ಮೊನ್ನೆ ನಾನು ಕಾರು ಓಡಿಸುತ್ತಿದ್ದಾಗ ಸಮೀಪ ಕಂಡ ಒಬ್ಬ ಪೊಲೀಸಿನವನಿಗೆ ನ್ಯಾಶನಲ್ ಪಾರ್ಕಿನ ದಾರಿ ಕೇಳಿದೆ. ಆತ ಹೇಳಿದ –

‘ಡೆಡ್ ಎಂಡ್‌ವರೆಗೂ ಹೋಗಿ. ನಂತರ ರೈಟಿಗೆ ತಿರುಗಿ…’

ಡೆಡ್ ಎಂಡ್…. ಶಬ್ದ ಕೇಳುತ್ತಲೇ ನಡುಗಿಬಿಟ್ಟೆ! ಕಾರು ಮುಂದೆ ಓಡಿದ ಮೇಲೆ ಸಮಾಧಾನಕ್ಕಾಗಿ ಇನ್ನೊಬ್ಬಳು ಮಹಿಳೆಗೆ ವಿಚಾರಿಸಿದೆ. ಅವಳೂ ಅಂದಳು. ‘ಗೋ ಟು ದಿ ಡೆಡ್ ಎಂಡ್… ಅಂಡ್ ಟೇಕ್ ರೈಟ್…’

ಅಯ್ಯಯ್ಯೋ ಎಂದೆ! ಬೆಂಗಳೂರಿನವರಿಗೆ ಈಸ್ಟ್ ಎಂಡ್… ಸೌತ್ ಎಂಡ್… ಡೆಡ್ ಎಂಡ್ ಅಂದರೆ ಯಾಕಿಷ್ಟು ಪ್ರೀತಿ? ನಾನು ಈ ಹಿಂದೆ ಅಖಂಡೇಶ್ವರ ಲಿಂಗದ ಹೆಸರು ಕೇಳಿದ್ದೆ… ಇಲ್ಲೇನಾದರೂ ಎಂಡೇಶ್ವರಲಿಂಗ ಉಂಟೋ?

ಈ ಊರಲ್ಲಿರುವ ಹಾಸ್ಪಿಟಲುಗಳು ಮತ್ತು ಸ್ಮಶಾನಗಳು ಈ ಪ್ರಮಾಣದಲ್ಲಿ ಬೇರೆ ಯಾವ ಊರಲ್ಲಿಯೂ ಇರಲಿಕ್ಕಿಲ್ಲ! ಅದಕ್ಕಾಗಿಯೇ ಏನೂ ಈ ಎಂಡು?

ಇಂಥ ಎಂಡ್‌ಗಳು ಬೆಂಗಳೂರಲ್ಲಿ ನಮಗೆ ತಂಡತಂಡದಲ್ಲಿ ಅಂಜಿಸುತ್ತವೆ! ಕೆಲ ಹೋಟೆಲುಗಳಿಗೂ ಶಾಂಪಿಗ್ ಕಾಂಪ್ಲೆಕ್ಸ್‌ಗಳಿಗೂ ಏಕಿಷ್ಟು ಎಂಡ್‌ಗಳ ಮೇಲೆ ಹೆಂಡ ಕುಡಿದಷ್ಟು ಪ್ರೀತಿ ಅಂತೇನಿ?

ಇನ್ನು ಬೇರೆ ಊರುಗಳಲ್ಲೂ ಇಂಥ ಎಂಡ್‌ಗಳು ಉಂಟೆ? ವಿಚಾರಿಸಿದೆ. ಹೌದು… ಆ ಒಂದು ಊರಲ್ಲಿ ಒಬ್ಬ ಪರಿಚಿತನ ಬಗ್ಗೆ ನಾವು ಮಾತಾಡುವಾಗ, ಅವನ ಆ ವರಟುಕಲ್ಲಿನ ಬಂಡೆಯಂತಿದ್ದ ಗುಣದ ಬಗ್ಗೆ ನಮಗೆ ಸರಿಯಾದ ಶಬ್ದವೇ ಸಿಗಲಿಲ್ಲ. ನಮ್ಮಲ್ಲಿ ಒಬ್ಬರು ಜಾಣರು ತಕ್ಷಣ ಹೇಳಿದರು… ‘ಓಹೋ… ಆತನೇ… ಮುಗೀತು… ಆತ ಒಂದು ಡಡ್ ಎಂಡ್! ಅವನ ಜೀವನಮಾನದಲ್ಲಿ ಆತ ಎಂದಿಗೂ ನಕ್ಕಿಲ್ಲ…. ಅತ್ತಿಲ್ಲ… ಒಬ್ಬರನ್ನು ಹೊಗಳಿಲ್ಲ… ಒಬ್ಬರ ವಿಶೇಷ ಗುಣಗಳನ್ನು ಮೆಚ್ಚಿಕೊಂಡಿಲ್ಲ… ಸದಾ ವರಟು ಮಾತು… ಡೈರೆಕ್ಟಾಗಿ ಚುಚ್ಚುವ ವ್ಯಂಗ್ಯ… ನಗುವ ಪ್ರಸಂಗ ಬಂದಾಗಲೂ ಆಚೆಗೆ ಮುಖ ತಿರುಗಿಸುವ ಕ್ರೂರ ನಡತೆ… ಆತ ಎಲ್ಲಿ ಇರುವನೋ ಅದೇ ಒಂದು ಸ್ಮಶಾನ… ಹೋಗಲಿ… ಸ್ಮಶಾನದ ಹೆಣಗಳು ಕೂಡ ಕುಣಿಯ ಮೇಲೆ ಹೂ ಬಳ್ಳಿ, ಹಸಿರು ಬೆಳಸಿ ಮೌನದೊಂದಿಗೆ ಮಾತನಾಡುತ್ತವೆ. ಆಗಾಗ ಗಿಳಿಗಳು ಅಲ್ಲಿ ಬಂದು ಹೋಗುತ್ತವೆ. ಆದರೆ ಆ ಮನುಷ್ಯ ಅದಕ್ಕೂ ನಾಲಾಯಕ್ಕು. ಸಂಪೂರ್ಣ ಡೆಡ್ ಎಂಡ್!’

ಈಗ ಈ ‘ಡೆಡ್ ಎಂಡ್’ ಪದದ ಆಳ-ಅಗಲ ನನ್ನನ್ನು ಇನ್ನಿಷ್ಟು ಕಕ್ಕಾವಿಕ್ಕಿ ಮಾಡಿತು! ಎಷ್ಟೋ ಜನ ಕಾಲೇಜ ಪ್ರಿನ್ಸಿಪಾಲರುಗಳು…. ಅವರು ಡಬಲ್ ಡಿಗ್ರಿ ಹೋಲ್ಡರುಗಳು, ಆದರೆ ಅವರ ಚೇಂಬರಿಗೆ ಹೋದ ಸ್ಟಾಫ್ ಮೆಂಬರಿಗೆಲ್ಲ ಆತನ ಉರುಟು ಮಸಡಿ ಒಂದು ಡೆಡ್ ಎಂಡ್. ಆತ ತನ್ನ ಜೀವಮಾನದಲ್ಲೇ ಒಬ್ಬ ಸ್ಟಾಫ್ ಮೆಂಬರನನ್ನೂ ಹೃದಯ ತುಂಬಿ ಹೊಗಳಲಿಲ್ಲ! ಹೊಗಳಲೇಬೇಕಾದ ಗುಣಾಂಶವಿದ್ದರೂ ಯಾಸಿಬೀಸಿ ಮಾತಾಡುವ. ಒಬ್ಬ ಕವಿ ಅವನ ಎದುರಿಗೆ ಬಂದರೆ… ‘ನೀವು ಹೂವು ಹಕ್ಕಿ ಅಂತ ಕವನಾ ಬರೆದ್ರ ಹೊಟ್ಟಿಗೆ ಕೂಳು ಹಾಕೋರು ಯಾರು?’ ಎಂದು ಕೇಳಿದ. ಒಬ್ಬ ಪ್ರಖ್ಯಾತ ಭಾಷಣಕಾರನ ಬಗ್ಗೆ ಅವನ ಮುಂದೆ ಹೇಳಿದಾಗ… ‘ಓಹೋ… ಅವನೋ ನನಗೆ ಗೊತ್ತು…. ಆತ ನಮ್ಮ ಮನೀ ಮುಂದ ಭಿಕಾರಿಗತೆ ಓಡಾಡ್ತಾ ಇದ್ದಾ. ನಾನು ಅವನ್ನ ಫ್ರೀಬೋರ್ಡಿಂಗಿಗೆ ಸೇರಿಸೇನಿ’ ಅಂದ. ಇನ್ನೊಬ್ಬ ಡಾಕ್ಟರೇಟ ಪಡೆದ ಮಹಾ ವಿದ್ವಾಂಸನ ಪ್ರಸ್ತಾಪ ಬಂದಾಗ… ಗೊತ್ತು… ಆತಾ ನಮ್ಮ ಹುಡುಗೂರಿಗೆ ಟ್ಯೂಷನ್ ಹೇಳಿದ್ದಾ, ಅದೂ ಸರಿಯಾಗಿ ಬರಲಿಲ್ಲಾ. ಬಿಡಿಸಿಬಿಟ್ಟೆ ಅವನ್ನ… ಅಂದ. ಒಂದು ಹುಡುಗಿಯ ಬಗ್ಗೆ ವರ್ಣಿಸಿ ಹೇಳಿದಾಗ… ಆತ… ನೀವು ಹೋಗಿ ಆಕಿ ಹಿಂದಿಂದ ಅಂತ ಬೆಂಕಿಬಾಣ ಬಿಟ್ಟ!

