Home / ಕಥೆ / ಜನಪದ / ಗಂಗಮ್ಮ ತಂಗಿ

ಗಂಗಮ್ಮ ತಂಗಿ

ಕೊಂಬಣಸು, ಕೊರಳಹುಲಿಗೆಜ್ಜಿಗಳಿಂದ ನಂದಿಯನ್ನು ಸಿಂಗರಿಸಿ ಶಿವನು ಪ್ರಯಾಣ ಹೊರಡುತ್ತಾನೆ. ಅದೆಲ್ಲಿಗೆ ?

ದಾರಿಯಲ್ಲಿ ಒಂದು ಹಳ್ಳ. ಹಳ್ಳದ ದಂಡೆಯಲ್ಲಿ ಹೂ ಕೊಯ್ಯುತ್ತಿರುವ ರಮಣಿಯನ್ನು ಕಂಡು ಶಿವನು – “ಜಾಣೇ, ನಮ್ಮ ಲಿಂಗಪೂಜೆಗೊಂದು ಹೂ ಕೊಡು” ಎಂದು ಕೇಳಿದನು.

ಆಕೆ ಹೇಳಿದಳು – “ಲಿಂಗಪೂಜೆಗೆಂದರೆ ಕೊಡಮಾಡಬಹುದು. ಆದರೆ ಮನೆಯಲ್ಲಿ ನಮ್ಮವ್ವ ಬಯ್ಯುತ್ತಾಳೆ ; ನಮ್ಮಪ್ಪ ಬಡಿಯುತ್ತಾನೆ.”

“ನಿಮ್ಮವ್ವ ಬಯ್ದರೆ, ನಿಮ್ಮವ್ವ ಬಡಿದರೆ ಗಂಗಾ, ನನ್ನ ಜಡೆಯಲ್ಲಿ ಬಂದು ಬಿಡು” – ಎನ್ನುತ್ತಾನೆ ಶಿವ.

“ಬಂದರೂ ಬರಬಹುದು. ಆದರೆ ಹೇಗೆ ನಂಬಲಿ ? ನಿಮ್ಮ ಮನೆಯಲ್ಲಿ ರಂಭೆಯಿದ್ದಾಳಲ್ಲ !” ಎಂದು ಸಂಕೋಚಪಟ್ಟಳು ಗಂಗಮ್ಮ.

“ನನ್ನಾಣೆ, ನಿನ್ನಾಣೆ ಅಲ್ಲದೆ ಧರಿಸಿದ ಲಿಂಗದಾಣೆ ಮಾಡಿ ಹೇಳುತ್ತೇನೆ. ನನ್ನ ಮನೆಯಲ್ಲಿ ರಂಭೆಯಿಲ್ಲ” ಎಂದು ಶಿವ ಭರವಸೆ ಕೊಡುತ್ತಾನೆ.

“ಬಂದೇನು ? ಆದರೆ ಹೇಗೆ ನಂಬಲಿ ? ನಿನ್ನ ಮನೆಯಲ್ಲಿ ಮಡದಿಯಿದ್ದಾಳಲ್ಲ !” ಗಂಗಮ್ಮ ಬೇರೊಂದು ಸಂಶಯ ತೋರಿದರೆ, ಆಗಲೂ ಶಿವನು – ತನ್ನಾಣೆ, ನಿನ್ನಾಣೆ ಅಲ್ಲದೆ ದೇವರಾಣೆ ಮಾಡಿ ಹೇಳುತ್ತೇನೆ ಮನೆಯಲ್ಲಿ ಮಡದಿಯಿಲ್ಲವೆಂದು, ಹೇಳುತ್ತಾನೆ. ಆಗ ಗಂಗಮ್ಮ ಮೆಲ್ಲನೆ ಶಿವನ ಜಡೆಯಲ್ಲಿ ಅಡಗುವಳು. ಅದನ್ನು ನೋಡಿದ ಗಿಣಿರಾಮನು ಕೂಡಲೇ ಹಾರಿಹೋಗಿ ಗೌರಮ್ಮನಿಗೆ ತಿಳಿಸುತ್ತಾನೆ.

ಆ ವಾರ್ತೆಯನ್ನು ಕೇಳಿ, ಮಲಗಿಕೊಂಡಿದ್ದ ಗೌರಮ್ಮನು ಮೈ ಮುರಿದುಕೊಂಡು ಎದ್ದು ಗಿಂಡಿಯೊಳಗಿನ ತಣ್ಣೀರಿನಿಂದ ಮುಖ ತೊಳೆದುಕೊಂಡವಳೇ ತನ್ನಣ್ಣನ ಅರಮನೆಗೆ ಹೋದಳು.

ಎಂದೂ ಬಾರದ ಗೌರಮ್ಮ ಇಂದು ಏತಕ್ಕಾಗಿ ಬಂದಳೆಂದು ಬಗೆಯುತ್ತ ಅಣ್ಣನು. ಆಕೆಗೆ ಕುಳಿತುಕೊಳ್ಳಲು ಮಣಿ ಚೌಕಿ ಕೊಡಿರೆಂದು ಮಡದಿಗೆ ಹೇಳುತ್ತಾನೆ.

“ನಾನು ಕುಳಿತುಕೊಳ್ಳಲೂ ಬಂದಿಲ್ಲ. ನಿಂತುಕೊಳ್ಳಲೂ ಬಂದಿಲ್ಲ. ನಾನೊಂದು ಕನಸು ಹೇಳಲು ಬಂದಿದ್ದೇನೆ. ಕೆರೆಯ ಮೇಲೆ ಕೆರೆಹುಟ್ಟಿ, ಕೆರೆಯ ಮೇಲೆ ಮರ ಹುಟ್ಟಿ, ಮರದ ಮೇಲೆ ಒಬ್ಬಾತನು ಬಲೆಹಾಕಿದ್ದಾನೆ” ಎನ್ನುತ್ತಾಳೆ ಗೌರಮ್ಮ.

ಒಗಟಿನಂಥ ಈ ಕನಸು ಅಣ್ಣನಿಗೆ ತಿಳಿದಂತೆ ತೋರಲಿಲ್ಲ. ಅದನ್ನು ಗೌರಮ್ಮ ಸ್ಪಷ್ಟಗೊಳಿಸಿದಳು – ಕೆರೆ ಅಂದರೆ ಶಿವರಾಯ. ಮರ ಅಂದರೆ ಜಡೆ, ಬಲೆಯೆಂದರೆ ಒಳಗಿನ ಶ್ರೀಗಂಗೆ.

“ದೇಶವನ್ನೇ ಆಳುವವರಿಗೆ ಹೆಂಡರು ಏಸು ಜನರಿದ್ದರೇನು ? ನಿನಗೇಕೆ ಆ ಚಿಂತೆ” ಎಂದು ಅಣ್ಣನು ತೀರ್ಪು ಹೇಳಿದನು.

ಆ ಮಾತು ಕೇಳಿ ಗೌರಮ್ಮ ಕಿಡಿಕಿಡಿಯಾದಳು. ಕಿಡಿಚೆಂಡೇ ಆದಳು. ಎಡಹಿ ಬೆರಳಿಗೆ ನೋವಾದುದನ್ನೂ ಲೆಕ್ಕಿಸದೆ ತನ್ನ ಅರಮನೆಯತ್ತ ಸಾಗಿದಳು.

ಶಿವನು ಒಂದೂರಿನಿಂದ ಯತಿಯ ವೇಷದಲ್ಲಿ ಬಂದು, ಗೌರಿಗೆ ನೀರು ಬೇಡುತ್ತಾನೆ. ಒಂದು ಗಿಂಡಿ ಬೇಡಿದರೆ, ಆಕೆ ಎರಡು ಗಿಂಡಿ ನೀರು ಕೊಡುತ್ತಾಳೆ. ಅದನು ಕಂಡು ಶಿವನು – “ನಿನಗೆ ಪುರುಷರು ಇಬ್ಬರೇನೇ ?” ಎಂದು ಚೇಷ್ಟೆಮಾಡುತ್ತಾನೆ.

“ಅಯ್ಯಯ್ಯೋ ಶಿವನೇ, ಅಣಕದ ಮಾತೇಕೆ ? ಕೆಂಜೆಡೆಯ ಮಣಿಮಕುಟದಲ್ಲಿರುವ ಸಿರಿಗಂಗೆಗೊಂದು ಗಿಂಡಿ, ನಿನಗೊಂದು ಗಿಂಡಿ” ಅನ್ನುತ್ತಾಳೆ ಗೌರಮ್ಮ.

“ಅಬ್ಬರಣೆ ಸಾಕು. ಎಡೆಮಾಡು ಗೌರೀ” ಎಂದು ಶಿವನು ಹೇಳಿದರೆ, ಎರಡು ಎಡೆಗಳು ಸಿದ್ಧವಾಗಿ ಬರುತ್ತವೆ. ಆಗಲೂ ಶಿವನು ಚೇಷ್ಟೆಮಾಡುತ್ತಾನೆ – “ನಿನಗೆ ಇಬ್ಬರೇನೆ ಪುರುಷರು ಗೌರಿ” ಎಂದು. ಗೌರಮ್ಮ ಮತ್ತೆ ಮುಂಚಿನ ಉತ್ತರವನ್ನೇ ಕೊಡುತ್ತಾಳೆ – “ನಿನಗೊಂದು ಎಡೆ, ಜತೆಯಲ್ಲಿರುವ ಸಿರಿಗಂಗೆಗೊಂದು ಎಡೆ.”

ಶಿವನು ತುಂಬ ದಿಗಿಲುಗೊಂಡು – “ಗಂಗೀನ ತಂದರೆ ತಂಗೀನ ತಂದಂತೆ. ಲಿಂಗ ಮುಟ್ಟಿ ಹೇಳುತ್ತೇನೆ ; ಕೆಂಡಮುಟ್ಟಿ ಹೇಳುತ್ತೇನೆ” ಎಂದು ಕ್ರಿಯೆಗೆ ಸಿದ್ಧನಾಗುತ್ತಾನೆ.

ಗೌರಮ್ಮ ಬೇರೊಂದು ಹಂಚಿಕೆ ತೆಗೆಯುತ್ತಾಳೆ. ಬೆಳ್ಳಿಯ ಬಟ್ಟಲಲ್ಲಿ ಎಳ್ಳೆಣ್ಣೆ ತೆಗೆದು ತಂದು ಶಿವನ ಜಡೆಯನ್ನು ಹೂಸಲು ಆರಂಭಿಸುತ್ತಾಳೆ. ಗೌರಮ್ಮನು ತಲೆಯಿಂದ ಸೊಂಟಿನತ್ತ ಎಣ್ಣೆಹೂಸುತ್ತ ಬರಲು, ಗಂಗೆ ಅದಕ್ಕಿಂತ ಕೆಳಗಡೆಗೆ ಸರಿಯುವಳು. ಗೌರಿಯೂ ಅಲ್ಲಿಯೂ ಎಣ್ಣೆ ಹೊಸತೊಡಗಲು, ಗಂಗೆಯು ಅನಿವಾರ್ಯವಾಗಿ ನೆಲಕ್ಕಿಳಿದು ಹೊಳೆಯಾಗಿ ಹರಿದು ಹೋಗುತ್ತಾಳೆ.

ಗಂಗೆ ಹೋದ ಮರುದಿನವೇ ಗೌರಮ್ಮ ರಜಸ್ವಲೆ ಆಗುತ್ತಾಳೆ. ಮೈದೊಳೆಯಲು ನೀರಿಲ್ಲದಾಗುತ್ತದೆ. ಶಿವನು ಚೇಷ್ಟೆಯಿಂದ ಹಾಲಿನ ಕೊಡವನ್ನು ಕಳಿಸುತ್ತಾನೆ ಗೌರಮ್ಮನ ಕಡೆಗೆ. “ಹಾಲಿನಿಂದ ಮಿಂದರೆ ಮುಡಚಟ್ಟು ಹೋಗುವದೇ? ತಂಗಿ ಗಂಗಮ್ಮನನ್ನು ಕಳಿಸಿರಿ” ಎನ್ನಲು, ಶಿವನು ಬೇಕೆಂದೇ ತುಪ್ಪದ ಕೊಡವನ್ನು ಕಳಿಸುವನು. “ತುಪ್ಪಿನಲ್ಲಿ ಮಿಂದರೆ ಮೈಲಿಗೆ ಕಳೆಯುವುದೇ? ದಯಮಾಡಿ ತಂಗಿ ಗಂಗಮ್ಮನನ್ನು ಕಳಿಸಿರಿ” ಎ೦ದು ಗೌರಮ್ಮ ಅಂಗಲಾಚಲು ಶಿವನು `ಆಗಲಿ’ ಎಂದನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...