ಪುಲಿಯಂಡದ ಪ್ರೇತಾತ್ಮ

ಪುಲಿಯಂಡದ ಪ್ರೇತಾತ್ಮ

Puliyandadaಕೊಡಗಿನ ಇತಿಹಾಸದಲ್ಲಿ ನಾಲ್ಕು ನಾಡು ಅರಮನೆಗೆ ಚಿರಸ್ಥಾಯಿಯಾದ ಹೆಸರಿದೆ. ಅದನ್ನು ಕಟ್ಟಿಸಿದವನು ದೊಡ್ಡವೀರರಾಜ. ಅಲ್ಲಿಂದಲೇ ಅವನು ಕೊಡಗಿನ ಆಯಕಟ್ಟಿನ ಜಾಗಗಳಲ್ಲಿದ್ದ ಟಿಪ್ಪುವಿನ ಸೇನೆಯನ್ನು ಸೋಲಿಸಿ ಶ್ರೀರಂಗಪಟ್ಟಣಕ್ಕೆ ಓಡಿಸಿದ್ದು. ಅದೇ ಅರಮನೆಯಲ್ಲಿ ದೊಡ್ಡವೀರರಾಜನ ಪಟ್ಟಾಬಿಷೇಕವಾದದ್ದು. ಅಲ್ಲೇ ಅವನ ಪ್ರಾಣದ ಪ್ರಾಣವಾಗಿದ್ದ ಮಹಾದೇವಮ್ಮಾಜಿ ಅವನ ಕೈಹಿಡಿದು ಕೊಡಗಿನ ಪಟ್ಟದ ರಾಣಿಯಾದದ್ದು. ನಾಲ್ಕು ನಾಡು ಅರಮನೆಯನ್ನು ಕಟ್ಟಿಸಲು ಆರಂಭಿಸಿದ ದಿನಗಳಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಅದನ್ನು ಕೊಡಗಿನ ಹಿರಿಯರು ಕರೆಯುವುದು ಪುಲಿಯಂಡದ ಪ್ರೇತಾತ್ಮನ ಕತೆ ಎಂದು.

ದೊಡ್ಡ ವೀರರಾಜ ಹೈದರಾಲಿಯ ಆಳ್ವಿಕೆಯ ಅಂತಿಮ ದಿವಸಗಳಲ್ಲಿ ಪೆರಿಯಾ ಪಟ್ಟಣದ ಸೆರೆಮನೆಯಲ್ಲಿ ಇದ್ದವನು. ಟಿಪ್ಪು ಸುಲ್ತಾನ ಪಟ್ಟವೇರಿದ ಬಳಿಕ ಒಂದಷ್ಟು ಮಂದಿ ಕೊಡಗರು ರಾತ್ರೋ ರಾತ್ರಿ ಪೆರಿಯಾಪಟ್ಟಣದ ಕೋಟೆಗೆ ನುಗ್ಗಿ ದೊಡ್ಡ ವೀರ ರಾಜನನ್ನು ಬಂಧು ಬಳಗ ಸಹಿತ ಬಿಡಿಸಿಕೊಂಡು ಬಂದಿದ್ದರು. ಅವನಿಗೆ ಕೊಡಗಿನ ಅತ್ಯಂತ ದಕ್ಷಿಣ ಭಾಗದ ಕುರುಚ್ಚಿಯಲ್ಲಿ ಒಂದು ಮನೆಯನ್ನು ನಿರ್ಮಿಸಿ ಸುತ್ತ ಮರದ ಕೋಟೆ ಕಟ್ಟಿ ತಾತ್ಕಾಲಿಕ ನೆಲೆಯನ್ನು ಮಾಡಿಕೊಟ್ಟಿದ್ದರು.

ದೊಡ್ಡ ವೀರ ರಾಜನನ್ನು ಕೇರಳದ ಕೋಟೆ ರಾಜ ಮಾತಿಗೆಂದು ಆಹ್ವಾನಿಸಿದ. ಕಪಟವರಿಯದ ದೊಡ್ಡ ವೀರ ಮಾತುಕತೆಗೆ ಹೋದಾಗ ಕೋಟೆಯ ಬೃಹತ್‌ ಪಡೆ ಎದುರಾಯಿತು. ಪುಟ್ಟ ದಂಡಿನ ದೊಡ್ಡವೀರರಾಜ ಸೋತು, ಶಾಂತಿ ಒಪ್ಪಂದ ಮಾಡಿಕೊಂಡು ವಾಪಾಸಾದಾಗ ಕೋಟೆ ರಾಜನ ಕಡೆಯ ನಾಗಪ್ಪಯ್ಯ ಕುರುಚ್ಚಿ ಅರಮನೆಯನ್ನು ಸುಟ್ಟು ಹಾಕಿದ. ಬಂಧು ಬಾಂಧವರನ್ನು ಮತ್ತು ನೆಲೆಯನ್ನು ಕಳಕೊಂಡ ದೊಡ್ಡ ವೀರ ವಸ್ತುಶಃ ಕುಸಿದು ಹೋದ. ಅವನ ನಂಬಿಕಸ್ಥ ಕಾರ್ಯಕಾರರಾದ ಕುಲ್ಲೇಟಿ ಮಾಚಣ್ಣ ಮತ್ತು ಕುಲ್ಲೇಟಿ ಪೊನ್ನಣ್ಣ ತಮ್ಮ ಮನೆಯಲ್ಲಿ ಅವನ ಇಬ್ಬರು ತಮ್ಮಂದಿರಿಗೆ ಉಳಕೊಳ್ಳುವ ವ್ಯವಸ್ಥೆ ಮಾಡಿದರು.
ದೊಡ್ಡ ವೀರ ರಾಜ ಚಿಂತೆಯ ಕಡಲಲ್ಲಿ ಮುಳುಗಿದ್ದ. ಅವನು ಮತ್ತೆ ಮೊದಲಿಂದ ಅವನ ಬಾಳನ್ನು ಕಟ್ಟಿಕೊಳ್ಳಬೇಕಿತ್ತು. ಬಂಧು ಬಾಂಧವರಿಲ್ಲದಿದ್ದರೆ ಏನಂತೆ? ಎರಡು ಕೈಗಳ ಹಾಗೆ ಇಬ್ಬರು ತಮ್ಮಂದಿದ್ದಾರೆ ತನಗಾಗಿ. ಜೀವಕೊಡುವ ಕಾರ್ಯಕಾರರಿದ್ದಾರೆ. ಕೊಡಗನ್ನು ಟಿಪ್ಪುವಿನಿಂದ ಬಿಡಿಸಲೇ ಬೇಕೆಂದು ಪಣತೊಟ್ಟ ಕೊಡಗ ತರುಣ ಕಟ್ಟಾಳುಗಳಿದ್ದಾರೆ. ದೊಡ್ಡವೀರರಾಜ ತನಗೆ ತಾನೇ ಹೇಳಿಕೊಂಡ.

