ಚಿತ್ರ: ಡ್ಯಾನಿಯಲ್ ಸ್ಕಾನ್ಫರಲಾಟೊ
ಚಿತ್ರ: ಡ್ಯಾನಿಯಲ್ ಸ್ಕಾನ್ಫರಲಾಟೊ

ನಾನು ಹೇಳುವುದೆಲ್ಲಾ ಸತ್ಯ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ – ಓದುಗರ ಮೇಲಾಣೆ. ಲೇಖಕ ಎಂಬುದನ್ನು ನೀನಾಗಲೇ ಮರೆತಿರಬಹುದು ಯಾಕೆಂದರೆ ಇತ್ತೀಚೆಗೆ ನೀನು ಏನನ್ನೂ ಬರೆದಂತೆ ತೋರಲಿಲ್ಲ ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಬರೆವ ನೀವುಗಳು ಸಾಹಿತ್ಯಕ್ಕಾಗಲಿ ಇತ್ತ ಸರ್ಕಾರಿ ನೌಕರಿಗಾಗಲಿ ನ್ಯಾಯ ಒದಗಿಸೊಲ್ಲ. ಕಚೇರಿಯಲ್ಲಿ ಇದ್ದಾಗ ಕಥೆ ಕಾದಂಬರಿಗಳ ಹೊಳವಿನತ್ತ ಪರಕಾಯ ಪ್ರವೇಶ ಮಾಡೋದು, ಮನೆ ಸೇರಿದಾಗ ಹೊತ್ತು ತಂದ ಪೆಂಡಿಂಗ್ ಫೈಲ್ಗಳ ವಿಲೇವಾರಿ ಬಗ್ಗೆ ಆವೇಶಗೊಂಡು ಬಿಸಿ ಹೆಚ್ಚಸಿಕೊಳ್ಕೋದು ನಿಜ ತಾನೆ? ದಾಕ್ಷಿಣ್ಯವಿಲ್ಲದೆ ಹೇಳುತ್ತಿದ್ದೇನೆಂದು ಕೋಪ ಮಾಡಿಕೊಳ್ಳಬೇಡ ಮಾರಾಯ. ಪ್ರೀತಿ ಪ್ರೇಮದ ಬಗ್ಗೆ ಬರೆದು ಒಂದಷ್ಟು ಓದುಗರನ್ನಂತೂ ಸಂಪಾದಿಸಿದೆ. ಪತ್ರಿಕೆಗಳಿಗೆ ಬಂಡವಾಳವಾದೆ. ವರ್ಷಗಳು ಉರುಳಿದಂತೆ ನಿನ್ನ ಸಾಹಿತ್ಯದಲ್ಲೇ ಬಂಡವಾಳ ಇಲ್ಲದಂತಾದುದನ್ನು ಗಮನಿಸದೆ ಹೋದೆ. ಒಪ್ಪಿದರೆ ಒಪ್ಪು ಬಿಟ್ಟರೆ ಬಿಡು ಒಟ್ಟಿನಲ್ಲಿ ಎಲ್ಲೂ ಸಲ್ಲದವನಾದೆ.

ಯಾಕೆ ಈ ಮಾತು ಬಂತೆಂದರೆ ಜನಪ್ರಿಯತೆಯನ್ನೇ ನೆಚ್ಚಿದ ನೀನು ಬಂಡಲ್^ಗಟ್ಟಲೆ ಬರೆದರೂ ಆಕಾಡೆಮಿ ನಿನ್ನನ್ನರಸಿ ಬರಲಿಲ್ಲ. ವಿಮರ್ಶಕರೂ ವಿಮರ್ಶಿಸುವ ಗೋಜಿಗೆ ಹೋಗದೇ ನಿನ್ನ ಗೌರವ ಉಳಿಸಿದರೆಂಬ ನನ್ನ ನಂಬಿಕೆ ಕಟುವಾದರೂ ದಿಟವಲ್ಲವೆ. ಪ್ರೇಮ ಸಂಸಾರ ನೌಕರಿ ಯಾವುದರಲ್ಲೂ ಪರಿಪೂರ್ಣತೆ ಸಾಧಿಸಲಿಲ್ಲವೆಂದರೆ ನೀನು ಒಪ್ಪಲಿಕ್ಕಿಲ್ಲ. ನನ್ನ ಮಾತನ್ನು ಒರೆಹಚ್ಚುವ ಪ್ರಯತ್ನ ಮಾಡೋದು ಬಿಡೋದು ನಿನಗೆ ಸೇರಿದ್ದು. ನಿನ್ನ ಆಟೋಬಯೋಗ್ರಫೀಯೇ ನನ್ನ ಹತ್ತಿರ ಉಂಟು ಕೇಳಿಲ್ಲಿ. ಬೇರ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದೆಯಲ್ವೆ. ನೀನೊಬ್ಬ ಮಹಾನ್ ಸಾಹಿತಿಯಾಗುತ್ತೀಯೆಂಬ ಭರವಸೆಯಲ್ಲಿ ಲೀಲಾ ನಿನ್ನನ್ನು ಪ್ರೀತಿಸಿದಳು. ಅಸಲಿಗೆ ಅವಳು ಪ್ರೀತಿಸಿದ್ದು ನಿನ್ನನ್ನೇ? ಪ್ರೀತಿಸುವಷ್ಟು ಅಂದವಾಗಿಲ್ಲ ಬಿಡು ನೀನು. ಹಾಗಾದರೆ ನಿನ್ನ ಸಾಹಿತ್ಯವನ್ನೇ? ಹಳಸಲು ಪ್ರೇಮದ ವಸ್ತುವನ್ನು ಆಕರ್ಷಣೆಗೊಳಿಸುವುದರಲ್ಲಿ ನೀನು ನಿಷ್ಣಾತ. ವಾರದಿಂದ ವಾರಕ್ಕೆ ಕುತೂಹಲ ಕೆರಳಿಸುವಷ್ಟು ತಾಕತ್ತು ಮಾತ್ರವೇ ಹೊಂದಿದ್ದ ಧಾರಾವಾಹಿ ಮುಗಿದಾಗ ಅದರ ವಸ್ತುವೇ ನೆನಪಿನಲ್ಲಿ ಉಳಿದಿರುತ್ತಿರಲಿಲ್ಲವಾದರೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಬರೆಯುತ್ತಾ ನೀನು ಉಳಿದೆ. ಓದುಗರ ಮನದಲ್ಲಿ ಉಳಿಯದೇ ಹೋದೆ. ಲೀಲಾಳಿಗೂ ಅದರ ಅರಿವಿತ್ತು. ಆಕೆ ಸಾಹಿತ್ಯದ ವಿದ್ಯಾರ್ಥಿ ಬೇರೆ. ನಿನಗೆ ಆ ದಿನಗಳಲ್ಲಿ ಸಿಕ್ಕ ಪಬ್ಲಿಸಿಟಿ ಪ್ರಭಾವ ಲೀಲಾಳ ಹೃದಯದಲ್ಲಿ ಭಾವದ ಸಸಿ ನೆಟ್ಟಿರಬಹುದು. ಆದರೇನು ಸರ್ಕಾರಿ ಕಚೇರಿಯಲ್ಲಿ ನೀನೊಬ್ಬ ಮಾಮೂಲಿ ಗುಮಾಸ್ತನೆಂಬ ಮೈನಸ್ ಪಾಯಿಂಟ್ ಒಂದಿತ್ತಲ್ಲ. ಆಕಾಡೆಮಿಕ್ ಅಲ್ಲದ ನೀನು ಬಡತನವನ್ನೇ ಹನಿಹನಿಯಾಗಿ ಅಕ್ಷರಗಳಲ್ಲಿ ಪೋಣಿಸಿಟ್ಟರೂ ಜಾತಿಯತೆಯ ಬೇರಿನಾಳಕ್ಕೆ ಇಳಿದು ಅದನ್ನು ಬಗೆದು ಬಯಲಿಗಿಟ್ಟರೂ ಪ್ರೇಮದ  ಮುಖವಾಡಗಳನ್ನು ಕಳಚಿಟ್ಟರೂ ವಿಮರ್ಶಕರ ಪಾಲಿನ ಡಾರ್ಲಿಂಗ್ ನೀನಾಗಲೇ ಇಲ್ಲ.

