ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿಯೇ ಬಂದಿತ್ತು. ಆದರೆ ಹಲವು ಸಾರೆ ಅವರಲ್ಲಿ ವಿರಸಪ್ರಸಂಗಗಳು ಬರುತ್ತಲೆ ಅವರಲ್ಲಿ ಬಾಯಿಗೆ ಬಾಯಿ, ಕೈಗೆಕೈ ಹತ್ತಿ ಕದನಗಳಾಗುತ್ತಿದ್ದವು. ಆದರೆ ಗಂಡಹೆಂಡಿರ ಜಗಳ ಉಂಡು ಮಲಗುವವರೆಗಷ್ಟೇ ಅಲ್ಲವೇ ?
ಬಾಯಿಗೆ ಬಾಯಿ ಹತ್ತಿ ಜಗಳಾಡಿದ್ದು ಸಾಕಾಗದೆ, ನನ್ನೀಸಾಹೇಬನು ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಒಳಿತಾಗಿ ಥಳಿಸಬೇಕೆಂದು, ಒಂದು ಬಡಿಗೆಯತ್ತಿ ಆಕೆಯ ಮೈಮುಟ್ಟಹೋಗಿ ಹೊಡೆಯಲನುವಾದನು. ಅಷ್ಣರಲ್ಲಿ ಹೆಂಡತಿ ಆತನನ್ನು ಎದುರಿಸಿ ಆತನ ಕೈಯೊಳಗಿನ ಬಡಿಗೆಯನ್ನು ನಿರಾಯಾಸವಾಗಿ ಕಸಿದುಕೊಂಡು ಜಂತಿಯಲ್ಲಿ ತುರುಕಿಬಿಡುವಳು. ಅದು ಕುಳ್ಳನಾದ ನನ್ನೀ ಸಾಹೇಬನಿಗೆ ನಿಲುಕದಂತಾಗುವದು. ಆ ಕಾರಣದಿಂದ ಅವರ ಜಗಳವು ಮೊಂಡವಾಗಿಬಿಡುವದು.
ಒಮ್ಮೊಮ್ಮೆ ಬಡೇಮಾನಿಗೆ ಸಿಟ್ಟು ಬಂದಾಗ ಆಕೆ ಬಾಗಿಲಿಕ್ಕಿ ಗಂಡನನ್ನು ಅದೇ ಬಡಿಗೆಯಿಂದ ಬಡಿಯುವಳು. ಹೆಂಡತಿ ಬಡೆಯುವಳೆಂದರೂ ಗಂಡನ ಬಾಯ ಅಬ್ಬರವೇ ಹೆಚ್ಚು. ಅದನ್ನು ಕೇಳಿದವರಿಗೆ ಅನಿಸುವುದು – “ಗಂಡನೇ ಬಾಗಿಲು ಹಾಕಿ ಹೆಂಡತಿಯನ್ನು ಜಿಗಿಜಿಗಿದು ಬಡಿಯುತ್ತಿದ್ದಾನೆ. ಅಂತೆಯೇ ದನಿ ತೇಕುತ್ತದೆ.”
ಹೆಂಡತಿ ಎಡಗೈಯಿಂದ ಗಂಡನ ರಟ್ಟೆಹಿಡಿದು ಮಗ್ಗುಲಿಗೆ ನಿಲ್ಲಿಸಿ, ಬೆನ್ನ ಮೇಲೆ ಬಡಿಗೆಯೇಟು ಹಾಕುವಳು. ಇನ್ನೇನು ಏಟು ಬೀಳುವುದಿನ್ನು ಎನ್ನುವ ಕ್ಷಣದಲ್ಲಿ – “ಎಷ್ಟಿರಬೇಕು ನಿನ್ನ ಸೊಕ್ಕು” ಎಂದು ಚೀರುವನು. ಅದು ಮುಗಿಯುವಷ್ಟರಲ್ಲಿ ಬಡಿಗೆಯೇಟಿನ ಸಪ್ಪಳ ! ಆಮೇಲೆ – “ನಿನ್ನ ಜೀವ ಉಳಿಸುವದಿಲ್ಲ ಇನ್ನು” ಎಂದು ಗುಡುಗುವನು. ತರುವಾಯ ಇನ್ನೊಂದು ಏಟು. ಅನಂತರ – ನಿನ್ನನ್ನು ಕೊಂದು ಹಾಕಿದರೂ ನನ್ನ ಸಿಟ್ಟು ಇಳಿಯದು” ಎನ್ನುತ್ತ ಬೇರೊಂದು ಏಟು ತಿನ್ನುವನು.
ಬಾಗಿಲು ಹಾಕಿಕೊಂಡಿರುವದರಿಂದ ಅವರ ಬಡಿದಾಟ – ಚೀರಾಟಗಳನ್ನು ಕೇಳಿ, ನೆರೆಹೊರೆಯವರು ನೆರೆಯುತ್ತಿದ್ದರೂ ಅವರನ್ನು ಬಿಡಿಸುವುದು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ತುಸು ಹೊತ್ತು ನಿಂತುಕೊಂಡು – “ನನ್ನೀಸಾಹೇಬನು ಹಿಡಿಯಾಳು ಆಗಿದ್ದರೂ ಅವನಿಗೆ ಸಿಟ್ಟು ಬಂದಾಗ ಯಾರಿಗೂ ಆಟೋಪವಲ್ಲ. ಹೆಂಡತಿಗೆ ಸಾಯುವಂತೆ ಹೊಡೆಯುತ್ತಾನೆ” ಎನ್ನುತ್ತ ಸಾಗಿ ಹೋಗುವರು.
*****