ಇಕ್ಕೇರಿಯಿಂದ ಬಂದ ವೀರಪ್ಪದೊರೆ ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ.

ಮುದ್ದುರಾಜ ಹಾಲೇರಿ ಸಂಸ್ಥಾನವನ್ನು ಸುಭದ್ರವಾಗಿ ಬೆಳೆಸಿದ.
ದೊಡ್ಡವೀರಪ್ಪ ದೊರೆ ಅದನ್ನು ಕಾವೇರಿಯಿಂದ ಕುಮಾರಧಾರೆಯವರೆಗೆ, ಲಕ್ಷ್ಮಣ ತೀರ್ಥದಿಂದ ಹೇಮಾವತಿಯ ವರೆಗೆ ವಿಸ್ತರಿಸಿದ.
ನೀನು ಅದನ್ನು ಟಿಪ್ಪುವಿನಿಂದ ಬಿಡುಗಡೆಗೊಳಿಸಬೇಕು. ನೇತ್ರಾವತಿಯ ವರೆಗೆ ಕೊಡಗು ಹಬ್ಬಬೇಕು. ಲಕ್ಷ್ಮಣ ತೀರ್ಥದಿಂದ ನೇತ್ರಾವತಿಯವರೆಗೆ, ನದಿ ಎರಡರ ನಡುವೆ, ಕೊಡಗು ರಾಜ್ಯ ವಿಸ್ತರಿಸಲ್ಪಡಬೇಕು. ನಿನ್ನಿಂದ ಅದು ಸಾಧ್ಯವಿದೆ.
ಮನಸ್ಸು, ಪ್ರಯತ್ನ, ಶ್ರದ್ಧೆಜತೆಗೆ ಒಂದಿಷ್ಟು ಅದೃಷ್ಟ. ಪ್ರಯತ್ನಶೀಲನಿಗೇ ಮಾತ್ರ ಅದೃಷ್ಟ ಒಲಿಯುವುದು.
ಎದ್ದೇಳು, ದೌರ್ಬಲ್ಯವನ್ನು ಬಿಟ್ಟು ನಾಡನ್ನು ಕಟ್ಟು. ದೊಡ್ಡವೀರ ರಾಜ ಎದ್ದು ನಿಂತು ಕಾರ್ಯಕಾರರನ್ನು ದಿಟ್ಟಿಸಿದ.
ಕುರುಚ್ಚಿ ಅರಮನೆ ಸುಟ್ಟಿದೆಯೆಂದರೆ ಏನರ್ಥ ಪೊನ್ನಣ್ಣ?
ಈ ಸ್ಥಳದಲ್ಲಿ ನಾವಿನ್ನು ಇರಬಾರದು ಎಂದು ಪ್ರಭೂ.
ಸುರಕ್ಷಿತ ಸ್ಥಳವನ್ನು ಎಲ್ಲಾದರೂ ಹುಡುಕಬೇಕಲ್ಲಾ?
ಕೆಟುವಳಿ ಅಚ್ಚಣ್ಣ ನೋಡಿಕೊಂಡು ಬಂದಿದ್ದಾನೆ ಪ್ರಭೂ. ಅದು ಪಾಡಿನಾಲ್ಕು ನಾಡಿನಲ್ಲಿದೆ. ಪ್ರಭುಗಳ ಮನೋಸ್ಥತಿ ನೋಡಿಕೊಂಡು ಮುಂದಿನ ನಿರ್ಧಾರ.
ನಾಡಿನ ಸ್ಥತಿಯೇ ಚಿಂತಾಜನಕವಾಗಿರುವಾಗ ನನ್ನೊಬ್ಬದೇನು ಪೊನ್ನಣ್ಣಾ ನಾಳೆಯೇ ನೋಡಿಕೊಂಡು ಬರೋಣ.

* * *

ಪಾಡಿನಾಲ್ಕು ನಾಡಿಗೆ ಕುದುರೆಗಳಲ್ಲಿ ಪಯಣಿಸುವಾಗ ದೊಡ್ಡವೀರ ಮನಸ್ಸಿನಲ್ಲೇ ಅಂದುಕೊಂಡ.
ಮೊದಲು ಅರಮನೆ ನಿರ್ಮಾಣ. ಟಿಪ್ಪುವಿನ ಠಾಣೆಗಳನ್ನು ನಾಶಪಡಿಸುವ ಕೆಲಸ ಜತೆಯಲ್ಲೇ ಸಾಗಬೇಕು. ಇಂಗ್ಲೀಷರು ನೆರವು ನೀಡುವ ಸಂಭವವಿದೆ. ಅದು ದೊರೆತರೆ ಕಾರ್ಯವನ್ನು ಸುಲಭವಾಗಿ ಸಾಧಿಸಬಹುದು. ಆದರೆ ಇಂಗ್ಲೀಷರನ್ನು ನಂಬಬಹುದೆ?
ಕಾರ್ಯಕಾರ ಪೊನ್ನಣ್ಣ ದೂರಕ್ಕೆ ಕೈ ತೋರಿಸಿದ.
ಪ್ರಭೂ, ಅದುವೇ ಕೆಟುವಳಿ ಅಚ್ಚಣ್ಣ ಆಯ್ಕೆ ಮಾಡಿದ ಸ್ಥಳ. ಪುಲಿಯಂಡ ಕುಟುಂಬಕ್ಕೆ ಸೇರಿದ್ದು.
ಕುದುರೆ ಸವಾರರು ಈಗ ಎತ್ತರದ ಸ್ಥಳದಲ್ಲಿದ್ದರು. ದೊಡ್ಡವೀರ ಆ ಸ್ಥಳವನ್ನು ನೋಡಿದ. ಸುತ್ತಲೂ ಕಣ್ಣು ಹಾಯಿಸಿದ. ಅದೊಂದು ನೈಸರ್ಗಿಕ ಭದ್ರಕೋಟೆಯಂತಿತ್ತು. ಸುತ್ತಮುತ್ತ ಪರ್ವತ ಪ್ರಪಾತಗಳು. ಅಲ್ಲಲ್ಲಿ ಹಳ್ಳ ತೋಡುಗಳು. ಅಲ್ಲಿಗೆ ಪ್ರವೇಶಿಸಲು ಇರುವ ಒಂದು ದುರ್ಗಮ ಹಾದಿಯಲ್ಲಿ ಬರುವವರನ್ನು ದೂರದಿಂದಲೇ ಗಮನಿಸಲು ಸುಲಭವಾಗಿ ಸಾಧ್ಯವಿದೆ. ಶತ್ರುಗಳ ಸಂಖ್ಯೆ ಅಪಾರವೆಂದಾದರೆ ಪಲಾಯನಕ್ಕೆ ಹಲವಾರು ಹಾದಿಗಳಿವೆ. ದೊಡ್ಡವೀರರಾಜ ಕೆಟುವಳಿ ಅಚ್ಚಣ್ಣನ ಆಯ್ಕೆಯನ್ನು ಬಹುವಾಗಿ ಮೆಚ್ಚಿಕೊಂಡ.