ಇವರೆಲ್ಲಾ ಬಹುಶಃ ಸಿಂಹರಾಶಿಯ ವ್ಯಕ್ತಿಗಳೋ ಏನೊ! ಒಟ್ಟಿನ ಮೇಲೆ ಇವರು ಮನುಷ್ಯರಾಶಿಯ ಡೆಡ್ ಎಂಡ್ಗಳು! ಇಂಥವರಿಗೆ ಹೂವಿನ ಹೃದಯದ, ಮಲ್ಲಿಗೆಯ ಮಮತೆಯ, ಕಲ್ಪನೆಯ ಕನಸಿನ ಹೆಂಡತಿಯೊಬ್ಬಳು ಗಂಟು ಬೀಳಬೇಕೆ? ಅಯ್ಯೋ ಪಾಪ… ಆ ಹೆಣ್ಣು ಮನೋರೋಗಿಯಾಗಿ ಕಂಗಾಲ ಕಾಗಿಯಾಗಿ ಸತ್ತುಹೋತು!

ಜೀವನದಲ್ಲಿ ಏನೂ ಮಾಡದಿದ್ದರೂ ಇರಲಿ… ಬರ್ರಿ… ಕೂಡ್ರಿ…. ಉಂತೀರಾ…. ಏನು ಆಗಬೇಕಿತ್ತು ನಿಮಗೆ… ಇಂಥ ಪುಕ್ಕಟೆ ಪ್ರೀತಿಯ ಮಾತಾದರೂ ಬೇಡವೆ? ಬಹುಶಃ ಬಿಜ್ಜಳನ ಅರಮನೆಯಲ್ಲಿ ಇಂಥ ಡೆಡ್ ಎಂಡ್‌ಗಳು ಆ ಕಾಲಕ್ಕೂ ಇದ್ದವೆಂದು ಕಾಣುತ್ತದೆ. ಆದ್ದರಿಂದ ಬೇಸತ್ತ ಬಸವಣ್ಣವರು ಎದೆಯೊಡೆದು ನುಡಿದರು. ಏನಿ ಬಂದಿರಿ. ಹದುಳವಿದ್ದಿರಿ? ಎಂದರೆ ನಿಮ್ಮ ಮೈಸಿರಿ ಹಾರಿ ಹೋಹುದೆ?… ಕುಳ್ಳಿರೆಂದರೆ ನೆಲ ಕುಳಿ ಹೋಹುದೆ? ಒಡನೆ ನುಡಿದರೆ ಶಿರ ಹೊಟ್ಟೆ ಒಡೆಯುವದೆ? ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ… ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವನು? ಪುರಂದರ ದಾಸರು ಕೂಡಾ ಬಹುಶಃ ಇಂಥ ಡೆಡ್ ಎಂಡ್‌ಗಳನ್ನು ಕಂಡೇ…. ಜಾಲಿಯ ಮರದಂತೆ… ಧರೆಯೊಳು ದುರ್ಜನರು ಜಾಲಿಯ ಮರದಂತೆ ಎಂದು ರೆಡ್ ಲೈಟ್ ತೋರಿಸಿದರೋ ಏನೋ!

