ನಮ್ಮ ರೋಗಕ್ಕೆ ಓಣಿಯಲಿ
ಬೇಯುವ ಮೊಟ್ಟೆಯ ಅಮ್ಲೆಟ್
ವಾಸನೆ ಹೊಟ್ಟೆಯು ತಳಮಳ
ಹುಟ್ಟು ಹಾಕುತ್ತದೆ ಪ್ರೇಮವಿರದ
ಕೂರೂಪ ಮುಖ ಎದೆಯ ತುಂಬ
ಉರಿವ ಸೂರ್ಯ ಬಿಸಿ ಹರಡುತ್ತಾನೆ.

ಕಾಲ ಮತ್ತು ಪ್ರೇಮ ಉಗಿಯು ಹಗಲು
ಉರಿದ ನೆನಪಿನ ತುಂಡುಗಳು
ಪ್ರತಿ ನಿಮಿಷ ಮತ್ತು ಮನಸ್ಸುಗಳು
ಹುರಿದ ಕರಿದ ಭಜೆಯ ಕರಕಲು
ಮಾಸಿದ ತುಟಿಗಳು ತಬ್ಬಿವೆ.
ಮನೆಯ ಮುಂದಿನ ದಾರಿತುಂಬ ಕೆಂಪುಧೂಳು.

ಯಾವ ದೇವರ ಮನೆಯ ಬಾಗಿಲೂ
ತೆರೆದಿರುವದಿಲ್ಲ ತಿಳಿಗೇಡಿ ಪ್ರೇಮದ ನಿವೇದನೆಯಲಿ
ಹಾಸಿಗೆಯಲಿ ಅತ್ತ ಕಣ್ಣೀರು ಹನಿಗಳು
ಜೇನುಗೂಡು ಕಟ್ಟಿವೆ ರೋಗದ ಮನೆಯಲ್ಲಿ
ಕೆಟ್ಟ ಊಟಕ್ಕಿಂತ ಉಪವಾಸ ಮೇಲು
ಒಂಟಿಕಾಲಿನ ಬಕಧ್ಯಾನ ಸರ್ವಪ್ರಧಾನ.

ಏನು ಬೇಡಲಿ ನಿನ್ನ ಬಳಿಗೆ ಬಂದು
ಕೂಡಲು ಏನೂ ಇಲ್ಲವಲ್ಲ ನಿನ್ನಲ್ಲಿ
ಕಳೆದು ಹೋದ ಅದೃಷ್ಟ ಕರಗಿದ ಕಾಡಿಗೆ
ನಡುವೆ ಕಂಡ ಬದುಕು ನಿನ್ನದೂ ಅಲ್ಲ
ನನ್ನದೂ ಅಲ್ಲ ಏಕೆ ಹುಡುಕಲಿ ಊರೂರು
ಅಲೆಯುತ್ತ ಸತ್ತಪೈರಿಗೆ ಸುಟ್ಟು ಕನಸುಗಳಿಗೆ.
*****