ಗುರು ಬ್ರಮ್ಮ ಗುರು ಇಷ್ಣು ಗುರುದೇವೋ ಮಹೇಸ್ವರ ಅಂತ ಮೊನ್ನೆವರ್ಗೂ ನೆಮ್ಮದಿಯಾಗಿದ್ದ ಮಂದಿ ನಂಬ್ಕಂಡಿತ್ತು. ಆಗ್ದಿ ಭಯಂಕರ ಗೌರವಾನ ಮೇಷ್ಟ್ರ ಪೋಸ್ಟಿಗೆ ಕೊಡೋದು, ಬಡಮೇಷ್ಟ್ರು ಅಂಬೋ ಕನಿಕರವೂ ಇತ್ತು. ಲಂಚಪಂಚ ಹೊಡೆಯಂಗಿಲ್ಲ ಬೇರೆ ಆಮದಾನಿ ಇಲ್ಲದ ಕಸುಬು ಅಂತ್ಹೇಳಿ ಮಂದಿ ತಮ್ಮ ಹೈಕಳ್ನ ಶಾಲೆಗೆ ಕಳಿಸೋವಾಗ ಬೆಳೆದ ಕಾಳುಕಡಿ ಹಾಲು ಬೆಣ್ಣೆ ಸಪ್ಲೆ ಮಾಡೋವಷ್ಟು ಉದಾರಿಗಳೂ ಆಗಿದ್ದರು. ಇತ್ತಿತ್ಲಾಗೆ ಮೇಷ್ಟ್ರು ಪಾಠ ಮಾಡದ್ಕಿಂತ ಹಳ್ಳಿನಾಗೆ ರಾಜಕೀಯ ಮಾಡ್ತಾ ತನ್ನ ಹೊಲ ತೋಟದಾಗೆ ದುಡಿತಾ ಟೇಮ್ ಸಿಕ್ಕಾಗ ಈ ಸ್ಕೂಲ್ ಬಾಗ್ಲು ತೆಗೆಯೋಕೆ ಶುರು ಹಚ್ಕಂಡ್ರು. ಇಷ್ಟಾದರುವೆ ಹಳ್ಳಿನಾಗೆ
ಮಾ ಬುದ್ಧಿವಂತ ಅಂದ್ರೆ ಮೇಟ್ರೆ ಅನ್ನಂಗಾಗಿ ಆವಯ್ಯ ಹೇಳಿದ ಪಾರ್ಟಿಗಳಿಗೇ ಓಟು ಹಾಕೋವಷ್ಟು ಜನರು ಹುಂಬರಾಗ್ತಾ ಹೋದಂಗೆ ಮೇಷ್ಟ್ರುಗಳ ತರ್ಲೆ ಜಾಸ್ತಿ ಆತು. ರಾಜಕಾರಣಿಗಳ ದೋಸ್ತಿನೂ ಭಾಳಾತು. ಮೂಕರ್ಜಿ ಬರೆಯೋದ್ರಿಂದ ಹಿಡ್ದು ಹಳ್ಳಿನಾಗೆ ಒಂದಾಗಿರೋ ಮನೆಗಳನ ಫೋಲಿಟ್ರಿಕ್ಸ್ ನೆಪದಾಗೆ ಮುರಿಯೋವಷ್ಟು ಪ್ರಚಂಡರೂ ಆಗೋದ್ರು. ಯಲಕ್ಷನ್ ಡ್ಯೂಟಿ ಮಾಡೋದ್ರಾಗೆ ನಿಸ್ಸೀಮರಾದ ಇವರು ಯಾವ ಪಾರ್ಟಿನ ಬೇಕಾರೂ ಅವರ ಸರಹದ್ದಿನಾಗೆ ಮಣ್ಣು ಮುಕ್ಕಿಸೋವಷ್ಟು ಖದರ್ ಬೆಳೆಸ್ಕಂಡ್ರು.

