ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು
ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ||

ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ
ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||

ಮೂಡಲ ದೇಶದ ಬುಡುಬುಡುಕ್ಯಾನಾ
ಹಾಡನು ಹಾಡುತ ಬಂದೀನಮ್ಮಾ
ಮೂಡುವ ಸೂರ್ಯನ ಹಾಡನು ತಂದೆ
ಓಡಿಸು ಕತ್ತಲ ತಂಗೆಮ್ಮಾ ||೨||

ಹೊಟ್ಟೆಯ ಪಾಡಿಗೆ ದುಡಿಯುತ ಉಣ್ಣುತ
ಕಷ್ಟದಿ ಬದುಕಿರೆ ಸಾಲ್ದಮ್ಮ
ಇಷ್ಟಾನಿಷ್ಟವ ತಿಳಿದೂ ನೋಡೀ
ಗಟ್ಟಿಯ ಬಾಳನ್ನು ಬಾಳಮ್ಮಾ ||೩||

ಹೊಸ ಹೊಸ ಜೀವನ ವಿಧಾನ ಬಂದಿದೆ
ಕಸಮಳ ಕಳೆಯೇ ತಂಗೆಮ್ಮಾ
ಹೊಸಾ ಕಾಲವಿದು ಓದು ಬರೆಯುವುದು
ಹಸನಾಗಿರಲಿಕೆ ಮೂಲಮ್ಮಾ ||೪||

ಓದಿಲ್ಲದ ಮನೆ ಕತ್ತಲೇ ಕಾಣೇ
ಓದನು ಸಾಧಿಸಬೇಕಮ್ಮಾ
ಬಾಧಗಳೆಲ್ಲಕೆ ದಾರಿ ತೋರುವುದು
ವೇದನೆ ಕಳೆಯೇ ತಂಗೆಮ್ಮಾ ||೫||

ಹೆಣ್ಣೊಬ್ಬಳು ನೀ ವಿದ್ಯೆಯ ಕಲಿತರೆ
ಕಣ್ಣೇ ಬಂದಂಗೆ ಮನೆಗೆಲ್ಲಾ
ಪುಣ್ಯವಂತರು ಮುಂದಿನ ಪೀಳಿಗೆ
ಕಣ್ಮಣಿ ಲೋಕಕೆ ನೀನಮ್ಮಾ ||೬||

ನಿನ್ನಾರೋಗ್ಯಾ ಗಂಡನ ಮಕ್ಕಳ
ಚೆನ್ನಾದ ಸ್ಥಿತಿ ನಿನ್ನ ಕೈಲಿ
ಬಿನ್ನಾಣಿಂದಲಿ ಪೇಳುವೆನಮ್ಮಾ
ಚಿನ್ನದ ಕನ್ನಡ ಕಲಿಯಮ್ಮಾ ||೭||

ಮನೆಯೇ ಮೊದಲನೆ ಶಾಲೆಯು ಲೋಕದಿ
ಮನೆ ಮನೆ ಬೆಳಕು ನಿನ್ನಿಂದಾ
ಕನಸುಗಳೆಲ್ಲಾ ಗೂಡು ಕಟ್ಟುವವು
ನನಸಾಗುವವು ನಿನ್ನಿಂದಾ ||೮||

ಹೆಣ್ಣಿಗೆ ಸ್ವಾತಂತ್ರಿಲ್ಲಿನ್ನುವ ಜನ
ಹುಣ್ಣು ರೋಗಮಯವಾಗುವರು
ಹೆಣ್ಣು ಗಂಡುಗಳು ಸಮಬಲವಾದರೆ
ಗಣ್ಯ ಬಲಾಢ್ಯರು ಆಗುವರು ||೯||

ಹುಟ್ಟಿದ ಮನೆಯನು ಬಿಟ್ಟು ಬಂದರೂ
ಕೊಟ್ಟ ಮನೆಯು ನಿನದಾಗುವುದು
ನೆಟ್ಟಗೆ ಎರಡೂ ಮನೆಗಳ ಬೆಸೆದು
ದಿಟ್ಟ ಕೀರ್ತಿ ನಿನಗಾಗುವುದು ||೧೦||

ನಿನ್ನಯ ಜೋಗುಳ ದನಿಯಲಿ ನಾಡಿನ
ಉನ್ನತಿ ಒಲವು ಮೊಳಗುವುದು
ನಿನ್ನೆದೆ ಹಾಲಲಿ ಮಾನವತೆಯ ಹೊಳೆ
ಚೆನ್ನಾಗೆಲ್ಲೆಡೆ ಹರಿಯುವುದು ||೧೧||

ಸದ್ಗುಣ ಎಂಬುದು ನಿನ್ನಾಭರಣ
ಮುದ್ದಿನ ಪ್ರೀತಿಯ ಮೂಗುತಿಯು
ಶುದ್ಧದ ನಗುವೇ ನಂದಾದೀಪವು
ಸದ್ಗತಿ ಮನೆಗದು ನೋಡಮ್ಮಾ ||೧೨||

ಅಕ್ಷರ ಕಲಿಯುತ ಮಕ್ಕಳ ತಿದ್ದುತ
ಶಿಕ್ಷಕಿ ಲೋಕಕೆ ಆಗಮ್ಮಾ
ನಕ್ಕರೆ ನೀನೀ ಜಗವೇ ನಗುವುದು
ಅಕ್ಕರೆಯಲಿ ನೀ ಬೆಳೆಸಮ್ಮಾ ||೧೩||

ಬಂಗಾರೆನ್ನುವ ಆಶೆಯು ಬ್ಯಾಡಾ
ಬಂಗಾರವು ಮನಸಿರಿಯಮ್ಮಾ
ಸಿಂಗಾರೆನ್ನುವ ಪಾಶವು ಬ್ಯಾಡಾ
ಸಿಂಗಾರವು ನಿಜ ವಿದ್ಯಮ್ಮಾ ||೧೪||

ಮೌಢ್ಯದ ಹುಳುಗಳ ನಿನ್ನ ಸೆರಗಿನಲಿ
ಹೊದ್ದಿಸಿ ಪೋಷಿಸಬ್ಯಾಡಮ್ಮಾ
ಆಢ್ಯದಿ ಮೆರೆಯುವ ಬೊಜ್ಜು ಮೈಗಳಿಗೆ
ಕೂಡಿಸಿ ಕೂಳಿಡ ಬ್ಯಾಡಮ್ಮಾ ||೧೫||

ವರದಕ್ಷಣೆಯನು ತೆಗೆದುಕೊಳ್ಳುವ
ಕುರಿ ಮಕ್ಕಳ ಹಡಿಬ್ಯಾಡಮ್ಮಾ
ಪರಿ ಪರಿ ಲಂಚದ ಬೆಂಕಿಯ ಬೆಳೆಸುವ
ನರಿಗಳ ನೀ ಕೊಡಬ್ಯಾಡಮ್ಮಾ ||೧೬||

ಅಬಲೆಯಲ್ಲವೇ ತಂಗೆಮ್ಮಾ ನೀ
ದುರ್ಬಲೆ ಎಂಬುದ ಮರೆಯಮ್ಮಾ
ಸಬಲ ಸಮಾಜದ ನಿರ್ಮಾಣಕೆ ನೀ
ಪ್ರಬಲೆಯಾಗು ನೀ ಏಳಮ್ಮಾ ||೧೭||

ಕೇಳೇ ಅಕ್ಕಾ ಕೇಳೇ ತಂಗೀ
ಕೇಳೇ ಅವ್ವಾ ನಮ್ಮಮ್ಮಾ
ಹೇಳುವೆ ನಿನ್ನದೆ ಒಳಗಿನ ಮಾತಾ
ಬಾಳುವೆ ನುಡಿ ಬುಡುಬುಡಿಕೆಮ್ಮ ||೧೮||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುರೋಪ
Next post ಅಂದಚೆಂದ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…