ಬರೆದಂತೆ ಬದುಕುತ್ತೇನೆ ಎಂಬ ‘ಈಗೋ’ ಬೆಳೆಸಿಕೊಂಡ ನೀನು ಕಡು ಬಡತನದಲ್ಲೂ ಲಂಚಕ್ಕೆ ಕೈ ಒಡ್ಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿವೆಹಿಸಿದೆ ಎಂಬುದು ಸುಳ್ಳಲ್ಲವಾದರೂ ಸಂತೋಷಪಡುವ ವಿಷಯವೇನಲ್ಲ. ಏಕೆಂದರೆ ಅದು ನಿನ್ನೊಬ್ಬನ ಪಾಲಿನ ಹಮ್ಮೆಯ ಪ್ಲಸ್ ಸಂತೋಷದ ವಿಷಯವಷ್ಟೇ. ನಿನ್ನ ಪ್ರಾಮಾಣಿಕ ಜೀವನ ನಿನ್ನನ್ನು ಗೆಲ್ಲಿಸಿದ್ದೆಷ್ಟು? ನೀನು ತರುವ ಸಂಬಳದಲ್ಲಿ ಹೆಂಡತಿ ಮಕ್ಕಳು ಉಂಡಿದ್ದೆಷ್ಟು? ಬೇಕೆನಿಸಿದ ಬಟ್ಟೆ ಉಟ್ಟಿದ್ದೆಷ್ಟು? ಇನ್ನು ಫ್ಲಾಷ್‍ಬ್ಯಾಕ್‌ಗೆ ಹೋದರೆ ನಿನ್ನತಾಯಿ ತಂಗಿ ತಮ್ಮ ಸಹ ನಿನ್ನಿಂದ ಪಡೆದಿದ್ದು ಅಷ್ಟರಲ್ಲೇ ಇದೆ. ನಿನ್ನ ತಂಗಿ ಕೆ.ಪಿ.ಎಸ್.ಸಿ. ಎಕ್ಸಾಂ ಬರೆದು ತಾನೇ ಕೆಲಸ ಹಿಡಿದಳು. ಅವಳು ಕೈ ತುಂಬಾ ತರುವ ಸಂಬಳ ನೋಡಿದವನೊಬ್ಬ ಅವಳ ಕೈ ಹಿಡಿದ. ಹೊಟ್ಟೆ ತುಂಬಾ ಊಟ ಕಂಡಿದ್ದು ಮನೆಯವರಾಗಲೇ. ಇದನ್ನೆ ನೋಡುತ್ತಾ ನಿನ್ನ ಕಾದಂಬರಿಗಳ ಜ್ವರ ಹತ್ತಿಸಿಕೊಂಡಿದ್ದ ಲೀಲಾಳಿಗೆ ಕಾಲೇಜ್ ಲೆಕ್ಚರರ್ ಪೋಸ್ಟ್ ಸಿಕ್ಕು ಗುಲ್ಬರ್ಗ ಸೇರಿದಾಗ ನೀನೊಂದಷ್ಟು ದಿನ ಡಿಪ್ರೆಸ್ ಆಗಿ ಗಡ್ಡ ಬಿಟ್ಟೆಯಾದರೂ ಬರೆಯುವುದನ್ನು ಮಾತ್ರ ಬಿಡಲಿಲ್ಲ.

ಲೀಲಾ ಬರೆದ ಪತ್ರಗಳಿಗೆ ಪುಟಗಟ್ಟಲೆ ಉತ್ತರ ಬರೆದು ನಂತರ ಅದನ್ನೇ ಪ್ರತಿ ತೆಗೆದು ಪತ್ರಿಕೆಗಳಿಗೆ ಕಳಿಸಿ ಒಂದಷ್ಟು ಕಾಸು ಗಿಟ್ಟಿಸಿದೆ. ಲೀಲಾ ಮುನಿದು ಪತ್ರ ಬರೆಯುವುದನ್ನೇ ನಿಲ್ಲಿಸಿದಳು ಹೌದಲ್ಲೋ? ಆಗ ವಿರಹವೇದನೆಯನ್ನು ಕಥೆಯಾಗಿಸಿದ ಭೂಪ ನೀನು. ನೀನೇನೋ ಪ್ರಾಯಾಸಪಟ್ಟು ಕಥಾ ಸುಂಕಲನ ಒಂದನ್ನು ಹೊರತಂದೆ. ಅದನ್ನು ‘ಮೊದಲು ಮುತ್ತಿಟ್ಟವಳಿಗೆ’ ಎಂದವಳ ಹೆಸರನ್ನು ಹೆಸರಿಸಿ ಅವಳಿಗೆ ಅರ್ಪಿಸಿ ಖುಷಿಗೊಂಡೆ. ಅವಳು ಬುಕ್ ಬಿಡುಗಡೆ ಸಮಾರಂಭಕ್ಕೆ ಗೈರು ಹಾಜರಾದಳು. ಪುಸ್ತಕ ಕಳಿಸಿದರೆ ಇದೆಲ್ಲಾ ಆಗಲೆ ಓದಿದ ಕಥೆಗಳೇ ಇದರ ಬಗ್ಗೆ ಬರೆಯುವಂತದ್ದೇನಿಲ್ಲ ಎಂದು ಷರಾ ಬರದ ಅವಳು, ನಿನ್ನ ತಾಯಿಗೆ ಅರ್ಪಿಸಿ ನೀನು ತೋರಿದ ಮಾತೃ ವಾತ್ಸಲ್ಯ ನನಗೆ ಹಿಡಿಸಿತು ಎಂಬ ಒಂದು ಸಾಲೂ ಸೇರಿಸಿದ್ದಳು. ಆ ಷಾಕ್ ಅನ್ನು ತಡೆದುಕೊಳ್ಳಲಾರದೆ ಮೌನಿಯಾದೆ. ಲೀಲಾ ಕೈ ತಪ್ಪಿ ಹೋಗುತ್ತಿದ್ದಾಳೆ ಎಂಬ ಶಂಕೆ ನಿನ್ನಲ್ಲಿ ಮೊಳಕೆಯೊಡೆದೊಡನೆ ಗುಲ್ಬರ್ಗಕ್ಕೆ ಓಡಿದೆ.

