Home / ಕಥೆ / ಜನಪದ / ಶಿವರಾತ್ರಿ – ಪಾರಣೆ

ಶಿವರಾತ್ರಿ – ಪಾರಣೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಗಂಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು, ಕಜ್ಜೂರಿ, ಸೇಂಗಾ ತಿನ್ನುವುದು ವಾಡಿಕೆಯಾಗಿದೆ. ಆ ಪ್ರಕಾರ ಗಂಡ ಹೆಂಡಿರು ಸಾಯಂಕಾಲದಲ್ಲಿ ಫಲಾಹಾರ ಮಾಡಿದರು. ಮರುದಿನ ಹೊತ್ತು ಹೊರಡುವ ವೇಳೆಗೆ ಪಾರಣೆ. ಅದಕ್ಕಾಗಿ ಹಿಟ್ಟು, ಬೇಳೆ, ಬೆಲ್ಲ, ಅಕ್ಕಿಗಳನ್ನು ಸಾವರಿಸಿಟ್ಟಳು.

ಶಿವರಾತ್ರಿಯದಿನ ಇಡಿಯರಾತ್ರಿ ಮಹಾದೇವನ ಗುಡಿಯಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಿಲು ಗಂಡನು ಹೊರಟನು “ನೀನೂ ಗುಡಿಗೆ ಬಂದುಬಿಡು ನನ್ನೊಡನೆ. ಭಜನೆ ಕೇಳುವಿಯಂತೆ. ಸಾಕಷ್ಟು ಹೆಣ್ಣು ಮಕ್ಕಳು ಬಂದಿರುತ್ತಾರೆ” ಎಂದು ಹೆಂಡತಿಗೆ ಹೇಳಲು, ಆಕೆ ಗಂಡನ ಬಿಡೆಯಕ್ಕಾಗಿ ಗುಡಿಗೆ ಹೋದಳು.

ಭಜನೆ ಆರಂಭವಾಗಿ ಒಳ್ಳೆಯ ಭರಕ್ಕೆ ಬರತೊಡಗಿತ್ತು. ಅಂಥ ಪ್ರಸಂಗದಲ್ಲಿ ಆಕೆಯ ಮನಸ್ಸು ಮನೆಯತ್ತ ಎಳೆಯತೊಡಗಿತು. ಬೇಕಾದಷ್ಟು ಫಲಾಹಾರ ಮಾಡಿದ್ದರೂ ಆಕೆಗೆ ಉಂಡಷ್ಟು ತೃಪ್ತಿಯಾಗಿರಲಿಲ್ಲ. ಹಸಿವೆಯೆನಿಸಹತ್ತಿದ್ದರಿಂದ ಮನೆಗೆ ಹೋಗಿ, ಏನಾದರೂ ಮಾಡಿಕೊಂಡು ತಿಂದು ಮಲಗಬೇಕೆಂದು ಯೋಚಿಸಿದಳು. “ಗಂಡನಂತೂ ಭಜನೆಯಲ್ಲಿ ಭಾಗಿಯಾಗಿದ್ದರಿಂದ ಅಡ್ಡಹೊತ್ತಿನಲ್ಲಿ ಮನೆಗೆ ಬರುವಂತಿಲ್ಲ. ಆದ್ದರಿಂದ ನನ್ನ ಉದ್ದೇಶವು ನಿರ್ಬಾಧವಾಗಿ ನೆರವೇರುತ್ತದೆ” – ಎಂದು ಎದ್ದು ಮನೆಯ ಹಾದಿ ಹಿಡಿದಳು. ಮನೆಗೆ ಬಂದವಳೇ ಒಲೆಹೊತ್ತಿಸಿ, ಭಾಂಡೆಯಲ್ಲಿ ಸಟ್ಟುಗವನ್ನು ಅಟ್ಟು, ಕೋಣಮಗಿಯಲ್ಲಿ ಆರಹಾಕಿದಳು. ತಾಬಾಣದಲ್ಲಿ ಅಷ್ಟಷ್ಟು ತೆಗೆದುಕೊಂಡು ತಿಂದರಾಯಿತೆಂದು. ತಾಬಾಣ ತೆಗೆದುಕೊಳ್ಳುವಷ್ಟರಲ್ಲಿ ಗುಡಿಯಿಂದ ಗಂಡ ಬಂದು. ಬಾಗಿಲು ತೆಗೆಯೆಂದು ಕೂಗಿದನು. ಹೆಂಡತಿ ಲಗುಬಗೆಯಿಂದ ಅದೆಲ್ಲವನ್ನೂ ಮುಚ್ಚಿಟ್ಟು ದಡದಡನೆ ಬಾಗಿಲಿಗೆ ಬಂದು ಕದ ತೆರೆದಳು.

“ಗುಡಿಯಿಂದ ತೀವ್ರವೇ ಬಂದುಬಿಟ್ಟೆಯಲ್ಲ ! ಏಕೆ ?” ಎಂದು ಕೇಳಿದನು ಗಂಡ.

ನನಗೇನು ತಿಳಿಯುವದೇ – ಹೊಳೆಯುವದೇ ? ಆದ್ದರಿಂದ ಬೇಸರವೆನಿಸಿತು. ಓಡಿ ಮನೆಗೆ ಬಂದೆ.”

“ಒಳ್ಳೆಯದೇ ಆಯಿತು. ಮಲಗಿಕೊಂಡುಬಿಡೋಣ ಹಾಗಾದರೆ” ಎಂದು ಗಂಡನು ಮಲಗುವದಕ್ಕೆ ಅಣಿಯಾದನು.

“ಅನಕಾ ಒಂದು ಕಥೇಯನ್ನಾದರೂ ಹೇಳಿರಿ” ಎಂದಳು ಹೆಂಡತಿ.

“ನಿದ್ದೆಯ ಹೊತ್ತಿನಲ್ಲಿ ಕಥೆ ಕೇಳಬೇಕನ್ನುವಳಲ್ಲ” ಎಂದು, ಬೇಸರದಿಂದ ಎಂಥದೋ ಕತೆಯನ್ನು ಹೇಳಲು ಆರಂಭಿಸಿದನು ಗಂಡ.

“ಕತ್ತಲದಾಗ ಕಡೋಡಿ, ಕೊಣಮಗ್ಯಾಗ ತೊಡೋಡಿ, ಸುಮ್ಮನೆ ಮನಗ ಬಿದ್ದೋಡಿ” ಎಂದು ಚೇಷ್ಟೆಯಿಂದಾಡಿದ ಲಲ್ಲೆಯನ್ನು ಕೇಳಿ ಹೆಂಡತಿ ಕಕ್ಕಾ ವಿಕ್ಕಿಯಾದಳು. “ಇವನಿಗೆ ಗೊತ್ತಾಗದಂತೆ ಮಾಡಿದ್ದೆಲ್ಲ ತಿಳಿದೇ ಬಿಟ್ಟಿದೆಯಲ್ಲ” ಎನ್ನುತ್ತ ತಾನು ಮಾಡಿದ್ದನ್ನೆಲ್ಲ ವಿವರಿಸಿದಳು-

“ಸುಳ್ಳೇಕೆ ಹೇಳಲಿ ? ಭಜನೆ ಕೇಳಬೇಕೆಂದರೆ ಹಸಿವೆ ಮನೆಯತ್ತ ಎಳೆದುತಂದು ಸಜ್ಜಿಗೆ ಮಾಡಿಸಿತು. ನೀವು ಬರುವಷ್ಟರಲ್ಲಿ ತಿಂದುಮುಗಿಸಿ, ಉಪವಾಸ ಮಾಡಿದವರಂತೆಯೇ ಮಲಗಿಬಿಟ್ಟು, ನೀವು ಬಂದಾಗ ಬಾಗಿಲು ತೆರೆಯಬೇಕೆಂದು ಯೋಚಿಸಿದ್ದೆ. ಆದರೆ ನಾನು ತಾಬಾಣ ಸಾವರಿಸುವಷ್ಟರಲ್ಲಿ ನೀವು ಬಂದೇ ಬಿಟ್ಟಿದ್ದರಿಂದ, ಮಾಡಿದ್ದನ್ನೆಲ್ಲ ಮುಚ್ಚಿಟ್ಟು ಓಡಿಬಂದು ಬಾಗಿಲು ತೆರೆದೆ, ನನ್ನದೇನಿದೆ ತಪ್ಪು ? ಹಸಿವೆ ತಾಳದೆ ಹೀಗೆ ಮಾಡಿದೆ. ನಿಮಗೆಲ್ಲ ತಿಳಿದೇ ಬಿಟ್ಟಿದೆಯಲ್ಲ ? ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ” ಎಂದು ವಿನಯದಿಂದ ಕೇಳಿಕೊಂಡಳು.

ಗಂಡನು, ಅಂದು ರಾತ್ರಿ ಹೆಂಡತಿಯು ಮಾಡಿದ ಅಚಾತುರ್ಯವನ್ನೂ, ಮರುದಿನ ಬೆಳಗಾದ ಬಳಿಕ ಆಕೆ ಮಾಡಿದ ಸಜ್ಜಗೆಯನ್ನೂ ಆಕೆಯ ವಿನಂತಿಯನ್ನು ಮನ್ನಿಸಿ ಹೊಟ್ಟೆಯಲ್ಲಿ ಹಾಕಿಕೊಂಡನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...