ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ
ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ;
ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ
ಮೀರಿ ಮಿಂಚಿದ ಚಿಗರೆ ಹರಿದೋಡಲಿ
ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ,
ಮರ್ತ್ಯಲೋಕದ ಮಿತಿಗೆ ಮಾನ ಬರಲಿ
ಎಲ್ಲಿದ್ದರೂ ಪ್ರೀತಿ, ರೀತಿಗಳ ಹೆಡೆಮೆಟ್ಟಿ
ಕಡಲಾಗಿ, ತೊರೆಗೆ ಬಿಡುಗಡೆ ನೀಡಲಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.