ಅವಳು ಸೆಮಿನಾರ್ ಮುಗಿಸಿ ಬರುವವರೆಗೂ ಹೊರಗಡೆ ಬೆಂಚ್ ಮೇಲೆ ದೈನಾಸಿಯಂತೆ ಕಾದು ಕೂತೆ. ಪ್ರೊಫೆಸರ್ ಒಬ್ಬನ ಸಂಗಡವೇ ಲೀಲಾ ಬಂದಳು. ‘ನಮ್ಮ ಊರಿನ ದೊಡ್ಡ ಸಾಹಿತಿ’ ಅಂತಲೇ ಪರಿಚಯಿಸಿದಳು. ಊಟಕ್ಕೂ ಕರೆದೊಯ್ದಳು. ಪ್ರೊಫೆಸರರನ್ನೂ ಕರೆ ತಂದು ನಿನ್ನ ಬಾಯಿಗೆ ಬೀಗ ಜಡಿದಳು. ಗಂಟಲಲ್ಲಿ ಊಟ ಇಳಿಯಲಿಲ್ಲ. ನೀನು ಸಮರಕ್ಕೆ ಸಿದ್ಧನಾದೆ. ಅವರಿಬ್ಬರ ಮಾತು ನಗೆ ವಿಚಾರವಾದದ ಅಬ್ಬರದಲ್ಲಿ ಮೌನವಾಗಿ ಕೂತು ಕಳೆದು ಹೋದ ನಿನ್ನನ್ನು ಲೀಲಾ ಮೇಡಂ ಸಮರಕ್ಕೆ ಮುನ್ನವೇ ಸೋಲಿಸಿ ಬಿಟ್ಟಿದ್ದಳು. ಊಟದ ನಂತರ ಮಧ್ಯಾಹ್ನದ ಕ್ಲಾಸಿದೆ ಅಂದಳು. ನಿನ್ನ ಕೋಣೆ ತೋರಿಸು ಅಲ್ಲಿರುತ್ತೇನೆ ಅಂತ ನೀನೇ ಹಲ್ಲು ಗಿಂಜಿದೆ. ನಾನೊಬ್ಬಳೇ ಇರೋದು. ಜನ ತಪ್ಪು ತಿಳಿತಾರೆ ಎಂದು ರಾಗ ಎಳೆದಳು. ಒಂದೈದು ನಿಮಿಷ ಇಲ್ಲೇ ಮಾತಾಡೋಣ. ಪ್ರೊಫೆಸರನಿಗೆ ಹೋಗಲು ಹೇಳು ಎಂದ ನಿನ್ನ ಬೇಡಿಕೆಗೆ ಬೆಲೆ ಸಿಕ್ಕಿತ್ತು. ಪಕ್ಕದಲ್ಲೇ ಇದ್ದ ಮರಗಳಿಲ್ಲದ ಪಾರ್ಕನಲ್ಲಿನ ಬಿಸಿಲನ್ನೇ ಹೊದ್ದು ಕಲ್ಲು ಬೆಂಚಿನ ಮೇಲೆ ಕೂತಿರಿ. ಹೌದಲ್ಲೋ? ಬಿಸಿಲಿಗೆ ಕೆಂಪಾದ ಅವಳ ಕದಪುಗಳನ್ನೇ ನೋಡುತ್ತಾ ಮೌನ ಮುರಿದಿದ್ದು ನೀನೆ. ‘ನನ್ನ ತಂಗಿ ಮದುವೆಯಾಯಿತು ಜಾಬಲ್ಲಿದ್ದಾಳೆ. ಗಂಡ ಅಗ್ರಿಕಲ್ಚರ್ ಆಫಿಸರ್. ತಾಯಿ ತಮ್ಮ ಅವಳೊಂದಿಗಿದ್ದಾರೆ. ನನಗೀಗ ಜವಾಬ್ಧಾರಿಗಳಿಲ್ಲ ನಾವು ಯಾವಾಗ ಮದುವೆ ಮಾಡಿಕೊಳ್ಳೋಣ?’ ನೀನು ಕೇಳಿದ್ದರಲ್ಲಿ ಆಸಹಜ ಏನಿರಲಿಲ್ಲ ‘ಮದುವೆ ಯಾವಾಗಲೂ ಸರಿ ಸಮಾನರೊಂದಿಗೆ ಆಗೋದು ಚಲೋ’ ಅವಳು ಹೇಳಿದ್ದರಲ್ಲೂ ಅಸಹಜವೇನಿರಲಿಲ್ಲ.

‘ನಿನ್ನ ಮಾತಿನ ದಾಟಿ ನನಗರ್ಥವಾಗಲಿಲ್ಲ ಲೀಲು!’ ನಿನಗೋ ಅಯೋಮಯ.

ನಾನು ‘ಎಂ.ಫೀಲ್. ಮಾಡಿದ್ದೇನೆ ಕಣೋ’ ಲೀಲಾ ಅಂದಳು. ‘ಸಂತೋಷ, ಮದುವೆಗೆ ಅದೇನು ಅಡ್ಡಿಯಿಲ್ಲ.’

‘ನನ್ನ ಗೈಡ್ ಯಾರು ಗೊತ್ತೆ? ನಮ್ಮ ಜೊತೆ ಬಂದಿದ್ದರಲ್ಲ ಅವರೇ ‘ಪ್ರೊಫೆಸರ್ ಶಾಸ್ತ್ರಿ’

‘ನೊ ಅಬ್ಜಕ್ಷನ್’

‘ಜಾತಿ ಆಬ್ಜಕ್ಷನ್ ಒಂದಿದೆಯಲ್ಲ?’

