ಪ್ರತಿದಿನವೂ ಹೃದಯಾಘಾತದಿಂದ ಸಾವನ್ನಪ್ಪುವ ಜನಸಂಖ್ಯೆ ಹೆಚ್ಚಾಗುತ್ತಲಿದೆ. ಸ್ವಸ್ತವಾಗಿದ್ದಾಗಲೇ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ನಿಂತು ನೆಲಕ್ಕೆ ಕುಸಿದು ಪ್ರಾಣ ಹಾರಿಹೋಗಿರುತ್ತದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಡಾ|| ಹೆರಾಲ್ಡ್ ಲೇಜರ್ ಅವರು ಒಂದು ಪ್ರೊಟೀನನ್ನು ಜೈವಿಕ ತಂತ್ರಜ್ಞಾನದಿಂದ ಕಂಡು ಹಿಡಿದಿದ್ದಾರೆ.

ಜೈವಿಕ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟ ಮತ್ತು ಉನ್ನತ ಉಪಕಾರಿಯಾದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಲಾಭಕಾರಿಯಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಮ್ಯುಸಾಬೂಟ್ಸ್ ವಿಶ್ವವಿದ್ಯಾನಿಲಯದ ಡಾ|| ಲೇಜರ್ ಅವರು ಹೃದಯಾಘಾತವನ್ನು ತಡೆಗಟ್ಟಲು ಜೈವಿಕ ತಂತ್ರಜ್ಞಾನದಿಂದಲೇ ಸಾದರ ಪಡಿಸಿದ್ದಾರೆ. ಇದರ ಹೆಸರು “ಎಕ್ಸ್‌ಸಿರ್” (Soluble Human Complements Receptor) ಇದನ್ನು ಹಂದಿಗಳ ಮೇಲೆ ಪ್ರಯೋಗಿಸಿ ಸತ್ಯಾಂಶವನ್ನು ಕಂಡು ಹಿಡಿದಿದ್ದಾರೆ. ಈ ಔಷಧಿಯಿಂದಾಗಿ ಶರೀರದಲ್ಲಿರುವ ಅನೇಕ ರೋಗಾಣುಗಳ ವಿರುದ್ಧ ಪ್ರತಿರೋಧಕ ಶಕ್ತಿಯಾಗಿ ವರ್ಧಿಸಿದ್ಧನ್ನು ಕಂಡುಕೊಂಡು ಪ್ರಕಟಿಸಿದರು. ಹೃದಯಾಘಾತವನ್ನು ತಡೆಹಿಡಿಯುತ್ತದೆಂದು ಖಚಿತಪಡಿಸಿದರು.

ಇದಲ್ಲದೇ ಲಂಡನ್ನಿನಲ್ಲಿರುವ ಹೃದಯ ಶಾಸ್ತ್ರ ತಂಡದವರು ತಯಾರಿಸಿದ ಒಂದು ಕಂಪ್ಯೂಟರ್ ಸಾಫ್ಟ್‌ವೇರ್‌ನಿಂದ ಒಬ್ಬ ರೋಗಿ ಹೃದಯಾಘಾತಕ್ಕೆ ಈಡಾಗುವ ಸಾಧ್ಯತೆ ಇದೆಯೇ ಇಲ್ಲವೇ ಎಂಬುವುದನ್ನು ಮುಂಚಿತವಾಗಿಯೇ ತಿಳಿಯಬಹುದೆಂದು ಹೇಳುತ್ತಾರೆ. ಮತ್ತಲ್ಲದೇ ಹೃದಯದ ಗಾತ್ರ, ಹೃದಯ ಬಡಿತದ ಲಯ, ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ೧೦ ವರ್ಷಗಳಲ್ಲಿ ಮನುಷ್ಯನ ಸಾವಿನ ಗಂಡಾಂತರದ ಭವಿಷ್ಯವನ್ನು ಹೇಳುತ್ತದೆ.
*****