ನಾಲ್ವರು ಕುದುರೆ ಸವಾರರನ್ನು ದೂರದಿಂದಲೇ ಪುಲಿಯಂಡ ಮನೆಯವರು ಗಮನಿಸಿ ಅಂಗಳದಲ್ಲಿ ನೆರೆದರು. ಸವಾರರು ಕುದುರೆಯಿಂದಿಳಿದಾಗ ಕೆಟುವಳಿ ಅಚ್ಚಣ್ಣನನ್ನು ಪುಲಿಯಂಡ ಕುಟುಂಬದ ಯಜಮಾನ ಪೊನ್ನಪ್ಪ ಗುರುತಿಸಿದ. ಅವನ ಮುಖದ ಆತಂಕ ಕಡಿಮೆಯಾದದ್ದನ್ನು ನಾಲ್ವರೂ ಗಮನಿಸಿದರು. ಕೆಟುವಳಿ ಅಚ್ಚಣ್ಣ ಪುಲಿಯಂಡ ಪೊನ್ನಪ್ಪನ ಬಳಿಗೆ ಹೋಗಿ ಪಿಸುಗುಟ್ಟಿದ.
ದೊಡ್ಡವೀರರಾಜ ಪ್ರಭುಗಳು ಮತ್ತು ಅವರ ಕಾರ್ಯಕಾರರಾದ ಕುಲ್ಲೇಟಿ ಪೊನ್ನಣ್ಣ ಮಾಚಯ್ಯರು.
ಪುಲಿಯಂಡ ಪೊನ್ನಪ್ಪ ಗಡಿಬಿಡಿಯಿಂದ ಮನೆಯೊಳಗಿನಿಂದ ನಾಲ್ಕು ಆಸನಗಳನ್ನು ತರಿಸಿದ. ಎತ್ತರದ ಆಸನದಲ್ಲಿ ದೊಡ್ಡವೀರರಾಜ ಮಂಡಿಸಿದಾಗ ಪುಲಿಯಂಡ ಪೊನ್ನಪ್ಪ ಸಾಷ್ಟಾಂಗ ವಂದಿಸಿದ. ಮನೆಯ ಗಂಡಸರು, ಹಂಗಸರು, ಮಕ್ಕಳು ಹಿರಿಯನನ್ನು ಅನುಸರಿಸಿದರು.
ಮಹಾ ಪ್ರಭುಗಳ ಆಗಮನದಿಂದ ಈ ಪುಲಿಯಂಡ ಮನೆತನ ಪಾವನವಾಯಿತು. ಹೇಳಿ ಪ್ರಭೂ, ಈ ಸೇವಕನಿಂದ ಯಾವ ಸೇವೆ ಆಗಬೇಕಿದೆ?
ದೊಡ್ಡವೀರ ರಾಜನಿಗೆ ಅವನ ನಿಷ್ಠೆ ಮೆಚ್ಚುಗೆಯಾಯಿತು.
ಹಾಲೇರಿಯ ಮುದ್ದುರಾಜರು, ಆಮೇಲೆ ದೊಡ್ಡ ವೀರಪ್ಪನವರು ವಿಶಾಲವಾದ ಕೊಡಗು ಎಂಬ ನಾಡನ್ನು ಕಟ್ಟಿದರು. ಅದನ್ನು ನೀವು ಬಲ್ಲಿರಿ. ಕೊಡಗನ್ನು ಈಗ ಟಿಪ್ಪು ಸುಲ್ತಾನ ಆಳುತ್ತಿದ್ದಾನೆ. ಇದು ನಾಡಿನ ಅಭಿಮಾನದ ಪ್ರಶ್ನೆ. ಪರಕೀಯರಿಂದ ಕೊಡಗನ್ನು ಬಿಡಿಸಿ ನಾಡನ್ನು ಮತ್ತೆ ಕಟ್ಟಲು ಹೊರಟಿದ್ದೇನೆ. ಪುಲಿಯಂಡ ಕುಟುಂಬದ ಬೆಂಬಲವನ್ನು ಯಾಚಿಸುತ್ತಿದ್ದೇನೆ. ನೀವು ಇಲ್ಲವೆನ್ನಬಾರದು.
ಕೊಡಗಿನ ಸಿಂಹಾಸನದ ಹಕ್ಕುದಾರ ಮನೆಗೇ ಬಂದು ಹಾಗೆ ಬೇಡಿಕೊಂಡಾಗ ಪುಲಿಯಂಡ ಪೊನ್ನಪ್ಪ ಕರಗಿದ.
ಮಹಾಪ್ರಭುಗಳು ತಾವು. ಹೀಗೆ ಬೇಡಿಕೊಳ್ಳಬಾರದು. ತಾವು ಒಂದು ಆಜ್ಞೆ ಮಾಡಿದರೆ ಸಾಕು. ಹೇಳಿ ಪ್ರಭೂ, ಪುಲಿಯಂಡ ಕುಟುಂಬದಿಂದ ತಾವು ಬಯಸುವುದು ಏನನ್ನು?
ದೊಡ್ಡ ವೀರರಾಜನ ಮುಖದಲ್ಲಿ ಪ್ರಸನ್ನತೆ ಗೋಚರಿಸಿತು.
ನಮ್ಮ ಕುರುಚ್ಚಿ ಅರಮನೆಯನ್ನು ಕೋಟೆ ರಾಜ ಸುಡಿಸಿ ಹಾಕಿದ್ದಾನೆ. ಒಂದೆಡೆಯಲ್ಲಿ ಅವನು, ಇನ್ನೊಂದೆಡೆಯಲ್ಲಿ ಟಿಪ್ಪು. ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ ನಮ್ಮ ಪರಿಸ್ಥತಿ. ಅರಮನೆಯನ್ನು ಉಳಿಸಿಕೊಳ್ಳಲಾಗದವ ನಾಡನ್ನು ಕಟ್ಟಲುಂಟೇ ಎಂದು ಕೊಡಗರು ಆಡಿಕೊಳ್ಳುವಂತಾಗಿದೆ.
ಪುಲಿಯಂಡ ಪೊನ್ನಪ್ಪನ ಮುಖದಲ್ಲಿ ಖೇದ ಮೂಡಿತು.
ನನ್ನಿಂದ ಏನನ್ನು ಅಪೇಕ್ಷಿಸುತ್ತೀರಿ ಪ್ರಭೂ?
