ಕಾದು ಕುಳಿತ ಪೆಣತಿನಿಗಳು

ಕಾದು ಕುಳಿತ ಪೆಣತಿನಿಗಳು

ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ ಹಾಕಿ ಸುಮೋ ಒಂದೇ ವೇಗದಲ್ಲಿ ಓಡುತ್ತಿತ್ತು.

ಅದೇ ಆಗ ನೈರುತ್ಯ ಮುಂಗಾರು ನಾಡನ್ನು ಪ್ರವೇಶಿಸಿತ್ತು. ಮಧ್ಯ ಬೇಸಿಗೆಯಲ್ಲೇ ಭೂಮಿ ಹದಮಾಡಿಟ್ಟಿದ್ದ ರೈತರು ಇನ್ನೇನು ಮೃಗಶಿರ ಮಳೆ ಹುಯ್ಯತ್ತೆ ಅನ್ನುವಾಗಲೇ ಅಲ್ಲಲ್ಲಿ ಬಿತ್ತನೆಗೆ ತೊಡಗಿದ್ದರು. ಊರ ಹೊರಗಿನ ರಸ್ತೆ ಸವೆಸುತ್ತಾ ಇವೆಲ್ಲವನ್ನು ವೀಕ್ಷಿಸುತ್ತಾ ಸಾಗಿದ್ದೆವು. ಪಡುವಲಿಂದ ತೇಲಿ ಬರುವ ಬಿಳೀ ಮೋಡಗಳು ನಮ್ಮನ್ನು ಹಿನ್ನೂಕಿದಂತೆಲ್ಲ ಎಳೆ ಬಿಸಲಿಗೆ ಅಷ್ಟಷ್ಟೇ ಕರಗಿ ಕಾಣೆಯಾಗುವಾಗ ಪ್ರಯಾಣವನ್ನು ಚಿರಂತನಗೊಳಿಸಿದ ಅನುಭವ.

ಅದೊಂದು ನಾಡಿನ ಪ್ರಸಿದ್ಧ ವಿಹಾರತಾಣ. ನಾಗರಿಕ ಪ್ರದೇಶಗಳಿಂದ ದೂರ ಇದ್ದುದರಿಂದ ವಾಹನಗಳ ಮೂಲಕ ಮಾತ್ರ ಜನಸಂಪರ್ಕ ಪಡೆದಿತ್ತು. ಹುರುಪಿನಿಂದ ನಾವು ನದೀ ದಡ ತಲುಪುವಲ್ಲಿ, ದಾರಿಯ ಇಕ್ಕೆಲಗಳಲ್ಲೂ ಸಾಕಷ್ಟು ವಾಹನಗಳು ಬೀಡು ಬಿಟ್ಟಿದ್ದವು. ತಮ್ಮ ಸಾಮಾನುಗಳನ್ನು ವಾಹನದಲ್ಲೇ ಬಿಟ್ಟು ಜನ ತಂಡೋಪತಂಡವಾಗಿ ನಡೆದು ನದೀ ತೀರಕ್ಕೆ ಹೊರಟಿದ್ದರು. ಇಳಿಜಾರು-ದಿಬ್ಬಗಳನ್ನು ಇಳಿಯುತ್ತಾ ಏರುತ್ತಾ, ಎತ್ತ ತಿರುಗಿದರೂ ಹಸಿರೇ ಹಸಿರು, ಕೆಲವರು ಏದುಸಿರು ಬಿಟ್ಟು ನಡೆಯುತ್ತಿದ್ದರೆ, ಹುಡುಗಾಟಿಕೆಯ ಮಕ್ಕಳು ಕೇಕೆ ಹಾಕಿ ನೆಗೆಯುತ್ತಾ ಸಾಗಿದ್ದರು. ಹೊಸ ಜೋಡಿಯೊಂದು ಹಂಸ ನಡಿಗೆಯಲ್ಲಿ ಸರಿಯುತ್ತಿದ್ದರೆ, ಅವರಿವರನ್ನು ಚುಡಾಯಿಸುತ್ತಾ ಸಾಗುವ ಪುಂಡು ಹರೆಯದವರ ಕಾರುಬಾರು ವಯಸ್ಸಿಗೆ ಸಹಜವಾಗಿತ್ತು. ಎಲ್ಲವನ್ನು ಆಸ್ವಾದಿಸುತ್ತಾ ನಡೆದ ಭಾವಜೀವಿಗಳೂ ಅಲ್ಲಿಲ್ಲದೆ ಇರಲಿಲ್ಲ.

ನದಿಯ ಹತ್ತಿರ ಬರುತ್ತಲೇ ಅಷ್ಟಗಲ ಪಸರಿಸಿಕೊಂಡ ಸ್ಪಟಿಕದಂತಹ ತಿಳಿಹರಿವು ಅಲ್ಲಲ್ಲಿ ಬಂಡೆಗಳ ಸಂದಿನಿಂದ ಬಳಕುವ ಪರಿ ಚಿತ್ತಾಕರ್ಷಕವಾಗಿ ನೋಡುಗರ ಮನ ಪುಳಕಿತಗೊಳಿಸಿ ಮೈಮರೆಸಿ ನಿಲ್ಲಿಸುತ್ತಿತ್ತು.

ನೀರು ಕಡಿಮೆ ಇರುವ ಜಾಗಗಳಲ್ಲಿ ಕಪ್ಪು ಹೆಬ್ಬಂಡೆಗಳು ತಲೆ ಎತ್ತಿ ನಿಂತಿದ್ದವು. ಅವುಗಳನ್ನು ನೋಡುತ್ತಲೇ ‘ವ್ಹಾ’ ಎನ್ನುತ್ತಾ ವಿಜಿ ಹಿಂದು-ಮುಂದಿನ ಯೋಚನೆ ಇಲ್ಲದೆ ಅವುಗಳ ಮೇಲೆ ಜಿಗಿಯುತ್ತಾ ಹೋಗಿ, ಒಂದರ ಮೇಲೆ ಕುಳಿತು ಕೇಕೆ ಹಾಕಿದ. ನಾವೆಲ್ಲ ಅವನನ್ನು ಅನುಕರಿಸಿ, ನಂತರ ಪ್ರಶಾಂತ ನೀರಿನ ಹರವಿಗೆ ಧಾವಿಸಿದೆವು. ನಮ್ಮನ್ನು ನೋಡಿ ಬೇರೆಯವರೂ ಹಾಗೇ ಕುಪ್ಪಳಿಸಿ ಬರುತ್ತಿದ್ದರು. ಸ್ವಲ್ಪ ಯಾಮಾರಿಸಿದರೂ ನೀರಿಗೆ ಜಾರಿಸುತ್ತಿದ್ದವು ಪಾಚಿಗಟ್ಟಿದ ಬಂಡೆಗಳು, ಮೊಣಕಾಲು ಮಟ್ಟಕ್ಕೆ ನೀರಿರುವುದರಿಂದ ಅಕಸ್ಮಾತ್ ನೀರಿಗೆ ಬಿದ್ದರೂ, ಬಿದ್ದಾಗಲೇ ಸ್ನಾನ ಆರಂಭಿಸುವವರಿಗಂತೂ ಹೇಳಿ ಮಾಡಿಸಿದ ಜಾಗವಾಗಿತ್ತು.

ಸುತ್ತಲ ಸೊಬಗಿಗೆ ಸ್ಪಂದಿಸದವರು ಯಾರೂ ಇರಲಿಲ್ಲ. ಎಲ್ಲರಿಗೂ ಬಂದದ್ದು ಸಾರ್ಥಕ ಎನ್ನುವ ಧನ್ಯತಾಭಾವ, ಸ್ವಲ್ಪ ಮುಂದೆ ನಡೆದರೆ ಅನತಿ ದೂರದ ತಿರುವಿನಲ್ಲಿ ಕಾಣುವ ಜಲಪಾತದ ಭೋರ್‍ಗರೆತ ಕಿವಿಗಪ್ಪಳಿಸುತ್ತದೆ. ಎತ್ತರದ ಕಪ್ಪು ಇಳಿಜಾರು ಬಂಡೆಗಳ ಮೇಲಿಂದ ಬೆಳ್ನೊರೆ ಚಿಮ್ಮಿಸುತ್ತ ಧುಮ್ಮಿಕ್ಕುವ ಈ ತಡಸಲಿನ ಸ್ನಿಗ್ಧ ಸೌಂದರ್ಯ ವರ್ಣನಾತೀತವಾದುದು.

ಆಳವಾದ ಕೊರಕಲಿಗೆ ಬಿದ್ದು, ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎನ್ನುವಂತೆ ಕಾಣುತ್ತಾ ಯಾರ ಹಂಗಿಲ್ಲದೇ ತನ್ನ ಪಾಡು ತನಗೆ ಎಂಬಂತ ಭೋಂಕರಿಸುತ್ತಿತ್ತು. ವೀಕ್ಷಕನ ಮೈನವಿರೇಳಿಸುವ ಸುಂದರ ನಿಸರ್ಗ ಪದಗಳಲ್ಲಿ ಹಿಡಿದಿಡಲಾಗುವುದಿಲ್ಲ. ಅನುಭವಿಸಿಯೇ ವೇದ್ಯ. ಕರ್ಣಾನಂದವೂ ಅಷ್ಟೇ ವಿಶಿಷ್ಟ.

