗೀತೆಗಳ ಒ೦ದು ಮಾಲೆಯೆಂದು ವಿಮರ್ಶೆಯಲ್ಲಿ ಒಂದು ವಾದವಿದೆ. ಈ ವಾದಕ್ಕೆ ‘ತಾಯವ್ವನ ಸಮಾಧಿ’ ಹಾಗು ‘ಮಹಾಶ್ವೇತೆ’ಯಲ್ಲಿ ಹೆಚ್ಚು ಆಸ್ಪದವು ಸಿಕ್ಕಬಹುದು. ಇದನ್ನು ನಾನು ಇಲ್ಲಿ ಚರ್ಚಿಸಬಯಸುವದಿಲ್ಲ. ಒಂದೇ ಮಟ್ಟಿನಲ್ಲಿ ಸಹ ನೀಳ್ಗವಿತೆಗಳನ್ನು ಬರೆಯಲು ಶಕ್ಯವಿದೆಯೆಂದು ಹೇಳಿ ಬಿಡಬಹುದು. ವಾದವನ್ನು ಒಪ್ಪಿದರೂ ಕೂಡ ನೀಳ್ಗವಿತೆಯ ರಚನಾ ಕ್ರಮಕ್ಕೆ ಯಾವ ಅಭ್ಯಂತರವೂ ಇಲ್ಲ. ಒಂದೇ ಒಂದು ಸ್ವತಂತ್ರ ಕಲ್ಪನೆಯು ಅಲ್ಲಿ ಪ್ರಧಾನವಾಗಿ ವಿರಾಜಮಾನವಾಗಿರುವನಕ ಅದು ನೀಳ್ಗವಿತೆಯೇ.
೨
ಒಟ್ಟಾರೆ ಕಾವ್ಯದ ವಿಷಯಕ್ಕೆ ಇಷ್ಟು ಮಾತುಗಳನ್ನು ಹೇಳಬೇಕೆಂದು ನನಗೆ ತೋರುತ್ತದೆ. ಅನೇಕ ಮುಖವಾದ ಅನುಭವವನ್ನು ಕವಿಯು ತನ್ನ ಅ೦ತರಂಗವು ತೆರೆದ ದಿಕ್ಕಿನಲ್ಲಿ ಪಡೆಯುತ್ತಾನೆ. ಜಾಗೃತಿ, ಸ್ವಪ್ನ, ಸುಷುಪ್ತಿ, ಸಮಾಧಿ,-ಇವೆಲ್ಲ ಅನುಭವದ ಲೋಕಗಳು. ಈ ನಾಲ್ಕು ಲೋಕಗಳಲ್ಲಿ ಯಾವುದರಲ್ಲಿಯೂ ಅನುಭವವನ್ನು ಪಡೆಯುವ ರೀತಿ- ಸಂದರ್ಭಗಳ ಸಂಖ್ಯೆಗೆ ಆ೦ತರವಿಲ್ಲ, ಪಾರವಿಲ್ಲ.
ಎರಡನೆಯ ಮಾತು: ಕವಿಯು ತನ್ನ ವಸ್ತುವನ್ನು ಮೇಲಿನಂತೆಯೇ ಆರಿಸಿಕೊಳ್ಳಬಲ್ಲ. ಜಾಗೃತಸೃಷ್ಟಿಯದೇ ಇರಲಿ, ಸ್ವಪ್ನ ಸೃಷ್ಟಿಯದೇ ಇರಲಿ, ಆ ವಸ್ತುವು ಕವಿಯ ಅನುಭವದ ವಾಹನವಾದರೆ ತೀರಿತು. ಕವಿಯು ಓರ್ವ ವ್ಯಕ್ತಿಯಾದ್ದರಿಂದ ಅದು ಮಾನವ್ಯದ ಒಂದು ರೀತಿಯ ಅನುಭವದ ವಾಹನವೂ ಆಗುವದು. ಕವಿಯ ದೃಷ್ಟಿಯು ಅವನ ಅನುಭವದ ಸೀಮೆಯನ್ನು ನಿರ್ಣಯಿಸುವಂತೆ ಅವನ ಸಂಸ್ಕಾರ-ಸಂಸ್ಕೃತಿ-ಸಂದರ್ಭಗಳು ಕವಿಯ ವಸ್ತುವಿನ ಸ್ವರೂಪವನ್ನು ನಿರ್ಣಯಸುತ್ತವೆ.