ಸುರಕ್ಷಿತ ಸ್ಥಳವೊಂದರಲ್ಲಿ ಆಡಳಿತ ಕೇಂದ್ರ ಮೊದಲು ಸ್ಥಾಪನೆಯಾಗಬೇಕು. ಆಮೇಲೆ ನಾಡು ಕಟ್ಟುವ ಕಾರ್ಯ ಆರಂಭವಾಗಬೇಕು. ಇಷ್ಟು ಭದ್ರತೆಯ ಸ್ಥಳವನ್ನು ಕೊಡಗಿನಲ್ಲಿ ನಾವು ಎಲ್ಲೂ ಕಂಡಿಲ್ಲ. ಆದರೂ ಒಂದು ಅಳುಕಿದೆ. ಇದು ಪುಲಿಯಂಡ ಕುಟುಂಬದ ತಲೆ ತಲಾಂತರದ ಭೂಮಿ. ನಾಡಿಗಾಗಿ ನಿಮ್ಮಲ್ಲಿ ನಾವಿದನ್ನು ಯಾಚಿಸಲೇ ಬೇಕಾಗಿದೆ. ಪುಲಿಯಂಡ ಕುಟಂಬ ದೊಡ್ಡ ಮನಸ್ಸು ಮಾಡಿ ಈ ಸ್ಥಳವನ್ನು ಕೊಡಗಿನ ನೂತನ ಅರಮನೆ ನಿರ್ಮಾಣಕ್ಕಾಗಿ ನಮಗೆ ಬಿಟ್ಟುಕೊಡಬೇಕು.
ಪುಲಿಯಂಡ ಪೊನ್ನಪ್ಪ ತಬ್ಬಿಬ್ಬಾದ. ಅದು ಅವನ ಹಿರಿಯರು ಕಷ್ಟಪಟ್ಟು ಮಾಡಿದ ಭೂಮಿ. ವರ್ಷದಲ್ಲಿ ಎರಡು ಬಾರಿ ಸಮೃದ್ಧ ಭತ್ತ ಬೆಳೆಯುವ ಭೂಮಿ ಅದು. ಅಲ್ಲಿ ನೀರಿಗೆ, ಸೊಪ್ಪಿಗೆ, ಸೌದೆಗೆ ಎಂದೂ ಬರಗಾಲ ಬಂದಿರಲಿಲ್ಲ. ಮೊಲ, ಕಾಡು ಕುರಿ, ಕಾಡಹಂದಿ, ಆಮೆ, ಏಡಿ, ಮೀನುಬೇಕೆಂದಾಗ ಸಿಗುತ್ತಿದ್ದವು. ಇಡೀ ಕುಟುಂಬ ನೇಜಿ ನೆಡುವ, ಬಂಗಾರದ ಬಣ್ಣದ ಭತ್ತ ಸಮೃದ್ಧವಾಗಿ ತೊನೆದಾಡುವ ಪೈರನ್ನು ಕೊಯ್ದು, ಅಡ್ಡಮಂಚಕ್ಕೆ ಬಡಿದು ಮನೆಯ ಪತ್ತಾಯದಲ್ಲಿ ತುಂಬಿಸುವುದೇ ಒಂದು ಹಬ್ಬ. ಇದ್ದಕ್ಕಿದ್ದಂತೆ ಈ ಜಾಗವನ್ನು ಒಬ್ಬ ಕೇಳುತ್ತಿದ್ದಾನೆ. ಬೇರಾರೋ ಆಗಿದ್ದರೆ ಪುಲಿಯಂಡ ಪೊನ್ನಪ್ಪ ಒಳಗಡೆಯಿಂದ ತುಪಾಕಿ ತಂದು ಅಂತಹ ಉದ್ಧಟನನ್ನು ಸುಟ್ಟು ಬಿಡುತ್ತಿದ್ದ. ಕೇಳುತ್ತಿರುವವನು ದೊಡ್ಡವೀರ ಮಹಾಪ್ರಭು. ಕೊಡಗಿನ ರಾಜನಾಗಲಿರುವವನು.
ಮಹಾಪ್ರಭುಗಳ ಕೇಳಿಕೆಯನ್ನು ಒಬ್ಬ ಕೊಡಗನಾಗಿ ನಾನು ತಿರಸ್ಕರಿಸುವುದಿಲ್ಲ. ಆದರೆ ಪ್ರಭೂ ನಮ್ಮ ಹಿರಿಯರ ಈ ಭೂಮಿಯನ್ನು ಬಿಟ್ಟು ನಾವೆಲ್ಲಿಗೆ ಹೋಗಬೇಕು?
ದೊಡ್ಡವೀರ ರಾಜ ನಿರಾಳವಾದ.
ನಿಮಗೆ ಎಡೆನಾಲ್ಕು ನಾಡಿನ ಮಗ್ಗುಲ ಗ್ರಾಮದಲ್ಲಿ ಇಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಭೂಮಿಯನ್ನು ನೀಡುತ್ತಿದ್ದೇನೆ.
ಪುಲಿಯಂಡ ಪೊನ್ನಪ್ಪ ಕುಟುಂಬ ಸದಸ್ಯರ ಮುಖಗಳನ್ನು ನೋಡಿದ. ಗಂಡಸರ ಮುಖಗಳು ಗಂಟಿಕ್ಕಿಕೊಂಡಿದ್ದರೆ ಹೆಂಗಸರ ಕಣ್ಣುಗಳು ಕೊಳಗಳಾಗಿದ್ದವು. ಮಕ್ಕಳಿಗೆ ಪರಿಸ್ಥತಿಯ ಗಂಭೀರತೆಯ ಅರಿವಿರಲಿಲ್ಲ. ಪುಲಿಯಂಡ ಪೊನ್ನಪ್ಪನಿಗೆ ದಿಕ್ಕೇ ತೋಚಲಿಲ್ಲ. ಗಂಟಲ ಆಳದೊಳಗೆ ಹೂತುಹೋಗಿದ್ದ ಮಾತುಗಳು ಅಸ್ಪಷ್ಟವಾಗಿ ಹೊರಗೆ ಬಂದವು.
ಪ್ರಭುಗಳ ಮಾತಿಗೆ ಪ್ರಜೆಗಳು ಎದುರು ಹೇಳಬಾರದು. ನಾಡಿನ ಒಳ್ಳೆಯದಕ್ಕೆ ಎಂದಾದಾಗ ಪ್ರಜೆಗಳು ಸ್ವಾರ್ಥಿಗಳಾಗಕೂಡದು. ಆಗಲಿ ಪ್ರಭೂ. ನಾವು ಎಡೆನಾಲ್ಕು ನಾಡಿಗೆ ಹೋಗಲು ಸಿದ್ಧರಿದ್ದೇವೆ.
ದೊಡ್ಡವೀರ ರಾಜನ ಹೃದಯ ತುಂಬಿ ಬಂತು.
ಎಳವೆಯಿಂದಲೇ ಸೆರೆಯಲ್ಲಿ ಬೆಳೆದವ ನಾನು. ಕೊಡಗಿನ ಧೀರರಿಂದಾಗಿ ಸೆರೆಮನೆ ಯಿಂದ ಹೊರಬಂದು ಸ್ವಾತಂತ್ರ್ಯದ ಸವಿಯನ್ನು ಉಣ್ಣುವಂತಾಯಿತು. ಆದರೆ ನಮ್ಮ ಕೊಡಗು ಟಿಪ್ಪುವಿನ ಕೈಯಲ್ಲಿದೆ. ಈಗ ನಿಮ್ಮಂಥವರ ನೆರವು ಮತ್ತು ಬೆಂಬಲದಿಂದ ನಾಡನ್ನು ಮುಕ್ತಿಗೊಳಿಸಲು ಸಾಧ್ಯವಾದೀತು ಎಂದು ಭಾವಿಸುತ್ತೇನೆ.
