
“ಪುಷ್ಪವಿದ್ದಂತೆ ಮೊಗ್ಗೆಯನರ್‍ಪಿಸಿಕೊಂಡ ಶಿವನು!
ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು!
-(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ)
ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ!
ದೇವ! ಮಗುವೆಂದು ತಿಳಿದಿದ್ದೆ ಆದಾಯಿತು ನೀರ್‍ಗುಳ್ಳಿ!
ಮನೆಯವನೆಂದು ತಿಳಿದಿದ್ದೆ ಅವನಾದ ಅತಿಥಿ!
ಕಣ್ತುಂಬ ಕಾಣಲಿಲ್ಲ; ಬಾಯ್ತುಂಬ ಮುದ್ದಿಡಲಿಲ್ಲ;
ಮನೆಯ ಮಮತೆಯ ಮೂರ್‍ತಿಯಾದೀತೆಂದಿದ್ದೆ-
ಆದರೆ-ಎಂಜಲು ಮಾಡಿದ್ದಿಲ್ಲ! ಆಯ್ತು-ಮಸಣದ-
ಮಹಾದೇವನ ಮುಡಿಯೊಳಗಿನ ಮೀಸಲ ಮದಗುಣಕಿ.
ಹುಳಹುಪ್ಪಡಿಯ ತಿನಸಾಯಿತು ಮೋಹದ ಮುದ್ದೆ !
ಜೀವಗಳೆದ ದೇಹವನ್ನು ಕಣ್ಣೀರ್‍ಸುರಿಸಿ ಕೊಟ್ಟೆ ಕೃಷ್ಣಾ-
ರ್‍ಪಣವೆಂದು. ಪಿತನ ಪಾಪದ ಪಿಂಡ ಕಣ್ಮರೆಗಾಯಿತು;
ಮಣ್ಮರೆಯಾಯ್ತು; ಕಂಗೊಳಿಸಲಕಲ್ಪನೆಯ ಪುಣ್ಯ ಪುಂಜ.
ಮಾತೆಯ ಶಾಪದ ಮೂರ್‍ತಿ ಬಯಲಾಯಿತು;
ಮುಸುಕಲಿ ಮಮತೆಯ ಧೂಪ ಮನೋರಾಜ್ಯದಲ್ಲಿ.
ನಿಮಿತ್ತ ಮಾತ್ರ, ಕ್ಷಣಿಕವಾಗಿ ಬಂದ ಕೂಸೇ!
ಸಂಸಾರದ ಸವಿ ಸುಖ ದುಃಖದ ಸರಿಬೆರಿಕೆಯೆಂದು ಕಲಿಸಿದೆ.
ಆದರೆ, ನಿಜವಾದ ಅಖಂಡ ಪ್ರೀತಿಝರಿಯನ್ನು ಪ್ರವಹಿಸಿದೆ.
ಅದರ ತೀರನಿವಾಸಿಯಾದ ಈ ವಾಣಿ ಹಾಡುವದು,
ಕ್ಷೇಮೇಂದ್ರ!
ನಿನ್ನ ನಾಮಾಂಕಿತ ನಾಮದ ಸನ್ಮಾನಕ್ಕಾಗಿ,
ಅಜ್ಜಿ ಅಮ್ಮಂದಿರ ಸಮಾಧಾನಕ್ಕಾಗಿ,
ನನ್ನ ಮನದ ಸುಮ್ಮಾನಕ್ಕಾಗಿ,
ಈ ಕಾವ್ಯ ತಂದೆ ಕೊಟ್ಟ ಮುದ್ದು.
*****

















