ತಿರುವು

ತಿರುವು

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ಪ್ರಿಯ ಗೆಳತಿ,

ಅಕಸ್ಮಿಕದ ಈ ಪತ್ರದಿಂದ ನೀನು ಒಂದೆರಡು ಕ್ಷಣ ಅನಂದ ಆಶ್ಚರ್ಯ ಪಡುತ್ತೀ ಎಂದು ನನಗೆ ಗೊತ್ತಿತ್ತು. ಜೊತೆ ಜೊತೆಗೆಯೇ ಆರು ವರ್ಷಗಳಿಂದ ಮರೆತು ಹೋದ ಇವಳು ಧುತ್ತನೆ ಮತ್ತೇಕೆ ಬಂದಳು ಎಂದು ಕೂಡಾ ಅಂದುಕೊಳ್ಳುವಿ ಅಲ್ಲವೆ? ನೀನು ಅಂದುಕೊಂಡಂತೆಯೋ, ಊಹಿಸಿದಂತೆಯೋ ನಾನು ನಿನ್ನನ್ನು ಮರೆತಿಲ್ಲ. ನಾವಿಬ್ಬರು ದೂರ ದೂರ ದೇಶಗಳಿಗೆ ಹೋದರೇನಾಯಿತು ನಾವು ಅದೆಷ್ಟೊಂದು ಮಾತನಾಡುತ್ತಿದ್ದೆವು, ವಾದ ವಿವಾದಕ್ಕಿಳಿಯುತ್ತಿದ್ದೆವು ನೆನಪಿದೆಯೆ? ನೀನೇ ಮರೆತಿರಬಹುದೆಂದು ನನಗೆ ಸಂಶಯ. ನಿನ್ನ ಪತ್ರವೇ ಇಲ್ಲ!!

ಅರೇಬಿಯಾದಿಂದ ನೀವು ಇಂಡಿಯಾಕ್ಕೆ ಹೋದಮೇಲೆ ಕೆಲವೇ ತಿಂಗಳುಗಳ ನಂತರ ನಾವೂ ಪ್ಯಾರಿಸ್ಸಿಗೆ ಬಂದುಬಿಟ್ಟೆವು.

ನಾನು ಪ್ಯಾರಿಸ್ಸಿಗೆ ಬಂದಮೇಲೆ ಮೊದಲು ಮಾಡಿದ ಮುಖ್ಯ ಕೆಲಸವೇನು ಗೊತ್ತೆ? ಅದೇ ನೀನು ಆಗಾಗ ಹೇಳುತ್ತಿದ್ದಿಯಲ್ಲ, ಲೂವ್ರ್ ಮ್ಯೂಸಿಯಂದ ಮೋನಾಲಿಸಾ
ಚಿತ್ರದ ಬಗೆಗೆ. ಅವಳಿಗೆ ಹುಬ್ಬಿಲ್ಲ ಅದು ಅಂದಿನ ಆ ಕಾಲದ ಸೌಂದರ್ಯಪ್ರಜ್ಞೆ ಇರಬೇಕೆಂದು. ಹುಬ್ಬು ಬೋಳಿಸಿ ಅಗಲವಾದ ಶುಭ್ರಹಣೆ ಇಟ್ಟುಕೊಳ್ಳುವದು ಸೌಂದರ್ಯವತಿಯರ, ಜಂಬಗಾರ್ತಿಯರ, ಶ್ರೀಮಂತ ವರ್ಗದವರ ಚಪಲತೆ ಇರಬೇಕೆಂದು. ನಿನ್ನ ಮಾತು ಅದೆಷ್ಟು ಕುತೂಹಲ ಗೊಳಿಸಿತ್ತೆಂದರೆ ಇಡೀ ದಿನ ಮೋನಾಲಿಸಾ ಚಿತ್ರದ ಮುಂದೆಯೇ ನಿಂತುಕೊಂಡು ಎಲ್ಲಾ ಆಂಗಲ್‌ದಿಂದಲೂ ನೋಡಿದ್ದೇ! ನೋಡಿದ್ದು. ಈ ಹಿಂದೆ ನಾನೆಲ್ಲಿಯೂ ಇಷ್ಟೊಂದು ಸಮಯ ಕಳೆದಿರಲಿಲ್ಲ. ಹೌದು ಅವಳು ಮಾಡೆಲ್ ಗರ್ಲ್ ಇರಬೇಕೇನೋ! ನೀನು ಹೇಳಿದಂತೆ ಹಾಗೆಯೇ ಇದ್ದಾಳೆ. ನಾನು ಪ್ಯಾರಿಸ್ಸಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ ಈ ಇಂತಹ ಇನ್ನೂ ಅನೇಕ ಚಿತ್ರ ಕಲೆಗಳ ಕಡೆಗೆ ಗಮನ ಕೊಟ್ಟಿರಲೇ ಇಲ್ಲ.

ಇತ್ತೀಚೆಗೆ ವಾರಕ್ಕೆ ಒಮ್ಮೆಯಾದರೂ ಮ್ಯೂಸಿಯಂಗೆ ಹೋಗುವದೆಂದು ನಿರ್ಧರಿಸಿದ್ದೇನೆ. ಅಷ್ಟೇ ಅಲ್ಲ ಗಾರ್ಡನ್‌ಗೆ ಹೋಗಿ ಹುಲ್ಲಿನ ಮೇಲೆಯೇ ಕೂಡುತ್ತೇನೆ. ಪಕ್ಕದಲ್ಲಿಯೇ ಹರಿಯುವ ಸೈನ್ ನದಿಯ ದಡದಲ್ಲಿ ಕುಳಿತು ಅದರ ನಿರಂತರ ಜುಳು ಜುಳು ನಾದದ ಮೃದು ಸಂಗೀತಕ್ಕೆ ಸಂತೋಷಿಸುತ್ತೇನೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಪ್ಲುಟೋಯ್ ಗಿಡಗಳ ಎಲೆಗಳ ಬಣ್ಣಕ್ಕೆ ಮನಸೋತಿದ್ದೇನೆ. ಭಾನುವಾರ ತಪ್ಪದೇ ಚರ್ಚ್‌ಗೆ ಹೋಗುತ್ತೇನೆ. ಹಾಗೆಯೇ ಮುಖ್ಯವಾಗಿ ಮಕ್ಕಳ ಜವಾಬ್ದಾರಿಯನ್ನೂ ನಾನೇ ತೆಗೆದುಕೊಂಡಿದ್ದೇನೆ. ಹಾಗೆಂದ ಮಾತ್ರಕ್ಕೆ ಮಾರ್ಕ್ ನನಗೆ ಇವುಗಳೆಲ್ಲದರಲ್ಲಿ ಸಹಾಯ ಕೊಡುತ್ತಿಲ್ಲ ಎಂದು ಅರ್ಥ ಅಲ್ಲ. ಈಗ ಅತ ದೊಡ್ಡ ಕಂಪನಿಯೊಂದರಲ್ಲಿ ನಿರ್ದೇಶಕನಾಗಿರುವದರಿಂದ ದಿನದ ಹನ್ನೆರಡು ಗಂಟೆಗಳಷ್ಟು ಕಾಲ ಕೆಲಸದಲ್ಲಿಯೇ ತೊಡಗಿರಬೇಕಾಗುತ್ತದೆ.

ಇತ್ತೀಚಿನ ೨-೩ ತಿಂಗಳಲ್ಲಿ ನಾನು ಬಹಳಷ್ಟು ಬದಲಾಗಿದ್ದೇನೆ ಎಂದು ಮೇಲಿಂದ ಮೇಲೆ ಮಾರ್ಕ್ ಹೇಳುತ್ತಾನೆ. ಬಹುಶಃ ಇದ್ದಿರಲೂಬಹುದು ತಾಸು ತಾಸುಗಳ ವರೆಗೆ ಕನ್ನಡಿಯೆದುರು ಕುಳಿತು ಟೇಬಲ್ ಮೇಲಿರುವ ಎಲ್ಲ ಮೇಕಪ್ ವಸ್ತುಗಳನ್ನು ಮುಟ್ಟದೇ ಏಳುತ್ತಿರಲಿಲ್ಲವಲ್ಲ ಅದಕ್ಕಿರಬಹುದು. ಅಥವಾ ಉಗುರುಗಳಿಗೆ ಶೇಪ್ ಕೊಡುತ್ತ ನೇಲ್ ಪಾಲಿಷ್ ಬಾಟಲ್‌ಗಳನ್ನೆಲ್ಲ ಹರವಿಕೊಂಡು ಹಾಲ್‌ದಲ್ಲಿರುವ ಟೇಬಲ್ ಹಿಡಿದುಕೊಂಡು ಬಿಡುತ್ತಿದ್ದೆನಲ್ಲ ಅದಕ್ಕೂ ಇರಬಹುದೇನೊ,
ಅಥವಾ ನಿನಗೆ ಗೊತ್ತೇ ಇದೆಯಲ್ಲ ನನ್ನ ಇತರ ಚಾಳಿಗಳು, ಅವೂ ಎಲ್ಲಾ ಮಾಯವಾಗುತ್ತಿವೆಯೆಂದೋ ಏನೋ!

ಹೀಗೆ ನಿನಗೆ ಏನೇನೋ ಬರೆಯಬೇಕಾದ ವಿಷಯಗಳು ಬಹಳಷ್ಟು ಇವೆ. ನಿನ್ನ ಪತ್ರಗಳೇ ಇಲ್ಲದ್ದಕ್ಕೆ ನಾನೂ ಸುಮ್ಮನಾಗಿದ್ದೆ ಅಷ್ಟೇ. ಈ ಕಾಗದ ತಲುಪಿದ ತಕ್ಷಣ ನಿನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬರೆ. ಮುಂದಿನ ಪತ್ರದಲ್ಲಿ ನಿನಗೆ ಅತೀ ಮುಖ್ಯವಾದ ವಿಷಯಗಳನ್ನು ಹೇಳಬೇಕಾಗಿದೆ. ಸಾಧ್ಯವಾದರೆ ಇಂಡಿಯಾಕ್ಕೆ ಬರುವ ಪ್ಲಾನ್ ಕೂಡಾ ಮಾಡುತ್ತಿದ್ದೇನೆ. ಮನೆಯವರಿಗೆಲ್ಲ ನಮ್ಮ ನೆನಪು ತಿಳಿಸು.
ವಿತ್ ಲವ್ ಸ್ಟೆಲ್ಲಾ.

ಮಧ್ಯಾಹ್ನ ಬಿಸಿಲಿನಲ್ಲಿಯೇ ಬ್ಯಾಂಕಿನ ಕೆಲಸ ಮುಗಿಸಿಕೊಂಡು ಅದೇ ಮನೆಗೆ ಬಂದು ಇಳಿದಿದ್ದೆ. ಟೇಬಲ್ ಮೇಲಿನ ಈ ಏರ್ ಮೇಲ್ (ಪತ್ರ) ಕೂತೂಹಲ ಮೂಡಿಸಿತ್ತು. ತಂಪಾಗಿ ನೀರು ಕುಡಿದೇ ಓದಬೇಕೆಂದರೂ ಕೈ ಆಟೋಮೆಟಿಕ್ ಆಗಿ ಪತ್ರದ ಕಡೆಗೆ ಹೋಗಿ ಕವರ್ ಒಡೆದಾಗ ಅದರೊಳಗಿನ ಸ್ಟೆಲ್ಲಾಳ ಅಕ್ಷರ ಕಂಡಾಗ ಅದೆಷ್ಟೋ ಸಂತೋಷಪಟ್ಟೆ. ನನ್ನ ಮನೆಗೆ ಅವಳೇ ಬಂದಂತಾಯ್ತು. ಅವಳು ಮಾತಾಡುವ ಲಯ, ಹಾವ ಭಾವ, ಅವಳ ಮೇಕಪ್ ಎಲ್ಲಾ ಹಾಗೆಯೇ ಇದೆ.

ನಾನವಳನ್ನು ಮೊದಲು ನೋಡಿದ್ದು ಜರ್ಮನ್ ಕ್ಯಾಂಪಸ್ಸಿನ ಓಪನ್ ಏರ್ ಥಿಯೇಟರ್‌ದಲ್ಲಿ. ಅಗಾಥಾ ಕ್ರಿಸ್ತಿಯ `ಡೆತ್ ಆನ್ ದಿ ನೈಲ್’ ಪತ್ತೇದಾರಿ ಚಿತ್ರ ಓಡುತ್ತಿತ್ತು. ಕಿಕ್ಕಿರಿದ ಜನರ ಕಣ್ಣೆಲ್ಲಾ ಪರದೆಯ ಮೇಲೆ, ಕ್ಷಣ ಕ್ಷಣಕ್ಕೂ ಕೂತೂಹಲ ಕೆರಳಿಸುವ ಚಿತ್ರ. ನನ್ನ ಮುಂದಿನ ಖುರ್ಚಿಯಲ್ಲಿ ಕುಳಿತ ಆಕೆಗೆ ಚಿತ್ರದ ಕಡೆಗೆ ಗಮನವಿರಲಿಲ್ಲವೇನೊ! ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೊರಳಾಡುತ್ತಿದ್ದುದರಿಂದ ನನಗೆ ಚಿತ್ರ ನೋಡಲು ಕಿರಿ ಕಿರಿ ಆಗುತ್ತಿತ್ತು. ಏನೋ ಅವಳ ಕಣ್ಣಲ್ಲಿ ಹುಡುಕಾಟ ನಡೆದಿತ್ತು. ಇವಳೇನಪ್ಪ ಚಿತ್ರ ನೋಡುವದು ಬೇಡವಾಗಿದ್ದರೆ ಎದ್ದು ಹೊರಗಡೆ ಹೋಗಬಾರದೆ? ಅಥವಾ ಇವಳೇನಾದರೂ
ಈ ಕ್ಯಾಂಪಿನ ಲೇಡಿ ಸಿ ಐ ಡಿ ಆಫೀಸರ್ ಇರಬೇಕೆ? ಅಂದುಕೊಂಡೆ.

ಆಗಲೇ ಅರ್ಧಗಂಟೆ ಆಕೆಯ ಸುತ್ತಲೇ ಸರಿದುಹೋಗಿತ್ತು. ಪತ್ತೇದಾರಿ ಚಿತ್ರ ಕ್ಷಣ ಕ್ಷಣವೂ ನೋಡಿದರೇನೇ ಆನಂದ. ನಡು ನಡುವೆ ಲಿಂಕ್ ತಪ್ಪಿಬಿಟ್ಟರೆ
ಏನೇನೂ ಗೊತ್ತಾಗುವದಿಲ್ಲ. ನನ್ನ ತಾಳ್ಮೆ ತಪ್ಪಿದಂತಾಯ್ತು. ಅವಳ ಭುಜದ ಮೇಲೆ ಕೈಯಿಟ್ಟು ತಾಳ್ಮೆಯಿಂದ ಚಿತ್ರ ನೋಡಲು ಹೇಳಿದೆ. ಅವಳು ನನ್ನತ್ತ
ತಿರುಗಿ ಪ್ರಶ್ನಾರ್ಥಕವಾಗಿ ನೋಡಿ ಕ್ಷಣದಲ್ಲಿಯೇ ಎದ್ದು ಹೊರಟುಹೋದಳು.

ನಾನೇನಾದರು ತಪ್ಪು ಮಾಡಿದೆನೆ ಎನ್ನುವ ಆತಂಕ ನನ್ನಲ್ಲಿಯೂ ಮೂಡಿತು. ಅವಳ ಹಿಂದೆ ಹಿಂದೆಯೇ ಇಬ್ಬರು ಯುವಕರು ಎದ್ದು ಹೋದರು. ಬೇರೆಯವರಿಗೆ ಇದು ಮಾಮೂಲಿಯಾಗಿರಬೇಕು. ಆದರೆ ನನಗೆ ಅವಳದು ವಿಚಿತ್ರ ವರ್ತನೆಯಾಗಿ ಕಂಡಿತು. ಚಿತ್ರ ಮುಂದೆ ಏನೇನು ಓಡುತ್ತಿತ್ತೋ ಸುಮ್ಮನೆ ಕುಳಿತು ನೋಡಿಬಂದೆ.

ಸುಮಾರು ೫ ವರ್ಷದೊಳಗಿನ ಎರಡು ಮುದ್ದು ಮಕ್ಕಳೊಂದಿಗೆ ನಾಲ್ಕೈದು ದಿನಗಳ ನಂತರ ಆಕೆ ಸೂಪರ್ ಮಾರ್ಕೆಟ್ಟಿನಲ್ಲಿ ಕಂಡಳು. ಏನೆಲ್ಲ ಟ್ರಾಲಿಯಲ್ಲಿ
ತುಂಬಿಕೊಂಡು ಗಡಿಬಿಡಿಯಿಂದಲೇ ಹೊರಟು ಹೋದಳು. ಕೌಂಟರಿನ ಪಾಕಿಸ್ತಾನಿಯೊಬ್ಬ ಗಂಡುಬೀರಿ ಗಂಡುಬೀರಿ ಎನ್ನುತ್ತಲೇ ಸಹ ಕೆಲಸಗಾರರೊಂದಿಗೆ
ನಗುತ್ತಿದ್ದ.

ಅವಳ ಪರ್ಸನಾಲಿಟಿಯೇ ಹಾಗೆ ಎಲ್ಲರ ಕಣ್ಣು ಕುಕ್ಕುವಂತೆ. ಹಾಲಿವುಡ್‌ದ ಫಿಲ್ಮ್‌ಸ್ಟಾರ್‌ಗಳಿಗೇನೂ ಕಡಿಮೆ ಇಲ್ಲ ಇವಳು.

ಮತ್ತೊಮ್ಮೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಣಿಸಿಕೊಂಡಳು. ಅಲ್ಲಿಯೂ ತರಾತುರಿ.

ಮಗದೊಮ್ಮೆ ಪಾರ್ಟಿ ಹೌಸಿನಲ್ಲಿ ಬಣ್ಣ ಬಣ್ಣದ ಡ್ರೆಸ್, ಮೇಕಪ್‌ನಲ್ಲಿ ಸುರಸುಂದರಿಯಾಗಿ ಕಂಡಿದ್ದಳು. ಭೇದ ಭಾವವಿಲ್ಲದೆ ಎಲ್ಲರೊಂದಿಗೆ
ಹೊಂದಿಕೊಳ್ಳುವ ಸ್ವಭಾವ ನನಗೆ ಖುಷಿಕೊಟ್ಟಿತು.

ನನ್ನನ್ನೂ ಅವಳು ಎರಡು ಮೂರು ಸಲ ಕಂಡಿದ್ದಾಳೆ. ಅಂತೆಯೇ ಪಾರ್ಟಿಯಲ್ಲಿ ನನಗೆ ಸಿಗರೇಟು ಕೊಡಲು ಬಂದಳು.

`ಬೇಡ’ ಎಂದೆ.

`ಪ್ರಯತ್ನಿಸಿ’ ಎನ್ನುತ್ತ ನನ್ನ ಪಕ್ಕದಲ್ಲಿಯೇ ಕುಳಿತಳು.

`ಬೇಡ ಬೇಡ’ ಎನ್ನುತ್ತಿದ್ದಂತೆಯೇ-

`ಓಹೋ ಭಾರತೀಯ ಮಹಿಳೆಯರು ತುಂಬಾ ಸಂಪ್ರದಾಯಸ್ಥರು ಎಂದು ಕೇಳಿದ್ದೆ. ಹಾಗಾದರೆ ನೀವು ಸಿಗರೇಟು – ಡ್ರಿಂಕ್ಸು ಏನೂ ತೆಗೆದುಕೊಳ್ಳುವದಿಲ್ಲ
ವೆಂದಾಯ್ತು’ ಅಂದಳು.

`ಸರಿ ಡಾನ್ಸ್‌ಗಾದರೂ ಜಾಯಿನ್ ಆಗಿ’ ಎನ್ನುತ್ತ ಬಿಡದೇ ನನ್ನ ಕೈ ಹಿಡಿದು ಎಳೆಯತೊಡಗಿದಳು.

ನಿನ್ನೂಂದಿಗೆ ಮಾತ್ರ ಎನ್ನುತ್ತ ಐದು ನಿಮಿಷ ಅವಳೊಂದಿಗೆ ಹೆಜ್ಜೆಹಾಕಿ ಮತ್ತೆ ಬಂದು ಕುಳಿತುಕೊಂಡೆ.

ಮುಂದೆ ಹೀಗೆಯೇ ಆಗೀಗ ಭೆಟ್ಟಿಯಾಗುತ್ತಾ ಹಲೋ! ಹಲೋ! ಹೇಳುತ್ತಿದ್ದೆವು.

ಸ್ಟೆಲ್ಲಾಳ ಸ್ವಭಾವವೇ ವಿಚಿತ್ರ. ಯಾವ ಸಮಯದಲ್ಲಾದರೂ ಎಲ್ಲಿಯಾದರೂ ಹೋಗಬೇಕೆಂದರೆ ಹೊರಟೇ ಬಿಡುವದು ಮಾತನಾಡಬೇಕೆನಿಸಿದರೆ ರಸ್ತೆಯಲ್ಲಿಯೋ ಫೋನ್ ದಲ್ಲಿಯೋ ತಾಸುಗಟ್ಟಲೇ ಮಾತನಾಡುವದು, ಬೇರೆಯವರಿಗೆ ತೊಂದರೆಯಾದೀತು ಎನ್ನುವ ಸೂಕ್ಷ್ಮತೆ ಕೂಡಾ ಇಲ್ಲದ ಮನುಷ್ಯಳು ಇವಳು.

ಅಬ್ಬಾ! ಅವಳು ಪಾರ್ಟಿಗಳಲ್ಲಿ ಇದ್ದುಬಿಟ್ಟರಂತೂ ಅದಕ್ಕೇನು ರಂಗೇರುತ್ತಿತ್ತು ಎಂದರೆ ಕುಡಿದವರ ಕಣ್ಣುಗಳಿಗೆಲ್ಲಾ ಪಂಚರಂಗಿ ನವರಂಗಿಯಾಗಿ
ಕಾಣುತ್ತಿದ್ದಳು. ಇವಳೂ ಒಂದಿಷ್ಟು ಗುಂಡು ಇಳಿಸಿಕೊಂಡಾಗಂತೂ ಕೇಳಲೇಬೇಕು ಅವಳ ಗಮ್ಮತ್ತಿನ ಮಾತುಗಳು. ಹೊಟ್ಟೆ ಹುಣ್ಣಾಗುವಷ್ಟು ನಕ್ಕೂನಕ್ಕೂ ಹಣ್ಣಾಗಿ
ಬಿಡುತ್ತಿದ್ದೆವು. ಗುಂಡು ತಲೆಗೆ ಏರಿದ ಗಂಡಸರು ಇವಳ ಸುತ್ತ ಸುತ್ತುವ ಹದ್ದುಗಳಂತೆ ಕಾಣಿಸುತ್ತಿದ್ದರು. ಹಾಗೆ ಕಾಣಿಸಲಿಕ್ಕೆ ಕಾರಣ ಸ್ಟೆಲ್ಲಾ ಅರೆ
ಉಡುಪಿನಲ್ಲಿ ಎದ್ದು ಕಾಣುವ ಅಂಗಸೌಷ್ಟವದಲ್ಲಿ ಕುಣಿದಾಡುತ್ತಿದ್ದುದು ಅವರೆಲ್ಲಾ ಮತ್ತೆ ಮತ್ತೆ ಇವಳ ಹತ್ತಿರ ಬಂದು ಮೈ ಕೈ ಮುಟ್ಟಿ ಡಾನ್ಸ್‌ಗೆ
ಎಳೆದಾಡುವ ರೀತಿ ಇವಳು ಅವರ ಎದೆಗಳ ಮೇಲೆ ಒರಗಿ ಹೆಜ್ಜೆ ಇಡುವ ಪರಿ, ಆಗಾಗ ಹೋ ಎಂದು ಎಲ್ಲರೂ ಒಟ್ಟಿಗೆ ಕಿರುಚಾಡುವ ಕುಣಿದಾಡುವ ರೀತಿ ನಿಜಕ್ಕೂ ಪಾರ್ಟಿಯೆಂದರೆ ಹೀಗೆಯೇ ಇರುತ್ತದೆ ಎನ್ನುವ ಚಿತ್ರ ಕೊಟ್ಟವಳು ಸ್ಟೆಲ್ಲಾ.

ಇದ್ದಕ್ಕಿದ್ದಂತೆ ಒಂದು ಸಲ ಸ್ಟೆಲ್ಲಾ ನನ್ನ ಹತ್ತಿರ ಬಂದು, `ನಾನು ನಿಮ್ಮ ಮನೆಗೆ ಬರಬೇಕು. ಕರೆಯುವದಿಲ್ಲವೆ?’ ಎಂದಳು.

`ಅದಕ್ಕೇನಂತೆ ಧಾರಾಳವಾಗಿ ಬಾ’ ಎಂದು ಆಮಂತ್ರಣ ಕೊಟ್ಟಿದ್ದೆ. ಹಾಗೆ ಹೇಳಿದ್ದೇ ಸಾಕು. ಮರುದಿನ ಬೆಳಿಗ್ಗೆ ೯ ಗಂಟೆಗೆ ಬಾಗಿಲಿಗೆ ಬಂದು ಬೆಲ್ ಹಾಕಿಯೇ ಬಿಟ್ಟಳು. ನಾನು ನಿರೀಕ್ಷಿಸಿಯೇ ಇರಲಿಲ್ಲ. ಚೆನ್ನಾಗಿ ತಲೆಗೆ ಎಣ್ಣೆ ಹಾಕಿಕೊಂಡು ಗಂಟು ಕಟ್ಟಿಕೊಂಡಿದ್ದೆ. ಮುಖಕ್ಕೂ ಎಣ್ಣೆ ಇಳಿದಿತ್ತು. ಯಾರೇ ಬರುವವರಿದ್ದರೂ ಫೋನ್ ಮಾಡಿ ಸಮಯ ಹೊಂದಿಸಿಕೊಂಡು ಬರುವ ಜನರು ಇಲ್ಲಿರುವಾಗ ಈಗ ಯಾರು ಇರಬಹುದು ಎಂದು ಅನುಮಾನಿಸುತ್ತಲೇ ಬಾಗಿಲು
ತೆರೆದೆ.

ನಾನು ಸ್ಟೆಲ್ಲಾ ಎನ್ನುತ್ತ ಒಳಗೆ ಬಂದೇ ಬಿಟ್ಟಳು. ನನ್ನ ಅವಸ್ಥೆಯ ಬಗೆಗೆ ನನಗೇ ಮುಜುಗುರ. ಇದ್ಯಾಕಪ್ಪಾ ಈಗ ಬಂದಳು ಇವಳು ಎಂದು ಮನಸ್ಸಿನಲ್ಲಿಯೇ ಕಿರಿ ಕಿರಿ ಅನುಭವಿಸಿಕೊಳ್ಳುತ್ತಾ ಕೃತಕ ನಗೆ ಬೀರಿ ಸ್ವಾಗತಿಸಿದೆ.

`ಕುಳಿತುಕೋ ಬಂದೆ’ ಎಂದು ಹೇಳಿ ಅವಳನ್ನು ಕೂರಿಸಿ ಒಳಗೆ ಹೋದವಳೇ ಟವೆಲ್‌ದಿಂದ ಮೊದಲು ಮುಖದ ಎಣ್ಣೆಯೆಲ್ಲ ಒರೆಸಿಕೊಂಡು ಸ್ವಲ್ಪ ನೀಟಾಗಿ ಬಂದೆ.

ಅಷ್ಟರಲ್ಲಿಯೇ ಅವಳು ನನ್ನ ಪರಮೀಶನ್ ಇಲ್ಲದೆ ಸಿಗರೇಟು ಸೇದುತ್ತಿದ್ದಳು. ಸ್ಟೀರಿಯೋದಲ್ಲಿಯ ಹಿಂದಿಯ ಹಾಡು ಕೇಳಿಸಿಕೊಳ್ಳುತ್ತಿದ್ದಳೆಂದು ಕಾಣಿಸಿತು.

ಇದೇನು ಹಾಡು, ಇಷ್ಟು ನಿಧಾನಕ್ಕೆ, ಏನಿದರ ಅರ್ಥ ಎಲ್ಲ ಒಮ್ಮೆಯೇ ಕೇಳಿಬಿಟ್ಟಳು. ಅವಳ ಕಿವಿಗಳು ಜಾಝ್ ಅಥವಾ ಡಿಸ್ಕೋ ಕೇಳಿ ಕೇಳಿ
ಸೂಕ್ಷ್ಮತೆಯನ್ನು ಕಳೆದುಕೊಂಡಿರಬೇಕೇನೋ ಅಂದುಕೊಂಡೆ.

ಭಕ್ತಿಗೀತೆಗಳು ಎಂದು ಹೇಳಿ ಸ್ವಲ್ಪದರಲ್ಲಿಯೇ ಅದರ ಅರ್ಥ ವಿವರಿಸಿದೆ. ಅವಳು ಜೋರಾಗಿ ಸಿಗರೇಟು ಎಳೆದು ಕೊನೆಯ ತುಣುಕನ್ನು ಗ್ಲಾಸ್ ತಟ್ಟೆಗೆ
ಒತ್ತಿ ಒಗೆದಳು.

ಸುಮಾರು ಒಂದು ಗಂಟೆಯ ವರೆಗೆ ನಮ್ಮ ಮೊದಲು ಪರಿಚಯದ ಮಾತುಕತೆಗಳಾದವು. ಮಧ್ಯಕ್ಕೆ ಬ್ರೇಕ್‌ಫಾಸ್ಟ್‌ ಎರಡು ಇಡ್ಲಿ ಚಟ್ನಿ ಕೊಟ್ಬಾಗ
ತುಂಬಾ ಸಂತೋಷಪಟ್ಟಳು.

ಹೀಗೆ ನಮ್ಮ ಪರಿಚಯ ಒಂದು ವರ್ಷದಲ್ಲಿ ಸಾಕಷ್ಟು ಸಲುಗೆಯನ್ನೂ ತಂದುಕೊಟ್ಟಿತ್ತು. ಆ ಸಲುಗೆ ಸಾಕಷ್ಟು ಸಲ ಯಾವುದೋ ವಿಷಯ ಚರ್ಚೆ
ಮಾಡುತ್ತ ವಾದವಿವಾದದಲ್ಲಿ ಮುಗಿಯುತ್ತಿತ್ತು.

ನೀನು ತುಂಬಾ ಸುಂದರಿ, ಪ್ಯಾರಿಸ್ಸಿನ ಮೋನಾಲಿಸಾ ನೀನೆ ಇರಬೇಕೆಂದಿದ್ದೆ.

ಯಾರು ಅವಳು ನನಗೆ ಗೊತ್ತಿಲ್ಲ – ಎಂದಾಗ ನನಗೆ ಬೇಸರವಾಗಿತ್ತು. ಪ್ಯಾರಿಸ್ಸಿನಲ್ಲಿಯೇ ಹುಟ್ಟಿಬೆಳೆದರೂ ಮದುವೆಯಾಗಿ ಎರಡು ಮಕ್ಕಳಾಗಿದ್ದರೂ
ತನ್ನ ದೇಶದ ಅತೀ ಪ್ರಾಮುಖ್ಯ ಪಡೆದ ಒಂದು ಚಿತ್ರಕಲೆಯ ಬಗೆಗೆ ಗೊತ್ತಿಲ್ಲವಲ್ಲ ಇವಳಿಗೆ ಎಂದುಕೊಂಡೆ.

ಆದರೆ ಒಪೇರ ಹೌಸಗಳು, ಕ್ಲಬ್, ಥಿಯೇಟರ್‌ಗಳ ಬಗೆಗೆ ಏನಾದರು ಕೇಳಿದರೆ ಪಟಪಟಾಂತ ಹೇಳಿಬಿಡುತ್ತಿದ್ದಳು. ಸುಂದರಿ ಆದುದಕ್ಕೆ ಅವಳಿಗೆ
ಧಿಮಾಕು ಜಾಸ್ತಿಯಾಗಿಯೇ ಇರಬೇಕು. ಸುರಸುಂದರಾಂಗ ಗಂಡ ಇದ್ದರೂ ಯಾವತ್ತೂ ತನ್ನ ಹಿಂದೆ ನಾಲ್ಕು ಜನ ಬಾಯ್‍ಫ್ರ್‍ಎಂಡ್ಸ್ ಗಳು ಓಡಾಡಿಕೊಂಡಿರ
ಬೇಕೆನ್ನುವ ಅತೀ ಹುಚ್ಚು ಸ್ಟೆಲ್ಲಾಳಿಗೆ.

ಗಂಡ ಮಾರ್ಕ್ ಗಂಭೀರವಾದ ಮನುಷ್ಯನೇ. ಹಾಗೆಂದ ಮಾತ್ರಕ್ಕೆ ಅವನ ಕುಡಿತಕ್ಕೇನೊ ಗಂಭೀರತೆ ಇರಲಿಲ್ಲ. ಕಡಿಮೆ ಎಂದರೂ ೮-೧ಂ ಗ್ಲಾಸ್‌ಗಳಷ್ಟು
ಸಹಜವಾಗಿ ಇಳಿಸಿಕೊಳ್ಳುತ್ತಿದ್ದ. ಮಾತುಗಳಲ್ಲಿ ಗಂಭೀರತನ ಅಷ್ಟೆ. ಅವರ ಮಕ್ಕಳನ್ನು ನೋಡುವದೇ ಅಪರೂಪವಾಗಿತ್ತು ನನಗೆ. ಎಂದೂ ಹಟಮಾಡಿ
ತಂದೆ ತಾಯಿಗಳ ಬೆನ್ನು ಹತ್ತಿದ್ದೇ ಇಲ್ಲ.

ಸ್ಟೆಲ್ಲಾ ಇತ್ತೀಚಿಗೆ ತನ್ನ ಬಾಹ್ಯ ಸಂಬಂಧಗಳ ಬಗೆಗೂ ಹೇಳಿಕೊಳ್ಳುತ್ತಿದ್ದಳು. ಮಾರ್ಕ್ ನಿಗೆ ಜೀವನ ಹೇಗೆ ಅನುಭವಿಸಬೇಕು ಅನ್ನೋದೇ ಗೊತ್ತಿಲ್ಲ – ಕೆಲಸ ಕೆಲಸ ಎಂದು ಪೇಪರಗಳ ರಾಶಿಯಲ್ಲಿ ಕುಳಿತಿದ್ದರೆ, ನಾನು- ಮಕ್ಕಳು ಅವನ ಕಣ್ಣಲ್ಲಿ ಕಾಣುವದು ಹೇಗೆ? ನಮ್ಮನ್ನೂ ರದ್ದಿ ಅಂತಾ ತಿಳಿದುಕೊಂಡುಬಿಟ್ಟಿದ್ದಾನೆ. ಇಂಥವನಿಗೆ ಹೆಂಡತಿ ಮಕ್ಕಳು ಯಾಕೆ ಬೇಕು. ಬೇಕಿದ್ದರೆ ರೆಡ್ ಲೈಟ್ ಏರಿಯಾ ಕ್ಕೆ ಹೋಗಿ ಬಂದು ಬಿಟ್ಟರಾಯ್ತು ಮುಗಿಯುತ್ತದೆ
ಅಂದಂದಿನ ದೈಹಿಕ ಹಸಿವು. ಇವನನ್ನೇ ನಂಬಿಕೊಂಡು ನಾನು ಅದೆಷ್ಟು ದಿನ ಹೀಗೆ ಕಳೆಯುವದು-ನನಗೂ ಯಾವುದಕ್ಕೂ ಸ್ವಾತಂತ್ರ್ಯ ಬೇಕಲ್ಲವೇ? ಹೀಗೆ
ಚಳುವಳಿಕಾರರು ತಮ್ಮ ದುಃಖದುಮ್ಮಾನ ತೋಡಿಕೊಳ್ಳುವಂತೆ ಇವಳೂ ಆಗಾಗ ಕೂಗಾಡಿ ಗಂಡನನ್ನು ತನ್ನ ಬಾಯಿಯಲ್ಲಿ ಹುರಿದು ಹುರಿಗಾಳು ಮಾಡಿಬಿಡುತ್ತಿದ್ದಳು, ಕೇಳುಗರಿಗೆಲ್ಲ.

ನಿಕ್ ಹೀಗಿದ್ದಾನೆ, ಮ್ಯಾಥ್ಯೂ ಹಾಗಿದ್ದಾನೆ. ಅವರ ಅಪ್ಪುಗೆಯಲ್ಲಿಯೇ ಇರುವದು ನನಗೆ ಖುಷಿ. ಮಾತು ಹರಟೆ ನಗು ಸಂತೋಷ ಓಹ್, ಎಷ್ಟೊಂದು ಸುಂದರವಾದ ದಿನಗಳು ಅವರೊಂದಿಗೆ ಎಂದು ನಿಟ್ಟುಸಿರಿಡುತ್ತಿದ್ದಳು.

ಇಂಥವೆಲ್ಲಾ ಮಾತನಾಡುವಾಗ ನಾನು ಸುಮ್ಮನಿದ್ದುಬಿಡುತ್ತಿದ್ದೆ. ಕಾರಣ ಇಷ್ಟೇ ಒಂದೊಂದು ಸಲ ಕುಡಿದಿರುತ್ತಿದ್ದಳು, ಅಥವಾ ಮಾರ್ಕ್ ನೊಂದಿಗೆ
ಸಾಕಷ್ಟು ಜಗಳವಾಡಿ, ಹೊಡೆದಾಟವೂ ಆಗಿ ಎಲ್ಲೋ ಒಂದು ಕಡೆಯ ಪೆಟ್ಟಿನಿಂದ ನರಳುತ್ತಿದ್ದಳು. ಅಥವಾ ನನಗೊಂದು ಸಲ ಮೊದಲೇ ಹೇಳಿದಂತೆ ಅವಳು
ಉದ್ವೇಗದಿಂದ ಮಾತನಾಡುವಾಗ ನಾನು ನಡುವೆ ಮಾತನಾಡಲೇಬಾರದು, ಪ್ರಶ್ನೆ ಕೂಡಾ ಹಾಕಲೇಬಾರದೆಂದು ಹೇಳಿದ್ದರಿಂದ ಒಟ್ಟಿನಲ್ಲಿ ನಾನು ಸುಮ್ಮನಿರುತ್ತಿದ್ದೆ.
ಸ್ವಲ್ಪ ಹೊತ್ತು ಕೂಗಾಡಿ ಶಾಂತವಾದ ನಂತರ ತಾನೇ ಎದುರು ಒಳಗಡೆ ಹೋಗಿ ಕಾಫಿಯೋ ಅಥವಾ ಕೋಲ್ಡ್ ಡ್ರಿಂಕ್ ತೆಗೆದುಕೊಂಡು ಬರುತ್ತಿದ್ದಳು.

`ಕುಟುಂಬದಲ್ಲಿ ಏನೇನೋ ಸಮಸ್ಯೆಗಳಿರುತ್ತವೆ ಸ್ಟೆಲ್ಲಾ ಅದನ್ನೇ ದೊಡ್ಡದು ಮಾಡಬಾರದು. ಹೀಗೆಲ್ಲ ಮಾಡುವದರಿಂದ ನಮ್ಮ ಕಾಲು ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಅಲ್ಲವೆ?’ ಎಂದರೆ.

`ಓ ಡಿಯರ್ ಕಮಾನ್, ನಾನು ಭಾರತೀಯ ಮಹಿಳೆಯಲ್ಲ’ ಎಂದು ಕ್ಷಣದಲ್ಲಿಯೇ ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದಳು. ಪ್ರತಿಸಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಎನ್ನುವ ಗಾದೆ ಮಾತು ನೆನಪಿಸಿಕೊಳ್ಳುತ್ತ ಇವಳಿಗೆ ಏನೇನೂ ಹೇಳಿ ಪ್ರಯೋಜನವಿಲ್ಲವೆಂದು ಸುಮ್ಮನಾಗಿಬಿಡುತ್ತಿದ್ದೆ.

ನನ್ನ ತಂದೆ ಕೂಡಾ ಹೀಗೇ ಇದ್ದ. ಟೆಕ್ಸ್‍ಟೈಲ್ ಮಿಲ್ ನ ಕಾರ್ಮಿಕ ವರ್ಗದ ಲೀಡರ್ ಎಂದ ಮೇಲೆ ಕೆಲಸದ ಒತ್ತಡ ಇದ್ದೆ ಇರುತ್ತಿತ್ತು. ೧೮ ಗಂಟೆಗಳಷ್ಟು ನಿಂತು ಕೆಲಸಮಾಡುವಲ್ಲಿ ಸಾಕಷ್ಟು ಶ್ರಮಪಡುತ್ತಿದ್ದ. ಒಳ್ಳೆಯ ಹೆಸರೂ ಇತ್ತು. ಆದರೂ ಅಮ್ಮನಿಗೆ ಪ್ರೀತಿಯೇನೂ ಕಡಿಮೆ ಮಾಡಿರಲಿಲ್ಲ.
ಸಿಗುವ ಸಮಯದಲ್ಲಿ ಅವಳನ್ನು ಸಾಕಷ್ಟು ಖುಷಿಯಲ್ಲಿ ಇಡುತ್ತಿದ್ದ. ಮಿಲ್ಲಿನಲ್ಲಿ ಒಮ್ಮೆ ಸ್ಟ್ರೈಕ್ ಆದಾಗ ತಿಂಗಳುಗಟ್ಟಲೇ ಹಣ ಇಲ್ಲದೇ ಪರದಾಡಬೇಕಾಯಿತು. ಕಾರ್ಮಿಕರು ಹಸಿವು ತಾಳದೇ ರೊಚ್ಚಿಗೆದ್ದಾಗ ಮಾಲಿಕರ ಗುಂಡಿನೇಟಿಗೆ ಒಂದು ಕಾಲು ಕಳೆದುಕೊಂಡು ತಂದೆ ಮನೆ ಹಿಡಿದಾಗ ತಾಯಿ ಕೆಲಸ ಹುಡುಕಿಕೊಂಡು ಮಕ್ಕಳನ್ನು ಬಿಟ್ಟು, ಹೊರಬೀಳಬೇಕಾಯಿತು. ಹೊರಗೆ ಶ್ರೀಮಂತ ವ್ಯಕ್ತಿಯೊಬ್ಬನ ಪರಿಚಯವಾಗಿ ತಂದೆಗೆ ಡೈವೋರ್ಸ್ ಕೊಟ್ಟಾಗ ತನಗೆ ಹತ್ತು ವರ್ಷದ ಪ್ರಾಯ ಎಂದು ಹೇಳಿದ್ದಳು.

ಮುಂದೆ ತಾನು ಶಾಲೆಯಲ್ಲಿ ಓದುತ್ತಿರುವಾಗಲೇ ಡೇಟಿಂಗ್ಸ್ ಸುರುಮಾಡಿಕೊಂಡು ಓಡಾಡುತ್ತಿದುದು – ೧೩ನೆಯ ವಯಸ್ಸಿನಲ್ಲಿಯೇ ಬಸಿರು ನಿಂತು ತಂದೆಯಿಂದ ಸಿಟ್ಟಗೆಬ್ಬಿಸಿಕೊಂಡದ್ದು – ನಂತರ ಬಸಿರು ತೆಗೆಸಿ ಹೈಸ್ಕೂಲ್ ವರೆಗೆ ಓದು ಮುಗಿಸಿದ್ದು – ಸೇಲ್ಸ್‌ಗರ್ಲ್ ಆಗಿ ಕೆಲಸಮಾಡಿದ್ದು ಇತರ ೪-೫ ಹುಡುಗರ ಒಟ್ಟಿಗೆ ಓಡಾಡುತ್ತಿದ್ದುದು – ಸುಂದರ ಹುಡುಗ ಮಾರ್ಕ್ ನ ಪರಿಚಯವಾಗಿ ಬಿಡದೇ ತಾನೇ ಅವನ ಬೆನ್ನು ಹತ್ತಿದ್ದು – ಎಲ್ಲಾ ಹೇಳುತ್ತ ಒಮ್ಮೊಮ್ಮೆ ತನ್ನ ಸಾಧನೆ ಅತೀ ದೊಡ್ಡದು ಅನ್ನುವ ತರಹ ನಗುತ್ತಿದ್ದಳು.

`ನಿನ್ನ ಬಗೆಗೆ ನೀನು ಏನು ಹೇಳುವದೇ ಇಲ್ಲವಲ್ಲ’ ಎಂದು ನನ್ನನ್ನೂ ಸಾಕಷ್ಟು ಸಲ ಕೇಳಿದ್ದಳು.

`ನಿನ್ನಷ್ಟು ವಿಷಯಗಳು ನನ್ನಲ್ಲಿ ಇಲ್ಲ. ಎಲ್ಲ ನಮ್ಮ ಸಂಪ್ರದಾಯಗಳ ಇತಿ ಮಿತಿಯಲ್ಲಿ ಸರಳವಾಗಿ ನಡೆದುಕೊಂಡು ಹೋಗುತ್ತಿದ್ದೆ’ – ಎಂದಾಗ.

`ನೀವು ಭಾರತೀಯರು ಅಪ್ರಯೋಜಕರು ಲೈಫ್ ಎನ್ಜಾಯ್ ಮಾಡುವದು ಗೊತ್ತಿಲ್ಲ. ಗೋಣು ಅಲ್ಲಾಡಿಸುತ್ತ ಗಂಡನ ಹಿಂದೆ ನಡೆಯುವದೊಂದೇ ಗೊತ್ತು’ ಎನ್ನುತ್ತ ನನ್ನ ಮರುಮಾತು ಕೇಳದೇ ವ್ಯಂಗ್ಯವಾಗಿ ನಗುತ್ತಿದ್ದಳು.

ಎಷ್ಟು ಸೊಕ್ಕು ಇವಳಿಗೆ ಎಂದುಕೊಳ್ಳುತ್ತ ಆಗಾಗ ಅವಳ ರಟ್ಟೆ ಹಿಡಿದು ಹೊರಡು ಮನೆಗೆ ಎಂದು ಕಳಿಸಿಬಿಡುತ್ತಿದ್ದೆ.

ಫೋನ್ ಗಂಟೆಯ ಶಬ್ದಕ್ಕೆ ಸ್ಟೆಲ್ಲಾಳ ಸುತ್ತ ತಿರುಗುತ್ತಿದ್ದ ನನ್ನ ಅವಳ ಸ್ನೇಹಕ್ಕೆ ಕಡಿವಾಣ ಹಾಕಿದಂತಾಗಿ ಎದ್ದೆ.
***

ನನ್ನ ಪತ್ರ ಅವಳಿಗೆ ತಲುಪಿದುದಾಗಿ ತುಂಬಾ ಸಂತೋಷದಿಂದ ಮತ್ತೆ ಉದ್ದನೆಯ ಪತ್ರ ಬರೆದಿದ್ದಾಳೆ. ಭಾರತಕ್ಕೆ ಅವಳು ಬರುವದಕ್ಕೆ ಹಾರ್ದಿಕ
ಸ್ವಾಗತ ಕೋರಿದ್ದಕ್ಕೆ ಅವಳಿಗೆ ಸಾಕಷ್ಟು ಸಂತೋಷವಾಗಿದೆಯೆಂದು ತಿಳಿಸಿ ಮುಂದಿನ ತಿಂಗಳು ಮೊದಲ ವಾರದಲ್ಲೇ ಬರುವ ಹಾಗೆ ಈಗಿನಿಂದಲೇ ತಯಾರಿ
ನಡೆಸಿದ್ದೇನೆಂದು ಬರೆದಿದ್ದಳು.

ಇದೇನು ಇವಳು ಇಂಡಿಯಾಕ್ಕೆ ಬರುತ್ತೇನೆಂದು ಮತ್ತೆ ಮತ್ತೆ ಹೇಳುತ್ತಿದ್ದಾಳಲ್ಲ! ನನಗೆ ಅಶ್ಚರ್ಯವಾಯಿತು. ಅವಳ ಬಿಸಿರಕ್ತ ತಣ್ಣಗಾಗಿ ಹಸಿಮಾಂಸ ಹದಗೆಟ್ಟಿರಬೇಕೇನೊ! ಬಹುಶಃ ಅವಳ ಕಡೆಗೆ ಮೊದಲಿನಂತೆ ಈಗ ಯಾರೂ ಬೆನ್ನುಹತ್ತುತ್ತಿಲ್ಲವೋ ಏನೊ! ಅಂದುಕೊಳ್ಳುತ್ತ ಮುಂದಿನ ಪತ್ರ
ಓದತೊಡಗಿದೆ.

ತನ್ನ ಎಳೆಯ ಮಕ್ಕಳಿಬ್ಬರೂ (ಈಗ ೧೧-೧೨ ವರ್ಷದ ಮಕ್ಕಳು) ಈ ಪ್ಯಾರಿಸ್ಸಿನ ಮುಕ್ತ ಲೈಂಗಿಕತೆಯಲ್ಲಿ, ಹದಗೆಟ್ಟಿರುವ ಸಂಸ್ಕೃತಿಯಲ್ಲಿ ಬಿದ್ದಿರುವದಾಗಿ ಹೇಳುತ್ತ ಇತ್ತೀಚೆಗೆ ಅದೇಕೋ ತನ್ನ ಮೇಲೆ ತನಗೇ ಜಿಗುಪ್ಸೆಯಾಗುತ್ತಿದೆ ಎಂದಿದ್ದಾಳೆ. ಹುಡುಗನಾಗಲೀ ಹುಡುಗಿಯಾಗಲೀ ತನ್ನ ೧೫-೨ಂನೆಯ
ವಯಸ್ಸಿನಲ್ಲಿ ಕುಡಿಯುವದು, ಸೇದುವದು, ಡ್ರಗ್ಸ್‌ ತೆಗೆದುಕೊಳ್ಳುವದು, ಕಾಮುಕರಾಗುವದು ಏನೆಲ್ಲ ಮಾಡಿ ಮುಗಿಸಿ ಮುಂದೆ ಅದಕ್ಕೆ ಏನೂ ಅರ್ಥವಿಲ್ಲದೆ
ಎಲ್ಲದರ ಬಗೆಗೆ ಕೂತೂಹಲ ಕಳೆದುಕೊಂಡು, ಮಾನಸಿಕವಾಗಿ ಅಸ್ವಸ್ಥತೆಯಿಂದ ಬದುಕುತ್ತ ಜೀವನ ಸಾಗಿಸುತ್ತೇವೇನೋ ಅನಿಸಿದೆ ಎಂದು ಬಹಳ ವಿವರವಾಗಿ
ತಿಳಿಸಿದ್ದಾಳೆ.

ಜೀವನದ ಮೌಲ್ಯಗಳನ್ನು ಗಟ್ಟಿಯಾಗಿ ಉಳಿಸಿಕೊಂಡ ಭಾರತೀಯ ಮಹಿಳೆಯರೊಂದಿಗೆ, ಜನರೊಂದಿಗೆ ಒಂದಿಷ್ಟು ದಿನ ಇರಬೇಕೆಂದು ವ್ಯಕ್ತಪಡಿಸಿದ್ದಾಳೆ. ಹಾಗೆಯೇ ಬರೆಯುತ್ತಾ ಭಾರತೀಯ ನೆಲದಲ್ಲಿ ಅಡ್ಡಾಡಲು, ಗಂಗೆಯಲ್ಲಿ ಮುಳುಗಿ ಏಳಲು, ತಾಜ್‌ಮಹಲ್ ನೋಡಲು, ಗಾಂಧಿ ಆಶ್ರಮದಲ್ಲಿರಲು ಹವಣಿಸಿ ದೀರ್ಘಪತ್ರ ಬರೆದಿದ್ದಳು.

ಈ ವಿಷಯವಾಗಿ ನಾನು ಈಗ ನಗಬೇಕೋ ಅಥವಾ ಇದು ಅವಳ ಹೊಸನಾಟಕ ಎಂದು ತಿಳಿದುಕೊಳ್ಳಬೇಕೋ ಏನೊಂದೂ ತಿಳಿಯದಾಯಿತು.

ಮೊದಲು ಮೊದಲೆಲ್ಲಾ ಸ್ಟೆಲ್ಲಾ ತುಂಬಾ ವಿಚಿತ್ರವಾಗಿ, “ನೀನು ಕಲ್ಲುದೇವರುಗಳಿಗೆ, ನಿಸರ್ಗದ ವಿಚಿತ್ರಗಳಿಗೆಲ್ಲಾ `ಓಂ’ ಅಂತಾ ಕೂತಿರು ಎಂದಾಗಲೀ, “ನಿಮ್ಮ ಸಂಪ್ರದಾಯಗಳೆಲ್ಲಾ ಅಂಟುರೋಗಗಳಿದ್ದಹಾಗೆ” ಎಂದಾಗಲೀ ಆಗಾಗ ನನ್ನ ಭಾವನೆಗಳನ್ನು ಕೆರಳಿಸುತ್ತಿದ್ದಳು.

ಇಲ್ಲಿ ಮತ್ತೆ ಅವುಗಳನ್ನೆಲ್ಲಾ ನೆನಪಿಸಿಕೊಂಡು ಕೊನೆಯ ಸಾಲಿನಲ್ಲಿ `ಈಗ ಇವುಗಳಿಗೆಲ್ಲ ತಲೆಬಾಗಿದ್ದೇನೆ’ ಎಂದು ವಿನಮ್ರವಾಗಿ ತಿಳಿಸಿದ್ದಾಳೆ. ಅದೇಕೋ
ಸ್ಟೆಲ್ಲಾ ಮತ್ತೆ ನನಗೆ ಆತ್ಮೀಯವಾಗಿ ಕಂಡಳು.
***

ಸ್ಟೆಲ್ಲಾ ಏರ್‌ಪೋರ್ಟ್‌ ಹೊರಗೆ ಬಂದಾಗ ತಕ್ಷಣಕ್ಕೆ ನಾನವಳನ್ನು ಗುರುತು ಹಿಡಿಯಲಿಕ್ಕಾಗಲೇ ಇಲ್ಲ. ಪ್ರಯಾಣದ ಆಯಾಸವಿರಬೇಕೇನೋ ಅಂದುಕೊಂಡೆ,
ಅದೂ ಅಲ್ಲ ತುಂಬಾ ಸಣ್ಣಗಾಗಿ ಸಾಧಾರಣ ಬಟ್ಟೆಯಲ್ಲಿದ್ದ ಇವಳು ಅದೇ ಮೊದಲಿನ ಸ್ಟೆಲ್ಲಾಳೇ ಇರಬೇಕಾ? ಎಂದು ಅಶ್ಚರ್ಯದಿಂದ ನೋಡಿದೆ.

ಎಷ್ಟೊಂದು ಸಂತೋಷ ನಮ್ಮಿಬ್ಬರಿಗೂ. ಮನೆ ಸೇರುವವರೆಗೆ ಬಹುಶಃ ಅನೇಕ ವಿಷಯಗಳ ಒಂದು ಸುತ್ತು ಮಾತನಾಡಿದೆವು.

ಹೋದವರ್ಷ ಕಾರ್ ಆಕ್ಸಿಡೆಂಟ್‌ದಲ್ಲಿ ತಲೆಗೆ ಭಾರೀ ಪೆಟ್ಟಾಗಿ ಮೇಜರ್ ಆಪರೇಶನ್ ಆದದ್ದು ಹೇಳಿ, ಒಂದು ವರ್ಷ ಮನೆಯಲ್ಲಿಯೇ ಬೆಡ್ ರೆಸ್ಟ್ ಎಂದು ಬಿದ್ದುದಾಗಿಯೂ ಹೇಳಿದಳು. ಬಹುಶಃ ಅವಳಿಗೆ ಅನೇಕ ಪರಿವರ್ತನೆಗಳು ಈ ಸಮಯದಲ್ಲಿಯೇ ಆಗಿರಬೇಕೆಂದುಕೊಂಡೆ.

ಈಗ ಸ್ಟೆಲ್ಲಾಳಿಗೆ ಶಿಲಾ ಎನ್ನುತ್ತೇನೆ. ಅದರರ್ಥ ಕಲ್ಲು ಎಂದು ಕೇಳಿ ಹೊಟ್ಟೆ ತುಂಬಾ ನಕ್ಕಳು. ನಾನು ನಿಜವಾಗಿಯೂ ಕಲ್ಲು ಎಂದು ಅಂದುಕೊಳ್ಳುತ್ತಲೇ ಅಡ್ಡಾಡುತ್ತಿದ್ದಾಳೆ.

ಈ ಕಲ್ಲನ್ನು ಸರಿಯಾಗಿ ಕಟೆದು ಮೂರ್ತಿಯನ್ನಾಗಿ ಮಾಡಿಯೇ ಅವಳನ್ನು ಪ್ಯಾರಿಸ್ಸಿಗೆ ಕಳಿಸಲು ಛಾಲೆಂಜ್ ತೆಗೆದುಕೊಂಡಿದ್ದೇನೆ.

ಆಗಾಗ ಸುತ್ತ ಮುತ್ತಲಿನ ಕಲ್ಲುಗಳನ್ನೆಲ್ಲಾ ತೋರಿಸಿ ಗುಡಿ ಗುಂಡಾರಗಳಲ್ಲಿರುವ ಶಿಲಾಕೃತಿಗಳನ್ನೂ ತೋರಿಸುತ್ತೇನೆ.

“ಇನ್ನು ಮೇಲೆ ನಾನೂ ಕೃತಿಯಾಗುತ್ತೇನೆ ನಿನ್ನ ಉಳಿಯ ಮಾತುಗಳಲ್ಲಿ” ಎಂದು ನನ್ನ ಕೈ ಹಿಡಿದು ಕಣ್ಣು ತುಂಬಿಕೊಳ್ಳುತ್ತಾಳೆ.

“ಜೀವನದಲ್ಲಿ ಅತ್ಯಂತ ಉತ್ಕೃಷ್ಟ ಅನಂದ ಎಂದರೆ ಪ್ರೇಮ, ಕಾಮ, ತಿನ್ನುವದು, ಕುಡಿಯುವದು, ಸೇದುವದು, ತಿರುಗುವದು ಎಂದೇ ತಿಳಿದುಕೊಂಡಿದ್ದೆ.
ಈಗ ಈ ಎಲ್ಲ ಅತೀ ಸ್ವೇಚ್ಛಾಚಾರಕ್ಕೆ ಬೇಸತ್ತಿದ್ದೇನೆ. ಇವುಗಳಿಂದ ಮಾನಸಿಕ ನೆಮ್ಮದಿ ಇಲ್ಲ ಎಂದು ಎಲ್ಲ ಕಳೆದುಕೊಂಡಮೇಲೆ ಗೊತ್ತಾಗಿದೆ.” ಎಂದೆನ್ನುತ್ತ
ಒಮ್ಮೊಮ್ಮೆ ಭಾವೋದ್ವೇಗಕ್ಕೆ ಒಳಗಾಗುತ್ತಾಳೆ.

“ಇವೆಲ್ಲದರ ಆಚೆಗೂ ನಿಸರ್ಗದಲ್ಲಿ ಏನೋ ಒಂದು ಶಕ್ತಿ ಇದೆ ನೆಮ್ಮದಿ ಕೊಡಲು, ಅದನ್ನು ನಾನೀಗ ಹುಡುಕಿಕೊಳ್ಳಬೇಕು ಈಗಾಗಲೇ ನಾನು
ಸಾಕಷ್ಟುಕಳೆದುಹೋಗಿದ್ದೇನೆ. ಇನ್ನು ಮುಂದೆ ನಾನು ಕಳೆದು ಹೋಗಲು ಸಾಧ್ಯವಿಲ್ಲ” ಎಂದು ಅವಳು ಸಾಧು ಸಂತರ ಹಾಗೆಯೋ, ವೇದಾಂತಿಗಳ ಹಾಗೆಯೋ ಏನೆಲ್ಲ ಮಾತನಾಡುವಾಗ ನಾನು ಹುಬ್ಬೇರಿಸಿದ್ದೇನೆ. ಸ್ವಲ್ಪ ಸ್ವಲ್ಪ ನಗುತ್ತಿದ್ದೆನೂ ಕೂಡಾ :

ನನ್ನ ಈ ವಿಚಿತ್ರ ತೊಳಲಾಟಕ್ಕೆ ಬದಲಾವಣೆಯಾಗಲೆಂದು ಮಾರ್ಕ್ ಇಲ್ಲಿ ಕಳಿಸಿದ್ದಾನೆ. ಈ ತಿಂಗಳ ಕೊನೆಗೆ ಆತನೂ ಬರುತ್ತಾನೆ’ ಉಸಿರು ಬಿಟ್ಟಳು.

ಗಾರ್ಡನ್ ತುಂಬಾ ಬೆಳೆದು ನಿಂತ ಹೂಗಳನ್ನು ನೋಡುತ್ತ, ಸ್ಪರ್ಶಿಸುತ್ತಾ ಎಷ್ಟೊಂದು ತಾಜಾತನ ಇವುಗಳಿಗಿದೆ ಎಂದು ಸಂತೋಷ ಪಡುತ್ತಿದ್ದೆಂತೆಯೇ
ಬಹುಶಃ ತನ್ನ ಮಕ್ಕಳನ್ನು ನೆನಪಿಸಿಕೊಂಡು ಮೌನವಾಗಿ ನಡುಗಿದಳು.

ಎರಡು ತಿಂಗಳು ಭಾರತ ಪ್ರವಾಸದ ಅವಧಿಯ ಅವಳ ಲಿಸ್ಟ್ ದಲ್ಲಿ ಮೊದಲನೆಯದು ಮಾನಸಿಕ ನೆಮ್ಮದಿ ಸಿಗುವ ಆಶ್ರಮಗಳಲ್ಲಿ ಇರುವದು ಎಂದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದ ನಲ್ಲ?
Next post ಸಾವು ಜೋಕು

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…