‘ಅದನ್ನು ಮರೆತೇ ನಾವು ಪ್ರೀತಿಸಿದೆವಲ್ಲ’

‘ಪ್ರೀತಿಸಲು ಯಾವ ಜಾತಿಯಾದರೇನು ಅಡ್ಡಿಯಾಗೊಲ್ಲ ಆದರೆ ಮದುವೆಗೆ…’

‘ಐ ವೋಂಟ್ ಕೇರ್’

‘ಬಟ್ ನನಗೆ ಕೇರ್‌ ಟೇಕರ್ ಇದಾರಲ್ಲೋ. ಪ್ರೇಮ ಪರ್ಸನಲ್. ನನಗೆ ಇಷ್ಟವಾದೆ ಪ್ರೇಮಿಸಿದೆ – ಮದುವೆ ಫ್ಯಾಮಿಲಿ ಅಫೇರ್ ಹಿರಿಯರ ಇಷ್ಟದಂತೆ ಆಗೋದು ಸಂಪ್ರದಾಯ.’

‘ಇದೇನೇ ಪ್ಲೇಟ್ ಉಲ್ಟ ಮಾಡ್ತಿದಿ. ಹಾಗಾದ್ರೆ ನೀನು ನನ್ನ ಪ್ರೇಮಿಸಿದ್ದು ಸುಳ್ಳೆ?’

‘ಓಲ್ಡ್ ಡೈಲಾಗ್ ಹೊಡ್ದು ಟೈಂ ವೇಸ್ಟ್ ಮಾಡಬೇಡ ಮಾರಾಯ. ಸುಳ್ಳು ಅಂತ ನಾನೆಲ್ಲಂದೆ… ಈಗಲೂ ಪ್ರೀತಿಸ್ತೇನೆ’

‘ಇಂಥ ಪ್ರೀತಿ ನನೆಗೆ ಬೇಡ’

‘ಯಾಕೋ?’

‘ಪ್ರೀತಿಗೊಬ್ಬ… ಮದುವೆಗೊಬ್ಬನೇ?’

‘ನಮ್ಮದು ಟೈಟಾನಿಕ್ ಲವ್. ಪ್ರೀತಿ ಮನೋವ್ಯಾಪಾರ ಮದುವೆ ಸಾಮಾಜಿಕ ಸಂಸ್ಕಾರ’

‘ಪ್ರೀತಿ ವ್ಯಾಪ್ರಾರವಲ್ವೆ ಲೀಲು’

‘ಟು ಬಿ ಫ್ರಾಂಕ್ ವಿಥ್ ಯು.. ನಾನೂ  ಶಾಸ್ತ್ರಿ ಮದುವೆ ಆಗ್ತಾ ಇದೀವಿ… ಇದಕ್ಕೆ ಮನೆಯವರೆಲ್ಲರ ಒಪ್ಪಿಗೆಯೂ ಇದೆ’

‘ಅವನಿಗಿಂತ ನಾನು ಯಾವುದರಲ್ಲಿ ಕಡಿಮೆ? ಇಡೀ ಕನ್ನಡ ನಾಡಿಗೆ ಗೊತ್ತಿದ್ದೇನೆ ಆ ಬಡ್ಡಿ ಮಗ ಶಾಸ್ತ್ರಿ ಯಾರಿಗೆ ಗೊತ್ತಿದ್ದಾನೆ?’

‘ನೋಡು ಹೆಸರುಗಳಿಸಿದ ವ್ಯಕ್ತಿಗೆ ಮಾತ್ರ ಅದು ಹೆಮ್ಮೆ ತಂದು ಕೊಡಬಹುದು. ಆದರೆ ಜೊತೆಗಿದ್ದವರಿಗೆ ಸುಖ ಕೊಡುವ ಶಕ್ತಿ ಅದಕ್ಕಿಲ್ಲ.. ಕಥೆ ಬರೆದರೆ ಬರೆದವನಿಗೆ ಸುಖ ಸಿಗಬಹುದು. ಸಂಗೀತ ಹಾಡಿದರೆ ನುಡಿಸಿದರೆ, ಚಿತ್ರ ಬರೆದರೆ ಬರೆದವರಿಗೆ ಸುಖ ಸಿಗುತ್ತೆ. ಒಬ್ಬೊಬ್ಬರಲ್ಲೂ ಡಿಫರೆಂಟ್ ಆದ ಸುಖಾನುಭವ ನೀಡುವುದೇ ಸುಖದ ಸಫಲತೆ ಮತ್ತು ವಿಫಲತೆ ಕೂಡ’

‘ಅಫ್‍ಕೋರ್ಸ್, ಬೇರೆಯವರ ಮಾತು ಬಿಡೆ… ನಿನ್ನ ಮಾತು ಹೇಳು?’

‘ವೆರಿ ಸಿಂಪಲ್, ದುಡ್ಡಿಗೆ ಮಾತ್ರ ಸರ್ವರಿಗೂ ಸುಖ ತಂದು ಕೊಡುವ ಕನಸುಗಳನ್ನು ನನಸು ಮಾಡುವ, ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವ, ಭದ್ರ ಭವಿಷ್ಯವನ್ನು ರೂಪಿಸುವ, ಆಪತ್ತಿನಿಂದ ಪಾರು ಮಾಡುವ, ಆಪ್ತ ಬಳಗವನ್ನು ಸಂಪಾದಿಸುವ, ಅಂತಸ್ತು ಹೆಚ್ಚಿಸುವ, ಆಸೆಗಳನ್ನು ಪೂರೈಸುವ ಶಕ್ತಿ ಇರೋದು ದುಡ್ಡಿಗೆ ಮಾತ್ರ.

‘ದುರಾಸೆಗಳನ್ನು ಪೂರೈಸಿಕೊಳ್ಳೋದು ಶಕ್ತಿಯಲ್ಲ, ಕುಯುಕ್ತಿ ಆಸೆಬುರುಕುತನ. ಪ್ರಾಮಾಣಿಕ ಬದುಕಿಗಿರುವ ಸಂತೃಪ್ತಿ ಎಂತದೆಂದು ಗೊತ್ತಿಲ್ಲದ ಮೂರ್ಖಳು ನೀನು’

‘ವಾಸ್ತವವಾದಿಗಳು ಮೂರ್ಖರಲ್ಲ ಇಲ್ಲಿಂದ ನಿನ್ನ ಊರಿಗೆ ವಾಪಸ್ ಹೋಗಲು ಚಾರ್ಜ್ ಇದಯಾ ನಿನ್ನಲ್ಲಿ?’ ನಿನಗೆ ದುಃಖ ಉಮ್ಮಳಿಸಿತ್ತು.

‘ನೀನು ತುಂಬಾ ತುಂಬಾ ಬದಲಾಗಿ ಬಿಟ್ಟೆ ಲೀಲು’ ಅಂದೆ.

‘ಕಾಲಕ್ಕೆ ತಕ್ಕಂತೆ ಬದಲಾಗೋದನ್ನು ನೀನು ಕಲಿಯಪ್ಪಾ’ ಅಂದಳು.