ನದಿ ತಟಾಕದ ಸುತ್ತ ಹಾದಿಬದಿ, ಮರದ ನೆರಳುಗಳಲ್ಲಿ ತ್ಯಾಜ್ಯ ವಸ್ತುಗಳ ಗಲೀಜು ತುಂಬ ಅಸಹ್ಯ ಹುಟ್ಟಿಸಿತ್ತು. ಹೀಗೆ ಹೇಳುವಾಗ ಉದ್ದಾನುದ್ದಕ್ಕೂ ಗುಟುಖಾ ಉಗುಳುತ್ತ ಸಾಗುವವರ ಅಸಭ್ಯತೆ ಇಲ್ಲಿ ಹೇಳದಿದ್ದರೆ ಚೆನ್ನ. ಬಿಸಿಲು ಏರುತ್ತಿದ್ದಂತೆ ಸುತ್ತಮುತ್ತಲಿನ ತಂಪಾದ ಗಾಳಿಯ ಅನುಭೂತಿ ಅಸಾಧ್ಯವಾದದ್ದು. ಜಲಾಶಯದಲ್ಲಿ ಅಲ್ಲಲ್ಲಿ ದೋಣಿ ವಿಹಾರವು ಚೆಲುವಿಗೆ ಮತ್ತಷ್ಟು ಮೆರಗು ಕೊಟ್ಟಿತ್ತು. ಪ್ರವಾಹಕ್ಕೆ ಎದುರಾಗಿ ದೋಣಿ ಚಲಾಯಿಸುವುದೇ ಅದ್ಭುತ ಅನುಭವ. ಅಲ್ಲಲ್ಲಿ ಗಾಳ ಹಾಕಿ ಮೀನು ಹಿಡಿಯುವವರನ್ನು ಪೇಟೆಯವರಂತೂ ಅದೊಂದು ವಿಶೇಷ ದೃಶ್ಯ ಎಂಬಂತೆ ಬಾಯಿ ತೆರೆದು, ಕಣ್ಣಿವೆ ಮುಚ್ಚದೇ ವೀಕ್ಷಿಸುತ್ತಿದ್ದರು.

ನೀರಾಟ ಆಡದಿದ್ದವರು ಪಾಚಿಗಟ್ಟಿ ಒಣಗಿದ ಕರಿಬಂಡೆಗಳ ಮೇಲೇರಿ ಕುಳಿತು ಆಸ್ವಾದಿಸುತ್ತಿದ್ದರು. ಕೆಲವರು ಮೊಣಕಾಲಷ್ಟಿದ್ದ ನೀರಲ್ಲಿ ಮುಳುಗಿ ಎದ್ದು ಬಿದ್ದು ನೀರಾಟ ಆಡುತ್ತಿದ್ದರು. ಅವರಾಟವು ಪ್ರಲೋಭನೆ ಒಡ್ಡಿದಾಗ ಒಬ್ಬೊಬ್ಬರೇ ನೀರಿಗಿಳಿದೆವು. ಪುಳಿಚಾರು ವೆಂಕಟ ದೂರದ ಬಂಡೆಯೊಂದರ ಮೇಲೆ ಕಾಲು ಇಳಿಬಿಟ್ಟು ಕುಳಿತು ನೋಡುತ್ತಿದ್ದನು. ನೀರಿಗಿಳಿಯ ಬೇಡೆಂದು ಅವನ ತಾಯಿ ಮೊದಲೇ ಎಚ್ಚರಿಸಿದ್ದರು. ಆದಾಗ್ಯೂ ವಿಜಯ ವೆಂಕಟನ ಹಿಂದಿನಿಂದ ಗೊತ್ತಾಗದಂತೆ ಬಂದು, ಬೊಗಸೆಯಿಂದ ಒಂದೇ ಸವನೆ ನೀರು ಚಿಮ್ಮತೊಡಗಿದ. ಏನಾಯಿತೆಂದು ಅರಿಯುವ ಮೊದಲೇ ಎದ್ದು ನಿಲ್ಲುತ್ತ, ಚಳಿಗೆ ಬಾಯ್ದೆರೆದು ಮೈ ಕೊಡವುತ್ತಾ ನೋಡಿದ. ಗೆಳೆಯನ ಪುಂಡಾಟಿಕೆ ಅತಿಯಾಯಿತು ಅಂದುಕೊಂಡರೂ, ಸಿಟ್ಟು ಮಾಡಿಕೊಳ್ಳದೆ ಹಲ್ಲು ಕಿರಿದ. ನೀರಿಗಿಳಿದವನಿಗೆ ಇನ್ನೇನು ಎಂದು ಎಲ್ಲರೂ ಅವನನ್ನು ನೀರಿಗೆ ಎಳೆದುಕೊಂಡರು. ಒಲ್ಲದ ಮನಸ್ಸಿನಿಂದ ಒಪ್ಪಿದವನಿಗೆ ನೀರೆಂದರೆ ಹೆದರಿಕೆ ಯಾಕೋ ಗೊತ್ತಿಲ್ಲ.

ನೀರಾಟ ಆಡುತ್ತಾ ಸಮಯ ಸರಿದುದೇ ಗೊತ್ತಾಗಲಿಲ್ಲ. ಹೊಟ್ಟೆ ತಾಳ ಹಾಕಲಾರಂಭಿಸಿತ್ತು. ಸುತ್ತ ದೃಷ್ಟಿ ಹರಿಸಿದರೆ ಜನರು ಅಲ್ಲಲ್ಲಿ ಮರಳಿನಲ್ಲೋ, ಜಮಖಾನದ ಮೇಲೋ, ಟವಲ್ಲು ಹಾಸಿಯೊ ಕುಳಿತು ತಂದ ಊಟ ಉಣ್ಣುತ್ತಿದ್ದರು. ಗುಂಪೊಂದು ಅಲ್ಲಿಯೇ ಅಡಿಗೆ ಮಾಡುತ್ತಾ ಉಣ್ಣುವವರಿದ್ದರು. ಈಗಾಗಲೇ ಉಂಡವರು ತೇಗುತ್ತಾ ಮರಳಿನಲ್ಲಿ ಉರುಳಿದ್ದರು. ಮಕ್ಕಳು ಅಲ್ಲಲ್ಲಿ ಆಟ ಮುಂದುವರಿಸಿದ್ದರು. ಕೇಕೆ, ನಗು, ಕೀಟಲೆ ಹಾಡುಗಳ ಜೊತೆಗೆ ಟೇಪ್‌ರೆಕಾರ್ಡರೂ ಮೇಲಾಟ ನಡೆಸಿ, ಶಬ್ದ ಮಾಲಿನ್ಯ ತಾರಕಕ್ಕೇರಿತ್ತು.

ಗೆಳೆಯರೆಲ್ಲಾ ಹೊಟ್ಟೆ ತುಂಬಾ ಉಂಡು ತೇಗಿದರು. ಜೊತೆಗೆ ಖುಷಿಯಲ್ಲಿ ಬೀರ್ ಬಾಟಲಿಗಳೂ ಖಾಲಿಯಾಗಿದ್ದವು. ವೆಂಕು ಮಾತ್ರ ಕುಡಿಯಲು ಗೆಳೆಯರ ಒತ್ತಾಯಕ್ಕೆ ಮಣಿದಿರಲಿಲ್ಲ. ಕುಡಿತಕ್ಕೆ ಅವನು ಒಗ್ಗಿರಲೇ ಇಲ್ಲ. ಇಷ್ಟಕ್ಕೂ ಅವನದು ಸಣ್ಣ ಸಂಬಳದ ಕೆಲಸ, ಕುಟುಂಬದ ಜವಾಬ್ದಾರಿ ಬೇರೆ. ಹೀಗಾಗಿ ಎಷ್ಟು ಬೇಕೋ ಅಷ್ಟೇ ಕಾಲು ಚಾಚಿಕೊಂಡಿದ್ದನು.

ಗೆಳೆಯರು ಅಲ್ಲೇ ಅಡ್ಡಾದರು. ನಾನು ವಿಜಯನೊಂದಿಗೆ ಮತ್ತೊಮ್ಮೆ ತಿರುಗಾಟ ಮಾಡಿ ಬಂದೆ, ಸಂಜೆ ಐದಾಗಿತ್ತು. ಇನ್ನೊಮ್ಮೆ ನೀರಿಗಿಳಿದು ಮಜಾ ಮಾಡೋಣ. ಕತ್ತಲಾಗುತ್ತೆ ಅನ್ನುವಾಗ ಹೊರಡೋಣ ನಿರ್ಧರಿಸಿಕೊಂಡೆವು.

