ಕಾಶಮ್ಮ – ಮಲ್ಲೇಶಿ ಎಂಬ ಅಜ್ಜಿ ಮೊಮ್ಮ್ಮಗ ಇದ್ದರು. ಮೊಮ್ಮಗನು ದುಡಿದು ತಂದಷ್ಟರಲ್ಲಿಯೇ ಅವರಿಬ್ಬರೂ ಕಷ್ಟದಿಂದ ಬಾಳ್ವೆ ಮಾಡುತ್ತಿದ್ದರು.
ಒಂದು ದಿನ ಮಲ್ಲೇಶಿ ಹೇಳಿದನು ಅಜ್ಜಿಗೆ – “ಅಜ್ಜೀ, ಈ ಚಿಕ್ಕ ಹಳ್ಳಿಯಲ್ಲಿ ಬಾಳ್ವೆ ಸರಿಯಾಗಿ ಸಾಗುವಂತಿಲ್ಲ. ನೆರೆಯೂರಿಗೆ ಹೋಗೋಣ.” ಅಜ್ಜಿಗೂ ಆ ಮಾತು ಸಮ್ಮತವಾಯಿತು. ಹೊರಟೇಬಿಟ್ಟರು ಬೆಣ್ಣೆಕಟ್ಟೆಗೆ.

ಬೆಣ್ಣಿಕಟ್ಟೆಗೆ ಒಬ್ಬ ಸಾಹುಕಾರನ ಮನೆಗೆ ಹೋದಾಗ ಅವನು ಅದೇ ಉಂಡು, ಎಲೆ ಅಡಿಕೆ ಮೆಲ್ಲುತ್ತ ಕುಳಿತುಕೊ೦ಡಿದ್ದನು. ಅಜ್ಜಿ ಕೇಳಿದಳು –
“ಧನಿಯರೇ ನಾವು ಬೇರೂರಿಂದ ಬಂದಿದ್ದೇವೆ, ಇಲ್ಲೆ ದುಡಕೂಂಡು ತಿನ್ನಲಿಕ್ಕೆ. ಇರಲಿಕ್ಕೆ ಒಂದಿಷ್ಟು ಜಾಗಕೊಡಿರಿ.”

“ನಮ್ಮ ಹಿತ್ತಲಲ್ಲಿ ಕಸ ಚೆಲ್ಲುವ ಒಂದು ಗುಂಡಿಯಿದೆ. ಅದರೂಳಗಿನ ಕಸವನ್ನೆಲ್ಲ ನಮ್ಮ ತೋಟಕ್ಕೊಯ್ದು ಹಾಕಿ ಆ ತೋಟದಲ್ಲಿರುವ ಒಂದೆರಡು ಮುರುಕು ತಗಡುಗಳನ್ನು ತಂದು ಆಶ್ರಯ ಮಾಡಿಕೊಂಡು ಇರುವಿರಾ?” ಸಾಹುಕಾರನು ಕೇಳಿದನು.

“ಆ ಜಾಗದ ಬಾಡಿಗೆ ಎಷ್ಟು ?” ಅಜ್ಜಿಯ ಪ್ರಶ್ನೆ.”

“ನಮ್ಮಲ್ಲಿರುವ ನಾಲ್ಕು ಎಮ್ಮೆ ಎರಡು ಹೋರಿ, ಮೂರು ಆಕಳುಗಳನ್ನು ಕಾಯಬೇಕು. ಅವುಗಳ ಸೆಗಣಿಯನ್ನು ಬಡಿದು ಕುಳ್ಳುಹಚ್ಚಬೇಕಲ್ಲದೆ ಅವುಗಳನ್ನು ಮಾರಿಕೊಂಡು ಬಂದು, ನಮಗೆ ರೊಕ್ಕ ಕೊಡಬೇಕು; ಅದೇ ಬಾಡಿಗೆ.”