‘ನೀನೇ ನನ್ನ ಸ್ಪೂರ್ತಿ ದೇವತೆ. ನಿನ್ನನ್ನು ಕಳೆದುಕೊಂಡ ಮೇಲೆ ನನ್ನಲ್ಲಿ ಕಥೆ ಹೇಗೆ ಹುಟ್ಟೀತು ಲೀಲು?’

‘ಪೆದ್ದ ನಿಜವಾದ ಬರೆವ ಶಕ್ತಿ ಇದ್ದವನಿಗೆ ಕಳೆದುಕೊಂಡದ್ದು ಸ್ಪೂರ್ತಿಯ ಸೆಲೆಯಾಗುತ್ತೆ ಕಣೋ. ನನಗೆ ಕ್ಲಾಸ್’ ಇದೆ ಮಾರಾಯ ಹೋಗ್ಲಾ… ಬಾಯ್’

ಅವಳನ್ನು ವಾಚಾಮಗೋಚರ ಬೈದು ಬಿಡಬೇಕೆನಿಸಿದರೂ ನೀನು ಮೌನಿಯಾದೆ. ನಿನ್ನ ಮಹಾನ್ ಪ್ರೇಮ ಒಣ ಪಾರ್ಕ್‍ನಲ್ಲಿ ಘೋರಿಯಾದ್ದು ಹೀಗೆ ಆಲ್ವೆ.
*     *     *

ಆಮೇಲೆ ಅವಳ ನೆನಪಲ್ಲಿ ಬಹಳ ವರ್ಷ ಗಡ್ಡ ಬಿಟ್ಟು ಓಡಾಡಿದ್ದು ನಿಜವಾದರೂ ಕಥೆಗಳನ್ನು ಬರೆಯುವುದನ್ನು ನೀನು ಬಿಡಲಿಲ್ಲ. ಕಡೆಗೆ ಅಮ್ಮನ ಕಾಟವನ್ನು ತಾಳಲಾರದೇ ಸ್ವಜಾತಿಯಲ್ಲೇ ಮದುವೆಯೂ ಆದೆ. ಪ್ರೇಮ ಸಾಹಿತಿಯಾದ ನಿನಗೆ ಆಮೇಲಾದರೂ ಹಿಡಿ ಪ್ರೇಮ ಸಿಕ್ಕಿತೋ? ನನಗೆ ನೀವು ಇಷ್ಟವೇ ಇರಲಿಲ್ಲ… ಬಲವಂತವಾಗಿ ನಮ್ಮಪ್ಪ ಮದುವೆ ಮಾಡಿ ನೆಮ್ಮದಿಯಾಗಿ ಸತ್ತು ಹೋದ. ಈಗ ಅನುಭವಿಸ್ತಾ ಇರೋಳು ನಾನು. ನಿನ್ನ ಹೆಂಡತಿ ಆಗಾಗ ಅಳುವಾಗ ವಿರೋಧಿಸಿ ರಾಡಿ ಮಾಡಿಕೊಳ್ಳದ, ನೀನು ಮೌನದ ಮುಸುಕಿನಲ್ಲಿ ಹುದುಗಿ ಹೋದೆ. ಇಷ್ಟವಿಲ್ಲವೆಂದ ಅವಳ ಜೊತೆಯಲ್ಲೇ ಈಜಿಗೆ ಬಿದ್ದೆ. ನನಗೆ ನಿಟ್ಟುಸಿರು ಬರುತ್ತಿದೆಯಪ್ಪಾ… ವೃಥಾ ಕಥೆಗಳನ್ನು ಬರೆದೆ. ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಜಾಡು ತಿಳಿದು ಕೊಳ್ಳಲಿಲ್ಲ. ಸಂದರ್ಶಿಸಲು ಬಂದವರ ಮುಂದೆ ನನ್ನ ಸಂತೋಷಕ್ಕಾಗಿ ಬರೆಯುತ್ತೇನೆ ಅಂದು ಬೀಗುತ್ತಿ. ನಿನ್ನ ಕಥೆಗಳು ಓದುಗರಿಗೆ ಸಂತೋಷ ಕೊಡುತ್ತಿಲ್ಲವೆಂಬ ಸತ್ಯ ಈಗಲಾದರೂ ತಿಳಿಯುತ್ತಲ್ಲಾ. ನನಗಂತೂ ಖುಷಿಯಾಗಿದೆ.

ಟಿ.ವಿ.ಯಲ್ಲಿ ಓದುಗರೇ ಗತಿಯಿಲ್ಲ ಎಂದರೂ ಇಳಿವಯಸ್ಸಿನಲ್ಲೂ ಬರೆವ ನಿನ್ನನ್ನು ನಾನೇ ಗೇಲಿ ಮಾಡಿದ್ದುಂಟು. ಸರ್ಕಾರಿ ನೌಕರನಿಗೆ ನಿವೃತ್ತಿ ಉಂಟು, ಸಾಹಿತಿಗೆಲ್ಲಿ ನಿವೃತ್ತಿ ಅಂತ ದಬಾಯಿಸಿಬಿಟ್ಟೆ ಲಂಚ ಮುಟ್ಟದೆ ಸರ್ಕಾರಿ ನೌಕರಿ ಮುಗಿಸಿ ಬೀಗುತ್ತ ಮನೆಗೆ ಹೊರಟು ಬಂದೆ. ನಿನ್ನ ಬಗ್ಗೆ ಆಫೀಸಿನಲ್ಲಿ ಏನೆಂದುಕೊಂಡರು ಗೊತ್ತೆ? ಪೀಡೆ ತೊಲಗಿತು ಕಬಾಬ್ ಮೆ ಹಡ್ಡಿ ಹಂಗಿದ್ದ. ಯಾವುದೇ ಕಳಂಕವಿಲ್ಲದೆ ನೌಕರಿ ಮುಗಿಸಿದೆ ಎಂದು ನೀನು ಬೀಗುವಾಗ ಮನೆಯಲ್ಲಿನ ಮಡದಿ ಮಕ್ಕಳ ಮುಖವನ್ನೊಮ್ಮೆ ನೋಡಬೇಕಿತ್ತು; ಎಲ್ಲರೂ ಸಿಡಿಲು ಬಡಿದ ಹಕ್ಕಿಗಳೇ. ರಾತ್ರಿ ಹೆಂಡತಿ ಬಿಕ್ಕಿ ಬಿಕ್ಕಿ ಅತ್ತಳು. ‘ಇನ್ನು ಮುಂದೆ ಪೆನ್ಷನ್  ಹಣದಲ್ಲಿ ಹೆಂಗಪ್ಪಾ ಜೀವನ ಸಾಗಿಸೋದು. ಮಕ್ಕಳು ಎಸ್.ಎಸ್.ಎಲ್.ಸಿ.ಗೂ ಬಂದಿಲ್ಲ ಅವರ ಭವಿಷ್ಯದ ಗತಿ ಏನಪ್ಪಾ ದೇವರೇ’ ಆಕೆಯಲ್ಲಿ ಅನಾಥ ಪ್ರಜ್ಞೆಯ  ರುದ್ರತಾಂಡವ.