ಸವಾರರು ಕುದುರೆ ಹತ್ತಿ ಬಂದ ದಾರಿಯಲ್ಲಿ ಹಿಂದಿರುಗಿದರು. ಅವರ ತಲೆ ಮಾಯವಾದ ಮೇಲೆ ಪೊನ್ನಪ್ಪನ ತಮ್ಮಂದಿರು ಒಬ್ಬೊಬ್ಬರೇ ಮಾತಾಡಿದರು.
ನಮ್ಮ ಹಿರಿಯರು ಮಾಡಿದ ಆಸ್ತಿಯನ್ನು ಅವನಿಗೆ ಕೊಡಬೇಕಾ? ನಾವಿಲ್ಲಿಂದ ಬರುವುದಿಲ್ಲ. ಇಲ್ಲಿ ಹುಟ್ಟಿದ್ದೀವಿ. ಇಲ್ಲೇ ಬೆಳೆದಿದ್ದೀವಿ. ಇಲ್ಲೇ ಸಾಯುತ್ತೀವಿ. ನೀನು ಬೇಕಾದರೆ ಇಲ್ಲಿಂದ ಹೊರಟು ಹೋಗು. ಆ ದೊಡ್ಡವೀರರಾಜ ಅದು ಹೇಗೆ ಇಲ್ಲಿಗೆ ಕಾಲಿಡುತ್ತಾನೋ ನೋಡಿಯೇ ಬಿಡುತ್ತೇವೆ.
ಪುಲಿಯಂಡ ಪೊನ್ನಪ್ಪ ಎಲ್ಲರನ್ನೂ ಸಮಾಧಾನಿಸಿದ.
ಗತಿಸಿ ಹೋದ ಲಿಂಗರಾಜೇಂದ್ರ ದೊರೆಗಳ ಹಿರಿಯ ಮಗ. ಪಾಪ ಅವನ ಬಾಲ್ಯವೆಲ್ಲಾ ಸೆರೆಮನೆಯಲ್ಲೇ ಕಳೆದುಹೋಯಿತು. ಕುರುಚ್ಚಿಯಲ್ಲಿ ಅವನನ್ನು ಬದುಕಲು ಕೋಟೆ ರಾಜ ಬಿಡಲಿಲ್ಲ. ಮಡಿಕೇರಿ ಟಿಪ್ಪುವಿನ ವಶದಲ್ಲಿದೆ. ಅಲ್ಲಿಗಿವನು ಹೋಗುವಂತಿಲ್ಲ. ಆ ಟಿಪ್ಪುವಿನ ಅಮಲ್ದಾರ ನಾಗಪ್ಪಯ್ಯ ನಮ್ಮಂತಹ ರೈತರನ್ನು ಸುಲಿಗೆ ಮಾಡಿದ. ಈಗಿನ ಠಾಣೆಯ ಅಧಿಕಾರಿಗಳಿಗೆ ಕೊಡಗನ್ನು ಸುಲಿಯುವುದೇ ಕೆಲಸ. ನಮ್ಮನ್ನು ರಕ್ಷಿಸ ಬಲ್ಲವರೇ ಇಲ್ಲ. ಈಗ ಒಬ್ಬ ಕಾಣಿಸಿಕೊಂಡಿದ್ದಾನೆ. ಇವನಿಗೆ ಕೊಡಗರ ಬೆಂಬಲವಿದೆ. ಇವನು ರಾಜನಾದರೆ ನಮಗೇ ಒಳ್ಳೆಯದು. ಆಶ್ರಯ ಕೇಳಿ ಬಂದವರಿಗೆ ಇಲ್ಲವೆನ್ನುವುದು ಉಚಿತವಾಗುವುದಿಲ್ಲ. ಅಲ್ಲದೆ ತ್ಯಾಗ, ಬಲಿದಾನಗಳಿಲ್ಲದೆ ಒಂದು ನಾಡನ್ನು ಕಟ್ಟಲು ಸಾಧ್ಯವಾಗುವುದಿಲ್ಲ.
ಹಿರಿಯನ ಮಾತಿಗೆ ಮತ್ತೆ ಯಾರೂ ಎದುರಾಡಲಿಲ್ಲ. ಪುಲಿಯಂಡ ಕುಟುಂಬ ಪಾಡಿನಾಲ್ಕು ನಾಡಿನಿಂದ ಎಡೆನಾಲ್ಕು ನಾಡಿಗೆ ಹೊರಟು ಹೋಯಿತು.

* * *

ದೊಡ್ಡ ವೀರರಾಜ ಒಂದು ಶುಭ ಮುಹೂರ್ತದಲ್ಲಿ ಅರಮನೆ ನಿರ್ಮಾಣ ಕಾರ್ಯ ಆರಂಭಿಸಿದ. ಅದಾಗಲೇ ಅವನ ಪಡೆಯಲ್ಲಿ ನಾಲ್ಕು ಆನೆಗಳಿದ್ದವು. ನಿರ್ಮಾಣ ಕಾರ್ಯಕ್ಕೆ ಅವುಗಳ ಸಹಾಯವನ್ನು ಪಡಕೊಂಡ. ರಾತ್ರಿ ಹೊತ್ತು ಅವನು ಸ್ವಲ್ಪ ದೂರದಲ್ಲಿರುವ ಪುಲಿಯಂಡ ಮನೆಯಲ್ಲಿ ತಂಗುತ್ತಿದ್ದ. ಅರಮನೆ ನಿರ್ಮಾಣ ಸ್ಥಳದಲ್ಲಿ ಕೆಲಸದಾಳುಗಳು ವಿಶ್ರಮಿಸಿಕೊಳ್ಳುತ್ತಿದ್ದರು.
ಒಂದು ಕಗ್ಗತ್ತಲ ರಾತ್ರಿ ನೀರವ ಮೌನವನ್ನು ಭೇದಿಸಿ ಕರ್ಣ ಕಠೋರವಾದ ಮಾತುಗಳು ಆಕಾಶದಿಂದ ತೇಲಿ ಬರತೊಡಗಿದವು.
ಪಾಲೇರಿ ಒಡೆಯಂಡ ಕುತ್ತಿ ಮುತ್ತುತು ಪೋಡು. ಇಲ್ಲಿ ಅಂಬೆ ದುಂಬಿ ಬೊಳಿಯಡು.
ಒಂದಲ್ಲ, ಎರಡಲ್ಲ, ಎಂಟು ಬಾರಿ.
