ಚುಮು ಚುಮು ನಸಕು
ಸುಂಯ್‌ಗುಡುವ ಅಶೋಕ ವೃಕ್ಷಗಳು
ರಾತ್ರಿಯಿಡೀ ಎಣ್ಣೆಯಲಿ
ಮಿಂದೆದ್ದ ಗಿಡ ಗಂಟೆ, ಗದ್ದೆ
ಮಲ್ಲಿಗೆ ಸಂಪಿಗೆ ಗುಲಾಬಿಗಳು
ಕೊರಡು ಕೊನರುವಿಕೆಯೆ ಸಾಲುಗಳು….
ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ
ಕನಸು ಹೋದಿತೆನ್ನುವ ಬೇಸರ
ತಿರು ತಿರುಗಿ ರಗ್ಗೆಳೆದು ನಿದ್ರಿಸುವ
ನಿದ್ರಾಪ್ರಿಯರು
ಬೆಳಗಿನ ಚಹ ಬೇಕೆನ್ನುವ
ಸಮಯ ಪ್ರಜ್ಞಾಪ್ರಿಯರು ಇರುವಾಗ-
ಆಯತಪ್ಪಿ ಆಗೀಗೊಮ್ಮೆ
ಕಿಡಕಿಗೆ ಹೊಡೆವ ಮಳೆ
ನಸುಕಿಗೆ ಕಚಗುಳಿಯಿಟ್ಟು
ಎಬ್ಬಿಸುವಾಗ
ಸೂರ್ಯರಶ್ಮಿ ತಲೆದಿಂಬಿಗೆ ತೆಕ್ಕಯಾಗುತ್ತದೆ –
ಅನಾಮಿಕ ಹಕ್ಕಿ ಕಿಡಕಿಯ ಹೊರಗಡೆ
ತಂತಿಯ ಮೇಲೆ ರಕ್ಕೆ ಬಡಿಯುತ್ತ
ಜೀಕಾಡುತ್ತ ಹಾಡುತ್ತದೆ.
ಬಣ್ಣದ ಚಿಟ್ಟೆ ವಾಯುದೂತಾಗಿ
ಹೂ ಗಿಡ ಬಳ್ಳಿ ಕಂದರಗಳಲ್ಲಿ ಹಾಯ್ದು
ಮತ್ತೆ ಸದ್ದಿಲ್ಲದೆ ತಿರುಗಿ ಬಂದು
ನಿಶ್ಶಬ್ದದಲ್ಲಿ ಕರಗಿ ಬಿಡುವನು.
*****