ಅಂದಚೆಂದ

ಅಚ್ಚುಕಟ್ಟುತನವೆಂದರೇನು?

ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವೆಗಳಾದರೂ ಇರಲೇ ಬೇಕಲ್ಲವೇ? ಆ ಒಡವೆಗಳನ್ನು ಸ್ವಚ್ಛವಾಗಿರಿಸಿಕೊಳ್ಳುವದಲ್ಲದೆ, ಅವುಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇಟ್ಟು-ತಕ್ಕೊಳ್ಳುವುದಕ್ಕೆ ಅಚ್ಚುಕಟ್ಟುತನವೆನ್ನುತ್ತಾರೆ. ಅಗ್ಗದ ಒಡವೆಗಳೆಂದು ಅಲ್ಲಿ ಇಲ್ಲಿ ಒಗೆದು, ಝಳ ಝಳ ಇಟ್ಟುಕೊಳ್ಳದೆ, ಆರು ತಿಂಗಳು ಕೆಲಸಕ್ಕೆ ಬರುವ ವಸ್ತುವು ಒಂದೇ ತಿಂಗಳಲ್ಲಿ ಹರಿದು, ಮುರಿದು, ಮಾಸಿ ಕೆಲಸಕ್ಕೆ ಬಾರದಂತೆ ಮಾಡಿಕೊಂಡರೆ ಅದು ಅಚ್ಚುಕಟ್ಟುತನ ಎನಿಸಲಾರದು. ಉಪಯೋಗವುಳ್ಳ ವಸ್ತುವೇ ಇರಲಿ, ಉಪಯೋಗಕ್ಕೆ ಬರಲಾರದ ವಸ್ತುವೇ ಇರಲಿ. ಅದು ಗಟ್ಟಿ ಮುಟ್ಟಾಗಿರುವಂತೆ ನೋಡಿಕೊಳ್ಳಬೇಕು; ಕೆಟ್ಟರೆ ಸರಿಪಡಿಸಬೇಕು; ಅದನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು; ಅಂದವಾಗಿ ಇಟ್ಟುತಕ್ಕೊಳ್ಳುತ್ತಿರಲಿ; ಅದು ಹರಿದು ಮುರಿದು ಹೋದರೆ ಅದನ್ನು ಚಲ್ಲಾಪಿಲ್ಲಿಯಾಗಿ ಚಲ್ಲಾಡಿ ತೂರದೆ, ಅದನ್ನು ಇನ್ನೊಂದು ಕೆಲಸಕ್ಕೆ ಉಪಯೋಗವಾಗುವಂತೆ ಹೊಂದಿಸಿಕೊಳ್ಳುವ ಜಾಣತನವಿರುವಲ್ಲಿ ಅಚ್ಚುಕಟ್ಟುತನವು ತಾನಾಗಿಯೇ ಬರುತ್ತದೆ. ಅದು ನೆನಪಿನಲ್ಲಿಟ್ಟುಕೊಂಡು ಇಡಿಯ ದಿನವೂ ನಡೆದುಕೊಳ್ಳುವ ಸದ್ಗುಣವಾಗಿದೆ. ಅಂಕಿ ಮಗ್ಗಿಯಂತೆ ಬಾಯಿಪಾಠ ಮಾಡಿಟ್ಟುಕೊಳ್ಳುವ ವಿಷಯವಲ್ಲ. ಬರವಣಿಗೆ ಸುಂದರವಾಗಲೆಂದು ತೀಡಿ ತೀಡಿ ಬರೆಯುವ ಅಕ್ಷರವಲ್ಲ. ನಮ್ಮನ್ನು ನಾವು ಅಂದವಾಗಿಟ್ಟುಕೊಳ್ಳುವುದೇ ಅದರ ಗುಟ್ಟು.

ಅಂದಚಂದಗಳೇಕೆ?

ನಮ್ಮನ್ನು ನಾವು ಅಂದಚಂದವಾಗಿಟ್ಟುಕೊಳ್ಳುವುದು ಸರಕಾರದ ಅಂಜಿಕೆಗಾಗಿ ಅಲ್ಲ; ಪುಂಡರ ಹೆದರಿಕೆಗಾಗಿ ಅಲ್ಲ, ಬೀಗರ ಬಿಡಯಕ್ಕಾಗಿಯೂ ಅಲ್ಲ. ಎಂಥವನನ್ನೆ ನೋಡಿದರೂ, ಅವನಲ್ಲಿ ಅಂದಚಂದದ ಕಲ್ಪನೆ ಒಂದು ಇದ್ದೇ ಇರುತ್ತದೆ. ಅವನಿಗಿರುವ ತಿಳುವಳಿಕೆಯ ಮಟ್ಟಗೆ ಅವನು ತನ್ನನ್ನೂ ತನ್ನ ಒಡವೆಗಳನ್ನೂ ಅಂದಚಂದವಾಗಿ ಇರಿಸಿಕೊಳ್ಳಲು ಎತ್ತುಗಡೆ ನಡೆಸುತ್ತಾನೆ. ಈ ಗುಣವು ಎಲ್ಲಿಯಾದರೂ ನೋಡಿ ಕಲಿತದ್ದೇ? ಇಲ್ಲವೆ ತನ್ನಿಂದ ತಾನೇ ಹುಟ್ಟಿದ್ದೇ? ಈ ಮಾತುಗಳೆರಡೂ ಸರಿಯಾದವುಗಳೇ? ಈ ಗುಣವು ತನ್ನಿಂದ ತಾನೆ ಹುಟ್ಟುವುದಕ್ಕೆ ಎಲ್ಲಿಯಾದರೂ ನೋಡಿದ್ದೇ ಕಾರಣವಾಗಿರುತ್ತದೆ. ಎಲ್ಲಿಯಾದರೂ ನೋಡಿ ಕಲಿತುಕೊಳ್ಳಲಿಕ್ಕೆ ತನ್ನಿಂದ ತಾನೆ ಹುಟ್ಟಿದ ಬುದ್ಧಿಯೇ ಕಾರಣವಾಗಿರುತ್ತದೆ. ಸುತ್ತಲಿನ ಸೃಷ್ಟಿಯನ್ನೇ ನೋಡಿರಿ. ಗಿಡಗಳ ಎಲೆಗಳೆಲ್ಲ ಹಸಿರು. ಆ ಎಲೆಗಳಲ್ಲಿ ಒಡೆದು ಕಾಣಿಸುವ ಬಣ್ಣದ ಹೂ. ಕೋಟಿ ಎಲೆಗಳಿಗೆ ಒಂದು ಹೂವಿದ್ದರೂ ಅದು ಮರೆಯಲ್ಲಿ ಉಳಿದುಕೊಳ್ಳಬಾರದೆಂದು ಅದಕ್ಕೆ ಬೇರೊಂದು ಬಣ್ಣವನ್ನೂ, ಸುವಾಸನೆಯನ್ನೂ ದೇವರು ಕೊಟ್ಟಿರುತ್ತಾನೆ. ದನಗಳನ್ನೇ ನೋಡಿರಿ; ಹಕ್ಕಿಗಳನ್ನೇ ನೋಡಿರಿ; ಹುಳ-ಹುಪ್ಪಡಿಗಳನ್ನು ನೋಡಿದರೂ ಅವು ಅಂದಚಂದವಾಗಿ ಕಾಣುವಂತೆ ಅವುಗಳ ನಿರ್ಮಾಣವಾಗಿರುತ್ತದೆ. ಎತ್ತಿಗೆ ಎರಡು ಕೋಡುಗಳನ್ನು ಕೊಟ್ಟ ದೇವರು ಒಂದು ಗಂಟಲಿನ ಹತ್ತಿರ ಇನ್ನೊಂದು ಬಾಲದ ಹತ್ತಿರ ಏಕೆ ಇರಿಸಿಲ್ಲ? ಎರಡು ಕಣ್ಣುಗಳಲ್ಲಿ ಒಂದನ್ನು ಬೆನ್ನ ಮೇಲೆಯೂ ಇನ್ನೊಂದನ್ನು ಹೆಗಲ ಮೇಲೆಯೂ ಹಾಕಿ ಬಿಟ್ಟಿದ್ದರೆ ನಡೆಯುತ್ತಿದ್ದಿಲ್ಲವೇ? ಮೇವು ತಿನ್ನುವ ಬಾಯಿಯು ಒಂದು ನಿಟ್ಟಿಗಿರಿಸಿದ ದೇವರು, ಸಗಣಿ ಹಾಕುವ ದ್ವಾರವನ್ನು ಇನ್ನೊಂದು ನಿಟ್ಟಿನಲ್ಲಿ ಇರಿಸಿದ್ದಾನೆ. ಹಾಗೆ ಇರಿಸಿದ್ದು ಸುವ್ಯವಸ್ಥೆಯಲ್ಲದೆ ಅಂದಚಂದವೂ ಆಗಿದೆ. ಸೃಷ್ಟಿಯೆಲ್ಲ ತಾನೇ ಹುಟ್ಟಿ, ತಾನೇ ಬೆಳೆದು ತಾನೇ ಹಾಳಾಗಿ ಹೋಗಿತ್ತಿರುವಂತೆ ತೋರಿದರೂ, ಅವೆಲ್ಲ ಕಾರ್ಯಗಳು ಕ್ರಮವಾಗಿ ಅಂದಚಂದಗಳನ್ನೇ ತೋರಿಸುತ್ತ ಕಣ್ಮರೆಯಾಗಿ ಹೋಗುವವು. ಹುಟ್ಟಿದರೆ ಚಂದ, ಬೆಳೆದರೆ ಚಂದ, ಹಾಳಾದರೂ ಚಂದವೇ ಹೀಗೆ ಸೃಷ್ಟಿಯೆ ಅಚ್ಚಗಾವಲಾಗಿ ನಿಂತು ಎಲ್ಲವೂ ಅಂದಚಂದವಾಗಿ ಸಾಗುವಂತೆ ವ್ಯವಸ್ಥೆ ಇರಿಸಿದೆ. ಆ ಸೂಚನೆಯನ್ನು ಅರಿತುಕೊಂಡು ನಾವು ನಮ್ಮ ವ್ಯವಹಾರವನ್ನೆಲ್ಲ ಅಂದಚಂದದ ಪದ್ಧತಿಯಲ್ಲಿಯೇ ಸಾಗಿಸಬೇಕಾಗುತ್ತದೆ.

ಸೃಷ್ಟಿಯೆ ಉದ್ದೇಶದ ಹೊಂದಿಕೆ.

ಬಾಳಿನ ಎಲ್ಲ ಕೆಲಸಗಳಲ್ಲಿ ಅಂದಚಂದಗಳು ಮೂಡಿ ಬರುವಂತೆ, ನಮ್ಮ ಸ್ವಭಾವವು ಹೊಂದಿಕೊಂಡರೆ ಸೃಷ್ಟಿಯ ಮಹಾಯಂತ್ರಕ್ಕೆ ಜೋಡಿಸಿದ ಸಣ್ಣಯಂತ್ರದಂತೆ ನಾವಾಗುತ್ತೇವೆ. ಹಾಗೆ ಆಗುವದರಿಂದ ಜೀವನವು ಹಗುರಾಗುವುದು; ತೀವ್ರವಾಗಿ ಏಳಿಗೆಯ ದಾರಿಯಲ್ಲಿ ಸಾಗುವೆವು. ರಾತ್ರಿ ಕತ್ತಲು ಕವಿಯುತ್ತದೆ. ಅದನ್ನು ಕಂಡು ಮನುಷ್ಯನು ಮೊದಲು ಕಂಗೆಡುವನು. ಮನೆಯಿಂದ ಹೊರಬೀಳುವುದಕ್ಕೆ ಹೆದರುವನು. ಗಟ್ಟಿ ಜೀವ ಮಾಡಿ ಹೊರಗೆ ಬಂದರೆ ಸರಿಕರಾರೂ ಕಾಣುವದಿಲ್ಲ. ಆದ್ದರಿಂದ ಈಗ ಮಲಗಿಕೊಳ್ಳುವುದೇ ತನ್ನ ಕೆಲಸವೆಂದು ಅವನು ತಿಳಕೊಳ್ಳುವನು. ಹಾಗೆ ತಿಳಕೊಂಡರೂ ಮಲಗಿಕೊಳ್ಳದಿದ್ದರೆ ಗೂಗೆಯೂ ಘೂತ್ಕರಿಸಿ ಅಂಜಿಸುವದು. ಅವೆಷ್ಟೋ ಇರುಳು ಹಕ್ಕಿಗಳು ಕೂಗಿ ಎಚ್ಚರಿದ್ದವನನ್ನು ಗಾಬರಿಗೊಳಿಸುವವು. ರಾತ್ರಿಯು ನಿದ್ರೆಕಾಲವೆಂದು ತಿಳಕೊಂಡವನು ಹಗಲು ಉದ್ಯೋಗದ ಕಾಲವೆಂದು ತಿಳಕೊಳ್ಳಲಿಕ್ಕೆ ತಡವಾಗುವದಿಲ್ಲ. ಆದರೆ ನಿದ್ರೆಯಿಂದ ಏಳುವುದು ಯಾವಾಗ? ಹಕ್ಕಿಗಳು ಚಿಲಿಪಿಲಿಗುಟ್ಟುವವು. ಕೋಳಿ ಕೂಗುವದು. ಮೂಡಲು ಹರಿಯುವದು. ಕೂಸುಗಳು ಎಚ್ಚತ್ತು ಕೈಕಾಲು ಬಿಚ್ಚಿ ಆಡತೊಡಗುವವು. ಮೊಗ್ಗೆಗಳೆಲ್ಲ ಕಣ್ಣು ತೆರೆದಿರುವವು. ಮುದುಕರು ಕೆಮ್ಮುತ್ತ ಕೇಕರಿಸುತ್ತ ಕುಳಿತಿರುವರು. ಇವೆಲ್ಲ ಲಕ್ಷಣಗಳು ಹಾಸಿಗೆ ಬಿಟ್ಟು ಏಳಲಿಕ್ಕೆ ತಿಳಿಸುವವು. ಆಗಲೂ ಮಲಗಿಕೊಂಡರೆ ಸೃಷ್ಟಿಯ ಹೊಂದಿಕೆ ತುಸು ತಪ್ಪಿದಂತೆಯೇ ಸೈ. ಎಚ್ಚರಿದ್ದು ಕೆಲಸ ಮಾಡಬೇಕಾದ ವೇಳೆಯನ್ನು ನಿದ್ರೆಯಲ್ಲಿ ಕಳಕೊಂಡವನು ತನ್ನ ಆಯುಷ್ಯ ಕಳಕೊಂಡಂತೆಯೇ ಸರಿ. ಕಳೆದು ಹೋದ ಆಯುಷ್ಯವೆಂದರೆ ಕಡಿಮೆಯಾದ ಆಯುಷ್ಯವೇ ಅಲ್ಲವೇ? ಆಯುಷ್ಯ ಕಡಿಮೆಯಾಯಿತು, ಅದರಿಂದ ದುಡಿಮೆ ಕಡಿಮೆ ಆಯಿತು; ಕಡಿಮೆಯಾದ ದುಡಿಮೆಯಾದ ದುಡಿಮೆಗೆ ಪ್ರತಿಫಲವೂ ಕಡಿಮೆ; ಪ್ರತಿಫಲವೂ ಕಡಿಮೆಯಾದ ಮೇಲೆ ಯಶಸ್ಸೂ ಕಡಿಮೆಯೇ. ಹೀಗೆ ಸೃಷ್ಟಿಯ ಹೊಂದಿಕೆ ತುಸು ತಪ್ಪಿತೆಂದರೂ ಅದರಿಂದ ಆಯುಷ್ಯ, ಪ್ರತಿಫಲ, ಯಶಸ್ಸು ಕಡಿಮೆಯಾದವು. ಅವುಗಳನ್ನು ತುಂಬಿ ತರಲಿಕ್ಕೆ ಇನ್ನೊಂದು ಜನ್ಮವೇ ಬೇಕು. ಒಂದೇ ಜನ್ಮದಲ್ಲಿ ಸಾಧಿಸಿ ಕೊಡಬೇಕೆಂದು ಸೃಷ್ಟಿಯು ನಿಶ್ಚಯಿಸಿಕೊಂಡಿದ್ದರೂ, ಮನುಷ್ಯನು ತನ್ನ ಎಚ್ಚರಗೇಡಿತನದಿಂದ ಎರಡು ಜನ್ಮಗಳು ಬೇಕೆಂದು ಕೇಳಲಿಕ್ಕೆ ನಿಲ್ಲುವನು. ಒಂದು ದಿವಸದ ಕೂಲಿಗೆ ಎರಡು ದಿನ ದುಡಿಯುವ ಪೆದ್ದನಂತೆ. ಆದ್ದರಿಂದ ಸೃಷ್ಟಿಯ ಉದ್ದೇಶವನ್ನು ಹೊಂದಿಕೊಳ್ಳುವುದು ತೀರ ಅವಶ್ಯವಾಗಿದೆ. ಹೊರಗೆ ಸುಡುಸುಡುವ ಬಿಸಿಲು ಸುರಿದಿರುವಾಗ ನೆರಳಲ್ಲಿ ವಿಶ್ರಾಂತಿ ಪಡೆಯೆನ್ನುವುದೇ ಸೃಷ್ಟಿಯ ಸೂಚನೆ ಆಗಿರಲಾರದೇ? ಸೃಷ್ಟಿಯೊಂದಿಗೆ ಹೊಂದಿಕೊಳ್ಳುವ ದೃಷ್ಟಿ ಬಂದವನ ಕೆಲಸ ಕಾರ್ಯಗಳೆಲ್ಲ ಅಂದಚಂದವಾಗಿ ಸಾಗುತ್ತವೆ. ಅವನ ಮಾತು ಕತೆಗಳೆಲ್ಲ ಸವಿ ಸವಿ ರಸದ ತುತ್ತುಗಳೇ ಆಗಿರುತ್ತವೆ. ಮಾತು ಬಲ್ಲವನು ಮಾಣಿಕ ತರುವನು.

ಸೃಷ್ಟಿಯ ಕಾರ್ಯ ಓರಣವುಳ್ಳದ್ದು.