ಹಿಂದಿನ ಕಾಲ್ದಾಗೂ ಗುರುಗಳಿದ್ರೇಳ್ರಿ. ಮಹಾಭಾರತ ದ್ರೋಣಾಚಾರಿ ರಾಕ್ಷಸಗುರು ಶುಕ್ಲಾಚಾರಿ ವಿಶ್ವಾಮಿತ್ರ ಚಾಣಕ್ಯ ವಿದ್ಯಾರಣ್ಯ ಹೆಸರಿಗೊಬ್ಬ ರಾಜನ್ನ ಮಾಡಿ ತಾನೇ ರಾಜ್ಯಭಾರ ಮಾಡಿದ ಮಹಾನ್ ಮಹಾನ್ ರಾಜಕಾರಣಿ-ಕಂ ಗುರುವರ್ಯರೂ ಪುರಾಣದಾಗವರೇಳಳ್ರಿ. ದ್ರೋಣಾಚಾರಿ ಅಂಬೋವಾ ಏಕಲವ್ಯಂಗೆ ಶೂದ್ರ ಅಂತ ಪಾಠ ಹೇಳದಿದ್ರೂ ಹೆಬ್ಬೆರಳ್ನೇ ಕಾಣಿಕೆಯಾಗಿ ತಗೊಂಡ ಗುರಾಗ್ರಣಿ. ಇವರೆಲ್ಲಾ ಏನೇ ರಾಜಕಾರಣ ಮಾಡಿದ್ರೂ ರೇಪಿಸ್ಟ್‌ಗಳಾಗಿದ್ದರು ಅಂಬೋ ಪುಕಾರುಗಳೇನು ಇದ್ದಂಗಿಲ್ಲ. ಆದರೆ ಈಗೇನಾಗೇತ್ರಿ ಗುರುಗಳಿಗೇ!? ಅಲ್ಲಲ್ಲಿ ಕಾಲೇಜದಾಗ ಲೆಕ್ಚರರ್ಸು ಕಾಲೇಜ್ ಗುರ್ಗುಗುಳ್ಗೆ ಡವ್ ಹೊಡಿತರೆ ಅಂಬೋ ಕೇಸ್‌ಗಳವೆ. ಇದ್ದರೂ ರೇಪ್‌ ಕೇಸ್‌ಗಳ ದಾಖಲೆ ಆಗಿಲ್ಲ ಬಿಡ್ರಿ. ತತ್ರಾಪಿ ಪ್ರೈಮರಿ ಮೇಷ್ಟ್ರಗಳು ಸಡನ್ ಆಗಿ ರೇಪಿಸ್ಟ್‌ಗಳಾಗಲು ಕಾರಣವೇನಂಬೋದೇ ತಿಳಿವಲ್ದಂಗಾಗೇತ್ರಿ. ಮದುವೆ ಮುಂಜಿಲ್ದ ಪಡ್ಡೆ ಹುಡುಗರು ಗುರುಗಳಾಗಿದ್ದೇ ಡೇಂಜರಾಗಿರ್ಬೋದೆ? ಮದುವೆಯಾದ ಮೇಟ್ರುಗಳೂ ಹಳ್ಳಿ ಹುಡುಗೀರ ಮ್ಯಾಗೆ ಕಣ್ಣು ಹಾಕಿ ಕಣಗೆ ಏಟು ತಿಂದ ಪ್ರಸಂಗಗಳೂ ರವಷ್ಟು ಉಂಟು. ಇಂತದ್ದೆಲ್ಲಾ ಆಫೀನ್ನಾಗೂ ಸಂಗೀತ ಶಾಲೆನಾಗೂ ಸಂತೆನಾಗೂ ಇಧಾನಸೌಧದ ಕೋಣೆನಾಗೂ ನೆಡಿತೇತೇನನ್ರಿ.
ಎಲ್ಲಾ ಕಡೆಗೂ ಒಳ್ಳೇರು ಕೆಟ್ಟರೂ ಇದ್ದೇ ಇರ್ತಾರೆ. ಆದರೆ ಈಗೀಗ ಬರ್ತಾ ಇರೋ ರಿಫೋರ್ಟ್ ನೋಡಿದ್ರೆ ಹೆಣ್ಣು ಹೆತ್ತೋರು ಮಕ್ಕಳ್ನ ಶಾಲೆಗೆ ಕಳಿಸಾಕೆ ಗಡಗಡ ನಡಗಂಗಾಗೇತ್ರಿ. ಮಳವಳ್ಳಿ ತಾಲ್ಲೂಕು ಮಾಗನೂರಿನ ಸರ್ಕಾರಿ ಪ್ರೈಮರಿ ಶಾಲೆ ಹೆಡ್‌ಮಾಸ್ತರೇ ಬಾಳ ದಿನದಿಂದ ಐದನೇ ತರಗತಿ ಓದೋ ಹುಡುಗೀನ ಸಪರೇಟ್ ರೂಮಿಗೆ ಕರ್ಕೊಂಡು ಹೋಗಿ ಬೆತ್ಲೆ ಮಾಡಿ ಬಲಾತ್ಕಾರವಾಗಿ ಏನೆಲ್ಲಾ ಚೇಷ್ಟೆ ಮಾಡೋನಂತೆ. ಬಾಯಿಬಿಟ್ರೆ ಪರೀಕ್ಷೇಲಿ ಢಮಾರ್ ಅಂತ ಹೆದರಿಸೋನಂತೆ. ಈ ಮಹಾದೇವಸಾಮಿ ಅಂಬೋ ಬೆರ್ಕಿ ನನ್ಮಗ ಈಗ ಪರಾರಿ. ಹಂಪಾಪುರದ ಬಾಲಕಿ ೧೦ನೇ ತರಗತಿ ಓದೋಳು. ಈಕೆನಾ ಯಾವನೋ ತಲೆ ಮಾಸೋನು ಕಬ್ಬಿನ ಗದ್ನೆನಾಗೆ ರೇಪ್‌ ಮಾಡನ್ನೆ. ಬಸರಾಳು ಗ್ರಾಮದ ಗವೀಗೌಡ ೪೫ರ ಮುದಿಯ. ಎಸ್.ಎಸ್.ಎಲ್.ಸಿ. ಓದೋ ಹುಡ್ಗಿಗೆ ಶಾಲೆ ಕಸ ಗುಡಿಸೋಕೆ ಹೇಳಿ ಹಿಂದಿನಿಂದ ಮೈಮಾಗೆ ಬಿದ್ದು ಹಿಂಡಿ ಹಿಪ್ಪೆ ಮಾಡವ್ನೆ. ಇವನೂ ಗುರುವೆ ಅಂಬೋದು ದೊಡ್ಡ ಶಾಕ್. ಹೊಸಕೋಟೆ ತಾಲ್ಲೂಕು ಸಿದ್ದೇನಹಳ್ಳಿನಾಗೆ ೨೦ ವರ್ಷದ ಯುವಕ ೧೧ ವರ್ಷದ ಬಾಲಕಿ ಮ್ಯಾಗೆ ಅತ್ಯಾಚಾರ ಮಾಡಿ ೧೦ ರೂಪಾಯಿ ಕೈಗಿಟ್ಟು ಓಡಿ ಹೋದ. ಆ ಊರಿನ ಪಂಚಾಯ್ತಿದಾರರು ಏನು ನ್ಯಾಯದಾನ ನೀಡಿದರು ಗೊತ್ತೆ? ‘ಇನ್ನು ಮುಂದೆ ಹಿಂಗ್ ಮಾಡಕಿಲ್ಲ ತಪ್ಪಾತು’ ಅಂತ ಯವಕನಿಂದ ಹುಡುಗಿ ತಂದೆಗೆ ಎಲೆ ಅಡಿಕೆ ಕೊಡ್ಸೋ ಶಿಕ್ಷೆ! ಇದೆಂಥ ತೀರ್ಪು ಇಲ್ಲಿರೋರು ಎಂಥ ಜನರೆಂಬೊದ್ನ ನಿಮ್ಮ ಥಿಂಕಿಂಗೇ ಬಿಡ್ತಿವ್ನಿ. ಯಾರೆಂಗಾನ ಆಗ್ಲಿ ಮೇಷ್ಟ್ರು ಸ್ಥಾನದಾಗಿರೋನ ಕೈಗೆ ಹೆಣ್ಣು ಮಕ್ಳು ಬೋ ಸುಲಭವಾಗಿ ಸಿಗ್ತವೆ. ಪಾಠ ಹೇಳಿ ಮಕ್ಕಳನ್ನು ಸರಿಹಾದಿಗೆ ಹಚ್ಚೋನೇ ಕಾಮ ಪಿಶಾಚಿ ಆಗೋದ್ರೆ ಏನಾದೀತ್ರಿ ಈ ದೇಸದ ಗತಿ ಸಿವ್ನೆ?

ಇಂಥೋರನ್ನ ಅಮಾನತ್ತು ಮಾಡಿದರೆ ವರ್ಗಾಯಿಸಿದ್ರೆ ಸಾಲ್ದು. ಕೆಲಸದಿಂದ ವಜಾ ಮಾಡಿದ್ರೂ ತಕ್ಕ ಶಿಕ್ಷೆ ಆಗದು. ಆಮಾನತ್ತು ಶಿಕ್ಷೆನೇ ಅಲ್ಲ. ಅರ್ಧ ಸಂಬಳ ರಜಾ ಬೇರೆ. ಇಂಥ ಹರಾಮ್ ಕೋರರನ್ನು ಪೋಲಿಸರಿಗೆ ಒಪ್ಪಿಸಿ ಜೈಲಿಗಟ್ಟಿದರೂ ವೇಸ್ಟೇ. ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಶೋಷಣೆ ನಡೆಸೋ ಮೇಷ್ಟ್ರಾಗಲಿ ಯಾವನೇ ಆಗಿರಲಿ ಅವಗೆ ತಕ್ಕ ಸಿಕ್ಸೆಯಾಗಬೇಕು. ಈ ವಿಷಯದಲ್ಲಿ ಮುಸ್ಲಿಂ ಕಂಟ್ರೀಸ್ ನಿರ್ದಾಕ್ಷಿಣ್ಯವಾಗಿ ನೀಡುವ ಶಿಕ್ಷೆ ಕ್ರೂರವೆನ್ನಿಸಿದರೂ ಇಂತಹ ದುರುಳರಿಗೆ ಮತ್ತಾವ ಶಿಕ್ಷೆಯೂ ಕಡಿಮೆ ಎಂಬುದೇ ಹೆಣ್ಣು ಹೆತ್ತವರ ತೀರ್ಮಾನವಾಗೇತ್ರಿ. ಸರ್ಕಾರ ಉಗ್ರ ಕ್ರಮಕ್ಕೆ ಮುಂದಾಗಿದ್ದರೂ ಇಂಥ ಮೇಷ್ಟ್ರನ್ನು ಪತ್ತೆ ಹಚ್ಚಲು ಎಂಥ ಡಿಟೆಕ್ಟರ್ ತಯಾರಿಸಬೇಕು? ಕಾಮಾಂಧರ ಐಡಂಟಿಟಿಗೆ ಇನ್ನೆಂಥ ಮಿಶನ್ ಕಂಡು ಹಿಡಿಬೇಕೋ ದೇವರೇ ಬಲ್ಲ. ಕಾಮಾತುರಾಣಾಂ ನಭಯಂ ನಲಜ್ಜ. ಕಾಮಕ್ಕೆ ಬಿದ್ದ ಹತ್ತು ತಲೆಗಳ ರಾವಣ ತನ್ನ ಒಂದಾರ ತೆಲಿ ಉಳಿಸಿಕೊಂಡ್ನೆ? ಬಲಿಷ್ಠ ಕೀಚಕ ಹೆಣ್ಣಿನ ಆಶೆಗೆ ಬಿದ್ದು ಬೀದಿ ಹೆಣವಾದ. ದ್ರೌಪದಿಗೆ ಡವ್‌ ಹೊಡೆದ ದುರ್ಯೋಧನ ತೊಡೆ ಮುರ್ಕೊಂಡು ನೆಗೆದು ಬಿದ್ದ. ದ್ರೌಪದಿ ಸೆರಗು ಟಚ್ ಮಾಡಿದ್ದೇ ತಡ ದುಶ್ಶಾಸನನ ಎಂಡಿಂಗ್ ಶುರುವಾಯಿತು ಹೆಣ್ಣು ವ್ಯಾಮೋಹಕ್ಕೆ ಶರಣಾದ ರಕ್ಕಸ ಭಸ್ಮಾಸುರ ಬೂದಿಯಾಗಿ ಆಶ್‌ಟ್ರೇ ಸೇರಿದ. ಎಷ್ಟೆಲ್ಲಾ ಪುರಾಣ ಊದಿದರೂ ಮನುಷ್ಯ ತನ್ನ ಮನಸ್ಸನ್ನು ಹತೋಟಿನಾಗೆ ಇಟ್ಕಂಡಿಲ್ಲ ಅಂಥೋನು ಬೇವಾರ್ಸಿ ಡೆಡ್‌ಬಾಡಿ ಆಗೋದು ಗ್ಯಾರಂಟಿ ಕಣ್ರಿ ನೆನಪಿರ್ಲಿ, ಜ್ಞಾನದೇಗುಲಗಳಾದ ಶಾಲೆಗಳು ಕಾಮುಕರ ಬೀಡಾಗಬೇಕೆ? ಯಾವ ವೃತ್ತಿಯಲ್ಲಿ ತಪ್ಪಾದರೂ ತಿದ್ದಬಹುದು ಹೆತ್ತವರ ನಂತರ ಸ್ಥಾನ ತುಂಬುವ ಶಿಕ್ಷಕನೇ ತಪ್ಪು ಮಾಡಿದರೆ ತಿದ್ದೋರು ಯಾರು? ಪವಿತ್ರವಾದ ವೃತ್ತಿಗೆ ಅವಮಾನ ಮಾಡಬಹುದೆ? ಶಿಕ್ಷಕರೇ ಕುಳಿತು ಯೋಚಿಸಿ ತಮ್ಮ ಗೌರವ ತಾವೇ ಉಳಿಸಿಕೊಳ್ಳಬೇಕಿದೆ.
*****
( ದಿ. ೦೬-೦೨-೨೦೦೬)