ಸಾಹುಕಾರನು ಹೇಳಿದ್ದಕ್ಕೆ ಮುದಿಕೆ ಒಷ್ಟಿಕೊಂಡಳು. ಮಲ್ಲೇಶಿಗೂ ಕೆಲಸ ದೊರೆತು ಉಪಜೀವನಕ್ಕ ದಾರಿಯಾಯಿತು.

ಶಿವನು ಸಾಹುಕಾರನನ್ನು ಪರೀಕ್ಷಿಸಬೇಕೆಂದು ಮುಪ್ಪಿನ ಭಿಕ್ಷುಕನಾಗಿ ಬಂದು ಒಂದು ದಿನ ಸಾಹುಕಾರನ ಮನೆಯ ಮುಂದೆ ನಿಂತು – “ಅನ್ನ ನೀಡಿರಿ”
ಎಂದು ಕೂಗ ತೊಡಗಲು, “ಮುಂದೆ ಸಾಗು” ಎಂದು ಸಾಹುಕಾರನು ಅಬ್ಬರಿಸಿದನು. ಅದನ್ನು ಕಂಡು ಕನಿಕರವೆನಿಸಿ ಅಜ್ಜಿಯು ಆ ಮುದುಕನನ್ನು
ಕರೆತಂದು ಕುಳ್ಳಿರಿಸಿ ಉಣಬಡಿಸಿದಳು| ಒಂದು ರೊಟ್ಟಿ, ಪುಂಡಿಪಲ್ಲೆ. ಹಸಿದ ಭಿಕ್ಷುಕನು ಅದನ್ನು ಗಪಗಪನೆ ತಿಂದು ಇನ್ನೂ ಒಂದು ರೊಟ್ಟಿ ಕೇಳಿದನು.
ಮೊಮ್ಮಗನಿಗಾಗಿ ಇಟ್ಟ ರೊಟ್ಟಿಯನ್ನೂ ಅಜ್ಜಿಯು ಭಿಕ್ಷುಕನಿಗೆ ನೀಡಿದಳು ಅದೂ ಸಾಕಾಗದೆ – “”ಅಜ್ಜಿ, ನೀನು ಬಯ್ದರೂ ಚಿಂತೆಯಿಲ್ಲ. ಇನ್ನೊಂದು ರೊಟ್ಟಿ ಕೊಡಮ್ಮ” ಎ೦ದನು ಆ ಬಿಕ್ಷುಕ.

ಅಜ್ಜಿಯ ಬಳಿಯಲ್ಲಿಯೂ ರೊಟ್ಟ ಉಳಿದಿರಲಿಲ್ಲ. ವಿಚಾರಿಸತೊಡಗಿದಳು. ಮರು ಕ್ಷಣದಲ್ಲಿ ಏನೋ ಹೊಳೆದಂತಾಗಿ ಅಲ್ಲಿಂದೆದ್ದು ಸಾಹುಕಾರನ ಮನೆಗೆ ಹೋಗಿ ಒಂದು ರೊಟ್ಟಿಯನ್ನು ಕೈಗಡ ಕೇಳಿದಳು. “ರೊಟ್ಟಿಯನ್ನು ಕೈಗಡ ಕೊಡುವದಿಲ್ಲ. ಸಾಲವಾಗಿ ಕೊಡುತ್ತೇನೆ. ಅದಕ್ಕ ಬಡ್ಡಿ ಬೀಳುತ್ತದೆ” ಎಂದನು.

ಅಜ್ಜಿ ಅದಕ್ಕೊಪ್ಪಲು ಸಾಹುಕಾರನು ಒಳಗೆ ಹೋಗಿ ಹೆಂಡತಿಗೆ ಹೇಳಿದೆನು, ಕಿವಿಯಲ್ಲಿ – “ತುಸು ಹಿಟ್ಟು ಹಿಡಿದು ತೆಳ್ಳಗಿನ ಒಂದು ರೊಟ್ಟಿ ಮಾಡಿಕೊಡು.”
ಸಾಹುಕಾರನಿತ್ತ ರೊಟ್ಟಿಯನ್ನು ತಂದು ಭಿಕ್ಷುಕನಿಗೆ ನೀಡಿದಳು. ಆತನು ಉಂಡು ಸಂತುಷ್ಟನಾಗಿ ಅಜ್ಜಿಗೊಂದು ದುಡ್ಡುಕೊಟ್ಟು – “ನಿನ್ನ ಮೊಮ್ಮಗನಿಗೆ ಚುರುಮುರಿ ತಿನ್ನಲಿಕ್ಕೆ” ಎಂದನು. ಅಜ್ಜಿ ಆ ದುಡ್ಡನ್ನು ತನ್ನ ಮುರುಕ ಪೆಟ್ಟಿಗೆಯಲ್ಲಿಟ್ಟಳು.