‘ಅಪ್ಪ ಕಡೆಗೂ ಒಂದು ಸೈಕಲ್ ಕೂಡಿಸಲಿಲ್ಲಮ್ಮ. ನನ್ನ ಫ್ರೆಂಡ್ಸ್ ಎಲ್ಲಾ ಬೈಕಲ್ಲಿ ತಿರ್ಗಾಡ್ತರೆ ಕಣಮ್ಮ’ ಮಗನ ದೂರು.

‘ನನಗಂತೂ ಎರಡೇ ಲಂಗ ದಾವಣಿ.. ಅಟ್‌‍ಲೀಸ್ಟ್ ಒಂದೊಳ್ಳೆ ಚೂಡಿದಾರ್ ಸಹ ಇಲ್ಲ’ ಮಗಳ ಆಕ್ಷೇಪಣೆ.

‘ನನಗೊಂದು ರೋಪ್ ಚೈನ್ ಮಾಡಿಸಿಕೊಡಲಿಲ್ಲಪ್ಪಾ’ ದೊಡ್ಡ ಮಗಳ ಸಂಕಟ.

‘ನಿಂದಿರಲಿ ಬಿಡೆ, ಮದುವೆಯಾಗಿ ಇಷ್ಟು ವರ್ಷಾತು, ಬರೀ ಕರಿಮಣಿನೇ ನಾನ್ ಕಟ್ಕೊಂಡಿದೀನಿ. ಒಂದು ಮಾಂಗಲ್ಯದ ಸರ ಮಾಡಿಸೋ ಯೋಗ್ಯತೆ ಇಲ್ಲ ಆ ಮನುಷ್ಯನಿಗೆ.

ಯಾವಳನ್ನೋ ಪ್ರೀತಿ ಮಾಡಿದನಂತೆ, ಆ ಲೌಡಿ ಕೈ ಕೊಟ್ಟದ್ದರಿಂದ ಪೀಡೆ ನನಗೆ ಗಂಟು ಬಿತ್ತು ಕಣ್ರಿ. ಈತನಿಗೆ ವಯಸ್ಸಾಗಿದೆ, ಬೇಡ ಅಂತ ಹಠ ಹಿಡಿದರೂ  ಕೇಳ್ಳಿಲ್ಲ. ದೊಡ್ಡ ಸಾಹಿತಿಯ ಹೆಂಡತಿ ಅನ್ನಿಸಿಕೊಳ್ಳೋ ಪುಣ್ಯ ಎಷ್ಟು ಜನಕ್ಕಿದೆ ಅಂತ ಬಾಯಿ ಮುಚ್ಚಿಸಿದರು. ನನ್ನಪ್ಪನೂ ಬಡ ಮೇಷ್ಟ್ರು ವರದಕ್ಷಿಣೆ ಕೊಡೋ ತಾಕತ್ತಿರಲಿಲ್ಲ. ಈತ ನಂಗೆ ಕಟ್ಟಿದ್ದು ತಾಳಿ ಅಲ್ಲ… ಉರುಳು. ಈತ ದುಡಿವಾಗ್ಲೆ ಉಪವಾಸ ವನವಾಸ ಮಾಡತಿದ್ವಿ. ಈಗ ರಿಟೈರ್ಡ್ ಮನುಷ್ಯ. ದೇವರೇ ಕಾಪಾಡಬೇಕು…

ಹಳೆ ಜೋಪಡಿ ಅಂತ ಮನೆ ಬಿಟ್ರೆ ನಿಮಗೇನು ಅಡವು- ಆಸ್ತಿಮಾಡಿದಾನ್ರಪ್ಪ ನಿಮ್ಮಪ್ಪಾ ನೀವಾದ್ರೂ ಚೆನ್ನಾಗಿ ಒದಿ ದೊಡ್ಡ ಮನುಷ್ಯರಾಗ್ರೋ ಮಕ್ಳಾ..’  ಉರಿವ ಹೆತ್ತೊಡಲ ಪ್ರಭಾವದಲ್ಲೂ ಬದುಕಿನ ಅರ್ಥವಿತ್ತು ತರ್ಕವಡಗಿತ್ತು. ಇಂತಹ ಮಾತುಗಳು ನಿನಗೆ ಕೇಳಿಸುವಷ್ಟು ಜೋರಾಗಿ ಆಡುವಷ್ಟು ದೈರ್ಯವನ್ನಾಕೆಗೆ ಅನುಭವ ವಯಸ್ಸು ಹತಾಶೆ ಪ್ರಸಾದಿಸಿದ್ದವು. ಆಗಲೂ ಜೀವನದಲ್ಲಿ ನಾನು ತಪ್ಪಿದೆನೆಂದು ನಿನಗೆ ಪಶ್ಚಾತ್ತಾಪವಾಗದಿದ್ದುದು ಪರಮಾಶ್ಚರ್ಯ. ಹೆಂಡತಿ ಮಕ್ಕಳ ಮುಂದೂ ಮೌನದ ಮೊರೆ ಹೋದೆ, ನೀವು ಬರೆದ ಕೊನೆ ಕಾದಂಬರಿಗಳನ್ನ ಒಮ್ಮೆ ನಿನ್ನ ಹೆಂಡತಿ ಓದಿದ್ದರೆ ನಿನ್ನ ಬಗ್ಗೆ ಗುಲಗಂಜಿಯಷ್ಟಾದರೂ ಗೌರವ ಬೆಳೆಸಿಕೊಳ್ಳುತ್ತಿದ್ದಳೇನೋ. ಆಕೆಗೆ ಸಂಸಾರ ನಡೆಸಲಷ್ಟೇ ಗೊತ್ತು. ಸಂಸ್ಕಾರ, ಬೌದ್ಧಿಕ ಪ್ರಜ್ಞೆ, ಸಾಮಾಜಿಕ ನ್ಯಾಯ, ಮೌಲ್ಯ ಅಪಮೌಲ್ಯ ಇತ್ಯಾದಿ ಆಕೆಯ ಪಾಲಿನ ದುಬಾರಿ ಪದಗಳು. ‘ಕಡೆಗೂ ನನ್ನ ಮಕ್ಕಳ ಕೈಗೆ ಚಿಪ್ಪು ಕೊಟ್ಟು ಬಿಟ್ರಿ’ ದಿನವೂ ಅವಳು ಹಂಗಿಸುತ್ತಾಳೆ.