ಎಲ್ಲರೂ ಮತ್ತೊಮ್ಮೆ ನೀರಿಗಿಳಿದೆವು. ಸಾಕೆಂಬ ಮಾತಿರಲಿಲ್ಲ. ಯಾರಿಗೂ ದಣಿವೆಂಬುದಾಗಲಿಲ್ಲ. ಈ ಬಾರಿ ವೆಂಕಟ ತನ್ನಷ್ಟಕ್ಕೆ ತಾನೇ ಇಳಿದದ್ದು ಆಶ್ಚರ್ಯ ತಂದಿತ್ತು. ಮೊಣಕಾಲು ಮಟ್ಟದ ನೀರಿನಲ್ಲಿ ಆಡುತ್ತಿದ್ದೆವು. ಕೇಕೆ ಹಾಕಿ ಕೈ ಬಡಿದು ಮುಳುಗುತ್ತಾ ಏಳುತ್ತಾ ಗೆಳೆಯರೆಲ್ಲಾ ಆಚೀಚಿನ ಜನರ ನಡುವೆ ಹರಡಿಕೊಂಡಿದ್ದೆವು.

ಇದ್ದಕ್ಕಿದ್ದಂತೆ ಯಾರೋ ಕೂಗಿಕೊಂಡದ್ದಕ್ಕೆ ಎಲ್ಲರ ಕಿವಿಗಳು ನಿಮಿರಿದವು. ನೀರಾಟ ಆಡುತ್ತಾ ವೆಂಕಟ ಅದ್ಯಾವ ಮಾಯೆಯಲ್ಲೊ ದೂರದ ಆಳದ ಮಡುವಿಗೆ ತೇಲಿ ಹೋಗಿದ್ದನು. ಎರಡೂ ಕೈ ಮೇಲೆತ್ತಿ ಮುಳುಗಿ ಎದ್ದು ಮತ್ತಷ್ಟು ದೂರ ತೇಲುತ್ತಾ, ನೋಡನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಏಳುಬೀಳಿನ ಹಾದಿ ಸವೆಸಿ ವೆಂಕಟ ಕಣ್ಮರೆಯಾದನು.

ಎಂದೆಂದೂ ನೀರಾಟ ಆಡದವ ಇಂದು ಮಕ್ಕಳ ತರ ಹುಚ್ಚು ಆಸೆಗೆ ಬಲಿಯಾದದ್ದು ಕೇವಲ ಆಕಸ್ಮಿಕವಾಗಿತ್ತು.

ಮೈಮರೆತು ಆಡುತ್ತಿದ್ದ ನಮಗೆ ಏಕಾ‌ಏಕಿ ನಿಚ್ಚಳವಾಯಿತು. ಅಸಹಾಯಕ ಸ್ಥಿತಿಯಲ್ಲಿ ಮುಳುಗುತ್ತಿದ್ದವನು ನಮ್ಮ ಗೆಳೆಯ ವೆಂಕಟನೇ ಎಂದು ಅರಿವಾದಾಗ ಎದೆಗಳು ನಗಾರಿಯಾದವು. ‘ಅಯ್ಯೋ, ಮುಳುಗುತ್ತ ಇದ್ದಾರೆ. ಯಾರಾದ್ರೂ ಕಾಪಾಡಿ’ ಎಂದು ಅರಚುತ್ತಾ ದಂಡೆಗೆ ಧಾವಿಸಿದೆವು. ಆಘಾತದಿಂದ ತತ್ತರಿಸಿದ ನಾನು ಮತ್ತೆ ನೀರಿಗೆ ಜಿಗಿದೆ. ಹಿಂದೆಯೇ ನನ್ನನ್ನು ಗ್ರಹಿಸಿದ ಯಾರೊ ಚಲ್ಲಣ ಹಿಡಿದೆಳೆದು ‘ತಲೆಕೆಟ್ಟಿದ್ಯಾ?’ ಎಂದು ಗದರಿಸಿದರು. ದಂಡೆಯಲ್ಲಿದ್ದವರೂ ಸಹಾಯಕ್ಕಾಗಿ ಇಟ್ಟ ಮೊರೆ ಮುಗಿಲು ಮುಟ್ಟಿದ ಅಳಲಿನಲ್ಲಿ ಕೊಚ್ಚಿ ಹೋಗಿತ್ತು. ಕ್ಷಣಮಾತ್ರದಲ್ಲಿ ಕೈ ಮೀರಿದ ಧಾರುಣತೆಗೆ ಯಾರೂ ಸಹಾಯಕ್ಕಾಗಿ ಸ್ಪಂದಿಸಲಿಲ್ಲ. ಬಿಕ್ಕಳಿಕೆ-ರೋದನದ ಮಧ್ಯೆ ಸಾವು ಅವನಿಗಾಗಿ ಹೊಂಚುಹಾಕಿ ಕುಳಿತಂತೆ ಕಂಡಿತು.

ಆಗಲೇ ಕಾರ್ಮೋಡಗಳು ಸುತ್ತಲೂ ಆವರಿಸಿಕೊಂಡಿದ್ದವು. ರಣಹದ್ದುಗಳೆರಡು ವಿಕಾರವಾಗಿ ಕೂಗುತ್ತಾ ಗೂಡಿನತ್ತ ಹಾರಿಹೋಗುತ್ತಿದ್ದವು. ಅವಕ್ಕೆ ವೆಂಕಟನ ಸಾವಿನ ಸಪ್ಪಳ ಕೇಳಿಸಿಯೂ ಹೊಟ್ಟೆ ತುಂಬಿದ ಅಕಾಲದಲ್ಲಿ ಅದ್ಹೇಗೆ ಧರೆಗೆ ಇಳಿದಾವು! ನಾಳೆಗೆ ನೋಡಿಕೊಂಡರಾಯಿತು ಎಂದುಕೊಂಡಿರಬೇಕು. ಹಾಗೇ ಹಾರಿಹೋದವು.

ಕಣ್ಣು ಕುಕ್ಕುವ ಮಿಂಚುಹೊಡೆದು ಹಿಂದೆಯೇ ಅರ್ಭಟಿಸಿದ ಗುಡುಗು ಎದೆ ನಡುಗಿಸುವುದು. ರಪರಪನೆ ಮಳೆ ಹೊಡೆಯತೊಡಗಿತು. ಬಿಟ್ಟಕಣ್ಣು ಬಿಟ್ಟಂತೆ ಅಲ್ಲಲ್ಲಿ ನಿಂತು ನೋಡುತ್ತಿದ್ದ ಎಲ್ಲರೂ ನೀರು ಚಿಮ್ಮಿಸುತ್ತ ದಂಡೆಗೆ ಮುತ್ತಿಗೆ ಹಾಕುವವರಂತೆ ಓಡೋಡಿ ಬಂದರು. ಪ್ರವಾಹವು ಏರುತ್ತಿದ್ದದ್ದು ಅಷ್ಟಾಗಿ ಗೊತ್ತಾಗಲಿಲ್ಲ. ಸುತ್ತಲ ಸೂತಕದ ವಾತಾವರಣವು ಇನ್ನೂ ಹಸಿರಾಗಿರುವಂತೆಯೇ ಸಿಕ್ಕ ಸಿಕ್ಕ ಕಡೆ ಆಸರೆಗೆ ಓಡಾಡಿದರು. ಕೆಲವರು ತಮ್ಮ ತಮ್ಮ ವಾಹನ ಹೊಕ್ಕು ಮಳೆಯ ನೀರಿನಿಂದ ರಕ್ಷಿಸಿಕೊಂಡರೆ, ಅತ್ತ ವೆಂಕಟನನ್ನು ಮುಳುಗಿಸಿ ಕೊಂಡೊಯ್ದ ಪ್ರವಾಹವು ಅವನ ಜೀವದೊಂದಿಗೆ ಚಿನ್ನಾಟ ಆಡುತ್ತಿತ್ತು. ನಾವು ಆತ್ತಲೇ ನೋಡುತ್ತ ಗರ ಬಡಿದಂತೆ ನಿಂತಿದ್ದೆವು. ಎಲ್ಲರ ಮನದ ತುಂಬಾ ತೇಲಿ ಹೋಗಿ, ಇಷ್ಟೊತ್ತಿಗೆ ಉಳಿವ ಸಾಧ್ಯತೆ ಇರದ ನತದೃಷ್ಟನ ಬಗ್ಗೆಯೇ ತುಂಬಿಕೊಂಡಿತ್ತು. ನಿತ್ಯ ಒಡನಾಡಿದ ವೆಂಕಟನ ಕ್ಷಣಿಕ ಚಂಚಲತೆಗೆ ಒದಗಿದ ಸ್ಥಿತಿ ನಮಗೆಲ್ಲಾ ಖಿನ್ನತೆ ಮೂಡಿಸಿತ್ತು. ಈ ತನಕ ‘ವಾವ್’ ಎನ್ನುತ್ತಾ ಅನುಭವಿಸಿದ ಆನಂದದ ಕ್ಷಣಗಳು ಒಮ್ಮೆಲೆ ‘ಅಯ್ಯೋ’ ಎನಿಸುವಷ್ಟು ದುಬಾರಿಯಾದೀತು ಅಂದುಕೊಂಡಿರಲಿಲ್ಲ. ಎಲ್ಲರ ಮೈಯಲ್ಲಿ ಗಾಬರಿ ಗಾಬರಿ ಹಾಗೇ ಇತ್ತು. ಮಂಕು ಕವಿದವರಿಗೆ ಕೈಕಾಲು ಆಡಲಿಲ್ಲ. ಹಾಗಂತ ಸುಮ್ಮನೆ ನಿಂತಿರಲೂ ಬಿಡಲಿಲ್ಲ.