ಮರದ ತುದಿಯು ಮೊಳೆತು, ಚಿಗುರಿ, ಎಲೆಯಾಗುವ ಕ್ರಮವು ಸಾಗಿಯೆ ಸಾಗಿದೆ. ಅದಕ್ಕೆ ಒಂದು ಕ್ಷಣ ಸಹ ವಿಶ್ರಾಂತಿಯಿಲ್ಲ; ಎಷ್ಟು ದುಡಿದರೂ ಅದಕ್ಕೆ ದಣಿವಿಲ್ಲ ಎಷ್ಟು ದಣಿದರೂ ಅದಕ್ಕೆ ಬೇಸರವಿಲ್ಲ. ಎಷ್ಟು ಬೇಸತ್ತರೂ ಅದು ಅಡ್ಡತಿಡ್ಡ ಕೆಲಸ ಮಾಡದು. ಕೈಸೋತು ಎಲೆಯ ಆಕಾರ ತಪ್ಪುವದಿಲ್ಲ. ಬಣ್ಣ ಬೇರೆಯಾಗುವದಿಲ್ಲ. ಕ್ರಮ ತಪ್ಪುವದಿಲ್ಲ. ಹುಣಿಸೆ, ಬೇವು, ಜಾಲಿ ಮೊದಲಾದ ಸಂಯುಕ್ತ ಪತ್ರೆಗಳುಳ್ಳ ಎಲೆಗಳನ್ನು ನೋಡಿರಿ. ಅವುಗಳಲ್ಲಿ ಕ್ರಮ, ಹೊಂದಿಕೆ, ಎಣಿಕೆ, ಬಣ್ಣ, ಬೆಡಗು ಎಲ್ಲವೂ ಸರಿಯಾಗಿಯೇ ಹೊರಬೀಳುತ್ತವೆ. ಸೆಗಣಿ, ಕೊಳಚಿ, ರೊಜ್ಜು ಒತ್ತಟ್ಟಿಗೆ ಬಿದ್ದರೆ ಅವೆಲ್ಲ ತನ್ನಿಂದ ತಾನೇ ಶುದ್ಧವಾಗುವಂತೆಯೇ ಏರ್ಪಾಡು ನಡೆದಿರುತ್ತದೆ. ಹೇಗೆಂದರೆ – ಗಾಳಿ ದುರ್ಗಂಧವನ್ನು ಹಾರಿಸಿಕೊಂದು ಒಯ್ಯುತ್ತದೆ. ಉಳಿದ ಚರಟನ್ನು ನೆಲವು ತನ್ನೊಳಗೆ ಎಳೆದುಕೊಂಡು ಅದನ್ನು ಒಳ್ಳೆಯ ಮಣ್ಣು ಮಾಡುವ ಸಿದ್ಧತೆಯನ್ನೇ ನಡೆಸಿರುತ್ತದೆ. ಒಂದು ಮಾವಿನ ಬೀಜವನ್ನೇ ತಕ್ಕೊಳ್ಳಿರಿ. ಅದರ ಮೊಳಕೆಯ ಜೋಪಾನವು ಅದೆಷ್ಟು ಜಾಗ್ರತೆಯಿಂದ ಮಾಡಲಾಗುತ್ತದೆ! ಆ ಮೊಳಕೆ ಅಚ್ಚಳಿಯದಂತೆ ಕಾಪಾಡಿಕೊಳ್ಳುವ ಅನುಕೂಲತೆಯನ್ನು ಕಂಡು ನಮಗೆ ಆಶ್ಚರ್ಯವಾಗದೆ ಇರುವದಿಲ್ಲ. ಮೊಳಕೆ ಚಿಗಿಯತೊಡಗಿದ ಕ್ಷಣವು ಒದಗಿದ ಕೂಡಲೇ ಬಿಚ್ಚಿಯುಂಡು ಬದುಕಲೆಂದು, ಮೊಳಕೆಯ ಹೆಗಲಿಗೆ ಎರಡು ಬುತ್ತಿಯ ಗಂಟುಗಳು ಇರುತ್ತದೆ. ಮೊಳಕೆ, ಬುತ್ತಿಯ ಗಂಟು ಇವು ಸುರಕ್ಷಿತವಾಗಿ ಉಳುದುಕೊಳ್ಳುವುದಕ್ಕೆ ಬೀಜದ ಮೇಲೆ ಬಿರುಸಾದ ಹೊದಿಕೆ ಇರುತ್ತದೆ. ಆ ಹೊದಿಕೆಯ ಮೇಲೆ ದಟ್ಟವಾಗಿ ಹಬ್ಬಿರುವ ಜುಬ್ಬರ. ಆ ಜುಬ್ಬರದ ದಟ್ಟಣೆಯಲ್ಲಿ ಹೊದಿಕೆಯನ್ನು ಬಿಡಿಸುವ ದಾರಿಯೂ ಕಾಣಿಸುವದಿಲ್ಲ. ಅಲ್ಲದವರ ಕೈಗೆ ಆ ವಸ್ತುವು ಬಿದ್ದು ಹಾಳಾಗಬಾರದೆಂದು ಸೃಷ್ಟಿಯು ಅದನ್ನು ಭದ್ರವಾಗಿಯೂ ಚೆಲುವಾಗುಯೂ ಇರಿಸಿ, ಮಾದರಿಯ ಕೃತಿಯನ್ನಾಗಿರಿಸಿ ನಮ್ಮ ಮುಂದೆ ಇರಿಸಿದೆ.

ಅನುಕರಣವು ಮಾತು ಕೃತಿಗಳಲ್ಲಿ.

ಅಚ್ಚುಕಟ್ಟು ಎನ್ನಿರಿ, ಅಂದಚಂದ ಎನ್ನಿರಿ ಅದು ನಮ್ಮ ಜೀವನದಲ್ಲಿ ಪವಣಿಸಿಕೊಳ್ಳಬೇಕು. ಇಡಿಯ ಆಯುಷ್ಯವನ್ನೆಲ್ಲ ವ್ಯಾಪಿಸಬೇಕು. ನಾವು ಮಾಡಿದ್ದೆಲ್ಲವೂ ಅಚ್ಚುಕಟ್ಟಾಗಿರಬೇಕು. ಆಡಿದುದೆಲ್ಲವೂ ಅಂದಚಂದವಾಗಿರಬೇಕು. ಮೂಗಿನೊಳಗಿರಬೇಕಾದ ಮೂಗುತಿಯನ್ನು ಕಿವಿಗೆ ಹಾಕಿದರೆ, ಇಲ್ಲವೆ ಕಿವಿಯಲ್ಲಿರಬೇಕಾದ ಬೆಂಡೋಲೆಯನ್ನು ಮೂಗಿಗೆ ಹಾಕಿದರೆ ಚಂದ ಕಾಣಿಸಲಾರದು. ಚಂದ ಕಾಣದಿದ್ದರೆ ಬಿಡಲಿ ಚಂದಗೇಡಿಯಾಗಿ ತೋರಬಾರದು. ತೋರಲಿಯೆಂದರೆ ಅಂಥವರನ್ನು ಜನರು ಹುಚ್ಚರೆನ್ನದೆ ಇರಲಾರರು. ನಮ್ಮ ಮನೆಯೊಳಗಿನ ಅಕ್ಕ ತಾಯಂದಿರು ಹಿಂದಿನ ಕಾಲದಲ್ಲಿ ಬೀಸುವ ಕಲ್ಲಿನ ಹಾಡುಗಳನ್ನೆಷ್ಟೋ ಹಾಡಿದ್ದಾರೆ. ಅವರು ಕವಿಗಳಲ್ಲ, ಕಲಿತವರೂ ಅಲ್ಲ. ವಿದ್ವಾಂಸರ ಇಲ್ಲವೆ ಪಂಡಿತರ ಮನೆತನದವರೂ ಅಲ್ಲ. ಅವರು ಗಂಡಸರ ಕೆಲಸದಲ್ಲಿ ಸಹಕಾರಿಗಳಾಗುತ್ತ ಮನೆ-ಮಕ್ಕಳನ್ನು ನೋಡಿಕೊಳ್ಳುವ ಸಾಮಾನ್ಯ ಹೆಂಗಸರು. ಅವರ ಹಾಡಿನಲ್ಲಿ ಕಂಡು ಬರುವ ಅಚ್ಚುಕಟ್ಟುತನವನ್ನಾಗಲಿ, ಅಂದಚಂದವನ್ನಾಗಲಿ ಇಂದು ನಾವು ಅಭ್ಯಾಸ ಮಾಡುವಂತಿದೆ. ಚೊಕ್ಕವಾದ ವಿಚಾರ, ಚಿಕ್ಕವಾದ ಮಾತು, ಉಚಿತವಾದ ವಿಚಾರ, ಖಚಿತವಾದ ಸಂಗತಿ ಇವುಗಳನ್ನು ಕಂಡವರು ಆ ಹಾಡುಗಳಿಗೆ ಮರುಳಾಗದೆ ಇರಲಾರರು. ಲೆಕ್ಕಕ್ಕೆ ಸಿಲುಕದ ಆ ಅಸಂಖ್ಯ ಹಾಡುಗಳಲ್ಲಿ ಒಂದೆರಡನ್ನು ಮಾತ್ರ ನಾನಿಲ್ಲಿ ಉದಾಹರಿಸುತ್ತೇನೆ. ಅವಷ್ಟನ್ನೇ ನಾವು ಲಕ್ಷ್ಯವಿಟ್ಟು ಅಭ್ಯಸಿಸಿದರೆ ಆ ಮಾತುಗಳಲ್ಲಿರುವ ಅಚ್ಚುಕಟ್ಟುತನವೂ ಅಂದಚಂದವೂ ಕಂಡು ಬರುತ್ತವೆ. ಆ ಬಳಿಕ ಅದೇ ದೃಷ್ಟಿಯಿಂದ ಹಲವು ಹಾಡುಗಳನ್ನು ಅಭ್ಯಾಸ ಮಾಡುವುದಕ್ಕೆ ಅನುಕೂಲವಾಗುತ್ತದೆ.

ಹೆಸರೀಗಿ ರಬಕವಿ ಮೊಸರೀಗಿ ನೀರಿಲ್ಲ
ಕೂಸಲದ ನಿಂಬಿ ಬರಿಗೊಡ| ಬಾಲ್ಯಾರು|
ಉಸ್ಸೆಂದು ಭಾವಿ ಇಳಿದಾರ||
ಛಂದಕ್ಕ ನಿಂಬರಗಿ ಗಂಧಕ್ಕ ನೀರಿಲ್ಲ
ಟೆಂಗಿನ ಪರಟ ಬರಿಗೋಡ| ಬಾಲೇರ|
ರಂಬ್ಯಾರ ಜಗಳ ವರತ್ಯಾಗ||

ಈ ಎರಡು ಹಾಡುಗಳಲ್ಲಿ ಒಂದು ಇನ್ನೊಂದಕ್ಕೆ ಉತ್ತರದಂತಿದೆ. ರಬಕವಿಯ ಹುಡುಗೆಯನ್ನು ನಿಂಬೆರಗಿಗೂ, ನಿಂಬೆರಗಿಯ ಹುಡುಗೆಯನ್ನು ರಬಕವಿಗೂ ಕೊಟ್ಟಿತೆಂದು ತೋರುತ್ತದೆ. ನಿಂಬೆರಗಿಯ ಹುಡುಗೆಯು ರಬಕವಿಯನ್ನೂ, ರಬಕವಿಯ ಹುಡುಗಿಯು ನಿಂಬೆರಗಿಯನ್ನೂ ಮೂದಲಿಸುತ್ತಾಳೆ. ರಬಕವಿಯು ಬೆಲೆಯುಳ್ಳ ಸೀರೆಗಳಿಗೆ ಜನ್ಮಸ್ಥಳ. ಅಲ್ಲಿಯ ಜನರ ಗಳಿಕೆ ಹೆಚ್ಚು. ಅವರು ಹಾಲು ಮೊಸರು ತಿಂದುಂಡು ಸುಖವಾಗಿರುವರು. ಒಳ್ಳೆಯ ಅರಿವೆಗಳನ್ನು ಉಟ್ಟುತೊಟ್ಟು ಸಿಂಗಾರವಾಗುವವರು, ಅದರಂತೆ ನಿಂಬೆರಗಿ ರಾಮದೇವರ ಜಾತ್ರೆಗೆ ಪ್ರಸಿದ್ಧವಾದ ಊರು. ದೇವರು ಜಾಗ್ರತವಾಗಿದ್ದಾನೆ. ಎಲ್ಲ ಜಾತಿಯವರೂ ಗ್ರಾಮ ದೇವತೆಗೆ ನಡಕೊಳ್ಳುವವರು. ಸಂಸಾರದ ಜಂಜಾಟಗಳೇನಿದ್ದರೂ ವಿಸ್ತಾರವಾದ ಪೌಳಿಗಳುಳ್ಳ ದೇವಾಲಯಕ್ಕೆ ಹಳ್ಳದಾಟಿ ಹೋಗಿ, ದರ್ಶನ ತಕ್ಕೊಂಡು ಬಂದರೆ ಮನಸ್ಸಿಗೆ ತುಂಬ ಸಮಾಧಾನವಾಗುವದು. ಹೀಗೆ ಅವೆರಡು ಊರುಗಳು ತಂತಮ್ಮ ರೀತಿಯಲ್ಲಿ ಸೊಗಸಾದ ಸುಖಕರವಾದ ಊರುಗಳೇ ಸರಿ. ಆದರೆ ಆ ಊರುಗಳಿಗೆ ನೀರಿನ ಕೊರತೆ ಒಂದೊಷ್ಟು ಆಗಾಗ ತಲೆದೂರುತ್ತದೆ. ಆಗ ನೀರಿನ ಬವಣೆಯಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳೇ ಸಿಕ್ಕು ಕಷ್ಟಪಡುವವರು. ಅದರಲ್ಲಿಯೂ ಸೊಸೆಯರಾಗಿ ಬಂದ ಹೆಣ್ಣುಮಕ್ಕಳಿಗಂತೂ ಆ ತೊಂದರೆಯು ಅತಿಶಯವಾಗಿ ತೊಳಲಿಸುವದು. ಆ ಅನುಭವವು ರಬಕವಿ ನಿಂಬರಗಿ ಎರಡೂ ಊರುಗಳ ಸೊಸೆಯಂದಿರಿಗೆ ತುಂಬ ಬಂದಿದೆ. ಬಂದ ತೊಂದರೆಯನ್ನು ಎಲ್ಲರೂ ಸರಿಯಾಗಿ ಹಂಚಿಕೊಂಡಿದ್ದರೆ ತುಸು ಹಗುರೂ ಆಗಬಹುದಿತ್ತು. ಆದರೆ ಸೊಸೆಯಂದಿರಿಗೆ ಉಳಿದುದರಲ್ಲಿ ಪಾಲು ಎಷ್ಟೇ ಬಂದರೂ, ನೀರಿನ ತೊಂದರೆಯಲ್ಲಿ ಮಾತ್ರ ದಟ್ಟ ಪಾಲು ಅವರೆಗೆ ಬರುತ್ತಿರುವದುಂಟು. ಆ ದಟ್ಟ ಪಾಲು ಬಂತೆಂದು ಅವರಿಗೆ ಹಿಗ್ಗು ಆಗದೆ, ಸಿಟ್ಟೇ ಬರುವುದು ಸ್ವಾಭಾವಿಕ. ಒಳಗಿಂದೊಳಗೆ ಕುದಿ ಕುದಿಯುವ ಆ ಹೆಣ್ಣುಮಕ್ಕಳು ತಂತಮ್ಮ ಹೊಟ್ಟೆಯೊಳಗಿನ ಸಿಟ್ಟನ್ನೆಲ್ಲ ಮಾತಿನ ಕಿಡಿಗಳ ರೊಪದಿಂದ ಹೊರಗೆ ಹಾಕಿಬಿಡುತ್ತಾರೆ. ಒಳ್ಳೆಯ ಸೀರೆಗಳಿಗೆ ರಬಕವಿಯು ಹೆಸರಾಗಿದೆ. ಅಹುದು. ಆದರೆ ಬೆಳಗು ಮುಂಜಾನೆ ಮೊಸರು ಕಡೆದು ಮಜ್ಜಿಗೆ ಮಾಡುವಾಗ ಬೆರೆಸುವುದಕ್ಕೆ ತಂಬಿಗೆ ನೀರು ಸಹ ಇರುವದಿಲ್ಲ. ತರುವುದಕ್ಕೆ ಮೈಲು ದೂರವಿರುವ ಸವಳು ನೀರಿನ ಭಾವಿಗೆ ಹೋಗಬೇಕು! ಬೆಲೆಯುಳ್ಳ ಸೀರೆಯುಟ್ಟುಕೊಳ್ಳುವ ಬಾಲೆಯರಿಗೆ ಒಳ್ಳೆಯ ಕುಸಲದ ಅರಿವೆಯೇ ಸಿಂಬಿಗೆ ಸಿಕ್ಕುತ್ತದೆ ದೊಡ್ಡದೊಂದು ತಾಮ್ರದ ಕೊಡವಾಯಿತು; ಸಿಂಗಾರದ ಸಿಂಬಿಯರಿವೆಯಾಯಿತು ಆದರೆ ಭಾವಿಯಲ್ಲಿ ನೀರೆ ಸಿಗದು. ಆಳವಾದ ಭಾವಿಯಲ್ಲಿ ಸಾಲಾಗಿ ಇಳಿದು ಹೋಗಿ ನೀರು ತುಂಬಿಕೊಂಡು ಮೇಲೇರುವ ಶ್ರಮದ ನೆನಪು ಬಂದು ಉಸ್ಸೆಂದು ಭಾವಿ ಇಳಿಯುವುದು ಸಹಜವಾಗಿದೆ. ಅದರಂತೆ ನಿಂಬರಗಿಯಲ್ಲಿ ನೀರು ತರುವುದು ಊರು ಮುಂದಿನ ಹಳ್ಳದಿಂದ ಹಳ್ಳ ಹರಿಗಡಿದಿರುವದು. ವರ್ತಿಯೊಳಗಿನ ನೀರನ್ನು ಪರಟೆಯಿಂದ ಕೊಡದಲ್ಲಿ ಹಾಕಿಕೊಂಡು ತರಬೇಕಾಗುವದು. ಒಮ್ಮೊಮ್ಮೆ ದೇವರ ಪೂಜೆಗೆ ಗಂಧ ತೆಯ್ದೇನೆಂದರೆ ತೊಟ್ಟು ನೀರಿರುವದಿಲ್ಲ. ಚಂದವಾದ ಜಾತ್ರೆಯಾಗುವದೆಂದು ನಿಂಬೆರಗಿಯು ಹೆಸರು ಪಡೆದಿರಬಹುದು. ದೇವರಿಗೆ ಭಕ್ತರು ಒಡೆಸಿದ ತೆಂಗಿನ ಪರಟೆಗಳು ಕೈಕಾಲಿಗೆ ಬಿದ್ದಿರಬಹುದು. ವರ್ತಿಯ ನೀರು ತುಂಬುವುದಕ್ಕೆ ಬೊಗಸೆಗಿಂತ ಪರಟೆಯ ಅನುಕೂಲತೆ ಹೆಚ್ಚು. ಅದನ್ನು ಹುಡುಕುವ ಕಾರಣವೇ ಇರದು. ಹಳ್ಳದ ದಂಡೆಯಮೇಲೆ ನೀರಿಗೆಂದು ಬಂದ ಎಳೆವಯಸ್ಸಿನ ಬಾಲೆಯರು ಪಾಳಿಹಚ್ಚಿ ನಿಂತಾಗ ನೀರಾಟವಾಡಬಂದ ರಂಭೆಯರಂತೆ ತೋರಿದರೆ ಆಶ್ಚರ್ಯವೇನೂ ಇಲ್ಲ. ಆದರೆ ಆ ರಂಭೆಯರ ಆಟಿಗಗಳೆಂದರೆ ಒಡಕು ಪರಟೆ; ನೀರಿಲ್ಲದ ಬರಿಗೊಡ! ನೀರಿಲ್ಲದ ವರ್ತೆಯೇ ಅವರಿಗೆ ಜಲಾಶಯ. ನೀರಿನ ಪಾಳಿಗಾಗಿ ಜಗಳವಾಡುವದೇ ಆ ರಂಭೆಯರ ನೀರಾಟ! – ಹೀಗೆ ಈ ಹಾಡುಗಳಲ್ಲಿರುವ ಉಚಿತವಾದ ಮಾತು, ಉಚಿತವಾದ ಸಂಗತಿ ಇವುಗಳನ್ನು ಸಹಜವಾಗಿ ಗುರುತಿಸಬಹುದಾಗಿದೆ. ಮಾತಿನಲ್ಲಿ ಅಂದಚಂದವನ್ನು ಕಾಣುವಂತೆ ಕೃತಿಗಳಲ್ಲಿಯೂ ಅಂದಚಂದವನ್ನು ತೋರಿಸಿಕೊಡುವ ಉದಾಹರಣೆಗಳು ಹೇರಳವಾಗಿ ಕಣ್ಣಿಗೆ ಬೀಳುತ್ತವೆ.