ಸಂಸ್ಕೃತದಲ್ಲಿ ವಿದ್ಯಾ ವಿನಯೇನ ಶೋಭತೆ ಎಂಬ ಆರ್ಯೋಕ್ತಿ ಇದೆ. ಬೆಂಗಳೂರ ಸಿಟಿ ಬಸ್ಸಿನಲ್ಲಿ ಉಸಿರು ಕಟ್ಟುತ್ತಿದ್ದ ಗದ್ದಲದಲ್ಲಿ ಹೆಂಗಸರ ಸೀಟಿನಲ್ಲಿ ಕುಂತ ಅಪರಿಚಿತ ಕಾಲೇಜ ಹುಡಿಗಿಯೊಬ್ಬಳು… ಬನ್ನಿ ಅಂಕಲ್, ಇಲ್ಲಿ ಕೂತುಕೋ ಬನ್ನಿ ಎಂದು ತಾನೆದ್ದು ನನ್ನನ್ನು ಕೂಡಿಸಿದಳು. ನನಗೆ ಆಗ ಆ ಹುಡಿಗಿಯ ಮೊಗದಲ್ಲಿ ಬಿಸಿಲು ಬೆಳದಿಂಗಳಾಯಿತು!

ಆದರೆ ಒಬ್ಬ ಭಾರೀ ಶ್ರೀಮಂತ ನನಗೆ “ಏ ಕಾದಂಬರೀ…” ಅಂತನೇ ಕೊನೆವರೆಗೂ ಕರೆದ. ನನ್ನ ಕಾದಂಬರಿಗಳನ್ನು ಆತ ಓದದಿದ್ದರೂ ನನ್ನನ್ನು ಕಾದಂಬರಿ ಅಂತ ಚುಚ್ಚಿಕರೆಯಲು ಆತ ಮರೆಯಲಿಲ್ಲ. ಜನರನ್ನು ಅವರ ಹೆಸರುಗೊಂಡು ಕರೆಯುವ ಬದಲು, ಸೊಟ್ಟಾ, ಕೆಪ್ಪಾ, ಡೊಣಮೂಗ್ಯಾ, ಡೂಗಾ, ಹೊನಿಗ್ಯಾ, ಸುಂಬ್ಳ್ಯಾ ಎಂದು ಆತ ಕರೆದಾಗ ಈ ಡೆಡ್ ಎಂಡ್‌ಗಳ ಹೊಸಲೋಕವೇ ಕಾಣುತ್ತದೆ. ಇಂಥ ಡೆಡ್ ಎಂಡ್‌ಗಳಿಂದ ಎಷ್ಟು ಪ್ರೇಮಿಗಳು ಕಾಮಿಗಳು, ಸಾಹಿತಿಗಳು, ವಿಜ್ಞಾನಿಗಳು ಕಲಾವಿದರು, ಭಾವುಕರು ಇಲ್ಲಿಯವರಿಗೆ ಡೆಡ್ಡಾಗಿ ಹೋಗಿದ್ದಾರೋ, ಆ ಲಿಸ್ಪಿಗೆ ಡೆಡ್ಡೇ ಇಲ್ಲ!
*****