‘ಪ್ರಾಮಾಣಿಕವಾಗಿ ಬದುಕುವವರನ್ನು ದೇವರು ಎಂದಿಗೂ ಕೈಬಿಡೋದಿಲ್ಲ ಆದರೆ? ಕಾಣದ ದೇವರ ಕೋರಿಕೆಗೆ ಸಂತೈಸುವ ಪ್ರಯತ್ನ ನಿನ್ನದು.’

‘ದೇವರನ್ನೇ ನಂಬದ ನಮ್ಮ ಬಾಯಲ್ಲಿ ಇಂತಹ ಮಾತೆ!’ ಆಕೆಗೂ ಆಚ್ಚರಿ ಆಕ್ರೋಶ ‘ನೀನು ನಂಬ್ತೀಯಲ್ಲೇ. ಅದಕ್ಕೆ ಹಾಗಂದೆ. ಸತ್ಯಕ್ಕೆಂದು ಸಾವಿಲ್ಲ ಕಣೆ’ ‘ನಮಗುಂಟಲ್ಲ ಸತ್ಯವನ್ನೇ ನಂಬಿ ಹರಿಶ್ಚಂದ್ರ ಸ್ಮಶಾನ ಕಾದ. ಶ್ರೀರಾಮ ಕಾಡಿಗೆ ಹೋದ. ಧರ್ಮರಾಜ ಹೆಂಡ್ತೀನೇ ಅಡವಿಟ್ಟ ಅವರಿಗೆಲ್ಲಾ ವಯಸ್ಸಿತ್ತು. ಮತ್ತೆ ಕಳ್ಕೊಂಡಿದ್ದನ್ನೆಲ್ಲಾ ಪಡೆದುಕೊಂಡರು. ಹಿಂದೆ ಬಾಳಿದಷ್ಟು ನೀವು ಬಾಳ್ತಿರೇನ್ರಿ? ಗ್ರಹಚಾರಕ್ಕೆ ನೀವೇನಾದರೂ ಗೊಟಕ್ ಅಂದ್ರೆ ನಮಗ್ಯಾರ್ರಿ ದಿಕ್ಕು? ನಿಮ್ಮ  ಪ್ರಾಮಾಣಿಕತೆಗಾಗಿ ನಾವು ಬೀದಿ ಪಾಲಾಗಬೇಕಿತ್ತಲಿ. ಲೋಕೋಪಯೋಗಿ ಇಲಾಖೆಯಲ್ಲಿದ್ದೂ ಲೋಕದ ನರಕದ ಎದುರು ನಮ್ಮನ್ನು ಭಿಕಾರಿಗಳನ್ನಾಗಿ ಮಾಡಿಬಿಟ್ರಿ. ಈಗ ಯಾರ್ ಕೇಳ್ತಾರೆ ನಿಮ್ಮನ್ನ? ಪ್ರಧಾನಿಯಿಂದ ಪೇದೆಯವರೆಗೂ ಲಂಚ ತಿಂದೇ ಬದುಕ್ತಾ ಇರೋವಾಗ ನೀವು ನಿಮ್ಮ ಆದರ್ಶಗಳಿಗಾಗಿ ಇಡೀ ಸಂಸಾರವನ್ನೇ ಬಲಿ ಕೊಟ್ಟುಬಿಟ್ಟಿರಲ್ರಿ’ ಅವಳ ಯಾವ ಮಾತಿಗೂ ಮತ್ತದೇ ಮೌನಿ ನೀನು. ಆದರ್ಶದಲ್ಲಿ ಗೆದ್ದು ಬದುಕಲ್ಲಿ ಸೋತವರಿಗೆ ಮೌನವೇ ಆಸರೆ, ದಿನವೂ ನಿಮ್ಮ ಜಗಳ ನೋಡಿ ರೋಸಿ ಹೋಗಿರುವ ಮಕ್ಕಳು ಮನೆ ಬಿಟ್ಟು ಓಡಿಹೋಗುವಷ್ಟು ಹತಾಶರಾಗಿದ್ದಾರೆ ಗೊತ್ತಾ ನಿನ್ಗೆ?

‘ನಿಮಗೆ ಅನ್ನ ಬಟ್ಟೆಗೇನು ಕಡೆಮೆ ಮಾಡಿಲ್ವಲ್ಲ ನಾನು-ಸುಮ್ಗಿರಿ? ಎಂದಷ್ಟೇ ಗದರುವ ತಾಕತ್ತು ಮಾತ್ರ ನಿನ್ನಲ್ಲಿ ಉಳಿದಿದೆಯಷ್ಟೇ.’

‘ಅನ್ನ ಬಟ್ಟಿಗಿದ್ದರೆ ಸಾಕೇನ್ರಿ? ಮಕ್ಕಳು ದೊಡ್ಡ ಓದು ಒದೋದು ಬೇಡ್ವ, ಕನಿಷ್ಟ ನಿಮ್ಮಂಗೆ ಗುಮಾಸ್ತರಾದರೂ ಆಗಬಾರ್ದೇ. ಮುಂದೆ ಅವಕ್ಕೆ ಕೆಲಸ ಕೂಡಿಸೋಕೆ ಲಂಚ ಕೊಡಬೇಕಲ್ಲ ಅದಕ್ಕೇನು ಮಾಡ್ತೀರಿ? ಕಾಲೇಜು ಓದೋರಿದ್ದಾರೆ. ಡೊನೇಷನ್ ಎಲ್ಲಿಂದ ತರ್ತೀರೀ’ ಆಕೆ ಬದುಕಿನ ಭವಿಷ್ಯದಲ್ಲಿ ಆಗಿರುವ ಬವಣೆಗಳನ್ನು ಸಾಕ್ಷಾತ್ಕಾರ ಮಾಡಿಸುವಾಗ ಒಳಗೇ ನರಳುವ ನೀನು, ಅವರವರ ಭವಿಷ್ಯ ಅವರ ಕೈಲಿದೆ ಕಣೆ… ಈವತ್ತು ಇದ್ದೋರು ನಾಳೆ ಇಲ್ಲ’ ವೇದಾಂತಕ್ಕಿಳಿಯುತ್ತಿ… ‘ಅದಕ್ಕೆ ಕಣೆ ನಾನು ಬಡ್ಕೋತಿರೋದು. ಹಣ ಸಂಪಾದಿಸದಿದ್ದರೂ ಬಿಪಿ, ಶುಗರು, ಪೈಲ್ಸು, ಗ್ಯಾಸ್ಟ್ರಿಕ್ಕು, ಮೈ ತುಂಬಾ ರೋಗ ಸಂಪಾದಿಸಿದ್ದೀರಿ. ಸದಾ ನರಳ್ತಾ ಓಡಾಡ್ತೀರಿ. ನಿಮಗಿಂತ ಮೊದಲು ನಾನು ಸತ್ತರೇ ವಾಸಿ’ ಆಕೆಯ ನೋವಿಗೆ ಕೊನೆಯೇನಿಲ್ಲ ಬದುಕಿನ ಸತ್ಯವೀಗ ನಿನಗೂ ಅರಿವಾಗಿದೆ. ನಿನ್ನನ್ನು ನೋಡಿದರೇನೇ ಬಾಂಧವರು ಮಾರು ದೂರ ಓಡುತ್ತಾರೆ. ಮಡದಿ ಮಕ್ಕಳು ಮಾತೇ ಬಿಟ್ಟಿದ್ದಾರೆ. ಪ್ರಪಂಚದಲ್ಲಿ ಎಲ್ಲರೂ ತುಳಿದ ಹಾದಿ ತುಳಿಯದೇ ನೀನೇಕೆ ಹೀಗಾದೆ? ನನ್ನ ಬದುಕಿನ ಬಗ್ಗೆ ಈಗಲೂ ನನಗೆ ಪಶ್ಚಾತಾಪವಿಲ್ಲ ಅನ್ನೋ ಅಹಂ ಮಾತ್ರ ಇನ್ನೂ ಉಳಿಸಿಕೊಂಡಿದ್ದೀಯ! ಬದುಕೆಲ್ಲಿದೆಯೋ ನಿನಗೆ? ತಿಂಗಳೊಪ್ಪತ್ತಿನಲ್ಲಿ ಹಾರ್ಟ್ ಸರ್ಜರಿ ಮಾಡದಿದ್ದರೆ ನನ್ನ ಬದುಕು ಕೂಡ ತೂಗುಯ್ಯಾಲೆಯಂತೆ ಯಾವಾಗ ಬೇಕಾದ್ರೂ ನಿಲ್ಲಬಹುದಲ್ಲ. ಕಳೆದ ವಾರ ಚೆಕ್‌ಅಪ್ ಮಾಡಿದ ವೈದ್ಯರು ಹೇಳಿದ್ದನ್ನು ಮರೆತೆಯೇನೋ ಪಾಪಿ. ಒಂದೂವರೆ ಲಕ್ಷ ಸರ್ಜರಿಗೆ ಎಲ್ಲಿಂದ ತರ್ತೀಯಾ? ಬ್ಯಾಂಕಲ್ಲಿ ಪೆನ್ಷನ್ ಹಣ ನಾಲ್ಕು ಲಕ್ಷ ಇದೆ. ಪೆನ್ಶನ್ ಮತ್ತು ಬ್ಯಾಂಕ್ ಬಡ್ಡಿಯಿಂದಲೇ ನಿತ್ಯ ಸಂಸಾರದ ರಥ ಸಾಗಿರೋವಾಗ ಅದನ್ನು ತೆಗೆಯುವಂತಿಲ್ಲ. ನನಗೆ ಯಾವ ದುಶ್ಚಟಗಳಿಲ್ಲ ಅಂತಿಯಲ್ಲ ದುಶ್ಚಟ ಇದ್ದವರಿಗೆ ಭ್ರಷ್ಟರಿಗೆ ನಿನಗಿರುವ ಕಾಯಿಲೆ ಇಲ್ಲವೆ! ನನ್ನದೇನು ಖಿರ್ಚಿಲ್ಲ ಅಂದರೂ ಡ್ರಗ್ಸ್‌ಗೇ ಪ್ರತೀ ತಿಂಗಳು ಪೆನ್ಷನ್ ಹಣದಲ್ಲಿ ಐನೂರು ಪೀಕಲು ಪರದಾಡುವ ನೀನು ಒಂದೂವರೆ ಲಕ್ಷ ಎಲ್ಲಿಂದ ತಂದು ಜೀವ ಉಳಿಸ್ಕೋತಿಯೋ ದ್ಯಾಬೆ. ನೀನು ಹೋಗಿಬಿಟ್ಟರೆ ಕುಟುಂಬದ ಗತಿಯೇನು? ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ಲ ಅನ್ನುವ ಸಿದ್ಧ ಉತ್ತರ ನಿನ್ನಲ್ಲಿದೆ ಅಂತ ನಂಗೊತ್ತು. ಅದ್ಸರಿ, ಬರಲಿರುವ ಸಾವಿನ ಬಗ್ಗೆ ಏನು ಹೇಳುತ್ತಿ. ಯಾರಿಗೂ ನಿನ್ನ ಕಾಯಿಲೆಯ ತೀವ್ರತೆ ಬಗ್ಗೆ ತಿಳಿಸದೆ ಮುಚ್ಚಿಟ್ಟು ನೀನೊಬ್ಬನೆ ಸಾವಿನ ಸಿದ್ಧತೆಗೆ ತೊಡಗಿರುವುದು ಕೂಡ ಅಪರಾಧ ಕಣಯ್ಯಾ. ಸದಾ ನಿನ್ನ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿರುವುದನ್ನು ನಾನಂತೂ ಗಮನಿಸಿದ್ದೇನೆ. ಸಾಯಲು ನಿನಗೂ ಇಷ್ಟವಿಲ್ಲ. ಬದುಕಲು ಹಣವಿಲ್ಲ ಆದರ್ಶ ಪ್ರಾಮಾಣಿಕತೆಗೆ ನಿನ್ನನ್ನು ಉಳಿಸೋ ಶಕ್ತಿ ಕೂಡ ಇಲ್ಲ. ಅಂದರೂ ಒಪ್ಪುವುದಿಲ್ಲ. ದುಡ್ಡಿರುವವರೇನು ಸಾಯುವುದಿಲ್ಲವೇ? ಅಂತ ಪ್ರಶ್ನೆ ಬೇರೆ ಹಾಕುವೆ. ಇದು ನನ್ನ ಆತ್ಮಾಭಿಮಾನ. ಆಹಂಕಾರ ಅಲ್ಲವೆ? ಆದರ್ಶಗಳ ಸೋಲು ಅಂತ ನಾವಂದರೂ ನೀನು ಮೌನಿಯಾಗಿಬಿಡುತ್ತಿ. ಈಗೀಗ ನೀನು ಯಾರೊಡನೆಯೂ ಮಾತನಾಡುತ್ತಿಲ್ಲ. ನಿನ್ನ ಖಾಲಿ ಮಾತಾದರೂ ಯಾರಿಗೆ ಬೇಕಿದೆ? ಸಾರಿ ಕಣೋ, ಓದುಗರ ಮೇಲಾಣೆ ಮಾಡಿ ಪತ್ರ ಆರಂಭಿಸಿದ್ದೇನಲ್ಲವೆ, ತೀರ್ಮಾನವನ್ನೂ ಓದುಗರಿಗೇ ಬಿಡುತ್ತೇನೆ ಅವರೇ ತೀರ್ಪು ನೀಡಲಿ.
*****