ಕೈಮುಟ್ಟ ಮಾಡು.

ಯಾವ ಕೆಲಸವನ್ನು ಮಾಡಿದರೂ ಅದು ಅಂದಚಂದವಾಗಿರಬೇಕು. ಹಾಯ್ದು ಹೋದವನ ಹೆಜ್ಜೆ ಮೂಡುತ್ತವೆ. ದನ ಹಾಯ್ದಾಡಿದ್ದರೆ ಅಲ್ಲಿ ದಗ್ಗುದುಳಿದಂತೆ ಕಾಣಿಸುತ್ತದೆ; ಕೋಣಗಳು ಕಾದಾಡಿದ್ದರೆ ತೊತ್ತಳದುಳಿದಂತೆ ತೋರುತ್ತದೆ. ಅದರಂತೆ ಕತ್ತೆ ಉರುಳಾಡಿ ಹೋದ ಚಿಹ್ನವೂ ಮೂಡಿರುತ್ತದೆ; ಹಾವು ಚೇಳು ಹರಿದಾಡಿದರೆ ಅಲ್ಲೊಂದು ಹೆಜ್ಜೆ ಚಿತ್ರಿತವಾಗಿರುತ್ತದೆ. ಅದರಂತೆ ಮನುಷ್ಯನು ಮಾಡಿದ ಕೃತಿಗೆ ಅಲ್ಲೊಂದು ಲಕ್ಷಣ ಕಂಡು ಬರುತ್ತದೆ. ವಸ್ತುವು ಇಟ್ಟಿದ್ದೋ ಒಗೆದದ್ದೋ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ ಮಾಡಿದ್ದು ಸುಂದರವಾಗಿರಬೇಕು. ಅದು ಅಚ್ಚುಕಟ್ಟಾಗಿರಬೇಕು. ಹಾಗಾಗಬೇಕಾದರೆ ಕೈಮುಟ್ಟ ಮಾಡುತ್ತ ಹೋಗಬೇಕು. ತಾನು ಮಾಡಬೇಕಾದುದನ್ನು ಅನ್ಯರಿಂದ ಮಾಡಿಸುವ ಮೈಗಳ್ಳತನವನ್ನು ಕಳೆದುಕೊಳ್ಳಬೇಕು. “ತಾನು ಭುಂಜಿಸುವ ಊಟ, ತಾನು ಭೋಗಿಸುವ ಕೂಟ ಅನ್ಯರಿಂದ ಮಾಡಿಸಬಹುದೇ?” ಎಂದು ಶ್ರೀಬಸವಣ್ಣನವರು ಕೇಳುತ್ತಾರೆ. ತಾನುಂಡರೇ ತನ್ನ ಹೊಟ್ಟೆ ತುಂಬುತ್ತದೆ; ತೃಪ್ತಿ ತನಗಾಗುತ್ತದೆ. ಅದೆಂಥ ಕುರುಳಿನವನಿದ್ದರೂ ಅವರು ಉಂಡರೆ ತಾನು ಉಂಡಂತೆ ಎಂದಿಗೂ ಆಗಲಾರದು. ತನ್ನ ಹಸಿವೆಯು ತಾನು ಉಂಡಾಗಲೇ ಸಾರ್ಥಕವಾಗುತ್ತದೆ. ತನ್ನ ಬಾಯಳತೆಗೆ ತಕ್ಕಂತೆ ತನ್ನ ಕೈಯೇ ಸರಿಯಾದ ತುತ್ತು ನೀಡುತ್ತದೆ. ಅಂತೆಯೇ ತಾನು ಮಾಡಿದ್ದು ಉತ್ತಮವೆಂದು ಹಿರಿಯರು ಹೇಳುತ್ತ ಬಂದಿದ್ದಾರೆ. ಮಗನು ಮಾಡಿದರೆ ಮಧ್ಯಮವಾಗುವದೆಂದೂ ಆಳು ಮಾಡಿದರೆ ಹಾಳು ಆಗುವದೆಂದೂ ಮನಗಂಡಿದ್ದಾರೆ. ಮಾಡಿದ ಕೆಲಸವು ಅಂದಚಂದವಾಗಿದ್ದರೆ ಅದು ಸಾಧನವಾಗುತ್ತದೆ; ಅಚ್ಚುಕಟ್ಟಾಗಿದ್ದರೆ ಯೋಗವಾಗುತ್ತದೆ.

ಕ್ರಮವರಿತು ಕೆಲಸ ಮಾಡು.

ಕೈಯಿಂದ ಮಾಡುತ್ತ ಹೋದರೆ ತೀರದು. ಮಾಡುವುದನ್ನು ಕ್ರಮದಿಂದ ಮಾಡುವುದನ್ನೂ ಅಭ್ಯಸಿಸಬೇಕಾಗುತ್ತದೆ. ಕಡಲೆಬೇಳೆಯನ್ನು ನುಣ್ಣಗೆ ಕುದಿಸಿ, ಬಳಿಕ ಬೆಲ್ಲದೊಡನೆ ಬೆರೆಸಿ ಅರೆದರೆ ಹೂರಣವಾಗುತ್ತದೆ. ಆದರೆ ಈ ಕ್ರಮವನ್ನು ಬಿಟ್ಟು ಬೆಲ್ಲವನ್ನೂ ಕಡಲೇಬೇಳೆಯೊಂದಿಗೆ ಮೊದಲು ಅರೆದು ಆಮೇಲೆ ಕುದಿಸಿದರೆ ಅದೆಂಥ ಹೂರಣವಾದೀತು. ಕುದಿಸುವುದೂ, ಬೆಲ್ಲ-ಬೆರೆಸುವದೂ, ಅರೆಯುವುದೂ, ಈ ಎಲ್ಲ ಕ್ರಿಯೆಗಳೆಲ್ಲ ಅದರಲ್ಲಿ ಒಳಗೊಂಡಿದ್ದರೂ ಕ್ರಮವೊಂದು ಇಲ್ಲದ್ದರಿಂದ ಅದು ಸರಿಯಾದ ಹೂರಣವಾಗಲಾರದು. ಕೃತಿಗೆ ಕ್ರಮವು ಜೋಡಣೆಗೊಂಡರೆ ಅಂದಚಂದವಾದ ವಸ್ತುವು ನಿರ್ಮಾಣವಾಗುತ್ತದೆ. ನಮ್ಮ ಕೃತಿಯು ಕ್ರಮಗೊಂಡು ಸಾಗಬೇಕಾದರೆ ನಮ್ಮ ವಸ್ತು ಒಡವೆಗಳಾಗಲಿ ಉಪಕರಣವಾಗಲಿ ನಿಯಮಿತ ಸ್ಥಳದಲ್ಲಿ ಇರತಕ್ಕದ್ದು. ಕೆಲವರಿಗೆ ತಾವು ಉಪಯೋಗಿಸುವ ವಸ್ತುಗಳನ್ನು ಸ್ವಚ್ಛಗೊಳಿಸುವ ಕಲೆಯೂ ತಿಳಿದಿರುತ್ತದೆ. ಆದರೆ ಅದರೊಡನೆ ಸ್ವಚ್ಛವಾಗಿರಿಸಿಕೊಳ್ಳುವ ಕಲೆಯೂ ಅದಕ್ಕಿಂತ ಮೊದಲು ತಿಳಿಯಬೇಕಾಗಿರುತ್ತದೆ. ಸ್ವಚ್ಛವಾಗಿರಿಸಿಕೊಳ್ಳುವ ಒಲವಿನಿಂದ ಸ್ವಚ್ಛಮಾಡಿಕೊಳ್ಳುವುದಕ್ಕೆ ಬೇಕಾಗುವ ಶ್ರಮವು ಕಡಿಮೆ ಹತ್ತುತ್ತದೆ. ಒಮ್ಮೆ ಒಬ್ಬ ಕಲೆಗಾರನ ಬಳಿಯಲ್ಲಿ ಕುಳಿತು, ಕೆಲಸವನ್ನು ಹೇಳಿಕೊಡೆಂದು ಕೇಳಿದರೆ, ಅವನು- “ಉಪಯೋಗಕ್ಕೆ ತಕ್ಕೊಂಡ ವಸ್ತುವನ್ನು ಮೊದಲಿದ್ದ ಸ್ಥಳದಲ್ಲಿಯೇ ಅದನ್ನಿಡುವ ರೂಢಿ ಮಾಡುವುದೇ ಮೊದಲನೇ ಪಾಠ” ಎಂದು ಹೇಳಿದ್ದು, ನನಗೆಂದೂ ಮರೆವಾಗಲಾರದು. ಇನ್ನೊಬ್ಬರು ಕೀಲಿ ಹಾಕಿದ ತಮ್ಮ ಮನೆಯೊಳಗಿನ ಒಂದು ಔಷಧಿಯ ಪುಡಿಯನ್ನು ತರಿಸಿಕೊಳ್ಳುವುದಕ್ಕೆ ಒಂದು ಮಗುವಿನ ಕೈಯಲ್ಲಿ ಕೀಲಿ ಕೊಟ್ಟು,- “ಕಡೆಯ ಕೋಣೆಯಲ್ಲಿ ಉತ್ತರನಿಟ್ಟಿನ ಕಪಾಟದ ೩ನೇ ಸಾಲಿನಲ್ಲಿ ಹಸುರು ಡಬ್ಬಿಯಲ್ಲಿ ಕರೆ ಕಾಗದಪುಡಿಕೆ ತಕ್ಕೊಂಡು ಬಾ” ಎಂದು ಹೇಳಿದರು. ಆ ಮಗುವು ಅಷ್ಟೊಂದು ಪ್ರಭುದ್ಧವಲ್ಲದಿದ್ದರೂ, ಅದೇ ಪುಡಿಕೆಯನ್ನು ತೆಗೆದುಕೊಂಡು ಬಂದು, ನಮಗೆಲ್ಲ ಆಶ್ಚರ್ಯವನ್ನು ಉಂಟು ಮಾಡಿತು. ಕ್ರಮವರಿತು ಕೆಲಸ ಮಾಡುವವರು, ತಮ್ಮ ವಸ್ತುಗಳನ್ನು ಒಂದು ಕ್ರಮದಿಂದ ಇರಿಸಿಕೊಳ್ಳುವುದರಿಂದ ಇಷ್ಟು ಸುಲಭವಾಗಿ ತುಸುವೇಳೆಯಲ್ಲಿ ಕೆಲಸಮುಗಿದು ಬಿಡುತ್ತವಲ್ಲವೇ? ಅದೇ ಔಷಧಿ ಪುಡಿಯು ಇನ್ನೊಬ್ಬರಲ್ಲಿದ್ದರೆ, ಮನೆಯೊಳಗಿನ ಇದ್ದ ಬದ್ದ ಪೆಟ್ಟಿಗೆಗಳನ್ನೆಲ್ಲ ಬರಿದು ಮಾಡಬೇಕಾಗುತ್ತಿತ್ತು. ಕೈಗೆಸಿಕ್ಕ ಪುಡಿಗಳನ್ನೆಲ್ಲ ಬಿಚ್ಚಿ ಬಿಚ್ಚಿ ನೋಡಿ ತೆಗೆದಿಡುತ್ತ ಹುಡುಕಬೇಕಾಗುತ್ತಿತ್ತು. ಅದರಿಂದ ಕಳೆಯುವ ವೇಳೆಗೆ ಲೆಕ್ಕವಿಲ್ಲ. ಪಡುವ ಶ್ರಮಕ್ಕೆ ಸೀಮೆಯಿಲ್ಲ. ವೇಳೆ-ಶ್ರಮಗಳ ಉಳಿತಾಯವೂ ಒಂದು ಹಿರಿಯ ಲಾಭವೇ ಎಂದು ತಿಳಿಕೊಂಡವರು ಮಾತ್ರ, ಅವುಗಳ ವಿಷಯದಲ್ಲಿ ಎಚ್ಚರಿಕೆಯನ್ನು ತಕ್ಕೊಳ್ಳುತ್ತಾರೆ. ವೇಳೆ ಶ್ರಮಗಳ ಉಳಿತಾಯವೇ ಆಯುಷ್ಯವೃದ್ಧಿಯಲ್ಲವೇ?

ಅಂದಚಂದದ ಕೃತಿಗೆ ಅದರ ಉಪಯೋಗ ರೂಢಿ.

ನಮ್ಮ ಮಾತಿನಲ್ಲಿ ಅಂದಚಂದ ಬರುವುದಕ್ಕೂ, ಕೃತಿಯಲ್ಲಿ ಅಚ್ಚುಕಟ್ಟು ತಲೆದೋರುವದಕ್ಕೂ, ಅದರ ಉಪಯೋಗದ ರೂಢಿ ಬರಬೇಕಾಗಿದೆ. ಅಂದಚಂದಗಳನ್ನು ಹುಟ್ಟಾ ನೋಡಲಾರದವನು, ಅವುಗಳನ್ನು ಬಯಸಲಿಕ್ಕೆ ಸಾಧ್ಯವಿಲ್ಲ. ಬಯಕೆಯಿಲ್ಲದಿದ್ದರೆ ಬಳಸಲು ದೊರೆಯಲಾರದು. “ಮೊಟ್ಟ ಹೊಡೆಯುವವನ ಆಳು ಆಗಬಾರದು; ರೊಟ್ಟಿ ಉಣ್ಣುವವನ ಹೆಂಡತಿಯಾಗಬಾರದು” ಇದೊಂದು ಹಳ್ಳಿಗರ ಅನುಭವದ ಮಾತಿದೆ. ತೋಟದ ಒಡೆಯನೇ ಮೊಟ್ಟೆಹೊಡೆಯಹತ್ತಿದನೆಂದರೆ, ತನ್ನ ತೋಟದ ಕೆಲಸವು ತೃಪ್ತಿಕರವಾಗಿ ಮುಗಿಯಲೆಂದು ಅವನು ಆಶಿಸುವುದು ಸಹಜವಾಗಿದೆ. ತಾನು ಮಾಡುವುದೇ ಉತ್ತಮ ಕೆಲಸವಲ್ಲವೇ? ತನ್ನ ತೋಟದ ಕೆಲಸ; ಮೇಲೆ ತಾನು ಮಾಡುವ ಕೆಲಸ ಇವೆರಡರ ಹೊಂದುವಳಿಯಾಗಿ ಬಿಟ್ಟರೆ ಅಲ್ಲಿ ಆಲಸ್ಯಕ್ಕೆ ಸ್ಥಳವಿಲ್ಲ; ಅಸವಸಿತನಕ್ಕೆ ಆಸರವಿಲ್ಲ. ಹೀಗೆ ಕೆಲಸವು ಯಂತ್ರದಂತೆ ಸಾಗತೊಡಗಿದಾಗ, ನೀರುಣ್ಣಿಸುವ ಆಳಿಗೆ ಗಡಬಡಿಯೇ ಗಡಬಡಿ. ಮೈತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲಕ್ಷ್ಯ ಮಾಡಿದರೆ ತಪ್ಪು ಹೊರಬೀಳುತ್ತದೆ. ಆದ್ದರಿಂದ ಅಂಥ ಆಳಿನ ಕೆಲಸವು ಬಲು ಬಿಗಿಯಾದುದು. ಅದಕ್ಕಿಂತಲೇ ಅಂಥ ಆಳುಗಳು ತಮಗೆ ಬಂದಿರುವ ಅನುಭವವನ್ನೇ ಅಚ್ಚುಕಟ್ಟಾಗಿ ಅಚ್ಚೊತ್ತಿದಂತೆ ಹೇಳಿಕೊಳ್ಳುತ್ತಾರೆ. ಆಳಿನ ಅನುಭವದಂತೆ ಊಟ ಬಲ್ಲವನಾದ ಗಂಡನಿಗೆ ಹೆಂಡತಿಯ ಅನುಭವವೂ ಅದೇ ಪ್ರಕಾರದ್ದಿರುವದು. ಅಟ್ಟುಂಡವನ ಹೆಂಡತಿಯಾಗಬಾರದೆನ್ನುವ ಮಾತಿನಲ್ಲಿಯೂ ಇದೇ ಅರ್ಥವಿದೆ; ಅದರಂತೆ “ಕೈಲಾಗದ ಸೂಳಿ ಅಯ್ಯನ ಕೂಡ ಎದ್ದು ಹೋದಳು” ಎನ್ನುವ ಮಾತು ಸಹ ಅದೇ ಅನುಭವವನ್ನು ಬೇರೊಂದು ವಿಧದಲ್ಲಿ ಬಯಲಿಗಿಡುತ್ತದೆ. ಅಡಿಗೆ ಮಾಡಲಾರದ ಮೈಗಳ್ಳತನ, ಮಾಡಬೇಕೆಂದರೂ ಬರಲಾರದ ವಿದ್ಯ-ಇವೆರಡೂ ಕೂಡಿದ ಕನ್ಯೆಗೆ ಕೈಲಾಗದ ಸೂಳಿಯೆಂದು ಹಿರಿಯರು ಬೈದಿದ್ದಾರೆ. ಅಂಥ ಕನ್ಯೆಯರು ತಿರುಪೆಯವರ ಮನೆಯಲ್ಲಿ ದಕ್ಕುವಂಥವರು. ಇನ್ನು ಅಯ್ಯಗಳ ನೋಡಿರಿ. ಅವರ ಊಟ ಹೊರಗೆ ತಂಬೂರಿ ಮನೆಗೆ ಕರೆದವರ ಮನೆಯಲ್ಲಿ ಉಂಡುಬರುವ ಅಯ್ಯನಿಗೆ ಮನೆಯಲ್ಲಿ ಅಡಿಗೆ ಮಾಡಿದರೂ ಸರಿ, ಮಾಡದಿದ್ದರೂ ಸರಿ. ಹೆಂಡತಿ ಅಡಿಗೆ ತಿಳಿದವಳಿದ್ದರೂ ಅಷ್ಟೇ. ವಿವಿಧ ಊಟಗಳೆಲ್ಲ ಭಕ್ತರೆಂಬವರ ಮನೆಯಲ್ಲಿ ಸಿಕ್ಕು ಬಿಟ್ಟಿರುವದರಿಂದ ಅಯ್ಯನಿಗೆ ಮನೆಯೊಳಗಿನ ಅಡಿಗೆಯನ್ನು ನೋಡುವ ಕಾರಣವೇ ಬೀಳುವುದಿಲ್ಲ. ತಿರುಗಿ ಕೇಳಿದರೆ, ಗಂಡನೊಂದಿಗೆ ಹೆಂಡತಿಗೂ ಒಮ್ಮೊಮ್ಮೆ ಊಟದ ಬಿನ್ನಹ ಬರುವ ಸಂಭವವೇ ಹೆಚ್ಚಿಗಿರುತ್ತದೆ. ಅದು ಇರದಿದ್ದರೆ ಮಠಕ್ಕೆ ಎಡೆತರುವ ಪದ್ಧತಿ ಬರುವಲ್ಲಿ ತಾನಿರುವಲ್ಲಿಯೇ ಅಡಿಗೆ ನಡೆದು ಬರುವದರಿಂದ, ಅಂಥಲ್ಲಿ ಹೆಂಡತಿಯಾದವಳು ಅಡಿಗೆ ಮಾಡಿ ದಣಿಯುವ ಕಾರಣವೂ ಇಲ್ಲ. ಅಡಿಗೆ ಮಾಡುವುದಕ್ಕೆ ತಲೆ ಖರ್ಚು ಮಾಡುವ ಕಾರಣವೂ ಇಲ್ಲ. ಈ ಅನುಕೂಲತೆಯನ್ನು ನೋಡಿಯೇ ಮೇಲೆ ಹೇಳಿದ “ಕೈಲಾಗದ ಸೂಳೆ”ಯೆನಿಸಿಕೊಂಡವಳು ಅಯ್ಯನ ಕೂಡ ಎದ್ದು ಹೋಗಿ ಸುಖಪಡಬೇಕೆನ್ನುತ್ತಾಳೆ. ಹಾಗೆ ಆಕೆ ವಿಚಾರಿಸುವುದು ಸಹಜವೂ ಸ್ವಾಭಾವಿಕವೂ ಆಗಿರುವುದು. ಒಟ್ಟಾರೆ ಒಳ್ಳೆಯ ಅಡಿಗೆಯನ್ನು ತಿಂದುಂಡ ರೂಢಿಯಿದ್ದವನ ಮನೆಯಲ್ಲಿ ಹೆಣ್ಣುಮಕ್ಕಳು ಒಳ್ಳೆಯ ಅಡಿಗೆ ಮಾಡಲು ಬಲ್ಲವರಾಗುವದರಲ್ಲಿ ಸಂಶಯವೇ ಇಲ್ಲ. ನಮ್ಮ ಒಲವುಗಳು ಒಳ್ಳೆಯವಾಗಿದ್ದರೆ, ಪರಿಸ್ಥಿತಿಯೂ ಅದಕ್ಕೆ ಒಪ್ಪುವಂಥದಾಗಿ ನಿರ್ಮಾಣವಾಗುತ್ತದೆ. ಹೇಗಿದ್ದರೂ ಸಾಗಿಸಿಕೊಂಡು ಹೋಗುವ ‘ಸಮಾಧಾನಿ’ಗೆ ಹೇಗೋ ಇದ್ದ ಪರಿಸ್ಥಿತಿಯುಂಟಾಗಿ ಬಿಡುತ್ತದೆ. ಆದ ಕಾರಣ ಅಂದಚಂದವಾಗಲಿ ಅಚ್ಚುಕಟ್ಟುತನವಾಗಲಿ ನಮಗೆ ಅನಿವಾರ್ಯವಾಗಿ ನಿಲ್ಲಬೇಕು. ಆಗ ಅದರಂತೆ ನಮ್ಮವರು ನಡೆಸಿ ಕೊಡುತ್ತಾರೆ; ನಾವೂ ಅದಕ್ಕೆ ಹಾಳತವಾಗುವಂತೆ ನಡಕೊಳ್ಳ ಹತ್ತುತ್ತೇವೆ.

ಅಂದಚಂದಗಳು ಕಂಡಿರಬೇಕು.
ಮನುಷ್ಯನು ಹುಟ್ಟಾ ಅನುಕರಣಪ್ರಿಯನು. ಅಂದರೆ ಇನ್ನೊಂದು ಹೊಸದೇನಾದರೂ ಇದ್ದರೆ ಮಾಡಬೇಕೆನ್ನುವ ಸ್ವಭಾವವುಳ್ಳವನು. ಒಳ್ಳೆಯ ಮಾದರಿಯನ್ನು ಅನುಕರಣ ಮಾಡುವಂತೆ ಕೆಡಕು ಮಾದರಿಯನ್ನು ಒಮ್ಮೊಮ್ಮೆ ಮನುಷ್ಯನು ಮಾಡುವದುಂಟು. ಆದರೆ ಒಳ್ಳೆಯ ಮಾದರಿಯನ್ನು ಅನುಕರಣಮಾಡಬೇಕೆಂದರೆ, ಬಡತನವೊಂದು ಅಡ್ಡಗಾಲು ಹಾಕುವದೆಂದು ಹೇಳಲಾಗುತ್ತದೆ. ಹಾಗೆ ಹೇಳುವುದು ತೀರ ಸುಳ್ಳೇನೂ ಅಲ್ಲ. ಅದರಂತೆ ತುಂಬ ನಿಜವೂ ಅಲ್ಲ. ನಾವು ಬಡತನದಿಂದ ಅರ್ಧ ಅಸ್ತವ್ಯಸ್ತತೆಯನ್ನು ತಂದುಕೊಳ್ಳುವೆವಾದರೆ ಮುಗ್ಗಲಗೇಡಿತನದಿಂದ ಅದರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಸ್ತವ್ಯಸ್ತತೆಯನ್ನು ತಂದುಕೊಳ್ಳುವೆವು. ಹೊಸದಾಗಿ ನೆಂಟತನ ಮಾಡುವ ಮೊದಲು ವಧುವರರ ಮನೆತನದ ಹಿರಿಯರು ಪರಸ್ಪರರು ಮನೆ ನೋಡಲಿಕ್ಕೆ ಹೋಗುವ ರೂಢಿಯಿರುತ್ತದೆಂಬುದನ್ನು ನಾವೆಲ್ಲರೂ ಬಲ್ಲೆವು. ಹಾಗೆ ಮನೆ ನೋಡಲಿಕ್ಕೆ ಬಂದ ಒಂದೊಪ್ಪತ್ತಿನಲ್ಲೆಯೇ ಆ ಮನೆತನದ ಪರಿಸ್ಥಿತಿಯ  ಪರಿಚಯವಾಗಲಿಕ್ಕಿಲ್ಲ; ಅದರಂತೆ ಅದರ ಅಭ್ಯಾಸವೂ ಆಗುತ್ತಿರಲಿಲ್ಲ. ಬಚ್ಚಲೊಂದು ನೋಡಿದರೆ ಆ ಮನೆತನದ ಸಂಸ್ಕೃತಿಯ ನೆಲೆಹತ್ತಿ ಬಿಡುವದು. ಬಚ್ಚಲು ಮನೆಯಲ್ಲಿರಲೇಬೇಕಲ್ಲವೇ? ಮನೆಗೊಂದಿರಬೇಕಾದ ಬಚ್ಚಲು ಮನೆಯ ಅಂಗವಾದಂತೆ ಇರುವುದಲ್ಲವೇ? ಬಚ್ಚಲು ನಿರೀಕ್ಷೆಯಿಂದ ಮನೆತನದ ನಾಡಿ ಪರೀಕ್ಷೆಯೇ ಆಗಿ ಹೋಗುತ್ತದೆ. ಬಚ್ಚಲಲ್ಲಿಟ್ಟ ಹಂಡೆ ಭಾಂಡೆಗಳು, ಮೈಲಿಗೆಯ ಅರಿವೆಗಳು, ಮುಸುರೆಯ ಗಡಿಗೆ, ದುರ್ವಾಸನೆ ಕೊಳಚಿ ಇವುಗಳೆಲ್ಲ ಕೂಡಿ ಆ ಮನೆತನದ ಮಟ್ಟವೆಷ್ಟೆಂಬುದನ್ನು ಎತ್ತಿ ಹೇಳುತ್ತವೆ. “ಮನೆ ನೋಡಾ ಬಡವರದು. ಮನ ನೋಡಾ ದಿವ್ಯ” ಎಂದು ಶಿವಶರಣರ ಮನೆ-ಮನಗಳ ಮಾದರಿಯನ್ನು ಶ್ರೀಬಸವಣ್ಣನವರು ಹಾಕಿಯೇ ಇಟ್ಟಿದ್ದಾರೆ. ಬಡತನವಿದ್ದರೂ ಇರಲೊಲ್ಲದೇಕೆ ಮನಸ್ಸು ದಿವ್ಯವಾಗಿದ್ದರೆ ಅದೆಂಥ ಅಂದಚಂದವನ್ನೂ ಸಾಧಿಸಬಹುದು; ಅದೆಂಥ ಅಚ್ಚುಕಟ್ಟುತನವನ್ನೂ ರಚಿಸಬಹುದು. ಅಂಥ ದಿವ್ಯವಾದ ಮನಸ್ಸು ಒಂದು ಇದ್ದರೆ ಸಾಕು ಅದೊಂದರಿಂದ ಎಲ್ಲೆಲ್ಲಿಯ ಮಾದರಿಗಳನ್ನೂ ಅನುಕರಣಗಳನ್ನೂ ಮನುಷ್ಯನು ಗಳಿಸಬಹುದಾಗಿದೆ.