ಮಧ್ಯಾಹ್ನದ ಹೊತ್ತಿಗೆ ಮಲ್ಲೇಶಿ ಹೊಲದಿಂದ ಹಸಿದು ಬಂದು, ಊಟಕ್ಕೆ ಸಿದ್ಧನಾದನು. ಅಜ್ಜಿಗೇನೂ ತಿಳಿಯದಾಯಿತು. ಮನೆಯಲ್ಲಿ ರೊಟ್ಟಿಯೂ ಇರಲಿಲ್ಲ, ಹಿಟ್ಟೂ ಇರಲಿಲ್ಲ. “ಒಂದು ದುಡ್ಡ ಅದೆ, ಚುರುಮುರಿಕೊಂಡು ತಿನ್ನು” ಎಂದು ಪೆಟ್ಟಿಗೆ ತೆಗೆದು ನೋಡಿದಾಗ, ಪೆಟ್ಟಿಗೆಯ ತು೦ಬ ಬಂಗಾರವಾಗಿತ್ತು.

“ಇದನ್ನೆಲ್ಲಿಂದ ತಂದಿ ? ಯಾರು ಕೊಟ್ಟರು ?” ಎಂದು ಕೇಳಿದನು ಮಲ್ಲೇಶಿ. ಅಜ್ಜಿ ನಡೆದ ಕಥೆಯನ್ನೆಲ್ಲ ಹೇಳಿದಳು.

ಪಟ್ಟಿಗೆಯೊಳಗಿನ ಅರ್ಧಬ೦ಗಾರ ಮಾರಿ, ಬೆಚ್ಚಗಿನ ಮನೆ ಕಟ್ಟಿಸಿದರು. ಎತ್ತು ಗಾಡಿ ಕೊಂಡರು. ಮಲ್ಲೇಶಿಯೂ ಸಾಹುಕಾರನೇ ಆಗಿ ಕುಳಿತನು,
ಆ ಚೆಣ್ಣಿಕೆಟ್ಟಿಯಲ್ಲಿ.

ಅದನ್ನೆಲ್ಲ ಕಂಡ ಸಾಹುಕಾರನಿಗೆ ಅಸೂಯೆ ಉಂಟಾಯಿತು. ಇದೆಲ್ಲ ಐಶ್ವರ್ಯಾ ಏತರಿಂದ ಬ೦ತೆ೦ದು ಅಜ್ಜಿಗೆ ಕೇಳಲು ಹೆ೦ಡತಿಗೆ ತಿಳಿಸಿದನು.
ಸಾಹುಕಾರನ ಹೆ೦ಡತಿ ಅಜ್ಜಿಯ ಮನೆಗೆ ಬ೦ದು ಕೇಳಿದರೆ – “ಭಿಕ್ಷುಕ ಮುದುಕನು ನಮ್ಮಲ್ಲಿ ಉಂಡು ಹೋಗುವಾಗ ಒಂದು ದುಡ್ಡು ಕೊಟ್ಟ ಹೋಗಿದ್ದನು. ಅದರಿಂದ ಒಂದು ಪೆಟ್ಟಿಗೆ ಬಂಗಾರವಾಗಿ ಬಿಟ್ಟಿತು. ಅದೇ ಈ ಎಲ್ಲ ಐಶ್ವರ್ಯಕ್ಕೆ ಕಾರಣ” ಎಂದಳು ಕಾಶಮ್ಮಜ್ಜೆ.

ಹೆಂಡತಿಯ ಬಾಯಿಂದ ಅಜ್ಜಯ ಐಶ್ವರ್ಯದ ಕಾರಣ ತಿಳಿದು ಸಾಹುಕಾರನ ಆಶಗೆ ಕುಡಿ ಒಡೆಯಿತು. ಒಬ್ಬ ಭಿಕ್ಷುಕನನ್ನು ಹಿಡಿದು ತಂದು, ಹುಗ್ಗಿ ಹೋಳಿಗೆ ಉಣಿಸಿದರೆ, ಆತನು ಒಂದೇ ದುಡ್ಡಲ್ಲ ಎರಡು ದುಡ್ಡು ಕೊಡುವದರಿಂದ ಎರಡು ಪೆಟ್ಟಿಗೆ ಬಂಗಾರ ಸಿದ್ಧವಾಗುವದೆಂದು ಲೆಕ್ಕ ಹಾಕಿದನು. ಶಿವನು ಅದೇ ವೇಷದಿಂದ ಕಾಣಿಸಿಕೊಳ್ಳಲು ಅವನನ್ನು ಕರೆತಂದು ಪಂಚಪಕ್ವಾನ್ನಗಳನ್ನು ಸಾಕುಸಾಕೆ೦ದರೂ ಉಣಬಡಿಸಿದರು. ಭಿಕ್ಷುಕನು ಉಂಡುಹೋಗುವಾಗ ವಾಡಿಕೆಯಂತೆ ಕೊಟ್ಟ ದುಡ್ಡನ್ನೂ ಸಾಹುಕಾರನು ತಿಜೊರಿಯಲ್ಲಿಟ್ಟು ಕೀಲಿಹಾಕಿದನು.

ಅಂದು ರಾತ್ರಿ ಆತನಿಗೆ ನಿದ್ರೆಯೇ ಹತ್ತಲಿಲ್ಲ. ಹೊತ್ತು ಹೊರಡುವ ಸಂದರ್ಭವನ್ನೇ ನೋಡುತ್ತಿದ್ದನು. ತಡವಾಗಿಯಾದರೂ ಒಮ್ಮೆ ಬೆಳಗಾಯಿತು. ಸಾಹುಕಾರನು ಎದ್ದವನೇ ಮುಖಸಹ ತೊಳಕೊಳ್ಳದೆ, ಹೆಂಡತಿಯನ್ನು ಕರೆದು ತಿಜೋರಿಯನ್ನು ತೆರೆದರೆ, ಅಲ್ಲೇನು ಕಂಡನು? ಹಣವೆಲ್ಲ ಹಚ್ಜಾಗಿತ್ತು. ಬ೦ಗಾರವೆಲ್ಲ ಇದ್ದಿಲಾಗಿತ್ತು. ವಸ್ತು‌ಒಡವೆಗಳೆಲ್ಲ ಚೀಪುಗಲ್ಲು ಆಗಿದ್ದವು. ಏತಕ್ಕಾಗಿ ಬದುಕುವುದಿನ್ನು – ಎಂದು ನಿರಾಶನಾಗಿ ಕೈಯಾಡಿಸುವಷ್ಟರಲ್ಲಿ ಅವನ ಕೈಗೆ ಒಂದು ಕಾಗದ ಸಿಕ್ಕಿತು. ಅದನ್ನೆತ್ತಿಕೊಂಡು ಬಿಚ್ಚಿ ನೋಡುತ್ತಾನೆ, ಒಳಗೆ ಏನೋ ಬರೆದಿದೆ-

“ಆಶೆ ಬಹಳ ಕೆಟ್ಟದು. ಆಶೆಬುರುಕನಾಗಬಾರದು.” ಆ ಪಾಠ ಹೇಳಿಸಿಕೊಳ್ಳಲಿಕ್ಕೆ ಅದೆಷ್ಟು ಶುಲ್ಕನೀಡಬೇಕಾಯಿತಲ್ಲ ಆ ಸಾಹುಕಾರ!
*****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)