(ಹುಡುಗಿಯರ ನಗು ಕೇಳಿ ಬರೆದುದು)

ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ
ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು
ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ
ಬೇರೊಂದು ವಿಶ್ವವನೆ ಸೇರಿದಂತಾಗುವುದು
ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ
ತುಂಬಿ ತೂರುತ ನನ್ನ ಹೃದಯದೆಡೆ ಸಾಗಿರಲು.
ವೀಣೆಯಿಂ ಹೊರಹೊಮ್ಮಿ ಗಾನ ತುಳುಕಾಡುತಲಿ
ಜಗದ ಮೈಮರೆಸುವೊಲು, ರಕ್ತ ನುಡಿಸುತಲಿಹುದು!

ನಗುವಂತು ಬಲು ಸೊಗಸು-ಮನವನೇ ಮರೆಸುವುದು!
ಮುನಿಸು ಮನದಲಿ ಕುಳಿತು ಮುಗುಳು ಮೊಗ್ಗಾದಂತೆ
ಕಂಗಳಲಿ ಬೇರೊಂದು ಬಗೆಯ ಬೆಳಕೇ ಹೊಳೆದು
ಎನ್ನೆದೆಯ ಸೆಳೆಯುವುದು ಒಮ್ಮೆಗೇ ನಿಮ್ಮೆಡೆಗೆ!
ನಗುವಿನಲಿ ನಿಮ್ಮ ಮುಖ ಹಗಲ ಮುಗಿಲಿನ ಹಾಗೆ!
ಮುನಿಸಿನಲಿ ಮಿಗಿಲು ಸೊಗ-ಸಂಜೆ ಮೋಡದ ಹಾಗೆ!
*****