ಯಾವುದೋ ಅಜ್ಞಾತ ಅದೃಶ್ಯ ಶಕ್ತಿಯೊಂದರ ಶಾಪದಂತಹ ಆ ಭಯಾನಕ ಮಾತುಗಳಿಂದ ಅರಮನೆಯ ಕೆಲಸಗಾರರು ನಡುಗಿ ಹೋದರು. ರಾತ್ರಿಯಿಡೀ ಅವರಿಗೆ ಭಯದಿಂದ ನಿದ್ದೆ ಬರಲಿಲ್ಲ.
ಬೆಳಿಗ್ಗೆ ರಾಜ ಬಂದಾಗ ಅವನಲ್ಲಿ ಎಲ್ಲವನ್ನೂ ನಿವೇದಿಸಿಕೊಂಡರು.
ಅದು ಭಯಾನಕ ಪ್ರಭೂ. ಆಕಾಶದಿಂದ ತೇಲಿ ಬಂದ ಶಾಪ.
ಶಾಪದ ಮಾತುಗಳ ಅರ್ಥ ತಿಳಕೊಂಡ ರಾಜ ಚಿಂತಾಕ್ರಾಂತನಾದ.
ಅದು ಏನಿರಬಹುದೆಂದು ನಿಮ್ಮ ಊಹೆ?
ಹಿಂದೆ ಪುಲಿಯಂಡ ಮನೆಯವನೊಬ್ಬ ಇಲ್ಲೇ ಮರವೊಂದಕ್ಕೆ ನೇಣು ಹಾಕಿಕೊಂಡು ಸತ್ತನಂತೆ ಪ್ರಭೂ. ಅವನ ಪ್ರೇತಾತ್ಮವೇ ಇರಬೇಕು. ಪುಲಿಯಂಡದವರು ಎಡೆನಾಲ್ಕು ನಾಡಿಗೆ ಹೋಗಿದ್ದಾರೆ. ಈ ಪ್ರೇತಾತ್ಮ ಪ್ರತೀಕಾರ ಕೈಗೊಳ್ಳುತ್ತಿದೆ. ಮಲೆಯಾಳದಿಂದ ಮಂತ್ರವಾದಿಗಳನ್ನು ಕರೆಯಿಸಿ ಕಟ್ಟು ಮಾಡಿಸಿಬಿಡಿ ಪ್ರಭೂ. ಇಲ್ಲದಿದ್ದರೆ ಆ ಪ್ರೇತಾತ್ಮ ಅರಮನೆ ಕೆಲಸ ಮುಂದುವರಿಯಲು ಬಿಡುವುದಿಲ್ಲ. ನಮಗೆ ಭಯವಾಗುತ್ತಿದೆ.
ರಾಜನಿಗೆ ಭೂತ, ಪ್ರೇತಗಳಲ್ಲಿ ನಂಬಿಕೆಯಿರಲಿಲ್ಲ.
ನಾನು ಹೆದರುವುದು ವಿಶ್ವಾಸದ್ರೋಹಿ ಮನುಷ್ಯರಿಗೆ ಮಾತ್ರ. ಲಿಂಗ ಕಟ್ಟಿಕೊಂಡವನು ನಾನು. ಯಾವ ಭೂತವಾಗಲೀ, ಪ್ರೇತವಾಗಲೀ ನನ್ನನ್ನೇನೂ ಮಾಡುವುದಿಲ್ಲ. ಹೆದರಿಕೆ ಇರುವವರು ಲಿಂಗ ಕಟ್ಟಿಸಿಕೊಳ್ಳಬಹುದು. ಇದು ಭೂತ, ಪ್ರೇತಗಳ ಕೃತ್ಯವಲ್ಲ. ಇಂದು ರಾತ್ರಿ ಅರಮನೆಯ ಸುತ್ತಲೂ ಕಾವಲು ಹಾಕಿಸುತ್ತೇನೆ. ಆ ಪ್ರೇತ ಹೇಗೆ ಬರುತ್ತದೋ ನೋಡೋಣ.
ಅಂದು ರಾತ್ರಿ ದೊಂದಿಯ ಬೆಳಕಲ್ಲಿ ಅರಮನೆಯ ಹಿಂದಿನ ಭಾಗದಲ್ಲಿ ಹತ್ತು ಮಂದಿ ಕಾವಲು ಕಾದರು.
ಪ್ರೇತ ಅಂದು ಬರಲಿಲ್ಲ.
ಮರುದಿನ ದೊಡ್ಡ ವೀರ ರಾಜ ಪ್ರಸನ್ನನಾಗಿದ್ದ.
ದೊಂದಿ ಬೆಳಕಿದ್ದರೆ ಪುಲಿಯಂಡದ ಪ್ರೇತಾತ್ಮ ಕಾಣಿಸಿಕೊಳ್ಳುವುದಿಲ್ಲವೆಂದಾಯಿತಲ್ಲಾ? ಭೂತ, ಪ್ರೇತ ಎಲ್ಲಾ ಸುಳ್ಳು. ಯಾರೋ ಬೇಕೆಂದೇ ನಮ್ಮೊಡನೆ ಆಟವಾಡುತ್ತಿದ್ದಾರೆ. ಅವರು ಸಿಕ್ಕಿ ಬೀಳದಿರಲು ಸಾಧ್ಯವಿಲ್ಲ. ಎರಡು ದಿನ ಕಾದು ನೋಡೋಣ.
ಎರಡು ರಾತ್ರಿಗಳು ನೆಮ್ಮದಿಯಿಂದ ಉರುಳಿದವು. ಮೂರನೆಯ ರಾತ್ರಿ ದೊಂದಿ ಬೆಳಕಿನ ಕಾವಲಿರಲಿಲ್ಲ. ಅಂದು ಸರಿರಾತ್ರಿ ಯಾವುದೋ ಅಂತರ ಪಿಶಾಚವೊಂದರ ಶಾಪದಂತೆ ಅದೇ ಮಾತುಗಳು ಬಾನ ಗರ್ಭವನ್ನೊಡೆದು ತೇಲಿ ಬರತೊಡಗಿದವು.
ಪಾಲೇರಿ ಒಡೆಯಂಡ ಕುತ್ತಿ ಮತ್ತುತ್ತು ಪೋಡು. ಇಲ್ಲಿ ಅಂಬೆ ದುಂಬಿ ಬೊಳಿಯಡು.
ಅರಮನೆಯ ಅಂಗಳದಲ್ಲೇ ಮಲಗಿದ್ದ ದೊಡ್ಡ ವೀರ ರಾಜನಿಗೆ ಎಚ್ಚರಾಯಿತು. ಅವನು ಕೆಲಸದಾಳುಗಳನ್ನು ಕೂಗಿ ಎಬ್ಬಿಸಿದ. ತಾನು ಕತ್ತಿ ಹಿಡಿದು, ದೊಂದಿಗಳನ್ನು ಉರಿಸಲು ಆಜ್ಞಾಪಿಸಿದ. ಆಳುಗಳು ದೊಂದಿ ಬೆಳಕಲ್ಲಿ ಪ್ರೇತಾತ್ಮವನ್ನು ಹುಡುಕುತ್ತಾ ಹೋದರು. ಅರಮನೆಯ ಹಿಂಬದಿಯಲ್ಲಿ ದಟ್ಟ ಕಾಡು. ಆಕಾಶವನ್ನು ಚುಂಬಿಸುವ ಮರಗಳು. ರಾತ್ರಿ ಆ ಕಗ್ಗತ್ತಲ ಕಾಡಲ್ಲಿ ಏನೂ ಕಾಣುತ್ತಿರಲಿಲ್ಲ. ಕಾಡಿನ ಒಳಗೆ ನುಗ್ಗಲು ಆಳುಗಳಿಗೆ ಪುಕುಪುಕು. ಒಂದು ವೇಳೆ ಅದು ಹಗ್ಗ ತಗೊಂಡ ಪುಲಿಯಂಡ ಕುಟುಂಬದವನ ಪ್ರೇತಾತ್ಮವೇ ಆಗಿದ್ದರೆ?
ರಾತ್ರಿ ಕಳೆಯಿತು. ದೊಡ್ಡ ವೀರರಾಜನಿಗೆ ಈ ಪ್ರೇತಾತ್ಮದ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆಂದು ಗೊತ್ತಾಗಲಿಲ್ಲ. ಅವನು ಅರಮನೆಯ ಕಾರ್ಯಕಾರ ಕೆಟುವಳಿ ಅಚ್ಚಣ್ಣನ ಸಲಹೆ ಕೇಳಿದ. ಕೆಟುವಳಿ ಅಚ್ಚಣ್ಣ ಪ್ರೇತಾತ್ಮದ ಶಾಪ ಕೇಳಿ ಬಂದ ಸ್ಥಳವನ್ನು ಪರಿಶೀಲಿಸಿದ.
ಅದು ಅರಮನೆಯ ಹಿಂಬದಿಯ ಕಾಡು ಪ್ರದೇಶದಿಂದ ತೇಲಿ ಬಂದಿತ್ತು. ಅಲ್ಲಿರುವ ಮರಗಳಲ್ಲಿ ಒಂದು ಬಹಳ ಎತ್ತರದ ಬೃಹತ್ತಾದ ಮಾವಿನ ಮರ. ಕೆಟುವಳಿ ಅಚ್ಚಣ್ಣ ಅದರ ಮೇಲಿನಿಂದ ಆ ಶಾಪಗ್ರಸ್ತ ಧ್ವನಿ ಹೊರಟಿರಬೇಕೆಂದು ಊಹಿಸಿದ. ಆ ಮರದ ಸಮೀಪ ಯಾರಿಗೂ ಕಾಣದಂತೆ ಆರು ಮಂದಿ ಕಾಪಾಳರನ್ನು ರಾತ್ರಿ ಕಾವಲಿಗೆ ಹಾಕಿದ. ಅವರು ರಾತ್ರೆಯಲ್ಲೂ ಎಂತಹ ಮರವನ್ನಾದರೂ ಏರಬಲ್ಲ ಅಸಾಧಾರಣ ಧೈರ್ಯವಂತರಾಗಿದ್ದರು.
ಮತ್ತೆ ಮೂರು ದಿನ ಅಂತರ ಪಿಶಾಚಿಯ ಶಾಪಗ್ರಸ್ತ ಮಾತುಗಳು ಬಾನಗರ್ಭದಿಂದ ತೇಲಿ ಬರಲಿಲ್ಲ.
ನಾಲ್ಕನೆಯ ರಾತ್ರಿ ಎರಡನೇ ಜಾಮದಲ್ಲಿ ಒಂದು ಬೃಹತ್ತಾದ ಆಕೃತಿ ಆ ಮರದತ್ತ ಬರುತ್ತಿರುವುದು ಕಂಡಿತು. ಅದು ಇನ್ನೇನು ಮರ ಹತ್ತಬೇಕು ಎನ್ನುವಷ್ಟರಲ್ಲಿ ಕೆಟುವಳಿ ಅಚ್ಚಣ್ಣ ಕೂಗಿಕೊಂಡ.
ಅವನೇ, ಹಿಡಕೊಳ್ಳಿ.
ಅವನು ಓಡಿ ಹೋಗಲು ಯತ್ನಿಸಿದ. ಕಾಪಾಳರ ಪಡೆ ಅವನನ್ನು ಸುತ್ತುವರಿಯಿತು. ಅವನನ್ನು ಹಿಡಿಯುವುದು ಸುಲಭವಿರಲಿಲ್ಲ. ಮೈಗೆ ಎಣ್ಣೆ ಹಚ್ಚಿಕೊಂಡಿದ್ದ ಅವನು ಹಿಡಿತದಿಂದ ಆಗಾಗ ಜಾರಿಕೊಳ್ಳುತ್ತಿದ್ದ. ಕಾಪಾಳರು ಆರು ಜನ ಇದ್ದುದರಿಂದ ಅವನ ಆಟ ಸಾಗಲಿಲ್ಲ.
ಅರಮನೆಯ ಅಂಗಳದಲ್ಲಿ ದೊಂದಿಗಳು ಹತ್ತಿಕೊಂಡವು. ಸಿಕ್ಕಿಬಿದ್ದಿದ್ದ ಪ್ರೇತಾತ್ಮ ದೈತ್ಯಾಕಾರದ ಆಜಾನುಬಾಹು. ಇಡೀ ಮೈಗೆ ಮಸಿ ಎಣ್ಣೆ ಬಳಕೊಂಡು ಭೀಕರವಾಗಿ ಕಾಣುತ್ತಿದ್ದ. ಮೈ ಮೇಲೆ ಒಂದು ಲಂಗೋಟಿ ಬಿಟ್ಟರೆ ಬೇರಾವ ವಸ್ತ್ರವೂ ಇರಲಿಲ್ಲ. ಕೆಟುವಳಿ ಅಚ್ಚಣ್ಣನಿಗೆ ಅವನ ಗುರುತು ಸಿಕ್ಕಿತು.
ಇವನು ಪುಲಿಯಂಡ ಕಾರಿಚ್ಚ.
ಸಿಕ್ಕಿಬಿದ್ದ ವ್ಯಕ್ತಿ ಹೌದೆನ್ನುವಂತೆ ತಲೆಯಾಡಿಸಿದ.
ದೊಡ್ಡ ವೀರ ರಾಜನಿಗೆ ಪರಮಾಶ್ಚರ್ಯವಾಯಿತು. ಬಲಿಷ್ಠ ದೇಹಿ ಕಾರಿಯಪ್ಪ ತಲೆ ಕೆಟ್ಟವನಂತೇನೂ ಕಾಣುತ್ತಿರಲಿಲ್ಲ.
ಶಾಂತ ಸ್ವರದಲ್ಲಿ ದೊಡ್ಡ ವೀರ ರಾಜ ಕೇಳಿದ.
ಹೀಗೇಕೆ ಮಾಡಿದೆ ಕಾರಿಚ್ಚ.
ಇದು ನಮ್ಮ ಹಿರಿಯರು ಬೆವರು ಹರಿಸಿ ಮಾಡಿಕೊಂಡ ಭೂಮಿ. ನೀನು ಅದನ್ನು ನಮ್ಮಿಂದ ಕಿತ್ತುಕೊಂಡೆ. ಪುಲಿಯಂಡ ಮನೆತನದ ನೆಮ್ಮದಿಯನ್ನು ಹಾಳು ಮಾಡಿದೆ. ಹೀಗಲ್ಲದೆ ಇನ್ನೇನು ಮಾಡಬೇಕಿತ್ತು?
ಅವನು ಏಕವಚನ ಬಳಸಿದರೂ ದೊಡ್ಡ ವೀರರಾಜನಿಗೆ ಸಿಟ್ಟು ಬರಲಿಲ್ಲ.
ನನಗಾಗಿ ನಾನು ಈ ಅರಮನೆಯನ್ನು ಕಟ್ಟಿಸುತ್ತಿಲ್ಲ. ನಿಮಗಾಗಿ, ಕೊಡಗರಿಗಾಗಿ ಕಟ್ಟಿಸುತ್ತಿರುವುದು. ನಮ್ಮ ಸ್ವಾತಂತ್ರ್ಯವನ್ನು ಸೂರೆಗೊಂಡವನು ಟಿಪ್ಪು ಸುಲ್ತಾನ. ಅವನನ್ನು ಕೊಡಗರ ಸಹಾಯದಿಂದ ಈ ನಾಡಿನಿಂದ ಓಡಿಸುವುದು ನನ್ನ ಉದ್ದೇಶ. ಅರ್ಥಮಾಡಿಕೋ ಕಾರಿಚ್ಚ. ನೀನು ಅನ್ಯನಲ್ಲ. ಇಲ್ಲಿರುವುದಕ್ಕಿಂತಲೂ ಹೆಚ್ಚಿನ ಭೂಮಿ ಯನ್ನು ಮಗ್ಗುಲದಲ್ಲಿ ನಿನ್ನ ಕುಟುಂಬಕ್ಕೆ ನೀಡಿದ್ದೇನೆ. ನಿನಗೆ ಅವರೊಡನೆ ಹೋಗಲು ಇಷ್ಟವಿಲ್ಲದಿದ್ದರೆ ಹೇಳು. ಅರಮನೆಯ ಕಾರ್ಯಕಾರನನ್ನಾಗಿ ನಿನ್ನನ್ನು ನೇಮಿಸಿಕೊಳ್ಳುತ್ತೇನೆ. ನಿನ್ನ ಮೇಲೆ ನನಗೆ ಸಿಟ್ಟಿಲ್ಲ. ಸಾಗುವಳಿ ಮಾಡುತ್ತಿ ಎಂದಾದರೆ ಅರಮನೆಗೆ ಸೇರಿದ ಪುಣ್ಯದ ಭೂಮಿಯನ್ನು ಕೊಡುತ್ತೇನೆ. ಸುಮ್ಮನೆ ತಲೆ ಕೆಟ್ಟವನಂತೆ ವರ್ತಿಸಬೇಡ.
ಕಾರಿಚ್ಚ ಮುಖಕ್ಕೆ ರಾಚುವಂತೆ ಉತ್ತರಿಸಿದ.
ಅನ್ಯರ ಚಾಕರಿ ಮಾಡಿ ಪುಲಿಯಂಡ ಕುಟುಂಬದವರಿಗೆ ಅಭ್ಯಾಸವಿಲ್ಲ.
ನಾನು ಒತ್ತಾಯಿಸುವುದಿಲ್ಲ. ನಿನ್ನನ್ನು ಏನೂ ಮಾಡದೆ ಬಿಟ್ಟು ಬಿಡುತ್ತೇನೆ. ಹೊರಟು ಹೋಗು ಇಲ್ಲಿಂದ. ಇನ್ನೂ ಮುಂದೆ ನೀನು ಇಲ್ಲಿರಕೂಡದು.
ನಾನು ಹಾಗೆ ಹೋಗುವುದಿಲ್ಲ. ಮತ್ತೆ ಮಾವಿನ ಮರ ಹತ್ತಿ ಶಾಪ ಕೊಡುತ್ತೇನೆ. ನೀನು ಸರ್ವನಾಶವಾದ ಮೇಲೆಯೇ ನಾನು ಇಲ್ಲಿಂದ ಹೋಗುವುದು.
ದೊಡ್ಡ ವೀರ ರಾಜ ಗಂಭೀರನಾದ.
ಯೋಚಿಸು ಕಾರಿಚ್ಚ. ಇದೇ ಕೊನೆಯ ಮಾತೆ?
ಕಾರಿಚ್ಚ ಕೋಪದಿಂದ ಉತ್ತರಿಸಿದ.
ಹೌದು. ಪುಲಿಯಂಡ ಕುಟುಂಬಕ್ಕಿರುವುದು ಒಂದೇ ನಾಲಿಗೆ. ಪಾಲೇರಿ ಒಡೆಯಂಡ ಕುತ್ತಿ ಮುತ್ತುತು ಪೋಡು. ಇಲ್ಲಿ ಅಂಬೆ ದುಂಬಿ ಬೊಳಿಯಡು.
ಕ್ರೋಧೋನ್ಮತ್ತನಾದ ದೊಡ್ಡ ವೀರ ರಾಜ ಕಾರಿಚ್ಚನನ್ನು ಆನೆಯ ಕಾಲಿಗೆ ಕಟ್ಟಿಸಿ ಅರಮನೆಗೆ ಪ್ರದಕ್ಷಿಣೆ ಹಾಕಿಸಿದ.
ಕ್ಷಮೆ ಯಾಚಿಸಿದರೆ ಈಗಲೂ ನಿನಗೆ ಬದುಕುವ ಅವಕಾಶವಿದೆ. ಸುಮ್ಮನೆ ಸಾಯಬೇಡ.
ಉಸಿರು ನಿಲ್ಲುವವರೆಗೂ ಪುಲಿಯಂಡ ಕಾರಿಚ್ಚ ಶಾಪ ಕೊಡುತ್ತಲೇ ಇದ್ದ.
ಪಾಲೇರಿ ಒಡೆಯಂಡ ಕುತ್ತಿ ಮುತ್ತುತು ಪೋಡು ಇಲ್ಲಿ ಅಂಬೆ ದುಂಬಿ ಬೊಳಿಯಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಜೆಪಿ ಎಂಬ ಶಬರಿಯೂ ಕೊಮಾರನೆಂಬ ರಾಮನೂ…
Next post ಗುರುವೇ, ಇದೇನಿದು ನಿನ್ನ ವರಸೆ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys