ಅಭಿ.., ನಾವಿಲ್ಲಿಂದ ಹೊರಟು ಹೋದ ನಂತರ ನೆನಪಿಗೆ ಉಳಿಯೋದು ಈ ಫೋಟೋಗಳು ಮಾತ್ರ ಅಲ್ವ?
ಹೌದು ಅಂದ ಅಭಿಮನ್ಯು ಹೂವಿನ ಚೆಲುವನ್ನೇ ನಾಚಿಸುವಂತ ಸೌಂದರ್ಯದ ಆಕೆಯನ್ನು ಹೂವಿನ ಮುಂದೆ ನಿಲ್ಲಿಸಿ ಮನಸೋಇಚ್ಚೆ ಫೋಟೋ ಕ್ಲಿಕ್ಕಿಸಿ ನೀನು ಇಲ್ಲಿ ಕಳೆದ ಸವಿಯಾದ ನೆನಪನ್ನು ಫೋಟೋದಲ್ಲಿ ಸೆರೆ ಹಿಡಿದಿಟ್ಟಿದ್ದೇನೆ. ನೆನಪಾದಗಲೆಲ್ಲ ತೆಗೆದು ನೋಡ್ಬೊಹುದು. ಈಗ ಸಂತೃಪ್ತಿ ಆಯ್ತಾ?
ನೂರಕ್ಕೆ ನೂರರಷ್ಟು ಸಂತೃಪ್ತಿಯಾಗಿದೆ. ನೀನೂ ನಿಂತ್ಕೋ ಅಂದ ಅಕ್ಷರ ಅಭಿಮನ್ಯುವನ್ನು ಹೂ ತೋಟದ ಎದುರು ನಿಲ್ಲಿಸಿ ಫೋಟೋ ತೆಗೆದು ಸಂತಸದ ಕ್ಷಣವನ್ನು ಸವಿದಳು. ರೋಜ್ಹ್ ಗಾರ್ಡನ್‌ನಲ್ಲಿ ಹೊಂಬಿಸಿಲು ಸುಳಿಯುತ್ತಿದ್ದಂತೆ ಇಬ್ಬರು ಲಾಡ್ಜ್ ಕಡೆಗೆ ನಡಿಗೆ ಹಾಕಿದರು. ಲಾಡ್ಜ್‌ನಲ್ಲಿ ಒಂದಷ್ಟು ಹೊತ್ತು ಕಾಲ ಕಳೆದು ರಾತ್ರಿಯಾಗುತ್ತಿದ್ದಂತೆ ಊಟಿಯ ತಂಪಾದ ಗಾಳಿಗೆ ಮೈಯೊಡ್ಡುತ್ತಾ ನಗರದಲ್ಲಿ ಸುತ್ತಾಡಿದರು. ಹೋಟೆಲ್‌ವೊಂದರಲ್ಲಿ ಊಟ ಮುಗಿಸಿ ಲಾಡ್ಜ್ ಕಡೆಗೆ ತೆರಳಿದರು.
ಇಬ್ಬರು ಬಂದು ಒಂದೇ ಮಂಚದಲ್ಲಿ ಕುಳಿತುಕೊಂಡು ಗಂಟೆಗಟ್ಟಲೇ ಹರಟೆಯಲ್ಲಿ ಮುಳುಗಿ ಗಂಟೆ ಹನ್ನೊಂದು ಸರಿಯುತ್ತಿದ್ದಂತೆ ಇಬ್ಬರ ಕಣ್ಗಳು ತೂಕಡಿಸಲು ಪ್ರಾರಂಭಿಸಿತು. ರೂಂನಲ್ಲಿ ಎರಡು ಮಂಚಗಳಿದ್ದವು. ಮತ್ತೊಂದು ಮಂಚದಲ್ಲಿ ಮಲಗಲು ಎದ್ದು ಹೊರಟ ಅಭಿಮನ್ಯುವನ್ನು ತಡೆದು ನಿಲ್ಲಿಸಿ ಪವಾಗಿಲ್ಲ ಇಲ್ಲೇ ಮಲ್ಕೊ. ಯಾವತ್ತಿದ್ರೂ ನೀನು ನನ್ನವನೇ ಕಣೋ. ಯಾವತ್ತೂ ನನ್ನಿಂದ ದೂರ ಸರಿಯೋದಕ್ಕೆ ಪ್ರಯತ್ನ ಪಡ್ಬೇಡ. ಜೀವನ ಪರ್ಯಂತ ನೀನು ಹೀಗೆ ನನ್ನ ಜೊತೆನೇ ಇಬೇಕು. ಅಂದ ಅಕ್ಷರ ನಿಂತಿದ್ದ್ದ ಅಭಿಮನ್ಯು ಮಂಚದ ಕಡೆಗೆ ಎಳೆದುಕೊಂಡು ಒಟ್ಟಿಗೆ ಮಲ್ಗೋದಕ್ಕೆ ಗ್ರೀನ್ ಸಿಗ್ನಲ್ ಸಿಕ್ತು ಅಂತ ರಾತ್ರಿ ಮೈ ಮರೆತು ಬಿಡ್ಬೇಡ. ಮತ್ತೆ ನಾನು ಕಷ್ಟ ಅನುಭವಿಸಬೇಕಾಗುತ್ತೆ. ಎಂದು ಅಭಿಮನ್ಯುವನ್ನು ಎಚ್ಚರಿಸಿದಳು.
ನಾನೇನಾದ್ರು ಹೇಳಿದ್ನಾ? ಪಕ್ಕದ ಮಂಚದಲ್ಲಿ ಮಲಗೋದಕ್ಕೆ ಹೊರಟವನನ್ನ ಕರೆದು ಜೊತೆಯಲ್ಲಿ ಮಲಗಿಸಿಕೊಂಡವಳು ನೀನು. ಈಗ ರಾತ್ರಿ ಮೈ ಮರೆತು ಬಿಡ್ಬೇಡ ಅಂಥ ಎಚ್ಚರಿಕೆ ಬೇರೆ ಕೊಡ್ತಾ ಇದ್ದೀಯ. ಮೊದ್ಲು ನೀನು ಎಚ್ಚರದಿಂದ ಇರು. ರಾತ್ರಿ ಮೈ ಮರೆತರೆ ನನ್ಗೆ ಆಪತ್ತು. ಎಂದು ಆಕೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ.
ಹಾಗೊಂದ್ವೇಳೆ ಏನಾದ್ರೂ ಆದ್ರೆ ನಿನ್ಗೇನು ಕಷ್ಟ? ಕೇಳಿದಳು.
ಕಷ್ಟಕ್ಕಿಂತ ನಷ್ಟ ಹೆಚ್ಚು. ನಿನ್ನ ಸಾಕ್ಬೇಕು. ಜೊತೆಗೆ ಮಗುನ ಕೂಡ ಸಾಕೋದಕ್ಕೆ ನನ್ನ ಕೈಯಿಂದ ಸಾಧ್ಯ ಇಲ್ಲ. ಅದ್ಕೆ ರಾತ್ರಿ ಮೈ ಮರೆತು ಬಿಡ್ಬೇಡ ಅಂಥ ಅಂದದ್ದು. ಮೈ ಮರೆತರೆ ಆಗುವ ಕಷ್ಟ ನಷ್ಟದ ಬಗ್ಗೆ ಹೇಳಿ ಅಭಿಮನ್ಯು ಮುಗುಳ್ನಗೆ ಬೀರಿದಾಗ ನಾಚಿಕೊಂಡ ಅಕ್ಷರ ಹೋಗೋ ಕೋತಿ, ಆಗೇನು ಆಗೋದಕ್ಕೆ ಬಿಡೋದಿಲ್ಲ. ಈಗ್ಲೇ ಎಲ್ಲಾ ಮುಗಿಸಿಕೊಳ್ಳೋದಕ್ಕೆ ನನ್ಗೆ ಇಷ್ಟ ಇಲ್ಲ. ಅದ್ಕೆಲ್ಲ ಇನ್ನೂ ಸಾಕಷ್ಟು ಸಮಯ ಇದೆ. ಮದುವೆಯಾಗುವ ತನಕ ನಿನ್ನ ಉಪವಾಸ ಕೆಡವಬೇಕು. ಅದೇ ನನ್ನ ಆಸೆ ಎಂದು ಹೇಳಿ ತುಂಟನಗೆ ಬೀರಿದಳು.
ನಿನ್ನ ಮಾತಾಡೋದಕ್ಕೆ ಬಿಟ್ರೆ ಇಲ್ಲೇ ಶಿವರಾತ್ರಿ ಆಚರಿಸುವಂತೆ ಮಾಡಿ ಬಿಡ್ತಿಯ… ಅಂದ ಅಭಿಮನ್ಯು ಕಂಬಳಿ ಹೊದ್ದು ಮಲಗಿದ. ಅದೇ ಕಂಬಳಿಯೊಳಗೆ ನುಸುಳಿಕೊಂಡ ಅಕ್ಷರ ನಿದ್ರೆಗೆ ಜಾರಿದಳು. ಇಬ್ಬರು ಒಂದೇ ಮಂಚದಲ್ಲಿ ಮಲಗಿ ರಾತ್ರಿ ಪೂರ ಕಳೆದರೂ ಇಬ್ಬರು ಮೈ ಮರೆಯಲಿಲ್ಲ. ಇಬ್ಬರಲ್ಲಿ ಪ್ರೀತಿಯ ಬಗ್ಗೆ ಅಂತಹ ಒಂದು ಶ್ರದ್ಧೆ ಇತ್ತು. ಆಡಿದ ಮಾತು ನೆರವೇರಿಸುವ ಹಂಬಲ ಇಬ್ಬರಲ್ಲೂ ಬಲವಾಗಿತ್ತು. ರಾತ್ರಿ ನಿದ್ರೆಯಲ್ಲಿ ಒಬ್ಬರ ಮೈ ಮತ್ತೊಬ್ಬರಿಗೆ ಆಗಿಂದಾಗೆ ಸೋಕಿದಾಗ ಎದೆ ಬಡಿತ ಹೆಚ್ಚಾಗಿ ನಿದ್ರೆಯೇ ಹೊರಟು ಹೋಗುತಿತ್ತು. ಮತ್ತೆ ನಿದ್ರೆ ಬಳಿ ಸುಳಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತಿತ್ತು. ಅದೇ ಪ್ರಥಮ ಬಾರಿಗೆ ಒಟ್ಟಿಗೆ ಮಲಗಿ ರಾತ್ರಿ ಪೂರ ಕಳೆದದ್ದರಿಂದ ಇಬ್ಬರ ಬಳಿಯೂ ಸರಿಯಾಗಿ ನಿದ್ರೆ ಸುಳಿಯಲಿಲ್ಲ. ಬೆಳಗ್ಗಿನ ಜಾವ ಸ್ವಲ್ಪ ನಿದ್ರೆ ಬಳಿ ಸುಳಿಯಿತು.
ತಡವಾಗಿ ಎದ್ದ ಅಕ್ಷರ ಆ ಚಳಿಯಲ್ಲಿಯೂ ಕೂಡ ತಣ್ಣೀರಿಗೆ ಮೈಯೊಡ್ಡಿ ಶುಚಿಯಾಗಿ ಹೊರ ಬಂದು ಅಭಿಮನ್ಯು ಇನ್ನೂ ಮಲಗಿರುವುದನ್ನು ಕಂಡು ಹೊದ್ದು ಮಲಗಿದ್ದ ಕಂಬಳಿ ಕಿತ್ತೆಸೆದು ಮಲಗಿದ್ದು ಸಾಕು. ಎದ್ದು ಬೇಗ ರೆಡಿಯಾಗು ಅಂದಳು.
ಅದಾಗಲೇ ಗಂಟೆ ಹತ್ತು ಸರಿದಿತ್ತು. ಅಕ್ಷರ ಯಾವತ್ತೂ ಕೂಡ ಅಷ್ಟು ಹೊತ್ತು ಮಲಗಿದವಳಲ್ಲ. ಕೋಳಿ ಕೂಗುವ ಮುನ್ನ ಎದ್ದು ಕುಳಿತು ಬಿಡುತ್ತಿದ್ದವಳಿಗೆ ರಾತ್ರಿ ಸರಿಯಾಗಿ ನಿದ್ರೆ ಬಳಿಗೆ ಸುಳಿಯದೆ ಬೆಳಗ್ಗೆ ಸ್ವಲ್ಪ ಅಗತ್ಯಕ್ಕಿಂತ ಹೆಚ್ಚು ಹೊತ್ತು ನಿದ್ರೆ ಮಾಡಿದಳು. ಅಭಿಮನ್ಯುವಿಗೆ ಇದೆಲ್ಲ ಸಾಮಾನ್ಯ. ಮನೆಯಲ್ಲಿರುವಾಗ ಅಭಿಮನ್ಯುವಿಗೆ ದಿನನಿತ್ಯ ಫೋನಾಯಿಸಿ ಎಬ್ಬಿಸುವ ಕೆಲಸವನ್ನು ಚಾಚು ತಪ್ಪದೆ ಮಾಡಿಕೊಂಡು ಬಂದ ಅಕ್ಷರ ಊಟಿಗೆ ಬಂದ ನಂತರವೂ ತನ್ನ ಪಾಲಿನ ಕರ್ತವ್ಯ ಮರೆಯಲಿಲ್ಲ. ಅಭಿಮನ್ಯುವನ್ನು ತಾನೇ ಮಂಚದಿಂದ ಮೇಲೆಬ್ಬಿಸಿದಳು. ನಿದ್ರೆಯ ಮಂಪರು ಇನ್ನೂ ಕಣ್ಣಿಂದ ಸರಿದಿರಲಿಲ್ಲ.
ಊಟಿಗೆ ಬಂದ ನಂತರವೂ ನೆಮ್ಮದಿಯಾಗಿ ಮಲಗೋದಕ್ಕೆ ಬಿಡೋದಿಲ್ವ…? ಎಂದು ರೇಗಿದ ಅಭಿಮನ್ಯು ಮತ್ತೆ ಕಂಬಳಿ ಹೊದ್ದು ಮಲಗಲು ಮುಂದಾದ.
ನೀನು ಪುನಃ ಮಲ್ಕೊಂಡ್ರೆ ಬಕೇಟಲ್ಲಿ ನೀರು ತುಂಬಿಸಿ ಮೈ ಮೇಲೆ ಚೆಲ್ಲಿ ಬಿಡ್ತೇನೆ ನೋಡು ಅಂದ ಅಕ್ಷರ ಅಭಿಮನ್ಯುವನ್ನು ಮಂಚ ದಿಂದ ಮೇಲೆ ಎಳೆದು ಎಷ್ಟೂಂತ ನಿದ್ರೆ ಮಾಡ್ತಿಯ? ಮಲಗಿದ್ದಷ್ಟು ಆಯಾಸ ಜಾಸ್ತಿ. ಬೇಗ ರೆಡಿಯಾಗು; ತಿಂಡಿ ಮಡ್ಕೊಂಡು ಹೊರಗೆ ಹೋಗಿ ಬರುವ ಅಂದಳು. ಮಂಚದಿಂದ ಮೇಲೆದ್ದು ಕಣ್ಣೊರೆಸಿಕೊಂಡು ಸ್ನಾನ ಮುಗಿಸಿ ಹೊರ ಬಂದ ಅಭಿಮನ್ಯುವನ್ನು ಪಕ್ಕದಲ್ಲಿ ಕೂರಿಸಿಕೊಂಡು ಟವಲ್ ಕೈಗೆತ್ತಿಕೊಂಡು ತಲೆ ಒರೆಸಿದಳು.
ಇಲ್ಲಿನ ಚಳಿಗೆ ಚೆನ್ನಾಗಿ ತಲೆ ಒರೆಸಿಕೊಳ್ಳದಿದ್ರೆ ಕಾಯಿಲೆ ಬರೋದು ಗ್ಯಾರಂಟಿ. ಮತ್ತೆ ನಿನ್ನ ಆಸ್ಪತ್ರೆಯಲ್ಲಿ ಉಪಚರಿಸುವುದೇ ನನ್ನ ಕೆಲಸವಾಗಿ ಬಿಡುತ್ತೆ ಅಂದಳು.
ಆಕೆ ತೋರುತ್ತಿದ್ದ ಕಾಳಜಿ, ಕೊಡುತ್ತಿದ್ದ ಪ್ರೀತಿ ಅಭಿಮನ್ಯುವಿಗೆ ಅಮ್ಮನ ನೆನಪು ತರಿಸದೆ ಇರಲಿಲ್ಲ. ದಿನನಿತ್ಯ ಸ್ನಾನ ಮಾಡಲು ಹೊರಡುವಾಗ ಚೆನ್ನಾಗಿ ತಲೆ ಒರೆಸಿಕ್ಕೋ ಮಗ, ತಲೆನೋವು ಬಬೋಹುದು ಎಂದು ಕೂಗಿ ಹೇಳುತ್ತಿದ್ದರು. ಸ್ನಾನ ಮುಗಿಸಿ ಹೊರಬಂದೊಡನೆ ಮಗನಿಗಾಗಿ ಟವಲ್ ಹಿಡಿದುಕೊಂಡು ಕಾಯುತ್ತಾ ತಲೆ ಒರೆಸಲು ಮುಂದಾಗುತ್ತಿದ್ದರು. ನಾನೇನು ಇನ್ನೂ ಸಣ್ಣವನಾ? ಎಂದು ರೇಗಿ ಅಮ್ಮ ತಲೆ ಒರೆಸುವುದಕ್ಕೆ ತನ್ನ ಅಸಮ್ಮತ್ತಿ ಸೂಚಿಸುತ್ತಿದ್ದ. ವಾತ್ಸಲ್ಯ ಮಗನನ್ನು ಬಲವಂತದಿಂದ ಹಿಡಿದು ಕೂರಿಸಿ ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಿದ್ದರು. ಅಕ್ಷರ ತಲೆ ಒರೆಸಲು ಮುಂದಾದಾಗ ಅಮ್ಮನ ನೆನಪಾಗಿ ಕಣ್ಗಳಲ್ಲಿ ನೀರು ತುಂಬಿಕೊಂಡಿತು. ಅಕ್ಷರ ಅಮ್ಮನ ಸ್ಥಾನವನ್ನು ಕೂಡ ತುಂಬಲು ಅರ್ಹಳಾದವಳು ಅನ್ನಿಸಿತು.
ಬೆಳಗ್ಗಿನ ಉಪಹಾರ ಮುಗಿಸಿ ಬೋಟ್‌ಹೌಸ್‌ಗೆ ತೆರಳಿದರು. ಇಬ್ಬರು ಬೋಟ್‌ನಲ್ಲಿ ಕುಳಿತು ಹೊಸ ಅನುಭವ ಸವಿದರು. ಸಂಜೆಯಾಗುತ್ತಿದ್ದಂತೆ ಗಿಫ್ಟ್ ಸೆಂಟರ್‌ವೊಂದಕ್ಕೆ ಅಕ್ಷರಳನ್ನು ಕರೆದೊಯ್ದ ಅಭಿಮನ್ಯು ಆಕೆಗೊಂದು ಮುದ್ದಾದ ಗಿಫ್ಟ್ ಕೊಡಿಸಿದ. ಕುತೂಹಲದಿಂದ ಹೊರಗಿನ ಪ್ರಪಂಚವನ್ನು ದಿಟ್ಟಿಸಿ ನೋಡುವ ಪುಟ್ಟ ಮಗುವಿನ ಬೊಂಬೆ ಅದು. ಎಲ್ಲಾ ಹುಡುಗಿಯರಂತೆ ಆಕೆಗೂ ಮಕ್ಕಳ ಬಗ್ಗೆ ವಿಶೇಷವಾದ ಒಲವು ಇತ್ತು. ಮಗುವಿನ ಬೊಂಬೆಯನ್ನು ತನ್ನ ಎದೆಗೊತ್ತಿಕೊಂಡು ಗುಡ್ ಸೆಲೆಕ್ಷನ್ ಅಂದಳು.
ಎರಡನೇ ದಿನವೂ ಕೂಡ ರಾತ್ರಿ ಒಂದೇ ಮಂಚದಲ್ಲಿ ಕಳೆಯಲು ಆಸಕ್ತಿ ತೋರದ ಅಭಿಮನ್ಯು ಪಕ್ಕದ ಮಂಚದಲ್ಲಿ ಮಲಗಿ ಸುಖನಿದ್ರೆ ಅನುಭವಿಸಬೇಕೆಂದು ಕಂಬಳಿ ಹೊದ್ದು ಮಲಗಿರುವುದನ್ನು ನೋಡಿದ ಅಕ್ಷರ, ಅಭಿಮನ್ಯುವಿನ ಬಳಿ ಬಂದು ಇದೇನು ಹೆಂಡ್ತಿ ಜೊತೆ ಜಗಳ ಮಾಡ್ಕೊಂಡು ಮಂಚ ಬದಲಾಯಿಸಿಬಿಟ್ಟಿದ್ದೀರಲ್ಲ ನನ್ನ ಪತಿ ಧರ್ಮರಾಯ!? ಗಂಡ-ಹೆಂಡ್ತಿ ಜಗಳ ಉಂಡು ಮಲಗೋ ತನ್ಕ ಮಾತ್ರ ಅಂಥ ತಿಳ್ಕೊಂಡಿದ್ದೆ. ಆದರೆ, ನೀವು ಬೆಳಗ್ಗಿನಿಂದ ಸಂಜೆ ತನಕ ಒಟ್ಟಿಗೆ ಹೆಂಡ್ತಿ ಜೊತೆಗೆ ಓಡಾಡ್ಕೊಂಡು ರಾತ್ರಿ ಪ್ರತಿಭಟನೆ ಶುರು ಮಾಡ್ಕೋಬಿಟ್ಟಿದ್ದೀರಲ್ಲ? ಇದು ನ್ಯಾಯನಾ? ನೀವು ನಡ್ಕೊಳ್ತಾ ಇರೋ ರೀತಿ ಒಂದು ಚೂರು ಸರಿ ಇಲ್ಲ ಎಂದು ಪ್ರತ್ಯೇಕವಾಗಿ ಮಲಗಿಕೊಂಡಿದ್ದ ಅಭಿಮನ್ಯುವನ್ನು ಮಾತಿನಲ್ಲಿಯೇ ಹಿತವಾಗಿ ತಿವಿದು ನಿನ್ನೆ ರಾತ್ರಿ ಅಭಿಮನ್ಯು ನಿದ್ರೆ ಇಲ್ಲದೆ ಒದ್ದಾಡಿ ಅತ್ಯಂತ ಕಷ್ಟದಿಂದ ರಾತ್ರಿ ಕಳೆದದ್ದನ್ನು ನೆನಪಿಗೆ ತಂದುಕೊಂಡು ಮನದೊಳಗೆ ನಕ್ಕಳು. ಅಭಿಮನ್ಯು ಕಂಬಳಿಯಿಂದ ಮುಖ ಮುಚ್ಚಿಕೊಂಡು ನಿದ್ರೆಗೆ ಜಾರಿದವನಂತೆ ನಟಿಸಲು ಯತ್ನಿಸಿದಾಗ ಕಂಬಳಿ ಕಿತ್ತು ಎಸೆದು ಕಚಕುಳಿ ಇಟ್ಟು ನಗಿಸಲು ಪ್ರಯತ್ನಿಸಿದಳು.
ಅಬ್ಬಾ… ಎಂತಾ ಕಿರುಕುಳ ಕೊಡ್ತಾರಪ್ಪ ಈ ಹುಡುಗಿಯರು. ನೆಮ್ಮದಿಯಾಗಿ ನಿದ್ರೆ ಮಾಡೋದಕ್ಕೂ ಬಿಡೋದಿಲ್ಲ. ನಿನ್ನೆ ನಿನ್ನೊಂದಿಗೆ ಮಲಗಿ ನಿದ್ರೆ ಬಳಿ ಸುಳಿಯಲಿಲ್ಲ. ಇವತ್ತು ಪುನಃ ಅಂತಹ ಒಂದು ಕಷ್ಟ ಅನುಭವಿಸೋದು ಬೇಡ. ಒಂದೇ ಮಂಚದಲ್ಲಿ ರಾತ್ರಿ ಪೂರಾ ಕಳೆಯೋದು ಎಷ್ಟು ಕಷ್ಟಾಂತ ನಿನ್ಗೇನು ಗೊತ್ತು? ನೀನು ಅಲ್ಲಿ ಮಲ್ಕೊ. ನಾನು ಇಲ್ಲಿಯೇ ಮಲ್ಕೋತ್ತಿನಿ ಅಂದ ಅಭಿಮನ್ಯು ಮತ್ತೆ ನಿದ್ರೆಗೆ ಜಾರಲು ಅಣಿಯಾದ.
ಅಭಿ, ನನ್ಗೆ ತುಂಬಾ ಬೇಸರ ಆಗ್ತಾ ಇದೆ. ಹೀಗಾದ್ರೆ ನಾಳೆನೇ ಹೊರಟು ಬಿಡುವ. ನೀನು ಯಾವತ್ತೂ ನನ್ನೊಂದಿಗೆ ಇಬೇಕೂಂತ ಅದೆಷ್ಟು ಸಲ ಹೇಳ್ಲಿಲ್ಲ ನಾನು? ಯಾವಾಗ್ಲೂ ನನ್ನಿಂದ ದೂರ ಸರಿಯೋದಕ್ಕೆ ನೋಡ್ತಾ ಇತಿಯ. ನನ್ಮೇಲೆ ನಿನ್ಗೆ ಒಂದುಚೂರು ಕೂಡ ಪ್ರೀತಿನೇ ಇಲ್ಲ. ನಾನು ನಿನ್ಗೆ ಇನ್ನು ಎನು ಹೇಳೋದಕ್ಕೆ ಇಷ್ಟಪಡೋದಿಲ್ಲ. ನನ್ಮೇಲೆ ಪ್ರೀತಿ ಇದ್ರೆ ಒಟ್ಟಿಗೆ ಬಂದು ಮಲ್ಕೋತ್ತಿಯ ಅಷ್ಟೆ ಎಂದು ಅಷ್ಟೂ ಹೊತ್ತು ತುಂಟಾಟದಲ್ಲಿ ತಲ್ಲೀನಳಾಗಿದ್ದ ಅಕ್ಷರ ಇದ್ದಕ್ಕಿದ್ದಂತೆ ಬೇಸರಗೊಂಡು ರೇಗುತ್ತಾ ಪಕ್ಕದ ಮಂಚದಲ್ಲಿ ಹೋಗಿ ಮಲಗಿಕೊಂಡಳು.
ಅಷ್ಟೊಂದು ದೂರದಿಂದ ಬಂದು ಇಲ್ಲಿ ಜಗಳ ಆಡಿಕೊಳ್ಳೋದು ಸರಿಯಲ್ಲ. ಮೊದಲೇ ಹಟಮಾರಿ ಹುಡುಗಿ. ಹಿಡಿದ ಹಟ ಸಾಧಿಸಲೇ ಬೇಕು. ಇವತ್ತು ಒಟ್ಟಿಗೆ ಮಲಗದಿದ್ದರೆ ನಾಳೆ ಮಾತಾಡಿಸೋದಕ್ಕೆ ಸಾಧ್ಯವಿಲ್ಲ ಅಂದುಕೊಂಡ ಅಭಿಮನ್ಯು ಆಕೆ ಮಲಗಿದ್ದ ಮಂಚಕ್ಕೆ ತೆರಳಿ ಆಕೆಯ ಕಂಬಳಿ ಒಳಗೆ ನುಸುಳಿಕೊಳ್ಳಲು ಯತ್ನಿಸಿದ. ಕೋಪದಿಂದ ಅಕ್ಷರ ಕಂಬಳಿಯನ್ನು ಮೈಗೆ ಪೂರ್ತಿ ಸುತ್ತಿಕೊಂಡು ಮತ್ತೊಂದು ಬದಿಗೆ ಸರಿದು ಮಲಗಿದಳು. ಆಕೆಯನ್ನು ಪಕ್ಕಕ್ಕೆ ಎಳೆದುಕೊಂಡು ಈಗೇನು ನಾನು ಬಂದಿಲ್ವಾ? ತಪ್ಪಾಯ್ತು. ಕ್ಷಮಿಸಿಬಿಡು ಎಂದು ಆಕೆಯ ಅಣೆಗೊಂದು ಮುತ್ತು ನೀಡಿ ಸಮಾಧಾನ ಪಡಿಸಿದ. ತುಂಬಾ ಭಾವುಕಳಾಗಿ ಹೋದ ಅಕ್ಷರ ಅಭಿ, ನನ್ನ ಕೈ ಬಿಡ್ಬೇಡ ಕಣೋ ಎಂದು ಅಭಿಮನ್ಯುವನ್ನು ರಾತ್ರಿಪೂರ ತಬ್ಬಿಕೊಂಡೇ ಮಲಗಿದಳು.
* * *
ಆರು ರಾತ್ರಿ, ಆರು ಹಗಲುಗಳನ್ನು ಒಟ್ಟಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ ಬಂದ ಹಾದಿಯಲ್ಲಿಯೇ ಹಿಂತಿರುಗಲು ಹೊರಟು ನಿಂತರು. ಊಟಿಯಿಂದ ಮೇಟುಪಾಳ್ಯಂಗೆ ತಲುಪಿ ನಂತರ ಮೇಟುಪಾಳ್ಯಂನಿಂದ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದರು.
ಅಭಿ, ಯಕೋ ಸ್ವರ್ಗದಿಂದ ನರಕಕ್ಕೆ ಹೊರಟು ನಿಂತ ಅನುಭವ ಆಗ್ತಾ ಇದೆ. ಒಂದು ವಾರಗಳ ಕಾಲ ಮನಸ್ಸಿನಲ್ಲಿ ಯಾವುದೇ ನೋವುಗಳು ಇಲಿಲ್ಲ. ಇದೀಗ ನೋಡು ಹೊರಟು ನಿಂತಾಗ ಎಲ್ಲಾ ನೋವುಗಳು ಮತ್ತೆ ಕಾಡೋದಕ್ಕೆ ಶುರು ಆಗ್ತಾ ಇದೆ. ಒಂದು ವರ್ಷ ಕಳೆದ ನಂತರ ನನ್ಗೆ ಮದ್ವೆ ಮಾಡಿಸಲು ಮನೆಯಲ್ಲಿ ನಿರ್ಧರಿಸಿದ್ದಾರೆ. ಆದಷ್ಟು ಬೇಗ ಮದ್ವೆಯಾಗಿ ಬಿಡುವ. ನಿನ್ನ ಅಗಲಿ ನನ್ನಿಂದ ಇರೋದಕ್ಕೆ ಸಾಧ್ಯ ಇಲ್ಲ. ತುಂಬ ನೋವಿನಿಂದ ಹೇಳಿಕೊಂಡಳು.
ಮುಂದಿನ ತಿಂಗಳು ಮದ್ವೆ ಆಗೋಣ. ನೀನೇನು ಭಯ ಪಡ್ಬೇಡ. ರಿಜಿಸ್ಟಡ್ ಮ್ಯಾರೇಜ್ ಆಗುವ. ಯಾವುದಕ್ಕೂ ಒಂದ್ಸಲ ಸಬ್ ರಿಜಿಸ್ಟ್ರಾರ್ ಆಫೀಸ್‌ಗೆ ಹೋಗಿ ಬತೇನೆ. ರಿಜಿಸ್ಟ್‌ಮ್ಯಾರೇಜ್ ಆಗುವುದಕ್ಕೆ ಏನೆಲ್ಲ ನೀತಿ ನಿಯಮಗಳಿದೆಯೋ ತಿಳ್ಕೊಂಡು ಬತೇನೆ. ನಂತರ ಮದ್ವೆ ಆದ್ರೆ ಆಯ್ತು. ಎಂದು ಆಕೆಯ ಕೈ ಹಿಡಿದು ಹೇಳಿದ.
ಮದ್ವೆಯಾಗಿ ನಾವಿಬ್ರು ಒಟ್ಟಿಗೆ ಮಡಿಕೇರಿಯಲ್ಲಿ ಇರೋದಕ್ಕೆ ಸಾಧ್ಯವಿದೆಯ ಅಭಿ? ಆತಂಕದಿಂದ ಕೇಳಿದಳು.
ಯಾಕೆ ಆಗೋದಿಲ್ಲ. ಸ್ವಲ್ಪ ದಿನ ಕಿರಿಕಿರಿ ಇಬೊಹುದು. ನಂತರ ಎಲ್ಲಾ ಸರಿ ಹೋಗುತ್ತೆ. ಎಷ್ಟೇ ಆದ್ರೂ ಮಕ್ಕಳ ಬಗ್ಗೆ ಅಪ್ಪ, ಅಮ್ಮನಿಗೆ ಮಮತೆ ಇದ್ದೇ ಇರುತ್ತೆ. ಇವತ್ತಲ್ಲದಿದ್ದರೂ ನಾಳೆಯಾದರೂ ನಮ್ಮ ಪ್ರೀತಿಯನ್ನ ಸ್ವೀಕಾರ ಮಾಡಿಯೇ ಮಾಡುತ್ತಾರೆ. ನನ್ಗೆ ಆ ಭರವಸೆ ಇದೆ ಆಕೆಯಲ್ಲಿ ಭರವಸೆ ತುಂಬಲು ಪ್ರಯತ್ನಿಸಿದ.
ನಮ್ಮ ಪ್ರೀತಿಯನ್ನ ಯಾರು ಕೂಡ ಒಪ್ಪದಿದ್ದರೂ ನನ್ಗೇನು ಚಿಂತೆ ಇಲ್ಲ. ಆದರೆ, ನಮ್ಮಿಬ್ಬರನ್ನ ನೆಮ್ಮದಿಯಾಗಿ ಬದುಕೋದಕ್ಕೆ ಬಿಟ್ರೆ ಅಷ್ಟೇ ಸಾಕು. ಈಗಿನ ಪರಿಸ್ಥಿತಿ ನೋಡಿದ್ರೆ ನಮ್ಮನ್ನ ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ ಅನ್ನಿಸ್ತಾ ಇದೆ. ಹಾಳಾದವರು… ಕೋಪದಿಂದ ರೇಗಿದಳು.
ಆಕೆಯ ಕೈ ಹಿಡಿದುಕೊಂಡ ಅಭಿಮನ್ಯು ಈ ಪ್ರಪಂಚವೇ ನಮ್ಮ ವಿರುದ್ಧ ನಿಂತರೂ ನಾನು ನಿನ್ನ ಕೈ ಬಿಡೋದಿಲ್ಲ. ಯಾರಿಗೋ ಹೆದರಿ ಊರು ಬಿಟ್ಟು ಏಕೆ ಹೋಗ್ಬೇಕು. ಹುಟ್ಟಿದ ಊರಿನಲ್ಲಿಯೇ ಸುಂದರ ಬದುಕು ಕಟ್ಟಿಕೊಳ್ಳುವ. ಮುಂದಿನ ತಿಂಗಳೇ ಮದ್ವೆ ಆಗುವ. ಏನೇ ಅಡ್ಡಿ ಆತಂಕ ಎದುರಾದ್ರೂ ಭಯ ಪಡ್ಬೇಡ. ಜೊತೆಗೆ ನಾನಿದ್ದೇನೆ ಮತ್ತೆ ಮತ್ತೆ ಆಕೆಯಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದ.
ನೀನೊಬ್ಬ ಇದ್ರೆ ನನ್ಗೆ ಅಷ್ಟೇ ಸಾಕು ಅಂದ ಅಕ್ಷರ ಅಭಿಮನ್ಯುವಿನ ತೋಳಿಗೆ ಒರಗಿದಳು. ಈ ಹಾಳಾದ ಜನರ ಬಗ್ಗೆನೇ ಹೆಚ್ಚಾಗಿ ಚರ್ಚೆ ಮಾಡ್ತಾ ಇದ್ದೇವಲ್ಲ!? ಆ ವಿಚಾರ ಚರ್ಚೆ ಮಾಡಿದ್ದು ಸಾಕು. ಟ್ರೈನ್ ಬೆಂಗಳೂರು ತಲುಪುವ ಸಮಯ ಹತ್ತಿರ ಬತಾ ಇದೆ. ಬಾ ಒಂದ್ಸಲ ಬಾಗಿಲ ಬಳಿ ಕುಳಿತು ಬರುವ ಎಂದು ತಂಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳಲು ಅಭಿಮನ್ಯುವನ್ನು ಕರೆದೊಯ್ದುಳು.
ಟ್ರೈನ್ ಮೆಟ್ಟಿಲ ಬಳಿ ಇಬ್ಬರು ಕುಳಿತು ಸುತ್ತಲಿನ ಪರಿಸರವನ್ನು ಬೆರಗುಗಣ್ಣಿನಿಂದ ನೋಡಿದರು. ಹೊರಗೆ ತಲೆ ಹಾಕಿ ನೋಡಿದರೆ ದೂರದಲೆಲ್ಲೋ ಕಾಣುವ ಮರಗಳು ಕ್ಷಣಮಾತ್ರದಲ್ಲಿ ಹಿಂದಕ್ಕೆ ಸರಿದು ಕಣ್ಮರೆಯಾಗುತಿತ್ತು. ಗಾಳಿಯ ರಭಸಕ್ಕೆ ಕೆದರಿದ್ದ ಆಕೆಯ ಕೂದಲುಗಳನ್ನು ಹಿಡಿದು ಕಟ್ಟುವ ಪ್ರಯತ್ನ ಮಾಡುತ್ತಿದ್ದ ಅಭಿಮನ್ಯು ಮತ್ತೆ ಮತ್ತೆ ಅದರಲ್ಲಿ ಸೋಲುತ್ತಿದ್ದ. ಬೀಸಿ ಬರುತ್ತಿದ್ದ ಗಾಳಿಯಿಂದ ಮತ್ತೆ ತಲೆಗೂದಲು ಕೆದರಿಕೊಳ್ಳುತ್ತಿದ್ದವು. ಅವನ ವ್ಯರ್ಥ ಕಸರಸ್ತು ಕಂಡು ಆಕೆ ಮನದೊಳಗೆ ನಕ್ಕಳು.
ಇಷ್ಟುದ್ದ ಜುಟ್ಟು ಬಿಟ್ಟುಕೊಂಡ್ರೆ ಹೀಗೆನೇ ಆಗೋದು. ಉದ್ದದ ಜಡೆ ಇದ್ದಿದ್ರೆ ತಲೆಗೂದಲು ಕೆದರುತ್ತಿಲಿಲ್ಲ. ಒಂದ್ವೇಳೆ ನಿನ್ಗೆ ಉದ್ದದ ಜಡೆ ಇದ್ದಿದ್ದರೆ ಟ್ರೈನಿಂದ ಕೆಳಗೆ ಬೀಳದಹಾಗೆ ನೋಡಿಕೊಳ್ಳಲು ಜಡೆಯನ್ನು ಹಗ್ಗದ ಹಾಗೆ ಬಿಗಿದು ಈ ಬಾಗಿಲಿಗೆ ಕಟ್ಟಿ ಬಿಡುತ್ತಿದ್ದೆ ಎಂದು ಆಕೆಯ ಜುಟ್ಟನ್ನು ಹಿಡಿದುಕೊಂಡು ಕುಚೇಷ್ಟೆ ಮಾಡಿದ.
ಈಗ ಇರುವ ಕೂದಲನ್ನೇ ಸುಧಾರಿಸುವುದರೊಳಗೆ ಸಾಕೆನ್ನಿಸಿ ಬಿಡುತ್ತೆ. ಇನ್ನು ಉದ್ದದ ಜಡೆ ಬಿಟ್ರೆ ಸರಿಯಾಗಿ ತಲೆ ಒರೆಸಿಕೊಳ್ಳೋದಕ್ಕೂ ಸಾಧ್ಯವಾಗೋದಿಲ್ಲ. ಮದ್ವೆಯಾದ ನಂತರ ನಿನ್ನ ಆಸೆ ಖಂಡಿತ ಈಡೇರಿಸ್ತೇನೆ. ಅಲ್ಲಿ ತನ್ಕ ಸುಮ್ನೆ ಇರು. ಮದ್ವೆಯಾದ ಮೇಲೆ ಈ ಕೂದಲಿನ ಜವಾಬ್ದಾರಿ ನಿನ್ಗೆ ವಹಿಸಿಬಿಡ್ತೇನೆ. ನಾನು ಸ್ನಾನ ಮಾಡಿ ಹೊರ ಬರುವುದರೊಳಗೆ ಟವಲ್ ಇಡ್ಕೊಂಡು ನೀನು ನನ್ನ ತಲೆ ಒರೆಸುವುದಕೋಸ್ಕರ ಕಾಯ್ತಾ ಇಬೇಕು. ಇಲ್ದಿದ್ರೆ ನನ್ನಿಂದ ಒದೆ ಬೀಳುತ್ತೆ ನೋಡು ಎಂದು ಅಭಿಮನ್ಯುವನ್ನು ಛೇಡಿಸಿದಳು.
ಹೊರಗೆ ಯಾಕೆ ಕಾಯ್ಕೊಂಡು ನಿಂತಿಬೇಕು? ಒಳಗೆ ಬಂದು ಬಿಡ್ತೇನೆ. ಒಳಗೆ ಬರೋದಕ್ಕೆ ಅನುಮತಿ ನೀಡಿದ್ರೆ ತಲೆಯಿಂದ ಕಾಲ ಬುಡದವರೆಗಿನ ಜವಾಬ್ದಾರಿ ಹೊತ್ತೊಕೊಳ್ಳಲು ನಾನು ರೆಡಿ ಎಂದು ಆಕೆಯನ್ನು ಚುಡಾಯಿಸಿದ.
ಮದ್ವೆಯಾದ ನಂತರ ಆ ಬಗ್ಗೆ ಯೋಚ್ನೆ ಮಾಡ್ತಿನಿ. ಅಲ್ಲಿ ತನ್ಕ ಅದೇ ಗುಂಗಿನಲ್ಲಿ ಕಾಲ ಕಳೀಬೇಡ ಕೋತಿ ಎಂದು ಅಭಿಮನ್ಯುವಿನ ತಲೆಗೊಂದು ಗುದ್ದುಗುದ್ದಿ ಹಾಸ್ಯದ ಹೊನಲು ಹರಿಸಿದಳು.
ಟ್ರೈನ್ ಬೆಂಗಳೂರು ತಲುಪುವುದಕ್ಕೆ ಇನ್ನೇನು ಒಂದು ಅರ್ಧ ತಾಸು ಮಾತ್ರ ಬಾಕಿ ಉಳಿದಿತ್ತು. ಮಧುರವಾದ ಗಳಿಗೆಯಲ್ಲಿ ಕಳೆದ ಇಬ್ಬರಿಗೆ ಇಷ್ಟೊಂದು ಬೇಗ ಬೆಂಗಳೂರು ತಲುಪಿ ಬಿಡ್ತಾ? ಅನ್ನಿಸಿತು. ಬೆಂಗಳೂರು ಇನ್ನೊಂದಷ್ಟು ದೂರ ಇದ್ದಿದ್ದರೆ ಇನ್ನೂ ಚೆನ್ನಾಗಿತಾ ಇತ್ತು ಅನ್ನಿಸಿತು. ಟ್ರೈನ್ ಇಳಿದು ಬಸ್ ನಿಲ್ದಾಣ ತಲುಪಿ ಮೈಸೂರಿನ ಕಡೆಗೆ ಪಯಣ ಬೆಳೆಸಿದರು.
ಮೈಸೂರು ತಲುಪಿ ಜ್ಯೂಸ್ ಸೆಂಟರ್‌ನಲ್ಲಿ ಫ್ರೆಶ್ ಜೂಸ್ ಕುಡಿದು ಆಯಾಸ ನೀಗಿಸಿಕೊಂಡರು. ಇಬ್ಬರಿಗೂ ಬೇರ್ಪಡುವ ಮನಸ್ಸಂತೂ ಇರಲೇ ಇಲ್ಲ. ಮತ್ತೆ ತಿರುಗಿ ಊಟಿಗೆ ಹೋಗಿ ಬಿಡುವ ಅನ್ನಿಸತೊಡಗಿತು. ಆ ಸೂರ್ಯ ನಮ್ಮ ಮೇಲೆ ಕೋಪ ಮಾಡ್ಕೋಂಡು ಒಂದು ವಾರ ಬೇಗ ಮುಳುಗಿ ಏಳುತ್ತಿದ್ದ. ಅದಕ್ಕೆ ಇಷ್ಟೊಂದು ಬೇಗ ಏಳು ದಿನಗಳು ಸದ್ದಿಲ್ಲದೆ ಸರಿದು ಹೋಯಿತೇನೋ ಅಂದುಕೊಂಡರು.
ಅಭಿ, ನಿನ್ಗೆ ಹೊರಡೋದಕ್ಕೆ ಮನಸ್ಸಾಗ್ತಾ ಇದೆಯಾ? ಕೇಳಿದಳು.
ಹೊರಡದೆ ಇನ್ನೇನು ಮಾಡ್ಲಿ? ಹಾಸ್ಟೆಲ್‌ನಲ್ಲೂ ಕೂಡ ಒಂದು ವಾರ ಒಟ್ಟಿಗೆ ಕಳೆಯಬೇಕೂಂತ ತೀರ್ಮಾನ ಮಾಡಿದ್ದೀಯ? ನಕ್ಕು ಮರುಪ್ರಶ್ನಿಸಿದ.
ನೀನು ಇರುವುದಾದ್ರೆ ಇಲ್ಲೇ ಒಂದು ಮನೆ ಕೊಂಡ್ಕೋ ಬಿಡ್ತಿನಿ. ಹೇಗಿದ್ರೂ ಮದ್ವೆಯಾದ ನಂತರ ಮನೆ ಬೇಕೇ ಬೇಕಲ್ವ? ಮಡಿಕೇರಿಯಲ್ಲಿ ಬೋರಾದ್ರೆ ಇಲ್ಲಿ ಬಂದು ಉಳ್ಕೋ ಬಹುದು ಅಂದಳು.
ಇಬ್ಬರಿಗೂ ಬಿಟ್ಟು ಹೊರಡಲು ಮನಸ್ಸಾಗದೆ ಇದ್ದರೂ ಹೊತ್ತು ಸರಿಯುತ್ತಿದ್ದಂತೆ ಹೊರಡುವುದು ಅನಿವಾರ್ಯವಾಯಿತು. ಅಭಿಮನ್ಯು ಬಸ್ ಏರಿ ಕುಳಿತುಕೊಳ್ಳುವವರೆಗೆ ಜೊತೆಗೇ ಇದ್ದಳು. ಬಸ್ ಹೊರಟು ಮರೆಯಾಗುವ ತನಕ ಅಭಿಮನ್ಯು ವಿನೆಡೆಗೆ ದೃಷ್ಟಿನೆಟ್ಟು ಕೈ ಬೀಸುತ್ತಲೇ ಇದ್ದಳು.
* * *
ಇಬ್ಬರು ಊಟಿಯಲ್ಲಿ ಒಂದುವಾರ ಕಳೆದುಬಂದ ವಿಚಾರ ಕೂಡ ಅಕ್ಷರಳ ಮನೆಗೆ ತಲುಪಲು ಹೆಚ್ಚು ಸಮಯ ತೆಗೆದು ಕೊಳ್ಳಲಿಲ್ಲ. ಟ್ರೈನ್ ಚಲಿಸುವ ವೇಗದಷ್ಟೇ ಮನೆಗೆ ಸುದ್ದಿ ಬಂದು ತಲುಪಿತು. ಟ್ರೈನಿನಲ್ಲಿ ಅಕ್ಷರ, ಅಭಿಮನ್ಯು ಒಟ್ಟಿಗೆ ಇರುವುದನ್ನು ಗಮನಿಸಿದ ರಾಜಶೇಖರ್ ಸ್ನೇಹಿತ ಯೋಗರಾಜ್ ನೋಡಿದ ಎಲ್ಲಾ ವಿಚಾರವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಸಂತೃಪ್ತಿಪಟ್ಟುಕೊಂಡ. ರಾಜಶೇಖರ್‌ಗೆ ಯೋಗರಾಜ್‌ನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಆದರೆ, ಯೋಗರಾಜ್‌ಗೆ ರಾಜಶೇಖರ್ ಮೇಲೆ ಪ್ರೀತಿ ಅಷ್ಟಕಷ್ಟೆ. ಅವರ ಶ್ರೀಮಂತಿಕೆ ಕಂಡು ಸಹಿಸಿಕೊಳ್ಳಲಾರದೆ ಒಳಗೊಳಗೆ ಬೆಂಕಿ ಕಾರುತ್ತಿದ್ದ. ಅವಕಾಶ ಸಿಕ್ಕಾಗಲೆಲ್ಲ ಯಾರಿಗೂ ಗೊತ್ತಿಲ್ಲದ ಹಾಗೆ ರಾಜಶೇಖರ್ ವಿರುದ್ಧ ಕಂಡಕಂಡವರಲ್ಲಿ ಎತ್ತಿಕಟ್ಟಿ ಯಾರಿಗೂ ಗೊತ್ತಾಗದ ಹಾಗೆ ವಿಷಯದಿಂದ ಜಾರಿಕೊಳ್ಳುತ್ತಿದ್ದ. ರಾಜಶೇಖರ್ ಮಗಳು ಊಟಿಯಲ್ಲಿ ಹುಡುಗನೊಬ್ಬನೊಂದಿಗೆ ಕಳೆದು ಬಂದಿರುವ ವಿಚಾರ ತಿಳಿದು ಹಾಲು ಕುಡಿದಷ್ಟೇ ಸಂತೋಷವಾಯಿತು. ಆದರೆ, ಆತನಿಗೆ ಒಂದು ಸಂಶಯ ಮನದಲ್ಲಿ ಕಾಡುತ್ತಲೇ ಇತ್ತು. ತಾನು ಟ್ರೈನಿನಲ್ಲಿ ನೋಡಿದ ಹುಡುಗನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಸಲು ರಾಜಶೇಖರ್ ನಿರ್ಧರಿಸಿದ್ದಾರೆಯೋ ಅಥವಾ ಆ ಹುಡುಗಿ ತನ್ನ ತೆವಲು ತೀರಿಸಿಕೊಳ್ಳಲು ಯಾವುದೋ ಹುಡುಗನೊಂದಿಗೆ ಹೋಗಿ ಬರುತ್ತಿದ್ದಾಳೋ!? ಎಂದು ತನ್ನನ್ನು ತಾನೇ ಪ್ರಶ್ನಿಕೊಂಡು ಗೊಂದಲಕ್ಕೆ ಒಳಗಾದ. ಯಾವುದಕ್ಕೂ ಒಂದ್ಸಲ ರಾಜಶೇಖರ್‌ನನ್ನೇ ಕಂಡು ಕೇಳಿದರೆ ಆಯ್ತು. ಒಂದ್ವೇಳೆ ಹುಡುಗಿ ಹಾದಿ ತಪ್ಪಿರೋದು ಸತ್ಯವಾದರೆ ಇಡೀ ಊರಿಗೆ ಸುದ್ದಿ ಹಬ್ಬಿಸಿ ಬಿಡುವ ಎಂದು ನಿರ್ಧರಿಸಿ ಮಡಿಕೇರಿಗೆ ಬಂದಿಳಿದವನೇ ನೇರವಾಗಿ ರಾಜಶೇಖರ್ ಮನೆಯ ಕಡೆಗೆ ನಡೆದ.
ದೂರದಲ್ಲಿ ಯೋಗರಾಜ್ ಆಯಾಸದಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿರುವುದನ್ನು ಕಂಡು ಯಾವತ್ತೂ ಮನೆಯ ಕಡೆಗೆ ತಲೆಹಾಕಿ ನೋಡದ ಮನುಷ್ಯ ಇವತ್ತು ಯಾತಕೋಸ್ಕರ ಬತಾ ಇದ್ದಾನೆ!? ಅಂದುಕೊಂಡರು. ಮನೆಯ ಬಳಿ ತಲುಪಿದ.
ಯೋಗರಾಜ್‌ನನ್ನು ನೋಡಿ ಓ… ಏನ್ ಯೋಗರಾಜ್ ಸವಾರಿ ಇತ್ತ ಕಡೆ. ದೇವರನ್ನ ಬೇಕಾದ್ರೂ ನೋಡ್ಬೊಹುದು. ಆದ್ರೆ ನಿನ್ನ ಕಾಣೋದು ಸ್ವಲ್ಪ ಈಗ ಕಷ್ಟನೇ ಆಗಿಬಿಟ್ಟಿದೆ ಎಂದು ಅಪರೂಪಕ್ಕೆ ಭೇಟಿಯಾದ ಗೆಳೆಯನನ್ನು ವಿಚಾರಿಸಿದರು.
ಏನ್ ರಾಜು, ಮಗಳ ಮದ್ವೆಗೆ ನನ್ನ ಕರೆಯೋದಕ್ಕೆ ಮರೆತು ಬಿಟ್ಟೆಯಲ್ಲ? ಎಂದು ಯೋಗರಾಜ್ ನೇರವಾಗಿ ವಿಷಯಕ್ಕೆ ಬಂದ.
ನೀನೇನು ಮಾತಾಡ್ತಾ ಇದ್ದೀಯ? ಮಗಳಿಗೆ ಇನ್ನೂ ಮದ್ವೆನೇ ಆಗಿಲ್ಲ. ಈಗತಾನೆ ಹುಡುಗನ ನೋಡಿದ್ದೀವಿ. ಮುಂದಿನ ವರ್ಷ ಮದ್ವೆ ಇಟ್ಕೊಂಡಿದ್ದೇವೆ. ನಿನ್ಗೆ ಮದ್ವೆಯ ಆಮಂತ್ರಣ ನೀಡದೆ ಮದ್ವೆ ನಡೆಸೋದಕ್ಕೆ ಸಾಧ್ಯನಾ ಹೇಳು? ಎಂದು ನಕ್ಕರು.
ಹಾಗಾದ್ರೆ ಮಗಳೊಂದಿಗೆ ಸುತ್ತಾಡ್ತಾ ಇರೋ ಆ ಹುಡುಗ ಯಾರು? ಕುತೂಹಲ ತಡೆಯಲಾಗದೆ ಕೇಳಿಯೇಬಿಟ್ಟ ಯೋಗರಾಜ್.
ಮಗಳ ಪ್ರೀತಿಯ ವಿಚಾರ ಈತನಿಗೂ ಗೊತ್ತಾಗಿ ಹೋಗಿದೆ ಎಂದು ತಿಳಿದು ತಬ್ಬಿಬ್ಬಾಗಿ ಹೊದ ರಾಜಶೇಖರ್‌ಗೆ ಏನು ಉತ್ತರ ನೀಡಬೇಕೆಂದು ತೋಚದೆ ಯಾವ ಹುಡುಗ? ಎಂದು ಯೋಗರಾಜ್‌ಗೆ ಮರು ಪ್ರಶ್ನೆ ಹಾಕಿದರು.
ಅವನ್ಯಾರು ಅಂಥ ನನ್ಗೆ ಗೊತ್ತಿಲ್ಲ. ಇದೇ ಫಸ್ಟ್‌ಟೈಮ್ ನಾನು ಆ ಹುಡುಗನನ್ನ ನೋಡಿದ್ದು. ಸರಿಸುಮಾರು ಆರು ಅಡಿ ಎತ್ತರ ಇದ್ದಾನೆ. ನೋಡಲು ಸ್ಫುರದ್ರೂಪಿಯಾಗಿದ್ದಾನೆ. ಕಣ್ಣು ಸರಿ ಇದೆಯೋ ಏನೋ ಗೊತ್ತಿಲ್ಲ. ಕೂಲಿಂಗ್‌ಗ್ಲಾಸ್ ಹಾಕ್ಕೊಂಡಿದ್ದ.
ರಾಜಶೇಖರ್‌ಗೆ ಎಲ್ಲವೂ ಸ್ಪಷ್ಟವಾಯಿತು. ಅಭಿಮನ್ಯು ಮಗಳೊಂದಿಗೆ ಮತ್ತೆ ಚಕ್ಕಂದ ಆಡೋದಕ್ಕೆ ಪ್ರಾರಂಭ ಮಾಡಿದ್ದಾನೆ. ಅವನಿಗೊಂದು ಗತಿ ಕಾಣಿಸದೆ ಇದ್ದರೆ ನನ್ನ ಮಗಳು ನನ್ನ ಪಾಲಿಗೆ ಸಿಗೋದಿಲ್ಲ. ಹಾಳಾದ ಹುಡುಗ ಎಷ್ಟು ಹೇಳಿದರೂ ಒಳ್ಳೆಯ ದಾರಿಗೆ ಬರೋದಿಲ್ವಲ್ಲ? ಮಗಳಿಗಾದ್ರೂ ಏನಾಗಿದೆ? ಮನೆಗೆ ಬಂದಾಗ ದೇವರ ಮುಂದೆ ನಿಂತು ಇನ್ನು ಮುಂದೆ ಅಭಿಮನ್ಯುವನ್ನು ಮರೆತುಬಿಡ್ತೇನೆಂದು ಪ್ರತಿಜ್ಞೆ ಮಾಡಿ ಹೊರಟವಳು ಇದೀಗ ಅವನೊಂದಿಗೆ ಸುತ್ತಾಡ್ತಾ ಇದ್ದಾಳಲ್ಲ? ಮನೆತನದ ಗೌರವ ಹಾಳುಮಾಡೋದಕೋಸ್ಕರ ಹುಟ್ಟಿದ್ದಾಳೆ ಎಂದು ಅಕ್ಷರ ಹಾಗೂ ಅಭಿಮನ್ಯುನ ವಿರುದ್ಧ ಮನದೊಳಗೆ ರೇಗಿದ ರಾಜಶೇಖರ್, ಮಗಳ ಮತ್ತಷ್ಟು ವಿಚಾರ ತಿಳಿದುಕೊಳ್ಳಲು ಉತ್ಸುಕರಾದರು.
ಅಂದಹಾಗೆ, ನೀನು ಆ ಹುಡುಗನನ್ನ ನೋಡಿದ್ದು ಎಲ್ಲಿ? ಕೇಳಿದರು.
ನಾನು ಮೊನ್ನೆ ಊಟಿಗೆ ಟೂರ್ ಹೋಗಿ ಇವತ್ತು ವಾಪಾಸ್ ಬಂದೆ. ಬೆಂಗಳೂರು ತನ್ಕ ನಾವು ಒಟ್ಟಿಗೆ ಒಂದೇ ಟ್ರೈನಲ್ಲಿ ಬಂದ್ವಿ. ನಂತರ ಅವರಿಬ್ರು ಬೇರೆ ಬಸ್ ಹತ್ತಿ ಹೋದ್ರು. ನನ್ಗೆ ಬೆಂಗಳೂರಿನಲ್ಲಿ ಸ್ವಲ್ಪ ಕೆಲ್ಸ ಇತ್ತು. ಅದು ಮುಗಿಸಿಕೊಂಡು ಬರುವಾಗ ಸ್ವಲ್ಪ ತಡವಾಯ್ತು. ಟ್ರೈನಿನಲ್ಲಿ ಅವರಿಬ್ಬರದ್ದು ಅದೇನು ಸರಸ ಅಂತಿರ!? ನನ್ಗೆ ನಾಚಿಕೆ ಆಗೋಯ್ತು. ನಾನೆಲ್ಲೋ ನೀನು ಆ ಹುಡುಗನಿಗೆ ಮಗಳನ್ನು ಕೊಟ್ಟು ಮದ್ವೆ ಮಾಡ್ತಾ ಇದ್ದೀಯ ಅಂದುಕೊಂಡಿದ್ದೆ. ಆದರೆ, ನಿನ್ಗೆ ಯಾವುದೇ ವಿಚಾರ ಕೂಡ ಗೊತ್ತಿಲ್ಲ. ಆ ಹುಡುಗ ನಿನ್ನ ಮಗಳನ್ನ ಪ್ರೀತಿ ಮಾಡ್ತಾ ಇಬೊಹುದಾ? ತುಂಬಾ ಕುತೂಹಲ ಹಾಗೂ ಅಷ್ಟೇ ಸಂತೋಷದಿಂದ ಕೇಳಿದ.
ಯೋಗರಾಜ್‌ಗೆ ಮಗಳು ಅಭಿಮನ್ಯುವನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿದಿಲ್ಲವೆಂದು ರಾಜಶೇಖರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಟ್ರೈನಿನಲ್ಲಿ ನೀನು ನೋಡಿದ ಹುಡುಗನೇ ನನ್ನ ಮಗಳನ್ನ ಮದ್ವೆಯಾಗೋದು. ಅವರಿಬ್ಬರನ್ನ ನಾನೇ ಊಟಿಗೆ ಕಳುಹಿಸಿಕೊಟ್ಟಿದ್ದು. ವಯಸ್ಸಾಯಿತ್ತಲ್ಲ. ಹಾಳಾದ ಮರೆವು ಜಾಸ್ತಿಯಾಗಿಬಿಟ್ಟಿದೆ ಎಂದು ಯೋಗರಾಜ್‌ಗೆ ಸುಳ್ಳು ಹೇಳಿ ಆ ವಿಷಯ ಮತ್ತೆಲ್ಲೂ ಹರಡದಂತೆ ನೋಡಿಕೊಂಡರು.
ಇನ್ನು ಸುಮ್ಮನಿದ್ದರೆ ಆಗೋದಿಲ್ಲ. ಮಗಳ ಬದುಕಿಗೆ ಕೊಳ್ಳಿ ಇಡುತ್ತಿರುವ ಅಭಿಮನ್ಯುವನ್ನು ಹತ್ಯೆ ಮಾಡಲೇಬೇಕೆಂದು ನಿರ್ಧರಿಸಿ ರಾಜಶೇಖರ್ ಕಾರ್ಯಪ್ರವೃತ್ತರಾದರು. ಎಷ್ಟೂಂತ ಸಹಿಸಿಕೊಂಡು ಸುಮ್ನೆ ಇರೋದಕ್ಕೆ ಸಾಧ್ಯ. ಸಹನೆಗೂ ಒಂದು ಮಿತಿ ಬೇಡವೆ? ಆ ಹುಡುಗನಿಗೆ ಎಷ್ಟು ಹೇಳಿದ್ರೂ ಅರ್ಥ ಮಾಡ್ಕೊತ್ತಾ ಇಲ್ಲ. ನನ್ನ ಕೈಯಿಂದಲೇ ಸಾಯಬೇಕೂಂತ ಆ ಬ್ರಹ್ಮ ಅವನ ಹಣೆಯಲ್ಲಿ ಬರೆದಿಟ್ಟಿದ್ದರೆ ನಾನೇನು ಮಾಡೋದಕ್ಕೆ ಸಾಧ್ಯ? ಅಭಿಮನ್ಯುವನ್ನು ಅತ್ಯಂತ ವ್ಯವಸ್ಥಿತವಾಗಿ ಮುಗಿಸಬೇಕು. ಯಾರಿಗೂ ಗೊತ್ತಾಗದಂತೆ ಎಚ್ಚರ ವಹಿಸಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಮಗಳಿಗೆ ಒಂದುಚೂರು ಸಂಶಯ ಕೂಡ ಬರದಹಾಗೆ ನೋಡಿಕೊಳ್ಳಬೇಕು. ಅಭಿಮನ್ಯು ದಿನಾ ಕೆಲಸ ಮುಗಿಸಿ ಮನೆಗೆ ತೆರಳುವಾಗ ರಾತ್ರಿಯಾಗುತ್ತೆ. ಹತ್ಯೆಗೆ ಅದೇ ಒಳ್ಳೆಯ ಸಮಯ ಅಂದುಕೊಂಡರು. ಕೊಲೆ ಮಾಡುವ ಕೆಲಸವನ್ನು ಬಾಡಿಗೆ ಹಂತಕರಿಗೆ ವಹಿಸುವುದೋ? ಅಥವಾ ಆ ಕೆಲಸವನ್ನು ತಾನೇ ಮಾಡಿ ಮುಗಿಸುವುದೋ? ಎಂದು ಯೋಚಿಸಿ ತಾನೇ ಮಾಡಿ ಮುಗಿಸುತ್ತೇನೆಂದು ನಿರ್ಧರಿಸಿದರು. ಬಾಡಿಗೆ ಹಂತಕರಿಗೆ ಕೆಲಸ ವಹಿಸಿದರೆ ಅವರು ಒಂದಲ್ಲಾಒಂದು ಸುಳಿವುಬಿಟ್ಟು ತೆರಳುತ್ತಾರೆ. ಮತ್ತೆ ಅವರೊಂದಿಗೆ ತಾನೂ ಕೂಡ ಕಂಬಿ ಎಣಿಸುವ ಪರಿಸ್ಥಿತಿ ನಿರ್ಮಾಣಗೊಳ್ಳುವುದನ್ನು ಕಲ್ಪಿಸಿಕೊಂಡು ಭಯಗೊಂಡರು. ಮಗನ ಸಹಕಾರ ಪಡೆದು ಅಭಿಮನ್ಯುವಿನ ಕತೆ ಮುಗಿಸಲು ತೀರ್ಮಾನಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಮಗ ಪ್ರೀತಮ್‌ಗೆ ಫೋನಾಯಿಸಿ ಬರ ಮಾಡಿಕೊಂಡರು.
* * *
ಅಪ್ಪನ ಕರೆಯ ಮೇರೆಗೆ ಮರುದಿನ ಬೆಳಗ್ಗೆ ಮಡಿಕೇರಿಗೆ ಬಂದಿಳಿದ ಪ್ರೀತಮ್‌ನನ್ನು ರಾಜಶೇಖರ್ ಕಾರಿನಲ್ಲಿ ಕರೆದೊಯ್ದರು. ಮನೆಯ ಕಡೆಗೆ ತೆರಳುವ ಹಾದಿಯನ್ನು ಬಿಟ್ಟು ಕಾರು ಕಾಫಿ ಎಸ್ಟೇಟ್ ಕಡೆಗೆ ಚಲಿಸತೊಡಗಿತು. ಎಸ್ಟೇಟ್‌ನಲ್ಲಿ ಯಾರಾ ದರು ಇದ್ದಾರೆಯೇ? ಎಂದು ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ಯಾರು ಇಲ್ಲ ಎಂದು ಖಾತ್ರಿಪಡಿಸಿಕೊಂಡು ಮಗಳು ಪ್ರೀತಿಯ ಬಲೆಗೆ ಬಿದ್ದಿರುವ ವಿಚಾರವನ್ನು ಮಗನ ಮುಂದೆ ತೆರೆದಿಟ್ಟರು. ಪ್ರೀತಿಯ ಬಲೆಗೆ ಬಿದ್ದಿರುವ ಅಕ್ಷರಳನ್ನು ಪಾರು ಮಾಡೋದಕ್ಕೆ ಅಭಿಮನ್ಯುವನ್ನು ಹತ್ಯೆ ಮಾಡಲೇಬೇಕು. ಇಲ್ಲವಾದಲ್ಲಿ ಕುಟುಂಬದ ಗೌರವ ಬೀದಿಪಾಲಾಗುವುದರಲ್ಲಿ ಸಂಶಯವಿಲ್ಲವೆಂಬ ವಿಚಾರವನ್ನು ಪ್ರೀತಮ್‌ಗೆ ಮನದಟ್ಟು ಮಾಡಿದರು.
ಕೊಲೆ ಸಂಚಿನ ವಿಚಾರ ಅಪ್ಪಿತಪ್ಪಿಯೂ ಯಾರಿಗೂ ಹೇಳೋದಕ್ಕೆ ಹೋಗ್ಬೇಡ. ಈ ವಿಚಾರ ನಮ್ಮಿಬ್ಬರ ನಡುವೆಯೇ ಇರಲಿ. ಅಮ್ಮನಿಗೂ ಕೂಡ ಹೇಳ್ಬೇಡ. ಮುಂದೆ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಕೂಡ ಅತ್ಯಂತ ಜಾಗ್ರತೆಯಿಂದ ಕೂಡಿರಬೇಕು. ಇಲ್ದಿದ್ರೆ ಕಂಬಿ ಎಣಿಸಬೇಕಾಗುತ್ತೆ ರಾಜಶೇಖರ್ ಮಗನನ್ನು ಎಚ್ಚರಿಸಿದರು.
ನೀವು ಇಷ್ಟೊಂದು ಸಣ್ಣ ವಿಷಯಕ್ಕೆ ಅಷ್ಟೊಂದು ತಲೆಬಿಸಿ ಯಾಕೆ ಮಾಡ್ಕೊತ್ತಾ ಇದ್ದೀರ? ಬೆಂಗಳೂರಿನಲ್ಲಿ ಇಂತಹ ಕೊಲೆಗಳನ್ನ ನಾನು ಎಷ್ಟು ನೋಡಿಲ್ಲ ಹೇಳಿ? ನೀವು ಹೂಂ ಅಂದ್ರೆ ಸಾಕು. ನಾಳೆನೇ ನನ್ಗೆ ಗೊತ್ತಿರುವ ರೌಡಿಗಳನ್ನ ಕರೆಯಿಸ್ತೇನೆ. ಅವರಿಗೊಂದಷ್ಟು ಹಣ ಕೊಟ್ರೆ ಆಯ್ತು. ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಹೋಗುತ್ತಾರೆ. ಸುಮ್ನೆ ಯಾಕೆ ನಾವು ರಿಸ್ಕ್ ತಗೋಬೇಕು. ನಾವು ಕೊಲೆ ಮಾಡೋದಕ್ಕಿಂತ ಕೊಲೆ ಮಾಡಿಸುವುದೇ ವಾಸಿ.
ನಿನ್ಗೇನು ತಲೆ ಕೆಟ್ಟಿದೆಯಾ? ಆಪತ್ತನ್ನು ಮೈ ಮೇಲೆ ಎಳ್ಕೋ ಬೇಕೂಂತ ತೀರ್ಮಾನ ಮಾಡಿದ್ದೀಯ? ಬಾಡಿಗೆ ಹಂತಕರು ಬಂದು ಕೆಲಸವೇನು ಮುಗಿಸಿ ಹೋಗುತ್ತಾರೆ. ಒಂದ್ವೇಳೆ ಅವರು ಒಂದು ಸಣ್ಣ ಸುಳಿವು ಬಿಟ್ಟುಹೋದ್ರೂ ಸಾಕು, ನಾವು ಕಂಬಿ ಎಣಿಸೋದಕ್ಕೆ. ಅವರಿಗೇನು ಇಲ್ಲಿನ ಪರಿಸ್ಥಿತಿಯ ಅರಿವು ಇರೋದಿಲ್ಲ. ಕೊಲೆಮಾಡಿ ತಪ್ಪಿಸಿಕೊಂಡು ಹೋಗಬೇಕಾದ ದಾರಿ ಯಾವುದು, ಯಾವುದು ನಿರ್ಜನ ಪ್ರದೇಶವೆಂದು ಗೊತ್ತಿಲ್ಲದೆ ಕಂಡ ಕಡೆ ಗುಂಡು ಹಾರಿಸಿ ಹತ್ಯೆಮಾಡಿ ನಮ್ಮನ್ನ ಇಕ್ಕಟ್ಟಿಗೆ ಸಿಕ್ಕಿಸಿ ಬಿಡ್ತಾರೆ. ಬಾಡಿಗೆ ಹಂತಕರಿಂದ ಕೊಲೆ ಮಾಡಿಸುವುದಾದರೆ ನಾನೇಕೆ ನಿನ್ನ ಇಲ್ಲಿಗೆ ಕರೆಯಿಸಿಕೊಳ್ತಾ ಇದ್ದೆ? ಎಂದು ಪ್ರೀತಮ್‌ನ ನಿರ್ಧಾರಕ್ಕೆ ರಾಜಶೇಖರ್ ಅಸಂತೃಪ್ತಿ ತೋರ್ಪಡಿಸಿದರು.
ಹಾಗಾದ್ರೆ ಆ ಕೊಲೆಯನ್ನ ನಾವೇ ಮಾಡ್ಬೇಕ? ನನ್ಗೇನೋ ಅದು ಸರಿ ಕಾಣಿಸ್ತಾ ಇಲ್ಲ. ಆ ಕೆಲಸವನ್ನ ಯಾರಿಗಾದ್ರು ವಹಿಸುವುದೇ ವಾಸಿ. ಇಲ್ದಿದ್ರೆ ಅವನಿಗೆ ನಾವೇ ನಾಲ್ಕು ಬಾರಿಸಿ ಬುದ್ಧಿ ಹೇಳುವ. ಅದಕ್ಕೂ ಬಗ್ಗದೆ ಇದ್ರೆ ಮುಂದೆ ನೀವು ಹೇಳಿದ ತೀರ್ಮಾನದಂತೆ ಆಗಲಿ.
ಅವನಿಗೆ ಹೇಳೋದಕ್ಕೆ ಇನ್ನೇನು ಉಳಿದಿಲ್ಲ. ಇತ್ತೀಚೆಗೆ ಅವನ ಮನೆಗೆ ಹೋಗಿ ಅವನ ಅಮ್ಮನಿಗೆ ಎಚ್ಚರಿಕೆ ಕೊಟ್ಟು ಬಂದಿದ್ದೆ. ನನ್ನ ಮಾತು ಲೆಕ್ಕಕ್ಕೆ ಹಾಕಿಕೊಳ್ಳದೆ ಮತ್ತೆ ಪ್ರೀತಿ ಮುಂದುವರೆಸಿದ್ದಾನೆ. ಅಲ್ಲದೆ ಮಗಳಿಂದ ಅವನಿಗೆ ಬಾಯಿಗೆ ಬಂದಂಗೆ ಬೈಯಿಸಿ ನೋಡ್ದೆ. ಅದಕ್ಕೂ ಬಗ್ಗಲಿಲ್ಲ, ಬಡವ ಯಾಸ್ಕಲ್. ಎಷ್ಟು ದಿನಾಂತ ಹೀಗೆ ಇರೋದಕ್ಕೆ ಸಾಧ್ಯ ಹೇಳು? ಅವನ ಹೀಗೆ ಬಿಟ್ರೆ ನಮ್ಮ ಕುಟುಂಬದ ಮಾನ ಹರಾಜು ಹಾಕದೆ ಬಿಡೋದಿಲ್ಲ. ಅವನನ್ನ ಮುಗಿಸಿ ಬಿಡೋದೇ ಒಳ್ಳೆಯದ್ದು ರಾಜಶೇಖರ್ ಕೋಪದಿಂದ ಕುದಿಯುತ್ತಿದ್ದರು.
ಹಾಳಾದ ಅಕ್ಷರ ಹೇಗಿದ್ದಾಳೆ? ಅವಳಿಂದಲೇ ಎಲ್ಲಾ ಆಗ್ತಾ ಇರೋದು. ಅವಳು ಅಭಿಮನ್ಯುವಿನ ಹಿಂದೆ ಹೋಗೋದು ಬಿಟ್ರೆ ಅವನು ಕೂಡ ಸುಮ್ನೆ ಇತಾನೆ. ಮೊದ್ಲು ಅವಳಿಗೆ ಇಡ್ಕೊಂಡು ನಾಲ್ಕು ಬಾರಿಸ್ಬೇಕು. ಅವಾಗಲೇ ಎಲ್ಲಾ ಸರಿಹೋಗೋದು. ಆದಷ್ಟು ಬೇಗ ಅವಳನ್ನ ಮನೆಗೆ ಕಕೊಂಡು ಬನ್ನಿ. ನಾನೇ ಸಮಸ್ಯೆ ಬಗೆಹರಿಸ್ತೇನೆ. ಪ್ರೀತಮ್ ಅಪ್ಪನ ಮುಂದೆ ತನ್ನ ಕೋರಿಕೆ ಮುಂದಿಟ್ಟ.
ಈ ವಿಚಾರ ಮಗನಿಗೆ ಹೇಳಿದ್ದೇ ದೊಡ್ಡ ತಪ್ಪಾಯ್ತು. ಇವನ ಸಹಕಾರ ಪಡೆದುಕೊಳ್ಳೋದಕ್ಕಿಂತ ನಾನೇ ಕೆಲಸ ಮುಗಿಸಿ ಬಿಡ್ಬೊಹುದಿತ್ತು. ಈಗಾಗಲೇ ಒಂದು ಹೆಜ್ಜೆ ಇಟ್ಟಾಗಿದೆ. ಇನ್ನು ಮಗನ ಸಹಕಾರ ಪಡ್ಕೊಂಡು ಕೆಲ್ಸ ಮಾಡಿ ಮುಗಿಸುವುದೇ ವಾಸಿ. ಈಗಾಗಲೇ ಮಗನಿಗೆ ಎಲ್ಲಾ ವಿಚಾರ ಹೇಳಿ ಆಗಿದೆ. ಕೊಲೆಸಂಚಿನಲ್ಲಿ ಮಗನನ್ನು ಪಾಲುದಾರನಾಗಿ ಮಾಡಿಕೊಳ್ಳದಿದ್ದರೆ ನಾಳೆದಿನ ತನಗೇ ಆಪತ್ತು. ಒಂದಲ್ಲಾ ಒಂದು ದಿನ ಮಗ ಯಾರೊಂದಿಗಾದರು ಬಾಯಿ ಬಿಟ್ಟೇಬಿಡ್ತಾನೆ. ಅದೇ ಅವನನ್ನೇ ಈ ಕೊಲೆ ಸಂಚಿನ ಪಾಲುದಾರನನ್ನಾಗಿ ಮಾಡಿಕೊಂಡರೆ ಸಮಸ್ಯೆಯೇ ಇರುವುದಿಲ್ಲ ಅಂದುಕೊಂಡು ಮಗನನ್ನು ಒಪ್ಪಿಸುವ ಕೆಲಸದಲ್ಲಿ ನಿರತರಾದರು.
ಪ್ರೀತಮ್, ನಿನ್ಗೆ ಅವಳ ವಿಚಾರ ಗೊತ್ತಿಲ್ಲ. ಹಿಡಿದ ಹಟ ಸಾಧಿಸದೆ ಬಿಡೋದಿಲ್ಲ. ಅವಳಿಗೆ ಹೊಡ್ದ್ದು, ಬಡ್ದು, ಬುದ್ಧಿ ಹೇಳಿ ಸಾಕಾಗಿ ಹೋಗಿದೆ. ಮೊನ್ನೆ ತಾನೆ ನಾಯಿಗೆ ಹೊಡ್ದಂಗೆ ಹೊಡ್ದು ಮುಖ ಊದಿಸಿದ್ದೆ. ಆದರೂ ಬುದ್ಧಿ ಬಲಿಲ್ಲ. ಅವಳಿಗೆ ಹೊಡ್ದಷ್ಟು ಹಟ ಜಾಸ್ತಿಯಾಗ್ತಾ ಇದೆ. ನಾನು ಎಂದೂ ಕೂಡ ಅವಳಿಗೆ ಹೊಡೆದವನಲ್ಲ. ನನ್ಗೆ ಅವತ್ತು ಏನನ್ನಿಸಿ ಬಿಡ್ತೋ ಏನೋ ಮನಸೋಇಚ್ಚೆ ಹೊಡ್ದು ಬಿಟ್ಟೆ. ಅದೇ ಸಿಟ್ಟಿನಲ್ಲಿ ಅಭಿಮನ್ಯು ಜೊತೆ ಊಟಿಗೆ ಟೂರ್ ಹೋಗಿ ಬಂದಿದ್ದಾಳೆ. ಪುನಃ ಹೊಡೆದರೆ ಮತ್ತೇನು ಮಾಡ್ತಾಳೋ ಏನೋ? ಅವರಿಬ್ಬರನ್ನ ಬದಲಾಯಿಸೋದಕ್ಕೆ ಸಾಧ್ಯ ಇಲ್ಲ. ಅದಕೋಸ್ಕರ ಅಭಿಮನ್ಯು ಸಾಯಲೇ ಬೇಕು. ಈ ಸಂದರ್ಭದಲ್ಲಿ ನಾವು ಅವನ ಮೇಲೆ ಅನುಕಂಪ ತೋರಿದರೆ ಮತ್ತೆ ನಾವು ಕಣ್ಣೀರು ಸುರಿಸಿಕೊಂಡು ಕಾಲ ಕಳೆಯಬೇಕಾದ ದಿನ ಎದುರಾಗುತ್ತೆ ಮಗನನ್ನು ಅಭಿಮನ್ಯುವಿನ ಹತ್ಯೆಗೆ ಅಣಿಗೊಳಿಸಲು ಪ್ರಯತ್ನಿಸಿದರು.
ಆಯ್ತು. ಒಂದು ದಿನ ನಿಗದಿ ಮಾಡಿ ಮುಗಿಸಿ ಬಿಡುವ ತನ್ನ ನಿರ್ಧಾರ ಪ್ರಕಟಿಸಿದ ಪ್ರೀತಮ್. ಮಗ ತೆಗೆದುಕೊಂಡ ತೀರ್ಮಾನದಿಂದ ರಾಜಶೇಖರ್ ತುಂಬಾ ಸಂತಸಗೊಂಡರು. ಇನ್ನು ಅಂದುಕೊಂಡ ಬಹುತೇಕ ಕೆಲಸ ಮುಗಿದಂತೆ. ಆದರೆ, ಒಬ್ಬ ಮನುಷ್ಯನನ್ನು ಹತ್ಯೆ ಮಾಡುವುದು ಕುರಿ ಬಲಿಕೊಟ್ಟಷ್ಟು ಸುಲಭವಲ್ಲ ಎಂಬ ಅರಿವು ರಾಜಶೇಖರ್‌ಗೆ ಇತ್ತು. ಅದಕ್ಕಾಗಿ ಒಂದಷ್ಟು ಸಮಯ ಕಾಯಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ತಾಳ್ಮೆ ಎಂಬುದು ಇರಬೇಕು. ಹತ್ಯೆಯನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸಲು ಒಂದು ಯೋಜನೆ ರೂಪಿಸಬೇಕೆಂದು ನಿರ್ಧರಿಸಿದರು.
ಅಭಿಮನ್ಯುವನ್ನು ಹತ್ಯೆ ಮಾಡೋದಕ್ಕೆ ಒಂದೆರಡು ನಿಮಿಷ ಸಾಕು. ಆದರೆ, ಹತ್ಯೆಗೆ ಬೇಕಾದ ಸಿದ್ಧತೆ ಕೈಗೊಳ್ಳಬೇಕಾದರೆ ತಿಂಗಳುಗಟ್ಟಲೇ ಪರಿಶ್ರಮ ಪಡಬೇಕು. ಅತ್ಯಂತ ತಾಳ್ಮೆ ವಹಿಸಿ ಈ ಕೆಲಸ ಮಾಡಿ ಮುಗಿಸಬೇಕು. ನಾಳೆಯಿಂದಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು. ಅಭಿಮನ್ಯು ದಿನನಿತ್ಯ ರಾತ್ರಿ ಒಂಬತ್ತು ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಾನೆ. ಆ ಸಮಯದಲ್ಲಿ ಜನ ಸಂಚಾರ ಅಲ್ಪಸ್ವಲ್ಪ ಇದ್ದೇ ಇರುತ್ತದೆ. ಅದು ಹತ್ಯೆಗೆ ಸೂಕ್ತವಾದ ಸಮಯ ಅಲ್ಲ. ಸಾಮಾನ್ಯವಾಗಿ ವಾರದಲ್ಲಿ ಒಂದುಸಲ ಸ್ನೇಹಿತರೊಂದಿಗೆ ಕುಡಿದು ತೂರಾಡಿದ ನಂತರ ಒಬ್ಬನೇ ಸರಿಸುಮಾರು ಹನ್ನೊಂದರಿಂದ ಹನ್ನೊಂದೂವರೆ ಗಂಟೆಯೊಳಗೆ ಮನೆಗೆ ಹೋಗುತ್ತಾನೆ. ಅದು ಅತ್ಯಂತ ಸೂಕ್ತವಾದ ಸಮಯ. ಆ ಸಮಯದಲ್ಲಿ ಯಾರೂ ಕೂಡ ಇರೋದಿಲ್ಲ. ಜೊತೆಗೆ ಸರಿಯಾಗಿ ಕುಡಿದು ತೂರಾಡುತ್ತಾ ಇತಾನೆ. ಸರಿಯಾಗಿ ಹಿಂಬದಿಯಿಂದ ದೊಣ್ಣೆಯಿಂದ ತಲೆಯ ಭಾಗಕ್ಕೆ ಒಂದು ಬಲವಾದ ಏಟು ಕೊಟ್ಟರೆ ಅಷ್ಟೇ ಸಾಕು. ಅವನ ಕತೆ ಮುಗಿದಂತೆ. ಅಂದುಕೊಂಡ ರಾಜಶೇಖರ್ ತನ್ನ ಕಾರ್ಯಯೋಜನೆಯನ್ನು ಮಗನಿಗೂ ಕೂಡ ವಿವರಿಸಿದರು.
ಅಪ್ಪ ನೀವು ಹೇಳ್ತಾ ಇರೋದೇನೋ ಸರಿ ಇದೆ. ಆದರೆ, ಅವನು ಬರೋ ಟೈಮಿಂಗ್ಸ್ ತಿಳ್ಕೊಳ್ಳೋದಕ್ಕೆ ದಿನಾ ಅವನ ಹಿಂದೆ ಬಿದ್ರೆ ಅವನಿಗೆ ಸಂದೇಹ ಬರೋದಿಲ್ವ? ತನ್ನ ಸಂದೇಹ ನಿವಾರಿಸಿಕೊಳ್ಳಲು ಕೇಳಿದ.
ಅವನ ಹಿಂದೆ ನಾವೇಕೆ ಸುತ್ಬೇಕು? ನಾವಿಬ್ರು ಪ್ರತಿದಿನ ರಾತ್ರಿ ಒಂಭತ್ತು ಗಂಟೆಯಾಗುತ್ತಿದ್ದಂತೆ ಮನೆಯಿಂದ ಜಾಗ ಖಾಲಿ ಮಾಡ್ಬೇಕು. ನಿನ್ನ ಅಮ್ಮ ಏನಾದ್ರು ಕೇಳಿದ್ರೆ ಟೌನ್‌ಗೆ ಸುತ್ತಾಡ್ಲಿಕ್ಕೆ ಹೋಗ್ತಾ ಇದ್ದೇವೆ ಅಂಥ ಹೇಳಿದ್ರೆ ಆಯ್ತು. ಕಾರ್ ಒಳಗೆನೇ ಕೂತ್ಕೊಂಡು ಅಭಿಮನ್ಯು ಎಷ್ಟುಗಂಟೆಗೆ ಬಾಗಿಲು ಹಾಕ್ತಾನೆ, ಎಲ್ಲಿಗೆ ಹೊರಡ್ತಾನೆ ಎಂದು ಗಮನಿಸ್ಬೇಕು. ರಾತ್ರಿ ಒಂಭತ್ತು ಗಂಟೆಗೆ ಬಾಗಿಲೆಳೆದು ಮನೆಗೆ ಹೊರಟ್ರೆ ಅವತ್ತು ಸುಮ್ನೆ ಇದ್ರೆ ಆಯ್ತು. ಅವನು ವಾರದಲ್ಲಿ ಯಾವುದಾದರು ಒಂದು ದಿನ ಸ್ನೇಹಿತರ ಜೊತೆ ರಾತ್ರಿ ಅಗತ್ಯಕ್ಕಿಂತ ಹೆಚ್ಚು ಹೊತ್ತು ಪಾರ್ಟಿಯಲ್ಲಿ ಕಳೆಯುತ್ತಾನೆ. ಆ ದಿನವನ್ನು ಸದುಪಯೋಗ ಪಡಿಸಿಕೊಂಡ್ರೆ ಸಾಕು. ಅವನನ್ನ ದಿನಾ ಹಿಂಬಾಲಿಸಿಕೊಂಡು ಹೋಗುವ ಅವಶ್ಯಕತೆಯೇನು ಇಲ್ಲ. ದೂರದಿಂದಲೇ ಎಲ್ಲವನ್ನು ಗಮನಿಸಿದರೆ ಸಾಕು. ಅವನನ್ನ ಹಿಂಬಾಲಿಸೋದು ಏನಿದ್ರೂ ಜವರಾಯ ಅವನಿಗೋಸ್ಕರ ಬರೆದಿಟ್ಟ ಕೊನೆ ದಿನದಂದೇ ಅಂದ ರಾಜಶೇಖರ್ ಜೋರಾಗಿ ನಕ್ಕರು.
ಅಭಿಮನ್ಯುವಿನ ಹತ್ಯೆಗೆ ಮಗನನ್ನು ಒಪ್ಪಿಸಿದ ನಂತರ ಮನೆಗೆ ಕರೆದೊಯ್ದರು. ಪ್ರೀತಮ್ ಮನೆಗೆ ಬಾರದೆ ಹಲವು ವರ್ಷಗಳೇ ಸರಿದು ಹೋಗಿತ್ತು. ಮನೆಗೆ ಬಂದ ಮಗನನ್ನು ಆತ್ಮೀಯವಾಗಿ ಆಲಂಗಿಸಿಕೊಂಡ ಲೀಲಾವತಿ ಇಷ್ಟು ವರ್ಷ ಕಳೆದ ನಂತರವಾದರೂ ಮನೆಯ ನೆನಪಾಯ್ತಲ್ಲ? ಅದು ನಮ್ಮ ಪುಣ್ಯ. ಬೆಂಗಳೂರಿಗೆ ಹೋಗಿ ಸೇಕೊಂಡ ನಂತರ ಅಪ್ಪ, ಅಮ್ಮನ ನೆನಪು ಒಂದು ದಿನವೂ ಕಾಡ್ಲಿಲ್ವ? ಎಷ್ಟೊಂದು ಸೊರಗಿ ಹೋಗಿದ್ದೀಯ ನೋಡು. ಅಲ್ಲಿ ಹೊತ್ತಿಗೆ ಸರಿಯಾಗಿ ಊಟ ಮಾಡೋದಿಲ್ಲ ಅಂಥ ಕಾಣುತ್ತೆ. ಬೆಂಗಳೂರು ಬಿಟ್ಟುಬಂದು ಇಲ್ಲೇ ಹಾಯಾಗಿ ಇಬೊಹುದಲ್ಲ? ನೀನು ಇಲ್ಲಿದ್ರೆ ನಿಮ್ಮಪ್ಪನ ಹೊರೆ ಕೂಡ ಸ್ವಲ್ಪ ಕಡಿಮೆ ಆದಂತೆ ಆಗುತ್ತೆ ಅಂದರು.
ಈಗ ತಾನೆ ಮನೆಗೆ ಬಂದಿದ್ದಾನೆ. ಅವನ ಹತ್ರ ನೂರಾರು ಪ್ರಶ್ನೆ ಕೇಳಿ ತಲೆ ತಿನ್ಬೇಡ. ಒಂದೆರಡು ಕಪ್ ಕಾಫಿ ತಂಗೊಂಡು ಬಾ. ಅವನು ಆಯಾಸ ನೀಗಿಸಿಕೊಳ್ಳಲಿ ಅಂದರು ರಾಜಶೇಖರ್.
ಅಡುಗೆ ಮನೆಗೆ ತೆರಳಿದ ಲೀಲಾವತಿ ಎರಡು ಕಪ್ ಕಾಫಿಯೊಂದಿಗೆ ಹಿಂತಿರುಗಿದರು. ಕಾಫಿ ಕುಡಿಯುತ್ತಾ ಅಕ್ಷರಳ ವಿಚಾರವನ್ನು ಕೆದಕಿದ ಪ್ರೀತಮ್. ಏನಮ್ಮ, ಅಕ್ಷರ ಹೇಗಿದ್ದಾಳೆ? ಯಾರೋ ಬೀಸಿದ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ ಅಂತ ಅಪ್ಪ ಹೇಳಿದ್ರು. ಅಪ್ಪ ಅವರಿಬ್ಬರ ಪ್ರೀತಿಗೆ ಮಂಗಳ ಹಾಡಿ ಬೇರೊಂದು ಹುಡುಗನೊಂದಿಗೆ ಮದ್ವೆ ಮಾಡೋದಕ್ಕೆ ನೋಡ್ತಾ ಇದ್ದಾರೆ. ಈಗ ಪ್ರೀತಿ ಮಾಡಿ ಮದ್ವೆಯಾಗೋದೆಲ್ಲ ಸಾಮಾನ್ಯ ವಿಚಾರ. ಹುಡುಗ ಬಡವನಾದರೇನು? ಬುದ್ಧಿ ಚೆನ್ನಾಗಿದ್ದರೆ ಅಷ್ಟೇ ಸಾಕು. ಮದ್ವೆ ಮಾಡಿಸಿಕೊಡುವ ಎಂದು ಅಭಿಮನ್ಯುವಿನ ಹತ್ಯೆ ನಡೆದ ನಂತರ ಅಮ್ಮನಿಗೂ ಕೂಡ ತಮ್ಮ ಮೇಲೆ ಸಂಶಯ ಬರಬಾರದೆಂಬ ಉದ್ದೇಶದಿಂದ ಇಬ್ಬರನ್ನು ಒಂದುಗೂಡಿಸುವ ಮಾತುಗಳನ್ನಾಡಿದ.
ಮಗನ ಮಾತು ಕೇಳಿ ರಾಜಶೇಖರ್ ತೀವ್ರ ಕಳವಳಗೊಂಡರು. ಈಗತಾನೆ ಅಭಿಮನ್ಯುವಿನ ಹತ್ಯೆಗೆ ಒಪ್ಪಿಕೊಂಡವನು ಮನೆಗೆ ಬರುವಷ್ಟರೊಳಗೆ ತನ್ನ ನಿಲುವು ಬದಲಾಯಿಸಿಬಿಟ್ಟನಲ್ಲ? ಎಂದು ಆತಂಕಕ್ಕೀಡಾದರು. ತಾನು ರೂಪಿಸಿದ ಅಭಿಮನ್ಯುವಿನ ಹತ್ಯೆಯ ಸಂಚಿನ ವಿಚಾರ ಎಲ್ಲಾದರು ಲೀಲಾವತಿಯ ಮುಂದೆ ತೆರೆದಿಟ್ಟುಬಿಡ್ತಾನೋ ಎಂದು ಕಳವಳಗೊಂಡು ಕುಳಿತಲ್ಲಿಯೇ ಪ್ರೀತಮ್ ಕಡೆಗೆ ನೋಡಿ ಏನು ಹೇಳ್ತಾ ಇದ್ದೀಯೋ ಎಂದು ಕೈ ಸನ್ನೆಯ ಮೂಲಕ ಕೇಳಿದರು. ಏನಿಲ್ಲ, ಎಲ್ಲಾ ನಾಟಕ. ನೀವು ಸುಮ್ನೆ ಇರಿ ಎಂದು ಪ್ರೀತಮ್ ಕೈ ಹಾಗೂ ಕಣ್ಸನ್ನೆ ಮೂಲಕ ಹೇಳಿದಾಗ ರಾಜಶೇಖರ್ ಒಮ್ಮೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೂ, ಎದೆಯೊಳಗಿದ್ದ ತಳಮಳ ತಿಳಿಗೊಳ್ಳದೆ ಮಗನನ್ನು ಹೊರಗೆ ಕರೆದೊಯ್ದು ನಿನ್ಗೇನು ತಲೆಗಿಲೆ ಕೆಟ್ಟಿದೆಯಾ? ಎಂದು ಬೈಯ್ದು ಬುದ್ಧಿ ಹೇಳಿದರು.
ನೀವು ಯಾಕೆ ಇಷ್ಟೊಂದು ಆತಂಕ ಪಡ್ತಾ ಇದ್ದೀರ? ಅಭಿಮನ್ಯು ಹತ್ಯೆಯಾದ ವಿಚಾರ ಗೊತ್ತಾದ್ರೆ ಅಕ್ಷರ, ಅಮ್ಮ ಇಬ್ರೂ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡ್ತಾರೆ. ಅಭಿಮನ್ಯು ಬಗ್ಗೆ ಎಲ್ಲಿಲ್ಲದ ಕಳಕಳಿಯನ್ನು ಈ ಸಂದರ್ಭ ತೋರಿಸ್ಬೇಕು. ಇಲ್ದಿದ್ರೆ ನಮ್ಗೇ ಆಪತ್ತು. ನೀವು ಭಯ ಪಡ್ಬೇಡಿ. ಎಲ್ಲವನ್ನೂ ನಾನೇ ನಿಭಾಯಿಸ್ತೇನೆ ರಾಜಶೇಖರ್ ಮನದಲ್ಲಿ ಕವಿದುಕೊಂಡಿದ್ದ ಆತಂಕವನ್ನು ತಿಳಿಗೊಳಿಸಿದ ಪ್ರೀತಮ್.
ಮತ್ತೆ ಮನೆಯೊಳಗೆ ಬಂದ ರಾಜಶೇಖರ್, ಮಗಳನ್ನು ಅಭಿಮನ್ಯುವಿಗೆ ಕೊಟ್ಟು ಮದ್ವೆ ಮಾಡಿದ್ರೆ ಹೇಗೆ? ಎಂದು ಲೀಲಾವತಿಯನ್ನ ಕೇಳಿ ಅಚ್ಚರಿ ಮೂಡಿಸಿದರು.
ಗಂಡನ ನಿರ್ಧಾರ ಕೇಳಿ ಲೀಲಾವತಿ ಬೆಚ್ಚಿಬಿದ್ದರು. ಮಗಳ ಜೀವನದೊಂದಿಗೆ ಈ ಮನುಷ್ಯ ಚೆಲ್ಲಾಟ ಆಡುತ್ತಿದ್ದಾನಲ್ಲ? ಅಂದುಕೊಂಡು ಕಳವಳಗೊಂಡರು. ಮೊನ್ನೆ ಮೊನ್ನೆ ತಾನೇ ಮಗಳನ್ನ ನಿಖಿಲ್‌ಗೆ ಕೊಟ್ಟು ಮದ್ವೆ ಮಾಡಿಸೋದಕ್ಕೆ ಎರಡು ಕಡೆ ಒಪ್ಪಿಗೆಯಾಗಿದೆ. ಅದೂ ಅಲ್ದೆ ಮಗಳ ಕೈಯಿಂದ ಇನ್ನೆಂದಿಗೂ ಅಭಿಮನ್ಯುವಿನೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿಸಿಯಾಗಿದೆ. ಒಂದ್ವೇಳೆ ಮಗಳನ್ನ ಅಭಿಮನ್ಯುವಿಗೆ ನಾವೇ ಕೊಟ್ಟು ಮದುವೆ ಮಾಡಿಸಿದರೂ ಕೂಡ ಆಕೆಯ ಬದುಕು ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯವಿಲ್ಲ. ದೇವರ ಮುಂದೆ ಮಾಡಿದ ಪ್ರಮಾಣ ಉಲ್ಲಂಘಿಸೋದು ಸರಿಯಲ್ಲ. ಒಂದ್ವೇಳೆ ಉಲ್ಲಂಘನೆ ಮಾಡಿದರೆ ಅವರ ಬದುಕು ನೆಮ್ಮದಿಯಾಗಿ ಇರೋದಿಲ್ಲ ಎಂದು ತಿಳಿದು ತೀವ್ರ ಆತಂಕಕ್ಕೆ ಒಳಗಾಗಿ ರಾಜಶೇಖರ್ ಕಡೆಗೆ ದೃಷ್ಟಿಹಾಯಿಸಿ ನಿಮ್ಗೇನು ಹುಚ್ಚು ಹಿಡ್ಕೊಂಡುಂಟಾ? ಮಗಳಿಗೆ ಮನಸ್ಸಿಗೆ ಬಂದಂಗೆ ಹೊಡ್ದು ಅವನ ಮತು ಬಿಡು ಅಂಥ ಹೇಳಿ ಅವರಿಬ್ಬರನ್ನ ದೂರ ಮಾಡಿ ಇದೀಗ ಪುನಃ ಒಂದು ಮಾಡ್ಲಿಕ್ಕೆ ನೋಡ್ತಾ ಇದ್ದೀರಲ್ಲ? ಮಗಳ ಮನಸ್ಸು ಏನು ಆಟದ ಮೈದಾನ ಅಂದ್ಕೊಂಡಿದ್ದೀರ? ಮಗಳು ಈಗ ಎಲ್ಲಾ ಮರೆತು ಹಾಯಾಗಿದ್ದಾಳೆ. ನಂದಕುಮಾರ್ ಮಗನಿಗೆ ಮಗಳನ್ನು ಕೊಟ್ಟು ಮದ್ವೆ ಮಾಡಿಕೊಡ್ತೇವೆ ಅಂಥ ಮಾತುಬೇರೆ ಕೊಟ್ಟಾಗಿದೆ. ಅದ್ಯಾವುದರ ಬಗ್ಗೆನೂ ನೀವು ಯೋಚನೆ ಮಾಡದೆ ಮನಸ್ಸಿಗೆ ತೋಚಿದ ಹಾಗೆ ಮಾತಾಡ್ತಾ ಇದ್ದೀರಲ್ಲ? ನನ್ಗಂತೂ ಇದು ಸರಿ ಕಾಣಿಸ್ತಾ ಇಲ್ಲ ಎಂದು ಗಂಡನ ಕೋರಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ನನ್ಗೂ ಕೂಡ ಮೊದ್ಲು ಹಾಗೆ ಅನ್ನಿಸಿತು. ಆದರೆ, ಏನ್ಮಾಡೋದು ಮಗಳು ಬದಲಾಗೋದಿಲ್ಲ ಅಂಥ ಗೊತ್ತಾದ ಮೇಲೆ ಇಂತಹ ಒಂದು ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಯಿತು. ಅವರಿಬ್ಬರಿಗೆ ದೂರ ಇದ್ದು ಬದುಕುವ ಶಕ್ತಿ ಇಲ್ಲ. ಮನೆಯಲ್ಲಿ ದೇವರ ಮುಂದೆ ನಿಂತು ಅಭಿಮನ್ಯುವನ್ನು ಮರೆತು ಬಿಡ್ತೇನೆ ಅಂಥ ಪ್ರತಿಜ್ಞೆ ಮಾಡಿದವಳು ನಿನ್ನೆತಾನೇ ಊಟಿಗೆ ಅಭಿಮನ್ಯು ಜೊತೆ ಟೂರ್ ಹೋಗಿ ಬಂದಿದ್ದಾಳೆ. ಅಷ್ಟೊಂದು ಮುಂದುವರೆದು ಬಿಟ್ಟಿದ್ದಾಳೆ. ಮಗಳು ಇನ್ನು ನಮ್ಮ ಕೈಗೆ ಸಿಗುವ ಲಕ್ಷಣ ಕಾಣ್ತಾ ಇಲ್ಲ. ಅವಳು ಇಷ್ಟಪಟ್ಟವನೊಂದಿಗೆ ಮದ್ವೆ ಮಾಡಿ ಮುಗಿಸಿ ಬಿಡುವ. ಅಭಿಮನ್ಯುವಿನಲ್ಲಿ ಬಡತನ ಇಬೊಹುದು. ಆದರೆ, ಒಳ್ಳೆಯ ಗುಣಗಳಿವೆ. ಅಷ್ಟು ಸಾಕು. ಮದ್ವೆಯಾದ ನಂತರ ಅವನಿಗೆ ನಾವು ಒಂದಷ್ಟು ಆರ್ಥಿಕ ನೆರವು ನೀಡಿದರೆ ಆಯ್ತು. ಇಬ್ಬರು ಸುಖವಾಗಿ ಬದುಕು ನಡೆಸ್ತಾರೆ. ತಾನು ರೂಪಿಸಿದ ಕಾಯತಂತ್ರದ ಬಗ್ಗೆ ಲೀಲಾವತಿಗೆ ಯಾವುದೇ ರೀತಿಯಲ್ಲಿಯೂ ಸಂಶಯಬಾರದಿರಲಿ ಎಂದು ಮಗ ನಟಿಸಿದ ರೀತಿಯಲ್ಲಿಯೇ ಯಶಸ್ವಿಯಾಗಿ ನಟಿಸಿದರು.
ಅದೇನು ಮಾಡ್ಬೇಕೂಂತ ಇದ್ದೀರೋ ಮಾಡಿ. ಆದರೆ, ನನ್ನ ಏನು ಕೇಳೋದಕ್ಕೆ ಬಬೇಡಿ. ನನ್ಗೆ ಮಗಳ ಭವಿಷ್ಯ ಮುಖ್ಯ. ಅವಳು ಚೆನ್ನಾಗಿಬೇಕಷ್ಟೆ. ಅವಳ ಒಳಿತಿಗೆ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ತಾನು ಬದ್ಧ. ಆದರೆ, ನಂದಕುಮಾರ್‌ಗೆ ಈ ವಿಚಾರ ಹೇಗೆ ಹೇಳ್ಬೇಕೂಂತ ತೋಚುತ್ತಿಲ್ಲ ಕಳವಳ ತೋಡಿಕೊಂಡರು ಲೀಲಾವತಿ.
ನೀನ್ಯಾಕೆ ಅದರ ಬಗ್ಗೆ ಚಿಂತೆ ಮಾಡ್ಕೊತ್ತಿಯ? ಅಷ್ಟಕ್ಕೂ ನಂದಕುಮಾರ್ ಮಗನಿಗೆ ನಮ್ಮ ಮಗಳನ್ನು ಕೊಟ್ಟು ಮದ್ವೆ ಮಾಡ್ಬೇಕೂಂತ ಏನಿದೆ? ಅವನಿಗೆ ಎಲ್ಲಾ ವಿಚಾರ ನಾನೇ ಹೇಳ್ತೇನೆ. ಅವನು ಒಪ್ಪಿಕೊಳ್ಳದೆ ಹೋದ್ರೂ ಕೂಡ ನನ್ಗೇನು ಚಿಂತೆ ಇಲ್ಲ. ನನ್ನ ಮಗಳ ಭವಿಷ್ಯ ನನ್ಗೆ ಮುಖ್ಯ ಅಷ್ಟೆ ಒಳ್ಳೆಯ ದಿನ ನೋಡಿ ಮಗಳ ಮದುವೆ ಮಾಡಿ ಮುಗಿಸಬೇಕು ಅಂದರು.
* * *
ಮಗಳೇ…, ಅಂತಿಮವಾಗಿ ನಿಮ್ಮಿಬ್ಬರ ಪ್ರೀತಿಯೇ ಗೆದ್ದಿದೆ. ನಿಮ್ಮಿಬ್ಬರ ಪ್ರೀತಿಯ ಎದುರು ನಮ್ಮ ಹಟ ಸಾಧನೆ ಸೋತುಹೋಗಿದೆ. ನಿಮ್ಮಿಬ್ಬರ ಪ್ರೀತಿಯನ್ನು ವಿವಾಹ ಬಂಧನಕ್ಕೆ ಒಳಪಡಿಸಬೇಕೂಂತ ನಾವೆಲ್ಲರು ಸೇರಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಮಗಳನ್ನು ನಂಬಿಸಿ ಮನೆಗೆ ಕರೆತರಬೇಕೆಂದು ನಿರ್ಧರಿಸಿದ ರಾಜಶೇಖರ್ ಮೈಸೂರಿನ ಕಡೆಗೆ ಪಯಣ ಬೆಳೆಸಿದರು. ಜೊತೆಗೆ ಲೀಲಾವತಿ ಕೂಡ ಇದ್ದರು. ಅಂದು ಎರಡನೇ ಶನಿವಾರವಾಗಿದ್ದರಿಂದ ಅಕ್ಷರಳಿಗೆ ಶನಿವಾರ, ಭಾನುವಾರ ಎರಡು ದಿನ ರಜೆ ಇತ್ತು. ಎರಡು ದಿನ ಸಾಕು ಮಗಳ ಮನಗೆಲ್ಲೋದಕ್ಕೆ ಅಂದುಕೊಂಡ ರಾಜಶೇಖರ್ ತಾನು ಚಾಲಿಸುತ್ತಿದ್ದ ಕಾರನ್ನು ಹಾಸ್ಟೇಲ್ ಮುಂದೆ ತಂದು ನಿಲ್ಲಿಸಿ ಒಳಗೆ ತೆರಳಿದರು. ಮಗಳನ್ನು ಕಂಡೊಂಡನೆ ರಾಜಶೇಖರ್ ತಬ್ಬಿಕೊಂಡು ಹೇಗಿದ್ದೀಯ ಮಗಳೇ ಎಂದು ಆತ್ಮೀಯವಾಗಿ ಕೇಳಿದರು.
ಚೆನ್ನಾಗಿದ್ದೀನಿ ಅಪ್ಪ, ನೀವೇಗಿದ್ದೀರಾ? ಆಕೆಯ ಪ್ರಶ್ನೆಯಲ್ಲಿ ಆತ್ಮೀಯತೆ ಇರಲಿಲ್ಲ. ಅಪ್ಪನ ಪ್ರಶ್ನೆಗೆ ಪ್ರತಿಯಾಗಿ ಏನಾದರು ಹೇಳಬೇಕಲ್ಲ ಎಂದು ನೀವೇಗಿದ್ದೀರ? ಎಂದು ಕೇಳಿ ಸುಮ್ಮನಾದಳು. ಅಷ್ಟಕ್ಕೂ ಆಕೆಗೆ ಅಪ್ಪನಿಂದ ಉತ್ತರವೇನು ಬೇಕಾಗಿರಲಿಲ್ಲ.
ನನ್ಗೇನು, ಯಾವತ್ತೂ ಚೆನ್ನಾಗಿಯೇ ಇತೇನೆ. ಬೆಂಗಳೂರಿನಿಂದ ನಿನ್ನಣ್ಣ ಬಂದಿದ್ದಾನೆ, ಮನೆಯಲ್ಲಿದ್ದಾನೆ. ಮನೆಯಲ್ಲಿ ನಿನ್ಗೊಂದು ಸಂತೋಷದ ವಿಷಯ ಕಾದಿದೆ. ಅದನ್ನ ಇಲ್ಲಿ ಮಾತ್ರ ಹೇಳೋದಿಲ್ಲ. ಆ ಸಂತೋಷದ ವಿಷಯ ನಿನ್ನ ಕಿವಿಗೆ ಬಿದ್ದೊಡನೆ ಸ್ವರ್ಗದಲ್ಲಿ ವಿಹರಿಸಿದಷ್ಟು ಸಂತೋಷವಾಗುತ್ತೆ ನಿನ್ಗೆ ಅಂದರು ರಾಜಶೇಖರ್.
ಅಂತಹ ಸಂತೋಷದ ವಿಚಾರ ಏನಿದೆ ಮನೆಯಲ್ಲಿ? ಕುತೂಹಲದಿಂದ ಕೇಳಿದಳು. ಜೊತೆಗೆ ಮನದೊಳಗೆ ಆತಂಕ ಕೂಡ ಕವಿದುಕೊಳ್ಳಲು ಪ್ರಾರಂಭಿಸಿತು. ಇಲ್ಲಿಂದ ಪುಸಲಾಯಿಸಿ ಮನೆಗೆ ಕರೆದೊಯ್ದು ಮತ್ತೆ ನನ್ನ ಜೀವ ತೆಗೆಯುತ್ತಾರೋ ಏನೋ? ಒಂದುವೇಳೆ ನಾನು ಅಭಿಮನ್ಯುವಿನೊಂದಿಗೆ ಊಟಿಗೆ ಹೋದ ವಿಚಾರವೇನಾದರೂ ಮನೆಗೆ ಗೊತ್ತಾಯ್ತಾ? ಎಂದು ಕಳವಳಗೊಂಡಳು.
ಏನು ಯೋಚ್ನೆ ಮಾಡ್ತಾ ಇದ್ದೀಯ? ಬೇಗ ರೆಡಿಯಾಗು, ಹೊರಡೋಣ ಲೀಲಾವತಿ ಆತುರ ತೋರಿದರು.
ಆಯ್ತು ಬತೇನೆ ಅಂದ ಅಕ್ಷರ ರೂಂಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಹೊರಟು ಬಂದಳು. ಮನೆಗೆ ಬಂದೊಡನೆ ಆಕೆಯನ್ನು ತುಂಬಾ ಪ್ರೀತಿ ವಾತ್ಸಲ್ಯದಿಂದ ನೋಡಿಕೊಂಡರು. ಅಪ್ಪಿ, ತಪ್ಪಿಯೂ ಒಂದು ಬೈಗುಳ ಆಕೆ ಕೇಳಲಿಲ್ಲ. ಮನೆಯಲ್ಲಿ ಮತ್ತೆ ನಗು, ಸಂಭ್ರಮ ತುಂಬಿಕೊಂಡಿತ್ತು.
ಮಗಳ ಬಳಿ ಬಂದು ಕುಳಿತುಕೊಂಡ ರಾಜಶೇಖರ್ ಏನಮ್ಮ, ಊಟಿ ಟೂರ್ ಹೇಗಿತ್ತು? ಎಂದು ಆತ್ಮೀಯವಾಗಿ ಕೇಳಿದರು. ಅಕ್ಷರಳಿಗೆ ಆ ಪ್ರಶ್ನೆ ಕೇಳಿದೊಡನೆ ಆಕಾಶವಾವೇ ಕಳಚಿ ಬಿದ್ದ ಅನುಭವವಾಯಿತು. ಇವತ್ತು ನನ್ನ ತಿಥಿ ಮಾಡದೆ ಬಿಡೋದಿಲ್ಲ. ಅದ್ಕೋಸ್ಕರನೇ ಕಕೊಂಡು ಬಂದಿದ್ದಾರೆಂದು ತಿಳಿದು ತರಗುಟ್ಟಿಹೋದಳು.
ಏನು ಊಟಿನಾ…? ಏನೂ ಗೊತ್ತಿಲ್ಲದವಳಂತೆ ನಟಿಸಿದಳು.
ಅಪ್ಪನ ಮುಂದೆನೇ ಸುಳ್ಳು ಹೇಳ್ತಾ ಇದ್ದೀಯ!? ನೀನು ಅಭಿಮನ್ಯು ಜೊತೆ ಊಟಿಗೆ ಹೋಗಿ ಬಂದ ವಿಚಾರ ಎಲ್ಲಾ ನನ್ಗೆ ಗೊತ್ತು. ನಿನ್ಗೆ ಅಭಿಮನ್ಯುವನ್ನು ಮರೆಯೋ ಶಕ್ತಿ ಇಲ್ಲ ಅಂಥ ನನ್ಗೆ ಅನ್ನಿಸ್ತಾ ಇದೆ. ಅದಕೋಸ್ಕರ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ. ಅದು ನಿನ್ನ-ಅಭಿಮನ್ಯುವಿನ ಮದ್ವೆ. ಈಗ ಸಂತೋಷನಾ? ಮುಗುಳ್ನಗೆ ಬೀರುತ್ತಾ ಕೇಳಿದರು.
ಏನು ಹೇಳಬೇಕೆಂದು ಆಕೆಗೆ ತೋಚಲಿಲ್ಲ. ಒಂದೆರಡು ಕ್ಷಣ ಹಾಗೆ ಕಲ್ಲಾಗಿ ಹೋದಳು. ಅಪ್ಪ ಹೇಳುತ್ತಿರುವುದು ಸತ್ಯನೋ ಅಥವಾ ಸುಳ್ಳೋ ಒಂದೂ ತಿಳಿಯದಾಯಿತು. ಅಪ್ಪ ತನ್ನಿಂದ ಎಲ್ಲಾ ಗುಟ್ಟು ತಿಳಿದುಕೊಳ್ಳಲು ಆಡುತ್ತಿರುವ ನಾಟಕ ಇರಬಹುದೆಂದು ಅಂಜಿ ಊಟಿ ಪ್ರವಾಸದ ವಿಚಾರ ಒಪ್ಪಿಕೊಳ್ಳಲಿಲ್ಲ.
ನಾನು ಯಾರ ಜೊತೆನೂ ಟೂರ್ ಹೋಗಿಲ್ಲ. ಸುಮ್ನೆ ಕಲ್ಪನೆ ಮಾಡ್ಕೊಂಡು ಏನೆಲ್ಲ ಮಾತಾಡ್ಬೇಡಿ. ನಾನು ಎಲ್ಲ ಮರೆತು ನಿಖಿಲ್‌ನೊಂದಿಗೆ ಮದ್ವೆಯಾಗೋದಕ್ಕೆ ತಯಾರಾಗಿದ್ದಾನೆ. ಪುನಃ ನನ್ನ ಮನಸ್ಸು ಕೆಡಿಸ್ಬೇಡಿ
ಮಗಳು ಎಷ್ಟೊಂದು ಚೆಂದವಾಗಿ ಅಭಿನಯಿಸಲು ಕಲಿತುಕೊಂಡಿದ್ದಾಳೆ ಅಂದುಕೊಂಡರು ರಾಜಶೇಖರ್. ಹಿಡಿದು ನಾಲ್ಕು ಬಾರಿಸುವಷ್ಟು ಸಿಟ್ಟು ಬಂತಾದರೂ ಸಹಿಸಿಕೊಂಡರು. ಈಗ ಕಾರ್ಯಯೋಜನೆ ಬದಲಾಗಿದೆ. ಈಗ ಕೋಪ ತೋರ್ಪಡಿಸಿದರೆ ಯೋಜನೆ ಎಲ್ಲ ತಲೆಕೆಳಗಾಗುತ್ತದೆ ಎಂದು ತಿಳಿದು ಕೋಪವನ್ನೆಲ್ಲ ಅದುಮಿಟ್ಟು ಮಗಳನ್ನು ಮೆಚ್ಚಿಸುವ ಕಾರ್ಯಕ್ಕೆ ಮುಂದಾದರು.
ಅಕ್ಷರ, ಕೋಪ ಮಾಡ್ಕೋ ಬೇಡ. ನಿನ್ಗೆ ನನ್ನ ಮಾತಿನಲ್ಲಿ ಇನ್ನೂ ನಂಬಿಕೆ ಬಂದಿಲ್ಲ ಅಂತ ಕಾಣುತ್ತೆ. ಇದಕ್ಕೆಲ್ಲ ಪ್ರೀತಮ್ ಕಾರಣ. ಅವನೇ ಮನೆಗೆ ಬಂದು ನಮ್ಮಿಬ್ಬರನ್ನು ಮನವೊಲಿಸಿ ಅಭಿಮನ್ಯುವಿನೊಂದಿಗೆ ನಿನ್ನ ಮದ್ವೆ ನಡೆಸೋದಕ್ಕೆ ಮುಂದೆ ನಿಂತಿದ್ದಾನೆ. ನಿನ್ನ ಸಂತೋಷನೇ ನಮ್ಮ ಸಂತೋಷ. ಇದುವರೆಗೆ ನಡೆದ ಘಟನೆಗಳನ್ನೆಲ್ಲ ಒಂದು ಕೆಟ್ಟ ಕನಸು ಅಂತ ತಿಳ್ಕೊಂಡು ಮರೆತು ಬಿಡು. ಇನ್ನು ಮುಂದೆ ನೀನು ಅಭಿಮನ್ಯುವಿನೊಂದಿಗೆ ಹಾಯಾಗಿಬೊಹುದು. ತುಂಬಾ ಸೌಮ್ಯವಾಗಿ ತಮ್ಮ ಮಾತು ಮುಗಿಸಿದರು.
ಅಪ್ಪ ಕೈಗೊಂಡ ನಿರ್ಧಾರ ಕೇಳಿ ಅಕ್ಷರ ನಾಚಿನೀರಾಗಿ ಥ್ಯಾಂಕ್ಯೂ ಅಪ್ಪ ಎಂದು ಹೇಳಿ ಬೆಡ್‌ರೂಂ ಕಡೆಗೆ ಓಡಿದಳು. ಅವಳಿಗಾದ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಬೆಡ್‌ರೂಂನೊಳಗೆ ಕುಣಿದು ಕುಪ್ಪಳಿಸಿದಳು. ಅಭಿಮನ್ಯು ಏನಾದರೂ ಬಳಿ ಇದ್ದಿದ್ದರೆ ಬಾಚಿ ತಬ್ಬಿ ಮುದ್ದಾಡಿ ಬಿಡ್ಬೊಹುದಿತ್ತು ಅಂದುಕೊಂಡಳು. ‘ಅಷ್ಟಕ್ಕೂ ಅಪ್ಪ ಇಷ್ಟೊಂದು ಬೇಗ ಮನಸ್ಸು ಬದಲಾಯಿಸಿಕೊಳ್ಳೋದಕ್ಕೆ ಕಾರಣವಾದರೂ ಏನು? ನಾನು ಎಷ್ಟು ಗೋಗರೆದುಕೊಂಡರೂ ಕೇಳಲಿಲ್ಲ. ಇದೀಗ ಏಕಾಏಕಿ ಮದುವೆ ಮಾಡಿಸ್ತೇನೆ ಅಂತಿದ್ದಾರಲ್ಲ? ಏತಕಾಗಿ ಮನಸ್ಸು ಬದಲಾಯಿಸಿದರು? ಗೊಂದಲದಲ್ಲಿ ಮುಳುಗಿದಳು. ಅಪ್ಪ ಮನಸ್ಸು ಬದಲಾಯಿಸಿದ ವಿಚಾರ ನನ್ಗೇಕೆ? ನನ್ಗೆ ಅಭಿಮನ್ಯು ಸಿಕ್ಕಿದನಲ್ಲ ಅಷ್ಟೇ ಸಾಕು ಅಂದುಕೊಂಡಳು.
ಮಗಳ ಮೊಗದಲ್ಲಿ ಮತ್ತೆ ನಗುಕಂಡು ಲೀಲಾವತಿಗೆ ತುಂಬಾ ಸಂತೋಷವಾಯಿತು. ಮುಂದೆ ನಡೆಯುವ ದೊಡ್ಡ ದುರಂತದ ಅರಿವು ಮಾತ್ರ ಆಕೆಗೆ ಇರಲಿಲ್ಲ. ಮನೆಯಲ್ಲಿ ಮತ್ತೆ ಸಂಭ್ರಮ ತುಂಬಿಕೊಂಡ ಕಾರಣ ಲೀಲಾವತಿ ಲವಲವಿಕೆಯಿಂದ ಮನೆ ತುಂಬ ಓಡಾಡುತ್ತಿದ್ದರು
ಈ ಸಂತಸದ ಕ್ಷಣವನ್ನು ಅಭಿಮನ್ಯು ಕೂಡ ನಮ್ಮೊಂದಿಗೆ ಹಂಚಿಕೊಳ್ಳಲಿ. ಅವನನ್ನ ಮನೆಗೆ ಬರ ಮಾಡಿಕೊಳ್ಳುವ. ವಿಷಯ ಎಲ್ಲಾ ಗೊತ್ತಾದ್ರೆ ಅವನೂ ಕೂಡ ಸಂತೋಷ ಪಡ್ತಾನೆ. ಅಭಿಮನ್ಯುವನ್ನು ಮನೆಗೆ ಬರೋದಕ್ಕೆ ಹೇಳು ಎಂದು ಅಕ್ಷರ ಬಳಿ ಕೇಳಿಕೊಂಡರು ರಾಜಶೇಖರ್.
ಆ ಒಂದು ಮಾತಿಗೋಸ್ಕರ ಅಕ್ಷರ ಅಷ್ಟು ಹೊತ್ತು ಕಾಯುತ್ತಿದ್ದಳು. ಅಭಿಮನ್ಯುವಿಗೆ ವಿಷಯ ತಿಳಿಸು ಎಂಬ ಮಾತು ಕೇಳಿದೊಡನೆ ಅಭಿಮನ್ಯುವನ್ನು ಮನೆಗೆ ಕಕೊಂಡು ಬತೇನೆ ಎಂದು ಹೊರಟು ನಿಂತ ಮಗಳನ್ನು ತಡೆದು ನಿಲ್ಲಿಸಿದ ರಾಜಶೇಖರ್, ಯಾಕೆ ಅಷ್ಟೊಂದು ದೂರ ಹೋಗ್ತಾ ಇದ್ದೀಯ. ಫೋನ್ ಮಾಡಿದ್ರೆ ಸಾಕು ಅವನೇ ಇಲ್ಲಿಗೆ ಬತಾನೆ ಅಂದರು.
ಇಷ್ಟೊಂದು ಸಂತೋಷದ ವಿಚಾರವನ್ನ ಫೋನಲ್ಲಿ ಹೇಳೋದು ಸರಿಯಲ್ಲ. ಅರ್ಧಗಂಟೆಯೊಳಗೆ ಹೋಗಿ ಕಕೊಂಡು ಬಂದು ಬಿಡ್ತೇನೆ. ನೀವು ಅಭಿಮನ್ಯುವನ್ನು ಸ್ವಾಗತ ಮಾಡೋದಕ್ಕೆ ತಯಾರಾಗಿರಿ ಎಂದು ಅಪ್ಪನ ಉತ್ತರಕ್ಕೂ ಕಾಯದೆ ಕಾರ್‌ಸ್ಟಾರ್ಟ್ ಮಾಡಿ ಹೊರಟು ಬಿಟ್ಟಳು.
ಅಕ್ಷರ ಕಾರಲ್ಲಿ ಬಂದದ್ದನ್ನು ಕಂಡು ಅಭಿಮನ್ಯುವಿಗೆ ತುಂಬಾ ಆಶ್ಚರ್ಯವಾಯಿತು. ಆಕೆ ತುಂಬಾ ಸಂತೋಷದಲ್ಲಿರುವಾಗ ಮಾತ್ರ ಕಾರು ಬಳಕೆ ಮಾಡುತ್ತಾಳೆ. ಇಲ್ಲವಾದರೆ ಕಾಲ್ನಡಿಗೆಯೇ ಆಕೆಗೆ ಪ್ರೀತಿ. ಒಟ್ಟಿನಲ್ಲಿ ಅಕ್ಷರ ತುಂಬಾ ಸಂತೋಷ ವಾಗಿದ್ದಾಳೆ ಅಂದುಕೊಂಡ ಅಭಿಮನ್ಯುವಿನ ಮನದೊಳಗೆ ಸಂಭ್ರಮ ಮನೆಮಾಡಿಕೊಂಡಿತು.
ಕಾರಿಳಿದು ಬಂದವಳೇ ಅಭಿಮನ್ಯುವನ್ನು ಕಚೇರಿಯೊಳಗೆ ಬಾಚಿ ತಬ್ಬಿಕೊಂಡು ಅಭಿ, ನಿನ್ಗೊಂದು ಸಂತೋಷದ ವಿಷಯ ಇದೆ ಅಂದಳು.
ನೀನು ಕಾರಲ್ಲಿ ಬರೋದನ್ನ ನೋಡಿ ಯಾವುದೋ ಸಂತೋಷದ ವಿಚಾರ ಇದೆ ಅಂತ ತಿಳ್ಕೊಂಡೆ. ಅಷ್ಟೊಂದು ಸಂತೋಷದ ವಿಚಾರ ಏನು? ಕುತೂಹಲದಿಂದ ಕೇಳಿದ.
ಸಂತೋಷದ ವಿಚಾರ ಅಷ್ಟಿಷ್ಟಲ್ಲ. ಬೆಟ್ಟದಷ್ಟು ದೊಡ್ಡದು. ಮನೆಯಲ್ಲಿ ನಮ್ಮಿಬ್ಬರ ಮದ್ವೆಗೆ ಗ್ರೀನ್‌ಸಿಗ್ನಲ್ ಸಿಕ್ಕಾಯ್ತು. ಇನ್ನು ಮದ್ವೆಯಾಗೋದೊಂದೇ ಬಾಕಿ. ಮದ್ವೆ ವಿಚಾರ ಮಾತಾಡೋದಕ್ಕೆ ಅಪ್ಪ ನಿನ್ನ ಮನೆಗೆ ಬರೋಕ್ಕೆ ಹೇಳಿದ್ದಾರೆ. ನಡಿ ಬೇಗ ಹೊರಡುವ ಅಂದ ಅಕ್ಷರ ಆತುರದಿಂದ ಅಭಿಮನ್ಯುವಿನ ಕೈ ಹಿಡಿದು ಕರೆದೊಯ್ಯಲು ಯತ್ನಿಸಿದಾಗ ಕೈ ಬಿಡಿಸಿಕೊಂಡ ಅಭಿಮನ್ಯು ನಿಮ್ಮಪ್ಪನ ಮಾತಿನ ಮೇಲೆ ನನ್ಗೆ ನಂಬಿಕೆ ಇಲ್ಲ. ಇದು ಕೂಡ ಅವರ ನಾಟಕದ ಮತ್ತೊಂದು ಭಾಗವಾಗಿಬೇಕು. ಈಗಾಗ್ಲೇ ನಾಟಕದ ಒಂದನೇ ಭಾಗ ಮುಗಿಸಿದ್ದಾರೆ. ಇದು ಎರಡನೆಯ ಭಾಗ ಅಷ್ಟೆ ಕೋಪದಿಂದ ಹೇಳಿದ.
ಅಭಿ, ಇಂಥಹ ಸಮಯದಲ್ಲಿ ಹೀಗೆಲ್ಲ ಮಾತಾಡೋದು ಸರಿಯಲ್ಲ. ಲೈಫಲ್ಲಿ ಇಂತಹ ಅವಕಾಶ ಯಾವತ್ತೂ ಸಿಗೋದಿಲ್ಲ. ದಯವಿಟ್ಟು ಇಲ್ಲ ಅನ್ಬೇಡ. ನೀನು ಬಲೇಬೇಕು. ಬೇಕಾದ್ರೆ ನಿನ್ನ ಕಾಲು ಹಿಡ್ಕೋತ್ತಿನಿ ಎಂದು ಕಾಲಿಗೆ ಬಿದ್ದು ಬೇಡಿಕೊಳ್ಳಲು ಮುಂದಾದ ಅಕ್ಷರಳನ್ನು ಮೇಲೆತ್ತಿದ ಅಭಿಮನ್ಯು ಏನಾಗಿದೆ ನಿನ್ಗೆ, ಹುಚ್ಚು ಹಿಡ್ಕೊಂಡುಂಟಾ? ಇಷ್ಟೊಂದು ಸಣ್ಣ ವಿಷಯಕ್ಕೆ ಕಾಲು ಹಿಡ್ಕೊಂಡು ಗೋಗರಿಯುವ ಅವಶ್ಯಕತೆ ಉಂಟಾ? ನಡಿ ಹೋಗುವ ಎಂದು ಕಾರು ಏರಿ ಕುಳಿತ.
ಕಾರು ಕಾಫಿ ಎಸ್ಟೇಟ್ ಒಳಗೆ ಸಾಗುತ್ತಾ ಮನೆಯ ಎದುರು ಬಂದು ನಿಂತಿತು. ಅಕ್ಷರ ಕಾರು ನಿಲ್ಲಿಸಿದವಳೇ ಮನೆ ಒಳಗೆ ಓಡಿ ಹೋಗಿ ಅಭಿಮನ್ಯು ಬಂದಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿದಳು. ಮನೆಯ ಹೊಸ್ತಿಲ ಬಳಿ ಬಂದು ನಿಂತಿದ್ದ ಅಭಿಮನ್ಯುವನ್ನು ರಾಜಶೇಖರ್ ಮನೆಯೊಳಗೆ ಕರೆದೊಯ್ದು ಕೂರಿಸಿದರು.
ಇನ್ನು ಮುಂದೆ ಈ ಮನೆ ನಿನ್ನ ಮನೆ ಇದ್ದಂತೆ. ಯಾವಾಗ ಬೇಕಾದ್ರೂ ಬಬೊಹುದು. ಇಷ್ಟು ದಿನ ಕೆಟ್ಟ ಘಳಿಗೆಯಲ್ಲಿ ಏನೆಲ್ಲ ನಡೆದು ಹೋಯ್ತು. ಈ ಕ್ಷಣದಿಂದ ನಿನ್ಗೆ ಶುಭ ಘಳಿಗೆ ಪ್ರಾರಂಭವಾಗಿದೆ. ಇನ್ನು ಮುಂದೆ ನಿನ್ನ ಬದುಕು ಮತ್ತಷ್ಟು ಸುಂದರವಾಗುತ್ತೆ. ಇಷ್ಟು ದಿನ ಅಕ್ಷರ ನಿನ್ನೊಂದಿಗೆ ಇದ್ದಳು. ಇನ್ನು ನಾವೂ ಕೂಡ ಜೊತೆಗಿತೇವೆ. ನೀನೇನು ಭಯ ಪಡ್ಬೇಡ ಮುಗ್ಧ್ದ ವ್ಯಕ್ತಿಯಂತೆ ನಟಿಸಿದರು ರಾಜಶೇಖರ್.
ಅಭಿಮನ್ಯುವಿಗೆ ಏನು ಮಾತಾಡಬೇಕೆಂದು ತೋಚದೆ ತಲೆತಗ್ಗಿಸಿದ. ದೂರದಲ್ಲಿ ಅಮ್ಮನ ಸೆರಗಿನ ಹಿಂದೆ ಅಡಗಿ ನಿಂತಿದ್ದ ಅಕ್ಷರ ಅಭಿಮನ್ಯುವನ್ನು ನೋಡುತ್ತಾ ಮುಂದಿನ ವೈವಾಹಿಕ ಜೀವನದ ಬಗ್ಗೆ ಸುಂದರವಾದ ಕನಸುಗಳನ್ನು ಕಾಣತೊಡಗಿದಳು.
ಒಂದೆರಡು ತಿಂಗಳು ಕಳೆದ ಬಳಿಕ ನಿಶ್ಚಿತಾರ್ಥ ಇಟ್ಟುಕೊಳ್ಳುವ. ಏನಂತಿಯ ಅಭಿಮನ್ಯು? ಕೇಳಿದರು ರಾಜಶೇಖರ್.
ಆಯ್ತು, ನೀವೇನಂತಿರೋ ಹಾಗೆ ಅಭಿಮನ್ಯು ತಗ್ಗಿಸಿದ ತಲೆ ಮೇಲೆತ್ತದೆ ವಿನಯದಿಂದ ಹೇಳಿದ.
ಲೀಲಾವತಿ…, ಊಟ ರೆಡಿಯಾಗಿದೆಯಾ? ಅಡುಗೆ ಮನೆಯೊಳಗೆ ತೆರಳಿದ್ದ ಲೀಲಾವತಿಯನ್ನು ಕೂಗಿ ಕೇಳಿದಾಗ ಗಂಡನ ಬಳಿಗೆ ಬಿರುಸಿನ ನಡಿಗೆ ಹಾಕುತ್ತಾ ಬಂದ ಲೀಲಾವತಿ ಊಟ ರೆಡಿಯಾಗಿದೆ. ಎಲ್ರೂ ಬನ್ನಿ ಒಟ್ಟಿಗೆ ಕೂತು ಊಟ ಮಾಡುವ ಅಂದರು.
ಅಕ್ಷರ ಅಭಿಮನ್ಯುವನ್ನು ಕುಳಿತಲ್ಲಿಂದ ಎಬ್ಬಿಸಿ ಡೈನಿಂಗ್‌ಹಾಲ್ ಕಡೆಗೆ ಕರೆದೊಯ್ದಳು. ಇಬ್ಬರು ಒಟ್ಟಿಗೆ ಕೂತು ಊಟ ಮಾಡಲು ತೊಡಗಿದರು. ಎಲ್ಲರೂ ಊಟದಲ್ಲಿ ತಲ್ಲೀನರಾಗಿದ್ದರು. ಆದರೆ, ರಾಜಶೇಖರ್ ಮಾತ್ರ ಅಭಿಮನ್ಯುವಿನ ಕಡೆಗೆ ದೃಷ್ಟಿ ನೆಟ್ಟಿದ್ದರು. ಬಹುಶಃ ನಮ್ಮ ಮನೆಯಲ್ಲಿ ಇದೇ ನಿನ್ಗೆ ಕೊನೆಯ ಊಟ. ಚೆನ್ನಾಗಿ ತಿನ್ನು. ಇನ್ನೇನು ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿ ಹೊರಟು ಬಿಡ್ತಿಯ. ಇರುವಷ್ಟು ದಿನ ಸಂತೋಷವಾಗಿರು ಎಂದು ರಾಜಶೇಖರ್ ಮನದಲ್ಲಿ ಅಂದುಕೊಂಡು ಸಂಭ್ರಮ ಪಡುತ್ತಿರುವುದುನ್ನು ಕಂಡ ಅಕ್ಷರ, ಅಪ್ಪ ತುಂಬಾ ಸಂತೋಷವಾಗಿದ್ದಾರೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ಅಪ್ಪ ಆ ರೀತಿ ನಡ್ಕೊಂಡಿರಬಹುದು. ಆದರೆ, ಅಪ್ಪ ತುಂಬಾ ಒಳ್ಳೆಯ ಮನುಷ್ಯ ಅಂದುಕೊಂಡಳು.
ಊಟ ಮುಗಿಸಿಕೊಂಡು ಅಭಿಮನ್ಯು ಹಾಗೂ ಅಕ್ಷರ ಇಬ್ಬರನ್ನು ಒಟ್ಟಿಗೆ ಮನೆಯ ಅಂಗಳಕ್ಕೆ ಕರೆದೊಯ್ದ ರಾಜಶೇಖರ್, ಮದುವೆಯ ಬಗ್ಗೆ ಸಾಕಷ್ಟು ಹೊತ್ತು ಚರ್ಚೆ ನಡೆಸಿದರು. ಇದುವರೆಗೆ ಯಾರೂ ಕೂಡ ನಡೆಸದಷ್ಟು ಅದ್ಧೂರಿಯಾಗಿ ನಿಮ್ಮಿಬ್ಬರ ಮದ್ವೆ ಮಾಡಿ ಮುಗಿಸ್ತೇನೆ ಎಂದು ರಾಜಶೇಖರ್ ತಮ್ಮ ಶ್ರೀಮಂತಿಕೆಯ ದರ್ಪ ತೋರ್ಪಡಿಸಿದರು.
ಮದ್ವೆಯನ್ನು ಅದ್ಧೂರಿಯಾಗಿ ಮಾಡುವಷ್ಟು ದೊಡ್ಡವನಲ್ಲ ಸಾರ್ ನಾನು. ನನ್ನ ಕೈಲಾದಷ್ಟು ಖರ್ಚು ಮಾಡಿ ಮದ್ವೆ ಮಾಡ್ಕೋತ್ತಿನಿ. ಅದ್ಧೂರಿಯಾಗಿ ಮದ್ವೆ ಮಾಡಿ ಏನು ಸುಖ ಹೇಳಿ? ಅಭಿಮನ್ಯು ತನ್ನ ಆರ್ಥಿಕ ಸಮಸ್ಯೆ ತೆರೆದಿಟ್ಟ.
ನೀನು ಹೇಳಿದ ಹಾಗೆ ಮಾಡಿದ್ರೆ ಹೋಗೋದು ನನ್ನ ಮಾನ, ಮರ್ಯಾದೆ. ನಿನ್ಗೆ ಅಷ್ಟೊಂದು ಖರ್ಚು ಮಾಡೋದಕ್ಕೆ ಆಗೋದಿಲ್ಲಂತ ನನ್ಗೂ ಕೂಡ ಗೊತ್ತು. ಆದರೆ, ನಿನ್ಗೆ ಯಾವುದೇ ಕಷ್ಟಕೊಡೋದಿಲ್ಲ. ಎಲ್ಲಾ ವ್ಯವಸ್ಥೆಗಳನ್ನ ನಾನೇ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೇನೆ. ನೀನು ಮದ್ವೆಯ ಬಗ್ಗೆ ಯಾವುದೇ ರೀತಿಯಲ್ಲಿಯೂ ತಲೆ ಕೆಡಿಸಿಕೊಳ್ಬೇಡ. ಆದರೆ, ನನ್ನದೊಂದು ಷರತ್ತು ಇದೆ. ಅದನ್ನ ನೀವು ಇಬ್ರೂ ಕೂಡ ಪಾಲಿಸಲೇ ಬೇಕು ಎಂದು ಅಕ್ಷರ ಹಾಗೂ ಅಭಿಮನ್ಯುವಿನ ಕಡೆಗೆ ನೋಟ ಬೀರಿ ನಿಶ್ಚಿತಾರ್ಥ ಆಗೋ ತನಕ ನೀವಿಬ್ರು ಹಾದಿ ಬೀದಿಯಲ್ಲಿ ಸುತ್ತಾಡಬಾರದು. ಒಂದ್ವೇಳೆ ಇಬ್ಬರಿಗೆ ಭೇಟಿ ಮಾಡಬೇಕೂಂತ ಅನ್ನಿಸಿದರೆ ಮನೆಯಲ್ಲಿ ಭೇಟಿಯಾಗಬಹುದು. ಈ ಷರತ್ತಿಗೆ ಒಪ್ಪಿಕೊಳ್ಳೋದಾದ್ರೆ ಮಾತ್ರ ಮದ್ವೆ ಮಾಡಿಕೊಡ್ತೇನೆ. ನಿಮ್ಮಿಬ್ಬರಿಗೆ ಒಪ್ಪಿಗೆ ಇದೆಯಾ? ಕೇಳಿದರು.
ಮದುವೆಯಾಗೋದಕ್ಕೆ ತುದಿಗಾಲಲ್ಲಿ ನಿಂತಿದ್ದ ಇಬ್ಬರು ಆಯ್ತು ಎಂದು ತಲೆಯಲ್ಲಾಡಿಸಿದರು. ಇನ್ನು ಕೆಲವೇ ತಿಂಗಳಿನಲ್ಲಿ ಮದುವೆ ನಡೆಯಲಿದೆ. ಇಷ್ಟು ವರ್ಷ ಕಾಯ್ಕೊಂಡು ಇದ್ದವರಿಗೆ ಇನ್ನು ಕೆಲವು ತಿಂಗಳು ಕಾಯೋದು ದೊಡ್ಡ ಕಷ್ಟವೇನು ಅಲ್ಲ. ಹಾಗೊಂದುವೇಳೆ ಭೇಟಿಯಾಗಬೇಕೂಂತ ಅನ್ನಿಸಿದರೆ ಮನೆಯಲ್ಲಿಯೇ ಭೇಟಿಯಾಗಬಹುದಲ್ಲ? ಅಂದುಕೊಂಡರು.
ಅಭಿಮನ್ಯು ಹೊರಟು ನಿಂತಾಗ ಕಾರನ್ನು ಅಂಗಳದಲ್ಲಿ ತಂದು ನಿಲ್ಲಿಸಿದ ಅಕ್ಷರ ಅಭಿಮನ್ಯುವನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಳು. ದಾರಿಯುದ್ದಕ್ಕೂ ಹೆಚ್ಚೇನು ಮಾತು ಆಡಿಕೊಳ್ಳಲಿಲ್ಲ. ಮುಂದಿನ ವೈವಾಹಿಕ ಜೀವನದ ಬಗ್ಗೆ ಇಬ್ಬರು ತಮ್ಮದೇ ಆದ ರೀತಿಯಲ್ಲಿ ಕಲ್ಪನೆಯಲ್ಲಿ ವಿಹರಿಸತೊಡಗಿದರು. ಅಭಿಮನ್ಯುವನ್ನು ಕಚೇರಿಯಲ್ಲಿ ಬಿಟ್ಟು ಬಂದ ಅಕ್ಷರ ತನ್ನ ಕೊಠಡಿಯೊಳಗೆ ಸೇರಿಕೊಂಡು ಅಭಿಮನ್ಯು ನೀಡಿದ ಉಡುಗೋರೆಯ ಮೇಲೆ ಕೈಯಾಡಿಸಿ, ಅವನು ನೀಡಿದ ಹತ್ತಾರು ಗ್ರೀಟಿಂಗ್ಸ್ ಕಾರ್ಡ್‌ನ ಮೇಲೆ ಮೂಡಿದ್ದ ಅವನ ಕೋಳಿಕಾಲಿನಂತಹ ಅಕ್ಷರಗಳನ್ನು ಓದಿ, ಓದಿ ಅದರ ಸವಿಯನ್ನು ಪೂರ್ಣ ಪ್ರಮಾಣದಲ್ಲಿ ಸವಿಯ ತೊಡಗಿದಳು.
* * *
ಮದುವೆಯ ಬಗ್ಗೆ ನೂರಾರು ಕಲ್ಪನೆ ಕಟ್ಟಿಕೊಂಡ ಅಕ್ಷರ ಎರಡು ದಿನಗಳನ್ನು ತುಂಬಾ ಉಲ್ಲಾಸದಿಂದ ಕಳೆದಳು. ತಮ್ಮಿಬ್ಬರನ್ನು ಬಂಧಿಸುವ ಮದುವೆ ಎಂಬ ಆ ಶುಭ ಗಳಿಗೆ ಆದುಷ್ಟು ಬೇಗನೆ ಬರಲು ಹಗಲು, ರಾತ್ರಿಗಳು ಬೇಗ, ಬೇಗನೇ ಉರುಳಲಿ ಎಂದು ಆಗಿಂದಾಗೆ ಮನದೊಳಗೆ ಪ್ರಾರ್ಥಿಸಿಕೊಂಡಳು. ಬೆಳಗ್ಗೆ ಬೇಗ ಕಚೇರಿಗೆ ಹೋಗಬೇಕಾದ ಕಾರಣ ಅಕ್ಷರ ಭಾನುವಾರ ರಾತ್ರಿಯೇ ಮೈಸೂರಿನ ಕಡೆಗೆ ಪಯಣ ಬೆಳೆಸಿದಳು. ಅದೇ ದಿನ ರಾತ್ರಿ ಅಭಿಮನ್ಯು ಗೆಳೆಯರೊಂದಿಗೆ ಸಂತೋಷ ಹಂಚಿಕೊಳ್ಳಲು ಪಾರ್ಟಿಯಲ್ಲಿ ಮುಳುಗಿದ.
ಇವತ್ತು ಇಡೀ ಜಗತ್ತನ್ನು ಗೆದ್ದಷ್ಟು ಸಂತೋಷವಾಗ್ತಾ ಇದೆ. ಅವಳಪ್ಪನ ಮೈಮೇಲೆ ಇಷ್ಟುದಿನ ದೆವ್ವ ಕೂತ್ಕೊಂಡಿತ್ತೋ ಏನೋ? ಅಂತೂ ಕೊನೆಗೂ ದೇವರು ಬಂದು ಕೂತ್ಕೊಂಡಿದ್ದಾನೆ! ಅದಕ್ಕೆ ಮಗಳನ್ನ ಕೊಟ್ಟು ಮದ್ವೆ ಮಾಡೋದಕ್ಕೆ ಮುಂದೆ ಬಂದಿದ್ದಾನೆ ಎಂದು ನಕ್ಕು ಹೇಳಿದ ಅಭಿಮನ್ಯು.
ಸದ್ಯ ಎಲ್ಲವೂ ಸುಸೂತ್ರವಾಗಿ ನಡೆಯಿತಲ್ಲ! ಅದೊಂದೇ ಸಂತೋಷ. ಇಲ್ದಿದ್ರೆ ಅವಳಪ್ಪನೊಂದಿಗೆ ದಿನಾ ಬಡಿದಾಡುವ ಪರಿಸ್ಥಿತಿ ನಿರ್ಮಾಣವಾಗಿ ಬಿಡ್ತಾ ಇತ್ತು. ಅವರಪ್ಪ ಒಪ್ಪಿದ್ರೂ ಒಪ್ಪದೆ ಇದ್ರೂ ನಿಮ್ಮಿಬ್ಬರ ಮದುವೆಯಂತೂ ಖಂಡಿತ ನಡೆಯಿತ್ತಾ ಇತ್ತು. ಸಬ್‌ರಿಜಿಸ್ಟ್ರರ್ ಆಫೀಸ್‌ನಲ್ಲಿ ನಡೆಯಬೇಕಾದ ಮದುವೆಯನ್ನ ಕಲ್ಯಾಣ ಮಂಟಪಕ್ಕೆ ಬರುವ ಹಾಗೆ ಮಾಡಿದ್ದಾನೆ ಅಷ್ಟೆ. ಅಂದ ರಾಹುಲ್.
ಗೆಳೆಯರೆಲ್ಲ ಪಾರ್ಟಿ ಮುಗಿಸಿ ಹೊರ ಬರುತ್ತಿದ್ದಂತೆ ದೂರದಲ್ಲಿ ಕಾರಿನೊಳಗೆ ಕುಳಿತ್ತಿದ್ದ ರಾಜಶೇಖರ್, ಪ್ರೀತಮ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಬೇಟೆಯಾಡುವುದಕ್ಕೆ ಸಜ್ಜಾದರು. ಸರಿ ಸುಮಾರು ಹನ್ನೊಂದು ಗಂಟೆ ಕಳೆದಿತ್ತು. ಅದೇ ವೇಳೆ ಕರೆಂಟ್ ಕೈಕೊಟ್ಟಿತ್ತು. ಬೆಳಕು ಮರೆಯಾಗಿ ಕತ್ತಲು ಆವರಿಸಿಕೊಂಡಿತು. ಇದೇ ಸೂಕ್ತವಾದ ಸಮಯ. ಅಂದುಕೊಂಡ ಕಾರ್ಯವನ್ನು ಇಂದೇ, ಈ ಕ್ಷಣದಲ್ಲಿಯೇ ಮುಗಿಸಿ ಬಿಡಬಹುದೆಂದು ನಿರ್ಧರಿಸಿದ ರಾಜಶೇಖರ್ ಅಂತಹ ಒಂದು ಕ್ಷಣಕ್ಕಾಗಿ ಅಭಿಮನ್ಯುವನ್ನು ಹಿಂಬಾಲಿಸಲು ಅಣಿಯಾದರು. ಆದರೆ, ಅದೃಷ್ಟ ಅಭಿಮನ್ಯುವಿನ ಪರವಾಗಿತ್ತು. ಗೆಳೆಯ ರಾಹುಲ್ ಅಭಿಮನ್ಯುವನ್ನು ಮನೆತನಕ ಬೈಕ್‌ನಲ್ಲಿ ಬಿಟ್ಟು ಬರಲು ಕರೆದೊಯ್ದ.ಛೇ. ಎಲ್ಲಾ ಹಾಳಾಗೋಯ್ತು. ಇಂತಹ ಅವಕಾಶಕ್ಕಾಗಿ ಇನ್ನೆಷ್ಟು ನಿದ್ರೆ ಇಲ್ಲದ ರಾತ್ರಿಗಳನ್ನ ಕಳೆಯಬೇಕೋ ಏನೋ ಎಂದು ಇಬ್ಬರು ಸಿಡುಕಿ ಮನೆಯ ಹಾದಿ ಹಿಡಿದರು.
ಸರಿಸುಮಾರು ಒಂದೂವರೆ ತಿಂಗಳು ನಿದ್ರೆಗೆಟ್ಟು ಕಾಯ್ದ ರಾಜಶೇಖರ್‌ಗೆ ಅದೊಂದುದಿನ ಬೇಟೆಗೆ ಅವಕಾಶ ದೊರೆಯಿತು. ಕುಡಿದು ತೂರಾಡಿ ಹನ್ನೊಂದು ಗಂಟೆಯ ಹೊತ್ತಿಗೆ ಹೊರ ಬಂದ ಅಭಿಮನ್ಯು ಏಕಾಂಗಿಯಾಗಿ ಮನೆಯ ಹಾದಿ ಹಿಡಿದು ನಡೆಯತೊಡಗಿದ. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಕುಡಿದ ಕಾರಣ ಕಾಲು ಅತ್ತಿಂದಿತ್ತ ಸರ್ವೇ ಮಾಡುತ್ತಾ ದೇಹವನ್ನು ಕಷ್ಟದಿಂದ ಎಳೆದುಕೊಂಡು ನಡೆಯುತಿತ್ತು. ಕುಡಿದು ತೂರಾಡಿಕೊಂಡು ಹೋಗುತ್ತಿದ್ದ ಅಭಿಮನ್ಯುವನ್ನು ಹಿಂಬಾಲಿಸಿಕೊಂಡೇ ತೆರಳಿದರು. ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಹಿಂಬದಿಯಿಂದ ತಲೆಯ ಭಾಗಕ್ಕೆ ಬಲವಾದ ಏಟು ಬಿತ್ತು. ಏಟು ಬಿದ್ದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ. ರಾಜಶೇಖರ್, ಪ್ರೀತಮ್ ಜೊತೆ ಸೇರಿ ಮನಸೋಇಚ್ಚೆ ಥಳಿಸಿದರು. ದೇಹದ ಚಲನೆ ನಿಲ್ಲುವವರೆಗೂ ಅಲ್ಲೇ ಕಾಯ್ದು ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಖಾತರಿ ಪಡಿಸಿಕೊಂಡು ದೇಹವನ್ನು ಎತ್ತಿ ಚರಂಡಿಗೆ ಎಸೆದು ಮುನ್ನಡೆದರು.
ದೇವರ ದಯೆಯಿಂದ ಅಭಿಮನ್ಯುವಿನ ದೇಹದಲ್ಲಿ ಒಂದು ಗುಟುಕು ಜೀವ ಹಾಗೆಯೇ ಉಳಿದುಕೊಂಡಿತ್ತು. ಉಸಿರಾಟ ದೂರ ದೂರವಾಗುತ್ತಾ ಹೋಯಿತು. ಅಷ್ಟೊತ್ತಿಗೆ ಅದೇ ಹಾದಿಯಲ್ಲಿ ಬಂದ ಪೊಲೀಸರು ಅಭಿಮನ್ಯುವನ್ನು ಆಸ್ಪತ್ರೆಗೆ ದಾಖಲಿಸಿ ದರಾದರೂ ಬದುಕುವ ವಿಶ್ವಾಸ ಯಾರಲ್ಲೂ ಉಳಿದಿರಲಿಲ್ಲ.
ವಿಷಯ ತಿಳಿದು ಎದೆ ಬಡಿದುಕೊಂಡು ಓಡಿ ಬಂದ ವಾತ್ಸಲ್ಯ ಮಗನ ಸ್ಥಿತಿ ಕಂಡು ಅಲ್ಲೇ ಕುಸಿದು ಬಿದ್ದು ಪ್ರಜ್ಞೆ ಕಳೆದು ಕೊಂಡರು. ಅಭಿಮನ್ಯುವಿನ ಸ್ನೇಹಿತರು ಪಕ್ಕದ ವಾರ್ಡ್‌ನಲ್ಲಿ ವಾತ್ಸಲ್ಯ ಅವರನ್ನು ಎಡ್ಮಿಟ್ ಮಾಡಿದರು. ಅಭಿಮನ್ಯುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರಾದರೂ ಜೀವ ಉಳಿಯುವ ಭರವಸೆ ನೀಡಲಿಲ್ಲ. ಇನ್ನೇನಿದ್ದರೂ ದೇವರಿಗೆ ಬಿಟ್ಟದ್ದು. ಆತನೊಬ್ಬ ನಿಂದ ಮಾತ್ರ ಉಳಿಸಲು ಸಾಧ್ಯ ಅಂದು ಬಿಟ್ಟರು.
ಬಹುಶಃ ಅಭಿಮನ್ಯುವಿನ ಮೇಲೆ ದೇವರ ದಯೆ ಇತ್ತೋ ಏನೊ? ಅಭಿಮನ್ಯುವಿನ ದೇಹ ಮೆಲ್ಲನೆ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿತು. ಉಸಿರಾಟ ಮೆಲ್ಲನೆ ಸಹಜ ಸ್ಥಿತಿಯತ್ತ ಮರಳಲು ಪ್ರಾರಂಭಿಸಿತು. ಹೋದ ಪ್ರಜ್ಞೆ ಮರಳಿ ಬರಲು ಎರಡು ದಿನ ತೆಗೆದುಕೊಂಡಿತು. ಒಂದು ದಿನದ ನಂತರ ವಿಷಯ ತಿಳಿದು ಮೈಸೂರಿನಿಂದ ಬಂದ ಅಕ್ಷರ ಅಭಿಮನ್ಯುವಿನ ಪಕ್ಕದಲ್ಲಿಯೇ ನಿಂತು ಕಣ್ಣೀರು ಸುರಿಸುತ್ತಿದ್ದಳು.
ಅಭಿ…, ನನ್ನ ಉಸಿರು ನಿನ್ನಲ್ಲಿದೆ ಕಣೋ. ನೀನು ಹೊರಟು ಹೋದ್ರೆ ನನ್ನ ಉಸಿರು ಕೂಡ ನಿಂತು ಹೋಗುತ್ತೆ. ಈ ಜಗತ್ತಿನಲ್ಲಿ ನಮ್ಮಿಬ್ಬರನ್ನ ಬೇರ್ಪಡಿಸಲು ಯಾರಿಂದಲೂ ಸಾಧ್ಯ ಇಲ್ಲ. ನೀನು ಭಯ ಪಡ್ಬೇಡ. ನೀನು ಗುಣಮುಖವಾದ ನಂತರ ಎಲ್ಲಾದ್ರು ದೂರ ಹೊರಟು ಹೋಗುವ ಎಂದು ಅಭಿಮನ್ಯುವಿನ ಕೈ ಹಿಡಿದು ಮತ್ತೆ ಬಿಕ್ಕಳಿಸಿ ಅತ್ತಳು. ಆಕೆಯ ಮಾತು ಯಾವುದೂ ಕೂಡ ಅಭಿಮನ್ಯುವಿನ ಕಿವಿಗೆ ಬೀಳದೆ ಇದ್ದರೂ ಒಬ್ಬಳೇ ಮಾತಾಡಿಕೊಳ್ಳುತ್ತಿದ್ದಳು ಹಚ್ಚು ಹಿಡಿದವರಂತೆ.
ಆಸ್ಪತ್ರೆಯ ಎದುರು ರಾಜಶೇಖರ್ ಮಗಳಿಗಾಗಿ ಕಾದು ನಿಂತಿದ್ದರು. ಅಪ್ಪಿ, ತಪ್ಪಿಯೂ ಅಭಿಮನ್ಯುವಿನ ಬಳಿ ಸುಳಿಯುವ ಧೈರ್ಯ ತೋರಲಿಲ್ಲ. ಅಪ್ಪನನ್ನು ನೋಡಿದ ಅಕ್ಷರ ಓಡಿ ಹೋಗಿ ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು. ದೇವರು ನನ್ಗೆ ಯಾಕಾದ್ರೂ ಇಂತಹ ಶಿಕ್ಷೆ ಕೊಡ್ತಾ ಇದ್ದಾನೋ ಗೊತ್ತಿಲ್ಲ. ಒಂದು ದಿನನೂ ನೆಮ್ಮದಿಯಾಗಿ ಇರೋದಕ್ಕೆ ಬಿಡ್ತಾ ಇಲ್ಲ ಕೂಗಿಕೊಂಡಳು.
ಸಮಾಧಾನ ಮಾಡ್ಕೋ ಅಕ್ಷರ ಎಲ್ಲಾ ಸರಿಹೋಗುತ್ತೆ. ದೇವರು ದೊಡ್ಡವನು. ಅವನು ಯಾವತ್ತೂ ಕೈ ಬಿಡೋದಿಲ್ಲ. ಅಭಿಮನ್ಯುವಿಗೆ ಏನೂ ಆಗಿಲ್ಲ. ಇನ್ನೊಂದೆರಡು ದಿನದೊಳಗೆ ಸುಧಾರಿಸಿಕೊಳ್ತಾನೆ. ನೀನು ಯೋಚ್ನೆ ಮಾಡ್ಕೊಂಡು ಮನಸ್ಸು ಹಾಳು ಮಾಡ್ಕೋಬೇಡ ತೋರ್ಪಡಿಕೆಗೆ ಮಗಳನ್ನು ಸಂತೈಸಿದ ರಾಜಶೇಖರ್ ಮನದೊಳಗೆ ರೋಷ ಕುದಿಯುತಿತ್ತು. ‘ಸತ್ತ ಮನುಷ್ಯ ಅದು ಹೇಗೆ ಬದುಕಿಬಿಟ್ಟ! ಮುಟ್ಟಿ ನೋಡುವಾಗ ಉಸಿರಾಟ ನಿಂತಿತ್ತು. ಎದೆಬಡಿತ ನೋಡಲು ಮರೆತ್ತದ್ದೇ ದೊಡ್ಡ ತಪ್ಪಾಯ್ತು. ಎದೆಬಡಿತ ನಿಂತು ದೇಹ ತಣ್ಣಗಾಗುವವರೆಗೆ ಅಲ್ಲೇ ಇದ್ದಿದ್ದರೆ ಚೆನ್ನಾಗಿತಾ ಇತ್ತು. ಇಲ್ದಿದ್ರೆ ಇನ್ನೊಂದೆರಡೇಟು ಹಾಕಿದ್ರೂ ಸಾಕಿತ್ತು. ತಕ್ಷಣ ಪ್ರಾಣ ಹೊರಟು ಹೋಗ್ತಾ ಇತ್ತು. ಆ ರಾತ್ರಿ ಆ ಅಯೋಗ್ಯ ನನ್ಮಗ ಸತ್ತೇ ಹೋದ ಅಂತ ತಿಳ್ಕೊಂಡ್ಬಿಟ್ಟೆ. ಛೇ.., ಇನ್ನು ಅಂತಹ ಒಂದು ಅವಕಾಶ ದೊರೆಯುವುದಿಲ್ಲ ಅಂದುಕೊಂಡು ತುಂಬಾ ದುಃಖಿತರಾದರು. ಆಸ್ಪತ್ರೆಯಲ್ಲಿ ರಾಜಶೇಖರ್‌ಗೆ ಹೆಚ್ಚು ಹೊತ್ತು ನಿಲ್ಲಲು ಮನಸ್ಸಾಗಲಿಲ್ಲ. ಹಾಗಾಗಿ ಮಗಳನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿ ಬಾ ಅಕ್ಷರ, ಮನೆಗೆ ಹೋಗುವ ಅಂದರು.
ಇಲ್ಲ ಅಪ್ಪ, ಮನೆಗೆ ಬರುವಷ್ಟು ಮೂಡ್ ಇಲ್ಲ. ಏಕಾಂತದಲ್ಲಿ ಇಬೇಕೂಂತ ಅನ್ನಿಸ್ತಾ ಇದೆ. ಮೈಸೂರಿಗೆ ಹೊರಡ್ತೇನೆ. ಯಾರೊಂದಿಗೂ ಮಾತಾಡುವ ಉತ್ಸಾಹ ಉಳಿದಿಲ್ಲ. ಹಾಳಾದ ಜನರಿಗೆ ಯಾಕಾದ್ರೂ ಇಂತಹ ದುರ್ಬುದ್ಧಿ ದೇವರು ಕೊಡ್ತಾನೋ!? ಅಭಿಮನ್ಯು ಏನು ತಪ್ಪು ಮಾಡಿದ್ದಾನೆ ಅಂತ ಇಂಥಹ ಶಿಕ್ಷೆ ಕೊಟ್ಟಿದ್ದಾರೆ? ಅವರನ್ನ ದೇವರು ಯಾವತ್ತೂ ಕ್ಷಮಿಸೋದಿಲ್ಲ ಅಪ್ಪ, ನೀವು ಬೇಕಾದ್ರೆ ನೋಡ್ತಾ ಇರಿ. ಆ ದೇವರು ಅವರಿಗೂ ಇದೇ ಗತಿ ತೋರಿಸ್ತಾನೆ ಆಕ್ರೋಶದಿಂದ ನುಡಿದಳು.
ಮಗಳ ಮಾತು ರಾಜಶೇಖರ್‌ಗೆ ಕಸಿವಿಸಿ ಉಂಟು ಮಾಡಿತು. ಆದರೆ, ಹೇಳಿಕೊಳ್ಳುವಂತಿಲ್ಲ. ಆಕೆ ಕಣ್ಣೀರು ಸುರಿಸಿ ಹಾಕಿದ ಶಾಪ ಎಲ್ಲಾದರು ತನಗೆ ತಟ್ಟಿಬಿಟ್ಟರೆ? ಎಂದು ಆಲೋಚಿಸಿ ಕಳವಳಗೊಂಡರು. ದುಃಖದಲ್ಲಿ ಏನೇನೋ ಮಾತಾಡ್ಬೇಡ. ಸಮಾಧಾನ ಮಾಡ್ಕೋ. ಶಾಪ ಹಾಕಿ ಏನು ಪ್ರಯೋಜನ ಹೇಳು? ಶತ್ರುಗಳನ್ನೂ ಕೂಡ ಮಿತ್ರರಂತೆ ಪ್ರೀತಿಸ್ಬೇಕು ಮಗಳಿಗೆ ಹಿತವಚನ ಹೇಳಿದರು.
“ಶತ್ರುಗಳನ್ನು ನೀವು ಬೇಕಾದ್ರೆ ಪ್ರೀತಿ ಮಾಡಿ. ಶತ್ರುಗಳನ್ನು ಕ್ಷಮಿಸಿ ಅಷ್ಟೊಂದು ದೊಡ್ಡ ಪಟ್ಟ ಹೊತ್ತುಕೊಳ್ಳುವ ಅವಶ್ಯಕತೆ ನನ್ಗಿಲ್ಲ. ನಾನು ದೇವರನ್ನ ನಂಬುತ್ತೇನೆ. ಆ ದೇವರಿಗೆ ನಿಜವಾಗಿಯೂ ಶಕ್ತಿ ಇದ್ದರೆ ಆ ಪಾಪಿಗಳನ್ನ ಕ್ಷಮಿಸೋದಿಲ್ಲ”.
ಆಕೆಯ ಮಾತು ಕೇಳಿ ಮತ್ತಷ್ಟು ಕಳವಳಗೊಂಡ ರಾಜಶೇಖರ್, ಅಭಿಮನ್ಯು ಎಲ್ಲಾದರು ಮಗಳ ಬಳಿ ನಡೆದ ಘಟನೆಯನ್ನು ತಿಳಿಸಿರಬಹುದೇ? ಅದಕೋಸ್ಕರ ನನ್ನ ಎದುರು ನಿಂತು ನನಗೆ ಪರೋಕ್ಷವಾಗಿ ಮಗಳು ಶಾಪ ಹಾಕುತ್ತಿರಬಹುದು ಅಂದುಕೊಂಡು ಮತ್ತಷ್ಟು ಆತಂಕಕ್ಕೆ ಒಳಗಾದರು. ಆದರೆ, ಮರುಕ್ಷಣದಲ್ಲಿ ಅಭಿಮನ್ಯುವಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂಬ ವಿಷಯ ತಲೆಗೆ ಹೊಳೆದಾಗ ಮನಸ್ಸು ಸ್ವಲ್ಪ ನೆಮ್ಮದಿಗೊಂಡಿತು. ಆದರೂ ಮನಸ್ಸು ಚಡಪಡಿಸುತ್ತಲೇ ಇತ್ತು. ಅಭಿಮನ್ಯುವಿಗೆ ಪ್ರಜ್ಞೆ ಬಂದಿರಬಹುದೇ? ವಿಚಾರವನ್ನು ಎಲ್ಲರೂ ಸೇರಿ ತನ್ನ ಬಳಿ ಮುಚ್ಚಿಡುತ್ತಿದ್ದಾರಾ? ಎಂಬ ಪ್ರಶ್ನೆ ತಮ್ಮ ಮನದೊಳಗೆ ಉದ್ಭವಿಸಿ ಆತಂಕಕ್ಕೆ ಒಳಗಾದರು.
“ಅಭಿಮನ್ಯು ನಿನ್ನ ಹತ್ರ ಏನಾದ್ರೂ ಹೇಳಿದ್ನಾ? ಕುತೂಹಲದಿಂದ ಕೇಳಿದರು ರಾಜಶೇಖರ್”.
ನನ್ನೊಂದಿಗೆ ಏನೂ ಹೇಳಿಲ್ಲ. ನಾನು ಬರೋದಕ್ಕೂ ಮುಂಚೆ ಪ್ರಜ್ಞೆಬಂದು ಸ್ವಲ್ಪ ಹೊತ್ತುಮಾತಾಡಿದ ಅಂತೆ. ಅಷ್ಟರೊಳಗೆ ಮತ್ತೆ ಪ್ರಜ್ಞೆ ಹೋಯ್ತು. ರಾತ್ರಿ ಹಿಂಬದಿಯಿಂದ ಬಂದು ಯಾರೋ ತಲೆಗೆ ದೊಣ್ಣೆಯಿಂದ ಹೊಡೆದರಂತೆ. ನಂತರ ಏನಾಯ್ತು ಅಂತ ಗೊತ್ತಾಗ್ಲಿಲ್ವಂತೆ. ಹೊಡೆದವರು ಯಾರೂಂತ ಗೊತ್ತಾಗಿದ್ರೆ ಪೊಲೀಸ್ ಪುಕಾರು ನೀಡ್ಬೊಹುದಿತ್ತು. ಪಾಪ, ಅವನಿಗೆ ಅದು ಕೂಡ ಗೊತ್ತಾಗ್ಲಿಲ್ಲ. ತುಂಬಾ ವ್ಯವಸ್ಥಿತವಾಗಿ ಅಭಿಮನ್ಯುವನ್ನು ಮುಗಿಸೋದಕ್ಕೆ ಯಾರೋ ಸಂಚು ರೂಪಿಸಿದ್ದಾರೆ ಕಣ್ಣೀರು ಸುರಿಸುತ್ತಾ ಹೇಳಿದಳು.
ಮಗಳ ಮಾತನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಜಶೇಖರ್ ಒಮ್ಮೆ ನೆಮ್ಮದಿಯಿಂದ ಉಸಿರಾಡಿಕೊಂಡರು. ಒಂದ್ವೇಳೆ ಅಭಿಮನ್ಯುವಿಗೆ ಈ ವಿಚಾರವೇನಾದರು ಗೊತ್ತಾಗಿದ್ದರೆ ನನ್ನ ಬದುಕೇ ನಾಶವಾಗಿ ಹೋಗ್ತಾ ಇತ್ತು. ಸದ್ಯ ದೇವರು ಅಭಿಮನ್ಯುವಿನ ಪರ ಮಾತ್ರ ಅಲ್ಲ, ನನ್ನ ಪರ ಕೂಡ ಇದ್ದಾನೆ ಅಂದುಕೊಂಡರು. ಮಗಳ ಮಾತು ಕೇಳಿದ ನಂತರ ಮನದೊಳಗೆ ತುಂಬಾ ಸಂತೋಷಪಟ್ಟರು. ತೋರ್ಪಡಿಕೆಗೆ ಅಭಿಮನ್ಯುವಿಗೆ ಆದ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದರು.
ಹಲ್ಲೆ ನಡೆಸಿದವರು ಯಾರೆಂದು ಅಭಿಮನ್ಯುವಿಗೆ ಗೊತ್ತಾಗಲಿಲ್ಲ ಎಂಬ ವಿಚಾರ ಮಗಳಿಂದ ತಿಳಿದ ನಂತರ ಅಭಿಮನ್ಯುವನ್ನು ನೋಡಿ ಸಾಂತ್ವನದ ಮಾತು ಆಡಿ ಬರಲು ಮಗಳನ್ನು ಮತ್ತೆ ಆಸ್ಪತ್ರೆಯೊಳಗೆ ಕರೆದೊಯ್ದರು.
ಅಭಿಮನ್ಯುವಿನ ಬಳಿ ಕುಳಿತುಕೊಂಡ ರಾಜಶೇಖರ್ ನಿನ್ಗೇನು ಆಗೋದಿಲ್ಲ ಅಭಿಮನ್ಯು. ಚಿಂತೆ ಮಾಡ್ಕೋ ಬೇಡ. ಇನ್ನೊಂದೆರಡು ದಿನ ಎಲ್ಲಾ ಸರಿಹೋಗುತ್ತೆ. ಮನೆಯಲ್ಲೊಂದು ಶುಭ ಕಾರ್ಯ ಮಾಡುವ ಅಂತ ಯೋಚ್ನೆ ಮಾಡುತ್ತಿರುವಾಗಲೇ ನಿನ್ಗೆ ಈ ರೀತಿ ಆಗಿರೋದನ್ನ ನನ್ನ ಕಣ್ಣಿಂದ ನೋಡೋದಕ್ಕೆ ಸಾಧ್ಯವಾಗ್ತಾ ಇಲ್ಲ ಎಂದು ಗೋಳಾಡಿದರು. ಪ್ರಜ್ಞೆ ಕಳೆದುಕೊಂಡ ಅಭಿಮನ್ಯುವಿಗೆ ಯಾವುದೇ ಮಾತು ಕೇಳಿಸಲಿಲ್ಲ. ಆದರೂ ರಾಜಶೇಖರ್ ಒಂದಷ್ಟು ಹೊತ್ತು ಅಭಿಮನ್ಯುವಿನ ಕೈ ಹಿಡಿದು ಮಾತಾಡಿದರು. ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಸೂಚಿಸುವುದಕೋಸ್ಕರ. ರಾಜಶೇಖರ್ ಅಭಿಮನ್ಯುವಿಗೆ ಎದುರಾದ ಸ್ಥಿತಿ ನೆನೆದು ಕಣ್ಣೀರು ಸುರಿಸುತ್ತಿರುವುದನ್ನು ಕಂಡು ಅಭಿಮನ್ಯುವಿನ ಸ್ನೇಹಿತರೂ ಕೂಡ ಅವರೊಂದಿಗೆ ಸೇರಿ ಕಣ್ಣೀರು ಸುರಿಸಿದರು.
ಇಲ್ಲಿದ್ದರೆ ಮಗಳ ಮನಸ್ಸು ಮತ್ತಷ್ಟು ಹದಗೆಡುತ್ತದೆ ಎಂದು ನಿರ್ಧರಿಸಿದ ರಾಜಶೇಖರ್ ಮಗಳನ್ನು ಕರೆದು ಹೊರ ನಡೆದರು.
“ಅಕ್ಷರ ಮನೆಗೆ ಹೋಗುವ” ಮತ್ತೊಮ್ಮೆ ಕೇಳಿಕೊಂಡರು ರಾಜಶೇಖರ್.
ನನ್ಗೆ ಮನೆಗೆ ಬರೋದಕ್ಕೆ ಇಷ್ಟ ಇಲ್ಲ ಅಪ್ಪ. ಸುಮ್ನೆ ಬಲವಂತ ಮಾಡ್ಬೇಡಿ ಏರಿದ ಧ್ವನಿಯಲ್ಲಿ ಹೇಳಿದಳು.
ಸರಿ ನಿನ್ನಿಷ್ಟ ಅಂದ ರಾಜಶೇಖರ್ ಮಗಳನ್ನು ಕಾರಿನಲ್ಲಿ ಕೂರಿಸಿ ಬಸ್‌ನಿಲ್ದಾಣದವರೆಗೆ ಬಿಟ್ಟು ಮನದೊಳಗೆ ಆಕ್ರೋಶ, ದುಃಖ ಎಲ್ಲವನ್ನೂ ತುಂಬಿಕೊಂಡು ಮನೆಯ ಕಡೆ ತೆರಳಿದರು.
ಅಭಿಮನ್ಯುವಿನ ಹತ್ಯೆಗೆ ನಡೆಸಿದ ಯತ್ನದ ವಿಷಯ ಲೀಲಾವತಿ ಕಿವಿಗೂ ಬಿದ್ದಿತು. ಕೃತ್ಯದ ಹಿಂದಿರುವ ವ್ಯಕ್ತಿಯ ಸ್ಪಷ್ಟ ಚಿತ್ರಣ ಅವರ ಮುಂದೆ ಬಂದು ನಿಂತುಕೊಂಡಿತು. ನಂಬಿಕೆ ದ್ರೋಹ ಅನ್ನೋದು ಇದಕ್ಕೆ. ಆ ಮಕ್ಕಳನ್ನು ಮದುವೆ ಮಾಡಿಸುತ್ತೇನೆಂದು ನಂಬಿಸಿ ಪ್ರಾಣ ತೆಗೆಯಲು ಹೊರಟು ಬಿಟ್ರಲ್ಲ!? ಅದೆಂಥಹಾ ಕಟುಕತನ ಅವರಲ್ಲಿ ಇರಬೊಹುದು? ಅಂಥಹ ಮನುಷ್ಯನೊಂದಿಗೆ ಜೀವನ ನಡೆಸಿ ಏನು ಸುಖ? ಇನ್ನು ಎಲ್ಲವನ್ನೂ ಸಹಿಸಿಕೊಂಡು ಇರೋದಕ್ಕೆ ತನ್ನಿಂದ ಸಾಧ್ಯವಿಲ್ಲ. ಮನದೊಳಗೆ ಸೃಷ್ಟಿಯಾಗುತ್ತಿರುವ ಹತ್ತಾರು ಪ್ರಶ್ನೆಗಳನ್ನು ಗಂಡನ ಮುಂದೆ ತೆರೆದಿಡಲೇ ಬೇಕು ಎಂದು ನಿರ್ಧರಿಸಿದರು.
ದೂರದಲ್ಲಿ ಕಾರಿನ ಶಬ್ದ ಕೇಳಿಸಿತು. ರಾಜಶೇಖರ್ ಮನೆಗೆ ಬರುತ್ತಿದ್ದಾರೆಂದು ತಿಳಿದ ಲೀಲಾವತಿ ಹೊಸ್ತಿಲಲ್ಲಿ ನಿಂತು ಬರುವಿಕೆಗಾಗಿ ಕಾದು ನಿಂತರು. ರಾಜಶೇಖರ್ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ
ನಿಮ್ಮೊಂದಿಗೆ ಸ್ವಲ್ಪ ಮಾತಾಡೋದಕ್ಕೆ ಇದೆ. ಬಿನ್ನಿ ಇಲ್ಲಿ ಕೂತ್ಕೊಳಿ ಗಂಡನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡು ನಿಮ್ಮ ಮುಖ ನೋಡ್ತಾ ಇದ್ರೆ ನನ್ಗೆ ಬೇಸರ ಆಗ್ತಾ ಇದೆ. ಯಾವುದೋ ದುಃಖದಲ್ಲಿ ಮುಳುಗಿ ಹೋದವರಂತೆ ಕಾಣ್ತಾ ಇದ್ದೀರಲ್ಲ? ಒಂದೂವರೆ ತಿಂಗಳ ತನಕ ರಾತ್ರಿ ಒಂದು ದಿನವೂ ಬಿಡದೆ ಮಗನನ್ನು ಕಕೊಂಡು ಹೊರಗೆ ಹೋಗಿ ಬತಾ ಇದ್ರಲ್ಲ? ಇದೀಗ ದಿಢೀರಾಗಿ ರಾತ್ರಿ ಪಯಣ ನಿಲ್ಲಿಸಿ ಬಿಟ್ರಲ್ಲ ಯಾಕೆ? ಸಾಕಷ್ಟು ಬಾರಿ ಕೇಳಿಕೊಂಡ್ರೂ ನಿಮ್ಮ ರಾತ್ರಿ ಪಯಣದ ಉದ್ದೇಶ ಏನೂಂತ ನನ್ಗೆ ಹೇಳಲೇ ಇಲ್ಲ. ಕೇಳಿದಾಗಲೆಲ್ಲ ನಿನ್ಗೇಕೆ ಆ ವಿಚಾರ? ಅಂತ ಗದರಿಸ್ತಾ ಇದ್ರ. ಆದರೆ, ನಿನ್ನೆ ರಾತ್ರಿ ಎಲ್ಲೂ ಹೋಗ್ಲಿಲ್ಲ. ಮನೆಯಲ್ಲಿ ರಾತ್ರಿ ನೆಮ್ಮದಿಯಾಗಿ ನಿದ್ರೆನೂ ಮಾಡ್ಲಿಲ್ಲ. ಏನಾಗಿದೆ ನಿಮ್ಗೆ? ಇಷ್ಟು ದಿನ ನೀವು ನನ್ನ ಗದರಿಸಿದ್ದು ಸಾಕು. ಈಗ್ಲಾದ್ರೂ ಹೇಳಿ ನಿಮ್ಗೆ ಏನಾಗಿದೆ? ಉತ್ತರ ಬೇಕೆಂಬ ಹಟದಲ್ಲಿ ಕೇಳಿದರು.
ನನ್ಗೇನಾಗಿದೆ!? ನಿನ್ಗೇನಾದ್ರೂ ಆಗಿದೆಯಾ ಅಂಥ ನನ್ಗೆ ಹೆದರಿಕೆ ಆಗ್ತಾ ಇದೆ. ಸಣ್ಣ ಸಣ್ಣ ವಿಷಯಕ್ಕೆ ಇಷ್ಟೊಂದು ತಲೆ ಕೆಡಿಸಿಕೊಳ್ತಾ ಇದ್ದೀಯಲ್ಲ? ನಿನ್ಗೆ ಹುಚ್ಚು ಹಿಡಿದಿಬೇಕು. ಅದ್ಕೆ ಹೀಗೆಲ್ಲ ಮಾತಾಡ್ತಾ ಇದ್ದೀಯ. ಮಗ ಬೆಂಗಳೂರಿನಿಂದ ಬಂದಿದ್ದ. ಅವನಿಗೆ ಅಲ್ಲಿ ರಾತ್ರಿ ಸುತ್ತಾಡಿ ಅಭ್ಯಾಸ. ಅದ್ಕೆ ಅವನ ಕಕೊಂಡು ರಾತ್ರಿ ಟೌನಿಗೆ ಹೋಗಿ ಬತಾ ಇದ್ದೆ. ಮಗ ಬೆಂಗಳೂರಿಗೆ ಹೋದಮೇಲೆ ನಾನೊಬ್ಬನೇ ಟೌನಿಗೆ ಹೋಗಿ ಮಾಡೋದಕ್ಕೇನಿದೆ? ಅದ್ಕೋಸ್ಕರ ನಿನ್ನೆ ರಾತ್ರಿ ಟೌನಿಗೆ ಹೋಗಿಲ್ಲ. ಅದ್ಸರಿ ಈ ವಿಚಾರವನ್ನೆಲ್ಲ ಇವಗ ಯಾಕೆ ಕೇಳ್ತಾ ಇದ್ದೀಯ? ಕುತೂಹಲದಿಂದ ಕೇಳಿದರು.
ಕೇಳ್ಬೇಕಾದ ಪರಿಸ್ಥಿತಿ ನಿರ್ಮಾಣವಾಗಿರೋದ್ರಿಂದನೇ ಕೇಳ್ತಾ ಇರೋದು. ಒಂದೂವರೆ ತಿಂಗಳ ಕಾಲ ಒಂದು ರಾತ್ರಿ ಕೂಡ ಬಿಡದೆ ಹೊರಗೆ ಹೋಗ್ತಾ ಇದ್ದವರು ಅಭಿಮನ್ಯುವಿನ ತಲೆಗೆ ಬಲವಾದ ಏಟು ಬೀದ್ದ ಮರು ದಿನದಿಂದ ರಾತ್ರಿ ಸಂಚಾರ ದಿಢೀರಾಗಿ ನಿಲ್ಲಿಸಿ ಬಿಟ್ರಲ್ಲ? ಎಂದು ಲೀಲಾವತಿ ಮಾತು ಮುಂದುವರೆಸುತ್ತಾ ಇದ್ದಂತೆ ಆಕ್ರೋಶಗೊಂಡ ರಾಜಶೇಖರ್ ಹಾಗಾದ್ರೆ ನಿನ್ನ ಮಾತಿನ ಅರ್ಥ!? ಅಭಿಮನ್ಯುವನ್ನು ನಾನು, ಮಗ ಸೇಕೊಂಡು ಕೊಲೆ ಮಾಡೋದಕ್ಕೆ ಪ್ರಯತ್ನ ಮಾಡಿದ್ವಿ ಅಂಥ ನಮ್ಮೇಲೆ ಆರೋಪ ಹೊರಿಸ್ಲಿಕೆ ನೋಡ್ತಾ ಇದ್ದೀಯ? ನಿನ್ಗೆ ಆ ದೇವರು ಯಾಕಾದ್ರೂ ಇಂತಹ ದುರ್ಬುದ್ಧಿ ಕೊಟ್ಟ!? ಗಂಡನನ್ನೇ ಸಂಶಯದ ದೃಷ್ಟಿಯಿಂದ ನೋಡ್ತಾ ಇದ್ದೀಯಲ್ಲ!? ನೀನು ಹೀಗೆ ಮಾತಾಡ್ತಾ ಇದ್ರೆ ನಿನ್ನ ಇಲ್ಲೇ ಕೊಂದು ಬಿಡ್ತೇನೆ ಗದರಿಸಿದರು.
ಆ ಕೆಲಸ ಮೊದ್ಲು ಮಾಡಿ ಪುಣ್ಯ ಕಟ್ಕೊಳ್ಳಿ. ನಿಮ್ಮೊಂದಿಗೆ ಬದುಕಿರೋದಕ್ಕಿಂತ ಅದೇ ವಾಸಿ. ಮಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡೋದು ಅಂದ್ರೆ ನಿಮ್ಗೆ ಎಲ್ಲಿಲ್ಲದ ಆನಂದ. ಮಗಳು ಅಭಿಮನ್ಯುವನ್ನು ಬಿಟ್ಟು ನಿಖಿಲ್ ಜೊತೆ ಮದ್ವೆಯಾಗೋದಕ್ಕೆ ಒಪ್ಕೊಂಡಿದ್ದಳು. ಮತ್ತೆ ಅವಳ ಮನಸ್ಸು ಹಾಳು ಮಾಡಿ ಅಭಿಮನ್ಯುವಿಗೆ ಕೊಟ್ಟು ಮದ್ವೆ ಮಾಡಿಸ್ತೇನೆ ಅಂಥ ಅಪ್ಪ, ಮಗ ಇಬ್ರು ಸೇಕೊಂಡು ನಾಟಕ ಆಡಿದ್ದೂ ಆಯ್ತು, ಮತ್ತೆ ಅಭಿಮನ್ಯುವನ್ನು ಕೊಲ್ಲೋದಕ್ಕೆ ಪ್ರಯತ್ನ ಪಟ್ಟಿದ್ದೂ ಆಯ್ತು. ಇದೀಗ ನನ್ನ ಕೊಲ್ಲುವ ಮಾತು ಆಡ್ತಾ ಇದ್ದೀರ! ಎಲ್ಲರನ್ನೂ ಒಟ್ಟಿಗೆ ನಿಲ್ಲಿಸಿ ಕೊಂದು ಬಿಡಿ. ನಿಮ್ಗೆ ಆಗ ಸಂತೃಪ್ತಿಯಾ ಗಬಹುದು. ನಿಮ್ಮದೂ ಒಂದು ಮನುಷ್ಯ ಜನ್ಮನಾ!? ಥೂ… ಆಕ್ರೋಶದಿಂದ ಗಂಡನ ಮುಖಕ್ಕೆ ಉಗಿದರು. ಲೀಲಾವತಿ ಮೊಟ್ಟ ಮೊದಲ ಬಾರಿಗೆ ತಿರುಗಿ ಬಿದ್ದದನ್ನು ಕಂಡು ರಾಜಶೇಖರ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಭಿಮನ್ಯುವಿನ ಹತ್ಯೆಗೆ ಯತ್ನಿಸಿದ ವಿಚಾರ ತನಗೆ ಬಿಟ್ಟರೆ ಪ್ರೀತಮ್‌ಗೆ ಮಾತ್ರ ತಿಳಿದಿರೋದು. ಅಭಿಮನ್ಯುವಿಗೂ ಕೂಡ ಈ ವಿಚಾರ ಗೊತ್ತಿಲ್ಲ. ಇವಳ ಸಂಶಯದಿಂದ ಗುಟ್ಟಾಗಿರುವ ವಿಚಾರ ರಟ್ಟಾಗಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇವಳನ್ನ ಹೀಗೆ ಸುಮ್ಮನೆ ಬಿಟ್ಟರೆ ಎಲ್ಲಾ ವಿಚಾರ ಹೊರಗೆಳೆದು ನಮ್ಮನ್ನ ಕಂಬಿ ಎಣಿಸುವ ಹಾಗೆ ಮಾಡಿ ಬಿಡುತ್ತಾಳೆ. ಎಷ್ಟೇ ಆದರೂ ಹೆಂಗಸರು ವಾಚಾಳಿಗಳು. ಇಂತಹ ಗುಟ್ಟಾದ ವಿಷಯವನ್ನು ಮತ್ತೊಬ್ಬರಿಗೆ ಹೇಳಿಕೊಳ್ಳದೆ ಅವರಿಂದ ಇರೋದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಕಂಗಾಲಾದ ರಾಜಶೇಖರ್, ಕೋಪದಿಂದ ಲೀಲಾವತಿಯ ಕೆನ್ನೆಗೆ ನಾಲ್ಕು ಬಾರಿಸಿದರು.
ನನ್ನನೇನು ನೀನು ಕಟುಕ ಅಂಥ ತಿಳ್ಕೊಂಡಿದ್ದೀಯ? ನನ್ಗೂ ಮಗಳ ಭವಿಷ್ಯದ ಬಗ್ಗೆ ಕಳಕಳಿ ಇದೆ. ಅಭಿಮನ್ಯುವಿನ ಮೇಲೆ ಅಕ್ಷರ ಜೀವವನ್ನೇ ಇಟ್ಟುಕೊಂಡಿದ್ದಾಳೆ. ಅಭಿಮನ್ಯುವನ್ನು ನಾನು ಕೊಲೆ ಮಾಡುವ ವಿಷಯ ಒತ್ತಟ್ಟಿಗಿರಲಿ ಆ ಬಗ್ಗೆ ಯೋಚನೆ ಮಾಡಿದ್ರೂ ಕೂಡ ಅಕ್ಷರ ಅದನ್ನ ಸಹಿಸಿಕೊಂಡಿರಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ತಾಳೆ. ಆ ಅರಿವು ನನ್ಗೆ ಇದೆ. ಹೀಗಿರುವಾಗ ನಾನು ಅಭಿಮನ್ಯುವನ್ನು ಕೊಲೆ ಮಾಡೋದಕ್ಕೆ ಪ್ರಯತ್ನ ಪಟ್ಟೆ ಅಂದ್ರೆ ನನ್ಗೆ ಸಿಟ್ಟು ಬರದೆ ಮತ್ತೇನು ಬರೋದಕ್ಕೆ ಸಾಧ್ಯ ಹೇಳು? ದಯವಿಟ್ಟು ನನ್ನ ಅರ್ಥ ಮಾಡ್ಕೊ. ಇಷ್ಟು ವರ್ಷಗಳ ಕಾಲ ನಿನ್ನೊಂದಿಗೆ ಸುಖವಾಗಿ ಸಂಸಾರ ನಡೆಸಿದ್ದೇನೆ. ನಿನ್ಗೆ ಒಂದು ಸಣ್ಣ ನೋವು ಕೂಡ ಕೊಡದೆ ಸಂಸಾರ ನಡೆಸಿದ್ದೇನೆ. ಒಂದು ದಿನಕೂಡ ಕೈ ಎತ್ತಿ ಹೊಡೆಯಲಿಲ್ಲ. ಆದರೆ, ಇಂದು ಅಂತಹ ಪರಿಸ್ಥಿತಿಯನ್ನ ನೀನೆ ನಿರ್ಮಾಣ ಮಾಡಿದೆ. ದಯವಿಟ್ಟು ನನ್ನ ಅರ್ಥಮಾಡ್ಕೋ ಕೈಮುಗಿದು ಕಳಕಳಿಯಿಂದ ಕೇಳಿಕೊಂಡರು.
….. ಮುಂದುವರೆಯುವುದು
ಕಾದಂಬರಿ ಪುಟ ೧೫೧-೧೭೦