ಮೂರನೆಯ ಮಾತು : ಅವನ ಕೃತಿಯ ಸಾಹಿತ್ಯ ಪ್ರಕಾರವು: (Literary form) ಅವನು ಪಡೆದ ಅನುಭವ-ವಸ್ತುಗಳ ಸ್ವರೂಪದ ಮೇಲೆ, ಅವನ ಪ್ರಯೋಗಾಭಿಲಾಷೆಯ ಮೇಲೆ ಅವಲಂಬಿಸಿದೆ. ಅದು ಪರಂಪರಾನುಗತಿಕವಿರಬಹುದು; ಹೊಸತು-ಹಳೆಯದರ ಸಮ್ಮಿಶ್ರಣವಿರಬಹುದು ಹೊಸತಿರಬಹುದು; ತೀರ ಹೊಸತಿರಬಹುದು.
ನಾಲ್ಕನೆಯ ಮಾತು: ಕವಿಯ ಶೈಲಿಯೂ ಸಹ ಬಹುಮಟ್ಟಿಗೆ ಕವಿಯ ಸಿದ್ದಿ – ಸಂಸ್ಕಾರಗಳಿಂದ, ಅವನ ಅನುಭವ-ವಸ್ತು – ಸಾಹಿತ್ಯ ಪ್ರಕಾರಗಳಿಂದ ನಿರ್ಣಯಿತವಾಗುತ್ತದೆ. ಅದು ಇವೆಲ್ಲವುಗಳ ದೇಹವಿದ್ದಂತೆ ಮಾತ್ರ ಹೊಂದಿಕೊಂಡಿರಬೇಕು. ಅದು ಗ್ರಾಮ್ಯವಿರಬಹುದು; ಗ್ರಾಂಥಿಕ ವಿರಬಹುದು; ಬಳಕೆ ಮಾತಿನದಿರಬಹುದು; ಇವೆಲ್ಲವುಗಳ ಸಮ್ಮಿಲನವಿರಬಹುದು. ವಿವಿಧ ರೀತಿಯದಾದರೂ ಗಮ್ಯವಾಗಿರಬೇಕು; ಭಾಷಾಶಾಸ್ತ್ರ ವ್ಯಾಕರಣಗಳ ಸೀಮೆಯನ್ನು ಬಿಟ್ಟು ದೂರ ಹೋಗಿರಬಾರದು.
ಐದನೆಯ ಮಾತು: ಅಲಂಕಾರದ ನಿರ್ಣಯವು ಮೇಲೆ ವಿವರಿಸಿದ ಎಲ್ಲ ಮಾತುಗಳನ್ನು ಅವಲಂಬಿಸಿದೆ; ಕವಿಯನ್ನೂ ಅವಲಂಬಿಸಿದೆ. ಇಲ್ಲಿ ಇಷ್ಟು ಮಾತ್ರ ಹೇಳಬಹುದು. ಮೇಲಿನ ಯಾವ ಮಾತಿಗೂ ವಿರುದ್ಧವಾದ ಅಲಂಕಾರಕ್ಕೆ ‘ಆಲಂ’ ಎಂದು ಉಸಿರಬೇಕಾಗಿ ಬರುವದು.
ಆರನೆಯ ಮಾತು: ಅನುಭವದಿಂದ ಬಿಡಿಸಿ ಕೊನೆಗೆ ತಂದಿಟ್ಟರೂ ಛಂದಸ್ಸು ಅನುಭವಕ್ಕೆ ತೀರ ಸಮೀಪವಾದುದು; ಒಮ್ಮೊಮ್ಮೆ ಇದು ಅನುಭವದೊಡನೆ ಸಹ ಹುಟ್ಟಿ ಬರುವದುಂಟು. ವೃತ್ತಗಳಿರಲಿ; ಷಟ್ಪದಿ-ಸಾಂಗತ್ಯಗಳಿರಲಿ; ನೂತನ ಛಂದಸ್ಸಿರಲಿ: ಆನುಭವಕ್ಕೂ ಅದಕ್ಕೂ ಅನನ್ಯ ಬಾಂಧವ್ಯವಿರದೆ ಹೋದರೆ ಆ ಛಂದಸ್ಸು ನಿಲ್ಲಲಾರದು. ಒಂದು ಕೃತಿಯಲ್ಲಿ ಹೀಗೆ ನಿಂತ ಛಂದಸ್ಸು ತನಗೆ ಸಮರ್ಪಕವಾಗುವಂತೆ-ಕೃತಿಯಲ್ಲಿದ್ದ ಉಳಿದ ಮಾತುಗಳಿಗೆ ಸಮರ್ಪಕವಾಗುವಂತೆ-ತನ್ನ ಅಂದ-ಚೆಂದವನ್ನು ಕಾಯ್ದು ಕೊಳ್ಳುತ್ತ ಹೋಗಬೇಕು.
ಸಂಕ್ಷಿಪ್ತ ಬಾಂಧವ್ಯ,- ಒರ್ವ ವ್ಯಕ್ತಿಯೆಂದರೆ ಸಂಕ್ಷಿಪ್ತ ಬ್ರಹ್ಮ, ಸಂಕ್ಷಿಪ್ತ ಮಾನವ್ಯ, ಸಂಕ್ಷಿಪ್ತ ದೇಶ, ಸಂಕ್ಷಿಪ್ತ ಸಮಾಜ-ಸಂಕ್ಷಿಪ್ತ ವಾದ ‘ಎಲ್ಲವೂ’ ಅಹುದು. ವ್ಯಕ್ತಿಯ ಅನುಭವವನ್ನು ಪಡೆಯವದು ನಾಲ್ಕು ದಿಕ್ಕುಗಳಲ್ಲಿ; ತನ್ನೊಡನೆ ಇತರ ಜೀವಿಗಳೊಡನೆ, ಪ್ರಕೃತಿಯೊಡನೆ ಪರಮಾತ್ಮನೊಡನೆ. ವ್ಯಕ್ತಿಯ ಅನುಭವದಲ್ಲಿ ಅವನ ಆತ್ಮ, ಮನಸ್ಸು, ಬುದ್ದಿ, ಹೃದಯ, ಕಲ್ಪನಾಶಕ್ತಿ, ದೇಹ ಮುಂತಾದ ಎಲ್ಲ ಶಕ್ತಿಗಳ ಸಮಾವೇಶವಾಗುವವು. ಕವಿಯೆಂದರೆ ಅಂಥ ಅನುಭವವನ್ನು ಹೆಚ್ಚು ಹೆಚ್ಚಾಗಿಯೂ ಸೂಕ್ಷ್ಮತರವಾಗಿಯೂ ಪಡೆದು ಅದನ್ನು ಮೇಲೆ ಹೇಳಿದಂತೆ ಕೃತಿಗಳಲ್ಲಿ ಬಳಸಿಕೊಳ್ಳುವ ವ್ಯಕ್ತಿ. ಛಂದೋಬದ್ಧ ಕೃತಿಗಳನ್ನು ರಚಿಸಿದವರನ್ನು ಕವಿಗಳೆಂದು ಕರೆಯುವುದೂ ಉಳಿದವರಿಗೆ ಸಾಹಿತಿಗಳೆಂದು ಹೇಳುವದೂ ಒಂದು ಸಂಪ್ರದಾಯವಾಗಿದೆ. (ನಾಟಕಕಾರ, ಕತೆಗಾರ, ಮು.)
೩
ಅಂದ ಮೇಲೆ ಒಂದು ಕೃತಿಯ ಯೋಗ್ಯತೆಯನ್ನು ನಿರ್ಣಯಿಸಲು ಎರಡು ಮಾತುಗಳು ಉಪಯೋಗ ಬೀಳುತ್ತವೆ. ಕವಿಯ, ಅನುಭವದ ಜಾತಿ, ರೀತಿ, ಮತ್ತು ತರಗತಿ ಹಾಗು ನಿರೂಪಣೆಯ ಕಾರ್ಯದಲ್ಲಿ ಕವಿಯು ಪಡೆದ ಯಶಸ್ಸು. ನಿರೂಪಣೆಯಲ್ಲಿ ಮೇಲಿನ ಉಳಿದ ಐದು ಮಾತುಗಳು ಸೇರುವವು.
ಅನುಭವದ ಜಾತಿ-ರೀತಿಗಳನ್ನು ನಿರ್ಣಯಿಸುವಾಗ ನಾವು ಇನ್ನೂ ಅನೇಕ ವಿಷಯಗಳನ್ನು ಲಕ್ಷ್ಯ್ಷದಲ್ಲಿ ತರಬೇಕಾಗುವು; (೧) ಆ ಅನುಭವದಲ್ಲಿ ಯೋಜಿಸಲ್ಪಟ್ಟ ಕವಿಯ ವ್ಯಕ್ತಿತ್ವದ ಸ್ಥಿತಿಗತಿ; ಅಂದರೆ ಕವಿಯ ದೃಷ್ಟಿ ಸಾಫಲ್ಯದ ಮಟ್ಟು, (೨) ಅದರಲ್ಲಿ ಸಮಾವೇಶವಾದ ವಸ್ತುವಿನ (ಸ್ವತಃ ತಾನು, ಇತರ ಜೀವಿಗಳು; ಪ್ರಕೃತಿ; ಇಲ್ಲವೆ ಪರಮಾತ್ಮ. Object) ಸ್ವರೂಪ ಹಾಗು ರಾಮಣೀಯಕತೆ. (೩) ಆ ಅನುಭವದಲ್ಲಿ ಹೊಂದಿಕೊಂಡ ಒಂದು ವಿಶಿಷ್ಟ ಕಾಲಮಾನದ ಸ್ವರೂಪ ಹಾಗ ವರ್ಚಸ್ಸು (೪) ಅದರಲ್ಲಿ ಒಡೆದು ಕಾಣುವ ಸರ್ವಕಾಲೀನ ಜನಾಂಗವಾದ ಮಾತುಗಳ ಬಗೆ. (೫) ಇವೆಲ್ಲ ಅನುಭವದಲ್ಲಿ ಒಂದರೊಳಗೊಂದು ಕೂಡಿ ನಿರ್ಮಿಸಿದ ಸಮರಸದ ಉಜ್ವಲತೆ, ಪೂರ್ಣತೆಗಳು.
೪
ಇಂತು ಕವಿಯ ಅನುಭವ-ನಿರೂಪಣೆಗಳನ್ನು ಬೆಲೆ ಕಟ್ಟುವದು ವಿಮರ್ಶಕರನ್ನು ಕೂಡಿದೆ, ಜನತೆಯನ್ನು ಕೂಡಿದೆ. ಆದರೂ ನಾವು ಒಂದು ಮಾತನ್ನು ನೆನಪಿನಲ್ಲಿಡಬೇಕು. ಒಂದು ಕೃತಿಯ ಬೆಲೆಯನ್ನು ನಿರ್ಣಯಿಕವಾಗಿ ಕಟ್ಟಲು, ನಾಲ್ಕು ವಿಷಯಗಳು ಸಹಾಯಕಾರಿಯಾಗುವವು: (೧) ಕೃತಿಯನ್ನು ಬರೆಯುವ ಪೂರ್ವದಲ್ಲಿದ್ದ ಕವಿಯ ಮನಃಸ್ಥಿತಿಯನ್ನು ನಾವು ತಿಳಿಯಬೇಕು. (೨) ಬರೆಯುವದು ಮುಗಿದ ಮೇಲೆ ಆ ಕೃತಿಯ ಬಗೆಯೇ ಇನ್ನೂ ಕವಿಗೆ ಏನೆನಿಸುತ್ತಿದೆಯೆಂಬುದನ್ನು ಅರಿತುಕೊಳ್ಳಬೇಕು. (೩) ಕೃತಿಯು ಪ್ರಸಿದ್ಧವಾದಾಗ ಜನತೆಯು ಏನೆನ್ನುವದೆಂದು ಗೊತ್ತಾಗಬೇಕು. (೪) ಕವಿಯ ಕಾಲವು ಗತಿಸಿ ಹೋದ ಮೇಲೂ ಸ್ಥಿರವಾಗುಳಿದ ಜನತೆಯ ಅಭಿಪ್ರಾಯವನ್ನು ಪಡೆಯಬೇಕು.
ನಾನು ಈ ಕವಿತೆಗಳಿಗೆ ‘ಮೊದಲು ಮಾತು’ಗಳನ್ನು ಬರೆದುದು ಇಲ್ಲಿ ಪ್ರಸ್ತಾಪಿಸಿದ ಮೊದಲನೆಯ ಕಾರಣದ ಸಲುವಾಗಿ. ಮೊದಲು ಮಾತುಗಳೂ ಪ್ರಸ್ತಾವನೆಯೂ ಕೂಡಿಯೇ ಎರಡನೆಯ ಬೇಡಿಕೆಯನ್ನು ಪೂರೈಸಿ ಕೊಡುತ್ತಿವೆ. ಮುಂದೆ ವಿಮರ್ಶಕರ ಕೆಲಸ, ಅವರ ಅಭಿಪ್ರಾಯಗಳೂ ನಿರ್ಣಾಯಕವಾಗಲಾರವು. ನಮ್ಮಲ್ಲಿ ಕೆಲವೆಡೆ ತಪ್ಪು ಕಲ್ಪನೆಯು ಉಳಿದಿದೆ, – ಕವಿಯು ಅಪರಾಧಿ, ವಿಮರ್ಶಕನು ನ್ಯಾಯಾಧೀಶನೆಂದು. ನಿಜವಾದ ನ್ಯಾಯಾಧೀಶನು ಬೇರೆಯಿದ್ದಾನೆ. ಅವನು ಈ ನಾಲ್ಕು ಮಾತು ಗಳನ್ನೂ ಲಕ್ಷ್ಯದಲ್ಲಿ ತರುವನು.
೫
ಆದರೆ, ಮೂರನೆಯ ಮಾತಾದ ವಿಮರ್ಶೆಗೆ ಇನ್ನೊಂದು ಅತ್ಯಗತ್ಯವಾದ ಸ್ಥಾನವಿದೆ. ಕವಿಯ ಕೃತಿಗಳು ಒಂದು ರೀತಿಯಿಂದ ಸಾರ್ವಜನಿಕ ಆಸ್ತಿಯಿದ್ದಂತೆ, ಕವಿಯು ಆ ಆಸ್ತಿಯ ಪರಿಪಾಲಕನಿದ್ದಂತೆ. ಜನತೆಯು ಕೃತಿಗಳಲ್ಲಿ ಸಮಂಜಸವಾಗಿ ಕೆಲವು ದೋಷಗಳನ್ನು ತೋರಿಸಿದರೆ ಕವಿಯು ಅದರಂತೆ ತಿದ್ದಿಕೊಳ್ಳಬೇಕು. ಈ ಕೃತಿಯಲ್ಲಿ ಹುರುಳಿಲ್ಲೆಂದು ಜನತೆಯ ಅಭಿಪ್ರಾಯವಾಗಿ ಕವಿಗೂ ಅದು ಸತ್ಯವೆಂದು ತೋರುತ್ತಿದ್ದರೆ ಅವನು ಆ ಕೃತಿಯನ್ನು ನಿರಾಕರಿಸಿ ಬಿಡಬೇಕು. ಇದರಿಂದ ಸಾಮಾಜಿಕ ಸ್ವಾಸ್ಥ್ಯವು ಹೆಚ್ಚುವದು. ಪೂರ್ಣಕೃತಿಗಳು ಬೆಳೆಯಲು ಅನುಕೂಲವಾಗುವದು.
“ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ”
ಎಂಬ ಕುಮಾರವ್ಯಾಸನ ಪ್ರತಿಜ್ಞೆಯಲ್ಲಿ ತಿರುಳೂ – ಜೊಳ್ಳೂ ಬೆರೆತುಕೊಂಡಿದೆ. ಕವಿಯು ತನ್ನ ಮೂಲಭಾವನೆಗೆ ಭಂಗ ಬರುವಂತೆ ತಿದ್ದಲಾರ; ತನ್ನ ಹೃದಯವು ಉಕ್ಕೇರಿದಾಗ-ಶಬ್ದವೇ ಶ್ರುತಿಯಾದಾಗ- ಬರೆದ ಚರಣಗಳನ್ನ ತಿದ್ದಲಾರ; ಆದರೆ ಶಬ್ಬವು ಎಲ್ಲೆಡೆಗೂ ಶ್ರುತಿಯಾಗುವದಿಲ್ಲ. ಶೈಲಿಯ ಪರಿಪಾಕವು ಅಭ್ಯಾಸದಿಂದ ಬರತಕ್ಕ ವಿಷಯವಾಗಿದೆ. ಅಲ್ಲದೆ ಕವಿಯ ಶಕ್ತಿಗಳು ಯಾವಾಗಲೂ ಪ್ರಗತಿಪರವಾಗಿರುತ್ತವೆ. ಜಗತ್ತಿನ ಕವಿಗಳೆಲ್ಲ ಸಾಯುವವರೆಗೆ ತಮ್ಮ ಕೃತಿಗಳನ್ನು ತಿದ್ದುತ್ತ ನಡೆದರು. ಕುಮಾರವ್ಯಾಸನಂತೆ ಕೆಲವರು ತಿದ್ದದಿದ್ದರೆ ಆ ಮಾನಕ್ಕನು ಸರಿಸಿ ಅವರ ಕೃತಿಗಳಲ್ಲಿ ದೋಷಗಳನ್ನು ಕಾಣಬಹುದು. ತಿದ್ದುವದು ನಿರ್ದೋಷಿಯಷ್ಟೇ ಅಲ್ಲ, ಅವಶ್ಯವಾದ ಮಾತು.
ನನ್ನ ಗೆಳೆಯರ ಮಾತಿನ ಮೇರೆಗೆ ಈ ಕವಿತೆಗಳನ್ನು ಅಲ್ಲಲ್ಲಿ ತಿದ್ದಿದ್ದೇನೆ. ಜನತೆಯ ಅಭಿಪ್ರಾಯಗಳೂ ಬರಲಿ, ಅವು ನನಗೆ ಸಮರ್ಪಕವಾಗಿ ತೋರಿದರೆ ಅವುಗಳನ್ನು ಬಳಸಿಕೊಂಡು ಕಳಿಸಿದವರಿಗೆ ಕೃತಜ್ಞನಾಗಿರುವೆನು.
ಅಭಿಪ್ರಾಯಗಳನ್ನು ಕೊಡಲು ರೂಢಿಯ ವಿಮರ್ಶಕರಿಗಷ್ಟೇ ಅಲ್ಲ ಓದುಗರಿಗೆಲ್ಲರಿಗೂ ಬಾಧ್ಯತೆಯಿದೆ. ವಯಸ್ಸು, ಉದ್ಯೋಗ, ಪದವಿ- ಇವೆಲ್ಲ ಆನುಷಂಗಿಕ ವಿಷಯಗಳು. ಕವಿಹೃದಯವೂ ಅದನ್ನು ವಿಮರ್ಶಿಸುವ ಯೋಗ್ಯತೆಯೂ ಒಮ್ಮೊಮ್ಮೆ ಚಿಕ್ಕವರಲ್ಲಿ, ಅಂಗಡಿಕಾರರಲ್ಲಿ, ಕಂಡು ಬರಬಹುದು. ಅದೂ ಸ್ವೀಕರಿಸತಕ್ಕುದು. ಎಲ್ಲ ವಿಮರ್ಶೆಗೂ ಒಂದೇ ಕಟ್ಟು ಮಾತ್ರ ಇರುವದು: ಅದು ಸ್ಪುಟವಾಗಿರಬೇಕು, ಮಂಜಿನಂತಲ್ಲ. ಈ ಕೃತಿಯಲ್ಲಿ ಹುರುಳಿಲ್ಲ’ ಎಂದಿಷ್ಟೇ ಹೇಳಿದರೆ ಸಾಲದು. ಅದನ್ನು ಸೋದಾಹರಣವಾಗಿ ಹೇಳಬೇಕು. ಅಂದರೆ ಮಾತ್ರ ಅದನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುವದು.
೬
ಈ ಎಲ್ಲ ಕಾರಣಗಳ ಮೂಲಕ ನಾನು ಒಂದು ಹಂಚಿಕೆಯನ್ನು ಓದುಗರೆದುರಿಗಿಡಲು ಪ್ರಯತ್ನಿಸಿದ್ದೇನೆ. ದಯವಿಟ್ಟು ಅವರು ಆ ರೀತಿಯಾಗಿ ತಮ್ಮ ಅಭಿಪ್ರಾಯಗಳನ್ನು ಕಳಿಸಿದರೆ ನಾನು ಅವರಿಗೆ ಉಪಕೃತನಾಗಿರುವೆನು. ಈ ರೀತಿಯಾಗಿ ಬಿನ್ನವಿಸುವಲ್ಲಿ ನನ್ನ ಉದ್ದೇಶಗಳು ಎರಡು: (೧) ಕೃತಿಗಳ ಪರಿಪೂರ್ಣತೆಗಾಗಿ ಆ ಅಭಿಪ್ರಾಯಗಳನ್ನು ಬಳಸಿಕೊಳ್ಳುವದು. (೨) ನಾನು ವಿಮರ್ಶಾಶಾಸ್ತ್ರವನ್ನು ಕುರಿತು ಬರೆಯಬೇಕೆಂದಿರುವ ಒಂದು ಗ್ರಂಥಕ್ಕಾಗಿ ಅವುಗಳನ್ನು ಉಪಯೋಗಿಸುವದು.
ಅಭಿಪ್ರಾಯಗಳನ್ನು ಕಳಿಸುವ ಮಹನೀಯರು ನನ್ನ ಉದ್ದೇಶಗಳಲ್ಲಿ ತಥ್ಯವನ್ನು ಕಂಡು ಆ ರೀತಿಯ ಉಪಯೋಗಕ್ಕಾಗಿ ಸಮ್ಮತಿಸುವರೆಂದು ನಂಬಿದ್ದೇನೆ. ಅಭಿಪ್ರಾಯವನ್ನು ಉಪಯೋಗಿಸುವಾಗ ಅವರ ಸಮ್ಮತಿಯಿಲ್ಲದೆ ಅವರ ಹೆಸರನ್ನು ನಾನು ಪ್ರಕಟಿಸುವದಿಲ್ಲ. ಅಭಿಪ್ರಾಯಗಳಲ್ಲಿ ಪ್ರಶಂಸನೆ, ದೋಷವಿವರಣೆ ಏನೂ ಇರಬಹುದು. ಶಾಸ್ತ್ರೀಯ ದೃಷ್ಟಿಯಲ್ಲಿ ಇವುಗಳಿಗೆಲ್ಲ ಅಷ್ಟೇ ಮಹತ್ವವಿದೆ.
ನನ್ನ ಹಂಚಿಕೆ ಹೀಗೆ: ಈ ಪುಸ್ತಕದ ಮೊದಲನೆಯ ಆವೃತ್ತಿಯಲ್ಲಿ ಸಾವಿರ ಪ್ರತಿಗಳನ್ನು ಮುದ್ರಿಸಿದೆ. ಎಲ್ಲ ಪ್ರತಿಗಳಿಗೂ ನಂಬರು ಹಾಕಿದೆ. ಎಲ್ಲ ಪ್ರತಿಗಳಲ್ಲಿ ಕೆಲವು ಕಲಮುಗಳುಳ್ಳ ಒಂದೊಂದು ಪಾನನ್ನು ಇಟ್ಟಿದೆ. ಆ ಪ್ರತಿಯ ನಂಬರು, ಅದನ್ನು ಪಡೆದವರ ಹೆಸರು, ಅವರ ವಿಳಾಸ, ಅವರ ಉದ್ಯೋಗ, ತಮ್ಮ ಹೆಸರನ್ನು ಉಪಯೋಗಿಸಲು ಸಮ್ಮತಿಯಿದ್ದರೆ ಆ ಬಗ್ಗೆ ಸೂಚನೆ-ಇವೇ ಮುಂತಾದವು ಅಲ್ಲಿಯ ಕಲಮುಗಳು. ಅಭಿಪ್ರಾಯವನ್ನು ಕಳಿಸುವಾಗ ಆ ಅಭಿಪ್ರಾಯದ ಮುಖಪತ್ರವೆಂದು ಈ ಪಾನಿನಲ್ಲಿಯ ಕಲಮುಗಳನ್ನು ತುಂಬಿ ಕಳಿಸಬೇಕೆಂದು ವಿಜ್ಞಾಪನೆ. ನಾನು ಓದುಗರ ವೈಯಕ್ತಿಕ ವಿಷಯಗಳನ್ನು ತಿಳಿಯಲು ಈ ವಿಜ್ಞಾಪನೆಯಲ್ಲಿ ಒಂದು ಅಕ್ಷಮ್ಯ ಜಿಜ್ಞಾಸೆಯನ್ನು ತೋರಿಸಿದ್ದೇನೆಂದು ಯಾರೂ ಭಾವಿಸಲಾರರೆಂಬ ವಿಶ್ವಾಸವು ನನಗಿದೆ. ಇದೊಂದು ಶಾಸ್ತ್ರ, ಅದರ ಪ್ರತಿಪಾದನೆಗೆ ಬೇಕಾದ ಎಲ್ಲ ವಿಷಯಗಳನ್ನು ಸಂಗ್ರಹಿಸುವದು ಅವಶ್ಯವಾಗಿದೆ.
ಇಂಥ ಅಭಿಪ್ರಾಯಗಳು ಬಂದಾಗ ಅವುಗಳನ್ನು ಯೋಗ್ಯ ರೀತಿಯಿಂದ ಉಪಯೋಗಿಸುವ ಹೊಣೆಯು ನನ್ನ ಮೇಲೆ. ವಿಮರ್ಶಾಶಾಸ್ತ್ರದ ವಿವರಣೆಗಾಗಿ ಕೇವಲ ಶಾಸ್ತ್ರೀಯ ಬುದ್ದಿಯಿಂದ ಅವುಗಳನ್ನು ಉಪಯೋಗಿಸುವೆನೆಂಬುದನ್ನು ನಾನು ಸ್ಪಷ್ಟವಾಗಿ ಹೇಳಬಲ್ಲೆನು. ಇಂಥ ಕೆಲವು ಪ್ರಶ್ನೆಗಳನ್ನು ಕುರಿತು ಚರ್ಚಿಸುವಾಗ ಅವುಗಳ ಉಪಯೋಗವಾಗುವದು: (೧) ಕಾವ್ಯವನ್ನು ಓದುವ ರೀತಿ. (೨) ಕಾವ್ಯಾನುಭವವನ್ನು ಪಡಿಯುವ ರೀತಿ, (೩) ಒಂದು ಕೃತಿಯ ಯೋಗ್ಯತೆಯನ್ನು ನಿರ್ಣಯಿಸುವ ರೀತಿ; ಮು. ಅಭಿಪ್ರಾಯವನ್ನು ಉದಾಹರಿಸುವಾಗ ‘ಇಂಥ ನಂಬರಿನವ’ ಎಂದಿಷ್ಟೆ ವಾಡಿಕೆಯಾಗಿ ಹೇಳಲಾಗುವದು.
ಪ್ರತಿಯನ್ನು ಪಡೆಯದೆ ಅದನ್ನು ಓದಿಕೊಂಡವರೂ ಸಹ ತಮ್ಮ ಅಭಿಪ್ರಾಯವನ್ನು ಕಳುಹಿಸಬಹುದು. ಅವರು ಎರಡು ಮಾತುಗಳನ್ನು ಮಾತ್ರ ದಯವಿಟ್ಟು ಪಾಲಿಸಬೇಕಾಗಿ ಬಿನ್ನಹ: (೧) ತಾವು ಓದಿದ ಪ್ರತಿಯ ನಂಬರನ್ನು ತಿಳಿಸಬೇಕು. (೨) ಕೊನೆಯ ಪಾನಿನಲ್ಲಿ ಕೊಟ್ಟ ಕಲಮುಗಳನ್ನು ಪ್ರತಿ ಮಾಡಿಕೊಂಡು ತುಂಬಿ ಕಳುಹಿಸಬೇಕು. ನನ್ನ ಸಂಗ್ರಹದಲ್ಲಿ ಅವರಿಗೆ ಕೊಟ್ಟ ನಂಬರನ್ನು ಮರುಟಪಾಲಿಗೆ ನಾನು ತಿಳಿಸುವೆನು.
ಇಂಥದೊಂದು ಪ್ರಯೋಗವು ಅವಶ್ಯವಾಗಿದೆಯೆಂದು ನನಗೆನಿಸಿದ್ದರಿಂದ ನಾನು ಈ ಕೆಲಸಕ್ಕೆ ಕೈ ಹಾಕಿದ್ದೇನೆ. ವಿಮರ್ಶೆಯ ಪ್ರಾಂತವು ಒಂದು ರಣರಂಗವಲ್ಲ. ಅದೊಂದು ಪಾಕಶಾಲೆ. ಬಣ್ಣ-ಬಲ್ಲವರು ಕೂಡಿ ಅಡಿಗೆಯನ್ನು ಪಾಕಕ್ಕೆ ತರುವ ಸ್ಥಳ.
೭
ಈ ಕೃತಿಯನ್ನು ಕನ್ನಡ ನಾಡಿನ ಮಹಾಜನರ ಕೈಯಲ್ಲಿರಿಸಲು ಸಾಧ್ಯವಾದುದರಿಂದ ನನಗೆ ಸಂತೋಷವಾಗುತ್ತಲಿದೆ. ಈ ಕೆಲಸದಲ್ಲಿ ಅನೇಕರು ನನಗೆ ನೆರವಾದರು. ಕಾವ್ಯದಲ್ಲಿಯೂ ಸೌಂದರ್ಯಶಾಸ್ತ್ರದಲ್ಲಿಯೂ ನನಗೆ ಮಾರ್ಗದರ್ಶಕರಾದ ಗೆ| ಬೇಂದ್ರೆಯವರು ನನ್ನ ಬಿನ್ನಹದ ಮೇರೆಗೆ ಈ ಪ್ರಸ್ತಾವನೆಯ ಪೂರ್ವಾರ್ಧವನ್ನು ಬರೆದು ಕೊಟ್ಟರು; ಅಲ್ಲದೆ ಈ ಪ್ರಸ್ತಾವನೆಯ ವಿಷಯವನ್ನು ಕುರಿತು ಅನೇಕ ಸಲಹೆಗಳನ್ನು ಕೊಟ್ಟರು. ಉಳಿದ ಗೆಳೆಯರೂ ವಿಧವಿಧವಾಗಿ ನೆರವಾಗಿದ್ದಾರೆ. ಈ ಪುಸ್ತಕವನ್ನು ಇಷ್ಟು ಬೇಗ ಪ್ರಸಿದ್ಧಿಸಿದ ಶ್ರೇಯಸ್ಸು ಗೆ| ಚುಳಿಕೆಯವರಿಗೆ ಸಲ್ಲುವದು, ಶ್ರೀ. ರಾಯದುರ್ಗರವರು ತಮ್ಮ ಮೋಹನ ಮುದ್ರಣಶಾಲೆಯಲ್ಲಿ ಇದನ್ನು ಅಲ್ಪಾವಕಾಶದಲ್ಲಿ ಅಚ್ಚು ಹಾಕಿಕೊಟ್ಟರು. ಇವರೆಲ್ಲರಿಗೂ ನಾನು ಉಪಕೃತನಾಗಿದ್ದೇನೆ.
– ವಿ. ಕೃ. ಗೋಕಾಕ.
*****



