ಜೀವ-ರಕ್ಷಕ ದಳದ ಮೂವರು ಮುಳುಗುದಾರರು ವರಾಂಡದಲ್ಲಿ ಕುಳಿತು ಹರಟುತ್ತಿದ್ದರು. ಅವರಿಗಾಗಲೇ ಸುದ್ದಿ ತಿಳಿದಿತ್ತು. ನಾವು ವೆಂಕಟನನ್ನು ರಕ್ಷಿಸಲು ಉಮ್ಮಳಿಸಿ ಬಂದ ದುಃಖದ ನಡುವೆ ಅವರಲ್ಲಿ ತೋಡಿಕೊಂಡೆವು.

ಅವರಲ್ಲೊಬ್ಬ ‘ನದಿ ಮೂಲದಲ್ಲಿ ಬೆಳಗಿನಿಂದ ಮಳೆ ಸುರೀತಾ ಇದೆ. ಇಲ್ಲಿ ಈಗ ಪ್ರಾರಂಭವಾಗಿದೆ. ಪ್ರವಾಹ ನದೀಲಿ ಯಾವಾಗ ಉಕ್ಕೇರುತ್ತೆ ಹೇಳೋಕಾಗಲ್ಲ. ಅವನು ಮುಳುಗಿದೆಡೆ ಸುಳಿ ಬೇರೆ ಇದೆ. ನಮ್ಮಿಂದ ಸಾಧ್ಯವಿಲ್ಲ’ ಎಂದು ಯಾವುದೆ ಗೊಂದಲಗಳಿಲ್ಲದೆ ಹೇಳಿ ಕೈಚೆಲ್ಲಿದ. ವ್ಯಾಪಾರಿ ಸಂಸ್ಕೃತಿಯ ಕೈ ಮೇಲಾಗಿ ಅವರು ನಿರಾಕರಿಸಿರಬೇಕು.

‘ಸರ್ಕಾರಿ ಕಛೇರಿ ಮುಚ್ಚಿ ಮನೆಗೆ ಹೋಗಿದ್ದಾರೆ. ನಾವು ಖಾಸಗಿ ಮುಳುಗುದಾರರು. ಅವರ ದಾಖಲೆಯಲ್ಲಿ ಸಹಿ ಮಾಡಿಟ್ಟು ನಾವು ನೀರಿಗಿಳಿಯಬೇಕು. ನಮ್ಮ ನಿಬಂಧನೆಗಳು ಇರುವುದೇ ಹಾಗೆ, ನೀವು ಹೇಳಿದಂತೆ ಈ ಹೊತ್ತಿನಲ್ಲಿ ನೀರಿಗಿಳಿದರೆ, ನಮ್ಮ ಜೀವವಿಮೆ ನಮಗೆ ದಕ್ಕೋಲ್ಲ. ನಮ್ಮ ಹೆಂಡ್ರು ಮಕ್ಕಳನ್ನ ನೋಡೋರಾರು? ಹೋಗಿ ಹೋಗೀ’ ಎಂದು ಇನ್ನೊಬ್ಬ ಗುಡುಗಿದನು. ಅವನು ಮಾತು ಮುಗಿಸಿದ ತಕ್ಷಣ ಸುತ್ತಲೂ ಮೌನ ಆವರಿಸಿತು. ಹೊರಗೆ ‘ಧೋ’ ಎಂದು ಮಳೆ ಸುರೀತಿತ್ತು. ನನಗೆ ರೇಗಿ ಹೋಯಿತು. ‘ಅಲ್ಲಿ ಪ್ರಾಣ ಹೋಗ್ತಾ ಇರೋವಾಗ ನೀನು ಕಾನೂನು ಕೋಟ್ ಮಾಡ್ತಾ ಕೂತಿದೀಯಲ್ಲ. ನೀನೇನು ಮನುಷ್ಯನೇ?’ ಎನ್ನಬೇಕೆಂದುಕೊಂಡೆ. ಆದರೀಗಿಲ್ಲಿ ಮೌನವಾಗಿದ್ದರೆ ಒಳಿತು ಎನಿಸಿತು.

ಇನ್ನೂ ಮುರುಟದ ನನ್ನಾಸೆಗೆ ಸ್ವಾಭಿಮಾನವನ್ನು ಬದಿಗಿಟ್ಟು ಮೊರೆ ಹೋದೆ. ನನ್ನ ಏದುಸಿರಿನ ಬಡಿತ ಕೇಳಿಯೂ ಆತ ಜಪ್ಪಯ್ಯ ಅನ್ನಲಿಲ್ಲ. ನಾನು ಒತ್ತಾಯ ಪಡಿಸುವ ಮಾತಿಗೆ ಬಲ ಸಾಲದೇ ಸೊರಗಿರಬೇಕು, ಅನಿಸಿತು. ಎಲ್ಲರೂ ಹೆದರಿದ ಸ್ಥಿತಿಯಲ್ಲಿದ್ದುದರಿಂದ ಮತ್ತೆ ಮಾತಾಡಲು ತಡಬಡಿಸಿದೆವು. ಅಸಡ್ಡೆಯಿಂದ ನಮ್ಮ ಮುಖ ನೋಡುತ್ತಿದ್ದವರದ್ದು ಬೇಡಿಕೆ ಏನಾದರೂ ಇರಬಹುದೇ ಅಂದುಕೊಂಡು ‘ಕೇಳಿದಷ್ಟು ಹಣ ಕೊಡುತ್ತೇವೆ’ ಎಂದರೂ ಅಲುಗಾಡಲಿಲ್ಲ. ನನಗೆ ಯಾಕೋ ಅವರು ಮಾತಿನಲ್ಲಿ ಪ್ರಾಮಾಣಿಕರಾಗಿಲ್ಲ ಅನಿಸತೊಡಗಿತು.

ಸಮಸ್ಯೆಯಿಂದ ಮುಕ್ತರಾಗದೇ ನಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳತೊಡಗಿತು. ಅಸಹಾಯಕತೆಯಿಂದ ಮಾಡಲು ತೊಡಗಬೇಕಾದ ವಾಸ್ತವವು ಗ್ರಹಿಕೆಗೆ ನಿಲುಕದೇ ಹತಾಶೆಯಿಂದ ಕೈಚೆಲ್ಲುವುದು ಅನಿವಾರ್ಯವಾಯಿತು.

ಅಲ್ಲಿಂದ ನಾಲ್ಕು ಫರ್ಲಾಂಗು ದೂರದಲ್ಲಿ ಪೊಲೀಸು ಚೌಕಿ ಇರುವುದು. ಮಳೆಯ ನಡುವೆ ಸುಮೋ ದೌಡಾಯಿಸಿತು. ಅಲ್ಲಿ ನೋಡಿದರೆ ಪರಿಸ್ಥಿತಿ ಇನ್ನೂ ಕನಿಷ್ಠ ಮಟ್ಟದ್ದಾಗಿತ್ತು. ಅಲ್ಲಿ ಚೌಕೀದಾರ ಮಾತ್ರ ಇದ್ದ. ಇರೋ ಮೂರು ಜನ ಪೇದೆಗಳಲ್ಲಿ, ಇಬ್ಬರು ಕೆಲಸ ಮುಗಿಸಿ ಮನೆಗೆ ಹೋಗಿದ್ದರು. ಅಲ್ಲಿದ್ದವ ಗೊಗ್ಗರು ದನಿಯಲ್ಲಿ ‘ಪಾಲಕರನ್ನು ಫೋನು ಮಾಡಿ ಕರೆಸಿದ ನಂತರ ಮುಂದಿನದು…’ ಎಂದು ಕಡ್ಡಿ ಮುರಿದಂತೆ ಹೇಳುವಲ್ಲಿ ಅವನ ಧ್ವನಿಯಲ್ಲಿನ ಅಧಿಕಾರದ ವರಸೆ ಗುರುತಿಸಿದೆ. ಅವನು ವಯರ್‌ಲೆಸ್ ಸಂದೇಶ ಕೊಡಲೂ ರಿಪೇರಿ ನೆಪದಲ್ಲಿ ನಿರಾಕರಿಸಿದನು. ಇದರ ನಡುವೆ ಸತ್ತವನು ಬ್ರಾಹ್ಮಣ ಎಂಬುದನ್ನು ಬಿಟ್ಟಿದ್ದು ಬಿಟ್ಟು ಖಚಿತ ಪಡಿಸಿಕೊಂಡದ್ದು ಯಾಕೆಂದು ಗೊತ್ತಾಗಲಿಲ್ಲ. ತಮ್ಮ ಜವಾಬ್ದಾರಿಗಳಿಂದ ಜಾರಿಕೊಳ್ಳುವ ಇವರದ್ದು ಅಕ್ಷಮ್ಯ ಅಪರಾಧ ಎನಿಸಿತು. ಪೊಲೀಸ್ ಜಾಯಮಾನದಂತೆ ಅವನು ನಮ್ಮನ್ನು ಸಂಶಯಿಸದಿದ್ದದ್ದು ಪುಣ್ಯ!

ವೆಂಕಟನ ಮನೆಯವರಿಗೆ ದುರಂತದ ಬಗ್ಗೆ ಸುದ್ದಿ ಮುಟ್ಟಿಸಿಯಾಗಿತ್ತು. ಮಳೆಯ ಹೊರಪು ಕಡಿಮೆಯಾದರೂ ಮೋಡ ದಟ್ಟೈಸುತ್ತಲೇ ಇತ್ತು. ಎಂದಿನಂತಿಲ್ಲದ ಆ ಬೈಗು ಅಲ್ಲಿದ್ದವರನ್ನು ಹೈರಾಣಾಗಿಸಿದ್ದಲ್ಲದೇ ವೆಂಕಟನ ಅಂತಿಮಗೀತೆಯನ್ನು ಮೌನದಲ್ಲಿ ಹಾಡಿ ಹೋಗಿತ್ತು. ಕುಗ್ಗಿದ ಕ್ಷಮತೆಯಲ್ಲಿ ಖಾಲಿಯಾದ ಮನಸ್ಸು ಈಗ ನಿಜಕ್ಕೂ ಭಾರ ಎನಿಸತೊಡಗಿತ್ತು.

ಜೋಲು ಮುಖ ಹಾಕಿಕೊಂಡು, ನಿರ್ಜನವಾದ ನದಿ ದಂಡೆಗೆ ಮತ್ತೆ ವಾಪಾಸಾದೆವು. ಸುತ್ತಲೂ ಕತ್ತಲೆ ಮುತ್ತಿತ್ತು. ಜೀರುಂಡೆಯ ಶಬ್ದದ ನಡುವೆ ನೀರ್ಬೀಳಿನ ಸದ್ದು ಸೊರಗಿತ್ತು. ಬೆಳಗಿನಿಂದ ನದಿ ನೀರು ನೋಡುತ್ತಾ ಈಜಾಡಿ ಸುಖ ಅನುಭವಿಸಿದವರು ಈಗದರ ಕಡೆ ನೋಡಲೂ ಹಿಂಜರಿಕೆಯಾಗಿ, ಆಕಾಶದೆತ್ತರದಲ್ಲಿ ಮೋಡದ ಮರೆಯಿಂದ ಆಗಾಗ ಕಾಣುವ ಉರಿವ ಚಂದ್ರನ ನೋಡುತ್ತಾ ಕುಳಿತುಕೊಂಡೆವು. ಕಣ್ಣುಗಳಲ್ಲಿ ಯಾತನೆ ತುಂಬಿತ್ತು. ಮನದ ಜಟಿಲತೆಗೆ ಶೂನ್ಯದಲ್ಲಿ ದೃಷ್ಟಿ ನೆಟ್ಟಿತ್ತು. ವೆಂಕಟನ ಹೆತ್ತವರು ಬಂದು, ಹೆಣ ಸಿಕ್ಕಿದ ಕೂಡಲೇ ತೆಗೆದುಕೊಂಡು ಹೋಗಬೇಕೆಂದು ಕಾಯತೊಡಗಿದೆವು.

ಮುಳುಗುದಾರರ ಮಾತಿನ ಹಿಕಮತ್ತು ಮೊದಲಿಗೆ ಯಾರಿಗೂ ಗೊತ್ತಾಗಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ನನ್ನ ವ್ಯಾಪಾರಿ ಬುದ್ಧಿಗೆ ಇವೆಲ್ಲದರ ಹಿಂದಿನ ಒಳಗುಟ್ಟು ಬೇರೆಯೇ ಇದೆ ಎಂಬ ಸಂಶಯ ಕಾಡದೇ ಇರಲಿಲ್ಲ. ಅಷ್ಟರಲ್ಲಿ ಮಾತಿಗೆ ಸಿಕ್ಕ ಹಿತೈಷಿಯೊಬ್ಬ ಅಮಾಯಕರಂತೆ ನಟಿಸುತ್ತಿರುವ ಮುಳುಗುದಾರರ ಮುಖವಾಡದ ಹಿಂದಿರುವ ವ್ಯವಸ್ಥಿತ ಪಿತೂರಿಯನ್ನು ಬಿಚ್ಚಿಟ್ಟ.

ಜೀವರಕ್ಷಕರು ಜೀವಂತ ವೆಂಕಟನನ್ನು ಮೇಲೆ ಎತ್ತಿದರೆ ಸರ್ಕಾರ ನಿಗದಿಪಡಿಸಿದ ಅಲ್ಪಸ್ವಲ್ಪ ಹಣ ಮಾತ್ರ ಅವರ ಕೈಸೇರುತ್ತದೆ. ಆದರೆ ಸತ್ತ ಮೇಲಿನ ಪರಿಸ್ಥಿತಿ ಬೇರೆಯೇ ಆಗಿಬಿಡುತ್ತದೆ. ಮುಳುಗಿ ಬಹಳ ಹೊತ್ತಾದ ಮೇಲೆ ಯಾರಿಗೂ ಅವಸರವಿರುವುದಿಲ್ಲ. ಪಾತಾಳಗರಡಿ ಹಚ್ಚಿ ಹೆಣ ಮೇಲೆತ್ತುವ ಮುಂಚೆ, ಹೆಣದ ವಾರಸುದಾರರೊಂದಿಗೆ ತಾವೇ ಕರೆತಂದ ಪಂಚರ ಸಮಕ್ಷಮ ಚೌಕಾಶಿ ನಡೆದು ವ್ಯಾಪಾರ ಕುದುರುತ್ತದೆ. ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗೌಡಿಕೆಗೆ ಯಾರೂ ಪ್ರತಿರೋಧಿಸದೇ ಒಪ್ಪಿಬಿಡುವಂತೆ ಮಸಲತ್ತು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಬಿಕ್ಕಲಂಗೇ ಸಹಿ ಬಿದ್ದ ನಂತರದಲ್ಲಿ ಮಾತ್ರ ವಕ್ತಾರರಾಗಿ ಪೊಲೀಸರು ಹಾಜರಿ ಹಾಕುತ್ತಾರೆ.

ಆ ಮೇಲೆ ಹೆಣ ಇಂತಲ್ಲೆ ಇದೆ ಎಂಬುದು ಗೊತ್ತಿದ್ದೂ, ಹೆಣದ ತಲಾಶೆಯ ನಾಟಕ ನಡೆಯುವುದು. ಇಲ್ಲಿ ಸರ್ಕಾರದವರೂ ಜೀವಂತ ಎತ್ತಿದ್ದಕ್ಕಿಂತ ಹೆಚ್ಚು ಹಣವನ್ನು ಹೆಣ ಸೋಸಿ ತೆಗೆಯಲು ನಿಗದಿಪಡಿಸಿರುವುದು ವಿಪರ್ಯಾಸ. ಹೀಗಾಗಿ ಸತ್ತ ನಂತರ ಎತ್ತುವುದರಿಂದ ಹೇರಳ ಸಂಪಾದನೆ ಆಗುತ್ತದೆ ಎಂಬಲ್ಲಿನ ಹುನ್ನಾರ ಬೆಚ್ಚಿಬೀಳಿಸುತ್ತದೆ ಎನ್ನುವುದಕ್ಕಿಂತ ಹೆಚ್ಚಿಗೆ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ದುರದೃಷ್ಟಕರ. ಅವರ ಅನಾಗರಿಕ ವರ್ತನ ಒಬ್ಬರ ಅಸಹಾಯಕತೆಯನ್ನು ಇನ್ನೊಬ್ಬರು ಲಾಭಕ್ಕಾಗಿ ಬಳಸಬಾರದು ಎಂಬ ನೀತಿಯನ್ನು ಗಾಳಿಯಲ್ಲಿ ತೂರಾಡಿಸಿದಂತಾಗುತ್ತದೆ.

ಅಂದಹಾಗೆ ಆತ ನೀಡಿದ ಮಾಹಿತಿಯಂತೆಯೇ ಎಲ್ಲಾ ಘಟಿಸುತ್ತ ಹೋಯಿತು. ನಾವು ಕೈಕಟ್ಟಿ ನಿಂತು ನೋಡಿದೆವು.

ಹೆತ್ತವರ ಆಗಮನದ ನಂತರ ಸರಿರಾತ್ರಿಗೆ ವೆಂಕಟನ ನಿರ್ಜೀವ ದೇಹ ಮೇಲೆ ಬಂತು. ಅದನ್ನು ಎವೆ ಇಕ್ಕದೆ ನೋಡುತ್ತಿದ್ದವರೆಲ್ಲ ಒಮ್ಮೆ ನಿಡಿದಾದ ಉಸಿರು ಬಿಟ್ಟರು. ಆರೂಢ ಶರೀರವನ್ನು ಸುತ್ತುವರಿಯುತ್ತಲೇ, ಒತ್ತರಿಸಿ ಬಂದ ಅಳಲು ಕಣ್ಣೀರ ಕೋಡಿ ಹರಿಸಿತ್ತು. ಎದೆಗೆ ಕೈಹಾಕಿ ಕಲಕಿದಂತಿದ್ದ ಅಲ್ಲಿನ ದೃಶ್ಯ ಎಂತವರನ್ನೂ ಹೆದರಿಸುವಂತಿತ್ತು. ನಡುವೆಯೇ ಕಣ್ಮುಚ್ಚಿ ಅವನ ಆತ್ಮಕ್ಕೆ ಶಾಂತಿ ಕೋರಿದೆ ಆದರೆ ವೆಂಕಟನ ಹೆತ್ತೊಡಲು ಹಣದ ಮೇಲೆ ಕೌಚಿ ಬಿದ್ದು ಮೌನದಲ್ಲಿ ದುಃಖವನ್ನು ಹತ್ತಿಕ್ಕಿಕೊಂಡದ್ದು ಇನ್ನೂ ಭಯಂಕರ ದೃಶ್ಯವಾಗಿತ್ತು. ‘ಅತ್ತು ಬಿಡಮ್ಮಾ’ ಎಂದರೂ ಆಳು ಹೊರಬಂದಿರಲಿಲ್ಲ. ಬಹುಶಃ ಬರುತ್ತ ದಾರಿಯಲ್ಲೇ ಕಣ್ಣೀರ ಸೆಲೆ ಬತ್ತಿಹೋಗಿರಬೇಕು.

ಅವರಿಗೆ ಆಗಿಹೋದ ಆಗಬಹುದಾದ ಸಂಕಟವನ್ನು ಸಂತೈಸಲು ಇನ್ನು ಯಾರಿದ್ದಾರೆ? ಯಾರಿಗೂ ಇಂತಹ ಸಂಕಟ ಬಾರದಿರಲಿ ಎಂದು ಪ್ರಾರ್ಥಿಸಿದೆವು. ನೀರನ್ನು ಪವಿತ್ರಗಂಗೆ ಎಂದು ತಿಳಿದಿದ್ದ ಹೆತ್ತವರು ಎಂದೂ ಲೋಟದಿಂದ ನೀರನ್ನು ಕಚ್ಚಿ ಕುಡಿದವರಲ್ಲ. ಅಂಥವರಿಗೆ ನೀರೇ ಮುಳುವಾಯಿತು.

ಹಿಂದೆಯೇ ಪೊಲೀಸು ಮಹಜರು ನಾಮಕಾವಾಸ್ತೆ ನಡೆಯಿತು. ಫೋಟೋ ತೆಗೆದುಕೊಂಡು ನಡುರಾತ್ರಿಯೇ ಹೆಣವನ್ನು ಪರೀಕ್ಷೆಗೆ ಸಾಗಿಸಬೇಕು. ನೀವೆಲ್ಲ ದೂರ ಸರಿಯಿರಿ ಎಂದು ಅವಸರಿಸಿದರು.

ದಂಡೆಯಲ್ಲಿದ್ದ ಬಟ್ಟೆ ಸುತ್ತಿದ ದೇಹವನ್ನು ಯಾರೋ ಬಿಳಿವಾಹನಕ್ಕೆ ಎತ್ತಿ ಹಾಕಿದರು. ಹಿಂದೆಯೇ ಭರದಿಂದ ಹೆಣವನ್ನು ಹೊತ್ತೊಯ್ದ ವಾಹನದ ಕೆಂಪು ದೀಪವನ್ನು ಬೆನ್ನಟ್ಟಿ ಹೋದೆವು. ವಾಹನವು ಜಿಲ್ಲಾ ಆಸ್ಪತ್ರೆಯ ಒಳಸುತ್ತಿಗೆ ತಲುಪುವಾಗಲೇ ರಾತ್ರಿ ಎರಡು ಗಂಟೆ ದಾಟಿತ್ತು. ಮಾನಸಿಕ ಉದ್ವೇಗದಿಂದ ಬೆವರಿದ್ದ ದೇಹಕ್ಕೆ ಮಳೆನೀರು ಸೇರಿ, ಪೂಸಿಕೊಂಡ ಸುಗಂಧವೂ ತನ್ನತನ ಕಳೆದುಕೊಂಡು ಹಡಕು ನಾತ ಸೂಸುತ್ತಿತ್ತು.

ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ. ಶವವನ್ನು ಶವಾಗಾರದಲ್ಲಿ ಇಟ್ಟು ಬೆಳಿಗ್ಗೆ ಸಂಬಂಧಪಟ್ಟ ಠಾಣೆಯವರ ಸಮಕ್ಷಮ ಆಸ್ಪತ್ರೆಯವರು ಪರೀಕ್ಷೆ ನಡೆಸುತ್ತಾರೆ.

ವೆಂಕಟನ ಹೆಣ ಆಸ್ಪತ್ರೆಯ ಮುಖ್ಯ ದ್ವಾರವನ್ನು ದಾಟಿದಾಗಲೇ ನಮ್ಮ ಅವರ ಸಂಪರ್ಕ ಕಡಿದುಹೋಯಿತು. ಬೆಳಿಗ್ಗೆ ಶವ ಪರೀಕ್ಷೆಯ ನಂತರ ನಿಮ್ಮ ವಶಕ್ಕೆ ಒಪ್ಪಿಸುತ್ತೇವೆ ಎಂದು ನಂಬಿಸಿ ಒಳಸೇರಿಕೊಂಡರು. ನಮಗೆ ‘ಘಂ’ ಎನ್ನುವ ಔಷಧ ವಾಸನೆಯ ನಡುವೆ ಗೇಟಿನ ಕಾವಲು ಅನಿವಾರ್ಯವಾಯಿತು.

ನಾವು ಆಸ್ಪತ್ರೆಗೆ ಬರುವಾಗ ಸುತ್ತೆಲ್ಲ ಸ್ಮಶಾನ ಮೌನ ಆವರಿಸಿತ್ತು. ಹೆಣ ಒಳಗೆ ಸಾಗಿಸಿದ ಕೂಡಲೇ ನಿಶಬ್ದ ಕಲಕಿ, ನಾಲ್ಕಾರು ಜನ ಅತ್ತಿತ್ತ ಬೀಸಾಗಿ ನಡೆಯತೊಡಗಿದರು. ಏಕಾ‌ಏಕಿ ಮೊಬೈಲ್ ಫೋನುಗಳು ಕಿವಿಗಾವಲು ಇಟ್ಟುಕೊಂಡವು. ನಾವು ಅಂದುಕೊಂಡದ್ದಕ್ಕೆ ವಿರುದ್ಧವಾದ ನಡವಳಿಕೆ ಅಲ್ಲಿನವರು ಸಾಕ್ಷೀಕರಿಸಿದ್ದು ಸತ್ಯ. ನಾಗರಿಕತೆ ಬೆಳೆದಂತೆಲ್ಲ ನರಕಸೃಷ್ಟಿ ತನ್ನಿಂದ ತಾನೇ ಆಗಿಬಿಡುತ್ತದೆ. ಕ್ರಮೇಣ ಒಳಗಿನ ಚಟುವಟಿಕೆಗಳು ನಮ್ಮನ್ನು ಅಣಕಿಸಿದಂತೆ ಭಾಸವಾಗತೊಡಗಿತು. ಯಾವಾಗ ಎರಡು ಕಾರುಗಳಲ್ಲಿ, ನಾಲ್ಕಾರು ಜನ ಬಂದು ಆಸ್ಪತ್ರೆಯ ಒಳತೂರಿಕೊಂಡರೋ ಮತ್ತೇನೊ ಪಿತೂರಿ ನಡೆಯಲಿದೆ ಎನ್ನುವುದು ಸ್ಪಷ್ಟವಾಯಿತು.

ಈ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಇಲ್ಲವೇ ಗುತ್ತಿಗೆ ಆಧಾರದ ಮೇಲೆ ಇರುವವರೇ ರಾತ್ರಿವೇಳೆ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ತಿಳಿದಿತ್ತು. ಅವರು ಈ ಅಪವೇಳೆಯಲ್ಲಿ ಖಾಯಂ ಅಧಿಕಾರಿಗಳನ್ನು ಕರೆಸಿಕೊಂಡದ್ದು ಯಾರಿಗೂ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಪೊಲೀಸು ರಕ್ಷಣೆಯಲ್ಲಿಯೇ ಯಾರಿಗೂ ಗೊತ್ತಾಗಿಲ್ಲ ಎಂಬಂತೆ ಕತ್ತಲ ವ್ಯಾಪಾರ ಬಿಚ್ಚಿಕೊಳ್ಳುವ ಇವರದು ಸಮಾಜವನ್ನು ಕಾಯುವ ನೆಪದಲ್ಲಿ ಮೇಯುತ್ತಿರುವ ರಾಕ್ಷಸ ಸಂತಾನ ಇರಬಹುದೇ ಎನಿಸಿತು. ಅವರ ವರ್ತನೆಗಳ ವೈಪರೀತ್ಯತೆ ನಮ್ಮೊಳಗೆ ಗೌಜಿ ಎಬ್ಬಿಸಿತು. ವೆಂಕಟ ಸುಳಿಗೆ ಸಿಕ್ಕು ಕೂಡಿಕೊಂಡಾಗ ನಮ್ಮಲ್ಲಿ ಯಾರಿಗೂ ವಿವೇಕವಿರಲಿಲ್ಲ. ಇದೀಗ ಎಲ್ಲಾ ಸ್ಪಷ್ಟವಾಗುವ ಹೊತ್ತಿಗೆ ಎದುರಿಸುವ ಶಕ್ತಿಯನ್ನು ನಾವು ಕಳೆದುಕೊಳ್ಳಬಾರದು. ‘ಮುಳುಗುತ್ತಿರುವವ ಅಸಹಾಯಕ’ ಎನ್ನುವ ಒಂದೇ ಕಾರಣಕ್ಕೆ ಅವನ ಜೀವಿಸುವ ಹಕ್ಕನ್ನೇ ಕಸಿದುಕೊಂಡ ಇವರದು ಯಾವ ದಂಡುಪಾಳ್ಯದವರಿಗೂ ಕಡಿಮೆ ಇಲ್ಲದ ಅತ್ಯಂತ ಕ್ರೂರವಾದ ಪೈಶಾಚಿಕ ವರ್ತನೆ! ಈಗ ನಾವು ಹೇಡಿಗಳಾಗದೇ ಮುಂದಿನದನ್ನು ಎದುರಿಸಿಯೇ ಸಿದ್ಧ ಎಂಬ ಪುಂಡು ಧೈರ್ಯ ಮೂಡಿ, ಇನ್ನಷ್ಟು ಉಮೇದು ಕೆರಳುವುದು.

ಆದರೆ ನಮ್ಮ ಪಡಿಪಾಟಲು ಯಾರಿಗೆ ಹೇಳುವುದು? ಯಾವಾಗಲೂ ಕೆಂಪು ಪಟ್ಟಿಯ ಬಾಹುಗಳು ಬಹಳಷ್ಟು ಉದ್ದ ಇರುತ್ತವೆ. ಮತ್ತದು ಎಷ್ಟು ತ್ರಾಸದಾಯಕ ಎಂಬುದು ಅನುಭವಿಸಿದವರಿಗೇ ಗೊತ್ತಾಗುವುದು. ಯಾರನ್ನೂ ದೂಷಿಸಲಾಗದ ನಮ್ಮ ಪುಂಡು ಧೈರ್ಯ ನಮ್ಮೊಳಗೆ ಉಳಿದು ಮುರುಟಿತು.

ಆಕಳಿಸುತ್ತಾ ಗಡಿಯಾರದ ಕಡೆ ನೋಡಿದೆ. ಮುಳ್ಳು ಮುಂಜಾನೆಯ ಏಳು ಗಂಟೆ ತೋರಿಸುತ್ತಿತ್ತು. ಈ ತನಕ ರಾತ್ರಿ ಪಾಳಿ ಮಾಡಿ ಹೊರಬಂದ ನೌಕರನೊಬ್ಬ “ನಮ್ಮ ಕೆಲಸ ಮುಗಿದಿದೆ. ಇನ್ನರ್ಧ ಗಂಟೇಲಿ ಶವ ನಿಮ್ಮ ಕೈ ಸೇರುತ್ತೆ. ನಮಗೆ ‘ಭಕ್ಷೀಸು ಕೊಡಿ’ ಎಂದು ತಲೆ ಕೆರೆದುಕೊಳ್ಳುತ್ತಾ ನಿಂತ. ನಿಟ್ಟುಸಿರು ಬಿಡುತ್ತಾ ಅವನಿಗೆ ಐವತ್ತರ ನೋಟನ್ನು ನೀಡಲು ಹೋದೆ. ಅವನು ನಿರಾಕರಿಸಿ ಐನೂರರ ಬೇಡಿಕೆ ಮುಂದಿಟ್ಟನು. ತಕ್ಷಣ ಇದೇ ಸಮಯವೆಂದು ನಾನು ಕೊಡಲು ಒಪ್ಪಿ ಅವನನ್ನೂ ಪುಸಲಾಯಿಸುತ್ತಾ, ರಾತ್ರಿ ಏನು ನಡೆಯಿತೆಂದು ಕೇಳಿದೆ.

ಮೊದಲು ಹಿಂದೆಮುಂದೆ ನೋಡಿದ. ಹಣ ಕೈಗೆ ತುರುಕಿದ ಕೂಡಲೇ ಜಿಲ್ಲಾ ಆಸ್ಪತ್ರೆ ಒಳಗೆ ನಡೆಸಿದ ಅಮಾನವೀಯ ಕೃತ್ಯ ಬಯಲು ಮಾಡಿದ.

ನಮ್ಮನ್ನು ಭೂತಗಳಂತೆ ಕಾಡಿಸುತ್ತ ಬಂದ ಈ ಪೊಲೀಸು ಮತ್ತು ಆಸ್ಪತ್ರೆಯವರು ಸಾಮಾಜಿಕ ಕಾಳಜಿ ಇಟ್ಟುಕೊಂಡು, ಅನ್ಯರ ನೋವಿಗೆ ದನಿಯಾಗ ಬೇಕಾಗಿದ್ದವರು. ಆದರಿಲ್ಲಿ ಕಾರ್ಯನಿರ್ವಹಿಸುತ್ತಿರುವವರು ‘ಸಂಕ ಮುರಿದಲ್ಲಿಯೇ ಸ್ನಾನ’ ಮಾಡುವ ಜಾಯಮಾನದವರು. ಸತ್ತ ಸಮಯದಲ್ಲಿಯೇ ಇವರ ಸ್ವಾರ್ಥ ಸಾಧನೆಯು ಗುಣಾಕಾರ ಹೊಂದಿಬಿಡುವುದು, ಇಂಥ ವ್ಯಸನದ ಪರಿಣಾಮವಾಗಿ ಶವಪರೀಕ್ಷೆಯ ನೆಪದಲ್ಲಿ ಹೆಣದ ಅವಯವಗಳನ್ನು ನಿರ್ದಯವಾಗಿ ಕೀಳುತ್ತಾರೆ. ಕಿತ್ತ ಅಂಗಾಂಗಗಳನ್ನು ಖಾಸಗೀ ವೈದ್ಯಕೀಯ ಕಾಲೇಜುಗಳ ತುರ್ತಿಗೆ ತಕ್ಕಂತೆ ಬೆಲೆ ಕಟ್ಟಿ ಮಾರಿ, ತಮ್ಮ ಜೇಬಿಗಿಳಿಸುವ ಪೈಶಾಚಿಕ ವರ್ತನೆ ಇವರದಾಗಿ ಬಿಡುತ್ತದೆ.

ಅನಾಟಮಿ ವಿಭಾಗಗಳಿಗೆ ಎಲ್ಲಾ ವಯಸ್ಸಿನ ಗಂಡು-ಹೆಣ್ಣು ಶವಗಳೂ ಅಂಗಾಂಗಳೂ, ಆಗಾಗ ಬೇಕಾಗುತ್ತವೆ. ನಿರ್ದಿಷ್ಟ ಅವಧಿಯಲ್ಲಿ ಅವುಗಳನ್ನು ಸರಬರಾಜು ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಾರೆ. ಇರೋ ಕಾನೂನುಗಳ ಪ್ರಕಾರ ವಾರಸುದಾರರ ಒಪ್ಪಿಗೆ ಕೇಳುತ್ತಾ ಕುಳಿತರೆ, ನೋಡಿ ನೋಡಿ ಯಾರೂ ಹೆಣವನ್ನಾಗಲೀ, ಅಂಗಾಂಗಗಳನ್ನಾಗಲೀ ಸ್ವ-ಇಚ್ಛೆಯಿಂದ ಕೊಡಲು ಒಪ್ಪುವುದಿಲ್ಲ. ಅಂತೆಯ ಯಾವುದೇ ಅನಾಥ ಶವಗಳೂ ಸಿಗದಿದ್ದಾಗ ಅನೈತಿಕತೆ ಅನಿವಾರ್ಯವಾಗುತ್ತದೆ. ಅಪಘಾತಗಳಾಗಿ ಶವಪರೀಕ್ಷೆಗೆ ತಂದ ಹೆಣಗಳನ್ನು ಕಾಯುವ ಹೊಣೆ ಹೊತ್ತವರೊಂದಿಗೆ ಶಾಮೀಲಾಗಿ ಬಿಡುತ್ತಾರೆ. ಹೊಂಚು ಹಾಕಿ ಆಯ್ದ ವಾರಸುದಾರರ ಕಣ್ಣಿಗೆ ಮಣ್ಣೆರಚುತ್ತಾರೆ. ಪೆಣತಿನಿಗಳಾಗುತ್ತಾರೆ.

ಅನಾಥ ಹೆಣವಾದರೆ ಯಾರೂ ಪ್ರಶ್ನಿಸುವುದಿಲ್ಲ. ಆದರಿಲ್ಲಿ ವೆಂಕಟನಿಗೆ ವಾರಸುದಾರರಿದ್ದು ಅವರ ‘ಒಪ್ಪಿಗೆ ಇಲ್ಲದೇ’ ಅಂಗಾಂಗಗಳನ್ನು ಕಿತ್ತು ತೆಗೆಯುವುದು ಅಪರಾಧವಾಗುತ್ತದೆ. ಹಾಗೆ ಮಾಡಿದ್ದಾದರೆ ನೈಸರ್ಗಿಕ ನ್ಯಾಯದ ಅಪಹರಣವಾದಂತೆ. ಪವಿತ್ರವಾದ ಕಳೇಬರವನ್ನು ಯಾರೂ ಅಪಮಾನಿಸತಕ್ಕದ್ದಲ್ಲ. ಅದಕ್ಕೂ ಮಿಗಿಲಾಗಿ, ಈ ಮುಪ್ಪಿನ ವಯಸ್ಸಿನಲ್ಲಿ ಕರುಳ ಕುಡಿಯ ಒಳಗಿನದೆಲ್ಲವನ್ನೂ ಮನುಷ್ಯ ರೂಪದ ಮೃಗಗಳು ಸುಲಿದು ತಿಂದ ವಿಚಾರ ತಿಳಿದರೆ, ಎದೆ ಒಡೆದು ಸಾಯಲಿಕ್ಕಿಲ್ಲವೇ? ಜೀವನ ಪರ್ಯಂತ ವಿಕೃತ ಕಳೇಬರವು ಕಣ್ಣಮುಂದೆ ನಿಂತು ಧೃತಿಗೆಡಿಸುವುದಿಲ್ಲವೇ? ಈ ಬಡಪಾಯಿಗಳು ಯಾರನ್ನು ದೂಷಿಸುವುದು?

ಇದಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳದ ಪೆಣತಿನಿಗಳಿಗೂ ತೊಂದರೆ ಇಲ್ಲದೇ ಇಲ್ಲ. ಶವ ಪರೀಕ್ಷೆಗೆ ಬಂದ ಹೆಣವನ್ನು ಹೂಳುವ ಪದ್ಧತಿಯವರಾದರೆ ಇಂಥ ಧನಪಿಶಾಚಿಗಳಿಗೆ ಸ್ವಲ್ಪ ತೊಡಕಿನ ವಿಚಾರವಾಗುತ್ತದೆ. ಒಂದು ವೇಳೆ ಇವರ ಕರಾಮತ್ತು ಗೊತ್ತಾಗಿ ರಾಜಕೀಯ ಪ್ರತಿಭಟನೆ ವ್ಯಕ್ತವಾದರೆ ಹೂತ ಹೆಣವನ್ನು ಮೇಲೆತ್ತಿ ತನಿಖೆ ಎದುರಿಸಬೇಕಾಗುತ್ತದೆ.

ಬ್ರಾಹ್ಮಣರು ಸತ್ತವರನ್ನು ಸುಡುವುದು ಸಂಪ್ರದಾಯ, ಸುಟ್ಟು ಸಂಸ್ಕಾರ ಮಾಡುವವರು ಶವ ಮುಂದಿಟ್ಟುಕೊಂಡು ಏನನ್ನೂ ತಿನ್ನುವಂತಿಲ್ಲ. ಹೆಣವನ್ನು ದಹಿಸಿದ ನಂತರವೇ ಆ ಸಮಾಜದ ಉಸಿರಾಟವು ನಿರಾಳವಾಗುವುದರಿಂದ ಕೈಗೆ ಬಂದ ತಕ್ಷಣ ತರಾತುರಿಯಲ್ಲಿ ದಹಿಸಿ ಬಿಡುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ರಕ್ಷಿಸಬೇಕಾದವರ ಕೈ ಚಳಕ ಯಾರಿಗೂ ಗೊತ್ತಾಗೋದಿಲ್ಲ ಎಂಬುದು ಸುಗಮವಾದ ಲೆಕ್ಕಾಚಾರ. ವೆಂಕಟನು ಸಾವಿನ ಸುಳಿಯಲ್ಲಿ ಒದ್ದಾಡುತ್ತಿರುವಾಗಲೇ ಈ ರಾಕ್ಷಸರ ಮಸಲತ್ತು ಅಗೋಚರವಾಗಿ ಕೆಲಸ ಮಾಡಿತು. ಸತ್ತ ಕೂಡಲೇ ಈ ಸರ್ಕಾರಿ ದುರುಳರು ತನಿಖೆ ನೆಪದಲ್ಲಿ ಹೆಣದ ಮೇಲೆ ತಮ್ಮ ಸ್ವತ್ತುಗಾರಿಕೆ ಹೇರಿಬಿಟ್ಟರು.
* * *

ಈಗ ಬೆಳಗಿನ ಎಂಟು ಗಂಟೆ, ಬರೀ ಚರ್ಮದ ಹೊದಿಕೆಯನ್ನು ಮರಣೋತ್ತರ ವರದಿಯೊಂದಿಗೆ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕೂಡಲೇ ಇಲ್ಲಿಯ ತನಕ ಮಾತನಾಡಲಾಗದ ಮೂಕ ಮನ ಮಾತಾಡತೊಡಗಿತು. ಮಾತಾಡುತ್ತಾ ಈ ಹೆಣ ತಿನ್ನುವ ಪಿಶಾಚಿಗಳ ವಿರುದ್ಧ ಸಿಡಿದೇಳುವುದೊಂದೇ ಉಳಿದ ದಾರಿಯಾಯಿತು.

ಮುಂಚೂಣಿಗೆ ನಿಂತ ಸಾರ್ವಜನಿಕ ಕಾಳಜಿಯು ಲಿಖಿತ ಅಹವಾಲು ಸಲ್ಲಿಸಿತು. ಆ ಕ್ಷಣದ ಪರಿಮಿತಿಯಲ್ಲಿ ಖದೀಮರನ್ನು ಅಮಾನತ್ತಿನಲ್ಲಿಟ್ಟರು. ಖಾಸಗಿ ಜಲರಕ್ಷಕ ದಳದ ಗುತ್ತಿಗೆಯನ್ನು ರದ್ದು ಪಡಿಸಲಾಯಿತು. ನ್ಯಾಯಾಂಗ ತನಿಖೆಗೆ ಏರ್ಪಾಟಾಯಿತಲ್ಲದೇ ಇನ್ನು ಮೇಲೆ ಹೀಗಾಗಲು ಆಸ್ಪದ ಕೊಡಲಾಗುವುದಿಲ್ಲ. ಅದಕ್ಕಾಗಿ ಕಟ್ಟೆಚ್ಚರ ವಹಿಸಲಾಗುವುದೆಂಬ ಆಶ್ವಾಸನೆಯನ್ನು ಪಡೆಯಲಾಯಿತು ಎಂಬಲ್ಲಿಗೆ ಪೂರ್ಣವಿರಾಮ ಇಡಲಾಗುವುದಿಲ್ಲ…. ಹೇಳಿಕೇಳಿ ಒಪ್ಪಿ ಬಾಳುತ್ತಿರುವುದು ಹೆಣಭಾರ ಪದ್ಧತಿಯಲ್ಲಿ, ಅಲ್ಲೊಂದು ನಂದರಾಯನ ದರ್ಬಾರ ಅಷ್ಟೇ.
* * *

ಅದೇ ಆಗ ವೆಂಕಟನ ಕಳೇಬರಕ್ಕೆ ಬೆಂಕಿ ಮುಟ್ಟಿಸಲಾಗಿತ್ತು. ಎಲ್ಲಾ ನೀಗಿತು ಅನ್ನುವಾಗ ನಿಟ್ಟುಸಿರು ತಾನೇ ತಾನಾಗಿ ಹೊರಬಂದಿತ್ತು. ಕವಿದ ಮೈಲಿಗೆಯ ಗುಂಗು ಮನಸ್ಸಿನಾಳದಿಂದ ಇನ್ನೂ ಆರಿರಲಿಲ್ಲ. ಬುರುಡೆ ‘ಚಟ್’ ಎನ್ನುವವರೆಗೆ ಕಾಯುವ ಪ್ರಮೇಯವೂ ಇರಲಿಲ್ಲ. ಒಮ್ಮಿಂದೊಮ್ಮೆಲೇ ಬೀಸಿ ಬಂದ ಗಾಳಿಗೆ, ಸುಟ್ಟ ವಾಸನೆ ಮೂಗಿಗೆ ಅಡರಿ, ಆ ಪರ್ಯಾವರಣದಿಂದಲೇ ದೂರ ಓಡಿಹೋಗಬೇಕೆನಿಸಿತು.
*****

೨೦.೦೮.೨೦೦೩

One thought on “0

  1. ಕತೆಯ ನಿರೂಪಣೆ ಚೆನ್ನಾಗಿದೆ.ಈಗಿನ ಸಮಾಜದಲ್ಲಿ
    ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದ ನೋಡಲಾಗುತ್ತದೆ.ಮಾನವೀಯತೆಗೆ ಪ್ರಾಶಸ್ತ್ಯವಿಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋವಿನ ಹಾಡು
Next post ಬಜಾರಿನಲ್ಲಿ ಬುದ್ಧ….

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys