ವಕೀಲರ ವಿವೇಕರಹಿತ ವರ್ತನೆ

ವಕೀಲರ ವಿವೇಕರಹಿತ ವರ್ತನೆ

judge-158269_960_720ದಶಕಗಳು ಕಳೆದಂತೆ ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕುಸಿಯುತ್ತಿದೆ. ಅರಾಜಕತೆ ಆವರಿಸಿಕೊಳ್ಳುತ್ತಿದೆ ಇದಕ್ಕೆ ನ್ಯಾಯಾಲಯಗಳೂ ಹೊರತಾಗಿಲ್ಲ ಎಂಬುದಕ್ಕೆ ಚೆನ್ನೈನಲ್ಲಿ ದಿನಾಂಕ ೨೮.೧೦.೯೭ರಂದು ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ ನಡೆದೆ ಘಟನೆ ಸಾಕ್ಷಿಯಾಗಿದೆ.

ಆರೋಪ ಹೊತ್ತಿರುವ ಸುರ್ಲಾ ಅಲಿಯಾಸ್ ಸುದೆಲೈ ಮುತ್ತು ಮತ್ತು ಇತರ ಮೂವರು ಕಳೆದ ಐದು ವರ್ಷಗಳಿಂದ ಬಂಧನದಲ್ಲಿರುವ ಪ್ರಕರಣ ಇತ್ಯರ್ಥವಾಗದೆ ಮುಂದೂಡುತ್ತಿರುವುದು ಈ ಘಟನೆಗೆ ಕಾರಣವಾಗಿದೆ. ಜಾಮೀನು ನೀಡಿ ಇಲ್ಲಾ ವಿಚಾರಣೆಮಾಡಿ ಇತ್ಯರ್ಥಗೊಳಿಸಿ ಎಂಬ ಆರೋಪಿಗಳ ಬೇಡಿಕೆಯೂ ನ್ಯಾಯಸಮ್ಮತವಾದುದೆ. ಏಕೆಂದರೆ ಇವರು ಕೇವಲ ಆರೋಪಿಗಳೆ ಹೊರತು ಅಪರಾಧಿಗಳಲ್ಲ.

ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ವಿಳಂಬ ಆಗುವುದಕ್ಕೆ ಪ್ರತಿಯೊಂದು ಪ್ರಕರಣಗಳಿಗೂ ತನ್ನದೇ ಆದ ಕಾರಣಗಳಿದ್ದರೂ ವಿಳಂಬ ಅನಪೇಕ್ಷಣೀಯ. “ಯಾರು ಯಾವುದಕ್ಕೆ ಅರ್ಹರೋ ಅವರಿಗೆ ಅದನ್ನು ಪ್ರಾಮಾಣಿಕವಾಗಿ ಸಲ್ಲಿಸುವುದು ನ್ಯಾಯದ ಗುರಿ. ಕಾನೂನಿನ ನಿಯಮಗಳೆಂದರೆ
೧. ಗೌರವಾನ್ವಿತವಾಗಿ ಬದುಕಲು ಬಿಡುವುದು
೨. ಮತ್ತೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು.
೩. ಅವರವರಿಗೆ ನ್ಯಾಯವಾದದ್ದನ್ನು ನೀಡುವುದು
ಎಂದು ನ್ಯಾಯ ತಜ್ಞ ಜಸ್ಟೀನಿಯನ್ ಹೇಳಿರುವುದು ಈ ಹಿನ್ನೆಲೆಯಲ್ಲೆ.

ನ್ಯಾಯ ವಿತರಣೆಯಲ್ಲಿ ವಿಳಂಬಕ್ಕೆ ಅನೇಕ ಒಳಹೊರ ಕಾರಣಗಳು, ಅಂತರಂಗ-ಬಹಿರಂಗಗಳು ಇರುತ್ತವೆ. ನ್ಯಾಯಾಂಗದಲ್ಲಿ ನಿರತರಾಗಿರುವವರು ಕೂಡ ಸಹಜವಾಗಿ ಅನೇಕ ಒತ್ತಡಗಳಿಗೆ ಒಳಗಾಗಿರುವವರೆ. ಈಚೆಗೆ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಸ್ನೇಹಿತನ ಅನುಭವ ಕಹಿಯಾದುದೆ. ಪ್ರಕರಣ ಒಂದರಲ್ಲಿ ಬೇಗ ತೀರ್ಮಾನಿಸಿ ಎಂದೊಬ್ಬರು, ಕೆಲ ಕಾಲ ತಡೆಹಿಡಿಯಿರಿ ಎಂದು ಮಗದೊಬ್ಬರು ಉಚ್ಛ ನ್ಯಾಯಾಲಯದ ನ್ಯಾಯಧೀಶರು ಒತ್ತಡ ತಂದ ಸಂಧಿಗ್ಧತೆ. ಇದು ಏನನ್ನು ಹೇಳುತ್ತದೆ? ಇಂಥ ಇನ್ನೂ ಸೂಕ್ಷ್ಮಾತಿ ಸೂಕ್ಷ್ಮವಾದ ಸಂದಿಗ್ಧಗಳು ಪ್ರಕರಣಗಳ ಅಂತರಂಗದಲ್ಲಿ ಅಡಗಿರುತ್ತವೆ. ಈ ಅಂತರಂಗಗಳ ಅರಿವು ಜನಸಾಮಾನ್ಯರಿಗೂ ಆಗುತ್ತಿದೆ. ಇನ್ನು ಆರೋಪ ಹೊತ್ತಿರುವವರಿಗೆ ತಿಳಿಯದಿರುತ್ತದೆಯೆ? ಅವರ ನ್ಯಾಯಯುತ ಬೇಡಿಕೆ ಈಡೇರದಿದ್ದಾಗ ಕೆಲವೊಮ್ಮೆ ಕಹಿ ಪ್ರಸಂಗಗಳು ನಡೆಯುವುದು ಸಹಜ.

ಕಕ್ಷಿದಾರನಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕಾದುದು ನ್ಯಾಯಾಧೀಶರಂತೆ ವಕೀಲರ ಕರ್ತವ್ಯವೂ ಹೌದು. ಇಂತಹ ಕಹಿ ಪ್ರಸಂಗಗಳು ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಕೀಲರ ಮೇಲೂ ಇದೆ. ಇಲ್ಲವಾದರೆ ಜನಸಾಮಾನ್ಯ ಕಾನೂನನ್ನು ಕೈಗೆ ಎತ್ತಿಕೊಳ್ಳುವ ಸ್ಥಿತಿ ಪ್ರಾಪ್ತವಾಗಿ ಬಿಡುತ್ತದೆ. ಆ ಹಿನ್ನೆಲೆಯಲ್ಲಿ “ನೀನು ನನ್ನನ್ನು ನಾಶ ಮಾಡಲು ನಿರತನಾಗಿದ್ದೀಯ. ನಿನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಏಕೆಂದರೆ ಅದು ತುಂಬಾ ಕಾಲತೆಗೆದುಕೊಳ್ಳುತ್ತದೆ. ನಾನೇ ನಿನ್ನನ್ನು ನಾಶ ಮಾಡುತ್ತೇನೆ” ಎನ್ನುವ ಕಾರ್ನೆಲ್ ವಾದರ್‌ನ ಮಾತು ಕ್ರಿಯಾತ್ಮಕವಾಗಿ ಬಿಡುತ್ತದೆ. ಅಂತಹ ಸ್ಥಿತಿ ಪ್ರಾಪ್ತವಾಗುತ್ತಿರುವುದರಿಂದಲೇ ಸಮಾಜದಲ್ಲಿ ಕಾನೂನು ಕುಸಿಯುತ್ತಿದೆ; ಅಶಾಂತಿ, ಅಭಧ್ರತೆ, ಅರಾಜಕತೆಗಳು ನೆಲೆಯೂರುತ್ತಿವೆ.

ಚೆನ್ನೈನಲ್ಲಿ ನಡೆದ ಘಟನೆ ನ್ಯಾಯಾಧೀಶ ಮತ್ತು ಆರೋಪಿಗಳ ನಡುವಿನದು. ಸದರಿ ಪ್ರಕರಣದಲ್ಲಿ ಐದು ವರ್ಷಗಳಾದರೂ ಜಾಮೀನು ನೀಡಿಲ್ಲ. ವಿಚಾರಣೆಗೂ ಎತ್ತಿಕೊಂಡಿಲ್ಲ ಎನ್ನುವುದು ಆರೋಪಿಗಳ ಆಕ್ರೋಶಕ್ಕೆ ಕಾರಣ. ೧೯೯೨ ರಲ್ಲಿ ಆಗಿನ ಐ. ಎ. ಎಸ್. ಅಧಿಕಾರಿ (ಈಗ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷ) ಚಂದ್ರಲೇಖಾ ಮೇಲೆ ಆಸಿಡ್ ಎರಚಲು ಈ ಅರೋಪಿಗಳು ಯತ್ನಿಸಿದರು ಎನ್ನುವುದು ಆರೋಪ. ಸಿ. ಬಿ. ಐ. ಉಳಿದ ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್ ನೀಡಲಿದೆ ಎನ್ನುವುದು ಪ್ರಕರಣ ಮುಂದೂಡಲು ನ್ಯಾಯಾಧೀಶರು ತಳೆದ ನಿಲುವು. ನಮ್ಮ ವ್ಯವಸ್ಥೆಯಲ್ಲಿ ಇಂತಹ ಕಾರ್ಯತಂತ್ರಗಳು -ರಾಜಕೀಯ ವ್ಯಕ್ತಿಗಳ ಹಿನ್ನೆಲೆ ಇದ್ದಾಗ-ಅನೇಕ ಅನುಮಾನಗಳಿಗೆ ಅವಕಾಶ ಮಾಡಿಕೊಡುವುದು ಸಹಜ. ಇಂತಹ ಸಂದರ್ಭಗಳಲ್ಲಿ ವಕೀಲರ ವರ್ತನೆ ಏನಾಗಬೇಕಾಗಿತ್ತು?

ನ್ಯಾಯಾದೀಶರತ್ತ ಕುರ್ಚಿ ಎಸೆದ ಆರೋಪಿಯನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗಿತ್ತು. ಸೂಕ್ತ ರಕ್ಷಣೆ ಒದಗಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತರಬೇಕಾಗಿತ್ತು. ಅದರೆ ವಕೀಲರು ಮಾಡಿದ್ದೇನು?

ಒಂದು ಕುರ್ಚಿ ಎಸೆದ ಆರೋಪಿಗಿಂತ ಹೆಚ್ಚಾಗಿ ಹತ್ತಾರು ಕುರ್ಚಿಗಳನ್ನು ನ್ಯಾಯಾಲಯದಲ್ಲಿ ಎಸೆದು ಕಡತಗಳು ಚಲ್ಲಾಪಿಲಿಗಿಯಾಗುವಂತೆ ದಾಂಧಲೆ ಮಾಡಿ ಆರೋಪಿಗಳಿಗೆ ಯದ್ವಾತದ್ವಾ ಹೊಡೆದದ್ದಲ್ಲದೆ ರಕ್ಷಣೆಗೆ ಇದ್ದ ಪೇದೆಯೊಬ್ಬ ಆಸ್ಪತ್ರೆ ಸೇರುವಂತೆ ಮಾಡಿದ ವಿವೇಕ ರಹಿತ ವರ್ತನೆ’. ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ನಡೆದ ಅಹಿತಕರ ಘಟನೆಯ ಕಹಿ ಮಾಸುವ ಮುನ್ನವೇ ನ್ಯಾಯಾಲಯದಲ್ಲಿ ನಡೆದ ವಿವೇಕರತಿಹ ವಕೀಲರ ವರ್ತನೆ ಒಟ್ಟಾರೆಯಾಗಿ ಭಾರತೀಯರಾದ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದರ ದಿಕ್ಸೂಚಿಯಾಗಿದೆ.

“ದೇವರ ಸಾಮ್ರಾಜ್ಯ ನಿನ್ನೊಳಗೆ ಇದೆ” ಕೃತಿಯಲ್ಲಿ ಜಗತ್ಪ್ರಸಿದ್ಧ ಬರಹಗಾರನಾದ ಲಿಯೊ ಟಾಲ್ಸ್ ಟಾಯ್ “ಕಾನೂನುಗಳು ಸ್ವಾರ್ಥಪರತೆ, ತಂತ್ರ ಹಾಗೂ ಪಕ್ಷಪಾತಗಳ ಫಲ. ನಿಜವಾದ ನ್ಯಾಯ ಅವುಗಳಲ್ಲಿಲ್ಲ ಹಾಗೂ ಅವುಗಳಲ್ಲಿ ಇರಲು ಸಾಧ್ಯವೂ ಇಲ್ಲ” ಎನ್ನುವ ಮಾತು ತನ್ನೆಲ್ಲ ಸಮಸ್ಯೆಗಳಿಗೆ ಕಾನೂನಿನ ಮೊರೆ ಹೋಗುತ್ತಿರುವ ಭಾರತದ ಸದ್ಯದ ಸಂದರ್ಭಕ್ಕೆ ಕಣ್ತೆರೆಸುವ ನುಡಿಗಳಾಗಿವೆ!

ವಿಳಂಬ ಭಾರತೀಯ ನ್ಯಾಯಪರಂಪರೆಗೆ ದೂರವಾದುದು. ನ್ಯಾಯ ವಿತರಣೆಯಲ್ಲಿ ವಿಳಂಬವಾಗಿರುವ ಉದಾಹರಣೆ ಸಿಗುವುದು ಬಲುಕಷ್ಟ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬ್ರಿಟಿಷರ ಕಾನೂನುಗಳನ್ನು ಯಥಾವತ್ತಾಗಿ ಅಳವಡಿಸಿಕೊಂಡ ಭಾರತ ಈಗಲಾದರೂ ಎಚ್ಚೆತ್ತು ತನ್ನ ಮಣ್ಣಿನ ಕಣ್ಣನ್ನು ತೆರೆಯಬೇಕಾದ ಅಗತ್ಯವಿದೆ. ಏಕೆಂದರೆ ಭಾರತದ ಅಳಿವು ಉಳಿವು ಆ ನಿರ್ಧಾರದ ಮೇಲೆ ನಿಂತಿದೆ. ಭಾರತದ ಪ್ರಸ್ತುತ ಸಂದರ್ಭದಲ್ಲಿ ಮೇಲಿನ ನ್ಯಾಯಾಲಯಗಳು ಒಂದು
ಸಾಂಪ್ರದಾಯಿಕ ರೀತಿಯ ಕಾರ್ಯಗಳಿಗೆ ಒಗ್ಗಿಹೋಗಿವೆ. ಅದೊಂದು ರೀತಿಯ ಐಷಾರಾಮ. ಅವುಗಳಿಗೆ ಭಾನುವಾರದಂತೆ ಶನಿವಾರವೂ ಭಾನುವಾರವೆ. ಅವುಗಳ ರಜಾಪದ್ಧತಿಯೆ ಒಂದು ರೀತಿಯದು.

ಭಾರತದಲ್ಲಿ ಭ್ರಷ್ಟಾಚಾರ ಎಂಬ ರೋಗ ಸರ್ವವ್ಯಾಪಿ. ಇದರಿಂದ ನ್ಯಾಯಾಲಯಗಳೂ ಮುಕ್ತವಾಗಿಲ್ಲ.. ಈ ವಾಸ್ತವ ವಕೀಲರಿಗೆ ತಿಳಿಯದುದೇನಲ್ಲ. ಏಕೆಂದರೆ ಅವರೂ ಈ ನ್ಯಾಯ ವ್ಯವಸ್ಥೆಯ ಒಂದು ಭಾಗವೆ ಆಗಿದ್ದಾರೆ.

ಈ ವಕೀಲರು ಸ್ವಜನ ಪಕ್ಷಪಾತ, ಜಾತೀಯತೆ, ಭ್ರಷ್ಟಾಚಾರ ಎಸಗುವ ನ್ಯಾಯಾಧೀಶರುಗಳು ಇದ್ದಾಗ್ಯೂ ಅವರ ವಿರುದ್ಧ ಎಂದಾದರೂ ಧ್ವನಿ ಎತ್ತುವ ಸಾಹಸ ಮಾಡಿದ್ದಾರೆಯೇ? ಬಹಳ ಅಪರೂಪಕ್ಕೊಮ್ಮೆ ಆಗಿದ್ದಿರಬಹುದು. ಅದರೆ ನ್ಯಾಯಾಧೀಶರು ಎಸಗುವ ಅನ್ಯಾಯ ತಿಳಿದಿದ್ದರೂ ನಡುಬಗ್ಗಿಸಿ ಗುಲಾಮರಂತೆ ವರ್ತಿಸುವ ಗುಣ ವಕೀಲರಿಗೆ ಒಗ್ಗಿ ಹೋಗಿದೆ. ನಮ್ಮ ವಿದ್ಯೆ ಶ್ರೀಮಂತರನ್ನು ಹೊಗಳುವುದಕ್ಕೆ ವಿನಿಯೋಗವಾಗುತ್ತಿದೆ ಎನ್ನುವ ವಿವೇಕಾನಂದರ ಮಾತಿನಂತೆ ವಕೀಲರ ವಿದ್ಯೆ ದೀನತೆಯಿಂದ ಬೇಡುವುದಕ್ಕೆ, ಇಷ್ಟವಿಲ್ಲದಿದ್ದರೂ ನ್ಯಾಯಾಧೀಶರ ಮುಂದೆ ಕೃತಕ ನಗೆ ಮೂಡಿಸಿ ಅವರನ್ನು ಹೊಗಳುವುದಕ್ಕೆ ಇಂದು ವಿನಿಯೋಗವಾಗುತ್ತಿದೆ.

ತಮ್ಮ ಘನತೆ ಗೌರವಗಳನ್ನು ತ್ಯಾಗ ಬಲಿದಾನಗಳನ್ನು ಎತ್ತಿಹಿಡಿದ ಒಂದು ಕಾಲವಿತ್ತು. ಸ್ವಾತಂತ್ರ್ಯ ಪೂರ್ವದ ಆ ನೆಚ್ಚು ಕೆಚ್ಚುಗಳು ಇಂದು ವಕೀಲ ಸಮುದಾಯದಲ್ಲಿ ಮರೆಯಾಗುತ್ತಿದೆ. ಸ್ವಾಭಿಮಾನ ಶೂನ್ಯವಾಗುತ್ತಿದೆ. ಗುಲಾಮರಿಗೆ ಸಹಜವಾದ ಎಲ್ಲ ರೀತಿಯ ಭ್ರಷ್ಟ ಆಚಾರಗಳು ವಕೀಲರ ಗುಣವಾಗುತ್ತಿದೆ. ವಕೀಲ ಸಮುದಾಯದಿಂದಲೇ ನ್ಯಾಯಾಧೀಶರಾಗಬೇಕಾಗಿರುವ ಪದ್ಧತಿ ಇರುವುದರಿಂದ ಈ ಗುಣಗಳು ನ್ಯಾಯಾಧೀಶರುಗಳಲ್ಲಿ ಮೊದಲೆ ಮನೆ ಮಾಡಿಕೊಂಡಿರುತ್ತವೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನರನ್ನುಬಿಟ್ಟರೆ ಬಹುತೇಕ ಎಲ್ಲರಲ್ಲಿ ಈ ಗುಣಗಳು ಸರ್ವವ್ಯಾಪಿಯಾಗಿವೆ. ಹೀಗಿರುವುದರಿಂದ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಕಕ್ಷಿಗಾರರ ನಡುವಿನ ಜಿದ್ದು ನ್ಯಾಯಾಲಯಗಳ ಆವರಣದಲ್ಲೆ ಸ್ಫೋಟಗೊಂಡು ಹೊಡೆದಾಟ, ಗಲಭೆ, ಕೊಲೆಗಳಲ್ಲಿ ಪ್ರಕಟಗೊಳ್ಳುತ್ತಿರುವುದು ಈಗ ಸರ್ವೆಸಾಮಾನ್ಯವಾಗಿದೆ. ಇನ್ನು ವಕೀಲರ ನಡುವಿನ ಸುಪ್ತ ಅಸಮಾಧಾನಗಳು ಸ್ಫೋಟಗೊಳ್ಳುವ ಕಾಲಕ್ಕೆ ಲಾವಾರಸದಂತೆ ಒಳಗೊಳಗೇ ಕುದಿಯುತ್ತಿದೆ. ನ್ಯಾಯಾಧೀಶರ ನಡುವಣ ಅಸಮಾಧಾನಗಳು ಅವ್ಯಕ್ತವಾಗಿದ್ದು ಒಳಗೇ ಕಾವು ಪಡೆಯುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇತರ ಕ್ಷೇತ್ರಗಳಲ್ಲಿ ಮುಖ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ- ಸ್ಫೋಟವಾದಂತೆ ನ್ಯಾಯಾಲಯಗಳಲ್ಲೂ ಸ್ಫೋಟಗೊಳ್ಳುವ ಕಾಲ ಬಹುದೂರವಿಲ್ಲ ಎಂದೆನಿಸುತ್ತದೆ.

ಚೆನ್ನೈನ ಘಟನೆಯಲ್ಲಿ ವಕೀಲರು ಕೈ ಎತ್ತಿದ್ದು ತಮಗೆ ಅನ್ನ ನೀಡುತ್ತಿರುವ ಕಕ್ಷಿಗಾರನ ಮೇಲೆ. ಕಕ್ಷಿಗಾರನ ನೋವನ್ನ, ನ್ಯಾಯಯುತ ಬೇಡಿಕೆಯನ್ನ, ಸದ್ಯದ ವ್ಯವಸ್ಥೆಯಲ್ಲಿ ಆತ ನ್ಯಾಯ ಪಡೆದುಕೊಳ್ಳಲು ಹೆಣಗಬೇಕಾಗಿರುವುದನ್ನು ಕೊಂಚ ಸಮಾಧಾನ ಚಿತ್ತರಾಗಿ ಚಿಂತಿಸಿ ಸಹಾನುಭೂತಿಯಿಂದ ಅರ್ಥ ಮಾಡಿಕೊಂಡು ಸಹಕರಿಸಿದರೆ ತಮ್ಮ ಗೌರವವನ್ನೂ ಉಳಿಸಿಕೊಳ್ಳುವುದಲ್ಲದೆ ನ್ಯಾಯಾಲಯದ ಗೌರವವನ್ನೂ ಕಾಪಾಡಿದಂತಾಗುತ್ತದೆ.

ಅತ್ತ ವಕೀಲರ ಚಿತ್ತ ಎಚ್ಚೆತ್ತು ಯೋಚಿಸೀತೆ? ಹೃದಯದಲ್ಲಿ ವಿವೇಕದ ಕಣ್ಣುಗಳು ತೆರೆದಾವೇ?
-೧೯೯೭
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಲ್ಲು – ಬಿಲ್ಲು
Next post ಹೆಂಗಸು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys