ಉಷೆಯು ವೀಣೆಯ ನುಡಿಸುತಿರುವಳು
ಯಾವ ರಾಗದ ಮಧುವನು
ತಂತಿ ಕಂಪಿಸೆ ಚಿಮ್ಮಿ ಬರುವುದು
ಗಾನದೈಸಿರಿ ನೆಗೆವುದು
ವಿಶ್ವಕಮಲವು ಅರಳಲಿರುವುದು
ಬೆಳಕಿನಲಿ ನಗೆ ಮೊಲ್ಲೆಯು
ಭೂಮಿದೇವಿಯ ಮನವು ಚಿಗಿವುದು
ಮುಗಿಲ ಮುಟ್ಟುತ ಮೆರೆವುದು.
ಹೃದಯಶತದಲ ಸುಮನ ಬಿರಿವುದು
ಸುಖದ ಸುಧೆಯೇ ಸುರಿವುದು
ದಿವ್ಯಗಾನದ ಮಾಯೆ ಹರಡಿರೆ
ಎಲ್ಲ ಜೀವಕು ಮೋದವು.
ಗಾನ ಮೋಹದ ಸುಪ್ತಿ ಸುಖದಲಿ
ಜನಿಸಿದೆಳನಗೆಗನಸೆನೆ
ಎಲರಗಂಪಿನ ಲಹರಿ ಲಹರಿಗೆ
ಕೆಂಪು ನೀಲಿಯ ಶೋಭನೆ!
ಹಸಿರು ಬೆಳೆ ಹೂ ಹಕ್ಕಿ ಕರುಗಳು
ಗಾನರಸದಲಿ ಬೆರೆವುವು
ಬಾಳ ಶತ ಶತ ಕೋಟಿ ತೆರೆಗಳು
ಒಂದೆ ಕಡಲಲಿ ಮೆರೆವುವು
ಎದೆಯು ಕರಗಿತು, ಮನವು ಮರೆಯಿತು
ವಿಶ್ವದಗಲೆಕೆ ಬೆಳೆಯಿತು
ಚೆಲುವ ಕಂಡಿತು, ಮಧುವ ನೀಂಟಿತು
ದೇವಹೃದಯವ ಸೇರಿತು!
*****



