ಮಾದರಿಯ ಪ್ರದರ್ಶನ.

ಒಳ್ಳೆಯ ಮಾದರಿಗಳನ್ನು ನೋಡುವ ಸುಯೋಗವು ಹಳ್ಳಿಯಲ್ಲಿದ್ದ ಜನರಿಗೆ ಒದಗುತ್ತಿರುವದಿಲ್ಲ. ಹಳ್ಳಿಗರು ಹಲವು ಪ್ರವಾಸಗಳನ್ನು ಮಾಡಿದವರಾಗಿದ್ದರೆ ಅವರು ಅನೇಕ ಮಾದರಿಗಳನ್ನು ಕಂಡು ಬಂದವರಾಗಿರುತ್ತಾರೆ. ಆದರೆ ಅಂಥ ಪ್ರವಾಸ ಮಾಡುವುದಕ್ಕೆ ಬಹು ಜನರಿಗೆ ಅವಕಾಶವೇ ದೊರೆಯುತ್ತಿರುವದಿಲ್ಲ. ಅವಕಾಶವೆಂದರೆ ಬರಿಯ ವೇಳೆ ಅಥವಾ ಪುರಸೊತ್ತೆಂದು ತಿಳಿಯಬಾರದು. ಹೋಗುವ ಮನಸ್ಸು, ಖರ್ಚಿಗೆ ಹಣ ಇವಲ್ಲವೂ ಅವಕಾಶವನ್ನು ತಂದು ಕೊಡುತ್ತವೆ. ಹೋಗುವ ಮನಸ್ಸಿದ್ದರೂ ಖರ್ಚಿಗೆ ಹಣವಿಲ್ಲದಿದ್ದರೆ ವ್ಯರ್ಥವೇ ಸರಿ. ಆದ್ದರಿಂದ ಚಲನಚಿತ್ರ ಪ್ರದರ್ಶನಗಳು ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು. ಆ ಕಾಲಕ್ಕೆ ಬೇರೆ ಬೇರೆ ದೇಶಗಳಲ್ಲಿಯ ಜನರ ರೀತಿ-ನಡತೆಗಳನ್ನೂ, ಉಡುಪು ತೊಡಪುಗಳನ್ನೂ, ಊಟ-ಉಣ್ಣುವ ಪದ್ಧತಿಗಳನ್ನೂ, ಮನೆ-ಕೋಣೆಗಳ ಓರಣವನ್ನೂ ತೋರಿಸುವ ಏರ್ಪಾಡು ಆಗಬೇಕು. ಜಗತ್ತಿನೊಳಗಿನ ಒಳ್ಳೆಯ ಮಾದರಿಗಳನ್ನು ಭಾರತದ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಾಡಿಸಿ ಕೆಲವೊಂದು ಕೃತ್ರಿಮ ಮನೆಗಳನ್ನೂ, ಆ ಮನೆಯೊಳಗಿನ ಮನೆತನದವರನ್ನೂ ಮಾಡಿ ತೋರಿಸುವ ಮಾದರಿಗಳಾದರೂ ಹಳ್ಳಿಗರ ಕಣ್ಣುಮುಂದೆ ಇರಿಸುವ ಕೆಲಸಗಳು ಸಾಗಬೇಕು. ಹಳ್ಳಿ ಹಳ್ಳಿಗೂ ಜಾತ್ರೆಗಳಾಗುತ್ತವೆ; ಅವೆಲ್ಲ ಈಗ ಬರಿಯ ಹುಗ್ಗಿಯ ಜಾತ್ರೆಗಳಾಗಿ ಬಿಟ್ಟಿರುತ್ತವೆ. ಬಡಿದಾಟದ ಕಿಸ್ತಿಗಳೂ, ಸಂಸ್ಕೃತಿಗೆ ಒಪ್ಪದ ಆಟ-ನೋಟಗಳೂ ಹಳ್ಳಿಯ ಜಾತ್ರೆಯ ಮುಖ್ಯ ಕಾರ್ಯಕ್ರಮಗಳಾಗಿಬಿಟ್ಟಿವೆ. ಅವುಗಳ ಬದಲಾಗಿ ಅಲ್ಲದಿದ್ದರೂ ಅವುಗಳೊಂದಿಗೆ ಈ ಹೊಸ ಬಾಳುವೆಯ ಅಂದಚಂದಗಳನ್ನೂ ಅಚ್ಚುಕಟ್ಟುತನವನ್ನೂ ಪ್ರದರ್ಶಿಸುವ ಏರ್ಪಾಡು ಆಗಬೇಕು. ಆ ಬಳಿಕ ಹಾಗೆ ಜೀವಿತವನ್ನು ಮಾರ್ಪಡಿಸಬೇಕೆನ್ನುವವರಿಗೆ ಸಹಾಯ ಸವಲತ್ತು, ಉತ್ತೇಜನ ಬಹುಮಾನಗಳನ್ನು ಸರಕಾರವು ಕೊಡುವಂತಾಗಬೇಕು.

ವ್ಯಕ್ತಿಯ ಸಿದ್ಧಿ – ರಾಷ್ಟ್ರದ ಸಿದ್ಧಿ.

ಪ್ರತಿಯೊಬ್ಬ ಮನುಷ್ಯನು ತನ್ನ್ನ ಮಟ್ಟಿಗೂ, ತನ್ನ ಮನೆತನದ ಮಟ್ಟಿಗೂ ಈ ಅಂದಚಂದದ ಪ್ರಯೋಜನವನ್ನು ಮಾಡಿಕೊಂಡರೂ ಸಾಕು. ಅದು ರಾಷ್ಟ್ರದ ಪ್ರಯೋಜನಕ್ಕೆ ಉಪಕಾರಿಯಾಗುತ್ತದೆ. ಚಿಗರಿ ಬಲೆಗಾರರಂಥ ಕಾಡು ಜನರನ್ನು ಸುಧಾರಿಸಲಿಕ್ಕೆ, ವಸತಿಗೃಹಗಳನ್ನು ನಿರ್ಮಿಸಿ ಉಚ್ಚ ತರದ ಊಟ, ಉಣ್ಣುವ ಪದ್ಧತಿಗಳನ್ನು ಕಲಿಸಬಹುದಾಗಿದೆ. ಅಲ್ಲಿ ಸ್ವಚ್ಛವಾದ ಉಡಿಗೆ ತೊಡಿಗೆಗಳನ್ನು ಓರಣವಾಗಿ ಇಟ್ಟುಕೊಳ್ಳುವ ರೂಢಿಯನ್ನು ಮಾಡಿಸಬಹುದಾಗಿದೆ. ಹಾಗೆ ಕೆಲವೊಂದು ವರುಷ ಮಾಡಿದರೆ ಆ ಕಾಡು ಜನರ ಮಕ್ಕಳಲ್ಲಿಯಾದರೂ ಒಳ್ಳೆಯ ಮಾದರಿಯನ್ನು ಅನುಕರಿಸಬೇಕೆನ್ನುವ ಬುದ್ಧಿ ಹುಟ್ಟುತ್ತದೆ. ಅಂಥ ಬುದ್ಧಿ ಹುಟ್ಟಿದರೆ ಅರ್ಧಕ್ಕಿಂತ ಹೆಚ್ಚು ಕೆಲಸವಾದಂತೆಯೇ ಸರಿ. ಊರಿಗೆ ಹೊರಟವನಿಗೆ ಊರು ಸಿಗುವ ಮೊದಲು ಊರಿನ ದಾರಿ ಮೊದಲು ಸಿಗಬೇಕು. ಅಂಥ ದಾರಿ ನಿಶ್ಚಿತವಾದರೆ ಗೊತ್ತುಮಾಡಿದ ಊರಿಗೆ ತಲುಪುವುದಕ್ಕೇನೂ ಸಂಶಯವಿಲ್ಲ. ಶ್ರೀವಿವೇಕಾನಂದರು ಹೇಳುತ್ತಿದ್ದರು, ಏನೆಂದರೆ – ಒಬ್ಬನ ಉದ್ಧಾರವಾಗುವಂತಿದ್ದರೆ ಲಕ್ಷ ಸಾರೆ ಜನ್ಮವೆತ್ತಿ ಬರುವೆನು. ವಿವೇಕಾನಂದರಂಥ ಪ್ರತಿಭಾಶಾಲಿಯಾದವರು ಒಬ್ಬನನ್ನು ಉದ್ಧರಿಸುವುದಕ್ಕೆ ಲಕ್ಷ ಸಾರೆ ಜನ್ಮೆವತ್ತಬೇಕಾಗುವದನ್ನು ತಿಳಿದರೆ, ಜಗತ್ತಿನಲ್ಲಿಯ ರಾಷ್ಟ್ರದಲ್ಲಿಯ ಕೆಲಸಗಳೆಷ್ಟೆಂಬುದರ ಕಲ್ಪನೆ ಬರಬಹುದು. ಅಂಥ ಅವಾಢವ್ಯ ಕಾರ್ಯ ಮಾಡುವದಕ್ಕೆ ಹೆರವರು ಬರಲೆಂದು ದಾರಿ ಕಾಯದೆ ತನ್ನನು ತಾನು ಉದ್ಧರಿಸಿಕೊಳ್ಳುವ ಎತ್ತುಗಡೆಗೆ ತೊಡಗಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುಡು ಬುಡುಕಿ ಹಾಡು
Next post ನಗೆಡಂಗುರ-೧೪೦

ಸಣ್ಣ ಕತೆ

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys